ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಮಾದರಿ ಮತ್ತು ಪರೀಕ್ಷಾ ವ್ಯೂಹದ ಬಗ್ಗೆ ಡಾ.ಹರ್ಷ ವರ್ಧನರಿಂದ ಪರಾಮರ್ಶೆ

Posted On: 31 MAR 2020 1:09PM by PIB Bengaluru

ಕೋವಿಡ್ -19 ಮಾದರಿ ಮತ್ತು ಪರೀಕ್ಷಾ ವ್ಯೂಹದ ಬಗ್ಗೆ ಡಾ.ಹರ್ಷ ವರ್ಧನರಿಂದ ಪರಾಮರ್ಶೆ


ಕೋವಿಡ್ -19 ರಿಂದ ಉದ್ಭವಿಸಿರುವ ಬೆದರಿಕೆಯನ್ನು ಎದುರಿಸುವಲ್ಲಿ ಉತ್ತಮ ವೈಜ್ಞಾನಿಕ ಪರಿಹಾರಗಳನ್ನು ಕಂಡು ಹುಡುಕುವ ಪ್ರಯತ್ನಗಳಿಗೆ  ಅಂತರ –ಇಲಾಖೆಗಳ   ಕೈಜೋಡಿಸುವಿಕೆಯಿಂದ ವೇಗ ಬರಲಿದೆ: ಡಾ. ಹರ್ಷ ವರ್ಧನ
ಕೋವಿಡ್ -19 ರ ಪರಿಹಾರಗಳ ಸಂಶೋಧನೆ ರೋಗ ನಿರ್ವಹಣೆ ಪ್ರಯತ್ನಗಳ ಜೊತೆ ಜೊತೆಗೆ ಏಕಕಾಲದಲ್ಲಿ ತೀವ್ರ ಗತಿಯಿಂದ ಮುನ್ನಡೆಯಬೇಕು : ಡಾ. ಹರ್ಷ ವರ್ಧನ. 
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ ಅವರು ಐ.ಸಿ.ಎಂ.ಆರ್. , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಜೈವಿಕ ತಂತ್ರಜ್ಞಾನ ಮತ್ತು ಸಿ.ಎಸ್.ಐ.ಆರ್. ಗಳ ಹಿರಿಯ ಅಧಿಕಾರಿಗಳ ಜೊತೆ ನಿನ್ನೆ ಇಲ್ಲಿ ಸಭೆ ನಡೆಸಿ ಕೋವಿಡ್-19 ರ ಮಾದರಿ ಮತ್ತು ಪರೀಕ್ಷಾ ವ್ಯೂಹ ಕುರಿತು ಪರಾಮರ್ಶೆ ನಡೆಸಿದರು. ರಿಯೇಜೆಂಟ್ ಗಳ ಖರೀದಿ, ಜಾಲತಾಣಗಳ ಸಮಗ್ರಗೊಳಿಸುವಿಕೆ, ದತ್ತಾಂಶ ನಿರ್ವಹಣೆ ಮತ್ತು ವಿಶ್ಲೇಷಣೆ, ಫಲಕಗಳು (ಡ್ಯಾಶ್ ಬೋರ್ಡ್) , ಇದುವರೆಗೆ ಯೋಜಿಸಲಾದ ಮತ್ತು ಈಗಾಗಲೇ ಮಾಡಲಾದ ಸಂಶೋಧನಾ ಅಧ್ಯಯನ. ಇತ್ಯಾದಿಗಳ ಬಗ್ಗೆ ವಿಸ್ತಾರವಾದ ಚರ್ಚೆ ನಡೆಯಿತು. 
