ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕ್ಲಿನಿಕಲ್ ಸಂಸ್ಥೆಗಳಲ್ಲಿ ಆರೋಗ್ಯ ಸೇವಾ ದರಗಳನ್ನು ಎಲ್ಲರಿಗೂ ಎದ್ದು ಕಾಣುವಂತೆ ಪ್ರದರ್ಶನ ಮಾಡುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಆಗ್ರಹ
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆ ಕೇಂದ್ರ ಆರೋಗ್ಯ ಕಾರ್ಯದರ್ಶಿ; ಆರೋಗ್ಯ ಶುಲ್ಕಗಳ ಪಾರದರ್ಶಕ ಪ್ರದರ್ಶನಕ್ಕೆ ಸಂಬಂಧಿಸಿದ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ
ರೋಗಿಗಳು ಮಾಹಿತಿಯುಕ್ತ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು, ಬಿಲ್ಲಿಂಗ್-ಸಂಬಂಧಿತ ವ್ಯಾಜ್ಯಗಳನ್ನು ತಡೆಗಟ್ಟಲು ಮತ್ತು ಆರೋಗ್ಯ ಸೇವೆಗಳಲ್ಲಿ ನಂಬಿಕೆ ಬಲಪಡಿಸುವ ಉದ್ದೇಶದಿಂದ ಈ ಕ್ರಮ
ವೈದ್ಯಕೀಯ ಮತ್ತು ಆಯುಷ್ ವೀಸಾಗಳ ಮೇಲೆ ಭಾರತಕ್ಕೆ ಭೇಟಿ ನೀಡುವ ಅಂತಾರಾಷ್ಟ್ರೀಯ ರೋಗಿಗಳಿಗೆ ಪ್ಯಾಕೇಜ್ ದರಗಳ ಪಾರದರ್ಶಕ ಪ್ರದರ್ಶನ ಸುಗಮಗೊಳಿಸಲೂ ಸಹ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ
ಪ್ರಕಟಣಾ ದಿನಾಂಕ:
12 OCT 2026 1:05PM by PIB Bengaluru
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರೋಗಿ-ಕೇಂದ್ರಿತ ಆರೋಗ್ಯ ವಿತರಣೆಯನ್ನು ಬಲವರ್ಧನೆಗೊಳಿಸುವ ಮಹತ್ವದ ಹೆಜ್ಜೆಯ ಭಾಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯುಟಿಗಳು) ಕ್ಲಿನಿಕಲ್ ಸಂಸ್ಥೆಗಳು ನೀಡುವ ಸೇವೆಗಳು ಮತ್ತು ಸೌಲಭ್ಯಗಳಿಗೆ ವಿಧಿಸಲಾಗುವ ದರಗಳನ್ನು ಪ್ರಮುಖ ಸ್ಥಳದಲ್ಲಿ ಎಲ್ಲರಿಗೂ ಎದ್ದು ಕಾಣಿಸುವಂತೆ ಪ್ರದರ್ಶಿಸುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಆಗ್ರಹಿಸಿದೆ.
ಈ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು ಬರೆದ ಪತ್ರದಲ್ಲಿ, ಅನ್ವಯವಾಗುವ ನಿಯಂತ್ರಣ ನಿಬಂಧನೆಗಳ ಪಾಲನೆಯನ್ನು ಪರಿಶೀಲಿಸಲು ಮತ್ತು ಆರೋಗ್ಯ ಸೇವಾ ಶುಲ್ಕಗಳ ಮಾಹಿತಿಯು ರೋಗಿಗಳು ಮತ್ತು ಅವರ ಸಹಾಯಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.
