ಐಎಫ್‌ಎಫ್‌ಐಯ ಅದ್ದೂರಿ ಮೆರವಣಿಗೆ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಸಂಭ್ರಮವನ್ನು ಚಿತ್ರಮಂದಿರಗಳು ಹಾಗೂ ಉತ್ಸವದ ಆವರಣಗಳಾಚೆಗೆ ಕೊಂಡೊಯ್ದ, ಪಣಜಿಯ ಬೀದಿಗಳಲ್ಲಿ ಗೋವಾದ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಅನಾವರಣಗೊಳಿಸಿತು. ‘ಸಿನಿಮಾದ ಆನಂದವನ್ನು ಸಂಭ್ರಮಿಸೋಣ’ ಎಂಬ ಪರಿಕಲ್ಪನೆಯಡಿ ನಡೆದ ಮೆರವಣಿಗೆ, ಗೋವಾ ಮನರಂಜನಾ ಸೊಸೈಟಿ (ಇಎಸ್‌ಜಿ) ಆವರಣದಿಂದ ಆರಂಭವಾಗಿ ಕಲಾ ಅಕಾಡೆಮಿಯವರೆಗೆ ಸಾಗಿತು. ಬಣ್ಣಬಣ್ಣದ ಸ್ತಬ್ಧಚಿತ್ರಗಳು, ಸಾಂಪ್ರದಾಯಿಕ ಕರಕುಶಲ ಕಲೆ, ಜನಪದ ಪ್ರದರ್ಶನಗಳು ಹಾಗೂ ಸಮುದಾಯದ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಮೆರವಣಿಗೆಗೆ ಮೆರುಗು ನೀಡಿದವು.
ಗೋವಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಣ್ಮುಂದೆ ತೆರೆದಿಟ್ಟ ಮೆರವಣಿಗೆಯಲ್ಲಿ, ರಾಜ್ಯದ ಕಾರ್ನಿವಲ್ ಮತ್ತು ಶಿಗ್ಮೊ ಉತ್ಸವಗಳಲ್ಲಿ ಪ್ರಶಸ್ತಿ ಪಡೆದ ಸ್ತಬ್ಧಚಿತ್ರಗಳ ಜತೆಗೆ ಆಕರ್ಷಕ ಜನಪದ ನೃತ್ಯ ಪ್ರದರ್ಶನಗಳೂ ಗಮನ ಸೆಳೆದವು. ಗೋವಾದ ಹಬ್ಬದ ಸಡಗರ ಹಾಗೂ ಸಿನಿಮಾದ ಸಾರ್ವತ್ರಿಕ ಆಕರ್ಷಣೆಯನ್ನು ಬೆಸೆದ ಈ ಮೆರವಣಿಗೆ, ಪ್ರವಾಸಿಗರು, ಚಿತ್ರೋತ್ಸವದ ಪ್ರತಿನಿಧಿಗಳು ಹಾಗೂ ಸ್ಥಳೀಯರಿಗೆ ರಾಜ್ಯದ ಸಾಂಸ್ಕೃತಿಕ ಚೈತನ್ಯವನ್ನು ಅನುಭವಿಸುವ ವಿಶಿಷ್ಟ ಅವಕಾಶ ಕಲ್ಪಿಸಿತು. ಕಲೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳು ಭಾಷೆ ಹಾಗೂ ಭೌಗೋಳಿಕ ಗಡಿಗಳನ್ನು ಮೀರುತ್ತವೆ ಎಂಬುದನ್ನು ಸಾರುವ ಮೂಲಕ, ಇಫಿಯ ‘ಗಡಿಗಳಿಲ್ಲದ ಕಥೆಗಳು’ ಎಂಬ ಆಶಯವನ್ನೂ ಪ್ರತಿಬಿಂಬಿಸಿತು.
_20261125211040_432147.jpeg)
ಮೆರವಣಿಗೆ ಉದ್ಘಾಟಿಸಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಗಣ್ಯರು, ಕಲಾವಿದರು ಹಾಗೂ ಪ್ರವಾಸಿಗರನ್ನು ಚಿತ್ರೋತ್ಸವಕ್ಕೆ ಸ್ವಾಗತಿಸಿ, ಆತ್ಮನಿರ್ಭರ ಭಾರತದ ಆಶಯಕ್ಕೆ ರಾಜ್ಯ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವುದು, ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವುದು ಹಾಗೂ ಸಮುದಾಯದ ನೇತೃತ್ವದ ಉಪಕ್ರಮಗಳ ಮೂಲಕ ಸ್ವಾವಲಂಬನೆಯನ್ನು ಉತ್ತೇಜಿಸುವುದರ ಮಹತ್ವವನ್ನುಬಲವಾಗಿ ಪ್ರತಿಪಾದಿಸಿದರು. ಆಕಾಶ ಕಂದೀಲು ಸ್ಪರ್ಧೆಯನ್ನು ಉಲ್ಲೇಖಿಸಿದ ಅವರು, ಸಾಂಪ್ರದಾಯಿಕ ಕಂದೀಲುಗಳನ್ನು ಕೈಯಾರೆ ತಯಾರಿಸಿ ತಮ್ಮ ಸೃಜನಶೀಲತೆ ಪ್ರದರ್ಶಿಸುವಲ್ಲಿ ಗೋವಾದ ಜನರು ತೋರಿದ ಉತ್ಸಾಹವನ್ನು ಶ್ಲಾಘಿಸಿದರು. ಇಂತಹ ಉಪಕ್ರಮಗಳು ಕಲಾ ಅಭಿವ್ಯಕ್ತಿಯನ್ನು ಸಂಭ್ರಮಿಸುವುದಷ್ಟೇ ಅಲ್ಲದೆ, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಿ, ತಲೆತಲಾಂತರದ ಸಂಪ್ರದಾಯಗಳನ್ನು ಜೀವಂತವಾಗಿಡುತ್ತವೆ ಎಂದು ಹೇಳಿದರು. ಇಫಿಯ ‘ಗಡಿಗಳಿಲ್ಲದ ಕಥೆಗಳು’ ‘Stories Without Borders’ಎಂಬ ಆಶಯವು ಗೋವಾದ ಸಾಂಪ್ರದಾಯಿಕ ಸ್ತಬ್ಧಚಿತ್ರಗಳ ಮೆರವಣಿಗೆ ಮತ್ತು ಜನಪದ ಪ್ರದರ್ಶನಗಳಲ್ಲಿ ಸಹಜವಾಗಿ ಪ್ರತಿಫಲಿಸುತ್ತದೆ ಎಂದ ಅವರು, ಭಾಷೆಯ ಅಡೆತಡೆಗಳಾಚೆಗೆ ರಾಜ್ಯದ ಕಲಾ ಪರಂಪರೆಯನ್ನು ಅರಿತು ಮೆಚ್ಚಲು ಈ ಸಾಂಸ್ಕೃತಿಕ ಅಭಿವ್ಯಕ್ತಿಗಳು ಪ್ರವಾಸಿಗರಿಗೆ ನೆರವಾಗುತ್ತವೆ ಎಂದು ತಿಳಿಸಿದರು. ಭಾಗವಹಿಸಿದ ಕಲಾವಿದರು ಹಾಗೂ ಆಯೋಜಕರನ್ನು ಅಭಿನಂದಿಸಿದ ಅವರು, ಪ್ರಸ್ತುತ ಐಎಫ್‌ಎಫ್‌ಐ ಆವೃತ್ತಿಯನ್ನು ಅತ್ಯಂತ ಯಶಸ್ವಿ ಆವೃತ್ತಿಗಳಲ್ಲೊಂದು ಎಂದು ಬಣ್ಣಿಸಿದರು. ಗೋವಾ ಸರಕಾರದ ಪರವಾಗಿ ಪ್ರವಾಸಿಗರಿಗೆ ಆತ್ಮೀಯ ಸ್ವಾಗತ ಕೋರಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಗೋವಾ ಮನರಂಜನಾ ಸೊಸೈಟಿಯ (ESG) ಉಪಾಧ್ಯಕ್ಷೆ ಡೆಲೈಲಾ ಎಂ. ಲೋಬೊ, ನವಿಲಿನ ಪರಿಕಲ್ಪನೆಯಡಿ ಈ ವರ್ಷ ಆಯೋಜಿಸಿದ್ದ ಆಕಾಶ ಕಂದೀಲು ಸಿದ್ಧಪಡಿಸುವ ಸ್ಪರ್ಧೆಗೆ 350ಕ್ಕೂ ಅಧಿಕ ನೋಂದಣಿಗಳು ಬಂದಿವೆ ಎಂದು ತಿಳಿಸಿದರು. ಸ್ಪರ್ಧಿಗಳ ಸೃಜನಶೀಲತೆ ಹಾಗೂ ಕರಕುಶಲ ನೈಪುಣ್ಯವನ್ನು ಅಭಿನಂದಿಸಿದ ಅವರು, ಪ್ರಶಸ್ತಿ ವಿಜೇತ ಕಾರ್ನಿವಲ್ ಸ್ತಬ್ಧಚಿತ್ರಗಳು ಮತ್ತು ಚೈತನ್ಯಭರಿತ ಜನಪದ ಪ್ರದರ್ಶನಗಳನ್ನು ಒಳಗೊಂಡ ವಿಶೇಷ ಮೆರವಣಿಗೆಯನ್ನೂ ಉಲ್ಲೇಖಿಸಿದರು. ಗೋವಾದ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಮಿಂದೇಳುವ ಜತೆಗೆ, ಚಿತ್ರೋತ್ಸವ ನೀಡುವ ವೈವಿಧ್ಯಮಯ ಸಿನಿಮಾ ಅನುಭವಗಳನ್ನು ಆಸ್ವಾದಿಸುವಂತೆ ಪ್ರವಾಸಿಗರು ಹಾಗೂ ಸಿನಿಮಾಪ್ರಿಯರಿಗೆ ಆಹ್ವಾನ ನೀಡಿದರು.
_20261125211214_7d5190.jpeg)
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌ಎಫ್‌ಡಿಸಿ) ಅಧ್ಯಕ್ಷರಾದ ಶ್ರೀ ಜಿ. ಕೃಷ್ಣಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಧೀರಜ್ ಸಿಂಗ್, ಗೋವಾ ಮನರಂಜನಾ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದೀಪಕ್ ಬಾಂದೇಕರ್ ಹಾಗೂ ಚಿತ್ರರಂಗದ ಖ್ಯಾತನಾಮರಾದ ಶ್ರೀ ಅಸೀಮ್ ಬಜಾಜ್, ಶ್ರೀ ಆಶ್ಲೇ ಲೋಬೊ ಮತ್ತು ಶ್ರೀ ಸೈನಿ ಎಸ್. ಜೋಹ್ರೇ ಉಪಸ್ಥಿತರಿದ್ದರು.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****