ತಾವು ಬೆಳಿಗ್ಗೆ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜೊತೆ ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದಲ್ಲದೆ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಸಿದ್ದತೆಯ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿ, ಸಾಧ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿರುವ ಬಗ್ಗೆ ತಿಳಿಸಿದರು. ಕ್ರಿಯಾತ್ಮಕ ನಿಗಾ, ಸಮರ್ಪಕವಾಗಿ ಸಂಪರ್ಕ ಹೊಂದಿದ ವ್ಯಕ್ತಿಗಳ ಶೋಧ ಮತ್ತು ಕೋವಿಡ್ -19 ರ ನಿರ್ವಹಣೆ ಹಾಗು ನಿಯಂತ್ರಣದಲ್ಲಿ ಅವುಗಳ ತಯಾರಿ ಕುರಿತಂತೆ ರಾಜ್ಯಗಳನ್ನು ಅವರು ಶ್ಲಾಘಿಸಿದರು.
ಸಭೆಯಲ್ಲಿ ಐ.ಸಿ.ಎಂ.ಆರ್. ನ ಡಿ.ಜಿ. ಅವರು 129 ಸರಕಾರಿ ಪ್ರಯೋಗಾಲಯಗಳು ಕಾರ್ಯಾಚರಿಸುತ್ತಿವೆ, 49 ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳ ಸಹಿತ ದಿನವೊಂದಕ್ಕೆ 13,000 ಪರೀಕ್ಷೆಗಳನ್ನು ನಡೆಸುವ ಪರೀಕ್ಷಾ ಸಾಮರ್ಥ್ಯ ಇದೆ. ಖಾಸಗಿ ಸರಪಳಿಯಲ್ಲಿ 16,000 ಸಂಗ್ರಹಣಾ ಕೇಂದ್ರಗಳಿವೆ ಎಂದರು. ಸಾಕಷ್ಟು ಪರೀಕ್ಷಾ ಕಿಟ್ ಗಳನ್ನು ಖರೀದಿಸಲಾಗಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳಿಗೆ ವಿತರಿಸಲಾಗಿದೆ ಎಂದೂ ತಿಳಿಸಲಾಯಿತು. ತ್ವರಿತ ಆಂಟಿ ಬಾಡಿ ಕಿಟ್ ಗಳನ್ನು ಕೂಡಾ ಖರೀದಿಸಲು ಆದೇಶ ನೀಡಲಾಗಿದೆ. ಪ್ರಸ್ತುತ ದೇಶಾದ್ಯಂತ 38,442 ಪರೀಕ್ಷೆಗಳನ್ನು ನಡೆಸಲಾಗಿದೆ. 1,334 ಪರೀಕ್ಷೆಗಳು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆದಿವೆ ಎಂದೂ ಅವರು ವಿವರಿಸಿದರು. 
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೂರು ಮಂದಿ ಕಾರ್ಯದರ್ಶಿಗಳ ಜೊತೆ ಮುಂದಿನ ಸಮಾಲೋಚನೆಗಳು ನಡೆದವು. ಕೋವಿಡ್-19ನ್ನು ನಿಭಾಯಿಸುವ ನಿಟ್ಟಿನಲ್ಲಿ ಪರಿಹಾರಗಳನ್ನು ಅಭಿವೃದ್ದಿಪಡಿಸುವ ಬಗ್ಗೆ  ಸಂಶೋಧನೆಯ ಸ್ಥಿತಿ ಗತಿಯ ಬಗ್ಗೆ ಚರ್ಚಿಸಲಾಯಿತು. 
