ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ - ರಾಜ್ಯ ಸಮನ್ವಯವನ್ನು ಬಲಪಡಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಐ&ಪಿಆರ್) ಕಾರ್ಯದರ್ಶಿಗಳೊಂದಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿತು


ವೇವ್ಸ್ 2027ರಿಂದ ನೇರಪ್ರಸಾರ ಕಾರ್ಯಕ್ರಮಗಳವರೆಗೆ: ಭಾರತದ ಸೃಜನಶೀಲ ಆರ್ಥಿಕತೆ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಚಿವಾಲಯದಿಂದ ಮಾರ್ಗಸೂಚಿ

ಪ್ರಕಟಣಾ ದಿನಾಂಕ: 25 AUG 2026 6:46PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು. ಮಾಹಿತಿ, ಪ್ರಸಾರ, ಮಾಧ್ಯಮ ಮತ್ತು ಸೃಜನಶೀಲ ಆರ್ಥಿಕತೆಯ ಕ್ಷೇತ್ರಗಳಲ್ಲಿನ ಪ್ರಮುಖ ಉಪಕ್ರಮಗಳ ಕುರಿತು ಚರ್ಚಿಸಲು ಹಾಗೂ ಸಮನ್ವಯವನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಚರ್ಚೆಯಲ್ಲಿ ಭಾಗವಹಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಭಾರತದ ಸಾಫ್ಟ್‌ ಪವರ್ ಮತ್ತು ಸೃಜನಶೀಲ ಆರ್ಥಿಕತೆಯನ್ನು ರಾಷ್ಟ್ರೀಯ ಪ್ರಗತಿಯ ʼಸಪ್ತಧಾರಾʼಗಳಲ್ಲಿ ಒಂದಾಗಿ ಪರಿಗಣಿಸಿರುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಕಾರ್ಯದರ್ಶಿಯವರು, ಭಾರತದ ಅಪಾರ ಸೃಜನಶೀಲ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸಾರ್ವಜನಿಕ ಸಂವಹನವನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಇನ್ನಷ್ಟು ಬಲವಾದ ಹಾಗೂ ವ್ಯವಸ್ಥಿತ ಸಹಕಾರದ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಸಂಸ್ಕೃತಿ, ಸೃಜನಶೀಲತೆ ಮತ್ತು ವಾಣಿಜ್ಯವನ್ನು ಒಳಗೊಂಡಿರುವ ಸೃಜನಶೀಲ ಆರ್ಥಿಕತೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಹೂಡಿಕೆಯನ್ನು ಆಕರ್ಷಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವೈವಿಧ್ಯಮಯ ಸಾಮರ್ಥ್ಯಗಳನ್ನು ಪ್ರಸ್ತಾಪಿಸಿದ ಕಾರ್ಯದರ್ಶಿಯವರು, ಸೃಜನಶೀಲ ಆರ್ಥಿಕತೆಯ ಬೆಳವಣಿಗೆಗೆ ಒಂದೇ ಮಾದರಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಾಂಸ್ಕೃತಿಕ ಸಾಮರ್ಥ್ಯ, ಸಾಂಸ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ಪ್ರತಿಭೆಯನ್ನು ಸದುಪಯೋಗಪಡಿಸಿಕೊಂಡು ಅವುಗಳ ಸೃಜನಶೀಲ ಸಾಮರ್ಥ್ಯವನ್ನು ಸಾಕಾರಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು.

