ಪ್ರಧಾನ ಮಂತ್ರಿಯವರ ಕಛೇರಿ
12 ವರ್ಷಗಳ ಪರಿವರ್ತನೆ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ
प्रविष्टि तिथि:
15 AUG 2026 1:18PM by PIB Bengaluru
ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 12 ವರ್ಷಗಳಲ್ಲಿ ಭಾರತದ ಪರಿವರ್ತನೆಯನ್ನು ಎತ್ತಿಹಿಡಿದರು, ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ, ಮೂಲಭೂತ ಸೌಕರ್ಯಗಳು, ಇಂಧನ ಭದ್ರತೆ, ಯುವ ಸಬಲೀಕರಣ, ನಾವೀನ್ಯತೆ, ಸಾಮಾಜಿಕ ಭದ್ರತೆ ಮತ್ತು ಇತರ ಪ್ರಮುಖ ವಲಯಗಳಾದ್ಯಂತ ಸಾಧಿಸಿದ ಪ್ರಗತಿಯನ್ನು ವಿವರಿಸಿದರು.
ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು ಕೆಳಗಿನಂತಿವೆ:
1. ಉತ್ಪಾದನೆ: ಪ್ರಮಾಣ ಮತ್ತು ಸ್ವಾವಲಂಬನೆ
ಕಳೆದ 12 ವರ್ಷಗಳಲ್ಲಿ:
- ರಕ್ಷಣಾ ಉತ್ಪನ್ನಗಳ ಉತ್ಪಾದನೆಯು ಸುಮಾರು 4 ಪಟ್ಟು ಹೆಚ್ಚಾಗಿದೆ.
- ಖಾದಿ ಮತ್ತು ಗ್ರಾಮೋದ್ಯೋಗ ಉತ್ಪಾದನೆಯು ಸುಮಾರು 5 ಪಟ್ಟು ಹೆಚ್ಚಾಗಿದೆ.
- ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು 7 ಪಟ್ಟು ಹೆಚ್ಚಾಗಿದೆ.
- ಆಧುನಿಕ ರೈಲ್ವೆ ಕೋಚ್‌ಗಳ ಉತ್ಪಾದನೆಯು 21 ಪಟ್ಟು ಹೆಚ್ಚಾಗಿದೆ.
- ಮೊಬೈಲ್ ಫೋನ್ ಉತ್ಪಾದನೆಯು 35 ಪಟ್ಟು ಹೆಚ್ಚಾಗಿದೆ.
2. ಡಿಜಿಟಲ್ ಇಂಡಿಯಾ ಮತ್ತು ನಾವೀನ್ಯತೆ
ಭಾರತದ ಡಿಜಿಟಲ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ತ್ವರಿತ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು:
- ಇಂಟರ್ನೆಟ್ ಬಳಕೆದಾರರು ಸುಮಾರು 4 ಪಟ್ಟು ಹೆಚ್ಚಾಗಿದ್ದಾರೆ.
- ಪೇಟೆಂಟ್ ಮಂಜೂರಾತಿಗಳು 4 ಪಟ್ಟು ಹೆಚ್ಚಾಗಿವೆ.
- ಡಿಜಿಟಲ್ ವಹಿವಾಟುಗಳು ಸುಮಾರು 100 ಪಟ್ಟು ಹೆಚ್ಚಾಗಿವೆ.
- ಭಾರತವು ಗಣನೀಯವಾಗಿ ಬೃಹತ್ ಡಿಜಿಟಲ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ.
3. ಮೂಲಭೂತ ಸೌಕರ್ಯಗಳ ತ್ವರಿತ ವಿತರಣೆ
ಸಾಮಾನ್ಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ತಲುಪುತ್ತಿರುವ ತ್ವರಿತ ವೇಗವನ್ನು ಪ್ರಧಾನಮಂತ್ರಿಯವರು ಎತ್ತಿಹಿಡಿದರು:
- ನಲ್ಲಿ ನೀರು ಸಂಪರ್ಕಗಳನ್ನು ಸರಾಸರಿ ವಾರ್ಷಿಕ ವೇಗದಲ್ಲಿ ಸುಮಾರು 15 ಪಟ್ಟು ವೇಗವಾಗಿ ಒದಗಿಸಲಾಗಿದೆ.
