ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಹಬ್ಬದ ಋತುವಿನಲ್ಲಿ ಸಕ್ಕರೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಲೆ ಏರಿಕೆಯನ್ನು ತಡೆಯಲು ಸರ್ಕಾರದ ಕ್ರಮ

प्रविष्टि तिथि: 21 AUG 2026 5:28PM by PIB Bengaluru

ಇತ್ತೀಚಿನ ವಾರಗಳಲ್ಲಿ ಸಕ್ಕರೆ ಬೆಲೆಯು ಜುಲೈ 20, 2026 ರಂದು ಕೆಜಿಗೆ ₹48.18 ಇದ್ದದ್ದು, ಆಗಸ್ಟ್ 20, 2026ರ ವೇಳೆಗೆ ಕೆಜಿಗೆ ₹55.70ಕ್ಕೆ ಏರಿಕೆಯಾಗಿದೆ. ಸರ್ಕಾರವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಗ್ರಾಹಕರಿಗೆ ಸಕ್ಕರೆಯ ಸಮರ್ಪಕ ಲಭ್ಯತೆ ಮತ್ತು ಸ್ಥಿರ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರಣಿ ಕ್ರಮಗಳನ್ನು ಕೈಗೊಂಡಿದೆ.

ಸಕ್ಕರೆ ಬೆಲೆ ಏರಿಕೆಗೆ ಎಥನಾಲ್ ಕಾರಣವಲ್ಲ

ಸಕ್ಕರೆ ಬೆಲೆಯ ಇತ್ತೀಚಿನ ಏರಿಕೆಗೆ ಎಥನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಬಳಸಿರುವುದೇ ಕಾರಣ ಎಂದು ಹೇಳುವುದು ಸರಿಯಲ್ಲ.

ವಾಸ್ತವವಾಗಿ, ಎಥನಾಲ್‌ಗೆ ಬಳಸಲಾದ ಸಕ್ಕರೆಯ ಪಾಲು 2022-23 ರಲ್ಲಿ ಸುಮಾರು ಶೇಕಡಾ 12 ರಷ್ಟಿದ್ದುದು 2025-26 ರಲ್ಲಿ ಸುಮಾರು ಶೇಕಡಾ 9ಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ, ದೇಶದಲ್ಲಿ ಉತ್ಪಾದನೆಯಾಗುವ ಎಥನಾಲ್‌ನ ಸುಮಾರು ಮುಕ್ಕಾಲು ಭಾಗವು ಈಗ ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೇಜೋಳದಿಂದ ಬರುತ್ತಿದೆ.

ನಿರೀಕ್ಷೆಗಿಂತ ಕಡಿಮೆ ದೇಶೀಯ ಉತ್ಪಾದನೆ, ಹಬ್ಬದ ಋತುವಿಗೂ ಮುನ್ನ ಹೆಚ್ಚಿದ ಬೇಡಿಕೆ, ಕಬ್ಬಿನ ಬೆಳೆಗೆ ಹವಾಮಾನ ಸಂಬಂಧಿತ ಹಾನಿ, ಜಾಗತಿಕ ಸಕ್ಕರೆ ಪೂರೈಕೆಯಲ್ಲಿನ ಕೊರತೆ ಹಾಗೂ ಉದ್ಯಮದ ಕೆಲವು ವಿಭಾಗಗಳಿಂದ ನಡೆಯುತ್ತಿರುವ ಸಟ್ಟಾವ್ಯಾಪಾರ ಮತ್ತು ಕಾಳಸಂತೆಯ ಸಂಗ್ರಹಣೆ ಸೇರಿದಂತೆ ಹಲವು ಅಂಶಗಳು ಸಕ್ಕರೆ ಬೆಲೆಯಲ್ಲಿನ ಪ್ರಸ್ತುತ ಏರಿಕೆಗೆ ಕಾರಣವಾಗಿದೆ.

ಆರಂಭಿಕ ಅಂದಾಜಿಗಿಂತ ಕಡಿಮೆ ಸಕ್ಕರೆ ಉತ್ಪಾದನೆ

ಪ್ರಸ್ತುತ ಋತುವಿನಲ್ಲಿ ಸಕ್ಕರೆ ಉತ್ಪಾದನೆಯು ಸುಮಾರು 306 ಎಲ್‌ಎಂಟಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ, ಕಬ್ಬು ಬೆಳೆಯುವ ರಾಜ್ಯಗಳು ಆರಂಭದಲ್ಲಿ ಸುಮಾರು 343 ಎಲ್‌ಎಂಟಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಿದ್ದವು.

ಕಬ್ಬಿನಲ್ಲಿ ಕೆಂಪು ಕೊಳೆ ರೋಗ (Red Rot) ಮತ್ತು ಸುಳಿ ನೊಣ ರೋಗ (Top Borer) ಹಾಗೂ ಅಧಿಕ ಮಳೆಯಿಂದ ಉಂಟಾದ ಜಲಾವೃತ ಸ್ಥಿತಿಯಿಂದಾಗಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ಅಂದಾಜಿಗಿಂತ ಕಡಿಮೆ ಉತ್ಪಾದನೆಯಾಗಿದ್ದರೂ, ಅಕ್ಟೋಬರ್‌ನಲ್ಲಿ ಹೊಸ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವವರೆಗೆ ದೇಶೀಯ ಬೇಡಿಕೆಯನ್ನು ಪೂರೈಸಲು ಅಗತ್ಯವಿರುವಷ್ಟು ಸಕ್ಕರೆ ದಾಸ್ತಾನು ದೇಶದಲ್ಲಿ ಲಭ್ಯವಿದೆ.

