ಪ್ರಕಟಣಾ ದಿನಾಂಕ:
26 OCT 2026 1:37PM by PIB Bengaluru
ಆಕಾಶವಾಣಿಯು, ಭಾರತದ ಮೊದಲ ಉಪ ಪ್ರಧಾನಮಂತ್ರಿ, ವಾರ್ತಾ ಮತ್ತು ಪ್ರಸಾರ ಸಚಿವರು ಹಾಗೂ ರಾಷ್ಟ್ರೀಯ ಏಕೀಕರಣದ ಶಿಲ್ಪಿ ಎಂದು ಕರೆಯಲ್ಪಡುವ, 'ಭಾರತದ ಉಕ್ಕಿನ ಮನುಷ್ಯ' ಎಂದು ಪ್ರೀತಿಯಿಂದ ಸ್ಮರಿಸುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೆನಪಿಗಾಗಿ 1955 ರಿಂದ ಪ್ರತಿವರ್ಷ 'ಸರ್ದಾರ್ ವಲ್ಲಭಭಾಯಿ ಪಟೇಲ್ ಉಪನ್ಯಾಸ ಮಾಲೆ'ಯನ್ನು ಆಯೋಜಿಸುತ್ತಾ ಬಂದಿದೆ. ಈ ಉಪನ್ಯಾಸ ಮಾಲೆಯು ಅವರ ಶಾಶ್ವತ ಪರಂಪರೆಯನ್ನು ಸ್ಮರಿಸುವ ಉದ್ದೇಶವನ್ನು ಹೊಂದಿದೆ.

ಈ ಪ್ರತಿಷ್ಠಿತ ಉಪನ್ಯಾಸ ಮಾಲೆಯ 67ನೇ ಆವೃತ್ತಿಯು 2026ರ ಅಕ್ಟೋಬರ್ 27 ರಂದು ಮಧ್ಯಾಹ್ನ 3:00 ಗಂಟೆಗೆ ನವದೆಹಲಿಯ ಸಂಸದ್ ಮಾರ್ಗದಲ್ಲಿರುವ ಆಕಾಶವಾಣಿಯ 'ರಂಗ್ ಭವನ ಸಭಾಂಗಣ'ದಲ್ಲಿ ನಡೆಯಲಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಉಪನ್ಯಾಸವನ್ನು ನೀಡಲಿದ್ದಾರೆ. ಈ ಉಪನ್ಯಾಸದ ಧ್ವನಿಮುದ್ರಣವನ್ನು ಸರ್ದಾರ್ ಪಟೇಲ್ ಅವರ ಜನ್ಮದಿನದಂದು (ಅಕ್ಟೋಬರ್ 31), ರಾತ್ರಿ 9:30 ಗಂಟೆಗೆ ಆಕಾಶವಾಣಿ ದೇಶಾದ್ಯಂತ ಪ್ರಸಾರ ಮಾಡಲಿದೆ.

