ಹಣಕಾಸು ಸಚಿವಾಲಯ
ಐಡಿಬಿಐನಲ್ಲಿ ಸರ್ಕಾರದ ಷೇರು ಬಂಡವಾಳಕ್ಕೆ ಸಂಬಂಧಿಸಿದ ಶಾಸಕಾಂಗ ಬೆಳವಣಿಗೆಗಳ ಕುರಿತು ಸ್ಪಷ್ಟೀಕರಣ
ಪ್ರಕಟಣಾ ದಿನಾಂಕ:
17 OCT 2026 7:41AM by PIB Bengaluru
ಕೆಲವು ಪತ್ರಿಕೆ ಮತ್ತು ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ಇತರ ವಿಷಯಗಳ ಜೊತೆಗೆ, ಐಡಿಬಿಐನಲ್ಲಿನ ಸರ್ಕಾರದ ಷೇರು ಬಂಡವಾಳಕ್ಕೆ ಸಂಬಂಧಿಸಿದಂತೆ 2003 ರ ಶಾಸಕಾಂಗ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳು ,ಮತ್ತು ಟಿಪ್ಪಣಿಗಳಿವೆ. 2003ರ ಕೇಂದ್ರ ಬಜೆಟ್ ಚರ್ಚೆಗಳು ಮತ್ತು ಐಡಿಬಿಐ (ರದ್ದುಗೊಳಿಸುವಿಕೆ) ಕಾಯ್ದೆ, 2003 ರ ಸಂಸದೀಯ ಚರ್ಚೆಯ ಸಮಯದಲ್ಲಿ, ಸರ್ಕಾರದ ಪಾಲನ್ನು ಕಡಿಮೆ ಮಾಡುವುದನ್ನು ನಿರ್ಬಂಧಿಸುವ ತಿದ್ದುಪಡಿಯನ್ನು ಮಂಡಿಸಲಾಗಿತ್ತು, ಆದರೆ ಅದನ್ನು ಅಂತಿಮವಾಗಿ ತಿರಸ್ಕರಿಸಲಾಯಿತು ಮತ್ತು ಅದು ಜಾರಿಯಾದ ಶಾಸನದ ಭಾಗವಾಗಲಿಲ್ಲ ಎಂಬುದನ್ನು ಪುನರುಚ್ಚರಿಸಲಾಗಿದೆ.
ತದನಂತರ, ದೆಹಲಿ ಹೈಕೋರ್ಟ್ ಆಲ್ ಇಂಡಿಯಾ ಐಡಿಬಿಐ ಆಫೀಸರ್ಸ್ ಅಸೋಸಿಯೇಷನ್ ಮತ್ತು ಭಾರತ ಒಕ್ಕೂಟ ಮತ್ತು ಇತರರು ಪ್ರಕರಣದಲ್ಲಿ ಪರಿಶೀಲಿಸಿ, 17 ಡಿಸೆಂಬರ್ 2018ರಂದು ತೀರ್ಪು ನೀಡಿತು. ನ್ಯಾಯಾಲಯವು ರಿಟ್ ಅರ್ಜಿಯನ್ನು ವಜಾಗೊಳಿಸುವಾಗ, 41 ಮತ್ತು 42 ನೇ ಪ್ಯಾರಾಗಳಲ್ಲಿ ಈ ಕೆಳಗಿನಂತೆ ತೀರ್ಪು ನೀಡಿದೆ:
ಪ್ಯಾರಾ 41:
"ಶಾಸಕಾಂಗ ಚಟುವಟಿಕೆಗೆ ಸಂಬಂಧಿಸಿದಂತೆ ಸುಮಾರು 15 ವರ್ಷಗಳ ಹಿಂದೆ ಸದನದ ಮುಂದೆ ಮಾಡಿದ ಹೇಳಿಕೆಗಳು, ಐಡಿಬಿಐ ಲಿಮಿಟೆಡ್ ನಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲನ್ನು ಕಡಿಮೆ ಮಾಡುವುದನ್ನು ತಡೆಯುವುದಿಲ್ಲ ಎಂಬುದು ಈ ನ್ಯಾಯಾಲಯದ ಅಭಿಪ್ರಾಯವಾಗಿದೆ. ಚರ್ಚೆಯ ನಂತರ ಸಂಸತ್ತು ಜಾರಿಗೆ ತಂದ ಶಾಸನವು ಪ್ರಸ್ತಾಪಿಸಲಾದ ತಿದ್ದುಪಡಿಯನ್ನು ಒಳಗೊಂಡಿರಲಿಲ್ಲ ಎಂಬುದು ನಿರ್ವಿವಾದ. ಸದನದ ಮುಂದೆ ನೀಡಲಾದ ಹೇಳಿಕೆಗಳು ಸಂಸತ್ತು ಜಾರಿಗೊಳಿಸಿದ ಶಾಸನವನ್ನು ಬದಲಾಯಿಸಲು ಅಥವಾ ಮೀರಿಸಲು ಸಾಧ್ಯವಿಲ್ಲ. ಖಂಡಿತವಾಗಿಯೂ, ಪ್ರಸ್ತಾಪಿಸಲಾದ ಷರತ್ತನ್ನು ಸೇರಿಸದಿರುವ ಪರಿಣಾಮದ ಬಗ್ಗೆ ಸಂಸತ್ತಿಗೆ ಅರಿವಿತ್ತು. ಪ್ರಾಮಿಸರಿ ಎಸ್ಟೊಪ್ಪೆಲ್ ಸಿದ್ಧಾಂತದ ತತ್ವಗಳು ಮೇಲ್ಕಂಡ ಸಂಧರ್ಭದಲ್ಲಿ ಅನ್ವಯಿಸುವುದಿಲ್ಲ. ಸಂಸತ್ತಿನಲ್ಲಿ ಮಾಡಿದ ಹೇಳಿಕೆಗಳು ನೌಕರರಿಗೆ ನೀಡಿದ ವಾಗ್ದಾನ ಅಥವಾ ಅಭಯಕ್ಕೆ ಸಮನಾಗಿದ್ದವು ಮತ್ತು ಅಂತಹ ಹೇಳಿಕೆಯ ಆಧಾರದ ಮೇಲೆ ಅವರು ತಮ್ಮ ಹಿತಾಸಕ್ತಿಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸದನದ ಮುಂದೆ ಮಾಡಿದ ಹೇಳಿಕೆಗಳು ಶಾಸನವನ್ನು (ಐಡಿಬಿಐ ರದ್ದುಗೊಳಿಸುವಿಕೆ ಕಾಯ್ದೆ, 2003) ಜಾರಿಗೆ ತರುವ ಸಂದರ್ಭದಲ್ಲಿದ್ದವು, ಮತ್ತು ಸದರಿ ಕಾಯ್ದೆಯನ್ನು ಶಾಸನಗಳ ಅರ್ಥೈಸುವಿಕೆಗೆ ಸಂಬಂಧಿಸಿದ ಸ್ಥಾಪಿತ ತತ್ವಗಳಿಗೆ ಅನುಗುಣವಾಗಿಯೇ ವ್ಯಾಖ್ಯಾನಿಸಬೇಕಾಗುತ್ತದೆ.”
ಪ್ಯಾರಾ 42:
"ಐಡಿಬಿಐ ರದ್ದುಗೊಳಿಸುವಿಕೆ ಕಾಯ್ದೆ, 2003ರಲ್ಲಿ ಬಳಸಿರುವ ಭಾಷೆಯಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ ಮತ್ತು ಐಡಿಬಿಐ ಲಿಮಿಟೆಡ್ ನಲ್ಲಿ ಸರ್ಕಾರವು ತನ್ನ ಪಾಲನ್ನು ಕಡಿಮೆ ಮಾಡುವುದನ್ನು ಅಥವಾ ಹಿಂತೆಗೆದುಕೊಳ್ಳುವುದನ್ನು ತಡೆಯುವ ಯಾವುದೇ ನಿಬಂಧನೆಯನ್ನು ಸದರಿ ಶಾಸನದಲ್ಲಿ ಅರ್ಥೈಸಿಕೊಳ್ಳಲು ಅವಕಾಶವಿಲ್ಲ."