- ಎಲ್‌ಪಿಜಿ (LPG) ಸಂಪರ್ಕಗಳನ್ನು ವಾರ್ಷಿಕ ವೇಗದಲ್ಲಿ ಸುಮಾರು 6 ಪಟ್ಟು ವೇಗವಾಗಿ ಒದಗಿಸಲಾಗಿದೆ.
- ಬಡವರಿಗಾಗಿ ಶೌಚಾಲಯಗಳನ್ನು ವಾರ್ಷಿಕ ವೇಗದಲ್ಲಿ ಸುಮಾರು 4 ಪಟ್ಟು ವೇಗವಾಗಿ ನಿರ್ಮಿಸಲಾಗಿದೆ.
- ಬಡವರಿಗಾಗಿ ಪಕ್ಕಾ ಮನೆಗಳನ್ನು ವಾರ್ಷಿಕ ವೇಗದಲ್ಲಿ ಸುಮಾರು 3 ಪಟ್ಟು ವೇಗವಾಗಿ ಒದಗಿಸಲಾಗಿದೆ.
- ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.
- ಮೆಟ್ರೋ ವ್ಯವಸ್ಥೆಗಳು ಸೇರಿದಂತೆ ಆಧುನಿಕ ಸಾರ್ವಜನಿಕ ಸಾರಿಗೆಯು ಹಲವಾರು ನಗರಗಳನ್ನು ತಲುಪಿದೆ.
4. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ನಿರ್ಮಾಣ
ದೇಶೀಯ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ನಿರ್ಮಿಸುವಲ್ಲಿ ಭಾರತದ ಪ್ರಗತಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- ಭಾರತದಲ್ಲಿ ಹಿಂದೆ ಯಾವುದೇ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಘಟಕವಿರಲಿಲ್ಲ.
- ಈಗ ಭಾರತದಲ್ಲಿ ಸಂಪೂರ್ಣ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ.
- ಮೂರು ಸೆಮಿಕಂಡಕ್ಟರ್ ಘಟಕಗಳನ್ನು ಪ್ರಾರಂಭಿಸಲಾಗಿದೆ.
- ಭಾರತವು ಚಿಪ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ.
5. ನಿರ್ಣಾಯಕ ಖನಿಜಗಳ ಭದ್ರತೆ
ಉದಯೋನ್ಮುಖ ತಂತ್ರಜ್ಞಾನಗಳಿಗೆ ಅವಶ್ಯವಿರುವ ನಿರ್ಣಾಯಕ ಖನಿಜಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಪ್ರಧಾನಮಂತ್ರಿಯವರು, ಈ ವಲಯದಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಉಲ್ಲೇಖಿಸಿದರು:
- 'ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್' (National Critical Mineral Mission) ಅನ್ನು ಪ್ರಾರಂಭಿಸಲಾಗಿದೆ.
- ಬಜೆಟ್‌ನಲ್ಲಿ 'ಕ್ರಿಟಿಕಲ್ ಮಿನರಲ್ ಕಾರಿಡಾರ್' ಅನ್ನು ಘೋಷಿಸಲಾಗಿದೆ.
- ನಿರ್ಣಾಯಕ ಖನಿಜಗಳ ಪೂರೈಕೆಗಾಗಿ ಹಲವಾರು ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
6. ಇಂಧನ ಭದ್ರತೆಯ ಬಲವರ್ಧನೆ
ವಿಶೇಷವಾಗಿ ಚಿಪ್ಸ್, ಎಐ (AI) ಮತ್ತು ಡೇಟಾ ಸೆಂಟರ್‌ಗಳಂತಹ ತಂತ್ರಜ್ಞಾನಗಳಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುವುದರಿಂದ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಇಂಧನ ಭದ್ರತೆಯು ಅತ್ಯಗತ್ಯ ಷರತ್ತು ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು.