ಆರೋಗ್ಯ ಸೇವೆಯ ಬೆಲೆ ನಿಗದಿಯಲ್ಲಿ ಪಾರದರ್ಶಕತೆಯ ಮಹತ್ವವನ್ನು ಒತ್ತಿ ಹೇಳಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ, ದರಗಳ ಸ್ಪಷ್ಟ ಪ್ರದರ್ಶನವು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಚಿಕಿತ್ಸೆಯ ಸಂಭಾವ್ಯ ವೆಚ್ಚವನ್ನು ಅರ್ಥಮಾಡಿಕೊಳ್ಳಲು, ಮಾಹಿತಿಯುಕ್ತ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವರ ವೈದ್ಯಕೀಯ ವೆಚ್ಚವನ್ನು ಯೋಜಿಸಲು ಸಹಾಯ ಮಾಡುತ್ತದೆ ಎಂದು ಉಲ್ಲೇಖಿಸಿದರು. ಹೆಚ್ಚಿನ ಪಾರದರ್ಶಕತೆಯು ತಪ್ಪಿಸಬಹುದಾದ ಗೊಂದಲ ಮತ್ತು ಬಿಲ್ಲಿಂಗ್-ಸಂಬಂಧಿತ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ ಸೇವೆಯ ವಿತರಣಾ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ.
ಈ ಪತ್ರದಲ್ಲಿ ಕ್ಲಿನಿಕಲ್ ಸಂಸ್ಥೆಗಳ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ2010 ಮತ್ತು ಕ್ಲಿನಿಕಲ್ ಸಂಸ್ಥೆಗಳ (ಕೇಂದ್ರ ಸರ್ಕಾರ) ನಿಯಮಗಳು 2012 ಅನ್ನು ಉಲ್ಲೇಖಿಸಲಾಗಿದ್ದು, ಅದು ಕ್ಲಿನಿಕಲ್ ಸ್ಥಾಪನೆಗಳಿಗೆ ನಿಯಂತ್ರಣ ಚೌಕಟ್ಟನ್ನು ಒದಗಿಸುತ್ತದೆ. ನಿಯಮಗಳ ಅಡಿಯಲ್ಲಿ ಕಾಯ್ದೆ ಅನ್ವಯವಾಗುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕ್ಲಿನಿಕಲ್ ಸಂಸ್ಥೆಗಳು ರೋಗಿಗಳು ಮತ್ತು ಅವರ ಸಹಾಯಕರ ಪ್ರಯೋಜನಕ್ಕಾಗಿ ಒದಗಿಸಲಾದ ಪ್ರತಿಯೊಂದು ರೀತಿಯ ಸೇವೆ ಮತ್ತು ಲಭ್ಯವಿರುವ ಸೌಲಭ್ಯಗಳಿಗೆ ವಿಧಿಸಲಾಗುವ ದರಗಳನ್ನು ಸ್ಥಳೀಯ ಭಾಷೆಯಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಎದ್ದುಕಾಣುವ ಸ್ಥಳದಲ್ಲಿ ಪ್ರದರ್ಶಿಸಬೇಕಾಗುತ್ತದೆ.
ಕಾಯ್ದೆ ಅನ್ವಯವಾಗದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕ್ಲಿನಿಕಲ್ ಸಂಸ್ಥೆಗಳನ್ನು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಚೌಕಟ್ಟುಗಳ ಅಡಿಯಲ್ಲಿ ನಿಯಂತ್ರಿಸಲಾಗುವುದು, ಅವುಗಳಲ್ಲಿ ಹಲವು ಆರೋಗ್ಯ ಸೇವೆಗಳು ಮತ್ತು ಸೌಲಭ್ಯಗಳಿಗೆ ದರಗಳ ಪ್ರದರ್ಶನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸಹ ಒಳಗೊಂಡಿರುತ್ತವೆ.
