ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಮುಖ ಸಿಇಒಗಳೊಂದಿಗೆ ಸೆಮಿಕಂಡಕ್ಟರ್ ದುಂಡುಮೇಜಿನ ಸಭೆ


ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯ ಮುಂದಿನ ಹಂತದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಿಇಒಗಳನ್ನು ಒತ್ತಾಯಿಸಿದ ಪ್ರಧಾನಮಂತ್ರಿ

ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತವು ಆರಂಭಿಕ ನಾಯಕರಲ್ಲಿ ಒಬ್ಬರಾಗಲು ಆಶಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು

ಊಹಿಸಬಹುದಾದ ಮತ್ತು ಸ್ಪಂದಿಸುವ ನೀತಿ ಪರಿಸರಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

ನೀತಿ ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತು ಸಲಹೆಗಳನ್ನು ಹಂಚಿಕೊಳ್ಳಲು ಉದ್ಯಮ ವಲಯದ ಪ್ರಮುಖರನ್ನು ಆಹ್ವಾನಿಸಿದ ಪ್ರಧಾನಮಂತ್ರಿ

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳು ಮತ್ತು ಪ್ರಧಾನಮಂತ್ರಿಯವರ ನಾಯಕತ್ವಕ್ಕೆ ಸಿಇಒಗಳ (CEOಗಳು) ಶ್ಲಾಘನೆ

ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಸಾಮರ್ಥ್ಯಗಳನ್ನು ಬೆಳೆಸುವ ಭಾರತದ ಶಕ್ತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಿ.ಇ.ಒ.ಗಳು

ಪ್ರಕಟಣಾ ದಿನಾಂಕ: 16 SEP 2026 7:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇವಾ ತೀರ್ಥದಲ್ಲಿ ಪ್ರಮುಖ ಸಿಇಒಗಳೊಂದಿಗೆ ಸೆಮಿಕಂಡಕ್ಟರ್ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ, ಭಾರತದ ತಂತ್ರಜ್ಞಾನ ಭವಿಷ್ಯವನ್ನು ರೂಪಿಸುವಲ್ಲಿ ಸರ್ಕಾರ ಮತ್ತು ಸೆಮಿಕಂಡಕ್ಟರ್ ಉದ್ಯಮದ ನಡುವಿನ ನಿಕಟ ಸಹಯೋಗದ ಮಹತ್ವವನ್ನು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಭಾರತದ ಪ್ರತಿಭೆ, ತಂತ್ರಜ್ಞಾನ ಅಳವಡಿಕೆ ಮತ್ತು ಮೂಲಸೌಕರ್ಯದ ಬಲವಾದ ಅಡಿಪಾಯವನ್ನು ಅವರು ಎತ್ತಿ ತೋರಿಸಿದರು ಮತ್ತು ಕೌಶಲ್ಯ, ನಾವೀನ್ಯತೆ ಹಾಗು ಎ.ಐ. (AI ) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಉದ್ಯಮ ಭಾಗವಹಿಸುವಿಕೆಗೆ ಕರೆ ನೀಡಿದರು. ಎ.ಐ. ನಲ್ಲಿ ಒಂದು ಕೋಟಿ ಜನರಿಗೆ ತರಬೇತಿ ನೀಡುವ ಗುರಿಯನ್ನು ಉಲ್ಲೇಖಿಸಿದ ಅವರು, ಜಾಗತಿಕ ಉದ್ಯಮ ನಾಯಕರ ಅನುಭವ ಮತ್ತು ಸಾಮರ್ಥ್ಯಗಳೊಂದಿಗೆ ಭಾರತದ ಪ್ರತಿಭಾ ಸಮೂಹ ಗಮನಾರ್ಹ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಭಾರತವು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಆರಂಭಿಕ ನಾಯಕರಲ್ಲಿ ಒಬ್ಬರಾಗಲು ಆಶಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಸೆಮಿಕಂಡಕ್ಟರ್ ವಲಯದಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಅವರು ಗಮನಿಸಿದರು ಮತ್ತು ಪರಿಸರ ವ್ಯವಸ್ಥೆಯು ಈಗ ಅಡಿಪಾಯದ ಪ್ರಯತ್ನಗಳಿಂದ ಹೆಚ್ಚಿನ ಪ್ರಮಾಣದ ಮತ್ತು ಅವಕಾಶದ ಹಂತಕ್ಕೆ ಚಲಿಸುತ್ತಿದೆ ಎಂದು ಹೇಳಿದರು.

