ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 80ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ
प्रविष्टि तिथि:
14 AUG 2026 7:53PM by PIB Bengaluru
ನನ್ನ ಪ್ರೀತಿಯ ದೇಶವಾಸಿಗಳೇ,
ನಮಸ್ಕಾರ!
ನಮ್ಮ ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು, ಈ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇನ್ನು ಕೆಲವೇ ಗಂಟೆಗಳಲ್ಲಿ ನಮ್ಮ ದೇಶ ಸ್ವಾತಂತ್ರ್ಯ ಪಡೆದ 80ನೇ ವರ್ಷದ ಶುಭಾರಂಭಕ್ಕೆ ಸಾಕ್ಷಿಯಾಗಲಿದೆ. ದೇಶದಲ್ಲಿರುವ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರೂ ಈ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮ ತ್ರಿವರ್ಣ ಧ್ವಜವೇ ನಮ್ಮ ಸ್ವಾತಂತ್ರ್ಯದ ಸಂಕೇತ. ಅದನ್ನು ನಾವು ಅಪಾರ ಹೆಮ್ಮೆಯಿಂದ ಹಾರಿಸುತ್ತೇವೆ.
1947ರ ಆಗಸ್ಟ್ 15ರಂದು ಭಾರತಮಾತೆಯು ಪರಕೀಯರ ದಾಸ್ಯದ ಸಂಕೋಲೆಗಳಿಂದ ಮುಕ್ತಳಾದಳು. ಸ್ವತಂತ್ರ ಭಾರತದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನದಾಯಿತು. ಎಲ್ಲ ನಾಗರಿಕರೂ ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳಲು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಭಾರತವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ಗುರಿಯತ್ತ ಶ್ರಮಿಸುವುದೇ ಸ್ವಾತಂತ್ರ್ಯದ ನಿಜವಾದ ಅರ್ಥ.
ಸಮರ್ಪಣಾಭಾವದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಅಭಿವೃದ್ಧಿಗೆ ಬದ್ಧರಾಗಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳು, ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು, ಪರಿಶ್ರಮಿತ ಕಾರ್ಮಿಕರು ಹಾಗೂ ನಮ್ಮ ಅನ್ನದಾತ ರೈತರು ತಮ್ಮ ತಮ್ಮ ಪ್ರಯತ್ನಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಪ್ರತಿಭಾವಂತ ಕ್ರೀಡಾಪಟುಗಳು, ಕುಶಲಕರ್ಮಿಗಳು ಮತ್ತು ಕಲಾವಿದರು, ದೂರದೃಷ್ಟಿಯ ಚಿಂತಕರು, ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕಪಡೆಯ ಸದಸ್ಯರು, ಜನರ ಸೇವೆಗೆ ಸಮರ್ಪಿತರಾಗಿರುವ ಜನಪ್ರತಿನಿಧಿಗಳು, ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಕರ್ತವ್ಯನಿಷ್ಠ ನಾಗರಿಕ ಸೇವಕರು, ನಮ್ಮ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ದೊಡ್ಡ ಹಾಗೂ ಸಣ್ಣ ಹೂಡಿಕೆದಾರರು, ನಿಸ್ವಾರ್ಥ ಸಮಾಜ ಸೇವಕರು ಮತ್ತು ಸ್ವಚ್ಛತಾ ಅಭಿಯಾನದ ಮುಂಚೂಣಿ ಕಾರ್ಯಕರ್ತರಾಗಿರುವ ಎಲ್ಲ ಸಫಾಯಿ ಮಿತ್ರರು ರಾಷ್ಟ್ರದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ವಿವಿಧ ಇತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅಸಂಖ್ಯಾತ ನಾಗರಿಕರು ಹಾಗೂ ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಮೂಲಭೂತ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರರಾಗಿದ್ದಾರೆ. ಅವರೆಲ್ಲರ ಕೊಡುಗೆಯನ್ನು ನಾನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ. ಮೂರು ಸಶಸ್ತ್ರ ಪಡೆಗಳು, ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಎಲ್ಲ ಪೊಲೀಸ್ ಸಿಬ್ಬಂದಿಯೂ ಕರ್ತವ್ಯಕ್ಕೆ ತೋರಿಸುತ್ತಿರುವ ಅಚಲ ಬದ್ಧತೆ ಮತ್ತು ಸಮರ್ಪಣಾಭಾವವನ್ನು ನಾನು ವಿಶೇಷವಾಗಿ ಶ್ಲಾಘಿಸುತ್ತೇನೆ. ಜಾಗತಿಕ ವೇದಿಕೆಯಲ್ಲಿ ಭಾರತದ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತಿರುವ ಭಾರತೀಯ ವಲಸಿಗ ಸಮುದಾಯ ಹಾಗೂ ನಮ್ಮ ರಾಯಭಾರ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನೂ ನಾನು ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,
2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವತ್ತ ನಾವು ಮುನ್ನಡೆಯುತ್ತಿದ್ದೇವೆ. ಅಂತ್ಯೋದಯದ ಆಶಯದಿಂದ ಮಾರ್ಗದರ್ಶನ ಪಡೆದು, ಅಭಿವೃದ್ಧಿಯ ಫಲಗಳು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ. ನಮ್ಮ ಶ್ರೀಮಂತ ಪರಂಪರೆ ಮತ್ತು ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಅಳವಡಿಸಿಕೊಂಡು, ಆಧುನಿಕ ಅಭಿವೃದ್ಧಿಯ ಪಥದಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ‘ವಯಂ ರಾಷ್ಟ್ರೇ ಜಾಗೃಯಾಮ್’ ಎಂಬ ವೇದವಾಕ್ಯವು ರಾಷ್ಟ್ರ ಸೇವೆಗೆ ಸದಾ ಸಿದ್ಧರಾಗಿರಬೇಕೆಂಬ ಸ್ಫೂರ್ತಿಯನ್ನು ನಮಗೆ ನೀಡುತ್ತದೆ.
ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದ ಜನರನ್ನು ಭಾರತದ ಸ್ವಾತಂತ್ರ್ಯ ಎಂಬ ಒಂದೇ ಸಾಮಾನ್ಯ ಗುರಿಯು ಒಗ್ಗೂಡಿಸಿತ್ತು. ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆಯು ಜನಸಾಮಾನ್ಯರ ಹಾಡಾಗಿ ಮಾರ್ಪಟ್ಟಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅಸಂಖ್ಯಾತ ಭಾರತೀಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಸಾಮಾಜಿಕ ಸುಧಾರಣೆ ಮತ್ತು ದೇಶಭಕ್ತಿಯ ಅತ್ಯುನ್ನತ ಆದರ್ಶಗಳನ್ನು ಸಾಕಾರಗೊಳಿಸಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಮತ್ತು ನಂತರದ ಪ್ರಗತಿಗೆ ಮಾರ್ಗದರ್ಶನ ನೀಡಿದ ಭಾರತಮಾತೆಯ ಆ ಮಹಾನ್ ಪುತ್ರರು ಮತ್ತು ಪುತ್ರಿಯರಿಗೆ ನಾನು ವಿನಮ್ರವಾಗಿ ನಮಿಸುತ್ತೇನೆ.
ಇಂದು, ಆಗಸ್ಟ್ 14ರಂದು ನಾವು ವಿಭಜನ್ ವಿಭೀಷಿಕಾ ಸ್ಮೃತಿ ದಿವಸವನ್ನು ಆಚರಿಸುತ್ತಿದ್ದೇವೆ. ವಿಭಜನೆಯಿಂದ ಉಂಟಾದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಅಥವಾ ಮನೆ-ಮಠಗಳನ್ನು ಕಳೆದುಕೊಂಡು ವಲಸೆ ಹೋಗುವ ದುರಂತವನ್ನು ಅನುಭವಿಸಬೇಕಾದ ಲಕ್ಷಾಂತರ ಭಾರತೀಯರನ್ನು ನಾವು ಶ್ರದ್ಧಾಪೂರ್ವಕವಾಗಿ ಸ್ಮರಿಸುತ್ತೇವೆ. ಕೋಮು ಹಿಂಸಾಚಾರದ ಕಾರಣದಿಂದ ಲಕ್ಷಾಂತರ ಜನರು ನಿರಾಶ್ರಿತರಾಗಬೇಕಾಯಿತು ಮತ್ತು ವಿಭಜನೆಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಯಿತು. ಆದರೂ ಅವರು ತಮ್ಮ ಅಸ್ಮಿತೆಯನ್ನು ಬಿಟ್ಟುಕೊಡಲಿಲ್ಲ.
ನಮ್ಮ ಸ್ವಾತಂತ್ರ್ಯದ ಸಂದರ್ಭದಲ್ಲಿ ವಿಭಜನೆಯ ಭೀಕರ ಪರಿಣಾಮಗಳ ಜೊತೆಗೆ, 550ಕ್ಕೂ ಹೆಚ್ಚು ರಾಜಪ್ರಭುತ್ವಗಳನ್ನು ನವಸ್ವತಂತ್ರ ಭಾರತದೊಂದಿಗೆ ಏಕೀಕರಿಸುವ ಅಸಾಧಾರಣ ಸವಾಲೂ ನಮ್ಮ ಮುಂದಿತ್ತು. ಸರ್ದಾರ್ ಪಟೇಲ್ ಅವರು ರಾಜಪ್ರಭುತ್ವಗಳ ವ್ಯವಸ್ಥೆಗೆ ಅಂತ್ಯ ಹಾಡಿ, ಆ ರಾಜಪ್ರಭುತ್ವಗಳನ್ನು ನಮ್ಮ ಸ್ವತಂತ್ರ ಪ್ರಜಾಪ್ರಭುತ್ವದೊಂದಿಗೆ ವಿಲೀನಗೊಳಿಸಿದರು. ಆಧುನಿಕ ಭಾರತದ ಏಕತೆಯ ಶಿಲ್ಪಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪವಿತ್ರ ಸ್ಮೃತಿಗೆ ಕೃತಜ್ಞ ರಾಷ್ಟ್ರದ ಪರವಾಗಿ ನಾನು ಗೌರವಪೂರ್ವಕ ನಮನ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಭಾರತದ ಜನರಿಂದ ರೂಪಿಸಲ್ಪಟ್ಟ ನಮ್ಮ ಸಂವಿಧಾನವು ಜನರ ಭಾಗವಹಿಸುವಿಕೆಯ ತಳಹದಿಯ ಮೇಲೆ ನಿಂತಿದೆ. ಪ್ರಜಾಪ್ರಭುತ್ವದ ತೊಟ್ಟಿಲಾಗಿರುವ ನಮ್ಮ ದೇಶದ ಜನರಲ್ಲಿ ಜನಭಾಗಿತ್ವದ ಮನೋಭಾವ ಯಾವಾಗಲೂ ಅಂತರ್ಗತವಾಗಿದೆ. ಇಂದು ನಮ್ಮ ಸಹನಾಗರಿಕರು ಅದೇ ಪರಂಪರೆಯನ್ನು ಹೊಸ ಉತ್ಸಾಹದೊಂದಿಗೆ ಮುನ್ನಡೆಸುತ್ತಿದ್ದಾರೆ. ಜನರ ಸಕ್ರಿಯ ಭಾಗವಹಿಸುವಿಕೆಯ ಮೂಲಕ ರಾಷ್ಟ್ರೀಯ ಅಭಿಯಾನಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಪ್ರೇರಣಾದಾಯಕ ಸಾಧನೆಯಾಗಿದೆ.
ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ, ಜೊತೆಗೆ ವ್ಯಕ್ತಿಯ ಘನತೆಯನ್ನು ಕಾಪಾಡುವುದು ನಮ್ಮ ಸಂವಿಧಾನದ ಆದರ್ಶಗಳಲ್ಲಿ ಪ್ರಮುಖವಾದವು. ಇಂದು ಸಾಮಾನ್ಯ ಹಿನ್ನೆಲೆಯಿಂದ ಬಂದ ಜನರು ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇಂದಿನ ಭಾರತದಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸು ಕಾಣುವುದಷ್ಟೇ ಅಲ್ಲ, ಆ ಕನಸುಗಳನ್ನು ನನಸಾಗಿಸಿಕೊಳ್ಳಲೂ ಸಾಧ್ಯ ಎಂಬ ನನ್ನ ನಂಬಿಕೆಯನ್ನು ಇದು ಮತ್ತಷ್ಟು ಬಲಪಡಿಸುತ್ತದೆ.
ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಹೊಣೆಗಾರಿಕೆಗಳನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದೆ. ಜನರ ಆಶಯಗಳಿಗೆ ಶಾಸಕಾಂಗದಲ್ಲಿ ಧ್ವನಿ ನೀಡುವುದು ಅವರ ಪ್ರತಿನಿಧಿಗಳ ಕರ್ತವ್ಯವಾಗಿದೆ. ರಾಷ್ಟ್ರ ಮತ್ತು ಜನರ ಹಿತಾಸಕ್ತಿಗೆ ಅನುಕೂಲವಾಗುವ ನೀತಿಗಳನ್ನು ಜಾರಿಗೊಳಿಸುವುದು ಕಾರ್ಯಾಂಗದ ಹೊಣೆಗಾರಿಕೆಯಾಗಿದೆ. ಸಂಪನ್ಮೂಲಗಳ ಕೊರತೆಯಿಂದ ಯಾರೂ ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲ ನಾಗರಿಕರೂ, ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ಸೇರಿದವರು, ಘನತೆಯೊಂದಿಗೆ ಸಕಾಲದಲ್ಲಿ ಸಮಾನ ನ್ಯಾಯ ಪಡೆಯುವ ಅವಕಾಶವನ್ನು ಹೊಂದಿರಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ಕಳೆದ ಒಂದು ದಶಕಕ್ಕೂ ಸ್ವಲ್ಪ ಹೆಚ್ಚಿನ ಅವಧಿಯಲ್ಲಿ ನಮ್ಮ ದೇಶವು ಈ ಕೆಳಗಿನ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ:
ತ್ವರಿತ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ;
ಪರಂಪರೆ ಮತ್ತು ಅಭಿವೃದ್ಧಿಯ ನಡುವೆ ಸಮನ್ವಯ ಸಾಧಿಸುವುದಕ್ಕೆ ಆದ್ಯತೆ; ಹಾಗೂ
ದಶಕಗಳಿಂದ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಅನೇಕ ಅಡೆತಡೆಗಳ ನಿವಾರಣೆ.
ನಮ್ಮ ದೇಶವು ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜಯಂತಿಯನ್ನು ಆಚರಿಸುತ್ತಿದೆ. ಮಹಾತ್ಮ ಫುಲೆ ಮತ್ತು ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಕ್ಷೇತ್ರಗಳಲ್ಲಿ ಐತಿಹಾಸಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆದರ್ಶಗಳನ್ನು ಅನುಸರಿಸಿ, ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜದ ವಂಚಿತ ವರ್ಗಗಳ ಉನ್ನತಿಗೆ ಆದ್ಯತೆ ನೀಡಲಾಗಿದೆ. ಮಹಿಳಾ ಶಿಕ್ಷಣದ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಾಗಿದೆ. 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತರಲಾಗಿದೆ. ವಿಶ್ವದ ಅತಿದೊಡ್ಡ ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮವಾದ ‘ಪ್ರಧಾನಮಂತ್ರಿ ಜನಧನ್ ಯೋಜನೆ’ ಅಡಿಯಲ್ಲಿ ಸುಮಾರು 59 ಕೋಟಿ ಖಾತೆದಾರರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ 32 ಕೋಟಿಗೂ ಹೆಚ್ಚು ಖಾತೆದಾರರು ಮಹಿಳೆಯರಾಗಿದ್ದಾರೆ. 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಒದಗಿಸುವ ಮೂಲಕ ಆಹಾರ ಭದ್ರತೆಯನ್ನು ಖಾತರಿಪಡಿಸಲಾಗಿದೆ. ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ ಅಡಿಯಲ್ಲಿ 60 ಕೋಟಿ ಜನರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ರಕ್ಷಣಾ ಸೌಲಭ್ಯ ಒದಗಿಸಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗಳು ಕೃಷಿ, ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆ ಮತ್ತು ಜೇನು ಸಾಕಣೆಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಬೆಂಬಲ ಒದಗಿಸಿವೆ.
ದೃಢವಾದ ಸಾಂಸ್ಕೃತಿಕ ಅಸ್ಮಿತೆಯಲ್ಲಿ ಬೇರೂರಿರುವ ಅಭಿವೃದ್ಧಿಯು ತ್ವರಿತವೂ, ಸುಸ್ಥಿರವೂ ಆಗಿರುತ್ತದೆ ಎಂಬುದಕ್ಕೆ ವಿಶ್ವದ ಇತಿಹಾಸ ಸಾಕ್ಷಿಯಾಗಿದೆ. ಸಾಂಸ್ಕೃತಿಕ ಹೆಮ್ಮೆಯು ರಾಷ್ಟ್ರದ ಆಂತರಿಕ ಶಕ್ತಿಯನ್ನು ಬಲಪಡಿಸುತ್ತದೆ ಎಂಬ ಅರಿವು ಇಂದು ದೇಶದಲ್ಲಿ ಹೆಚ್ಚುತ್ತಿದೆ. ನಮ್ಮ ಪೂರ್ವಜರು ಜ್ಞಾನ, ವಿಜ್ಞಾನ, ಕಲೆ ಮತ್ತು ಸಂಸ್ಕೃತಿ, ಆಧ್ಯಾತ್ಮಿಕತೆ ಹಾಗೂ ಸದಾಚಾರದ ಶ್ರೀಮಂತ ಪರಂಪರೆಯನ್ನು ನಮಗೆ ನೀಡಿದ್ದಾರೆ. ನಮ್ಮ ಪರಂಪರೆ ಮತ್ತು ಅಭಿವೃದ್ಧಿಯ ನಡುವೆ ಸಮನ್ವಯ ಸಾಧಿಸಿಕೊಂಡು ನಾವು ಮುನ್ನಡೆಯುತ್ತಿದ್ದೇವೆ.
