ಗ್ರಾಮೀಣಾಭಿವೃದ್ಧಿ ಸಚಿವಾಲಯ
‘ವಿಬಿ-ಜಿ ರಾಮ್ ಜಿ’ ಅಡಿ 375 ಅನುಮತಿಸಲಾದ ಕಾಮಗಾರಿಗಳನ್ನು ಅಧಿಸೂಚಿಸಿದ ಗ್ರಾಮೀಣ ಅಭಿವೃದ್ಧಿ ಸಚಿವಾಲಯ
ಹಿಂದಿನ ಯೋಜನೆಗೆ ಹೋಲಿಸಿದರೆ ಹೊಸ ಪಟ್ಟಿಯು ಅನುಮತಿಸಲಾದ ಕಾಮಗಾರಿಗಳ ವ್ಯಾಪ್ತಿಯನ್ನು ಶೇಕಡಾ 41 ರಷ್ಟು ವಿಸ್ತರಿಸಿದೆ
ಜಲ ಭದ್ರತೆಯಡಿ 128 ಕಾಮಗಾರಿಗಳು, ಪ್ರಮುಖ ಗ್ರಾಮೀಣ ಮೂಲಸೌಕರ್ಯದಡಿ 111, ಜೀವನೋಪಾಯ ಸಂಬಂಧಿತ ಮೂಲಸೌಕರ್ಯದಡಿ 98 ಮತ್ತು ವಿಪತ್ತು ಸನ್ನದ್ಧತೆಯಡಿ 38 ಕಾಮಗಾರಿಗಳು
ಪ್ರಕಟಣಾ ದಿನಾಂಕ:
06 OCT 2026 8:29AM by PIB Bengaluru
ಗ್ರಾಮೀಣಾಭಿವೃದ್ಧಿ ಸಚಿವಾಲಯವು ‘ವಿಕಸಿತ ಭಾರತ–ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಯೋಜನೆ ಕಾಯ್ದೆ-2025 (ವಿಬಿ-ಜಿ ರಾಮ್ ಜಿ) ಅಡಿಯಲ್ಲಿ ಅನುಮತಿಸಬಹುದಾದ ಕಾಮಗಾರಿಗಳ ವೇಳಾಪಟ್ಟಿಯನ್ನು ಅಧಿಸೂಚಿಸಿದ್ದು, ಹೊಸ ಗ್ರಾಮೀಣ ಕಾಮಗಾರಿಗಳ ಚೌಕಟ್ಟಿನಡಿಯಲ್ಲಿ 375 ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿದೆ.
ಹಿಂದಿನ ಚೌಕಟ್ಟಿನಲ್ಲಿದ್ದ 266 ಕಾಮಗಾರಿಗಳಿಗೆ ಹೋಲಿಸಿದರೆ ಹೊಸ ವೇಳಾಪಟ್ಟಿಯು ಶೇಕಡಾ 41 ರಷ್ಟು ವಿಸ್ತರಣೆಯನ್ನು ಪ್ರತಿನಿಧಿಸುತ್ತದೆ. ಈ ಕಾಮಗಾರಿಗಳನ್ನು- ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ, ಹಾಗೂ ಹವಾಮಾನ ವೈಪರೀತ್ಯಗಳು ಮತ್ತು ವಿಪತ್ತು ಸನ್ನದ್ಧತೆಗಾಗಿ ವಿಶೇಷ ಕಾಮಗಾರಿಗಳು ಎಂಬ ನಾಲ್ಕು ವಿಷಯಾಧಾರಿತ ಸ್ತಂಭಗಳ ಅಡಿಯಲ್ಲಿ ಮರುಸಂಘಟಿಸಲಾಗಿದೆ.