ಈ ಉಪನ್ಯಾಸ ಮಾಲೆಯ ಮೊದಲ ಉಪನ್ಯಾಸವನ್ನು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ಭಾರತರತ್ನ ಶ್ರೀ ಸಿ. ರಾಜಗೋಪಾಲಾಚಾರಿ ಅವರು ನೀಡಿದ್ದರು. ಅಂದಿನಿಂದ, ಅನೇಕ ಗಣ್ಯ ನಾಯಕರು, ವಿಜ್ಞಾನಿಗಳು ಮತ್ತು ಇತಿಹಾಸಕಾರರು ಈ ವೇದಿಕೆ ಅಲಂಕರಿಸಿದ್ದಾರೆ. ಅವರಲ್ಲಿ ಕೆಲವು ಪ್ರಮುಖ ಹೆಸರುಗಳೆಂದರೆ, ಡಾ. ಜಾಕಿರ್ ಹುಸೇನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಶ್ರೀ ಮೊರಾರ್ಜಿ ದೇಸಾಯಿ, ಡಾ. ಕರಣ್ ಸಿಂಗ್, ಡಾ. ಎಂ.ಎಸ್. ಸ್ವಾಮಿನಾಥನ್, ನ್ಯಾಯಮೂರ್ತಿ (ಶ್ರೀಮತಿ) ಲೀಲಾ ಸೇಠ್, ಶ್ರೀ ರಾಮ್ ನಾಥ್ ಕೋವಿಂದ್, ಶ್ರೀ ಅರುಣ್ ಜೇಟ್ಲಿ, ಶ್ರೀ ಅಜಿತ್ ದೋವಲ್, ಡಾ. ಎಸ್. ಜೈಶಂಕರ್, ಜನರಲ್ ಬಿಪಿನ್ ರಾವತ್ ಮತ್ತು ಡಾ. ಎಸ್. ಸೋಮನಾಥ್ ಮತ್ತಿತರರು ಸೇರಿದ್ದಾರೆ. ಕಳೆದ ವರ್ಷ, ಈ ಉಪನ್ಯಾಸ ಮಾಲೆಯ 66ನೇ ಆವೃತ್ತಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಉಪನ್ಯಾಸ ನೀಡಿದ್ದರು.
ಈ ವಾರ್ಷಿಕ ಕಾರ್ಯಕ್ರಮವು ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಿಂತನೆಗಳು, ಕಲ್ಪನೆಗಳು ಮತ್ತು ದೂರದೃಷ್ಟಿಗಳ ಭಂಡಾರವಾಗಿ ಕಾರ್ಯನಿರ್ವಹಿಸಿದೆ. ಅಲ್ಲದೆ, ನಮ್ಮ ವೈವಿಧ್ಯಮಯ ಸಂಸ್ಕೃತಿಯ ಅನೇಕ ಆಯಾಮಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಅಗಾಧ ವಿಸ್ತಾರ ಮತ್ತು ಆಳವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಇದೊಂದು ಸಾಧನವಾಗಿದೆ. ಕಳೆದ ವರ್ಷಗಳಲ್ಲಿ, ಇಲ್ಲಿ ನೀಡಲಾದ ಉಪನ್ಯಾಸಗಳು ಭಾರತವನ್ನು ಅರಿಯಲು ಬಯಸುವವರಿಗೆ ಅಮೂಲ್ಯ ಜ್ಞಾನದ ಭಂಡಾರವಾಗಿ ಮಾರ್ಪಟ್ಟಿವೆ. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಬೌದ್ಧಿಕ ಕೊಡುಗೆಯ ಮೂಲಕ, ಈ ಉಪನ್ಯಾಸ ಸರಣಿಯನ್ನು ಅತ್ಯಮೂಲ್ಯ ಪರಂಪರೆಯನ್ನಾಗಿ ರೂಪಿಸಲು ನೆರವಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದ್ದು, ಸಭಾಂಗಣದಲ್ಲಿ ಆಸನಗಳ ಲಭ್ಯತೆಗೆ ಅನುಗುಣವಾಗಿ 'ಮೊದಲು ಬಂದವರಿಗೆ ಮೊದಲ ಆದ್ಯತೆ' ಎಂಬ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುವುದು.
ಹಿಂದಿನ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸಗಳು
ಪ್ರಸಾರ ಭಾರತಿಯ ಅಧಿಕೃತ ಯೂಟ್ಯೂಬ್ ಆರ್ಕೈವ್ನಲ್ಲಿ, ಗಣ್ಯ ನಾಯಕರು ಮತ್ತು ವಿಶಿಷ್ಟ ವ್ಯಕ್ತಿಗಳು ಭಾಗವಹಿಸಿರುವ ಪ್ರತಿಷ್ಠಿತ 'ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸ' ಸರಣಿಯ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಬಹುದು.
ಉಪನ್ಯಾಸಗಳನ್ನು ವೀಕ್ಷಿಸಿ: https://youtube.com/playlist?list=PLqtVCj5iilH4WmBlnHhj3XiR_v0E7elJh&si=TxICk_ChZVu5V5Rj
*****