ಭಾರತವು ವಿಶ್ವದ ಅತಿದೊಡ್ಡ ಮತ್ತು ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಇಂದು ಸಣ್ಣ ಗ್ರಾಮೀಣ ಅಂಗಡಿಗಳಲ್ಲಿಯೂ ಹಾಗೂ ಬೀದಿ ಬದಿ ವ್ಯಾಪಾರಿಗಳಲ್ಲಿಯೂ ಡಿಜಿಟಲ್ ಪಾವತಿಗಳು ಸಾಮಾನ್ಯವಾಗಿವೆ. ವಿಶ್ವದ ಅರ್ಧಕ್ಕಿಂತ ಹೆಚ್ಚು ತ್ವರಿತ ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತವೆ. ಭಾರತದ ಜನತೆ ಮತ್ತು ಸರ್ಕಾರ ಒಟ್ಟಾಗಿ ಜಗತ್ತಿಗೆ ಡಿಜಿಟಲ್ ಕ್ರಾಂತಿಯ ಮಾದರಿಯನ್ನು ತೋರಿಸಿವೆ. ತಂತ್ರಜ್ಞಾನದ ಬಳಕೆಯ ಮೂಲಕ ಸರ್ಕಾರವು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ಪಾರದರ್ಶಕ ರೀತಿಯಲ್ಲಿ ತಲುಪಿಸಿದೆ.
ಹೆದ್ದಾರಿಗಳು, ಜಲಮಾರ್ಗಗಳು, ರೈಲುಮಾರ್ಗಗಳು ಮತ್ತು ವಾಯುಮಾರ್ಗಗಳ ರೂಪದಲ್ಲಿ ಆಧುನಿಕ ಮೂಲಸೌಕರ್ಯದ ಅಭೂತಪೂರ್ವ ವಿಸ್ತರಣೆಗೆ ನಮ್ಮ ದೇಶ ಸಾಕ್ಷಿಯಾಗಿದೆ. ಇದು ಹೊಸ ಉದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ವಿಶ್ವದ ಹಲವು ಭಾಗಗಳಲ್ಲಿ ಮುಂದುವರಿದಿರುವ ಯುದ್ಧ ಮತ್ತು ಅಸ್ಥಿರತೆ ಪ್ರತಿಯೊಂದು ದೇಶದ ಮೇಲೂ ಪರಿಣಾಮ ಬೀರುತ್ತಿದೆ. ಇಂತಹ ಸವಾಲಿನ ಪರಿಸ್ಥಿತಿಗಳ ನಡುವೆಯೂ ನಮ್ಮ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಯುತ್ತಿದೆ. ಆರ್ಥಿಕ ಮುನ್ನೋಟಗಳ ಪ್ರಕಾರ, ಭಾರತದ ಆರ್ಥಿಕತೆಯ ಬೆಳವಣಿಗೆ ದರವು ಜಾಗತಿಕ ಸರಾಸರಿ ಬೆಳವಣಿಗೆ ದರಕ್ಕಿಂತ ಎರಡು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ‘ಆತ್ಮನಿರ್ಭರ ಭಾರತ ಅಭಿಯಾನ’ ನಮ್ಮ ಆರ್ಥಿಕ ಪ್ರಗತಿ ಮತ್ತು ರಾಷ್ಟ್ರೀಯ ಭದ್ರತೆಯ ಅಡಿಪಾಯವನ್ನು ಮತ್ತಷ್ಟು ಬಲಪಡಿಸಿದೆ.
ಆಧುನಿಕ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಭಾರತವು ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಯಲ್ಲಿಯೂ ಮುಂಚೂಣಿ ಪಾತ್ರ ವಹಿಸುತ್ತಿದೆ. ನಮ್ಮ ದೇಶವು 2030ರ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೆಲವು ಗುರಿಗಳನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಸಾಧಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದ ಅಭಿವೃದ್ಧಿಯು ಅಭೂತಪೂರ್ವ ವೇಗ ಪಡೆದುಕೊಂಡಿದೆ.
ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ವಿದೇಶಾಂಗ ನೀತಿಯ ತಳಹದಿಯಾಗಿದೆ. ಶಾಂತಿ, ಸಹಕಾರ, ಸಂವಾದ ಮತ್ತು ‘ವಸುದೈವ ಕುಟುಂಬಕಂ’ ಎಂಬ ಆದರ್ಶಗಳು ನಮ್ಮ ವಿದೇಶಾಂಗ ನೀತಿಯ ಆಧಾರಸ್ತಂಭಗಳಾಗಿವೆ. ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಮತ್ತು ಪರಸ್ಪರ ಸಂಬಂಧಗಳನ್ನು ಬಲಪಡಿಸಲು ನಾವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಜಾಗತಿಕ ದಕ್ಷಿಣದ ದೇಶಗಳ ನಡುವೆ ನಾವು ಮುಂಚೂಣಿ ಪಾತ್ರ ವಹಿಸುತ್ತಿದ್ದೇವೆ. ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಸ್ಥಾನಮಾನ ಮತ್ತಷ್ಟು ಹೆಚ್ಚಾಗಿದೆ. ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿದೆ. ವಿಶ್ವಸಂಸ್ಥೆ ಹಾಗೂ ಇತರ ಬಹುಪಕ್ಷೀಯ ಸಂಘಟನೆಗಳಲ್ಲಿ ಜಾಗತಿಕ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ನಮ್ಮ ದೇಶದ ಈ ಪ್ರಯತ್ನಕ್ಕೆ ಅನೇಕ ದೇಶಗಳಿಂದ ಬಲವಾದ ಬೆಂಬಲ ದೊರೆಯುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಮಗಿರುವಷ್ಟೇ ಹಕ್ಕು ಭವಿಷ್ಯದ ಪೀಳಿಗೆಗಳಿಗೂ ಇದೆ. ನಮ್ಮ ಯಾವುದೇ ಕಾರ್ಯಗಳಿಂದ ಭವಿಷ್ಯದ ಪೀಳಿಗೆಗಳು ತಮ್ಮ ಈ ಹಕ್ಕನ್ನು ಚಲಾಯಿಸುವುದಕ್ಕೆ ಕೊಂಚವೂ ಧಕ್ಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು. ಅವರಿಗಾಗಿ ಇನ್ನಷ್ಟು ಸಮೃದ್ಧವಾದ ನೈಸರ್ಗಿಕ ಸಂಪತ್ತನ್ನು ಉಳಿಸಿ ಹೋಗುವಂತೆ ನಾವು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ಪರಿಸರ ಸಂರಕ್ಷಣೆಯ ಮೇಲಿನ ನಮ್ಮ ನಂಬಿಕೆ ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಸಂತಾಲಿ ಭಾಷೆಯಲ್ಲಿರುವ ಒಂದು ಸರಳ ಗೀತೆಯು ಅತ್ಯಂತ ಆಳವಾದ ಸಂದೇಶವನ್ನು ನೀಡುತ್ತದೆ. ಪಂಡಿತ್ ರಘುನಾಥ್ ಮುರ್ಮು ಅವರು ರಚಿಸಿರುವ ಆ ಗೀತೆಯ ಕೆಲವು ಸಾಲುಗಳು ಹೀಗಿವೆ:
ದಾರೇ ಗುಜುಗ್ ಕಾನ್ ನ್ಯೇಲ್ ತೇ
ಮಿರು ಚೆನೇಯ್ ರಾಗ್ ಬಯಾಹಾ ದಯಾ ಹಾಯಾ ಗೆ.
