ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

‘ಹಿಂದಿ ದಿವಸ್-2026’ ಅಂಗವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಂದೇಶ

ಪ್ರಕಟಣಾ ದಿನಾಂಕ: 14 SEP 2026 12:54PM by PIB Bengaluru

ಆತ್ಮೀಯ ಸಹ ನಾಗರಿಕರೇ,

‘ಹಿಂದಿ ದಿವಸ್’ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು!

ನಮ್ಮ ದೇಶವು ಭಾಷಾವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅನನ್ಯ ನಾಡಾಗಿದೆ. ನಾವು ವಿಭಿನ್ನ ಭಾಷೆಗಳನ್ನು ಹೊಂದಿರುವುದು ಒಂದು ದೌರ್ಬಲ್ಯ ಎಂದು ಅನೇಕರು ಹೇಳುತ್ತಾರೆ, ಆದರೆ ಇಷ್ಟೊಂದು ಭಾಷೆಗಳನ್ನು ಹೊಂದಿರುವುದು ನಮ್ಮ ದೊಡ್ಡ ಶಕ್ತಿ ಎಂದು ನಾನು ನಂಬುತ್ತೇನೆ. ಪ್ರತಿಯೊಂದು ಭಾಷೆಯು ತನ್ನೊಂದಿಗೆ ಇತಿಹಾಸ, ಜಾನಪದ ಸಂಪ್ರದಾಯಗಳು ಮತ್ತು ವಿಶಿಷ್ಟವಾದ ವಿಶ್ವ ದೃಷ್ಟಿಕೋನವನ್ನು ಒಯ್ಯುತ್ತದೆ, ಅದು ನಮ್ಮ ಯುವ ಪೀಳಿಗೆಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ನೀತಿಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಈ ಭಾಷಾವೈವಿಧ್ಯತೆಯು ಭಾರತವನ್ನು ವ್ಯಾಖ್ಯಾನಿಸುವ 'ವೈವಿಧ್ಯತೆಯಲ್ಲಿ ಏಕತೆ'ಯ ಮನೋಭಾವವನ್ನು ಬಲಪಡಿಸುತ್ತದೆ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ; ಅದು ಸಮಾಜದ ಸ್ಮರಣೆ ಮತ್ತು ಅದರ ಸ್ವಯಂ ಪ್ರಜ್ಞೆಯಾಗಿದೆ.