ಮೂಲಸೌಕರ್ಯ, ಸುಲಭ ವ್ಯವಹಾರ, ಸಾಮರ್ಥ್ಯವರ್ಧನೆ, ಪ್ರಾದೇಶಿಕ ವಿಷಯ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಗಳು ಸೇರಿದಂತೆ ಕೇಂದ್ರ–ರಾಜ್ಯಗಳ ನಡುವೆ ಹೆಚ್ಚಿನ ಸಹಯೋಗ ಅಗತ್ಯವಿರುವ ಕ್ಷೇತ್ರಗಳನ್ನೂ ಅವರು ಪ್ರಸ್ತಾಪಿಸಿದರು. ವೇವ್ಸ್ 2027, ವೇವ್ಸ್‌ ಬಜಾರ್, ವೇವ್‌ ಎಕ್ಸ್ ಮತ್ತು ಕ್ರಿಯೇಟ್‌ ಇನ್‌ ಇಂಡಿಯಾ ಚಾಲೆಂಜ್‌ ನಂತಹ ರಾಷ್ಟ್ರೀಯ ವೇದಿಕೆಗಳು ದೇಶದ ವಿವಿಧ ಭಾಗಗಳ ಸೃಜನಶೀಲರು ಮತ್ತು ನವೋದ್ಯಮಗಳಿಗೆ ಮಾರುಕಟ್ಟೆಗಳು, ಹೂಡಿಕೆದಾರರು, ತಂತ್ರಜ್ಞಾನ ಹಾಗೂ ಜಾಗತಿಕ ಸಹಭಾಗಿತ್ವಗಳಿಗೆ ಹೆಚ್ಚಿನ ಪ್ರವೇಶಾವಕಾಶ ಒದಗಿಸಬಲ್ಲವು ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಭಾಗವಹಿಸಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ವಿವಿಧ ಉಪಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದ ತಮ್ಮ ಅನುಭವಗಳು ಮತ್ತು ಕಾಳಜಿಗಳನ್ನು ಹಂಚಿಕೊಂಡರು. ಸಚಿವಾಲಯದೊಂದಿಗೆ ಸಮನ್ವಯ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ರಾಜ್ಯ ಮಟ್ಟದಲ್ಲಿ ಸಾಮರ್ಥ್ಯವರ್ಧನೆಯ ಅಗತ್ಯವನ್ನೂ ಒತ್ತಿಹೇಳಲಾಯಿತು. ಹೆಚ್ಚಿನ ಸಂವಹನ, ತೊಡಗಿಸಿಕೊಳ್ಳುವಿಕೆ ಮತ್ತು ನಿಯಮಿತ ಸಮ್ಮೇಳನಗಳ ಮೂಲಕ ಸಚಿವಾಲಯದಿಂದ ಹೆಚ್ಚಿನ ಬೆಂಬಲವನ್ನು ರಾಜ್ಯಗಳು ಕೋರಿದವು. ಆರೆಂಜ್ ಎಕಾನಮಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಚಿವಾಲಯದೊಂದಿಗೆ ಇನ್ನಷ್ಟು ನಿಕಟವಾಗಿ ಸಹಕರಿಸಲು ಮತ್ತು ಸಕ್ರಿಯವಾಗಿ ಪಾಲ್ಗೊಳ್ಳಲು ಅಧಿಕಾರಿಗಳು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯ ಸರ್ಕಾರಗಳು ಕೇಬಲ್ ಆಪರೇಟರ್‌ ಗಳಿಗೆ ರೈಟ್ ಆಫ್ ವೇ (ಆರ್‌ ಒ ಡಬ್ಲ್ಯೂ) ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು; ವೇವ್ಸ್ 2027ರ ಮಾರ್ಗಸೂಚಿ; ವೇವ್ಸ್‌ ಬಜಾರ್ ಮತ್ತು ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುವುದು; ಸಾರ್ವಜನಿಕ ಸೇವಾ ಪ್ರಸಾರ ಮೂಲಸೌಕರ್ಯದ ವಿಸ್ತರಣೆ; ವೇವ್ಸ್‌ ಒಟಿಟಿ ವೇದಿಕೆಯಲ್ಲಿ ಬಳಕೆದಾರರು ಸೃಷ್ಟಿಸುವ ಸೃಜನಶೀಲ ವಿಷಯಗಳಿಗೆ ಉತ್ತೇಜನ ನೀಡುವುದು; ಇಂಡಿಯನ್ ಸಿನೆ ಹಬ್ (ಐಸಿಎಚ್) ಮತ್ತು ಫಿಲ್ಮ್ ಫೆಸಿಲಿಟೇಶನ್ ಆಫೀಸ್ (ಎಫ್‌ ಎಫ್‌ ಒ) ಪೋರ್ಟಲ್‌‌ ಗಳ ದ್ವಿಮುಖ ಏಕೀಕರಣ; ಹಾಗೂ ಚಲನಚಿತ್ರ ಚಿತ್ರೀಕರಣ ಮತ್ತು ನೇರ ಕಾರ್ಯಕ್ರಮಗಳ ಅನುಮತಿಗಳಿಗಾಗಿ ಏಕಗವಾಕ್ಷಿ ಐಸಿಎಚ್ ಪೋರ್ಟಲ್ ಅಳವಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.

