ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಹಾಗು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ

Posted On: 31 MAR 2020 8:58PM by PIB Bengaluru

ಪ್ರಧಾನಮಂತ್ರಿ ಹಾಗು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಎಮ್ಯಾನ್ಯುಯಲ್ ಮೆಕ್ರಾನ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು.
ಕೋವಿಡ್ -19 ಮಹಾಮಾರಿಯಿಂದಾಗಿ ಆಗುತ್ತಿರುವ ಜೀವಹಾನಿಯ ಬಗ್ಗೆ ಪ್ರಧಾನಮಂತ್ರಿಯವರು ಘನತೆವೆತ್ತ ಅಧ್ಯಕ್ಷ ಮೆಕ್ರಾನ್ ಅವರಿಗೆ ಸಂತಾಪ ವ್ಯಕ್ತಪಡಿಸಿದರು. ಈ ಬಿಕ್ಕಟ್ಟಿನ ದೇಶೀಯ ಮತ್ತು ಅಂತಾರಾಷ್ಟ್ರೀಯ ಅಂಶಗಳ ಕುರಿತು ನಾಯಕರು ಚರ್ಚಿಸಿದರು ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಜಾಗತಿಕ ಸಹಯೋಗ ಮತ್ತು ಏಕಮತ್ಯದ ಮಹತ್ವವನ್ನು ಒತ್ತಿ ಹೇಳಿದರು. ಎರಡೂ ದೇಶಗಳ ತಜ್ಞರ ತಂಡಗಳು ವೈರಾಣುವಿನ ಪ್ರಸರಣದ ತಡೆ ಕ್ರಮಗಳು ಮತ್ತು ಸಂಶೋಧನೆ ಹಾಗೂ ಲಸಿಕೆಯ ಕುರಿತಂತೆ ಸಕ್ರಿಯವಾಗಿ ಮಾಹಿತಿ ಹಂಚಿಕೊಳ್ಳಲು ಸಮ್ಮತಿಸಿದರು.
ಕೋವಿಡ್-19 ಬಿಕ್ಕಟ್ಟು ಆಧುನಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿದೆ ಮತ್ತು ಜಾಗತೀಕರಣದ ವಿಚಾರದಲ್ಲಿ ಹೊಸ ಮಾನವ ಕೇಂದ್ರಿತ ಪರಿಕಲ್ಪನೆಯನ್ನು ರೂಪಿಸಲು ಜಗತ್ತಿಗೆ ಅವಕಾಶವನ್ನು ನೀಡುತ್ತದೆ ಎಂಬ ಪ್ರಧಾನ ಮಂತ್ರಿಯವರ ಅಭಿಪ್ರಾಯವನ್ನು ಫ್ರೆಂಚ್ ಅಧ್ಯಕ್ಷರು ಬಲವಾಗಿ ಸಮ್ಮತಿಸಿದರು.
ಒಟ್ಟಾರೆ ಮಾನವತೆಯ ಮೇಲೆ ಪರಿಣಾಮ ಬೀರುವಂಥ ಹವಾಮಾನ ಬದಲಾವಣೆ ಮತ್ತಿತರ ಜಾಗತಿಕ ಕಾಳಜಿಗಳ ವಿಚಾರಗಳ ಬಗ್ಗೆ ಗಮನ ಕಡಿಮೆ ಮಾಡದಿರುವುದರ ಮಹತ್ವವನ್ನು ನಾಯಕರು ಪ್ರತಿಪಾದಿಸಿದರು. ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ ಆಫ್ರಿಕಾ ಸೇರಿದಂತೆ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಅಗತ್ಯತೆಗಳಿಗೆ ವಿಶೇಷ ಗಮನ ಹರಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
ಘನತೆವೆತ್ತ ಅಧ್ಯಕ್ಷ ಮೆಕ್ರಾನ್ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಮನೆಗಳಿಗೆ ಸೀಮಿತವಾಗಿರುವ ಜನರಿಗೆ, ಯೋಗಾಭ್ಯಾಸವು ಮಾನಸಿಕ ಮತ್ತು ದೈಹಿಕ ಯೋಗ ಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಅನುಕೂಲಕರ ಸಾಧನವಾಗಿದೆ ಎಂಬ ಪ್ರಧಾನ ಮಂತ್ರಿಯ ಸಲಹೆಯನ್ನು ಸ್ವಾಗತಿಸಿದರು. ಪ್ರಸಕ್ತ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಯೋಗ ಫ್ರಾನ್ಸ್ ನಲ್ಲಿ ಹೊಸ ಅಭ್ಯಾಸಿಗರನ್ನು ಗೆದ್ದಿದೆ ಎಂದು ಅವರು ದೃಢಪಡಿಸಿದರು.
ಪ್ರಸಕ್ತ ಸಂಕಷ್ಟದ ಸನ್ನಿವೇಶದಲ್ಲಿ ಮಾನವ ಕೇಂದ್ರಿತ ಏಕಮತ್ಯದ ಸ್ಫೂರ್ತಿಯನ್ನು ಮುಂದುವರಿಸಲು ಭಾರತ-ಫ್ರಾನ್ಸ್ ಪಾಲುದಾರಿಕೆ ಕೊಡುಗೆ ನೀಡಲಿದೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.  


 
***


(Release ID: 1609758) Visitor Counter : 185