ಈ ವೈವಿಧ್ಯತೆಯ ನಡುವೆ, ಹಿಂದಿಯು ದೇಶಾದ್ಯಂತ ವಿವಿಧ ವರ್ಗಗಳು ಮತ್ತು ಸಮುದಾಯಗಳ ಜನರನ್ನು ಒಟ್ಟುಗೂಡಿಸುವಲ್ಲಿ ಸಂವಾದ, ಸಂವಹನ ಮತ್ತು ಸಮನ್ವಯದ ಭಾಷೆಯಾಗಿ ಪ್ರಮುಖ ಪಾತ್ರ ವಹಿಸಿದೆ. ಎಲ್ಲಾ ಭಾರತೀಯ ಭಾಷೆಗಳ ಗೌರವ, ಸಂರಕ್ಷಣೆ ಮತ್ತು ಉತ್ತೇಜನದ ಜೊತೆಗೆ ಮುನ್ನಡೆದಾಗ ಮಾತ್ರ ಹಿಂದಿಯ ಅಭಿವೃದ್ಧಿ ನಿಜವಾಗಿಯೂ ಅರ್ಥಪೂರ್ಣವಾಗುತ್ತದೆ. ಹಿಂದಿ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ; ಬದಲಾಗಿ, ಇದು ಭಾರತೀಯ ಭಾಷೆಗಳಲ್ಲಿ ಒಲವು ಮತ್ತು ಸಂವಾದದ ಪ್ರಜ್ಞೆಯನ್ನು ಬೆಳೆಸಲು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಒಂದು ಪ್ರಮುಖ ಕೊಂಡಿಯಾಗಿದೆ. ಈ ಸತ್ಯಕ್ಕೆ ಅತ್ಯಂತ ಸುಂದರವಾದ ಸಾಕ್ಷ್ಯವು ನಮ್ಮದೇ ಇತಿಹಾಸದಲ್ಲಿದೆ. ಸ್ವಾಮಿ ದಯಾನಂದ ಸರಸ್ವತಿ ಅವರು ಗುಜರಾತಿ ಮಾತೃಭಾಷಿಕರಾಗಿದ್ದರು, ಆದರೂ ಅವರು 'ಸತ್ಯಾರ್ಥ ಪ್ರಕಾಶ್' ಅನ್ನು ಹಿಂದಿಯಲ್ಲಿ ಬರೆದರು. ಮಹಾತ್ಮ ಗಾಂಧಿ ಅವರು 1918ರಲ್ಲಿ ಮದ್ರಾಸ್‌ನಲ್ಲಿ 'ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ' ಸ್ಥಾಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಬಂಗಾಳಿ ಭಾಷಿಕರಾಗಿದ್ದರು, ಆದರೂ ಅವರು ಆಜಾದ್ ಹಿಂದ್ ಫೌಜ್‌ನ ಸಂವಹನ ಭಾಷೆಯಾಗಿ ಹಿಂದಿಯನ್ನು ಅಳವಡಿಸಿಕೊಂಡರು ಮತ್ತು
'ಜೈ ಹಿಂದ್' ಎಂಬ ಸ್ಪೂರ್ತಿದಾಯಕ ಘೋಷಣೆಯನ್ನು ರಾಷ್ಟ್ರಕ್ಕೆ ನೀಡಿದರು. ಹೀಗೆ, ವಿವಿಧ ಭಾಷಾ ಹಿನ್ನೆಲೆಯ ಜನರು ಹಿಂದಿಯನ್ನು ಜನರ ನಡುವಿನ ಸಂವಹನ ಭಾಷೆಯನ್ನಾಗಿ ಮಾಡುವಲ್ಲಿ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ. ಮಾತೃಭಾಷೆ ಹಿಂದಿಯೇ ಆಗಿರದಿದ್ದರೂ, ಈ ಮಹಾನ್ ವ್ಯಕ್ತಿಗಳ ಅಪಾರ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ.

ನನ್ನ ಸ್ವಂತ ಮಾತೃಭಾಷೆ ಕೂಡ ಗುಜರಾತಿ, ಆದರೆ ನಾನು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸಿದಾಗ, ಅಲ್ಲಿನ ಸಾಮಾನ್ಯ ಜನರೊಂದಿಗೆ ನನ್ನನ್ನು ನೇರವಾಗಿ ಬೆಸೆಯುವ ಭಾಷೆ ಹಿಂದಿ. ನಾವು ಹಿಂದಿಯ ಪಯಣವನ್ನು ನೋಡಿದರೆ, ಇಡೀ ರಾಷ್ಟ್ರದ ಪಯಣವು ಅದರಲ್ಲಿ ಪ್ರತಿಫಲಿಸುವುದನ್ನು ನಾವು ನೋಡಬಹುದು. ಆದಿಕಾಲದ ವಿದ್ಯಾಪತಿಯವರ ‘ಪಾದಾವಳಿ’ ಮತ್ತು ಪೃಥ್ವಿರಾಜ್ ರಾಸೋ ಅವರ ‘ವೀರಗಾಥೆ’ಗಳಿಂದ ಹಿಡಿದು, ಭಕ್ತಿಗೀತೆಗಳ ಗಮನಾರ್ಹ ಯುಗದವರೆಗೆ - ತುಳಸಿದಾಸರು ಶ್ರೀರಾಮನ ಕಥೆಯನ್ನು ಪ್ರತಿಯೊಂದು ಮನೆಗೂ ಕೊಂಡೊಯ್ದರು ಮತ್ತು ಸೂರದಾಸರು ಪೋಷಕರ ವಾತ್ಸಲ್ಯದ ಕೋಮಲ ಅಭಿವ್ಯಕ್ತಿಗೆ ದನಿ ನೀಡಿದರು.

ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಸ್ವರಾಜ್, ಸ್ವದೇಶಿ ಮತ್ತು ಸ್ವಭಾಷಾ ಆದರ್ಶಗಳು ರಾಷ್ಟ್ರೀಯ ಪ್ರಜ್ಞೆಗೆ ಹೊಸ ಚೈತನ್ಯವನ್ನು ತುಂಬಿದವು. ನಮ್ಮ ಭಾಷೆ ಮತ್ತು ಅಸ್ಮಿತೆಯ ಹೆಮ್ಮೆಯಿಲ್ಲದೆ ಸ್ವರಾಜ್ಯದ ದೃಷ್ಟಿಕೋನ ಅಪೂರ್ಣವಾಗಿರುತ್ತದೆ ಎಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರೂ ಅರಿತುಕೊಂಡಿದ್ದರು. ಸ್ವಾತಂತ್ರ್ಯದ ನಂತರ, ಭಾರತೀಯ ಭಾಷೆಗಳು ರಾಷ್ಟ್ರ-ನಿರ್ಮಾಣ, ಆಡಳಿತ ಮತ್ತು ಅಭಿವೃದ್ಧಿಯನ್ನು ಪ್ರತಿಯೊಬ್ಬ ನಾಗರಿಕರಿಗೂ ಕೊಂಡೊಯ್ಯುವ ಸಾಧನವಾದವು. ಹಿಂದಿ, ಇತರ ಎಲ್ಲಾ ಭಾರತೀಯ ಭಾಷೆಗಳೊಂದಿಗೆ, ಸಾಮಾಜಿಕ ಜಾಗೃತಿ, ರಾಷ್ಟ್ರೀಯ ಏಕತೆ ಮತ್ತು ಸ್ವಾತಂತ್ರ್ಯದ ಸಂದೇಶವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಶ್ರೀಮಂತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ, ಸಂವಿಧಾನ ಸಭೆಯು
14 ಸೆಪ್ಟೆಂಬರ್ 1949ರಂದು ಹಿಂದಿಯನ್ನು ಭಾರತದ ಒಕ್ಕೂಟದ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. ಆದಾಗ್ಯೂ, ಸ್ವಾತಂತ್ರ್ಯದ ನಂತರ ಒಂದು ವಿಪರ್ಯಾಸವೂ ಹೊರಹೊಮ್ಮಿತು. ನಾವು ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿದಾಗ, ನಮ್ಮದೇ ಭಾಷೆಯ ಮೌಲ್ಯಗಳು, ನಮ್ಮದೇ ಸಂಸ್ಕೃತಿ ಮತ್ತು ನಮ್ಮ ಸ್ವಾಭಿಮಾನವನ್ನು ಮೂಲೆಗುಂಪು ಮಾಡಲಾಯಿತು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಸಾಹತುಶಾಹಿಯ ಈ ಮನಸ್ಥಿತಿಯಿಂದ ಮುಕ್ತರಾಗಲು ಕೆಂಪು ಕೋಟೆಯಿಂದ ರಾಷ್ಟ್ರದ ಜನತೆಗೆ ಕರೆ ನೀಡಿದರು ಮತ್ತು ಇದರಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. 'ರಾಜ್‌ಪಥ್' ಅನ್ನು 'ಕರ್ತವ್ಯ ಪಥ'ವಾಗಿ ಪರಿವರ್ತಿಸಿದ್ದು ಕೇವಲ ಹೆಸರಿನ ಬದಲಾವಣೆಯಾಗಿರಲಿಲ್ಲ. ಬ್ರಿಟಿಷರು ಜಾರಿಗೆ ತಂದ ವಸಾಹತುಶಾಹಿ, ಶಿಕ್ಷೆ-ಆಧಾರಿತ ಕಾನೂನುಗಳ ಬದಲಿಗೆ ಜನಕೇಂದ್ರಿತ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಜಾರಿಗೆ ತಂದಿರುವುದು ಕೇವಲ ಪರಿಭಾಷೆಯ ಬದಲಾವಣೆಯಾಗಿರಲಿಲ್ಲ. ಇದು ನಮ್ಮ ರಾಷ್ಟ್ರೀಯ ಸ್ವಾಭಿಮಾನದ ಮರುಸ್ಥಾಪನೆಯನ್ನು ಪ್ರತಿನಿಧಿಸುತ್ತದೆ.

