ಪ್ರಧಾನ ಮಂತ್ರಿಯವರ ಕಛೇರಿ

ದೇಶ ಪ್ರಥಮ ಎಂಬ ರಾಷ್ಟ್ರವಾಗಿ ಭಾರತ ಪರಿವರ್ತನೆಗೊಂಡಿದೆ: ಪ್ರಧಾನಮಂತ್ರಿ

Posted On: 26 NOV 2019 9:34PM by PIB Bengaluru

ದೇಶ ಪ್ರಥಮ ಎಂಬ ರಾಷ್ಟ್ರವಾಗಿ ಭಾರತ ಪರಿವರ್ತನೆಗೊಂಡಿದೆ: ಪ್ರಧಾನಮಂತ್ರಿ

ರಾಷ್ಟ್ರ ಮೊದಲು ಎಂದಾದಾಗ ದೇಶದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬಹುದು: ಪ್ರಧಾನಮಂತ್ರಿ

 

ರಿಪಬ್ಲಿಕ್ ಶೃಂಗಸಭೆ – 2019 ಉದ್ದೇಶಿಸಿ ಮಾಡಿದ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಈ ವರ್ಷ ಶೃಂಗಸಭೆಯ ಘೋಷವಾಕ್ಯ “ರಾಷ್ಟ್ರ ಮೊದಲು ಎಂಬ ಭಾರತದ ಕ್ಷಣಗಳು”.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ, ದೇಶ ಪ್ರಥಮ ಎಂಬ ರಾಷ್ಟ್ರವಾಗಿ ಭಾರತ ಪರಿವರ್ತನೆಗೊಂಡಿದೆ ಎಂದರು. ದಶಕಗಳಿಂದ ಬಗೆಹರಿಯದ ಸಮಸ್ಯೆಗಳು ಇದೀಗ ಬಗೆಹರಿದಿವೆ ಎಂದು ಅವರು ಹೇಳಿದರು. ಇದಕ್ಕೆ ಎರಡು ಪ್ರಮುಖ ಕಾರಣಗಳು – 130 ಕೋಟಿ ಜನರು ಭಾರತದ ಸಂದರ್ಭ ಎಂದು ಯೋಚಿಸುತ್ತಿರುವುದು ಹಾಗೂ ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ.

ಕಾಶ್ಮೀರ ಕುರಿತಾದ ಸಂವಿಧಾನದ 370ನೇ ಕಲಂ ರದ್ದುಗೊಳಿಸಿದ್ದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಯೋತ್ಪಾದನೆ ಹಿಂದಿದ್ದ ಅತಿದೊಡ್ಡ ಕಾರಣವನ್ನು ಭಾರತ ನಿರ್ಮೂಲನೆ ಮಾಡಿದೆ ಎಂದರು. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡುವ ತಾತ್ಕಾಲಿಕ ಅಂಶವನ್ನು ಸಂವಿಧಾನದಲ್ಲಿ ಸೇರಿಸಲು ಕಾರಣ “ಕೆಲವೇ ಕೆಲವು ಕುಟುಂಬಗಳು” ಮತ್ತು ಅದನ್ನು ಕಾಯಂ ಎಂಬಂತೆ ಪರಿಗಣಿಸಲಾಗಿತ್ತು ಎಂದರು.

