ಪ್ರಧಾನ ಮಂತ್ರಿಯವರ ಕಛೇರಿ

‘ಮನ್ ಕಿ ಬಾತ್ 2.0’ – 10 ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ

Posted On: 29 MAR 2020 2:07PM by PIB Bengaluru

‘ಮನ್ ಕಿ ಬಾತ್ 2.0’ – 10 ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ

ಲಾಕ್ ಡೌನ್ ಪಾಲಿಸುವಂತೆ ನಾಗರಿಕರಲ್ಲಿ ಮನವಿ

 

 ‘ಮನ್ ಕಿ ಬಾತ್ 2.0’ – 10 ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಕ್ಷಮೆ ಯಾಚಿಸಿದರು. ಕೋವಿಡ್ 19 ವಿರುದ್ಧ ಹೋರಾಡಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಯಿತು ಎಂದು ಪುನರುಚ್ಛರಿಸಿದರು.

ಭಾರತದ ಜನತೆಯನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯವಾದುದು ಎಂದು ಹೇಳಿದ ಅವರು ಭಾರತ ಒಗ್ಗಟ್ಟಾಗಿ  ಕೋವಿಡ್ 19 ಸೋಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಾಕ್ ಡೌನ್ ಜನರನ್ನು ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿಡಲಿದೆ ಮತ್ತು ಯಾರು ಪ್ರತ್ಯೇಕವಾಗಿಡುವ ನಿಯಮವನ್ನು ಪಾಲಿಸುವುದಿಲ್ಲವೋ ಅವರು ತೊಂದರೆಯನ್ನು ಅನುಭವಿಸುತ್ತಾರೆ ಎಂದೂ ಹೇಳಿದರು.

ಇಂದು ಮನ್ ಕಿ ಬಾತ್ ನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು ಲಾಕ್ ಡೌನ್ ನಿಂದ ಎಲ್ಲರೂ, ವಿಶೇಷವಾಗಿ ಬಡಜನತೆ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ಕ್ಷಮೆಯಾಚಿಸಿದರು. ಭಾರತದಂತಹ 130 ಕೋಟಿ ಜನಸಂಖ್ಯೆಯ ದೇಶಕ್ಕೆ ಕರೋನಾ ವಿರುದ್ಧದ ಹೋರಾಟಕ್ಕೆ ಈ ಮಾರ್ಗ ಬಿಟ್ಟು ಬೇರಾವ ದಾರಿಯೂ ಇರಲಿಲ್ಲ ಎಂದು ಅವರು ಒತ್ತಿ ಹೇಳಿದರು. ವಿಶ್ವದ ಪರಿಸ್ಥಿತಿಯನ್ನು ನೋಡಿದಾಗ ಕರೋನಾ ವಿರುದ್ಧದ ಯುದ್ಧ ಜೀವನ ಮತ್ತು ಮೃತ್ಯುವಿನೊಡನೆಯ ಯುದ್ಧವಾಗಿದೆ, ಆದ್ದರಿಂದಲೇ ಈ ಕಠೋರ ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿತ್ತು ಎಂದೂ ಸಹ ಅವರು ನುಡಿದರು.