ಮೇಲೆ ತಿಳಿಸಲಾದ ತೀರ್ಪು ಮಹತ್ವದ್ದಾಗಿದೆ, ಏಕೆಂದರೆ ಇದು ಸರ್ಕಾರದ ಷೇರು ಬಂಡವಾಳವನ್ನು ಕಡಿಮೆ ಮಾಡುವ ನಿರ್ಧಾರವನ್ನು ಪ್ರಶ್ನಿಸುವಲ್ಲಿ ಆಧರಿಸಲಾದ 'ಪ್ರಾಮಿಸರಿ ಎಸ್ಟೊಪ್ಪೆಲ್' ಸಿದ್ಧಾಂತವನ್ನು ನಿರ್ದಿಷ್ಟವಾಗಿ ಉದ್ದೇಶಿಸುತ್ತದೆ. ಐಡಿಬಿಐ ಲಿಮಿಟೆಡ್ ನಲ್ಲಿ ಸರ್ಕಾರವು ತನ್ನ ಪಾಲನ್ನು ಕಡಿಮೆ ಮಾಡುವುದನ್ನು ಅಥವಾ ಹಿಂತೆಗೆದುಕೊಳ್ಳುವುದನ್ನು ತಡೆಯಲು ಈ ಸಿದ್ಧಾಂತವನ್ನು ಅನ್ವಯಿಸಲು ಸಾಧ್ಯವಿಲ್ಲ.
ಐಡಿಬಿಐ ಬ್ಯಾಂಕ್ ನ ಪರಿವರ್ತನೆ ಮತ್ತು ಕಾರ್ಯತಂತ್ರದ ಬಂಡವಾಳ ಹಿಂತೆಗೆತದ ಕಡೆಗೆ ಸರ್ಕಾರದ ನೀತಿಯನ್ನು ಸಂಸತ್ತಿನಲ್ಲಿ ಸತತ ಕೇಂದ್ರ ಬಜೆಟ್ ಭಾಷಣಗಳಲ್ಲಿ ಪುನರುಚ್ಚರಿಸಲಾಗಿದೆ:
ಕೇಂದ್ರ ಬಜೆಟ್ 2016–17 — ಅಂದಿನ ಗೌರವಾನ್ವಿತ ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿ ಅವರ ಭಾಷಣದಲ್ಲಿ (ಪ್ಯಾರಾ 93) ಹೀಗೆ ಹೇಳಲಾಗಿದೆ:
"ನಮ್ಮ ಸಾರ್ವಜನಿಕ ವಲಯದ ಬ್ಯಾಂಕುಗಳು ಬಲವಾಗಿರಬೇಕು ಮತ್ತು ಸ್ಪರ್ಧಾತ್ಮಕವಾಗಿರಬೇಕು. ಬ್ಯಾಂಕ್ ಬೋರ್ಡ್ ಬ್ಯೂರೋ 2016-17 ರ ಅವಧಿಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಲಾಗುವುದು. ಐಡಿಬಿಐ ಬ್ಯಾಂಕ್ ನ ಪರಿವರ್ತನೆಯ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಸರ್ಕಾರವು ಇದನ್ನು ಮುಂದುವರೆಸಲಿದೆ ಮತ್ತು ತನ್ನ ಪಾಲನ್ನು 50% ಕ್ಕಿಂತ ಕಡಿಮೆ ಮಾಡುವ ಆಯ್ಕೆಯನ್ನು ಸಹ ಪರಿಗಣಿಸುತ್ತದೆ."
