ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ನೀಟ್ ಪಿಜಿ-2026 ಅತ್ಯಂತ ಭದ್ರತೆ ಮತ್ತು ನೈಜ ಸಮಯದ ಮೇಲ್ವಿಚಾರಣೆಯೊಂದಿಗೆ ದೇಶಾದ್ಯಂತ ಯಶಸ್ವಿಯಾಗಿ ಮುಕ್ತಾಯ
ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 339 ನಗರಗಳ 1,111 ಕೇಂದ್ರಗಳಲ್ಲಿ 2.73 ಲಕ್ಷ ಅಭ್ಯರ್ಥಿಗಳಿಗೆ ಪರೀಕ್ಷೆ ಆಯೋಜನೆ; 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು
ಜೈಪುರದ ಎರಡು ಕೇಂದ್ರಗಳಲ್ಲಿ ತಾಂತ್ರಿಕ ಅಡಚಣೆಯಿಂದ ಸಂಕಷ್ಟಕ್ಕೊಳಗಾದ 2,445 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5, 2026 ರಂದು ಮರುಪರೀಕ್ಷೆ
ಪ್ರಕಟಣಾ ದಿನಾಂಕ:
30 AUG 2026 1:56PM by PIB Bengaluru
ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (ಎನ್ ಬಿ ಇ ಎಂ ಎಸ್) ಇಂದು, 30 ಆಗಸ್ಟ್ 2026 ರಂದು, ನ್ಯಾಯಯುತ, ಸುರಕ್ಷಿತ ಮತ್ತು ಸುಗಮ ಪರೀಕ್ಷಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ, ತಾಂತ್ರಿಕ, ಭದ್ರತೆ ಮತ್ತು ಸಿಬ್ಬಂಧಿಯ ವ್ಯವಸ್ಥೆಗಳೊಂದಿಗೆ ದೇಶಾದ್ಯಂತ ನೀಟ್ ಪಿಜಿ-2026ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ 339 ನಗರಗಳ 1,111 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2,73,096 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಒಟ್ಟು 2,65,980 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಸುಮಾರು 2,63,535 ಅಭ್ಯರ್ಥಿಗಳಿಗೆ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
ದೇಶಾದ್ಯಂತ ನಡೆದ ಈ ಪರೀಕ್ಷೆಗೆ ವ್ಯಾಪಕವಾದ ನೈಜ ಸಮಯದ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಬೆಂಬಲವಿತ್ತು. ಪರೀಕ್ಷೆಯ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ಒಟ್ಟು 2,527 ಅಧ್ಯಾಪಕರನ್ನು ಸ್ವತಂತ್ರ ಮೌಲ್ಯಮಾಪಕರಾಗಿ ನೇಮಿಸಲಾಗಿತ್ತು. ಜೊತೆಗೆ, ಡೀನ್ಗಳು, ನಿರ್ದೇಶಕರು, ಮೆಡಿಕಲ್ ಸೂಪರಿಂಟೆಂಡೆಂಟ್ ಗಳು ಮತ್ತು ಹಿರಿಯ ಪ್ರಾಧ್ಯಾಪಕರು ಸೇರಿದಂತೆ 700 ಕ್ಕೂ ಹೆಚ್ಚು ಹಿರಿಯ ಅಧ್ಯಾಪಕರನ್ನು ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರಾಗಿ ನಿಯೋಜಿಸಲಾಗಿತ್ತು.
ಸಮನ್ವಯ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲು, ದೇಶಾದ್ಯಂತ 16 ಎನ್ ಬಿ ಇ ಎಂ ಎಸ್ ಪ್ರಾದೇಶಿಕ ಕಮಾಂಡ್ ಸೆಂಟರ್ ಗಳನ್ನು ಕಾರ್ಯನಿರತಗೊಳಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳನ್ನು ನೇರ ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿತ್ತು ಮತ್ತು ದ್ವಾರಕಾದಲ್ಲಿರುವ ಎನ್ ಬಿ ಇ ಎಂ ಎಸ್ ಪ್ರಧಾನ ಕಚೇರಿಯ ಕಮಾಂಡ್ ಸೆಂಟರ್ ನಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ನೈಜ ಸಮಯದ ಕಣ್ಗಾವಲು ಮತ್ತು ಮೇಲ್ವಿಚಾರಣೆಗಾಗಿ ಎನ್ ಬಿ ಇ ಎಂ ಎಸ್ಮತ್ತು ಟಿ ಸಿ ಎಸ್ ನಿಂದ 190 ಸಿಬ್ಬಂದಿಗಳ ನಿಗದಿತ ತಂಡವನ್ನು ನಿಯೋಜಿಸಲಾಗಿತ್ತು.
ಎನ್ ಬಿ ಇ ಎಂ ಎಸ್ ಪ್ರಧಾನ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನಲ್ಲಿ, ಎನ್ ಬಿ ಇ ಎಂ ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಬಿಇಎಲ್, ಇಸಿಐಎಲ್ ಮತ್ತು ಟಿಸಿ ಎಸ್ ನ ಹಿರಿಯ ಅಧಿಕಾರಿಗಳು ದಿನವಿಡೀ ಪರೀಕ್ಷಾ ಪ್ರಕ್ರಿಯೆಯ ನಿಕಟ ಮತ್ತು ನಿರಂತರ ಮೇಲ್ವಿಚಾರಣೆಯನ್ನು ನಿರ್ವಹಿಸಿದರು.
ಪರೀಕ್ಷಾ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ನಕಲಿ ಅಭ್ಯರ್ಥಿಗಳನ್ನು ತಡೆಗಟ್ಟುವ ಕ್ರಮವಾಗಿ, ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಆಧಾರ್ ಆಧಾರಿತ ದೃಢೀಕರಣವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಸರ್ಕಾರಿ ಸಂಸ್ಥೆಗಳು ಪರೀಕ್ಷೆಯನ್ನು ಸುರಕ್ಷಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡಿದವು.
ದೇಶಾದ್ಯಂತ ಬಹುಪಾಲು ಅಭ್ಯರ್ಥಿಗಳಿಗೆ ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದರೂ, ರಾಜಸ್ಥಾನದ ಜೈಪುರದ ಸೀತಾಪುರದ ಐಒಎನ್ ಡಿಜಿಟಲ್ ವಲಯ ಐಡಿಝಡ್ ಕೇಂದ್ರಗಳಲ್ಲಿ (ಟಿಸಿ ಸಂಖ್ಯೆ 41682 ಮತ್ತು 41683) ಅನಿರೀಕ್ಷಿತ ತಾಂತ್ರಿಕ ಅಡಚಣೆ ಉಂಟಾಯಿತು. ಪರೀಕ್ಷಾ ಏಜೆನ್ಸಿಯಾದ ಟಿಸಿಎಸ್ ಲಿಮಿಟೆಡ್ ನ ಆಂತರಿಕ ವಿದ್ಯುತ್ ಸರಬರಾಜು ಸಮಸ್ಯೆಯಿಂದಾಗಿ ಅಲ್ಲಿನ 2,445 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ಎನ್ ಬಿ ಇ ಎಂ ಎಸ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಅವರಿಗೆ ನೀಟ್ ಪಿಜಿ-2026 ರಲ್ಲಿ ಹಾಜರಾಗಲು ನ್ಯಾಯಯುತ ಮತ್ತು ಸಮಾನ ಅವಕಾಶವನ್ನು ಒದಗಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದೆ.
ಅದರಂತೆ, ತೊಂದರೆಗೊಳಗಾದ ಎಲ್ಲಾ ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ಶನಿವಾರ, 5 ಸೆಪ್ಟೆಂಬರ್ 2026 ರಂದು ಮಧ್ಯಾಹ್ನ 3:00 ಗಂಟೆಗೆ ರಾಜಸ್ಥಾನದ ಜೈಪುರದಲ್ಲಿ ನಡೆಸಲಾಗುವುದು. ಪರೀಕ್ಷಾ ಕೇಂದ್ರದ ವಿವರಗಳು ಮತ್ತು ಇತರ ಸೂಚನೆಗಳನ್ನು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುವುದು.
339 ನಗರಗಳ 1,111 ಕೇಂದ್ರಗಳಲ್ಲಿ ಪರೀಕ್ಷೆಯು ಯಶಸ್ವಿಯಾಗಿ ನಡೆದಿರುವುದು ಪರೀಕ್ಷಾ ಪ್ರಾಧಿಕಾರಗಳು, ವೈದ್ಯಕೀಯ ಸಂಸ್ಥೆಗಳು, ಅಧ್ಯಾಪಕರು, ಭದ್ರತಾ ಸಂಸ್ಥೆಗಳು, ತಂತ್ರಜ್ಞಾನ ತಂಡಗಳು ಮತ್ತು ದೇಶಾದ್ಯಂತ ಭಾಗವಹಿಸಿದ ಇತರ ಎಲ್ಲಾ ಪಾಲುದಾರರ ನಡುವಿನ ವ್ಯಾಪಕ ಸಮನ್ವಯವನ್ನು ತೋರಿಸುತ್ತದೆ.
ಎನ್ ಬಿ ಇ ಎಂ ಎಸ್ ಅಭ್ಯರ್ಥಿಗಳ ಸಹಕಾರ, ತಾಳ್ಮೆ ಮತ್ತು ನಂಬಿಕೆಯನ್ನು ಶ್ಲಾಘಿಸುತ್ತದೆ ಮತ್ತು ನೀಟ್ ಪಿಜಿ-2026 ರ ನಿರ್ವಹಣೆಯೊಂದಿಗೆ ಸಂಬಂಧಿಸಿದ ಎಲ್ಲಾ ಸಿಬ್ಬಂದಿ ಮತ್ತು ಸಂಸ್ಥೆಗಳ ಸಮರ್ಪಿತ ಶ್ರಮವನ್ನು ಶ್ಲಾಘಿಸುತ್ತದೆ.
*****
(ಪ್ರಕಟಣೆ ಐ.ಡಿ.: 2304664)
ವಿಸಿಟರ್ ಕೌಂಟರ್ : 15