ಉಕ್ತಿಯೊಂದನ್ನು ಉಲ್ಲೇಖಿಸಿದ ಅವರು  ‘ಏವಂ ಏವಂ ವಿಕಾರಃ : ಅಪಿ ತರುನ್ಹಾ ಸಾಧ್ಯತೆ ಸುಖಂ’ ಅಂದರೆ  “ರೋಗ ಮತ್ತು ಅದರ ಪ್ರಕೋಪವನ್ನು ಆರಂಭದಲ್ಲೇ ನಿಭಾಯಿಸಬೇಕು.” ನಂತರ ರೋಗ ಅಸಾಧ್ಯವಾಗಿಬಿಡುತ್ತದೆ. ಆಗ ಚಿಕಿತ್ಸೆಯೂ ಅಸಾಧ್ಯವಾಗುತ್ತದೆ ಎಂದರು. ಕೊರೊನಾ ವೈರಸ್ ವಿಶ್ವವನ್ನೇ ಬಂಧಿಸಿಬಿಟ್ಟಿದೆ ಎಂದ ಅವರು “ಇದು ಜ್ಞಾನ, ವಿಜ್ಞಾನ, ಬಡವ, ಬಲ್ಲಿದ, ಅಶಕ್ತ, ಶಕ್ತಿವಂತ ಎಲ್ಲರಿಗೂ ಸವಾಲೆಸೆಯುತ್ತಿದೆ. ಇದು ಕೇವಲ ರಾಷ್ಟ್ರದ ಗಡಿಯಲ್ಲಿ ಉಳಿದಿಲ್ಲ, ಯಾವುದೇ ಕ್ಷೇತ್ರವನ್ನು ಯಾವುದೇ ಋತುಮಾನವನ್ನು ಪರಿಗಣಿಸುವುದಿಲ್ಲ” ಎಂದರು.

ಈ ವೈರಾಣು ಮಾನವನನ್ನು ಕೊಂದು ಬಿಡುವ, ನಾಶ ಮಾಡುವ ಹಠ ತೊಟ್ಟಿದೆ. ಅದಕ್ಕಾಗಿಯೇ ಸಂಪೂರ್ಣ ಮಾನವ ಜಾತಿ ಒಗ್ಗಟ್ಟಾಗಿ ಸಂಕಲ್ಪ ಮಾಡಬೇಕೆಂದು ಕರೆ ನೀಡಿದ ಪ್ರಧಾನ ಮಂತ್ರಿಗಳು ಲಾಕ್ ಡೌನ್ ಪಾಲನೆ ಮಾಡುವುದು ಯಾರಿಗೋ ಉಪಕಾರ ಮಾಡುವುದಲ್ಲ ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಸಲುವಾಗಿದೆ. ಜನರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಮುಂಬರುವ ಕೆಲ ದಿನಗಳವರೆಗೆ ರಕ್ಷಿಸಿಕೊಳ್ಳಬೇಕಿದೆ ಎಂದು ಮತ್ತು ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ ಎಂದು ಆಗ್ರಹಿಸಿದರು.

ಕೆಲ ಜನರು ಲಾಕ್ ಡೌನ್ ನಿಯಮ ಉಲ್ಲಂಘಿಸುತ್ತಿದ್ದಾರೆ,  ಅವರಿಗೆ ಈಗಲೂ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವಿಲ್ಲ ಎಂದು ಹೇಳಿದ ಪ್ರಧಾನ ಮಂತ್ರಿಗಳು ಅಂಥವರಿಗೆ ಲಾಕ್ ಡೌನ್ ನಿಯಮ ಪಾಲಿಸಲು ಮನವಿ ಮಾಡಿಕೊಂಡಿದ್ದಾರೆ ಇಲ್ಲದಿದ್ದಲ್ಲಿ ಕರೋನಾ ವೈರಾಣುವಿನಿಂದ ಪಾರಾಗುವುದು ಕಷ್ಟ ಎಂದು ಹೇಳಿದ್ದಾರೆ. ‘ಆರೋಗ್ಯಂ ಪರಮ ಭಾಗ್ಯಂ, ಸ್ವಾಸ್ಥ್ಯಂ ಸರ್ವಾರ್ಥ ಸಾಧನಂ’  ಅಂದರೆ ಆರೋಗ್ಯವೇ ಭಾಗ್ಯ. ವಿಶ್ವದಲ್ಲಿ ಎಲ್ಲ ಸುಖಕ್ಕೆ ಆರೋಗ್ಯವೇ ಸಾಧನವಾಗಿದೆ ಎಂಬ ಉಕ್ತಿಯನ್ನು ಸಹ ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು.

***



(Release ID: 1609133) Visitor Counter : 184