ಸಾರ್ವಜನಿಕ ಸೇವಾ ಪ್ರಸಾರವನ್ನು ವಿಷಯಗಳ ಸಹ-ನಿರ್ಮಾಣ, ರಾಜ್ಯ-ನಿರ್ದಿಷ್ಟ ಕಾರ್ಯಕ್ರಮಗಳು ಮತ್ತು ಹೆಚ್ಚಿನ ಸಾರ್ವಜನಿಕ ಸಂಪರ್ಕದ ಮೂಲಕ ಬಲಪಡಿಸುವುದು; ನೇರ ಪ್ರಸಾರ ಕಾರ್ಯಕ್ರಮಗಳ ಕ್ಷೇತ್ರಕ್ಕೆ ಉತ್ತೇಜನ ನೀಡುವುದು; ಐಐಎಂಸಿ ತರಬೇತಿ ಸೌಲಭ್ಯಗಳ ಮೂಲಕ ಡಿಐಪಿಆರ್ ಅಧಿಕಾರಿಗಳ ಸಾಮರ್ಥ್ಯವರ್ಧನೆ; ಪ್ರೆಸ್ ಸೇವಾ ಪೋರ್ಟಲ್ ಮೂಲಕ ಪ್ರೆಸ್ ಮತ್ತು ನಿಯತಕಾಲಿಕಗಳ ನೋಂದಣಿ (ಪಿ ಆರ್‌ ಪಿ) ಕಾಯ್ದೆ, 2023ರ ಅಡಿಯಲ್ಲಿ ಡಿಜಿಟಲ್ ಚೌಕಟ್ಟಿಗೆ ಪರಿವರ್ತನೆ; ಮತ್ತು ಸಮಗ್ರ ಶಿಕ್ಷಣ ಚೌಕಟ್ಟಿನ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುವ ಮೂಲಕ ಗ್ರಂಥಾಲಯಗಳ ಬಲವರ್ಧನೆ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು.‌

ಸಾರ್ವಜನಿಕ ಸೇವಾ ಪ್ರಸಾರ, ನೇರ ಕಾರ್ಯಕ್ರಮಗಳ ಕ್ಷೇತ್ರ, ಡಿಐಪಿಆರ್ ಅಧಿಕಾರಿಗಳ ಸಾಮರ್ಥ್ಯವರ್ಧನೆ, ಮಾಧ್ಯಮ ಮತ್ತು ಪ್ರಕಟಣಾ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆ ಹಾಗೂ ಸಾರ್ವಜನಿಕ ಸಂಪರ್ಕ ಉಪಕ್ರಮಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಸಮ್ಮೇಳನದಲ್ಲಿ ಮತ್ತಷ್ಟು ಚರ್ಚೆ ನಡೆಯಿತು.

ರಾಜ್ಯ-ನಿರ್ದಿಷ್ಟ ವಿಷಯವಸ್ತು ಮತ್ತು ಸಾರ್ವಜನಿಕ ಸಂಪರ್ಕಕ್ಕಾಗಿ ಪಿಐಬಿ ಪ್ರಾದೇಶಿಕ ಕಚೇರಿಗಳು, ರಾಜ್ಯಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಹಾಗೂ ದೂರದರ್ಶನ ಮತ್ತು ಆಕಾಶವಾಣಿಯ ಪ್ರಾದೇಶಿಕ ಘಟಕಗಳ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವಿದೆ ಎಂದು ಕಾರ್ಯದರ್ಶಿಯವರು ಕರೆ ನೀಡಿದರು. ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ಸಾರ್ವಜನಿಕ ಸಂವಹನವನ್ನು ಸುಧಾರಿಸಲು ಹೊಸ ಆಲೋಚನೆಗಳು, ರಾಜ್ಯಗಳ ನೇತೃತ್ವದ ಉಪಕ್ರಮಗಳು ಮತ್ತು ಸಹಭಾಗಿತ್ವದ ಮಾದರಿಗಳಿಗೆ ಸಚಿವಾಲಯ ಮುಕ್ತವಾಗಿದೆ ಎಂದು ಅವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದರು. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿಕಟ ಸಮನ್ವಯ ಹಾಗೂ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸಿತು.

 

*****


(ಪ್ರಕಟಣೆ ಐ.ಡಿ.: 2303338) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Khasi , Urdu , हिन्दी , Assamese , Punjabi , Gujarati , Odia , Tamil , Telugu