ಡಿ.ಎಸ್.ಟಿ. ಕಾರ್ಯದರ್ಶಿ ಡಾ. ಅಶುತೋಷ್ ಶರ್ಮಾ ಅವರು ನವೋದ್ಯಮ, ಅಕಾಡೆಮಿಕ್, ಸಂಶೋಧನೆ ಮತ್ತು ಅಭಿವೃದ್ದಿ, ಪ್ರಯೋಗಾಲಯ ಮತ್ತು ಕೈಗಾರಿಕೆ, ರೋಗ ಪತ್ತೆಯ ಕ್ಷೇತ್ರದಲ್ಲಿ ನಿರತವಾಗಿರುವ 500 ಕ್ಕೂ ಅಧಿಕ ಸಂಸ್ಥೆಗಳು, ಔಷಧಿ, ವೆಂಟಿಲೇಟರುಗಳು, ರಕ್ಷಣಾ ಕವಚಗಳು, ರೋಗಾಣುಸೋಂಕು ನಿವಾರಣಾ ವ್ಯವಸ್ಥೆ ಇತ್ಯಾದಿಗಳನ್ನು ಗುರುತಿಸಲಾಗಿರುವ ಬಗ್ಗೆ ತಿಳಿಸಿದರು. ಕೋವಿಡ್-19 ಸಂಬಂಧಿತ ತಂತ್ರಜ್ಞಾನ ಸಾಮರ್ಥ್ಯಗಳನ್ನು ಮ್ಯಾಪಿಂಗ್ ಮೂಲಕ ಗುರುತಿಸಲಾಗಿದೆ. ಕಳೆದ ಒಂದು ವಾರದಲ್ಲಿ ಡಿ.ಎಸ್.ಟಿ.ಹಣಕಾಸು ಹೂಡಿಕೆಗೆ ಸಂಬಂಧಿಸಿ 200 ಕ್ಕೂ ಅಧಿಕ ಕರೆಗಳು ಬಂದಿವೆ, ಅದರಲ್ಲಿ 20 ಕ್ಕೂ ಅಧಿಕ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ಬೆಂಬಲ ನೀಡುವ ಬಗ್ಗೆ ಕ್ರಿಯಾತ್ಮಕವಾಗಿ ಪರಿಗಣಿಸಲಾಗುತ್ತಿದೆ, ವೆಚ್ಚ,  ವೇಗ ಮತ್ತು ಕೋವಿಡ್-19 ನಿರ್ವಹಣೆಯಲ್ಲಿ ಲಭ್ಯವಾಗುವ ಪರಿಹಾರಗಳ ಪ್ರಮಾಣ ಜೊತೆಗೆ ಪ್ರಸ್ತುತತೆಯನ್ನು ಇದರಲ್ಲಿ ಪರಿಗಣಿಸಲಾಗುತ್ತಿದೆ ಎಂದವರು ತಿಳಿಸಿದರು. ಡಿ.ಬಿ.ಟಿ. ಕಾರ್ಯದರ್ಶಿ ಡಾ. ರೇಣು ಸ್ವರೂಪ ಅವರು ಆರೋಗ್ಯ ರಕ್ಷಣಾ ಸವಾಲುಗಳನ್ನು ಎದುರಿಸಲು ಜೈವಿಕ ತಂತ್ರಜ್ಞಾನ ಇಲಾಖೆ ವೈದ್ಯಕೀಯ ಸಲಕರಣೆಗಳು, ರೋಗ ಪತ್ತೆ, ಚಿಕಿತ್ಸಾ ವ್ಯವಸ್ಥೆ, ಔಷಧಿ ಮತ್ತು ಲಸಿಕೆಗಳ ಅಭಿವೃದ್ಧಿಗೆ ಒಕ್ಕೂಟವನ್ನು ರಚಿಸಿಕೊಂಡಿದೆ ಎಂದರು. ಪುಣೆಯಲ್ಲಿಯ ನವೋದ್ಯಮ ಅಭಿವೃದ್ದಿಪಡಿಸಿದ ಮೊದಲ ದೇಶೀಯ ಕಿಟ್ ಉತ್ಪಾದನಾ ಸಾಮರ್ಥ್ಯ ವಾರಕ್ಕೆ 1 ಲಕ್ಷಕ್ಕೆ ಏರಿಕೆಯಾಗಿದೆ. ದೇಶೀಯ ವೆಂಟಿಲೇಟರ್ ಗಳು, ಪರೀಕ್ಷಾ ಕಿಟ್ ಗಳು , ಇಮೇಜಿಂಗ್ ಸಾಧನಗಳು ಮತ್ತು ಅಲ್ಟ್ರಾಸೌಂಡ್ ಹಾಗು ಅತ್ಯಾಧುನಿಕ ವಿಕಿರಣ ಸಲಕರಣೆಗಳ ಅಭಿವೃದ್ದಿಗಾಗಿ ಉತ್ಪಾದನಾ ಸೌಲಭ್ಯವನ್ನು ವಿಶಾಖಪಟ್ಟಣಂನಲ್ಲಿ ಸ್ಥಾಪಿಸಲಾಗಿದೆ. ಅಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಉತ್ಪಾದನೆ ಆರಂಭವಾಗಲಿದೆ. ಡಿ.ಬಿ.ಟಿ.ಯು ಭಾರತೀಯ ಔಷಧ ಮಹಾನಿಯಂತ್ರಕರ ಜೊತೆಗೂಡಿ  ತ್ವರಿತ ಪ್ರತಿಕ್ರಿಯಾ ನಿಯಂತ್ರಣ ಚೌಕಟ್ಟನ್ನು ಅಭಿವೃದ್ದಿಪಡಿಸಿ ಅಧಿಸೂಚಿಸಿದೆ, ಇದರಿಂದ ಎಲ್ಲಾ ರೋಗಪತ್ತೆ ಔಷಧಿ ಮತ್ತು ಲಸಿಕೆಗಳ ನಿಯಂತ್ರಣ ಅನುಮೋದನೆಗಳು ತ್ವರಿತವಾಗಿ ಆಗಲಿವೆ. ಮೂರು ಭಾರತೀಯ ಉದ್ಯಮಗಳಿಗೆ ಲಸಿಕೆ ಅಭಿವೃದ್ದಿಗೆ ಬೆಂಬಲ ನೀಡಲಾಗುತ್ತಿದೆ. ಚಿಕಿತ್ಸೆ ಮತ್ತು ಔಷಧಿ ಅಭಿವೃದ್ದಿ ನಿಟ್ಟಿನಲ್ಲಿ ಸಂಶೋಧನೆ ಆರಂಭಗೊಂಡಿದೆ ಎಂದರು. 
ಸಿ.ಎಸ್.ಐ.ಆರ್. ಡಿ.ಜಿ. ಡಾ. ಶೇಖರ್ ಮಂದೇ ಅವರು ಸಿ.ಎಸ್.ಐ.ಆರ್. ಸಂಸ್ಥೆಯು ಕೋವಿಡ್ -19 ಕ್ಕೆ ಎಸ್ ಮತ್ತು ಟಿ ಪರಿಹಾರಗಳನ್ನು ಹುಡುಕಲು 5 ರೀತಿಯ ವ್ಯೂಹಗಳಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು. ಡಿಜಿಟಲ್ ಮತ್ತು ಮಾಲಿಕ್ಯುಲಾರ್ ವಿಧಾನಗಳನ್ನು ಒಳಗೊಂಡು  ದೇಶಾದ್ಯಂತ ವೈರಸ್ ಕುರಿತು ಜೀನೋಮ್ ಸೀಕ್ವೆನ್ಸಿಂಗ್ ; ಕಡಿಮೆ ವೆಚ್ಚದಲ್ಲಿ ತ್ವರಿತ ಮತ್ತು ನಿಖರ ರೋಗ ಪತ್ತೆ ವಿಧಾನಗಳು. ಔಷಧಿಗಳ ಮರುಉದ್ದೇಶೀಕರಣ ಒಳಗೊಂಡ ಮಧ್ಯಪ್ರವೇಶ ಕಾರ್ಯತಂತ್ರ ಮತ್ತು ಹೊಸ ಔಷಧಿಗಳ ಅಭಿವೃದ್ದಿ ಇತ್ಯಾದಿ; ಆಸ್ಪತ್ರೆ ನೆರವಿನ ಸಲಕರಣೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ, ಕೋವಿಡ್ -19 ನಿವಾರಣೆಗೆ ಅವಶ್ಯ ಸಾಮಗ್ರಿಗಳ ಸಾಗಾಟಕ್ಕೆ ಪೂರೈಕೆ ಸಾಗಾಣಿಕೆ ಸರಪಳಿ ಮಾದರಿಗಳ ಅಭಿವೃದ್ದಿ ಬಗ್ಗೆ ಅವರು ಮಾಹಿತಿ ಒದಗಿಸಿದರು. ಈ ಮೆಲ್ಕಾಣಿಸಿದ ಎಲ್ಲಾ ಅಂಶಗಳಲ್ಲಿ ಸಿ.ಎಸ್. ಐ.ಆರ್. ಸಂಸ್ಥೆಯು ಖಾಸಗಿ ವಲಯದಲ್ಲಿ ಸಹಯೋಗಗಳನ್ನು ಮಾಡಿಕೊಂಡಿದೆ ಎಂದೂ ಅವರು ತಿಳಿಸಿದರು. 