ಕೇಂದ್ರ ಬಜೆಟ್ 2021–22 — ಆಗಿನ ಗೌರವಾನ್ವಿತ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿ (ಪ್ಯಾರಾ 84) ಹೀಗೆ ಹೇಳಲಾಗಿದೆ:
"ಕೋವಿಡ್-19ರ ಹೊರತಾಗಿಯೂ, ನಾವು ಕಾರ್ಯತಂತ್ರದ ಬಂಡವಾಳ ಹಿಂತೆಗೆತದ ಕಡೆಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದೇವೆ. ಬಿಪಿಸಿಎಲ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬಿಎಮ್ಇಎಲ್, ಪವನ್ ಹನ್ಸ್, ನೀಲಾಚಲ ಇಸ್ಪಾತ್ ನಿಗಮ್ ಲಿಮಿಟೆಡ್ ಸೇರಿದಂತೆ ಹಲವಾರು ವಹಿವಾಟುಗಳು 2021-22 ರಲ್ಲಿ ಪೂರ್ಣಗೊಳ್ಳಲಿವೆ. ಐಡಿಬಿಐ ಬ್ಯಾಂಕ್ ಹೊರತುಪಡಿಸಿ, 2021-22 ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಜನರಲ್ ಇನ್ಶೂರೆನ್ಸ್ ಕಂಪನಿಯ ಖಾಸಗೀಕರಣವನ್ನು ಕೈಗೆತ್ತಿಕೊಳ್ಳಲು ನಾವು ಪ್ರಸ್ತಾಪಿಸುತ್ತೇವೆ. ಇದಕ್ಕೆ ಶಾಸಕಾಂಗ ತಿದ್ದುಪಡಿಗಳ ಅಗತ್ಯವಿರುತ್ತದೆ ಮತ್ತು ಈ ಅಧಿವೇಶನದಲ್ಲೇ ತಿದ್ದುಪಡಿಗಳನ್ನು ಮಂಡಿಸಲು ನಾನು ಪ್ರಸ್ತಾಪಿಸುತ್ತೇನೆ."
ಐಡಿಬಿಐ (ರದ್ದುಗೊಳಿಸುವಿಕೆ) ಕಾಯ್ದೆ, 2003 ರ ಶಾಸಕಾಂಗ ಇತಿಹಾಸ, ಗೌರವಾನ್ವಿತ ದೆಹಲಿ ಹೈಕೋರ್ಟ್ ನ ನ್ಯಾಯಾಂಗ ತೀರ್ಪು ಮತ್ತು ಸತತ ಕೇಂದ್ರ ಬಜೆಟ್ ಭಾಷಣಗಳು ಐಡಿಬಿಐ ಬ್ಯಾಂಕ್ನ ಕಾರ್ಯತಂತ್ರದ ಬಂಡವಾಳ ಹಿಂತೆಗೆತದ ಕಡೆಗೆ ಸರ್ಕಾರದ ನೀತಿಯ ವಿಕಾಸವನ್ನು ಒಟ್ಟಾಗಿ ಪ್ರದರ್ಶಿಸುತ್ತವೆ. 17 ಡಿಸೆಂಬರ್ 2018 ರ ತೀರ್ಪು, ಐಡಿಬಿಐ ಬ್ಯಾಂಕ್ ಲಿಮಿಟೆಡ್ನಲ್ಲಿ ತನ್ನ ಪಾಲನ್ನು ಕಡಿಮೆ ಮಾಡುವ ಸರ್ಕಾರದ ಅಧಿಕಾರವನ್ನು ನಿರ್ಬಂಧಿಸಲು ಸಂಸದೀಯ ಚರ್ಚೆಗಳ ಸಮಯದಲ್ಲಿ ಮಾಡಿದ ಹೇಳಿಕೆಗಳ ಆಧಾರದ ಮೇಲೆ ಪ್ರಾಮಿಸರಿ ಎಸ್ಟೊಪ್ಪೆಲ್ ಸಿದ್ಧಾಂತವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂಬುದನ್ನು ಸಂಶಯಾತೀತವಾಗಿ ಸ್ಪಷ್ಟಪಡಿಸುತ್ತದೆ. ಜಾರಿಗೆ ತರಲಾದ ಶಾಸನವು ಐಡಿಬಿಐ ಬ್ಯಾಂಕ್ ಲಿಮಿಟೆಡ್ ನಲ್ಲಿ ಸರ್ಕಾರದ ಪಾಲನ್ನು ಕಡಿಮೆ ಮಾಡುವುದರ ವಿರುದ್ಧ ಯಾವುದೇ ನಿಷೇಧವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಮತ್ತಷ್ಟು ಅಭಿಪ್ರಾಯ ಪಟ್ಟಿದೆ.
******
(ಪ್ರಕಟಣೆ ಐ.ಡಿ.: 2324690)
ವಿಸಿಟರ್ ಕೌಂಟರ್ : 9