ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ₹1,472 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ; ಅಹಮದಾಬಾದಿನ ಸಾಬರಮತಿ ರೈಲ್ವೆ ನಿಲ್ದಾಣದಿಂದ ದೇಶದ ಮೊದಲ ಎಲ್ ಎನ್ ಜಿ ಚಾಲಿತ ರೈಲಿಗೆ ಚಾಲನೆ
ಸಾಬರಮತಿಯಿಂದ ದೇಶದ ಮೊದಲ ಎಲ್ ಎನ್ ಜಿ ಚಾಲಿತ ರೈಲನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಈ ಉಪಕ್ರಮವು ಪರಿಸರ ಸಂರಕ್ಷಣೆಯ ದಿಸೆಯಲ್ಲಿ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ ಎಂದರು
ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ರೈಲ್ವೆಯಲ್ಲಿ ಹಲವಾರು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಯಿತು, ರೈಲ್ವೆ ಜಾಲವನ್ನು ಹೆಚ್ಚು ಆಧುನಿಕರಿಸಲಾಯಿತು; ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಸರಕು ಸಾಗಣೆ ಕಾರಿಡಾರ್), ಕ್ಷಿಪ್ರ ರೈಲು ವ್ಯವಸ್ಥೆ ಮತ್ತು ಪ್ರೀಮಿಯಂ ರೈಲ್ವೆ ನಿಲ್ದಾಣಗಳನ್ನು ಸಹ ಪರಿಚಯಿಸಲಾಯಿತು
ಭಾರತದ ಜಲಜನಕ ಚಾಲಿತ ರೈಲನ್ನು ಉದ್ಘಾಟಿಸುವ ಮೂಲಕ ಮೋದಿ ಜಿ ಅವರು ಭಾರತವನ್ನು ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕು ದೇಶಗಳ ಸಾಲಿಗೆ ಸೇರಿಸಿದ್ದಾರೆ
ಸತ್ಯಾಗ್ರಹ, ಸರಳ ಜೀವನ, ಗ್ರಾಮೀಣಾಭಿವೃದ್ಧಿ ಮತ್ತು ಖಾದಿ - ಈ ಎಲ್ಲಾ ಪ್ರಯೋಗಗಳನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತರುವ ಪ್ರಯಾಣವು ಸಾಬರಮತಿಯಿಂದಲೇ ಪ್ರಾರಂಭವಾಯಿತು
ಮುಂಬೈನಿಂದ ವಡೋದರಾದವರೆಗೆ ಮೊದಲ ಲಾಂಗ್-ಹಾಲ್ ಡಬಲ್-ಸ್ಟ್ಯಾಕ್ ಕಂಟೈನರ್ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರವು ನಮ್ಮ ಸರಕು ಸಾಗಣೆ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಿದೆ
ಮೋದಿ ಅವರು ರೂಪಿಸಿದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯ ಫಲವಾಗಿ ದೇಶವು ಎಂಜಿನ್ ಗಳಂತಹ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶದಲ್ಲಿಯೇ ತಯಾರಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ
ರೈಲ್ವೆಯಿಂದ ಡೀಸೆಲ್ ಬಳಕೆ 2015-16ರಲ್ಲಿ 293 ಕೋಟಿ ಲೀಟರ್ಗಳಿಂದ 2024-25ರಲ್ಲಿ 108 ಕೋಟಿ ಲೀಟರ್ ಗಳಿಗೆ ಇಳಿದಿದೆ
ಮೋದಿ ಸರ್ಕಾರದ ಅವಧಿಯಲ್ಲಿ 98% ರಷ್ಟು ರೈಲು ಬೋಗಿಗಳಿಗೆ ಬಯೋ-ಶೌಚಾಲಯಗಳನ್ನು ಅಳವಡಿಸಲಾಗಿದೆ, ಎಲ್ ಎಚ್ ಬಿ ಬೋಗಿಗಳ ಉತ್ಪಾದನೆಯು 57% ರಷ್ಟು ಹೆಚ್ಚಾಗಿದೆ ಮತ್ತು ಲೋಕೋಮೋಟಿವ್ ಉತ್ಪಾದನಾ ಸಾಮರ್ಥ್ಯವು 66% ರಷ್ಟು ಹೆಚ್ಚಾಗಿದೆ; ರೈಲ್ವೆ ಸುರಕ್ಷತೆಯ ಬಜೆಟ್ ಅನ್ನು ಸಹ 67% ರಷ್ಟು ಹೆಚ್ಚಿಸಲಾಗಿದೆ
2014 ಕ್ಕಿಂತ ಮೊದಲು, ರೈಲ್ವೆ ವಿದ್ಯುದ್ದೀಕರಣವು ಕೇವಲ 30% ರಷ್ಟಿತ್ತು, ಮೋದಿ ಸರ್ಕಾರದ ಅವಧಿಯಲ್ಲಿ ಇದು 99.6% ಕ್ಕೆ ಏರಿದೆ, ಮತ್ತು ಉಳಿದ 0.4% ರಷ್ಟನ್ನೂ ನಾವು ಸಧ್ಯದಲ್ಲೇ ಪೂರ್ಣಗೊಳಿಸುತ್ತೇವೆ
ಹಿಂದಿನ ಸರ್ಕಾರವು ₹12 ಲಕ್ಷ ಕೋಟಿ ಮೌಲ್ಯದ ಹಗರಣಗಳು ಮತ್ತು ಭ್ರಷ್ಟಾಚಾರವನ್ನು ಹೊರತುಪಡಿಸಿ ಏನನ್ನೂ ಮಾಡಲಿಲ್ಲ, ಆದರೆ 12 ವರ್ಷಗಳಲ್ಲಿ ಮೋದಿ ಜಿ ಅವರ ವಿರುದ್ಧ ಭ್ರಷ್ಟಾಚಾರದ ಸಣ್ಣ ಆರೋಪವೂ ಕೇಳಿ ಬಂದಿಲ್ಲ
ರೈಲ್ವೆ ಲೋಕೋಮೋಟಿವ್ ಎಂಜಿನ್ ಗಳ ನಿರ್ವಹಣೆಗಾಗಿ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಡಬ್ಲ್ಯೂ ಎ ಜಿ -12 ನಿರ್ವಹಣಾ ಶೆಡ್ ಅನ್ನು ಸಹ ಗೃಹ ಸಚಿವರು ಉದ್ಘಾಟಿಸಿದರು
ಸಾಬರಮತಿ-ಕಾಲಿಪ್-ಸಬರಮತಿ, ಅಹಮದಾಬಾದ್-ಪಾಲನ್ಪುರ್ ಮತ್ತು ಅಹಮದಾಬಾದ್-ಸಮಾಖಿಯಾಲಿ ರೈಲ್ವೆ
ಪ್ರಕಟಣಾ ದಿನಾಂಕ:
27 SEP 2026 3:33PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜ್ಯದ ಅಹಮದಾಬಾದ್ ನ ಸಾಬರಮತಿ ರೈಲ್ವೆ ನಿಲ್ದಾಣದಲ್ಲಿ ₹1,472 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ದೇಶದ ಮೊದಲ ಎಲ್ ಎನ್ ಜಿ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿದರು. ರೈಲ್ವೆ ಲೋಕೋಮೋಟಿವ್ ಎಂಜಿನ್ ಗಳ ನಿರ್ವಹಣೆಗಾಗಿ ನಿರ್ಮಿಸಲಾಗುತ್ತಿರುವ ಡಬ್ಲ್ಯೂ ಎ ಜಿ -12 ನಿರ್ವಹಣಾ ಶೆಡ್ಡನ್ನು ಸಹ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಇಂದು ಸಾಬರಮತಿ ವಿಭಾಗದಲ್ಲಿ ಪರಿಸರ ಸುಸ್ಥಿರತೆ, ಪ್ರಯಾಣಿಕರ ಸೌಕರ್ಯಗಳು ಮತ್ತು ರೈಲು ಪ್ರಯಾಣಿಕರ ಸುರಕ್ಷತೆಯ ಮೇಲೆ ಗಮನ ಹರಿಸಿ ಹಲವಾರು ರೈಲ್ವೆ ಯೋಜನೆಗಳಿಗೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಸತ್ಯಾಗ್ರಹ, ಸರಳ ಜೀವನ, ಗ್ರಾಮೀಣಾಭಿವೃದ್ಧಿ ಮತ್ತು ಖಾದಿ - ಈ ಎಲ್ಲಾ ಪ್ರಯೋಗಗಳನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತರುವ ಪ್ರಯಾಣವು ಸಾಬರಮತಿಯಿಂದಲೇ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಸಾಬರಮತಿ ರೈಲ್ವೆ ನಿಲ್ದಾಣವು ಈಗ ಗಮನಾರ್ಹ ಅಭಿವೃದ್ಧಿಯನ್ನು ಕಂಡಿದೆ, ಆದರೆ 1980 ರ ದಶಕದಲ್ಲಿ ಪ್ರಯಾಣಿಕರು ನಿಲ್ದಾಣದಿಂದ ಆಟೋರಿಕ್ಷಾಗಾಗಿ ಸುಮಾರು ಎರಡು ಕಿಲೋಮೀಟರ್ ನಡೆಯಬೇಕಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಯಾಣಿಕರ ಸೌಕರ್ಯಗಳು, ಸುರಕ್ಷತೆ ಮತ್ತು ಸಂಪರ್ಕದ ವಿಷಯದಲ್ಲಿ ಸಾಬರಮತಿ ರೈಲ್ವೆ ನಿಲ್ದಾಣವು ಪ್ರಮುಖ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಇಂದು ₹1,472 ಕೋಟಿ ವೆಚ್ಚದಲ್ಲಿ ಉದ್ಘಾಟನೆಗೊಂಡ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಅಭಿವೃದ್ಧಿ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಅತ್ಯಂತ ಮಹತ್ವದ್ದಾಗಲಿವೆ ಎಂದು ಹೇಳಿದರು. ರೈಲ್ವೆ ಲೋಕೋಮೋಟಿವ್ ಎಂಜಿನ್ ಗಳ ನಿರ್ವಹಣೆಗಾಗಿ ₹700 ಕೋಟಿ ವೆಚ್ಚದಲ್ಲಿ ಡಬ್ಲ್ಯೂ ಎ ಜಿ -12 ನಿರ್ವಹಣಾ ಶೆಡ್ಡನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಸುರಕ್ಷತೆಯನ್ನು ಹೆಚ್ಚಿಸಲು ₹48 ಕೋಟಿ ವೆಚ್ಚದಲ್ಲಿ ಸಾಬರಮತಿ-ಕಾಲಿಪ್-ಸಾಬರಮತಿ ರೈಲು ವಿಭಾಗದಲ್ಲಿ 'ಕವಚ್' ರೈಲು ರಕ್ಷಣೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಜೊತೆಗೆ, ಅಹಮದಾಬಾದ್-ಪಾಲನ್ ಪುರ್ ಮತ್ತು ಅಹಮದಾಬಾದ್-ಸಮಾಖಿಯಾಲಿ ರೈಲು ವಿಭಾಗಗಳಲ್ಲಿ 'ಕವಚ್' ಅನುಷ್ಠಾನಕ್ಕೆ ಮತ್ತು ಸಬರಮತಿ-ಸರ್ಖೇಜ್ ರೈಲು ಮಾರ್ಗವನ್ನು ದ್ವಿಪಥಗೊಳಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಇಂದು 12,000 ಅಶ್ವಶಕ್ತಿ ಅವಳಿ-ವಿಭಾಗದ ಸಾಮರ್ಥ್ಯದ ಎಂಜಿನ್ ಅನ್ನು ಚಾಲನೆಗೆ ತರಲಾಗಿದ್ದು, ಇದು ಒಂದೇ ಎಂಜಿನ್ ಮೂಲಕ ಸುಮಾರು 600 ಟ್ರಕ್ಗಳಷ್ಟು ಸರಕನ್ನು ಎಳೆಯಬಲ್ಲದು ಎಂದು ಶ್ರೀ ಅಮಿತ್ ಶಾ ಹೇಳಿದರು. ಹಿಂದೆ, ಈ ಉದ್ದೇಶಕ್ಕಾಗಿ ಎರಡು ಲೋಕೋಮೋಟಿವ್ ಗಳು ಬೇಕಾಗುತ್ತಿದ್ದವು, ಆದರೆ ಈಗ ಒಂದೇ ಡಬ್ಲ್ಯೂ ಎ ಜಿ -12 ಅದೇ ಕೆಲಸವನ್ನು ನಿರ್ವಹಿಸಬಲ್ಲದು. ಇದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಅವರು ಹೇಳಿದರು. ಇಂದು ಎಲ್ ಎನ್ ಜಿ ಚಾಲಿತ ರೈಲನ್ನು ಸಹ ಉದ್ಘಾಟಿಸಲಾಗಿದ್ದು, ಇದು ಮುಂಬರುವ ವರ್ಷಗಳಲ್ಲಿ ಪರಿಸರ ಸಂರಕ್ಷಣೆಗೆ ಗಮನಾರ್ಹ ಕೊಡುಗೆ ನೀಡಲಿದೆ ಎಂದು ಶ್ರೀ ಶಾ ಹೇಳಿದರು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿ, 2014 ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ, ರೈಲ್ವೆಯಲ್ಲಿ ಹಲವಾರು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಯಿತು ಮತ್ತು ರೈಲ್ವೆ ಜಾಲವನ್ನು ಆಧುನೀಕರಣಗೊಳಿಸಲಾಯಿತು. ಮುಂಬೈನ ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್ (ಜೆ ಎನ್ ಪಿ ಟಿ) ಯಿಂದ ವಡೋದರಾವರೆಗೆ ದೇಶದ ಮೊದಲ ಡಬಲ್-ಸ್ಟ್ಯಾಕ್ ಲಾಂಗ್-ಹಾಲ್ ಕಂಟೈನರ್ ರೈಲಿನ ಯಶಸ್ವಿ ಪ್ರಯೋಗವು ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ದೇಶದಲ್ಲಿ ಸರಕು ಸಾಗಣೆಗೆ ಸೀಮಿತ ರೈಲು ಮಾರ್ಗಗಳಿವೆ, ಆದರೆ ಡಬಲ್-ಸ್ಟ್ಯಾಕ್ ಸರಕು ರೈಲುಗಳ ಪರಿಕಲ್ಪನೆಯು ಯಶಸ್ವಿಯಾದರೆ, ಸರಕು ಸಾಗಣೆ ಸಾಮರ್ಥ್ಯವು ಸುಮಾರು ದುಪ್ಪಟ್ಟಾಗುತ್ತದೆ ಎಂದು ಅವರು ಹೇಳಿದರು. 11,000 ಕಿಲೋಮೀಟರ್ ಉದ್ದದ ಕಾರಿಡಾರ್ ಅನ್ನು ಈಗ ನಾಲ್ಕು ಪಥಗಳ ಜಾಲವಾಗಿ ಪರಿವರ್ತಿಸಲಾಗುತ್ತಿದ್ದು, ಇದು ದೆಹಲಿ-ಹೌರಾ ಮತ್ತು ದೆಹಲಿ-ಗುವಾಹಾಟಿ ಕಡೆಗೆ ಸಂಚಾರವನ್ನು ಗಣನೀಯವಾಗಿ ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲೇ ಮೀಸಲು ಸರಕು ಸಾಗಣೆ ಕಾರಿಡಾರ್ ಗಳು (ಡೆಡಿಕೇಟೆಡ್ ಫ್ರೈಟ್ ಕಾರಿಡಾರ್), ಕ್ಷಿಪ್ರ ರೈಲು ವ್ಯವಸ್ಥೆ ಮತ್ತು ಪ್ರೀಮಿಯಂ ರೈಲ್ವೆ ನಿಲ್ದಾಣಗಳನ್ನು ಪರಿಚಯಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಇತ್ತೀಚೆಗೆ ಪ್ರಧಾನಮಂತ್ರಿ ಮೋದಿ ಅವರು ಜಲಜನಕ (ಹೈಡ್ರೋಜನ್) ಚಾಲಿತ ರೈಲನ್ನು ಉದ್ಘಾಟಿಸಿದ್ದು, ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಕೇವಲ ನಾಲ್ಕು ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರದ ಅವಧಿಯಲ್ಲಿ 97% ರಷ್ಟು ಬಯೋ-ಟಾಯ್ಲೆಟ್ಗಳನ್ನು ಅಳವಡಿಸಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ 87% ರಷ್ಟು ಎಲ್ ಎಚ್ ಬಿ ಬೋಗಿಗಳನ್ನು ಭಾರತದಲ್ಲೇ ತಯಾರಿಸಲಾಗಿದೆ. ಪ್ರಧಾನಮಂತ್ರಿ ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು ರೈಲ್ವೆ ವಿದ್ಯುದ್ದೀಕರಣವು ಕೇವಲ 30% ರಷ್ಟಿತ್ತು, ಆದರೆ ಉಳಿದ 70% ರಷ್ಟನ್ನು ಅವರ ಆಡಳಿತಾವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೆ ಸುರಕ್ಷತಾ ಬಜೆಟ್ 67% ರಷ್ಟು ಹೆಚ್ಚಾಗಿದೆ, ಆದರೆ ಲೋಕೋಮೋಟಿವ್ ಉತ್ಪಾದನಾ ಸಾಮರ್ಥ್ಯವು 66%ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಪರಿಕಲ್ಪನೆಗಳನ್ನು ಪ್ರಾರಂಭಿಸಿದರು, ಮತ್ತು ಇದರ ಪರಿಣಾಮವಾಗಿ ದೇಶವು ಈಗ ಲೋಕೋಮೋಟಿವ್ ಗಳಂತಹ ಉಪಕರಣಗಳನ್ನು ಸ್ವದೇಶದಲ್ಲಿಯೇ ತಯಾರಿಸುವತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. 2015-16 ರಲ್ಲಿ ರೈಲ್ವೆ 293 ಕೋಟಿ ಲೀಟರ್ ಡೀಸೆಲ್ ಅನ್ನು ಬಳಸಿತ್ತು, ಆದರೆ ಇದು 2024-25 ರಲ್ಲಿ 108 ಕೋಟಿ ಲೀಟರ್ ಗಳಿಗೆ ಇಳಿದಿದೆ ಎಂದು ಅವರು ಹೇಳಿದರು. ಇದು ಹೆಚ್ಚಿನ ಗಮನ ಸೆಳೆಯದ ಪ್ರಮುಖ ಸಾಧನೆಯಾಗಿದೆ ಎಂದು ಅವರು ಹೇಳಿದರು. 2010-11 ರಲ್ಲಿ ಇಡೀ ವರ್ಷದಲ್ಲಿ ರೈಲ್ವೆ ವಿದ್ಯುದ್ದೀಕರಣವು ಕೇವಲ 75 ಕಿಲೋಮೀಟರ್ ಆಗಿತ್ತು, ಆದರೆ 2023-24ರಲ್ಲಿ ಒಂದೇ ವರ್ಷದಲ್ಲಿ 7,188 ಕಿಲೋಮೀಟರ್ ವಿದ್ಯುದ್ದೀಕರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ರೈಲ್ವೆ ಜಾಲದ 99.6% ರಷ್ಟು ಭಾಗವನ್ನು