ಶಿಕ್ಷಣ ಸಚಿವಾಲಯ
azadi ka amrit mahotsav

"ತಿರುಕ್ಕುರಳ್  ಪಾಯಿಲ್ವಮ್ – ತಿರುಕ್ಕುರಳ್ ಅಭ್ಯಾಸ ಕರೆನ್" ಎಂಬ ಘೋಷವಾಕ್ಯದಡಿ 2026ರ ನವೆಂಬರ್ 28 ರಿಂದ ಡಿಸೆಂಬರ್ 12 ರವರೆಗೆ ಕಾಶಿ ತಮಿಳು ಸಂಗಮ 5.0  ಆಯೋಜನೆ


ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದ ಕೆಟಿಎಸ್ 5.0 ಗಾಗಿ ನೋಂದಣಿ ಪೋರ್ಟಲ್ ಗೆ ಚಾಲನೆ

ಪ್ರಕಟಣಾ ದಿನಾಂಕ: 22 OCT 2026 2:24PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದ 2026ರ ನವೆಂಬರ್ 28 ರಿಂದ ಡಿಸೆಂಬರ್ 12  ರವರೆಗೆ ನಡೆಯಲಿರುವ ಐದನೇ ಆವೃತ್ತಿಯ ಕಾಶಿ ತಮಿಳು ಸಂಗಮ (ಕೆಟಿಎಸ್ 5.0) ಗಾಗಿ ನೋಂದಣಿ ಪೋರ್ಟಲ್  ಅನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕಲಿಕೆಯ ಎರಡು ಪ್ರಾಚೀನ ಕೇಂದ್ರಗಳಾಗಿರುವ ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ನಾಗರಿಕತೆಯ ಸಂಬಂಧಗಳ ಸಂಭ್ರಮಾಚರಣೆಯನ್ನು ಪುನರುಚ್ಚರಿಸುತ್ತದೆ ಮತ್ತು ಬಲವರ್ಧನೆಗೊಳಿಸುತ್ತದೆ, ಜತೆಗೆ ಇದು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ, ಪ್ರಾಚೀನ ಕಾಲದಿಂದಲೂ ದೇಶವು ಸದೃಢವಾದ ಸಾಂಸ್ಕೃತಿಕ ಏಕತೆಯನ್ನು ಹೊಂದಿದೆ ಎಂದು ಹೇಳಿದರು. ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ಧಾರ್ಮಿಕ ಸಂಪ್ರದಾಯಗಳ ಭಾಗವಾಗಿ ಅನೇಕ ಜನರು ಕಾಶಿ ಮತ್ತು ರಾಮೇಶ್ವರಂಗೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಶಿಕ್ಷಕರು, ಬರಹಗಾರರು, ವೃತ್ತಿಪರರು, ಕೃಷಿಕರು, ಕಲಾವಿದರು, ಮಹಿಳೆಯರು ಮತ್ತು ಆಧ್ಯಾತ್ಮಿಕ ವಿದ್ವಾಂಸರನ್ನು ಒಗ್ಗೂಡಿಸುತ್ತದೆ ಎಂದು ಅವರು ಹೇಳಿದರು. ಕಾಶಿ ತಮಿಳು ಸಂಗಮದ ಉದ್ದೇಶಗಳೊಂದಿಗೆ ವಿದ್ಯಾರ್ಥಿಗಳನ್ನು ಪರಿಚಯಿಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸಂಪರ್ಕ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ರಾಷ್ಟ್ರೀಯ ಐಕ್ಯತೆಯನ್ನು ಬಲವರ್ಧನೆಗೊಳಿಸುವಲ್ಲಿ ಮತ್ತು ಭಾರತದ ಹಂಚಿಕೆಯ ನಾಗರಿಕತೆಯ ಪರಂಪರೆಯ ಆಚರಣೆಯಲ್ಲಿ ಕಾಶಿ ತಮಿಳು ಸಂಗಮವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಪುನರುಚ್ಚರಿಸಿದರು.