ಸಾರ್ವಜನಿಕ ಆರೋಗ್ಯ ನಿಗಾ ಮತ್ತು ಪ್ರತಿಕ್ರಿಯೆ, ತಾಂತ್ರಿಕ ಮಾರ್ಗದರ್ಶನ ಮತ್ತು ಐ.ಸಿ.ಎಂ.ಆರ್ ನೀಡುತ್ತಿರುವ ಪ್ರಯೋಗಾಲಯ ಬೆಂಬಲಗಳ ಬಗ್ಗೆ ಡಾ. ಹರ್ಷ ವರ್ಧನ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಮತ್ತು ಸಿ.ಎಸ್.ಐ.ಆರ್. ಗಳು ಆವಶ್ಯಕತೆಯ ಈ ಸಮಯದಲ್ಲಿ ದೇಶೀಯವಾಗಿ ವೆಂಟಿಲೇಟರುಗಳ ಅಭಿವೃದ್ದಿ, ಪರೀಕ್ಷಾ ಕಿಟ್ ಗಳು, ಪಿ.ಪಿ.ಇ.ಗಳು ಇತ್ಯಾದಿಗಳಿಗೆ ಸಂಬಂಧಿಸಿ ಒದಗಿಸಿದ ಬೆಂಬಲದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 
ಅವಶ್ಯ ಪರೀಕ್ಷಾ ಕಿಟ್ ಗಳನ್ನು ಖರೀದಿ ಮಾಡಲು ಮತ್ತು ರಿಯೇಜೆಂಟ್ ಗಳನ್ನು ತ್ವರಿತವಾಗಿ ಖರೀದಿ ಮಾಡಿ ಅವುಗಳನ್ನು ದೇಶಾದ್ಯಂತ ಪ್ರಯೋಗಾಲಯಗಳಿಗೆ ಪೂರೈಕೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಅವರು ನಿರ್ದೆಶನ ನೀಡಿದರು. ರಾಜ್ಯಗಳು ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವುದನ್ನು ಖಾತ್ರಿಪಡಿಸಬೇಕು ಎಂದು ನಿರ್ದೇಶಿಸಿದ ಅವರು ಪರೀಕ್ಷಾ ಕಿಟ್ ಗಳು, ರಿಯೇಜೆಂಟ್ ಗಳು ಅಥವಾ ಸಲಕರಣೆಗಳು ಸಹಿತ ಯಾವುದೂ ರಾಜ್ಯಗಳಿಗೆ ಕೊರತೆಯಾಗದಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದೂ ಸೂಚಿಸಿದರು. ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ಸಹಿತ ಯಾವುದೇ ಪ್ರಯೋಗಾಲಯಗಳು/ ಪರೀಕ್ಷಾ ಸೌಲಭ್ಯಗಳು ಹೊಂದಿಲ್ಲದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವಂತೆಯೂ ಅವರು ನಿರ್ದೇಶನ ನೀಡಿದರು. 