ಈಗ ವಿದ್ಯುದ್ದೀಕರಿಸಲಾಗಿದೆ ಮತ್ತು ಉಳಿದ 0.4% ರಷ್ಟನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು. ಚೀನಾದಲ್ಲಿ ರೈಲ್ವೆ ವಿದ್ಯುದ್ದೀಕರಣವು 92%, ಸ್ಪೇನ್ನಲ್ಲಿ 68%, ಫ್ರಾನ್ಸ್ನಲ್ಲಿ 60% ಮತ್ತು ಚಿಕ್ಕ ದೇಶವಾದ ಯುನೈಟೆಡ್ ಕಿಂಗ್ ಡಮ್ ನಲ್ಲಿ 49% ರಷ್ಟಿದೆ ಎಂದು ಅವರು ಹೇಳಿದರು. 100% ರಷ್ಟು ವಿದ್ಯುದ್ದೀಕರಣವನ್ನು ಸಾಧಿಸುವ ಮೂಲಕ ಭಾರತವು ಈ ದೇಶಗಳನ್ನು ಹಿಂದಿಕ್ಕಲಿದೆ. 100% ರಷ್ಟು ರೈಲ್ವೆ ವಿದ್ಯುದ್ದೀಕರಣವನ್ನು ಸಾಧಿಸಿದ ವಿಶ್ವದ ಏಕೈಕ ದೇಶ ಸ್ವೀಡನ್, ಆದರೆ ಸ್ವೀಡನ್ ದೇಶದ ಒಟ್ಟು ರೈಲು ಮಾರ್ಗಗಳ ಉದ್ದವು ಭಾರತಕ್ಕಿಂತ ಸುಮಾರು ಹತ್ತು ಪಟ್ಟು ಕಡಿಮೆ ಇದೆ ಎಂದು ಅವರು ಹೇಳಿದರು.
ರೈಲ್ವೆ ಬಜೆಟ್ ವಿಷಯದಲ್ಲಿ ಗುಜರಾತ್ ರಾಜ್ಯವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, 2009 ರಿಂದ 2014 ರವರೆಗಿನ ರೈಲು ಬಜೆಟ್ ಕೇವಲ ₹589 ಕೋಟಿಯಾಗಿತ್ತು ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, 2026-27ರ ಕೇವಲ ಒಂದೇ ವರ್ಷದ ಬಜೆಟ್ ₹17,366 ಕೋಟಿಯಾಗಿದೆ. ಅಭಿವೃದ್ಧಿಯ ವೇಗದಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ವಿರೋಧ ಪಕ್ಷದ ನಾಯಕರಿಗೆ ಅಂಕಿಅಂಶಗಳು ಮತ್ತು ಸತ್ಯಗಳೊಂದಿಗೆ ಚರ್ಚಿಸುವಂತೆ ದೇಶದ ಜನತೆ ಹೇಳಬೇಕು ಎಂದು ಅವರು ಹೇಳಿದರು. ವಿರೋಧ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಏನು ಮಾಡಿದೆ ಎಂದು ಶ್ರೀ ಶಾ ಪ್ರಶ್ನಿಸಿದರು. 10 ವರ್ಷಗಳಲ್ಲಿ ₹12 ಲಕ್ಷ ಕೋಟಿ ಮೌಲ್ಯದ ಹಗರಣಗಳು, ಅಕ್ರಮಗಳು ಮತ್ತು ಭ್ರಷ್ಟಾಚಾರವನ್ನು ಹೊರತುಪಡಿಸಿ ವಿರೋಧ ಪಕ್ಷವು ಏನನ್ನೂ ಮಾಡಿಲ್ಲ ಎಂದು ಅವರು ಹೇಳಿದರು. ಕಳೆದ 12 ವರ್ಷಗಳಲ್ಲಿ ಮೋದಿ ಅವರ ವಿರುದ್ಧ ಭ್ರಷ್ಟಾಚಾರದ ಸಣ್ಣ ಆರೋಪವೂ ಬಂದಿಲ್ಲ ಎಂದು ಶ್ರೀ ಶಾ ಹೇಳಿದರು.
*****
(ಪ್ರಕಟಣೆ ಐ.ಡಿ.: 2315712)
ವಿಸಿಟರ್ ಕೌಂಟರ್ : 117
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Odia
,
Tamil
,
Telugu
,
Malayalam