ಜಾಗತಿಕವಾಗಿಯೂ ಏರಿಕೆಯಾಗುತ್ತಿರುವ ಸಕ್ಕರೆ ಬೆಲೆ

ಸಕ್ಕರೆ ಪೂರೈಕೆಯಲ್ಲಿನ ಕೊರತೆಯು ಜಾಗತಿಕ ವಿದ್ಯಮಾನವಾಗಿದ್ದು, ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ.

2026-27ರ ಜಾಗತಿಕ ಸಕ್ಕರೆ ಕೊರತೆಯು ಸುಮಾರು 33 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ. ಹವಾಮಾನ ಪರಿಸ್ಥಿತಿಗಳ ಮೇಲಿನ ಕಳವಳಗಳು ಜಾಗತಿಕ ಮಟ್ಟದಲ್ಲೂ ಪರಿಣಾಮ ಬೀರಿವೆ.

ಪರಿಣಾಮವಾಗಿ, ಅಂತಾರಾಷ್ಟ್ರೀಯ ಸಕ್ಕರೆ ಬೆಲೆಯು ಜೂನ್ 30, 2026 ರಂದು ಟನ್‌ಗೆ $474 ಇದ್ದದ್ದು, ಆಗಸ್ಟ್ 20, 2026 ವೇಳೆಗೆ ಟನ್‌ಗೆ $552 ಕ್ಕೆ ತೀವ್ರವಾಗಿ ಏರಿದೆ ಅಂದರೆ ಎರಡಕ್ಕಿಂತ ಕಡಿಮೆ ತಿಂಗಳುಗಳಲ್ಲಿ ಶೇಕಡಾ 16 ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ.

ಎಥನಾಲ್ ಕಾರ್ಯಕ್ರಮವು ರೈತರಿಗೆ ನೆರವಾಗಿದೆ ಮತ್ತು ಸಕ್ಕರೆ ಕಾರ್ಖಾನೆಗಳನ್ನು ಬಲಪಡಿಸಿದೆ

ಭಾರತವು ಸಾಮಾನ್ಯವಾಗಿ ವಾರ್ಷಿಕವಾಗಿ ಸುಮಾರು 320-340 ಎಲ್‌ಎಂಟಿ ಸಕ್ಕರೆಯನ್ನು ಉತ್ಪಾದಿಸುತ್ತದೆ, ದೇಶೀಯ ಬಳಕೆ ಸುಮಾರು 280-290 ಎಲ್‌ಎಂಟಿಯಷ್ಟಿರುತ್ತದೆ. ಹೆಚ್ಚುವರಿ ಉತ್ಪಾದನೆಯ ವರ್ಷಗಳಲ್ಲಿ, ಹೆಚ್ಚುವರಿ ದಾಸ್ತಾನು ಸಕ್ಕರೆ ಕಾರ್ಖಾನೆಗಳ ಹಣವನ್ನು ಸ್ಥಗಿತಗೊಳಿಸುತ್ತದೆ ಮತ್ತು ಕಬ್ಬು ಬೆಳೆಗಾರರಿಗೆ ಪಾವತಿಗಳನ್ನು ವಿಳಂಬಗೊಳಿಸುತ್ತದೆ.

ಹೆಚ್ಚುವರಿ ಸಕ್ಕರೆಯನ್ನು ಎಥನಾಲ್‌ಗೆ ಬಳಸಿರುವುದು ಈ ರಚನಾತ್ಮಕ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಕ್ಕರೆ ಕಾರ್ಖಾನೆಗಳ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಿದೆ.

ಪರಿಣಾಮಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಆಗಸ್ಟ್ 20, 2026 ವೇಳೆಗೆ, 2025-26 ಸಕ್ಕರೆ ಹಂಗಾಮಿನ ಕಬ್ಬಿನ ಬಾಕಿ ಪಾವತಿಯ ಶೇಕಡಾ 97 ರಷ್ಟನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ.

ಸಕ್ಕರೆ ಕಾರ್ಖಾನೆಗಳ ಸುಧಾರಿತ ಹಣಕಾಸಿನ ಸ್ಥಿತಿಯು ಸರ್ಕಾರದ ಬೆಂಬಲದ ಮೇಲಿನ ಅವುಗಳ ಅವಲಂಬನೆಯನ್ನು ಕಡಿಮೆ ಮಾಡಿದೆ. 2014 ಮತ್ತು 2021 ನಡುವೆ ಸಕ್ಕರೆ ಉದ್ಯಮಕ್ಕೆ ಸುಮಾರು ₹14,600 ಕೋಟಿ ಸಬ್ಸಿಡಿ ನೀಡಲಾಗಿದ್ದರೆ, 2021-22 ರಿಂದ ಅಂತಹ ಯಾವುದೇ ಸಬ್ಸಿಡಿಯನ್ನು ಘೋಷಿಸಲಾಗಿಲ್ಲ.