ಪ್ರಧಾನಮಂತ್ರಿ ಅವರು, ದೇಶ ಮೊದಲು ಎಂಬ ಕಲ್ಪನೆ ಬರುತ್ತಿದ್ದಂತೆಯೇ ದೇಶದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು ಮತ್ತು ಅಂತಹ ನಿರ್ಣಯಗಳನ್ನು ದೇಶ ಒಪ್ಪಿಕೊಂಡರೆ ರಾಷ್ಟ್ರ ಪ್ರಗತಿ ಪಥದತ್ತ ಸಾಗುತ್ತದೆ ಎಂದರು. ಆಧಾರ್ ಗೆ ಕಾನೂನಿನಡಿ ಮಾನ್ಯತೆ ನೀಡಬಾರದೆಂದು ಜನರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆ ಜನರು ಆಧಾರ್ ಯೋಜನೆಗೆ ಕಪ್ಪು ಮಸಿ ಬಳಿಯಲು ತಮ್ಮೆಲ್ಲಾ ಸಾಮರ್ಥ್ಯವನ್ನು ಬಳಸಿದರು ಆದರೆ ಆಧಾರ್ ಆ ಜನರ ನಿಜವಾದ ಸತ್ಯಾಂಶವನ್ನು ಹೊರಹಾಕುವಲ್ಲಿ ಸಹಾಯಕವಾಗಿದೆ. ಅದು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಖದೀಮರ ಕೈಗಳಿಗೆ ಸೇರುವುದನ್ನು ಉಳಿಸಿದೆ. ಪ್ರತಿ ವರ್ಷ ಅಷ್ಟೇ ಮೊತ್ತ ಖದೀಮರ ಕೈಗಳ ಕೈಸೇರುತ್ತಿತ್ತು ಮತ್ತು ಅದನ್ನು ಯಾರೊಬ್ಬರೂ ತಡೆಯಲಿಲ್ಲ. ನಾವು ವ್ಯವಸ್ಥೆಯಲ್ಲಿ ಆಗುತ್ತಿದ್ದ ಭಾರೀ ಸೋರಿಕೆಯನ್ನು ತಡೆಗಟ್ಟಿರುವುದಕ್ಕೆ ಕಾರಣ ನಮಗೆ ರಾಷ್ಟ್ರವೇ ಮೊದಲು ಎಂಬುದು.
ಜಿ ಎಸ್ ಟಿ – ಸರಕು ಸೇವಾ ತೆರಿಗೆ ಯನ್ನು ದೇಶದಲ್ಲಿ ಈ ಮೊದಲು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ ಎಂದ ಪ್ರಧಾನಿ ಅವರು, ಇಂದು ಸಾಮಾನ್ಯ ಜನರು ಬಳಕೆ ಮಾಡುವ   ಶೇಕಡ 99ರಷ್ಟು ವಸ್ತುಗಳಿಗೆ ಹಿಂದಿನ ತೆರಿಗೆಗೆ ಹೋಲಿಸಿದರೆ ಅದರ ಅರ್ಧದಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ರೆಫ್ರಿಜರೇಟರ್, ಮಿಕ್ಸರ್, ಜ್ಯೂಸರ್, ವ್ಯಾಕ್ಯೂಮ್ ಕ್ಲೀನರ್, ಗೀಸರ್, ಮೊಬೈಲ್ ಫೋನ್, ವಾಷಿಂಗ್ ಮೆಷಿನ್, ಗಡಿಯಾರಗಳು ಮತ್ತಿತರ ವಸ್ತುಗಳಿಗೆ ಶೇ.31ಕ್ಕೂ ಅಧಿಕ ತೆರಿಗೆ ವಿಧಿಸಲಾಗುತ್ತಿತ್ತು, ಇಂದು ಈ ಎಲ್ಲಾ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.10ರಿಂದ 12ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ದೆಹಲಿಯಲ್ಲಿ ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ಕುರಿತಂತೆ ಪ್ರಧಾನಮಂತ್ರಿ ಅವರು, ದಶಕಗಳ ಕಾಲ ಲಕ್ಷಾಂತರ ಕುಟುಂಬದವರ ಬಾಳಿನಲ್ಲಿ ಅನಿಶ್ಚಿತತೆ ಇತ್ತು ಎಂದರು. ಜನರು ತಾವು ಕಷ್ಟಪಟ್ಟು ದುಡಿದ ಹಣದಿಂದ ಮನೆಗಳನ್ನು ಖರೀದಿ ಮಾಡುತ್ತಿದ್ದರು, ಆದರೆ ಅವರು ಅವುಗಳ ಸಂಪೂರ್ಣ ಮಾಲಿಕತ್ವ ಹೊಂದಲಾಗುತ್ತಿರಲಿಲ್ಲ. ಈ ಸಮಸ್ಯೆಗಳು ಹಾಗೆಯೇ ಇದ್ದವು. ನಮ್ಮ ಸರ್ಕಾರ ಈ ಸಮಸ್ಯೆಯನ್ನು ಕೊನೆಗಾಣಿಸಲು ನಿರ್ಧರಿಸಿದೆ ಮತ್ತು ದೆಹಲಿಯ ಸುಮಾರು 50 ಲಕ್ಷಕ್ಕೂ ಅಧಿಕ ಕುಟುಂಬಗಳು ತಮ್ಮ ಮನೆಗಳ ಬಗ್ಗೆ ವಿಶ್ವಾಸ ಮತ್ತು ಭರವಸೆ ಹೊಂದುವಂತಾಗಿದ್ದು, ಅವರು ಉತ್ತಮ ಜೀವನ ನಡೆಸಬಹುದಾಗಿದೆ. ಖಂಡಿತ ಈ ನಿರ್ಧಾರದಿಂದ ನಮ್ಮ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ ಮತ್ತು ಅವರ ಕನಸಿನ ಮನೆ ಹೊಂದಲು ನೆರವಾಗುತ್ತದೆ ಎಂದು ಅವರು ಹೇಳಿದರು.