ಇಂದು, ರಾಷ್ಟ್ರೀಯ ಶಿಕ್ಷಣ ನೀತಿಯು(ನ್‌ಪಿ) ಮಾತೃಭಾಷೆಯನ್ನು ಶಿಕ್ಷಣದ ಹೃದಯಭಾಗದಲ್ಲಿ ಇರಿಸಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತೀಯ ಭಾಷೆಗಳಲ್ಲಿ ನೀಡಲಾಗುತ್ತಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಹು ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತಿದೆ.

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಕೆಂಪು ಕೋಟೆಯಿಂದ, ‘ವಿಕಸಿತ ಭಾರತ’ ನಿರ್ಮಾಣಕ್ಕಾಗಿ ‘ಶಕ್ತಿಯ ಸಪ್ತಧಾರೆಗೆ (ಶಕ್ತಿಯ ಏಳು ಧಾರೆಗಳು) ಕರೆ ನೀಡಿದರು. ಅದರಲ್ಲಿ ಏಳನೇ ಧಾರೆ ‘ಭಾರತದ ಮೃದು ಶಕ್ತಿ’. ಯಾವುದೇ ರಾಷ್ಟ್ರದ ಮೃದು ಶಕ್ತಿಯ  ಅತಿದೊಡ್ಡ ವಾಹಕವು ಅದರ ಭಾಷೆಯಾಗಿರುತ್ತದೆ. ಯೋಗ, ಆಯುರ್ವೇದ, ಸಾಹಿತ್ಯ, ಸಿನಿಮಾ ಮತ್ತು ನಮ್ಮ ಸಾಂಸ್ಕೃತಿಕ ಶಕ್ತಿ-ಇವೆಲ್ಲವೂ ನಮ್ಮ ಭಾಷೆಗಳ ಮೂಲಕವೇ ಜಗತ್ತನ್ನು ತಲುಪುತ್ತವೆ.

ತಂತ್ರಜ್ಞಾನದ ಯುಗದಲ್ಲಿ ಭಾರತೀಯ ಭಾಷೆಗಳು ಹಿಂದುಳಿಯಬಹುದು ಎಂಬ ಆತಂಕ ಒಂದು ಕಾಲದಲ್ಲಿ ಇತ್ತು. ಆದರೆ, ಮೋದಿ ಸರ್ಕಾರದ ಆಡಳಿತದಲ್ಲಿ, ಹಿಂದಿ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳು ತಾಂತ್ರಿಕ ಪ್ರಗತಿಯ ಸುವರ್ಣಯುಗವನ್ನು ಕಾಣುತ್ತಿವೆ.

ಅಧಿಕೃತ ಭಾಷಾ ಇಲಾಖೆಯು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವಾದ 'ಭಾರತಿ' ಇಂದು ಭಾರತೀಯ ಭಾಷೆಗಳ ನಡುವಿನ ಸಂವಹನವನ್ನು ಹೆಚ್ಚು ಸುಗಮಗೊಳಿಸುತ್ತಿದೆ. 8.27 ಲಕ್ಷಕ್ಕೂ ಹೆಚ್ಚು ನಮೂದುಗಳನ್ನು ಹೊಂದಿರುವ ಡಿಜಿಟಲ್ ನಿಘಂಟಾದ 'ಹಿಂದಿ ಶಬ್ದ ಸಿಂಧು', ಜ್ಞಾನ ಹಂಚಿಕೆಯ ಶ್ರೀಮಂತ ವೇದಿಕೆಯಾಗಿ ಹೊರಹೊಮ್ಮಿದೆ. 2024ರಲ್ಲಿ ಸ್ಥಾಪಿಸಲಾದ 'ಭಾರತೀಯ ಭಾಷಾ ವಿಭಾಗ'ವು, ಭಾರತೀಯ ಭಾಷೆಗಳಲ್ಲಿ ಆಡಳಿತಾತ್ಮಕ ಸಂವಹನವನ್ನು ಸುಗಮಗೊಳಿಸುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಅನುವಾದ ತಂತ್ರಜ್ಞಾನಗಳು ಭಾಷೆಯ ಅಡೆತಡೆಗಳನ್ನು ನಿವಾರಿಸಿವೆ. ಇಂದು, ಪ್ರತಿಯೊಬ್ಬ ಭಾರತೀಯನೂ ತನ್ನದೇ ಭಾಷೆಯಲ್ಲಿ ಯೋಚಿಸಬಹುದು ಮತ್ತು ಇಡೀ ಪ್ರಪಂಚದೊಂದಿಗೆ ಸಂವಹನ ನಡೆಸಬಹುದು. ಇದೇವೇಳೆ, ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ, ‘ಅಧಿಕೃತ ಭಾಷೆಯ ಸಂಸದೀಯ ಸಮಿತಿಯು ತನ್ನ ವರದಿಗಳ ನಾಲ್ಕು ಹೊಸ ಸಂಪುಟಗಳನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಿದೆ.