ಅದೇ ಸಮಯದಲ್ಲಿ, ಗ್ರಾಹಕರಿಗೆ ಸಕ್ಕರೆ ಬೆಲೆಗಳು ದೀರ್ಘಾವಧಿಯಲ್ಲಿ ಸ್ಥಿರವಾಗಿವೆ, ಆಗಸ್ಟ್ 2024 ಮತ್ತು ಜುಲೈ 2026 ನಡುವೆ ವಾರ್ಷಿಕವಾಗಿ ಸುಮಾರು ಶೇಕಡಾ 3 ರಷ್ಟು ಮಾತ್ರ ಹೆಚ್ಚಾಗಿದೆ.

ಕಾಳಸಂತೆ ವಿರುದ್ಧ ಮತ್ತು ಪೂರೈಕೆ ಹೆಚ್ಚಿಸಲು ಸರ್ಕಾರದ ಕ್ರಮ

ಕೆಲವು ಸಕ್ಕರೆ ಕಾರ್ಖಾನೆಗಳು ಮತ್ತು ವ್ಯಾಪಾರಿಗಳ ಸಟ್ಟಾವ್ಯಾಪಾರ ಮತ್ತು ಕಾಳಸಂತೆಯ ಸಂಗ್ರಹಣೆಯು ಇತ್ತೀಚಿನ ಬೆಲೆ ಏರಿಕೆಗೆ ಕಾರಣವಾಗಿದೆ ಎಂಬುದನ್ನು ಸರ್ಕಾರ ಗಮನಿಸಿದೆ. ಆದ್ದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ:

  1. ಆಗಸ್ಟ್ 1 ರಿಂದ ನವೆಂಬರ್ 30, 2026 ರವರೆಗೆ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳ ಮೇಲೆ 400 ಟನ್‌ಗಳ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ.
  2. ಸೆಪ್ಟೆಂಬರ್ 1 ರಿಂದ, ಸಗಟು ಗ್ರಾಹಕರಿಗೆ 15 ದಿನಗಳ ಬಳಕೆಯನ್ನು ಮೀರಿದ ಸಕ್ಕರೆ ದಾಸ್ತಾನು ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ.
  3. ಕಾಳಸಂತೆ ಮತ್ತು ಕೃತಕ ಅಭಾವವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜಂಟಿ ತಂಡಗಳು ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನಿನ ಭೌತಿಕ ತಪಾಸಣೆ ನಡೆಸುತ್ತಿವೆ.
  4. ಮುನ್ನೆಚ್ಚರಿಕೆ ಕ್ರಮವಾಗಿ, ದೇಶೀಯ ಲಭ್ಯತೆಯನ್ನು ಇನ್ನಷ್ಟು ಹೆಚ್ಚಿಸಲು 10 ಎಲ್‌ಎಂಟಿ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
  5. ಅಕ್ಟೋಬರ್ 15, 2026 ರಿಂದ ಕಬ್ಬು ನುರಿಸುವುದನ್ನು ಪ್ರಾರಂಭಿಸಲು ರಾಜ್ಯಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಲಹೆ ನೀಡಲಾಗಿದೆ. ಇದು ಅಕ್ಟೋಬರ್ ಸಕ್ಕರೆ ಉತ್ಪಾದನೆಯನ್ನು ಸಾಮಾನ್ಯ 3-4 ಎಲ್‌ಎಂಟಿಯಿಂದ 10 ಎಲ್‌ಎಂಟಿಗೆ ಹೆಚ್ಚಿಸುವ ನಿರೀಕ್ಷೆಯಿದ್ದು, ಹಬ್ಬದ ಋತುವಿನಲ್ಲಿ ಲಭ್ಯತೆಯನ್ನು ಇನ್ನಷ್ಟು ಸುಧಾರಿಸುತ್ತದೆ.

ಗ್ರಾಹಕರು ಮತ್ತು ಕಬ್ಬು ಬೆಳೆಗಾರರ ಹಿತಾಸಕ್ತಿಗಳನ್ನು ಕಾಯಲು ಸರ್ಕಾರ ಬದ್ಧವಾಗಿದೆ. ಇದು ಸಕ್ಕರೆ ದಾಸ್ತಾನು, ಬೆಲೆಗಳು ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ರೈತರಿಗೆ ಸಮಯಕ್ಕೆ ಸರಿಯಾಗಿ ಬಾಕಿ ಪಾವತಿಯನ್ನು ಖಚಿತಪಡಿಸಿಕೊಳ್ಳುವಾಗ ಕಾಳಸಂತೆ ಮತ್ತು ಅನಗತ್ಯ ಬೆಲೆ ಏರಿಕೆಯನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ.

 

*****


(रिलीज़ आईडी: 2302083) आगंतुक पटल : 36
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Gujarati , Tamil , Telugu , Malayalam