ಆರೋಗ್ಯವು ರಾಜ್ಯದ ವಿಷಯವಾಗಿದೆ ಮತ್ತು ಅನ್ವಯವಾಗುವ ನಿಯಂತ್ರಣ ನಿಬಂಧನೆಗಳ ಅನುಷ್ಠಾನ ಮತ್ತು ಜಾರಿಗೊಳಿಸುವಿಕೆಯು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಗುರುತಿಸಿ, ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಣಾಮಕಾರಿ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ರೋಗಿಗಳಿಗೆ ಆರೋಗ್ಯ ರಕ್ಷಣೆ ಬೆಲೆ ನಿಗದಿಯಲ್ಲಿ ಪಾರದರ್ಶಕತೆಗೆ ಪತ್ರವು ನಿರ್ದಿಷ್ಟ ಒತ್ತು ನೀಡುತ್ತದೆ. ವೈದ್ಯಕೀಯ ಅಥವಾ ಆಯುಷ್ ವೀಸಾಗಳ ಮೇಲೆ ಭಾರತಕ್ಕೆ ಪ್ರಯಾಣಿಸುವ ವಿದೇಶಿ ರೋಗಿಗಳಿಗೆ ನೀಡಲಾಗುವ ಪ್ಯಾಕೇಜ್ ದರಗಳನ್ನು ಪ್ರಮುಖವಾಗಿ ಪ್ರದರ್ಶಿಸುವುದನ್ನು ಪ್ರೋತ್ಸಾಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ ರೋಗಿಗಳು ವಿವೇಕದ ಆಯ್ಕೆಗಳನ್ನು ಮಾಡಲು, ಬೆಲೆ ಮತ್ತು ಬಿಲ್ಲಿಂಗ್-ಸಂಬಂಧಿತ ಕುಂದುಕೊರತೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ವೈದ್ಯಕೀಯ ಮತ್ತು ಆಯುಷ್ ಆರೈಕೆಗಾಗಿ ವಿಶ್ವಾಸಾರ್ಹ ತಾಣವಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಅನುವು ಮಾಡಿಕೊಡುತ್ತದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಈ ವಿಷಯದಲ್ಲಿ ಮುಖ್ಯ ಕಾರ್ಯದರ್ಶಿಗಳ ವೈಯಕ್ತಿಕ ಗಮನವನ್ನು ಕೋರಿದ್ದಾರೆ ಮತ್ತು ಅನ್ವಯವಾಗುವ ನಿಯಮಗಳಿಗೆ ಅನುಸಾರವಾಗಿ ಎದ್ದುಕಾಣುವ, ಸ್ಪಷ್ಟವಾಗಿ ಗೋಚರಿಸುವ ಮತ್ತು ಸುಲಭವಾಗಿ ಲಭ್ಯವಾಗಬಹುದಾದ ಸ್ಥಳಗಳಲ್ಲಿ ದರಗಳನ್ನು ಪ್ರದರ್ಶಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು ಸೇರಿದಂತೆ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕ್ಲಿನಿಕಲ್ ಸಂಸ್ಥೆಗಳಿಗೆ ಸೂಕ್ತ ಸಲಹೆಗಳನ್ನು ನೀಡುವಂತೆ ವಿನಂತಿಸಿದ್ದಾರೆ.
ಈ ಉಪಕ್ರಮವು ಆರೋಗ್ಯ ಸೇವಾ ವಿತರಣೆಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ರೋಗಿಗಳ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡುವ ಭಾರತ ಸರ್ಕಾರದ ಬದ್ಧತೆಯನ್ನು ಬಲವರ್ಧನೆಗೊಳಿಸುತ್ತದೆ ಹಾಗೂ ಆರೋಗ್ಯ ಸೇವೆ ಶುಲ್ಕಗಳ ಕುರಿತು ಸ್ಪಷ್ಟ ಮಾಹಿತಿಯ ಲಭ್ಯತೆಯು ರೋಗಿ-ಕೇಂದ್ರಿತ ಆರೈಕೆಯ ಅವಿಭಾಜ್ಯ ಅಂಗವಾಗುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2322171)
ವಿಸಿಟರ್ ಕೌಂಟರ್ : 6