ಮೊದಲ ಕಾಶಿ ತಮಿಳು ಸಂಗಮವನ್ನು 2022 ರಲ್ಲಿ ನಡೆಸಲಾಯಿತು ಮತ್ತು ಕಳೆದ ನಾಲ್ಕು ಆವೃತ್ತಿಗಳಲ್ಲಿ, ಇದು ಎರಡು ಪ್ರದೇಶಗಳ ನಡುವೆ ಜ್ಞಾನ, ಭಾಷೆ, ಸಂಪ್ರದಾಯಗಳು ಮತ್ತು ಜೀವಂತ ಅನುಭವಗಳ ಅರ್ಥಪೂರ್ಣ ವಿನಿಮಯಕ್ಕೆ ಅನುವು ಮಾಡಿಕೊಟ್ಟಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ, ಐಐಟಿ ಮದ್ರಾಸ್; ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ ಯು); ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು (ಸಿಐಸಿಟಿ), ಚೆನ್ನೈ, ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಸ್ಕೃತಿ, ರೈಲ್ವೆ, ಶಾಲಾ ಶಿಕ್ಷಣ, ಪ್ರವಾಸೋದ್ಯಮ, ಜವಳಿ, ಆಹಾರ ಸಂಸ್ಕರಣಾ ಕೈಗಾರಿಕೆಗಳು, ವಾರ್ತಾ  ಮತ್ತು ಪ್ರಸಾರ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇತ್ಯಾದಿ ಇಲಾಖೆಗಳು/ಸಚಿವಾಲಯಗಳ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.

ಘೋಷ ವಾಕ್ಯ 2026: ತಿರುಕ್ಕುರಳ್  ಪಾಯಿಲ್ವಮ್ – ತಿರುಕ್ಕುರಳ್ ಅಭ್ಯಾಸ ಕರೆನ್

ಕೆಟಿಎಸ್ 5.0 ರ ಘೋಷವಾಕ್ಯ "ತಿರುಕ್ಕುರಳ್ ಪಾಯಿಲ್ವಂ – ತಿರುಕ್ಕುರಳ್  ಅಭ್ಯಾಸ ಕರೆನ್". ಐದನೇ ಆವೃತ್ತಿಯು ಶಾಸ್ತ್ರೀಯ ತಮಿಳು ಪಠ್ಯ ತಿರುಕ್ಕುರಲ್‌ನ  ನೈತಿಕ ಮೌಲ್ಯಗಳು ಮತ್ತು ಜೀವನಾದರ್ಶಗಳನ್ನು ದೇಶಾದ್ಯಂತ ಯುವಜನರು ಹಾಗೂ ಕಲಿಕಾರ್ಥಿಗಳಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶ ಹೊಂದಿದೆ. ಶೈಕ್ಷಣಿಕ ಚಟುವಟಿಕೆಗಳು, ಬಹುಭಾಷಾ ಸಂಪನ್ಮೂಲಗಳು ಮತ್ತು ವ್ಯಾಪಕ ಜನಸಂಪರ್ಕದ ಮೂಲಕ, ಈ ಕೃತಿಯಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಮೌಲ್ಯಗಳನ್ನು ಓದಿ, ಅರ್ಥಮಾಡಿಕೊಂಡು, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಕಾರ್ಯಕ್ರಮ ಪ್ರೋತ್ಸಾಹಿಸುತ್ತದೆ.

