ಜವಳಿ ಸಚಿವಾಲಯ
ನಾಳೆ ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ ಸಂಯೋಜಿತ ‘ಎನ್ಐಎಫ್‌ಟಿ’ ಘಟಿಕೋತ್ಸವದಲ್ಲಿ ಭಾಗವಹಿಸಲಿರುವ ಭಾರತದ ರಾಷ್ಟ್ರಪತಿ
ದೇಶಾದ್ಯಂತದ 18 ‘ಎನ್ಐಎಫ್‌ಟಿ’ ಕ್ಯಾಂಪಸ್‌ಗಳಿಂದ ಪದವಿ ಪಡೆದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಲು ಸಂಯೋಜಿತ ಘಟಿಕೋತ್ಸವ ಆಯೋಜಿಸಲಾಗಿದೆ
ಪ್ರಕಟಣಾ ದಿನಾಂಕ:
30 AUG 2026 9:35AM by PIB Bengaluru
'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ'ಯ(ಎನ್‌ಐಎಫ್‌ಟಿ) ಅಧಿಕೃತ ಸಂದರ್ಶಕರಾದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 31 ಆಗಸ್ಟ್ 2026ರಂದು ನವದೆಹಲಿಯಲ್ಲಿ ನಡೆಯಲಿರುವ 2026ನೇ ಸಾಲಿನ ‘ಎನ್‌ಐಎಫ್‌ಟಿ’ ಸಂಯೋಜಿತ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೇಶಾದ್ಯಂತದ 18 ಎನ್‌ಐಎಫ್‌ಟಿ ಕ್ಯಾಂಪಸ್‌ಗಳ ಪದವಿ ವಿದ್ಯಾರ್ಥಿಗಳು ತಮ್ಮ ಪದವಿಗಳ ಪ್ರದಾನವನ್ನು ಆಚರಿಸಲು ಮತ್ತು ಸಂಸ್ಥೆಯಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣದ ಪರಾಕಾಷ್ಠೆಯನ್ನು ಗುರುತಿಸಲು ಒಟ್ಟಾಗಿ ಸೇರಲಿದ್ದಾರೆ. ಈ ಸಂದರ್ಭವು ಪದವೀಧರ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆ, ಸೃಜನಶೀಲತೆ, ಸಮರ್ಪಣಾ ಮನೋಭಾವ ಮತ್ತು ಸಾಧನೆಗಳನ್ನು ಸಹ ಗೌರವಿಸಲಿದೆ.
ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರೊಂದಿಗೆ ಇತರ ಗಣ್ಯರು, ಆಡಳಿತ ಮಂಡಳಿಯ ಸದಸ್ಯರು, ಹಿರಿಯ ಅಧಿಕಾರಿಗಳು, ಬೋಧಕ ಸಿಬ್ಬಂದಿ, ವಿದ್ವಾಂಸರು ಹಾಗೂ ಪದವೀಧರ ವಿದ್ಯಾರ್ಥಿಗಳೊಂದಿಗೆ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಘಟಿಕೋತ್ಸವವು ‘ಎನ್‌ಐಎಫ್‌ಟಿ’ಯ ಪದವೀಧರ ವಿದ್ಯಾರ್ಥಿಗಳ ಸಾಧನೆಗಳನ್ನು ಸಂಭ್ರಮಿಸಲಿದ್ದು, ಸಂಸ್ಥೆಯಲ್ಲಿ ಕಳೆದ ವರ್ಷಗಳಲ್ಲಿ ಅವರ ಶೈಕ್ಷಣಿಕ ಉತ್ಕೃಷ್ಟತೆ, ಸೃಜನಶೀಲತೆ, ಸಮರ್ಪಣೆ ಮತ್ತು ಕೊಡುಗೆಗಳನ್ನು ಗುರುತಿಸಲಿದೆ. ಕ್ಯಾಂಪಸ್‌ಗಳಾದ್ಯಂತ ಪ್ರತಿಯೊಂದು ವಿಭಾಗದಲ್ಲಿ ಅತಿ ಹೆಚ್ಚು ‘ಸಿಜಿಪಿಎ’ ಗಳಿಸಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಚಿನ್ನದ ಪದಕ ನೀಡಿ ಸನ್ಮಾನಿಸಲಾಗುತ್ತದೆ.