ಗುಜುಗ್ ಕಾನ್ ಅಪೋವಾಗ್ ಜಾತಿ ಧರಮ್ ದಾರೇ
ಚೇಡಾಗ್ ಬಬೋನ್ ರಾಗ್ ಬಯಾಹಾ ಅಬೋ ಅನಾ ನ್ಯೇಲ್ ತೇ.
ಈ ಗೀತೆಯಲ್ಲಿ ಒಂದು ಮರ ಸಂಪೂರ್ಣವಾಗಿ ಒಣಗಿಹೋಗಿರುವುದನ್ನು ಕಂಡು ದುಃಖದಿಂದ ಅಸಹಾಯಕವಾಗಿ ಅಳುತ್ತಿರುವ ಗಿಳಿಯೊಂದನ್ನು ಕವಿ ವರ್ಣಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ: “ಓ ನನ್ನ ಪ್ರೀತಿಯ ಸಹೋದರರೇ! ಸಾಯುತ್ತಿರುವ ಮರವನ್ನು ಕಂಡು ಗಿಳಿ ದುಃಖದಿಂದ ಅಳುತ್ತಿದೆ. ಓ ನನ್ನ ಸಹೋದರರೇ! ಮಾನವ ಸಂಸ್ಕೃತಿಯ ಮರವೇ ನಾಶವಾಗುತ್ತಿರುವಾಗ ನಾವು ಮನುಷ್ಯರು ಏಕೆ ದುಃಖಿಸುತ್ತಿಲ್ಲ?” ಎಲ್ಲರೂ ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಸಂರಕ್ಷಿಸಲು ಬದ್ಧರಾಗಿರಬೇಕು ಎಂಬುದೇ ಈ ಗೀತೆಯ ಸಂದೇಶ. ಹಸಿರು - ಹಚ್ಚನೆಯ ಮರವು ಮಾನವ ಸಮಾಜದ ನೈತಿಕ ಆದರ್ಶಗಳು ಮತ್ತು ಕ್ಷೇಮದ ಸಂಕೇತವಾಗಿದೆ. ‘ಏಕ್ ಪೇಡ್ ಮಾ ಕೆ ನಾಮ್’ ಮತ್ತು ‘ಲೈಫ್‌ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್’ ಅಥವಾ LiFE ನಂತಹ ಅಭಿಯಾನಗಳ ಆಶಯದಂತೆ, ಪರಿಸರವನ್ನು ರಕ್ಷಿಸಲು ನಾವು ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಪ್ರಯತ್ನಿಸಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ನಮ್ಮ ಹೆಣ್ಣುಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವುದನ್ನು ಕಂಡು ನನಗೆ ಅಪಾರ ಸಂತೋಷವವಾಗುತ್ತಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತಿರುವ ಡ್ರೋನ್ ದೀದಿಯಿಂದ ಹಿಡಿದು ವಾಯುಪಡೆಯ ʼಫೈಟರ್ ಕಾಂಬ್ಯಾಟ್ ಲೀಡರ್ʼವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ಗ್ಲಾಸ್ಗೋದಲ್ಲಿ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಒಟ್ಟು 13 ಚಿನ್ನದ ಪದಕಗಳ ಪೈಕಿ 8 ಪದಕಗಳನ್ನು ಮಹಿಳೆಯರು ಗೆದ್ದಿದ್ದಾರೆ. ನಮ್ಮ ಮಹಿಳೆಯರು ಆರ್ಥಿಕ ಸ್ವಾವಲಂಬನೆಯತ್ತ ಹೆಚ್ಚೆಚ್ಚು ಮುನ್ನಡೆಯುತ್ತಿದ್ದಾರೆ. 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳ ಸದಸ್ಯರಾಗಿದ್ದಾರೆ. 3 ಕೋಟಿ ಲಕ್ಷಾಧಿಪತಿ ದೀದಿಯರನ್ನು ಸೃಷ್ಟಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆ ಗುರಿಯನ್ನು ಸಾಧಿಸಲಾಗಿದೆ. ಈಗ ನಮ್ಮ ದೇಶವು ಇನ್ನೂ 3 ಕೋಟಿ ಹೊಸ ಲಕ್ಷಾಧಿಪತಿ ದೀದಿಯರನ್ನು ಸೃಷ್ಟಿಸುವ ಗುರಿಯತ್ತ ಸಾಗುತ್ತಿದೆ. ‘ಮುದ್ರಾ ಯೋಜನೆ’ ಅಡಿಯಲ್ಲಿ ಹಣಕಾಸು ನೆರವು ಪಡೆದ ಉದ್ಯಮಿಗಳಲ್ಲಿ ಸುಮಾರು ಮೂರನೇ ಎರಡರಷ್ಟು ಮಂದಿ ಮಹಿಳೆಯರಾಗಿದ್ದಾರೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಜೊತೆಗೆ, ಅನೇಕ ಕ್ಷೇತ್ರಗಳಲ್ಲಿ ಅವರು ನಾಯಕತ್ವದ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಪ್ರಜಾಸತ್ತಾತ್ಮಕ ಗಣರಾಜ್ಯದ ಗಮನಾರ್ಹ ಸಾಧನೆಯಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಪ್ರಾತಿನಿಧ್ಯವನ್ನು ಮೀಸಲಿಡುವ ಉದ್ದೇಶದಿಂದ ‘ನಾರಿ ಶಕ್ತಿ ವಂದನ ಅಧಿನಿಯಮ’ವನ್ನು 2023ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಉದ್ದೇಶಗಳನ್ನು ಸಾಧಿಸುವುದರಿಂದ ನಾಯಕತ್ವದಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಹೆಚ್ಚಲಿದೆ ಮತ್ತು ನಮ್ಮ ಪ್ರಜಾಪ್ರಭುತ್ವವು ಇನ್ನಷ್ಟು ಸಮಗ್ರವಾಗಲಿದೆ.