ಭಾಗವಹಿಸುವಿಕೆ ಮತ್ತು ಪ್ರವಾಸದ ವಿವರ

ಕಾರ್ಯಕ್ರಮದ ಭಾಗವಾಗಿ ತಮಿಳುನಾಡಿನ ಸುಮಾರು 1,400 ಮಂದಿ ತಲಾ ಸುಮಾರು 200 ಮಂದಿಯ ಏಳು ತಂಡಗಳಾಗಿ ಎಂಟು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಲ್ಲಿ ನಾಲ್ಕು ದಿನಗಳು ಪ್ರಯಾಣಕ್ಕೆ ಹಾಗೂ ಉಳಿದ ನಾಲ್ಕು ದಿನಗಳು ವಿವಿಧ ಸ್ಥಳಗಳಿಗೆ ಭೇಟಿ ಮತ್ತು ಪೂರ್ವನಿಗದಿತ ಕಾರ್ಯಕ್ರಮಗಳಿಗೆ ಮೀಸಲಾಗಿರುತ್ತವೆ. ವಾರಾಣಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಯನ್ನು ಒಳಗೊಂಡ ಈ ಪ್ರವಾಸದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ, ವಿಷಯಾಧಾರಿತ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳು ನಡೆಯಲಿವೆ. ಯುವಜನರ ಭಾಗವಹಿಸುವಿಕೆಗೆ ನೀಡಿರುವ ಆದ್ಯತೆಯು ಹೊಸ ತಲೆಮಾರಿಗೆ ಭಾರತದ ಪ್ರಾಚೀನ ಜ್ಞಾನಪರಂಪರೆಗಳೊಂದಿಗೆ ಅರ್ಥಪೂರ್ಣವಾಗಿ ಬೆರೆಯಲು ಹಾಗೂ ಅವುಗಳ ಮೌಲ್ಯಗಳನ್ನು ಸಮಕಾಲೀನ ಶೈಕ್ಷಣಿಕ, ವೃತ್ತಿಪರ ಮತ್ತು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಲಿದೆ.

ನೋಂದಣಿ ವಿವರಗಳು

ಆಸಕ್ತ ಅರ್ಜಿದಾರರು 2026ರ ಅಕ್ಟೋಬರ್ 22 ರಿಂದ ಜಾರಿಗೆ ಬರುವಂತೆ ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿರುವ https://kashitamil.iitm.ac.in/ ಅಧಿಕೃತ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಪೋರ್ಟಲ್ 2026ರ ನವೆಂಬರ್ 13ರವರೆಗೆ ಏಳು ವಿಭಾಗಗಳ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತದೆ: (i) ವಿದ್ಯಾರ್ಥಿಗಳು, (ii) ಶಿಕ್ಷಕರು, (iii) ಬರಹಗಾರರು ಮತ್ತು ಮಾಧ್ಯಮ ವೃತ್ತಿಪರರು, (iv) ಕೃಷಿ ಮತ್ತು ಸಂಬಂಧಿತ ವಲಯಗಳವರು (v) ವೃತ್ತಿಪರರು ಮತ್ತು ಕುಶಲಕರ್ಮಿಗಳು, (vi) ಮಹಿಳೆಯರು ಮತ್ತು (vii) ಆಧ್ಯಾತ್ಮಿಕ ನಾಯಕರು.

ಕೆಟಿಎಸ್ 5.0 ಅಡಿ ಪ್ರಮುಖ ಉಪಕ್ರಮಗಳು

ವಿವಿಧ ಶೈಕ್ಷಣಿಕ ವಿಭಾಗಗಳು ಮತ್ತು ಭಾಷಾ ಹಿನ್ನೆಲೆಗಳ ವಿದ್ಯಾರ್ಥಿಗಳಲ್ಲಿ ತಿರುಕ್ಕುರಳ್‌ ಕುರಿತು ವ್ಯಾಪಕ ಅರಿವು ಮೂಡಿಸಲು ದೇಶಾದ್ಯಂತ 1,000 ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ರಾಷ್ಟ್ರಮಟ್ಟದ ವಿದ್ಯಾರ್ಥಿ ಸಹಭಾಗಿತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ತಿರುಕ್ಕುರಳ್‌ನ ಬೋಧನೆಗಳು ಮತ್ತು ಮೌಲ್ಯಗಳನ್ನು ವ್ಯಾಪಕವಾಗಿ ಪಸರಿಸಲು ವ್ಯವಸ್ಥಿತ ಅಧ್ಯಯನ, ಸಂಶೋಧನೆ ಹಾಗೂ ಕ್ಯಾಂಪಸ್‌ ಆಧಾರಿತ ಚಟುವಟಿಕೆಗಳನ್ನು ಈ ಉಪಕ್ರಮ ಒಳಗೊಂಡಿರಲಿದೆ. ಇದರ ವಿವರಗಳು ಚೆನ್ನೈನ ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆಯ www.kts.cict.in ಪೋರ್ಟಲ್‌ನಲ್ಲಿ ಲಭ್ಯವಿವೆ.