ಸಂಯುಕ್ತ ಘಟಿಕೋತ್ಸವದ ನಂತರ ಕ್ಯಾಂಪಸ್-ವಾರು ಪದವಿ ವಿತರಣಾ ಸಮಾರಂಭಗಳು ನಡೆಯಲಿದ್ದು, ಅಲ್ಲಿ ವಿದ್ಯಾರ್ಥಿಗಳು ಔಪಚಾರಿಕವಾಗಿ ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಶೈಕ್ಷಣಿಕ ಜೀವನದಿಂದ ವೃತ್ತಿಪರ ಜಗತ್ತಿಗೆ ಹೆಜ್ಜೆ ಇಡಲಿದ್ದಾರೆ.
ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿ 1986 ರಲ್ಲಿ ಸ್ಥಾಪನೆಯಾದ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ'ಯು(ಎನ್‌ಐಎಫ್‌ಟಿ) 'ಎನ್‌ಐಎಫ್‌ಟಿ ಕಾಯ್ದೆ-2006’ರ ಅಡಿಯಲ್ಲಿ ನಿಯಂತ್ರಿಸಲ್ಪಡುವ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಕಳೆದೆರಡು ದಶಕಗಳಲ್ಲಿ, ಈ ಸಂಸ್ಥೆಯು ಸಾಂಪ್ರದಾಯಿಕ ಕಲೆ ಮತ್ತು ಕರಕುಶಲತೆ, ಶೈಕ್ಷಣಿಕ ಜ್ಞಾನ, ವಿನ್ಯಾಸ ನಾವೀನ್ಯತೆ, ತಂತ್ರಜ್ಞಾನ, ಸೃಜನಶೀಲ ಚಿಂತನೆ ಮತ್ತು ಉದ್ಯಮದ ಸಹಭಾಗಿತ್ವವನ್ನು ಒಗ್ಗೂಡಿಸಿ ಫ್ಯಾಷನ್ ಶಿಕ್ಷಣದ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ.
ದೇಶಾದ್ಯಂತ ವೃತ್ತಿಪರವಾಗಿ ನಿರ್ವಹಿಸಲ್ಪಡುತ್ತಿರುವ 20 ಕ್ಯಾಂಪಸ್‌ಗಳೊಂದಿಗೆ, ಎಲ್ಲರನ್ನೂ ಒಳಗೊಳ್ಳುವ ಕ್ರಿಯಾತ್ಮಕ ಕಲಿಕಾ ವಾತಾವರಣವನ್ನು ಸೃಷ್ಟಿಸುವುದನ್ನು ‘ಎನ್‌ಐಎಫ್‌ಟಿ’ ಮುಂದುವರೆಸಿದೆ. ಇದು ಭಾರತದ ಫ್ಯಾಷನ್ ಮತ್ತು ಸೃಜನಶೀಲ ಕ್ಷೇತ್ರಗಳಿಗೆ ಕೊಡುಗೆ ನೀಡಲು ಯುವ ಪ್ರತಿಭೆಗಳಿಗೆ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಒದಗಿಸುತ್ತಿದೆ.