ಹೊಸ ಚೌಕಟ್ಟಿನಲ್ಲಿ ಕೇವಲ ಸಾಂಪ್ರದಾಯಿಕ ಆಸ್ತಿ ಪ್ರಕಾರಗಳ ಪಟ್ಟಿಯನ್ನು ಮೀರಿ ವೇತನ ಆಧಾರಿತ ಉದ್ಯೋಗವನ್ನು ದೀರ್ಘ ಬಾಳಿಕೆಯ ಗ್ರಾಮೀಣ ಆಸ್ತಿಗಳ ಸೃಷ್ಟಿ ಮತ್ತು ಅಳೆಯಬಹುದಾದ ಅಭಿವೃದ್ಧಿ ಫಲಿತಾಂಶಗಳೊಂದಿಗೆ ಜೋಡಿಸುವ ಗುರಿಯನ್ನು ಹೊಂದಲಾಗಿದೆ. ಪ್ರತಿ ಕಾಮಗಾರಿಯು ಗ್ರಾಮ ಸಭೆಯಿಂದ ಅನುಮೋದಿಸಲ್ಪಟ್ಟ ʻವಿಕಸಿತ ಗ್ರಾಮ ಪಂಚಾಯತ್ʼ ಯೋಜನೆಯಡಿ ಕೆಳಗಿನಿಂದ ಮೇಲಕ್ಕೆ, ವಿಕೇಂದ್ರೀಕೃತ ಯೋಜನೆ ಪ್ರಕ್ರಿಯೆಯ ಮೂಲಕ ಆರಂಭಗೊಳ್ಳುತ್ತದೆ. ಜೊತೆಗೆ ʻವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್ʼ ಮೂಲಕ ಇವುಗಳ ಮೇಲೆ ನಿಗಾ ಇಡಲಾಗುತ್ತದೆ.
128 ಕಾಮಗಾರಿಗಳೊಂದಿಗೆ ಜಲ ಭದ್ರತೆಗೆ ಹೆಚ್ಚಿನ ಪಾಲು
ಜಲ ಭದ್ರತಾ ಸ್ತಂಭವು 128 ಕಾಮಗಾರಿಗಳನ್ನು ಒಳಗೊಂಡಿದ್ದು, ಇದು ನಾಲ್ಕು ವಿಭಾಗಗಳಲ್ಲಿ ಅತಿ ಹೆಚ್ಚಾಗಿದೆ. ಇದರಲ್ಲಿ ಚೆಕ್ ಡ್ಯಾಮ್‌ಗಳು, ಗಲ್ಲಿ ಪ್ಲಗ್‌ಗಳು, ಅಂತರ್ಜಲ ಡೈಕ್‌ಗಳು, ರಿಚಾರ್ಜ್ ಶಾಫ್ಟ್‌ಗಳು, ಇಂಜೆಕ್ಷನ್ ಬಾವಿಗಳು, ನದಿಗಳು, ತೊರೆಗಳು ಮತ್ತು ನಾಲಾಗಳ ಪುನರುಜ್ಜೀವನ, ಜಲಾವೃತ ಭೂಮಿಯ ಸುಧಾರಣೆ ಮತ್ತು ಜಲ ವಿತರಣಾ ಕಾಲುವೆಗಳ ನವೀಕರಣ ಸೇರಿವೆ.
ಈ ಪಟ್ಟಿಯು ಹನಿ ನೀರಾವರಿ, ಸ್ಪ್ರಿಂಕ್ಲರ್ ವ್ಯವಸ್ಥೆಗಳು, ಛಾವಣಿ ಮಳೆನೀರು ಕೊಯ್ಲು ಮತ್ತು ಟಂಕಾಗಳ ಜೊತೆಗೆ ಜಲ ಸಂರಕ್ಷಣೆ ಮತ್ತು ನೀರಾವರಿಗಾಗಿ ಐಸ್-ಸ್ತೂಪಗಳು ಮತ್ತು ಕೃತಕ ಹಿಮನದಿಗಳಂತಹ ಹೊಸ ಉಪಕ್ರಮಗಳಿಗೂ ಅವಕಾಶ ಕಲ್ಪಿಸುತ್ತದೆ.
ಪ್ರಮುಖ ಗ್ರಾಮೀಣ ಮೂಲಸೌಕರ್ಯಕ್ಕಾಗಿ 111 ಕಾಮಗಾರಿಗಳು
ಪ್ರಮುಖ ಗ್ರಾಮೀಣ ಮೂಲಸೌಕರ್ಯ ಸ್ತಂಭವು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ನಾಗರಿಕ ಮತ್ತು ಸಮುದಾಯ ಮೂಲಸೌಕರ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 111 ಕಾಮಗಾರಿಗಳನ್ನು ಒಳಗೊಂಡಿದೆ.
ಇವುಗಳಲ್ಲಿ ಸೌರ ಬೀದಿ ದೀಪಗಳು, ತ್ಯಾಜ್ಯದಿಂದ ಸಂಪತ್ತನ್ನು ಮರುಬಳಕೆ ಮಾಡುವ ಘಟಕಗಳು, ಬೂದು ನೀರು ಸಂಸ್ಕರಣಾ ಘಟಕಗಳು, ವಿಂಗಡಣೆ ಶೆಡ್‌ಗಳು, ಗ್ರಾಮೀಣ ಗ್ರಂಥಾಲಯಗಳು, ಪಶುವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ವಿವಿಧೋದ್ದೇಶ ಯುವ ಕೇಂದ್ರಗಳು, ಸಮುದಾಯ ಸೌಲಭ್ಯಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳು ಸೇರಿವೆ.