ಇಂದು ದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೇಗ ಹಿಂದೆಂದೂ ನಿರೀಕ್ಷಿಸಲಾಗದಷ್ಟು ರೀತಿಯಲ್ಲಿ ಜರುಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. 60 ತಿಂಗಳಲ್ಲಿ ಸುಮಾರು 60 ಕೋಟಿ ಭಾರತೀಯರಿಗೆ ಶೌಚಾಲಯ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ರೀತಿಯ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಯೋಚಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ರಾಷ್ಟ್ರ ಮೊದಲು ಎಂಬ ಕಲ್ಪನೆ ಮೂಡಿದಾಗ ಮಾತ್ರ ಸಾಧ್ಯ ಎಂದು ಪ್ರಧಾನಿ ಹೇಳಿದರು.

ನಾವು ಸ್ವ ಹಿತಾಸಕ್ತಿಯಿಂದ ಹೊರಗೆ ಬಂದರೆ ಎಲ್ಲರೂ ಬೆಂಬಲಿಸುತ್ತಾರೆ. ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ/ನಂಬಿಕೆ ನಮ್ಮ ನೀತಿ ಮತ್ತು ರಾಜಕೀಯಕ್ಕೆ ಆಧಾರವಾಗಿದೆ. ಈ ಯೋಚನೆಯಿಂದ ನಾವು ಅಭಿವೃದ್ಧಿಯ ಸ್ಪರ್ಧೆಯಲ್ಲಿ ಮುಂದಿದ್ದು, ದೇಶದ 112 ಆಶೋತ್ತರ ಜಿಲ್ಲೆಗಳಲ್ಲಿ ಹೊಸ ಮನೋಭಾವದೊಂದಿಗೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿತಿದ್ದೇವೆ ಎಂದರು.

ರಾಷ್ಟ್ರ ಮೊದಲು ಎಂಬ ಕಲ್ಪನೆಯಿಂದಾಗಿ ದೇಶದಲ್ಲಿ ಬಡವರನ್ನು ಬ್ಯಾಂಕಿಂಗ್ ಜಾಲದೊಂದಿಗೆ ಸೇರಿಸುವ ಯೋಜನೆಯಲ್ಲಿ 37 ಕೋಟಿಗೂ ಅಧಿಕ ಮಂದಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ರಾಷ್ಟ್ರ ಮೊದಲು ಎಂಬ ಪರಿಕಲ್ಪನೆಯಿಂದಾಗಿ ಜಲ ಜೀವನ್ ಮಿಷನ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ 3.5 ಲಕ್ಷ ಕೋಟಿ ಈ ಯೋಜನೆಯಲ್ಲಿ ಖರ್ಚು ಮಾಡಲಾಗುವುದು. ಅದರಿಂದಾಗಿ ದೇಶದ ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಪ್ರತಿಯೊಂದು ಮನೆಗೂ ಶುದ್ಧ ನೀರಿನ ಸಂಪರ್ಕ ನೀಡಲಾಗುವುದೆಂದರು.

ಜನರ ಆದಾಯ ಹೆಚ್ಚಳ ವಾಗುತ್ತಿರುವ ಹಿನ್ನೆಲೆಯಲ್ಲಿ ದೇಶ 5 ಟ್ರಿಲಿಯನ್ ಆರ್ಥಿಕತೆ ಹೊಂದಿದ ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದರು. ದೇಶ ಮೊದಲು ಎಂಬ ಪರಿಕಲ್ಪನೆಯಿಂದ ಒಗ್ಗೂಡಿ ಕಾರ್ಯೋನ್ಮುಖವಾದಾಗ ನಾವು ಪ್ರತಿಯೊಂದು ನಿರ್ಧಾರದಲ್ಲೂ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ ಮತ್ತು ದೇಶದ ಪ್ರತಿಯೊಂದು ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾಗಿದೆ. ಅದೇ ದೇಶ ಮೊದಲು ಕಲ್ಪನೆಯಲ್ಲಿ ನವ ಭಾರತದ ಹೊಸ ಸಾಧ್ಯತೆಗಳು, ಹೊಸ ಅವಕಾಶಗಳ ಕುರಿತು ವಿಸ್ತೃತ ಸಂವಾದ ನಡೆಯಬೇಕೆನ್ನುವ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.


**********


(Release ID: 1593684) Visitor Counter : 219