ಸಂಯುಕ್ತ ಘಟಿಕೋತ್ಸವ 2026 ಕಲ್ಪನೆಗಳನ್ನು ಸಾಧ್ಯತೆಗಳನ್ನಾಗಿ ಹಾಗೂ ಸೃಜನಶೀಲತೆಯನ್ನು ಪ್ರಭಾವವನ್ನಾಗಿ ಪರಿವರ್ತಿಸಲು ಕಲಿತ ಪೀಳಿಗೆಯನ್ನು ಸಂಭ್ರಮಿಸುವ ಕ್ಷಣವಾಗಿದೆ. ಪದವೀಧರರು ಸಂಸ್ಥೆಯಿಂದ ಹೊರಹೋಗುತ್ತಿದ್ದಂತೆ, ಹೊಸ ನಿರೂಪಣೆಗಳನ್ನು ರೂಪಿಸುವ, ಅರ್ಥಪೂರ್ಣ ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು ಭಾರತದ ವಿಕಸನಗೊಳ್ಳುತ್ತಿರುವ ಸೃಜನಶೀಲ ಕ್ಷೇತ್ರಕ್ಕೆ ಕೊಡುಗೆ ನೀಡುವ ಆತ್ಮವಿಶ್ವಾಸವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ‘ಎನ್‌ಐಎಫ್‌ಟಿ’ಯಲ್ಲಿ ಅವರ ಪಯಣವು ಔಪಚಾರಿಕ ಮುಕ್ತಾಯವನ್ನು ತಲುಪುತ್ತಿರಬಹುದು, ಆದರೆ ಅವರ ಕಲ್ಪನೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಯ ಪಯಣವು ಇದೀಗಷ್ಟೇ ಪ್ರಾರಂಭವಾಗುತ್ತಿದೆ.
ಆದ್ದರಿಂದ, ಈ ಸಂದರ್ಭವು ಸಾಧನೆಯ ಸಂಭ್ರಮಾಚರಣೆ ಹಾಗೂ ಭವಿಷ್ಯದ ಹೆಬ್ಬಾಗಿಲಾಗಿ ನಿಲ್ಲಲಿದೆ. ಪದವೀಧರ ವಿದ್ಯಾರ್ಥಿಗಳ ಸಾಧನೆಗಳನ್ನು ಗೌರವಿಸುವುದರ ಜೊತೆಗೆ, 'ನವ ಭಾರತ'ದ ಫ್ಯಾಷನ್, ವಿನ್ಯಾಸ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಅವರು ವಹಿಸಲಿರುವ ಪಾತ್ರವನ್ನು ಎದುರುನೋಡುತ್ತದೆ. ಅವರ ಪ್ರತಿಭೆ, ಉದ್ಯಮಶೀಲತೆ ಮತ್ತು ದೃಷ್ಟಿಕೋನದಲ್ಲಿ ಹೆಚ್ಚು ಸೃಜನಶೀಲ, ನವೀನ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ 'ವಿಕಸಿತ ಭಾರತ'ದ ಭರವಸೆ ಅಡಗಿದೆ.
'ಎನ್‌ಐಎಫ್‌ಟಿ’ಯ ಸೃಜನಶೀಲತೆ ಮತ್ತು ಉತ್ಕೃಷ್ಟತೆಯ ಮನೋಭಾವದಲ್ಲಿ ಬೇರೂರಿರುವ ಈ ಪದವೀಧರ ಬ್ಯಾಚ್, ಭಾರತದ ಫ್ಯಾಷನ್ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಹೊಸ ನಿರೂಪಣೆಗಳನ್ನು ರೂಪಿಸಲು ಸಜ್ಜಾಗಿದೆ. ಸಂಸ್ಥೆಯಲ್ಲಿ ಅವರ ಪಯಣ ಮುಕ್ತಾಯಗೊಳ್ಳುತ್ತದೆ, ಆದರೆ ನಾವೀನ್ಯತೆ ಮತ್ತು ಪ್ರಭಾವದ ಅವರ ಪಯಣವು ಅಣಿಯಾಗುತ್ತಿದೆ.
*****
(ಪ್ರಕಟಣೆ ಐ.ಡಿ.: 2304641)
ವಿಸಿಟರ್ ಕೌಂಟರ್ : 7