ಪರಮಾಣು ಇಂಧನದ ಪಾತ್ರದ ಪ್ರಾಮುಖ್ಯತೆ ಬಗ್ಗೆ ಹೇಳುತ್ತಾ, ಪ್ರಧಾನಮಂತ್ರಿಯವರು ಇವುಗಳ ಕುರಿತು ಒತ್ತಿ ಹೇಳಿದರು:
- ಶಾಂತಿ (SHANTI) ಕಾಯಿದೆಯು ಪರಮಾಣು ಇಂಧನ ವಲಯದಲ್ಲಿ ಒಂದು ಪ್ರಮುಖ ಸುಧಾರಣೆಯಾಗಿದೆ.
- ಭಾರತವು ಫಾಸ್ಟ್ ಬ್ರೀಡರ್ ನ್ಯೂಕ್ಲಿಯರ್ ಟೆಕ್ನಾಲಜಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಟಿದೆ.
- ಪರಮಾಣು ಇಂಧನದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ತಂತ್ರಜ್ಞಾನದ ಸಾಮರ್ಥ್ಯ.
7. ತೈಲ ಮತ್ತು ಅನಿಲ ಪರಿಶೋಧನೆಯ ವಿಸ್ತರಣೆ
ಕಡಲ ತೀರದ ಪರಿಶೋಧನೆ ಬಗೆಗಿನ ಭಾರತದ ವಿಧಾನದಲ್ಲಿನ ಬದಲಾವಣೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- ಭಾರತದ ಕಡಲ ತೀರದ ಸುಮಾರು 99% ಪ್ರದೇಶವನ್ನು ಹಿಂದೆ 'ನೋ-ಗೋ ಏರಿಯಾ' (No-Go Area) ಎಂದು ವರ್ಗೀಕರಿಸಲಾಗಿತ್ತು.
- ಈ ವಿಧಾನವು ಈಗ 'ನೋ-ಗೋ ಏರಿಯಾ' ದಿಂದ 'ಗೋ ಅಹೆಡ್ ಏರಿಯಾ' ಗೆ ಬದಲಾಗಿದೆ.
- ಈ ಹಿಂದೆ ನಿರ್ಬಂಧಿಸಲಾಗಿದ್ದ ಪ್ರದೇಶಗಳನ್ನು ಪರಿಶೋಧನೆಗಾಗಿ ಮುಕ್ತಗೊಳಿಸಲಾಗಿದೆ.
- ಇದು ಹೊಸ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಕಂಡುಹಿಡಿಯುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
8. ಇಂಧನ ವೈವಿಧ್ಯೀಕರಣ
ವಿವಿಧ ಇಂಧನ ಮೂಲಗಳಲ್ಲಿನ ತ್ವರಿತ ವಿಸ್ತರಣೆ ಕುರಿತು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ನಗರ ಅನಿಲ ವಿತರಣೆ
- 2014: 70 ಕ್ಕಿಂತ ಕಡಿಮೆ ನಗರಗಳಲ್ಲಿ ಲಭ್ಯವಿತ್ತು.
- ಇಂದು: ಸುಮಾರು 700 ನಗರಗಳಲ್ಲಿ ಲಭ್ಯವಿದೆ.
ಪೈಪ್‌ಲೈನ್ ಮೂಲಕ ಅಡುಗೆ ಅನಿಲ
- 2014: ಸುಮಾರು 20–22 ಲಕ್ಷ ಕುಟುಂಬಗಳು.
- ಇಂದು: ಸುಮಾರು 1.75 ಕೋಟಿ ಕುಟುಂಬಗಳು.
ಸೌರ ಇಂಧನ
- 2014: ಸುಮಾರು 2 ಗಿಗಾ ವ್ಯಾಟ್ .
- ಇಂದು: ಸುಮಾರು 160 ಗಿಗಾ ವ್ಯಾಟ್.
ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ
- ಈ ಯೋಜನೆಯು 50 ಲಕ್ಷ ಕುಟುಂಬಗಳನ್ನು ಮೀರಿದೆ.
- ಕಡಿಮೆ ಅಥವಾ ಶೂನ್ಯ ವಿದ್ಯುತ್ ಬಿಲ್‌ಗಳ ಮೂಲಕ ಲಕ್ಷಾಂತರ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ.
- ಕುಟುಂಬಗಳು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಬಹುದು.
- ಪ್ರತಿ ಕುಟುಂಬಕ್ಕೆ ಸುಮಾರು ₹80,000 ವರೆಗೆ ನೆರವು ಲಭ್ಯವಿದೆ.
9. ರೈಲ್ವೆ: ವಿದ್ಯುದ್ದೀಕರಣ ಮತ್ತು ಭವಿಷ್ಯದ ಇಂಧನಗಳು
ಭಾರತೀಯ ರೈಲ್ವೆಯ ಪರಿವರ್ತನೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- 2014 ರಲ್ಲಿ, ಸುಮಾರು 90 ವರ್ಷಗಳ ನಂತರ, ರೈಲ್ವೆ ಜಾಲದ ಸುಮಾರು 30% ಮಾತ್ರ ವಿದ್ಯುದ್ದೀಕರಣಗೊಂಡಿತ್ತು.
- ಇಂದು, ಭಾರತೀಯ ರೈಲ್ವೆಯು ಸಂಪೂರ್ಣ ವಿದ್ಯುದ್ದೀಕರಣದತ್ತ ಸಾಗಿದೆ.
- ಭಾರತವು ತನ್ನ ಮೊದಲ 'ಮೇಡ್-ಇನ್-ಇಂಡಿಯಾ' ಹೈಡ್ರೋಜನ್ ರೈಲಿನ ಕೆಲಸವನ್ನು ಪ್ರಾರಂಭಿಸಿದೆ.
- ಇದನ್ನು ವಿಶ್ವದ ಅತ್ಯಂತ ಉದ್ದದ ಮತ್ತು ಶಕ್ತಿಯುತ ಹೈಡ್ರೋಜನ್ ರೈಲಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
10. ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಸ್ಥಿತಿಸ್ಥಾಪಕತ್ವ
ಕಳೆದ 10-12 ವರ್ಷಗಳಲ್ಲಿ ನಿರ್ಮಿಸಲಾದ ಸಾಮರ್ಥ್ಯಗಳನ್ನು ಈ ಕೆಳಗಿನ ಸಂದರ್ಭಗಳಲ್ಲಿ ಪರೀಕ್ಷಿಸಲಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು:
- ಕೋವಿಡ್-19 ಸಾಂಕ್ರಾಮಿಕ ರೋಗ.
- ರಷ್ಯಾ-ಉಕ್ರೇನ್ ಯುದ್ಧ.
- ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು.
11. ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ
ಹೆಚ್ಚಿನ ಜಾಗತಿಕ ರಸಗೊಬ್ಬರ ಬೆಲೆಗಳಿಂದ ರೈತರನ್ನು ರಕ್ಷಿಸಲು ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದ, ಪ್ರಧಾನಮಂತ್ರಿಯವರು ಹೀಗೆ ತಿಳಿಸಿದರು:
- ಯೂರಿಯಾ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಮೂಟೆಗೆ ಸುಮಾರು ₹3,000; ಭಾರತೀಯ ರೈತರಿಗೆ ₹300 ಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತಿದೆ.
- ಡಿಎಪಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ₹5,000 ಕ್ಕಿಂತ ಹೆಚ್ಚು; ಭಾರತೀಯ ರೈತರಿಗೆ ₹1,350 ಕ್ಕೆ ಸಿಗುತ್ತಿದೆ.
