ಪ್ರಕಟಣಾ ದಿನಾಂಕ:
05 NOV 2026 2:43PM by PIB Bengaluru
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಗಮನಾರ್ಹ ಪ್ರಗತಿಯು, ಪರಿಸರ ಬದ್ಧತೆಗಳು ಆರ್ಥಿಕ ಬೆಳವಣಿಗೆಗೆ ಅಡ್ಡಿಯಲ್ಲ, ಬದಲಿಗೆ ದೇಶದ ಅಭಿವೃದ್ಧಿ ಪಯಣಕ್ಕೆ ವೇಗವರ್ಧಕವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಹೇಳಿದರು.
ನವದೆಹಲಿಯ ‘ಭಾರತ್ ಮಂಟಪ’ದಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ-2026'ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಸಾಧನೆಗಳು, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಅದರ ಬದ್ಧತೆ ಮತ್ತು ದೇಶಾದ್ಯಂತ ಮನೆಗಳು, ರೈತರು ಹಾಗೂ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಶುದ್ಧ ಇಂಧನದ ಪರಿವರ್ತನಾ ಪಾತ್ರವನ್ನು ಉಲ್ಲೇಖಿಸಿದರು.
ಭಾರತದಂತಹ ಬೃಹತ್ ಅಭಿವೃದ್ಧಿಶೀಲ ರಾಷ್ಟ್ರವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಲೇ ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಬಹುದೇ ಎಂಬ ಅನುಮಾನಗಳನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಭಾರತವು ತನ್ನ ಸಾಧನೆಗಳ ಮೂಲಕ ಈ ಅನುಮಾನಗಳಿಗೆ ಉತ್ತರಿಸಿದೆ ಎಂದು ಹೇಳಿದರು.
ಭಾರತದ ಪಳೆಯುಳಿಕೇತರ ಇಂಧನ ಆಧಾರಿತ ಸ್ಥಾಪಿತ ಸಾಮರ್ಥ್ಯವು 300 ಗಿಗಾವ್ಯಾಟ್ಗಳನ್ನು ದಾಟಿದೆ ಮತ್ತು ದೇಶವು 2025 ರಲ್ಲಿ ಪಳೆಯುಳಿಕೇತರ ಇಂಧನ ಮೂಲಗಳಿಂದ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇಕಡಾ 50ರಷ್ಟನ್ನು ತನ್ನ ಗುರಿಗಿಂತ ಐದು ವರ್ಷಗಳ ಮುಂಚಿತವಾಗಿಯೇ ಸಾಧಿಸಿದೆ ಎಂದು ಅವರು ಒತ್ತಿ ಹೇಳಿದರು. ಒಂದು ದಶಕದಲ್ಲಿ ಸೌರ ವಿದ್ಯುತ್ ಸಾಮರ್ಥ್ಯವು 3 ಗಿಗಾವ್ಯಾಟ್ಗಿಂತ ಕಡಿಮೆ ಮಟ್ಟದಿಂದ 170 ಗಿಗಾವ್ಯಾಟ್ಳಿಗೂ ಮೀರಿ ಬೆಳೆದಿದೆ ಎಂದು ಅವರು ಗಮನ ಸೆಳೆದರು.
ಒಮ್ಮೆ ಕಲ್ಲಿದ್ದಲು ಆಧಾರಿತ ವಿದ್ಯುತ್ಗಿಂತ ಹಲವಾರು ಪಟ್ಟು ದುಬಾರಿಯಾಗಿದ್ದ ಸೌರ ವಿದ್ಯುತ್ ಈಗ ಭಾರತದ ಅತ್ಯಂತ ಅಗ್ಗದ ವಿದ್ಯುತ್ ಮೂಲಗಳಲ್ಲಿ ಒಂದಾಗಿದೆ ಎಂದು ಹೇಳಿದ ಅವರು, ಈ ರೂಪಾಂತರವು ಉತ್ತಮ ನೀತಿಗಳು, ಖಾಸಗಿ ಉದ್ಯಮ ಮತ್ತು ರಾಜ್ಯಗಳು ಹಾಗೂ ನಾಗರಿಕರ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಹೈಡ್ರೋಜನ್ ಇಂಧನವು ಭಾರತದಲ್ಲಿ ಉತ್ತೇಜನಕಾರಿ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದ ಉಪರಾಷ್ಟ್ರಪತಿಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯು ಮುಂಬರುವ ವರ್ಷಗಳಲ್ಲಿ ಹೈಡ್ರೋಜನ್ ಶಕ್ತಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ನವೀಕರಿಸಬಹುದಾದ ಇಂಧನ ಪರಿವರ್ತನೆಯು ದೇಶಕ್ಕೆ ಅನುಕರಣೀಯ ಸಾಧನೆ ಮಾತ್ರವಲ್ಲದೆ ಜಾಗತಿಕ ದಕ್ಷಿಣಕ್ಕೆ ಮಾದರಿಯಾಗಿದೆ ಎಂದರು.
ಕಳೆದ ದಶಕದಲ್ಲಿ ಸಾಧಿಸಿದ ಪ್ರಗತಿಯು, ಪರಿಸರ ಬದ್ಧತೆಗಳು ಬೆಳವಣಿಗೆಗೆ ವೇಗವರ್ಧಕಗಳಾಗಿವೆ ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಮರ್ಥಿಸುತ್ತದೆ. ಇದು ಹೆಚ್ಚಿನ ಇಂಧನ ಲಭ್ಯತೆ, ಕಡಿಮೆ ಕೈಗಾರಿಕಾ ವೆಚ್ಚಗಳು, ಉದ್ಯೋಗಾವಕಾಶಗಳು ಮತ್ತು ಕಡಿಮೆ ಆಮದು ಅವಲಂಬನೆಯನ್ನು ತಲುಪಿಸುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದರು. ಬಲವಾದ ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಕರೆ ನೀಡಿದ ಅವರು ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, "2040 ರ ತಂತ್ರಜ್ಞಾನಗಳು ಇಂದಿನ ಪ್ರಯೋಗಾಲಯಗಳು ಮತ್ತು ನವೋದ್ಯಮಗಳಿಂದ ಬರುತ್ತವೆ" ಎಂದು ಹೇಳಿದರು.
'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ' ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಮನೆಗಳು ಸೌರ ಚಳವಳಿಗೆ ಸೇರ್ಪಡೆಗೊಂಡಿವೆ ಮತ್ತು ಕೈಗೆಟುಕುವ ಶುದ್ಧ ಇಂಧನದ ಪ್ರವೇಶವನ್ನು ಪಡೆದುಕೊಂಡಿವೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. ಸುಮಾರು 30 ಲಕ್ಷ ರೈತರು ‘ಪಿಎಂ-ಕುಸುಮ್’ ಅಡಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಎಂದು ಉಲ್ಲೇಖಿಸಿದರು. ಸೌರ ಪಂಪ್ಗಳು ರೈತರಿಗೆ ಡೀಸೆಲ್ ವೆಚ್ಚವನ್ನು ಉಳಿಸಲು, ಹೆಚ್ಚುವರಿ ಆದಾಯವನ್ನು ಗಳಿಸಲು ಮತ್ತು ಕೇವಲ ಅನ್ನದಾತರಾಗದೆ 'ಉರ್ಜಾದಾತ'ರಾಗಲು (ಇಂಧನ ನೀಡುವವರು) ಸಹಾಯ ಮಾಡುತ್ತವೆ ಎಂದು ಗಮನ ಸೆಳೆದರು.
‘ಪಿಎಂ-ಜನ್ಮನ್’ ಮತ್ತು 'ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ'ದ ಅಡಿಯಲ್ಲಿನ ಉಪಕ್ರಮಗಳು ಸಾಂಪ್ರದಾಯಿಕ ಗ್ರಿಡ್ ಸಂಪರ್ಕವು ಕಾರ್ಯಸಾಧ್ಯವಲ್ಲದ ದೂರದ ಬುಡಕಟ್ಟು ಪ್ರದೇಶಗಳಿಗೂ ವಿದ್ಯುತ್ ಸಂಪರ್ಕವನ್ನು ವಿಸ್ತರಿಸುತ್ತಿವೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. ವಿದ್ಯುತ್ ಸೌಲಭ್ಯವು ಶಿಕ್ಷಣ, ಆರೋಗ್ಯ ರಕ್ಷಣೆ, ಸಂವಹನ ಮತ್ತು ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಮೂಲಕ ಜೀವನವನ್ನು ಪರಿವರ್ತಿಸುತ್ತದೆ ಎಂದು ಹೇಳಿದ ಅವರು, ಇಂಧನ ಪರಿಹಾರಗಳು ನಗರಗಳು, ಹಳ್ಳಿಗಳು ಮತ್ತು ದೂರದ ವಾಸಸ್ಥಾನಗಳ ವಿಭಿನ್ನ ಅಗತ್ಯಗಳನ್ನು ಪೂರೈಸಬೇಕು ಎಂದು ಒತ್ತಿ ಹೇಳಿದರು.
ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ಪ್ರಧಾನಮಂತ್ರಿ ಅವರು ಕಲ್ಪಿಸಿದಂತೆ ಜನಾಂದೋಲನ ಎಂದು ಬಣ್ಣಿಸಿದ ಉಪರಾಷ್ಟ್ರಪತಿಗಳು, ಇಂತಹ ಆಂದೋಲನವನ್ನು ಸರ್ಕಾರ ಮಾತ್ರ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು. ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ನಾಗರಿಕರ ಸಕ್ರಿಯ ಭಾಗವಹಿಸುವಿಕೆಗೆ ಅವರು ಒತ್ತಾಯಿಸಿದರು. ಈ ಆಂದೋಲನದಲ್ಲಿ ಜನರ ಭಾಗವಹಿಸುವಿಕೆಯು ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ವೇಗಗೊಳಿಸುವುದಲ್ಲದೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ, ಜೀವನೋಪಾಯವನ್ನು ಒದಗಿಸುತ್ತದೆ ಮತ್ತು ಕೌಟುಂಬಿಕ ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಅವರು ಗಮನಸೆಳೆದರು.