ಗ್ರಾಮೀಣ ಉದ್ಯಾನವನಗಳು, ಪಾದಾಚಾರಿ ಮಾರ್ಗಗಳು ಮತ್ತು ಇತರ ಗ್ರಾಮ ಮಟ್ಟದ ಸೌಲಭ್ಯಗಳ ಜೊತೆಗೆ ʻಜಲ ಜೀವನ್ ಮಿಷನ್ʼ ನೀರು ಸರಬರಾಜು ಮೂಲಸೌಕರ್ಯಗಳ ದುರಸ್ತಿ ಮತ್ತು ನಿರ್ವಹಣೆಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಜೀವನೋಪಾಯ ಮತ್ತು ಮೌಲ್ಯ ಸರಪಳಿಗಳನ್ನು ಬಲಪಡಿಸಲು 98 ಕಾರ್ಯಗಳು
ಹೊಸ ಚೌಕಟ್ಟು 98 ಅನುಮತಿಸಬಹುದಾದ ಕೆಲಸಗಳೊಂದಿಗೆ ಜೀವನೋಪಾಯ-ಸಂಬಂಧಿತ ಮೂಲಸೌಕರ್ಯಕ್ಕೆ ಗಮನಾರ್ಹವಾಗಿ ಹೆಚ್ಚಿನ ಒತ್ತು ನೀಡುತ್ತದೆ.
ಈ ವರ್ಗದಲ್ಲಿ ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯಗಳು, ಸ್ವಚ್ಛಗೊಳಿಸುವ, ಗ್ರೇಡಿಂಗ್ ಮತ್ತು ಪ್ಯಾಕೇಜಿಂಗ್ ಘಟಕಗಳು, ಶೈತ್ಯಾಗಾರ ಸೌಲಭ್ಯಗಳು, ಮಿನಿ ಹಿಟ್ಟಿನ ಗಿರಣಿಗಳು, ಮಾರುಕಟ್ಟೆ ಪ್ರಾಂಗಣಗಳು, ಹೈನುಗಾರಿಕೆ ಮೂಲಸೌಕರ್ಯ, ಅಣಬೆ ಕೃಷಿ ಶೆಡ್‌ಗಳು, ರೇಷ್ಮೆ ಕೃಷಿ ಶೆಡ್‌ಗಳು, ಪಾಲಿ-ಹೌಸ್‌ಗಳು ಮತ್ತು ಜಲಚರ ಕೃಷಿ ರಚನೆಗಳು ಸೇರಿವೆ.
ಇದು ಸ್ವ-ಸಹಾಯ ಸಂಘಗಳ ವರ್ಕ್‌ಶೆಡ್‌ಗಳು, ʻಶೀ ಮಾರ್ಟ್ʼಗಳು ಮತ್ತು ಒಕ್ಕೂಟದ ಕಟ್ಟಡಗಳು; ಹಾಗೂ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳು ಸೇರಿದಂತೆ ಸ್ವಸಹಾಯ ಸಂಘಗಳು ಮತ್ತು ಅವುಗಳ ಒಕ್ಕೂಟಗಳಿಗೆ ಮೂಲಸೌಕರ್ಯವನ್ನು ಒದಗಿಸುತ್ತದೆ.
ಜೀವನೋಪಾಯಕ್ಕೆ ಸಂಬಂಧಿಸಿದ ಕೆಲಸಗಳ ಪಾಲು ಗಣನೀಯವಾಗಿ ಹೆಚ್ಚಾಗಿದ್ದು, ಇದು ಹೊಸ ಚೌಕಟ್ಟಿನಡಿಯಲ್ಲಿ ಅನುಮತಿಸಬಹುದಾದ ಕೆಲಸಗಳಲ್ಲಿ ಶೇಕಡಾ 26 ರಷ್ಟಿದೆ, ಹಿಂದಿನ ಚೌಕಟ್ಟಿನಡಿಯಲ್ಲಿ ಶೇಕಡಾ 1.1 ರಷ್ಟಿತ್ತು.