ನಮ್ಮ ದೇಶದ ಜನಸಂಖ್ಯೆಯ ಶೇಕಡಾ 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಯುವಜನಸಂಖ್ಯೆಯೇ ನಮ್ಮ ಅತ್ಯಮೂಲ್ಯ ಸಂಪತ್ತು. ನಮ್ಮ ದೇಶದ ಯುವಜನರು ಪ್ರತಿಭಾವಂತರು, ಬದ್ಧತೆಯುಳ್ಳವರು ಮತ್ತು ಕೌಶಲ್ಯಸಂಪನ್ನರು. ತಳಮಟ್ಟದಲ್ಲಿ ವಿವಿಧ ಸವಾಲುಗಳನ್ನು ಪರಿಹರಿಸಲು ನಮ್ಮ ಯುವಜನರು ಅಭಿವೃದ್ಧಿಪಡಿಸುತ್ತಿರುವ ನವೀನ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ನಾನು ನೋಡಿದ್ದೇನೆ. ಇದು ಸಮಾಜ ಮತ್ತು ರಾಷ್ಟ್ರದ ಬಗ್ಗೆ ನಮ್ಮ ಯುವಜನರ ಸಮರ್ಪಣಾಭಾವವನ್ನು ಪ್ರತಿಬಿಂಬಿಸುತ್ತದೆ. ಸರಾಸರಿ ಕೇವಲ 28 ವರ್ಷ ವಯಸ್ಸಿನ ಯುವ ತಂಡವೊಂದು ಇತ್ತೀಚೆಗೆ ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿರುವುದು ಬಾಹ್ಯಾಕಾಶ ಅನ್ವೇಷಣೆಯ ಹೊಸ ಹಂತಕ್ಕೆ ನಾಂದಿ ಹಾಡಿದೆ.
ನಮ್ಮ ಅನೇಕ ಯುವಜನರು ಸ್ವಉದ್ಯೋಗದ ಮಾರ್ಗವನ್ನು ಅನುಸರಿಸುತ್ತಾ ಉದ್ಯೋಗ ಸೃಷ್ಟಿಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯುವ ಉದ್ಯಮಿಗಳ ಭಾಗವಹಿಸುವಿಕೆಯಿಂದ ನಮ್ಮ ದೇಶದಲ್ಲಿ ಬಲಿಷ್ಠ ನವೋದ್ಯಮ ಪರಿಸರ ವ್ಯವಸ್ಥೆ ರೂಪುಗೊಂಡಿದೆ. ಜಾಗತಿಕ ಮಟ್ಟದ ಪ್ರಮುಖ ಉದ್ಯಮಗಳು ಭಾರತೀಯ ಯುವಜನರ ಪ್ರತಿಭೆ ಮತ್ತು ಸಮರ್ಪಣಾಭಾವದಿಂದ ಪ್ರಭಾವಿತರಾಗಿ, ಅವರಿಗೆ ನಾಯಕತ್ವದ ಹೊಣೆಗಾರಿಕೆಗಳನ್ನು ವಹಿಸುತ್ತಿವೆ. ಇಂತಹ ಯುವ ಸಾಧಕರು ವಿಶ್ವದಾದ್ಯಂತ ಭಾರತದ ಯುವಶಕ್ತಿಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ನಮ್ಮ ಯುವ ಪೀಳಿಗೆಗಳು ಭಾರತದ ಉಜ್ವಲ ಮತ್ತು ಸಮೃದ್ಧ ಭವಿಷ್ಯದ ಬಗ್ಗೆ ನನ್ನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ.
ನಮ್ಮ ವಿದ್ಯಾರ್ಥಿಗಳೇ ಭಾರತದ ಭವಿಷ್ಯದ ಶಿಲ್ಪಿಗಳು. ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸಮಾಜ ಒಗ್ಗಟ್ಟಾಗಿ ನಿಲ್ಲಬೇಕಾದಂತೆ, ನಮ್ಮ ವಿದ್ಯಾರ್ಥಿಗಳ ವರ್ತಮಾನ ಮತ್ತು ಭವಿಷ್ಯವನ್ನು ರಕ್ಷಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ಕೊಡುಗೆ ನೀಡಬೇಕು. ಸಾರ್ವಜನಿಕ ಪರೀಕ್ಷೆಗಳು ನಮ್ಮ ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲುಗಳಾಗಿ ಪರಿಣಮಿಸುತ್ತವೆ. ಈ ಪರೀಕ್ಷೆಗಳಲ್ಲಿ ಸುಧಾರಣೆ ತರಲು ಸರ್ಕಾರ ಸಮಗ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವುದು, ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಹೆಚ್ಚು ಸುರಕ್ಷಿತ ಮತ್ತು ಯುವಜನರಿಗೆ ಹೆಚ್ಚು ವಿಶ್ವಾಸಾರ್ಹವಾಗಿಸುವುದು ಈ ಸುಧಾರಣೆಗಳ ಉದ್ದೇಶವಾಗಿದೆ.