ಸರಕಾರ ಅಥವಾ ಖಾಸಗಿ ಪ್ರಯೋಗಾಲಯಗಳು ಖರೀದಿಸುವ ಪರೀಕ್ಷಾ ಕಿಟ್ ಗಳ ಗುಣಮಟ್ಟ ಖಾತ್ರಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡಿದ ಅವರು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮತ್ತು ಕಿಟ್ ಗಳ ಗುಣಮಟ್ಟ ಮೌಲ್ಯಮಾಪನವನ್ನು ನಿಯಮಿತವಾಗಿ ನಡೆಸಬೇಕು ಎಂದೂ ಸೂಚಿಸಿದರು.  ಇದಕ್ಕಾಗಿ ಸ್ಪಷ್ಟ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಮತ್ತು ಶಿಷ್ಟಾಚಾರ ಆವಶ್ಯಕತೆಗಳನ್ನು ಅಭಿವೃದ್ದಿಪಡಿಸಬೇಕು ಮತ್ತು ಅದನ್ನು ಐ.ಸಿ.ಎಂ.ಆರ್.ನಿಂದ  ತಕ್ಷಣವೇ ಅನುಷ್ಟಾನ ಮಾಡಬೇಕು, ಇದರಿಂದ ದಿನನಿತ್ಯದ ಆಧಾರದಲ್ಲಿ ಎಲ್ಲಾ ಪ್ರಯೋಗಾಲಯಗಳಿಂದ ಗುಣಮಟ್ಟ ಭರವಸೆ ಖಾತ್ರಿಪಡಿಸಿಕೊಳ್ಳಬಹುದು ಎಂದರು.
ಕೋವಿಡ್ -19 ನಿರ್ವಹಣಾ ಪ್ರಯತ್ನಗಳ ಜೊತೆಯಲ್ಲಿ ಸಂಶೋಧನಾ ಕಾರ್ಯ ಕೂಡಾ ಏಕಕಾಲದಲ್ಲಿ ತ್ವರಿತವಾಗಿ ಮುಂದುವರಿಯಬೇಕು ಎಂದು ಡಾ. ಹರ್ಷ ವರ್ಧನ ಅವರು ಹೇಳಿದರು. ಭಾರತವು ಈ ಸಂದರ್ಭದಲ್ಲಿ  ಎದ್ದು ನಿಂತು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಪರಿಹಾರಗಳನ್ನು ಅಭಿವೃದ್ದಿಪಡಿಸಬೇಕು ಎಂದವರು  ವಿಜ್ಞಾನಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. 
ಸಭೆಯಲ್ಲಿ ಐ.ಸಿ.ಎಂ.ಆರ್. ಡಿ.ಜಿ. ಡಾ. ಬಲರಾಂ ಭಾರ್ಗವ, ಡಿ.ಬಿ.ಟಿ. ಕಾರ್ಯದರ್ಶಿ ಡಾ. ರೇಣು ಸ್ವರೂಪ, ಸಿ.ಎಸ್.ಐ.ಆರ್. ಡಿ.ಜಿ. ಡಾ. ಶೇಖರ್ ಮಂದೇ, ಡಿ.ಎಸ್. ಟಿ. ಕಾರ್ಯದರ್ಶಿ ಡಾ. ಅಶುತೋಷ್ ಶರ್ಮಾ,ಸಿ.ಎಸ್.ಐ.ಆರ್. –ಐ.ಜಿ.ಐ.ಬಿ. ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್, ಐ.ಸಿ.ಎಂ.ಆರ್. ಹಿರಿಯ ವಿಜ್ಞಾನಿ ಡಾ. ರಾಮನ್ ಆರ್. ಗಂಗಾಖಡೇಕಾರ್, ಇತರ ಹಿರಿಯ ಅಧಿಕಾರಿಗಳು ಮತ್ತು ಐ.ಸಿ.ಎಂ.ಆರ್. ನ ವಿಜ್ಞಾನಿಗಳು ಭಾಗವಹಿಸಿದ್ದರು. 

 



(Release ID: 1609789) Visitor Counter : 203