ವಿಪತ್ತು ಸನ್ನದ್ಧತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಸಮರ್ಪಿತವಾದ 38 ಕಾಮಗಾರಿಗಳು
ಮೊದಲ ಬಾರಿಗೆ, ವಿಪತ್ತು ಸನ್ನದ್ಧತೆ ಮತ್ತು ಹವಾಮಾನ ವೈಪರೀತ್ಯ ಘಟನೆಗಳಿಗಾಗಿ ಮೀಸಲಾದ ವರ್ಗವನ್ನು ಗ್ರಾಮೀಣ ಕಾಮಗಾರಿಗಳ ಚೌಕಟ್ಟಿನಲ್ಲಿ ಸೇರಿಸಲಾಗಿದೆ, ಇದು 38 ಕಾಮಗಾರಿಗಳನ್ನು ಒಳಗೊಂಡಿದೆ.
ಇವುಗಳಲ್ಲಿ ಪ್ರವಾಹ ಪರಿಹಾರ ಆಶ್ರಯಗಳು, ತಡೆಗೋಡೆಗಳು, ಒಡ್ಡುಗಳನ್ನು ಬಲಪಡಿಸುವುದು, ಪ್ರವಾಹ ರಕ್ಷಣಾ ಕಾರ್ಯಗಳು, ಗ್ರಾಮೀಣ ರಸ್ತೆಗಳು ಮತ್ತು ಸಮುದಾಯ ಸ್ವತ್ತುಗಳ ವಿಪತ್ತು ನಂತರದ ಪುನಃಸ್ಥಾಪನೆ ಹಾಗೂ ಫೈರ್‌ಲೈನ್‌ಗಳು ಮತ್ತು ಇಂಧನ-ಬಫರ್ ವಲಯಗಳಂತಹ ಕಾಡ್ಗಿಚ್ಚು ನಿರ್ವಹಣಾ ಕ್ರಮಗಳು ಸೇರಿವೆ.
ಪ್ರವಾಹ, ಚಂಡಮಾರುತಗಳು, ಬಿರುಗಾಳಿಗಳು, ಬರಗಾಲಗಳು, ಭೂಕುಸಿತಗಳು, ಕಾಡ್ಗಿಚ್ಚು ಮತ್ತು ಇತರ ಹವಾಮಾನ ವೈಪರೀತ್ಯ ಘಟನೆಗಳ ವಿರುದ್ಧ ಗ್ರಾಮೀಣ ಸಮುದಾಯಗಳು ಮತ್ತು ಆಸ್ತಿಗಳನ್ನು ಬಲಪಡಿಸುವ ಗುರಿಯನ್ನು ಈ ವರ್ಗವು ಹೊಂದಿದೆ.
ರೈತರು, ದುರ್ಬಲ ಕುಟುಂಬಗಳು, ಮಹಿಳೆಯರು ಮತ್ತು ಗ್ರಾಮೀಣ ಯುವಕರ ಮೇಲೆ ಗಮನ
ಈ ಪಟ್ಟಿಯಲ್ಲಿ ಕೃಷಿ, ದುರ್ಬಲ ಕುಟುಂಬಗಳು, ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ವಿಶೇಷ ಒತ್ತು ನೀಡಲಾಗಿದೆ.
ಒಟ್ಟು 181 ಕಾಮಗಾರಿಗಳು ಕೃಷಿ ಮತ್ತು ಸಂಬಂಧಿತ ಕಾಮಗಾರಿಗಳಾಗಿದ್ದು ಇದರಲ್ಲಿ ನೀರು, ಭೂಮಿ, ತೋಟ, ಜಾನುವಾರು ಮತ್ತು ರೈತರಿಗೆ ನೇರವಾಗಿ ನೆರವು ನೀಡುವ ಇತರ ಉತ್ಪಾದಕ ಸ್ವತ್ತುಗಳನ್ನು ಒಳಗೊಂಡ 52 ವೈಯಕ್ತಿಕ-ಫಲಾನುಭವಿ ಕಾಮಗಾರಿಗಳು ಸೇರಿವೆ.
ಅಂತ್ಯೋದಯ/ದುರ್ಬಲ ಕುಟುಂಬಗಳಿಗಾಗಿ 107 ಕಾಮಗಾರಿಗಳನ್ನು ಟ್ಯಾಗ್ ಮಾಡಲಾಗಿದ್ದು, ಇದರಲ್ಲಿ 68 ವೈಯಕ್ತಿಕ ಫಲಾನುಭವಿ ಕಾಮಗಾರಿಗಳಿವೆ. ಇವುಗಳಲ್ಲಿ ವಸತಿ, ನೈರ್ಮಲ್ಯ, ಇಂಧನ, ನೀರಾವರಿ, ತೋಟಗಾರಿಕೆ, ಜಾನುವಾರು ಆಶ್ರಯಗಳು ಮತ್ತು ಇತರ ಮನೆಯ ಮಟ್ಟದ ಆಸ್ತಿಗಳು ಸೇರಿವೆ.