ತಂತ್ರಜ್ಞಾನದ ಪ್ರಗತಿಗಳು ಮತ್ತು ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ನೀತಿಗಳು ವಿಕಸನಗೊಳ್ಳಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಊಹಿಸಬಹುದಾದ ಮತ್ತು ಸ್ಪಂದಿಸುವ ನೀತಿ ಪರಿಸರಕ್ಕೆ ಸಂಬಂಧಿಸಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ನೀತಿ ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತು ಸಲಹೆಗಳನ್ನು ಹಂಚಿಕೊಳ್ಳಲು ಅವರು ಉದ್ಯಮ ನಾಯಕರನ್ನು ಆಹ್ವಾನಿಸಿದರು ಮತ್ತು ವಲಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ಮಾಹಿತಿಗಳನ್ನು (ಇನ್‌ಪುಟ್‌ಗಳನ್ನು) ಸೂಕ್ತವಾಗಿ ಪರಿಗಣಿಸಲಾಗುವುದು ಎಂದು ಅವರಿಗೆ ಭರವಸೆ ನೀಡಿದರು. ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯ ಮುಂದಿನ ಹಂತದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರು ಉದ್ಯಮ ನಾಯಕರನ್ನು ಪ್ರೋತ್ಸಾಹಿಸಿದರು.

ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಸಿಇಒಗಳು ಶ್ಲಾಘಿಸಿದರು, ಉತ್ಪಾದನೆ, ವಿನ್ಯಾಸ, ಮೂಲಸೌಕರ್ಯ ಮತ್ತು ಪ್ರತಿಭಾ ಅಭಿವೃದ್ಧಿಯಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದರು. ಐಎಸ್‌ಎಂ 2.0 ಅಡಿಯಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳಲ್ಲಿ ಮತ್ತು ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ಸುಧಾರಿತ ತಂತ್ರಜ್ಞಾನಗಳು ಮತ್ತು ಪೋಷಕ ಕೈಗಾರಿಕೆಗಳು ಸೇರಿದಂತೆ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಸಾಮರ್ಥ್ಯಗಳನ್ನು ನಿರ್ಮಿಸುವ ಭಾರತದ ಶಕ್ತಿಯಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು

ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ಬೆಂಬಲವನ್ನು ಶ್ಲಾಘಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಸಾಧಿಸಲಾದ ಪ್ರಗತಿಯು ಮತ್ತಷ್ಟು ಉದ್ಯಮ ಭಾಗವಹಿಸುವಿಕೆಗೆ ಬಲವಾದ ಅಡಿಪಾಯವನ್ನು ಸೃಷ್ಟಿಸಿದೆ ಎಂದು ಹೇಳಿದರು. ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಭಾರತ ಹೊರಹೊಮ್ಮಲು ಕೊಡುಗೆ ನೀಡುವ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಸೆಮಿ, ಮೈಕ್ರಾನ್,ಇನ್ಫಿನಿಯಾನ್,ಅಪ್ಲೈಡ್ ಮೆಟೀರಿಯಲ್ಸ್, ಎ.ಎಸ್.ಎಂ.ಎಲ್., ಮೆರ್ಕ್, ಟೋಕಿಯೋ ಇಲೆಕ್ಟ್ರಾನ್ ಲಿಮಿಟೆಡ್, ಫ್ಯುಜಿ ಫಿಲ್ಮ್, ಎ.ಎಂ.ಡಿ., ಇಂಟೆಲ್, ಟಾಟಾ ಇಲೆಕ್ಟ್ರಾನಿಕ್ಸ್, ಲಾಂ ರಿಸರ್ಚ್, ರಾಪಿಡಸ್, ಎನ್.ಎಕ್ಸ್.ಪಿ., ಫೋಕ್ಸ್ ಕಾನ್, ಸೆಮಿ ಕಂಡಕ್ಟರ್ ಡಿವೈಸಸ್, ಅಡ್ವಾಂಟೆಸ್ಟ್,ಸೆಲೆಸ್ತಾ ಕ್ಯಾಪಿಟಲ್, ಸಿ.ಜಿ.ಪವರ್, ಮತ್ತು ಐ.ಬಿ.ಎಂ. ರಿಸರ್ಚ್ (SEMI, Micron, Infineon, Applied Materials, ASML, Merck, Tokyo Electron Ltd, FujiFilm, AMD, Intel, Tata Electronics, Lam Research, Rapidus, NXP, Foxconn, Semi Conductor Devices, Advantest, Celesta Capital, CG Power ಮತ್ತು IBM Research)  ಸೇರಿದಂತೆ ವಿವಿಧ ಸಂಸ್ಥೆಗಳ ಸಿಇಒಗಳು , ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2311754) ವಿಸಿಟರ್ ಕೌಂಟರ್ : 13