12. ವ್ಯಾಪಾರ ಮತ್ತು ರಫ್ತು ಅವಕಾಶಗಳು
ಭಾರತೀಯ ಉತ್ಪಾದಕರು ಮತ್ತು ರಫ್ತುದಾರರಿಗೆ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳನ್ನು ಪ್ರಧಾನಮಂತ್ರಿಯವರು ಎತ್ತಿಹಿಡಿದರು:
- 2014 ರಿಂದ, ಭಾರತವು ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಿದೆ.
- ಕೃಷಿ, ಮೀನುಗಾರಿಕೆ, ಎಂಎಸ್‌ಎಂಇ (MSME), ಜವಳಿ ಮತ್ತು ಇತರ ರಫ್ತು ವಲಯಗಳಿಗೆ ಹೊಸ ಅವಕಾಶಗಳು ಮುಕ್ತವಾಗಿವೆ.
13. ವಿಕಸಿತ ಭಾರತದ ಕೇಂದ್ರಬಿಂದುವಾಗಿ ಯುವಜನತೆ
ವಿಕಸಿತ ಭಾರತ ನಿರ್ಮಾಣದಲ್ಲಿ ಭಾರತದ ಯುವಜನತೆಯ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು ಮತ್ತು ಅವರಿಗಾಗಿ ತೆರೆಯಲಾದ ಹೊಸ ಮಾರ್ಗಗಳನ್ನು ಬಗ್ಗೆ ಉಲ್ಲೇಖಿಸಿದರು:
- ಸ್ಟಾರ್ಟ್‌ಅಪ್ ಇಂಡಿಯಾ: ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಹೊಸ ಮಾರ್ಗಗಳು.
- ₹1 ಲಕ್ಷ ಕೋಟಿ ಸಂಶೋಧನಾ ನಿಧಿ: ಯುವ ಸಂಶೋಧಕರಿಗೆ ಹೊಸ ಅವಕಾಶಗಳು.
- ಡಿಜಿಟಲ್ ಇಂಡಿಯಾ: ಕೈಗೆಟುಕುವ ಡೇಟಾ ಮೂಲಕ ಸಬಲೀಕರಣ.
- ಸ್ಕಿಲ್ ಇಂಡಿಯಾ: ರಾಷ್ಟ್ರೀಯ ಕೌಶಲ್ಯ ಪರಿಸರ ವ್ಯವಸ್ಥೆ.
- ಬಾಹ್ಯಾಕಾಶ ವಲಯ: ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಲಾಗಿದೆ.
- ರಾಷ್ಟ್ರೀಯ ಡ್ರೋನ್ ನೀತಿ: ಯುವ ಉದ್ಯಮಿಗಳು ಮತ್ತು ನಾವೀನ್ಯಕಾರರಿಗೆ ಹೊಸ ಅವಕಾಶಗಳು.
- ಖೇಲೋ ಇಂಡಿಯಾ: ಬಲವರ್ಧಿತ ಕ್ರೀಡಾ ಪರಿಸರ ವ್ಯವಸ್ಥೆ.
14. ಶಿಕ್ಷಣ ಮತ್ತು ನಾವೀನ್ಯತೆ
ಶೈಕ್ಷಣಿಕ ಮತ್ತು ನಾವೀನ್ಯತೆಯ ಅವಕಾಶಗಳ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು:
- ರಾಷ್ಟ್ರೀಯ ಶಿಕ್ಷಣ ನೀತಿ 2020: 35 ವರ್ಷಗಳ ಅಂತರದ ನಂತರ ಪರಿಚಯಿಸಲಾಗಿದೆ.
- ವಿಶ್ವವಿದ್ಯಾಲಯಗಳು: 2004-2014ರ ಅವಧಿಯಲ್ಲಿ 350 ಕ್ಕಿಂತ ಕಡಿಮೆ; ಮುಂದಿನ ದಶಕದಲ್ಲಿ ಸುಮಾರು 650 ಹೊಸ ವಿಶ್ವವಿದ್ಯಾಲಯಗಳನ್ನು ಸೇರಿಸಲಾಗಿದೆ.