ಸರ್ಕಾರದ ಉಪಕ್ರಮಗಳು ಮತ್ತು ಉದಯೋನ್ಮುಖ ಆರ್ಥಿಕ ಚಟುವಟಿಕೆಗಳ ಮೂಲಕ ಯುವಜನರಿಗೆ ವಿವಿಧ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಇಂತಹ ಹೊಸ ಅವಕಾಶಗಳನ್ನು ಅನ್ವೇಷಿಸುವ ಮೂಲಕ ನಮ್ಮ ಯುವಜನರು ಯಶಸ್ಸಿನ ಹೊಸ ಮಾರ್ಗಗಳಲ್ಲಿ ಹೆಜ್ಜೆ ಇಡಬಹುದು.
ನಮ್ಮ ಯುವಜನರ ದೈಹಿಕ ಮತ್ತು ಮಾನಸಿಕ ಕ್ಷೇಮವೇ ನಮ್ಮ ದೇಶದ ಭವಿಷ್ಯದ ಮೂಲಾಧಾರವಾಗಿದೆ. ನಮ್ಮ ಯುವಜನರನ್ನು ಉತ್ಸಾಹದಿಂದ ಮುನ್ನಡೆಯುವಂತೆ ಪ್ರೇರೇಪಿಸುವ ಜವಾಬ್ದಾರಿ ಕುಟುಂಬಗಳು ಮತ್ತು ಸಮಾಜಕ್ಕೂ ಇದೆ.
ಯುವಜನರ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣವನ್ನು ಉತ್ತೇಜಿಸುವ ಮಾಧ್ಯಮವಾಗಿ ಕ್ರೀಡೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ‘ಖೇಲೋ ಇಂಡಿಯಾ’ ಕಾರ್ಯಕ್ರಮದ ಅಡಿಯಲ್ಲಿ ತಳಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ದೇಶಾದ್ಯಂತ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕ್ರೀಡೆಯನ್ನು ಉತ್ತೇಜಿಸಲು ಸರ್ಕಾರ ಅಭೂತಪೂರ್ವ ಹೂಡಿಕೆ ಮಾಡುತ್ತಿದೆ. ಈ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳ ಪ್ರದರ್ಶನ ಮತ್ತು ಸಾಧನೆಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ.
ನಮ್ಮ ದೇಶವು ವಿಶ್ವದ ಅತಿದೊಡ್ಡ ಯುವಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ, ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಹಿರಿಯ ನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 6 ಕೋಟಿ ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು. ಸಮಾಜವು ಒಟ್ಟಾರೆಯಾಗಿ ಹಿರಿಯ ನಾಗರಿಕರ ಬಗ್ಗೆ ಸಂವೇದನಾಶೀಲವಾಗಿರಬೇಕು, ಅವರಲ್ಲಿ ಆತ್ಮೀಯತೆಯ ಭಾವನೆಯನ್ನು ಮೂಡಿಸಬೇಕು ಮತ್ತು ಅವರ ಆತ್ಮಗೌರವವನ್ನು ಎತ್ತಿಹಿಡಿಯಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ಮನುಕುಲಕ್ಕೆ ಪ್ರತಿಕೂಲವಾದ ಶಕ್ತಿಗಳನ್ನು ಎದುರಿಸಿ, ಸತ್ಯ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ನಮ್ಮ ಪರಂಪರೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಜುಲೈ 26ರಂದು ನಾವು ಕಾರ್ಗಿಲ್ ವಿಜಯ ದಿವಸ್ ಆಚರಿಸಿದ್ದೇವೆ. ಇದಕ್ಕೂ ಮೊದಲು, ಮೇ 7ರಂದು ಆಪರೇಷನ್ ಸಿಂಧೂರ್ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡಿರುವುದನ್ನು ಸ್ಮರಿಸಿದ್ದೇವೆ. ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಶೌರ್ಯವನ್ನು ನಾವು ಸ್ಮರಿಸಿದ್ದೇವೆ. ಭಯೋತ್ಪಾದನೆಯ ವಿರುದ್ಧ ನಡೆದ ಆ ಐತಿಹಾಸಿಕ ಕಾರ್ಯಾಚರಣೆಯು ಭಾರತೀಯ ಸಶಸ್ತ್ರ ಪಡೆಗಳು ನಿಖರತೆಯಿಂದ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ನೀಡುವವರಿಗೆ 'ನೀವು ಎಲ್ಲೇ ಅಡಗಿದ್ದರೂ ನಿಮ್ಮ ಕೃತ್ಯಗಳ ಪರಿಣಾಮವನ್ನು ಅನುಭವಿಸಲೇಬೇಕು' ಎಂಬ ಸ್ಪಷ್ಟ ಮತ್ತು ದೃಢವಾದ ಸಂದೇಶವನ್ನು ಅದು ರವಾನಿಸಿತು. ಭಯೋತ್ಪಾದನೆಗೆ ಆಶ್ರಯ ನೀಡುವ ದೇಶದೊಂದಿಗೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದು ನಮ್ಮ ರಾಷ್ಟ್ರದ, ವಿಶೇಷವಾಗಿ ರೈತರ ಹಿತಾಸಕ್ತಿಯಲ್ಲಿ ಕೈಗೊಂಡ ನಿರ್ಣಾಯಕ ಹೆಜ್ಜೆಯಾಗಿದೆ.