  • ತಮಿಳುನಾಡಿನ ತಿರುಕ್ಕುರಳ್‌ ತಜ್ಞರು ವಾರಾಣಸಿಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಪರಿಚಯಾತ್ಮಕ ಪಾಠಗಳು, ಸಂವಾದಗಳು, ರಸಪ್ರಶ್ನೆ ಮೊದಲಾದ ಚಟುವಟಿಕೆಗಳ ಮೂಲಕ ಕೃತಿಯ ಮೂಲ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಿದ್ದಾರೆ. ರಾಷ್ಟ್ರೀಯ ಬುಕ್ ಟ್ರಸ್ಟ್, ರಾಷ್ಟ್ರೀಯ ಇ-ಪುಸ್ತಕಾಲಯದ ಸಹಯೋಗದಲ್ಲಿ ವಾರಾಣಸಿಯ ಶಾಲೆಗಳಲ್ಲಿ ಓದುವ ಹವ್ಯಾಸ, ಕಥೆ ಹೇಳುವಿಕೆ ಮತ್ತು ಸೃಜನಶೀಲ ಚಟುವಟಿಕೆಗಳ ಕುರಿತು ಸಂವಾದ ಕಾರ್ಯಕ್ರಮಗಳನ್ನು ನಡೆಸಲಿದೆ.
  • ತಿರುಕ್ಕುರಳ್‌ನ ಬೋಧನೆಗಳನ್ನು ಭಾರತದಾದ್ಯಂತ ಹೆಚ್ಚಿನ ಜನರಿಗೆ ತಲುಪಿಸಲು ಕಾಶಿ ತಮಿಳು ಸಂಗಮಂ 5.0 ತಂತ್ರಜ್ಞಾನವನ್ನೂ ಬಳಸಿಕೊಳ್ಳಲಿದೆ.

ಶಿಕ್ಷಣ ಸಚಿವಾಲಯ, ಭಾರತದ ಸಾಂಸ್ಕೃತಿಕ ಏಕತೆ, ಭಾಷಾ ವೈವಿಧ್ಯತೆ ಮತ್ತು ಹಂಚಿಕೆಯ ನಾಗರಿಕತೆಯ ಪರಂಪರೆಯನ್ನು ಸಂಭ್ರಮಿಸುವ ಕಾಶಿ ತಮಿಳು ಸಂಗಮಂ 5.0ರಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಳ್ಳುವಂತೆ ತಮಿಳುನಾಡಿನ ಅರ್ಹ ಅರ್ಜಿದಾರರಿಗೆ, ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದೆ.

ಪ್ರಮುಖ ವಿವರಗಳ ಒಂದು ನೋಟ

ವಿವರಗಳು

ಮಾಹಿತಿ

ನೋಂದಣಿಗಾಗಿ ಪೋರ್ಟಲ್

https://kashitamil.iitm.ac.in/

ಪೋರ್ಟಲ್ ನಲ್ಲಿ ನೋಂದಣಿ ಆರಂಭ

22 ಅಕ್ಟೋಬರ್ 2026

ನೋಂದಣಿಗೆ ಕೊನೆಯ ದಿನಾಂಕ

13 ನವೆಂಬರ್ 2026

ಕಾರ್ಯಕ್ರಮ ನಡೆಯುವ ದಿನ

28 ನವೆಂಬರ್ ನಿಂದ 12 ಡಿಸೆಂಬರ್ 2026

ಸ್ಥಳ

ವಾರಾಣಾಸಿ, ಪ್ರಯಾಗ್ ರಾಜ್, ಅಯೋಧ್ಯೆ

ಘೋಷವಾಕ್ಯ

ತಿರುಕ್ಕುರಳ್ ಪಾಯಿಲ್ವಮ್ – ತಿರುಕ್ಕುರಳ್ ಅಭ್ಯಾಸ ಕರೆನ್

ಪಾಲ್ಗೊಳ್ಳಲಿರುವವರ ಸಂಖ್ಯೆ

ಸುಮಾರು 1,400 (ತಲಾ 200 ಮಂದಿಯ ಏಳು ತಂಡಗಳು)

 

*****

 


 


(ಪ್ರಕಟಣೆ ಐ.ಡಿ.: 2326593) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Assamese , English , Urdu , Marathi , Gujarati