ಕೊನೆಯದಾಗಿ, ನಾನು ಯುವಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಪ್ರಪಂಚದ ಎಷ್ಟು ಭಾಷೆಗಳನ್ನು ಕಲಿಯಲು ಸಾಧ್ಯವೋ ಅಷ್ಟು ಕಲಿಯಿರಿ, ಆದರೆ ನಿಮ್ಮ ಸ್ವಂತ ಭಾಷೆಯನ್ನು ಎಂದಿಗೂ ಕೈಬಿಡಬೇಡಿ. ದೇಶಾದ್ಯಂತದ ಎಲ್ಲಾ ಪೋಷಕರು ತಮ್ಮ ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಸಂವಹನ ನಡೆಸಲು ಆದ್ಯತೆ ನೀಡಬೇಕೆಂದು ನಾನು ವಿನಂತಿಸುತ್ತೇನೆ. "ನನ್ನದೇ ಭಾಷೆಯಲ್ಲಿ ಮಾತನಾಡಿದರೆ, ನನ್ನನ್ನು ಕೀಳಾಗಿ ಕಾಣಲಾಗುತ್ತದೆ" ಎಂಬ ಚಿಂತನೆಗಿಂತ ಮಿಗಿಲಾದ ಕೀಳರಿಮೆ ಮತ್ತೊಂದಿಲ್ಲ.

ಭಾಷೆಯು ನಮ್ಮನ್ನು ನಮ್ಮ ತಾಯಿ, ನಮ್ಮ ಮಣ್ಣು, ನಮ್ಮ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕಿಸುತ್ತದೆ. ಈ ವರ್ಷ ಭಾಷೆಯನ್ನು ಸ್ವಾತಂತ್ರ್ಯದ ಅಸ್ತ್ರವಾಗಿ ಪರಿವರ್ತಿಸಿದ ಹಾಡು 'ವಂದೇ ಮಾತರಂ' ಎಂಬ ರಾಷ್ಟ್ರೀಯ ಗೀತೆಯ ರಚನೆಯ 150 ನೇ ವಾರ್ಷಿಕೋತ್ಸವವನ್ನು ಸಹ ಆಗಿದೆ.

ಈ ಸಂದರ್ಭದಲ್ಲಿ, 2047ರ ವೇಳೆಗೆ ‘ವಿಕಸಿತ ಭಾರತ’ವನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿ ಹಿಂದಿ ಮತ್ತು ಎಲ್ಲಾ ಭಾರತೀಯ ಭಾಷೆಗಳನ್ನು ಪ್ರಬಲ ಸಾಧನಗಳನ್ನಾಗಿ ಮಾಡಲು ಸಂಕಲ್ಪ ಮಾಡೋಣ.

ಮತ್ತೊಮ್ಮೆ, ಅಧಿಕೃತ ಭಾಷಾ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ವಂದೇ ಮಾತರಂ!

 

*****


(ಪ್ರಕಟಣೆ ಐ.ಡಿ.: 2310125) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Manipuri , Assamese , Punjabi , Gujarati , Tamil