‘ಮಿಷನ್ ಲೈಫ್’ ಅನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು, ಇಂಧನ-ದಕ್ಷ ಅಭ್ಯಾಸಗಳು, ಜಾಗರೂಕ ಬಳಕೆ ಮತ್ತು ಜವಾಬ್ದಾರಿಯುತ ವಿಲೇವಾರಿಗೆ ಕರೆ ನೀಡಿದರು. ಒಂದು ಶತಕೋಟಿ ಸಣ್ಣ ವೈಯಕ್ತಿಕ ಕ್ರಮಗಳು ಹೊಸ ವಿದ್ಯುತ್ ಸ್ಥಾವರದಷ್ಟೇಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಹೇಳಿದರು.
ಮುಂಬರುವ ದಶಕವು ಜಾಗತಿಕ ಹವಾಮಾನ ಗುರಿಗಳನ್ನು ಸಾಧಿಸಲು ನಿರ್ಣಾಯಕವಾಗಿದೆ ಎಂದು ಹೇಳಿದ ಉಪರಾಷ್ಟ್ರಪತಿಗಳು, 2047ರ ವೇಳೆಗೆ ವಿಕಸಿತ ಭಾರತ ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಭಾರತದ ದೃಷ್ಟಿಕೋನವನ್ನು ಪುನರುಚ್ಚರಿಸಿದರು. 2070ರ ವೇಳೆಗೆ ಭಾರತದ ವಿದ್ಯುತ್ ಬೇಡಿಕೆಯು ಸುಮಾರು ಏಳು ಪಟ್ಟು ಹೆಚ್ಚಾಗಬಹುದು ಎಂದು ಗಮನ ಸೆಳೆದ ಅವರು ಪರಿಸರವನ್ನು ರಕ್ಷಿಸುತ್ತಲೇ ಶುದ್ಧ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿದ್ಯುತ್ ಮೂಲಕ ಹೆಚ್ಚುತ್ತಿರುವ ಇಂಧನ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವನ್ನು ಒತ್ತಿ ಹೇಳಿದರು.
ಶೃಂಗಸಭೆಯ ಚರ್ಚೆಗಳನ್ನು ಕಾರ್ಯರೂಪಕ್ಕೆ ತರುವಂತೆ ಭಾಗವಹಿಸುವವರನ್ನು ಒತ್ತಾಯಿಸಿದ ಉಪರಾಷ್ಟ್ರಪತಿಗಳು, "ಚರ್ಚೆಗಳನ್ನು ಯೋಜನೆಗಳಾಗಿ ಮತ್ತು ಯೋಜನೆಗಳನ್ನು ಶಕ್ತಿಯಾಗಿ ಪರಿವರ್ತಿಸಿ" ಎಂದು ಕರೆ ನೀಡಿದರು. "ಜಗತ್ತು ಸೂರ್ಯನಿಂದ ಬೆಳಗಬೇಕಾದರೆ, ಅದು ಒಟ್ಟಾಗಿ ಕೆಲಸ ಮಾಡುವ ಕೈಗಳಿಂದ ಬೆಳಗಲಿ" ಎಂದು ಹೇಳಿದ ಅವರು ಜಾಗತಿಕ ಸಹಕಾರಕ್ಕೆ ಕರೆ ನೀಡಿದರು.
ಈ ಸಂದರ್ಭದಲ್ಲಿ, ಉಪರಾಷ್ಟ್ರಪತಿಗಳು ಉತ್ತಮ ಸಾಧನೆ ಮಾಡಿದ ರಾಜ್ಯಗಳು, ಸರ್ಕಾರಿ ಇಲಾಖೆಗಳು, ಮಾರಾಟಗಾರರು, ಬ್ರಾಂಡ್ ಮಾಲೀಕರು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 'ನವೀಕರಿಸಬಹುದಾದ ಇಂಧನ ಶ್ರೇಷ್ಠತಾ ಪ್ರಶಸ್ತಿ'ಗಳು ಮತ್ತು 'ಪಿಎಂ ಸೂರ್ಯ ಘರ್ ಪ್ರಶಸ್ತಿ'ಗಳನ್ನು ಪ್ರದಾನ ಮಾಡಿದರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ; ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್; ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಅಜಯ್ ಕುಮಾರ್ ಸೂದ್; ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳು, ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮದ ನಾಯಕರು, ಜ್ಞಾನ ಪಾಲುದಾರರು, ಪ್ರದರ್ಶಕರು ಮತ್ತು ಇತರ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
*****