ಪ್ರಧಾನ ಮಂತ್ರಿಯವರ ಕಛೇರಿ

ರೇಡಿಯೋ ಜಾಕಿಗಳೊಂದಿಗೆ ಪ್ರಧಾನಿ ಸಂವಾದ

Posted On: 27 MAR 2020 6:43PM by PIB Bengaluru

ರೇಡಿಯೋ ಜಾಕಿಗಳೊಂದಿಗೆ ಪ್ರಧಾನಿ ಸಂವಾದ

COVID-19 ಒಡ್ಡಿರುವ ಸವಾಲನ್ನು ಎದುರಿಸಲು ಸಕಾರಾತ್ಮಕತೆಯೊಂದಿಗೆ ಒಗ್ಗಟ್ಟಿನ ಮನೋಭಾವವು ಮುಖ್ಯವಾಗಿದೆ
ರೇಡಿಯೋ ಜಾಕಿಗಳು ಲಕ್ಷಾಂತರ ಭಾರತೀಯರಿಗೆ ಕುಟುಂಬ ಸದಸ್ಯರಂತೆ - ಅವರು ಸಕಾರಾತ್ಮಕತೆಯ ಸಂದೇಶವನ್ನು ಹರಡಬೇಕು
ಸ್ಥಳೀಯವಾಗಿ ಹೋರಾಡುವವರ ಕೊಡುಗೆಯನ್ನು ರಾಷ್ಟ್ರಮಟ್ಟದಲ್ಲಿ ಶ್ಲಾಘಿಸಿ ಮತ್ತು ಅವರ ಮನೋಬಲವನ್ನು ಹೆಚ್ಚಿಸಿ
2014 ರಿಂದ ಮನ್ ಕಿ ಬಾತ್  ನಡೆಸಿಕೊಡುತ್ತಿರುವ ಪ್ರಧಾನಿಯವರು ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ;
COVID-19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಧ್ವನಿಯಾಗುವುದಾಗಿ ರೇಡಿಯೋ ಜಾಕಿಗಳ ಪ್ರತಿಜ್ಞೆ



ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರೇಡಿಯೋ ಜಾಕಿಗಳೊಂದಿಗೆ (ಆರ್‌ಜೆ) ಸಂವಾದ ನಡೆಸಿದರು.
COVID-19ರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆರ್‌ಜೆಗಳು ವಹಿಸಿರುವ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ದಿಗ್ಬಂಧನದಲ್ಲಿ ಸಹ ಆರ್‌ಜೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕಾರ್ಯಕ್ರಮಗಳನ್ನು ಮನೆಯಿಂದಲೇ ನಡೆಸಿಕೊಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ತಮ್ಮ ಕಾರ್ಯಕ್ರಮಗಳ ವ್ಯಾಪ್ತಿಯ ಮೂಲಕ ಆರ್‌ಜೆಗಳು ಲಕ್ಷಾಂತರ ಭಾರತೀಯರಿಗೆ ಕುಟುಂಬ ಸದಸ್ಯರಂತೆ ಇದ್ದಾರೆ ಎಂದು ಪ್ರಧಾನಿ ಹೇಳಿದರು. ಜನರು ಅವರ ಮಾತನ್ನು ಕೇಳುವುದು ಮಾತ್ರವಲ್ಲದೆ ಅವರನ್ನು ಅನುಸರಿಸುತ್ತಾರೆ. ಮೂಢನಂಬಿಕೆಗಳ ಬಗ್ಗೆ ಪ್ರಸಾರ ಮಾಡದಿರುವುದು ಮಾತ್ರವಲ್ಲದೆ ಜನರನ್ನು ಪ್ರೇರೇಪಿಸುವುದೂ ಸಹ ಆರ್‌ಜೆಗಳಿಗೆ ದೊಡ್ಡ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು.
ತಜ್ಞರ ಅಭಿಪ್ರಾಯಗಳು ಮತ್ತು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಜನರು ಎದುರಿಸುತ್ತಿರುವ ತೊಂದರೆಗಳು ಮತ್ತು ಸವಾಲುಗಳ ಬಗ್ಗೆ ಫೀಡ್ ಬ್ಯಾಕ್ ನೀಡುವಂತೆ ಪ್ರಧಾನಮಂತ್ರಿಯವರು ಆರ್‌ಜೆಗಳಿಗೆ ಮನವಿ ಮಾಡಿದರು. ಇದರಿಂದ ಸರ್ಕಾರವು ಅವುಗಳನ್ನು ತ್ವರಿತವಾಗಿ ಬಗೆಹರಿಸಬಹುದು ಎಂದರು.
ಸಕಾರಾತ್ಮಕ ವಿಷಯಗಳು ಮತ್ತು ಕೇಸ್ ಸ್ಟಡೀಸ್, ಅದರಲ್ಲೂ ವಿಶೇಷವಾಗಿ ಕೊರೊನಾವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವವರ ಬಗ್ಗೆ ದೇಶದ ವಿವಿಧ ಭಾಗಗಳಲ್ಲಿ ಪ್ರಸಾರ ಮಾಡಬೇಕು. ಇದರಿಂದ ಇಡೀ ದೇಶವನ್ನು ಒಟ್ಟಿಗೆ ಸೇರಿಸಬಹುದು ಎಂದು ಪ್ರಧಾನಮಂತ್ರಿಯವರು  ಆರ್‌ಜೆಗಳಿಗೆ ಸೂಚಿಸಿದರು. ಸ್ಥಳೀಯ ನಾಯಕರಾದ ಪೊಲೀಸ್ ಅಧಿಕಾರಿಗಳು, ವೈದ್ಯರು, ದಾದಿಯರು, ವಾರ್ಡ್ ಹುಡುಗರು ಮುಂತಾದವರ ಕೊಡುಗೆಗಳನ್ನು ರಾಷ್ಟ್ರಮಟ್ಟದಲ್ಲಿ ತಿಳಿಸುವಂತೆ ಮತ್ತು ಅವರ ಕೆಲಸಗಳನ್ನು ನಿರಂತರವಾಗಿ ಶ್ಲಾಘಿಸುವಂತೆ ಪ್ರಧಾನಿಯವರು ಕೇಳಿಕೊಂಡರು.
ಅನುಭೂತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಿಯವರು, ವೈರಸ್ ಸೋಂಕಿಗೆ ಒಳಗಾಗುತ್ತಾರೆ ಎಂಬ ಸಾಮಾಜಿಕ ಭಯದಿಂದಾಗಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ವಿಮಾನಯಾನ ಸಿಬ್ಬಂದಿಯೊಂದಿಗಿನ ಜನರ ಅನುಚಿತ ನಡವಳಿಕೆಯ ಬಗ್ಗೆ ಹೇಳುವುದು ಮುಖ್ಯವಾಗಿದೆ, ಇದರಿಂದ ಅಂತಹ ಸವಾಲುಗಳನ್ನು ಎದುರಿಸಬಹುದಾಗಿದೆ.. ಸಾರ್ವಜನಿಕರಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಯ ಸಮರ್ಪಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು, ಪೊಲೀಸರು ಬಲ ಪ್ರಯೋಗ ಮಾಡುವುದನ್ನು ತಪ್ಪಿಸಬೇಕು, ಆದರೆ ಶಿಸ್ತು ಜಾರಿಗೊಳಿಸುವುದು ಸಹ ಅಷ್ಟೇ ಅಗತ್ಯವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ 130 ಕೋಟಿ ಭಾರತೀಯರು ರಾಷ್ಟ್ರೀಯ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಕಷ್ಟದ ಸಮಯದಲ್ಲಿ ಬಡವರಿಗೆ ಮತ್ತು ದುರ್ಬಲರಿಗೆ ನೆರವಾಗಲು ಸರ್ಕಾರ ಹಲವಾರು ಕ್ರಮಗಳನ್ನು ಘೋಷಿಸಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರಕಟಣೆಗಳ ಮಾಹಿತಿಯು ಫಲಾನುಭವಿಗಳನ್ನು ತ್ವರಿತವಾಗಿ ಮತ್ತು ಸಮಯೋಚಿತವಾಗಿ ತಲುಪುವುದು ಮುಖ್ಯವಾಗಿದೆ. ಸಾಮೂಹಿಕ ಸಂವಹನಕಾರರಾಗಿ, ಆರ್‌ಜೆಗಳು ತಮ್ಮ ಕೇಳುಗರಿಗೆ ಪ್ರಕಟಣೆಗಳ ಬಗ್ಗೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು, ಜೊತೆಗೆ ಸಾಮಾಜಿಕ ಅಂತರ ಮತ್ತು ಸ್ವಯಂ-ನಿರ್ಬಂಧಗಳ ಬಗ್ಗೆ ಅವರಿಗೆ ತಿಳಿಸಿಕೊಡಬಹುದು ಎಂದು ಪ್ರಧಾನಿ ಹೇಳಿದರು.
ರೇಡಿಯೊದಲ್ಲಿ 2014 ರಿಂದ ವ್ಯಾಪಕವಾಗಿ ಯಶಸ್ವಿಯಾಗಿರುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಪ್ರಧಾನ ಮಂತ್ರಿಯಯವರು ತಮ್ಮ ಕುಟುಂಬದ ಒಂದು ಭಾಗವಾಗಿದ್ದಾರೆ ಎಂದು ಆರ್‌ಜೆಗಳು ಹೇಳಿದರು. ಪ್ರಧಾನ ಮಂತ್ರಿಯವರು ಕರೆ ನೀಡಿದ 'ಜನತಾ ಕರ್ಫ್ಯೂ' ಹಾಗೂ ಮುಂಚೂಣಿಯಲ್ಲಿ ಕೆಲಸ ಮಾಡುವವರಿಗೆ ಧನ್ಯವಾದ ಹೇಳುವ ವಿನೂತನ ಆಲೋಚನೆಗೆ ಜನರು ಅಭೂತಪೂರ್ವ ಪ್ರತಿಕ್ರಿಯೆಯನ್ನು ತೋರಿಸಿದರು ಎಂದ ಆರ್‌ಜೆಗಳು ಪ್ರಧಾನಿಯವರ ನಾಯಕತ್ವವನ್ನು ಶ್ಲಾಘಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ರಾಷ್ಟ್ರದ ಧ್ವನಿಯಾಗಿ ಪಾತ್ರ ನಿರ್ವಹಿಸಲು ಸಂತೋಷವವಿದೆ ಎಂದು ಹೇಳಿದರು.
ವದಂತಿಗಳನ್ನು ತಡೆಯುವಲ್ಲಿ ಸರ್ಕಾರಿ ಪ್ರಸಾರ ಸಂಸ್ಥೆಯಾದ ಆಕಾಶವಾಣಿಯದು ಪ್ರಮುಖ ಪಾತ್ರವಿದೆ ಎಂದು ಪ್ರಧಾನಿ ತಿಳಿಸಿದರು. ವದಂತಿಗಳ ಹರಡುವಿಕೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅವರು ಆರ್‌ಜೆಗಳಿಗೆ ಮನವಿ ಮಾಡಿದರು.
ಸಮಾಜದಲ್ಲಿ ರಚನಾತ್ಮಕ ಮತ್ತು ಸಕಾರಾತ್ಮಕ ಮನೋಭಾವವನ್ನು ಖಾತ್ರಿಪಡಿಸಿಕೊಳ್ಳಲು ಆರ್‌ಜೆಗಳು ಕೆಲಸ ಮಾಡಬೇಕೆಂದು ಪ್ರಧಾನಿ ಒತ್ತಾಯಿಸಿದರು. ‘ಸಕಾರಾತ್ಮಕತೆಯೊಂದಿಗೆ ಒಗ್ಗಟ್ಟಿನ ಮನೋಭಾವವು COVID-19 ಎದುರಿಸುವ ಸವಾಲನ್ನು ಎದುರಿಸಲು ಪ್ರಮುಖವಾಗಿದೆ’ ಎಂದು ಅವರು ಹೇಳಿದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂವಾದದಲ್ಲಿ ಭಾಗವಹಿಸಿದ್ದರು.



(Release ID: 1608717) Visitor Counter : 203