ದಶಕಗಳ ಕಾಲ ನಕ್ಸಲಿಸಂ ರಾಷ್ಟ್ರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿತ್ತು. ಭಾರತವನ್ನು ನಕ್ಸಲ್ ಮುಕ್ತಗೊಳಿಸಿರುವುದು ಒಂದು ಮಹತ್ವದ ಸಾಧನೆಯಾಗಿದೆ. ಇಂದು ಹಿಂದೆ ನಕ್ಸಲಿಸಂ ಪೀಡಿತವಾಗಿದ್ದ ಪ್ರದೇಶಗಳಲ್ಲಿ ಉತ್ಸಾಹದ ವಾತಾವರಣ ಕಂಡುಬರುತ್ತಿದೆ. ಈ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿ ನಡೆಯುತ್ತಿದೆ. ಬಸ್ತಾರ್ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಬಸ್ತಾರ್ ಪಂಡುಮ್ ನಲ್ಲಿ ಅನೇಕ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇವುಗಳನ್ನು ಹೆಚ್ಚಿನ ಸಂಖ್ಯೆಯ ಜನರು ಆನಂದಿಸಿದರು.
ರಾಷ್ಟ್ರೀಯ ಹೆಮ್ಮೆ ಮತ್ತು ಗೌರವವನ್ನು ರಕ್ಷಿಸಲು ನಿರ್ಮಿಸಲಾದ, ಮರಾಠಾ ಸೇನಾ ಪರಂಪರೆಯೊಂದಿಗೆ ಸಂಬಂಧ ಹೊಂದಿರುವ 12 ಕೋಟೆಗಳನ್ನು ಕಳೆದ ವರ್ಷ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈ ವರ್ಷ ಭಗವಾನ್ ಬುದ್ಧರು ತಮ್ಮ ಮೊದಲ ಧರ್ಮೋಪದೇಶ ನೀಡಿದ ಸ್ಥಳವಾದ ಸಾರನಾಥವನ್ನೂ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಒಂದು ಕಡೆ ಭಾರತ ಭೂಮಿಯಲ್ಲಿ ಭಗವಾನ್ ಬುದ್ಧರಿಗೆ ಸಂಬಂಧಿಸಿದ ಆಧ್ಯಾತ್ಮಿಕ ಪರಂಪರೆಯ ಸ್ಮಾರಕಗಳಿವೆ. ಮತ್ತೊಂದೆಡೆ, ನಮ್ಮ ಹೆಮ್ಮೆ ಮತ್ತು ವೈಭವಯುತ ಪರಂಪರೆಗಳನ್ನು ಸಂರಕ್ಷಿಸಲು ಹೋರಾಡುವ ನಮ್ಮ ಅದ್ಭುತ ಸಾಮರ್ಥ್ಯದ ಸಂಕೇತಗಳೂ ಇವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಪ್ರತಿಯೊಬ್ಬ ಭಾರತೀಯನ ಅಭಿವೃದ್ಧಿ ಮತ್ತು ಕ್ಷೇಮವೇ ವಿಕಸಿತ ಭಾರತ ನಿರ್ಮಾಣದ ನಿಜವಾದ ಉದ್ದೇಶವಾಗಿದೆ. ತೆಲುಗಿನಲ್ಲಿ ಬರೆಯುತ್ತಿದ್ದ ಮಹಾನ್ ರಾಷ್ಟ್ರವಾದಿ ಸಾಹಿತಿ ಗುರ್ಜಾಡ ಅಪ್ಪಾರಾವ್ ಅವರು ತಮ್ಮ ಒಂದು ಗೀತೆಯ ಮೂಲಕ ದೇಶಭಕ್ತಿಯ ಕಾಲಾತೀತ ಸಂದೇಶವನ್ನು ನೀಡಿದ್ದಾರೆ:
ದೇಸಮುನು ಪ್ರೇಮಿಂಚುಮನ್ನ, ಮಂಚಿ ಅನ್ನದಿ ಪೆಂಚುಮನ್ನ.
ದೇಸಮಂಟೇ ಮಟ್ಟಿ ಕಾದೋಯ್, ದೇಸಮಂಟೇ ಮನುಷುಲೋಯ್.
ಈ ಸಾಲುಗಳ ಸಾರ ಹೀಗಿದೆ:
ದೇಶವನ್ನು ಪ್ರೀತಿಸಿ,
ಒಳ್ಳೆಯತನವನ್ನು ಬೆಳೆಸಿ.
ದೇಶವೆಂದರೆ ಕೇವಲ ನೆಲವಲ್ಲ,
ದೇಶವೆಂದರೆ ಅದರ ಜನರೆಲ್ಲರೂ.
ಸಮಾಜದ ಭಾಗವಹಿಸುವಿಕೆ ಮತ್ತು ಸರ್ಕಾರದ ಪ್ರಯತ್ನಗಳ ಮೂಲಕ ಭಾರತದ ಪ್ರತಿಯೊಂದು ಹಳ್ಳಿ, ಪ್ರತಿಯೊಂದು ಪಟ್ಟಣ ಹಾಗೂ ಪ್ರತಿಯೊಂದು ಮನೆಯ ಜನರು ಆರೋಗ್ಯವಂತರು, ಸಂತೋಷಭರಿತರು ಮತ್ತು ಸಮೃದ್ಧರಾಗುತ್ತಾರೆ ಎಂಬುದು ನನ್ನ ನಂಬಿಕೆಯಾಗಿದೆ.
ಎಲ್ಲರನ್ನೂ ಒಳಗೊಳ್ಳುವ ಈ ದೇಶಭಕ್ತಿಯ ಮನೋಭಾವದೊಂದಿಗೆ, ಸ್ವತಂತ್ರ ಭಾರತವನ್ನು ವಿಕಸಿತ ಭಾರತವಾಗಿ ಪರಿವರ್ತಿಸುವ ಪವಿತ್ರ ರಾಷ್ಟ್ರೀಯ ಗುರಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.
ಧನ್ಯವಾದಗಳು!
ಜೈ ಹಿಂದ್!
ಜೈ ಭಾರತ್!
******
(रिलीज़ आईडी: 2299591)
आगंतुक पटल : 30
इस विज्ञप्ति को इन भाषाओं में पढ़ें:
Tamil
,
Telugu
,
Malayalam
,
Assamese
,
Bengali
,
Odia
,
English
,
Khasi
,
Urdu
,
हिन्दी
,
Nepali
,
Marathi
,
Punjabi
,
Gujarati