- ವೈದ್ಯಕೀಯ ಕಾಲೇಜುಗಳು: 2014 ಕ್ಕಿಂತ ಮೊದಲು 400 ಕ್ಕಿಂತ ಕಡಿಮೆ; ಇಂದು ಸುಮಾರು 850.
- ಶಾಲೆಗಳಲ್ಲಿ 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.
- ಚಿಕ್ಕ ವಯಸ್ಸಿನಿಂದಲೇ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುವತ್ತ ಗಮನ ಹರಿಸಲಾಗಿದೆ.
15. ಸ್ಟಾರ್ಟ್‌ಅಪ್‌ಗಳು, ಬಾಹ್ಯಾಕಾಶ ಮತ್ತು ಎಐ (AI)
ಭಾರತದ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದರು:
- ಭಾರತೀಯ ಬಾಹ್ಯಾಕಾಶ ಸ್ಟಾರ್ಟ್‌ಅಪ್ 'ಮೇಡ್-ಇನ್-ಇಂಡಿಯಾ' ರಾಕೆಟ್ ಅನ್ನು ಉಡಾವಣೆ ಮಾಡಿದೆ.
- ಭಾರತದಲ್ಲಿ ಈಗ ಸುಮಾರು 2.5 ಲಕ್ಷ ನೋಂದಾಯಿತ ಸ್ಟಾರ್ಟ್‌ಅಪ್‌ಗಳಿವೆ.
- ಎಐ (AI) ಯುವ ಭಾರತೀಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.
- ಭಾರತವು ಈ ವರ್ಷ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು (AI Impact Summit) ಆಯೋಜಿಸಿದೆ.
16. ಹೊಸ ವಲಯಗಳು ಮತ್ತು ಹೊಸ ಅವಕಾಶಗಳು
ಜೈವಿಕ ಆರ್ಥಿಕತೆ
- 2014: ಸುಮಾರು ₹60,000 ಕೋಟಿ.
- ಇಂದು: ಸುಮಾರು ₹20 ಲಕ್ಷ ಕೋಟಿ.
- ಈ ವಿಸ್ತರಣೆಯು ಹೊಸ ಉದ್ಯೋಗಗಳು ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಎಲೆಕ್ಟ್ರಿಕ್ ವಾಹನಗಳು
- ಹಿಂದಿನ ದಶಕದ ಅಂತ್ಯದ ವೇಳೆಗೆ: ವಾರ್ಷಿಕವಾಗಿ ಸುಮಾರು 1.5 ಲಕ್ಷ ಇವಿಗಳು ಮಾರಾಟವಾಗುತ್ತಿದ್ದವು.
- ಕಳೆದ ವರ್ಷ: ಸುಮಾರು 25 ಲಕ್ಷ ಇವಿಗಳು ಮಾರಾಟವಾಗಿವೆ.
ವಿಮಾನಯಾನ
- ಹೊಸ ವಿಮಾನ ನಿಲ್ದಾಣಗಳು ಮತ್ತು ಮಾರ್ಗಗಳು ಉದ್ಯೋಗ ಸೃಷ್ಟಿಸುತ್ತಿವೆ.
- ಎಂಆರ್‌ಒ (MRO) ಹೊಸ ಅವಕಾಶಗಳನ್ನು ತೆರೆಯುತ್ತಿದೆ.
- ಭಾರತವು 'ಮೇಡ್-ಇನ್-ಇಂಡಿಯಾ' ವಿಮಾನ ತಯಾರಿಕೆಯತ್ತ ಸಾಗುತ್ತಿದೆ.
- 'ಮೇಡ್-ಇನ್-ಇಂಡಿಯಾ' C-295 ರಕ್ಷಣಾ ಸಾರಿಗೆ ವಿಮಾನವು ತನ್ನ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
17. ಸ್ವಾಮಿತ್ವ (SVAMITVA) ಮೂಲಕ ಗ್ರಾಮೀಣ ಸಬಲೀಕರಣ
ಸ್ವಾಮಿತ್ವ ಉಪಕ್ರಮದ ಪ್ರಭಾವವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- ಸುಮಾರು 3.25 ಕೋಟಿ ಕುಟುಂಬಗಳು ಆಸ್ತಿ ಕಾರ್ಡ್‌ಗಳನ್ನು ಪಡೆದುಕೊಂಡಿವೆ.
- ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ₹140 ಲಕ್ಷ ಕೋಟಿ ಆರ್ಥಿಕ ಸಾಮರ್ಥ್ಯವು ಅನ್‌ಲಾಕ್ ಆಗಿದೆ.
- ಆಸ್ತಿ ದಾಖಲೆಗಳು ಗ್ರಾಮಸ್ಥರು ತಮ್ಮ ಆಸ್ತಿಯ ಆಧಾರದ ಮೇಲೆ ಬ್ಯಾಂಕ್ ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುತ್ತಿವೆ.
- ಗ್ರಾಮೀಣ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೊಸ ಮಾರ್ಗಗಳು ಮುಕ್ತವಾಗಿವೆ.
18. ರಕ್ಷಣಾ ಉತ್ಪನ್ನಗಳ ರಫ್ತಿನಲ್ಲಿ ಬೆಳವಣಿಗೆ
ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಅಭಿವೃದ್ಧಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- ರಕ್ಷಣಾ ಉತ್ಪನ್ನಗಳ ರಫ್ತು 50 ಪಟ್ಟಿಗಿಂತಲೂ ಹೆಚ್ಚಾಗಿದೆ.
- ಭಾರತೀಯ ರಕ್ಷಣಾ ಉಪಕರಣಗಳನ್ನು ಈಗ ಸುಮಾರು 100 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
19. ಮಹಿಳಾ ನೇತೃತ್ವದ ಅಭಿವೃದ್ಧಿ: ಲಖ್‌ಪತಿ ದಿದಿ
ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಒತ್ತಿ ಹೇಳುತ್ತಾ:
- 3 ಕೋಟಿ 'ಲಖ್‌ಪತಿ ದಿದಿ'ಯರ ಗುರಿಯನ್ನು ಸಾಧಿಸಲಾಗಿದೆ.
- ಸಾಮಾನ್ಯ, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಮಹಿಳೆಯರು ಲಖ್‌ಪತಿ ದಿದಿಯರಾಗಿದ್ದಾರೆ.
20. ಸಾಮಾಜಿಕ ಭದ್ರತೆಯ ವಿಸ್ತರಣೆ
ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು:
- 2014 ಕ್ಕಿಂತ ಮೊದಲು, ಸುಮಾರು 25 ಕೋಟಿ ಜನರು ಸಾಮಾಜಿಕ ಭದ್ರತೆಯ ಅಡಿಯಲ್ಲಿ ಬಂದಿದ್ದರು.
- ಇಂದು, ಸುಮಾರು 100 ಕೋಟಿ ಭಾರತೀಯರು ಒಂದಲ್ಲ ಒಂದು ಸಾಮಾಜಿಕ ಭದ್ರತಾ ಯೋಜನೆಯಡಿ ವ್ಯಾಪಿಸಿಕೊಂಡಿದ್ದಾರೆ.
21. ಆಯುಷ್ಮಾನ್ ಭಾರತ
ಆಯುಷ್ಮಾನ್ ಭಾರತ ಮೂಲಕ ಕುಟುಂಬಗಳಿಗೆ ಸಿಕ್ಕಿರುವ ಹಣಕಾಸಿನ ಪರಿಹಾರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು:
- ಫಲಾನುಭವಿ ಕುಟುಂಬಗಳು ಅಂದಾಜು ₹2 ಲಕ್ಷ ಕೋಟಿ ವೈದ್ಯಕೀಯ ವೆಚ್ಚವನ್ನು ಉಳಿಸಿವೆ.
*****
(रिलीज़ आईडी: 2299850)
आगंतुक पटल : 14