ಮಹಿಳಾ ಒಕ್ಕೂಟಗಳು, ಸ್ವಸಹಾಯ ಸಂಘಗಳು ಮತ್ತು ಫೆಡರೇಶನ್‌ಗಳು, ಯುವ ಕೇಂದ್ರಗಳು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ-ಸಂಯೋಜಿತ ಮೂಲಸೌಕರ್ಯಗಳನ್ನು ಒಳಗೊಂಡಂತೆ ನಾರಿ ಶಕ್ತಿಗೆ ಸಂಬಂಧಿಸಿದ 36 ಕಾಮಗಾರಿಗಳು ಮತ್ತು ಯುವ ಶಕ್ತಿಗೆ ಸಂಬಂಧಿಸಿದ 36 ಕಾಮಗಾರಿಗಳನ್ನು ಸಹ ಈ ಚೌಕಟ್ಟು ಒಳಗೊಂಡಿದೆ.
ಎಲ್ಲರನ್ನು ಒಳಗೊಂಡ ಮತ್ತು ಭವಿಷ್ಯ ಸನ್ನದ್ಧ ಗ್ರಾಮೀಣ ಮೂಲಸೌಕರ್ಯ
ಹೊಸ ವೇಳಾಪಟ್ಟಿಯು ಸರ್ಕಾರಿ ಕಟ್ಟಡಗಳಲ್ಲಿ ಮೆಟ್ಟಿಲುಗಳು ಮತ್ತು ರಾಂಪ್‌ಗಳ ನಿರ್ಮಾಣ ಸೇರಿದಂತೆ ದಿವ್ಯಾಂಗರ ಪ್ರವೇಶಕ್ಕಾಗಿ ಸ್ಪಷ್ಟ ನಿಬಂಧನೆಗಳನ್ನು ಒದಗಿಸುತ್ತದೆ. ಗಡಿ ಪ್ರದೇಶಗಳಲ್ಲಿ ತುರ್ತು ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಆಶ್ರಯಗಳು, ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಮತ್ತು ತ್ಯಾಜ್ಯದಿಂದ ಸಂಪತ್ತು ಮರುಬಳಕೆ ಹಾಗೂ ಬೂದುನೀರು (ಗ್ರೇವಾಟರ್) ಸಂಸ್ಕರಣೆಯಂತಹ ಆವರ್ತಕ ಆರ್ಥಿಕ ಮಧ್ಯಸ್ಥಿಕೆಗಳನ್ನು ಸಹ ಇದು ಒಳಗೊಂಡಿದೆ.

ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ಕಾಮಗಾರಿಗಳ ಯೋಜನೆ
ʻವಿಬಿ-ಜಿ ರಾಮ್ ಜಿʼ ಅಡಿಯಲ್ಲಿ, ಸ್ಥಳೀಯ ಅಗತ್ಯತೆಗಳ ಆಧಾರದ ಮೇಲೆ ಮತ್ತು ಗ್ರಾಮ ಸಭೆಯಿಂದ ಅನುಮೋದಿಸಲ್ಪಟ್ಟ ʻವಿಕಸಿತ್ ಗ್ರಾಮ ಪಂಚಾಯತ್ ʼಯೋಜನೆಗಳ ಮೂಲಕ ಕಾಮಗಾರಿಗಳನ್ನು ಯೋಜಿಸಲಾಗುತ್ತದೆ. ʻವಿಕಸಿತ್ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್ʼ ಮೂಲಕ ಡಿಜಿಟಲ್ ಟ್ರ್ಯಾಕಿಂಗ್ ಕಾರ್ಯವಿಧಾನವು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಯೋಜನೆಗಳಾದ್ಯಂತ ಹೂಡಿಕೆಗಳ ಒಮ್ಮುಖಕ್ಕೆ ಅನುಕೂಲ ಮಾಡಿಕೊಡುತ್ತದೆ, ಮತ್ತು ನಕಲು ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಹೊಸ ಪಟ್ಟಿಯು ಉದ್ಯೋಗ ಸೃಷ್ಟಿಯನ್ನು ಜಲ ಭದ್ರತೆ, ದೀರ್ಘ ಬಾಳಿಕೆಯ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸೃಷ್ಟಿ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯೊಂದಿಗೆ ಜೋಡಿಸಲು ಪ್ರಯತ್ನಿಸುತ್ತದೆ, ಆ ಮೂಲಕ 'ವಿಕಸಿತ ಭಾರತ @2047' ರ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2319448)
ವಿಸಿಟರ್ ಕೌಂಟರ್ : 43