ಹಣಕಾಸು ಸಚಿವಾಲಯ
ಯುಪಿಐ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ
ವ್ಯಾಪಾರಿಗಳಿಗೂ ಸಹ ಹೆಚ್ಚಿನ ಸಂಖ್ಯೆಯ ವಹಿವಾಟುಗಳು ಉಚಿತವಾಗಿಯೇ ಉಳಿಯಲಿವೆ
ಹಣಕಾಸು ಸೇರ್ಪಡೆಯ ಮತ್ತಷ್ಟು ವಿಸ್ತರಣೆ, ಯುಪಿಐನ ಸುದೀರ್ಘ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಮುಂಬರುವ ಅಪಾಯಗಳ ವಿರುದ್ಧ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ (ಪಿಎಸ್ ಎಸ್ ಕಾಯ್ದೆ) ತಿದ್ದುಪಡಿ ತರುವ ಸಬಲೀಕರಣದ ನಿಬಂಧನೆ
प्रविष्टि तिथि:
08 AUG 2026 6:40PM by PIB Bengaluru
ಭಾರತ ಸರ್ಕಾರವು ಈ ಕೆಳಗಿನವುಗಳನ್ನು ಸ್ಪಷ್ಟವಾಗಿ ತಿಳಿಸಲು ಬಯಸುತ್ತದೆ:
ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ: ಪಾವತಿ ಮಾಡುವ ಗ್ರಾಹಕರು ಯಾವುದೇ ವಹಿವಾಟು ಶುಲ್ಕವನ್ನು ಭರಿಸಬೇಕಾಗಿಲ್ಲ.
ಪಿ2ಪಿ ವಹಿವಾಟುಗಳು ಉಚಿತ: ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲಾ ವಹಿವಾಟುಗಳು ಉಚಿತವಾಗಿ ಮುಂದುವರಿಯಲಿವೆ.
ವ್ಯಾಪಾರಿಗಳಿಗೆ ನಾಮಮಾತ್ರದ ಎಂಡಿಆರ್: ಎಂಡಿಆರ್ ಶುಲ್ಕಗಳನ್ನು ಜಾರಿಗೆ ತಂದ ಸಂದರ್ಭದಲ್ಲಿ, ಅವುಗಳನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಎಂಡಿಆರ್ ಗಿಂತ ಅತ್ಯಂತ ಕಡಿಮೆ ದರದಲ್ಲಿ, ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ, ಕೇವಲ ಸೀಮಿತ ಸಂಖ್ಯೆಯ ವ್ಯಾಪಾರಿಗಳ ವಹಿವಾಟುಗಳಿಗೆ ಮಾತ್ರ ಅನ್ವಯಿಸಲಾಗುತ್ತದೆ.
ಯುಪಿಐನಲ್ಲಿ ವ್ಯಾಪಾರಿಗಳಿಗೂ ಸಹ ಹೆಚ್ಚಿನ ಸಂಖ್ಯೆಯ ವಹಿವಾಟುಗಳು ಉಚಿತವಾಗಿಯೇ ಉಳಿಯಲಿವೆ. ಎಂಡಿಆರ್ ಜಾರಿಗೆ ತಂದರೂ, ಅದು ಮಿತಿಯ ಆಧಾರದ ಮೇಲಿರುತ್ತದೆಯೇ ಹೊರತು ಎಲ್ಲರಿಗೂ ಕಡ್ಡಾಯವಾಗಿ ವಿಧಿಸುವುದಿಲ್ಲ.
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007ರ ಸೆಕ್ಷನ್ 10ಎ ಅನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುವ ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2026 ಅನ್ನು ಸಂಸತ್ತು ಅಂಗೀಕರಿಸಿದ ನಂತರ, ಎನ್ಪಿಸಿಐ ನೇತೃತ್ವದ “ಯುಪಿಐ ಮತ್ತು ಸೇವೆಗಳ ಸಂಚಾಲನಾ ಸಮಿತಿ”ಯು ಯಾವುದಾದರೂ ಇದ್ದರೆ ಎಂಡಿ ಆರ್ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ.
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ ತಿದ್ದುಪಡಿ ಏಕೆ ಮಾಡಬೇಕು?
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ (ಪಿ ಎಸ್ ಎಸ್ ಕಾಯ್ದೆ) ಇತ್ತೀಚೆಗೆ ತರಲಾದ ತಿದ್ದುಪಡಿಯು ಚರ್ಚೆಯನ್ನು ಹುಟ್ಟು ಹಾಕಿದ್ದು, ಸಾಮಾನ್ಯ ಬಳಕೆದಾರರ ಮೇಲೆ ಶುಲ್ಕ ಹೇರುವ ಕ್ರಮ ಎಂದು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ವಾಸ್ತವವಾಗಿ, ಈ ತಿದ್ದುಪಡಿಯು ಯುಪಿಐನ ದೀರ್ಘಕಾಲೀನ ಸುಸ್ಥಿರತೆ, ತಾಂತ್ರಿಕ ಪ್ರಗತಿ ಮತ್ತು ಭವಿಷ್ಯದ ಅಪಾಯಗಳ ವಿರುದ್ಧ ಚೇತರಿಕೆಯನ್ನು ಖಚಿತಪಡಿಸಲು ವಿನ್ಯಾಸಗೊಳಿಸಲಾದ ಒಂದು ಸಬಲೀಕರಣ ನಿಬಂಧನೆಯಾಗಿದೆ.
ಯುಪಿಐನ ಬೆಳವಣಿಗೆ: ಯುಪಿಐನ ವಹಿವಾಟುಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ, ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ಮೂಲಸೌಕರ್ಯಗಳಲ್ಲಿ ಗಮನಾರ್ಹ ಮತ್ತು ನಿರಂತರ ಸುಧಾರಣೆಗಳ ಅಗತ್ಯವಿದೆ.
ಮಾರುಕಟ್ಟೆ ವಿಸ್ತರಣೆ: ಹೆಚ್ಚಿನ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಪ್ರೋತ್ಸಾಹಿಸುವ ಮೂಲಕ ಸ್ಪರ್ಧೆಯನ್ನು ಹೆಚ್ಚಿಸುವ ಅಗತ್ಯವಿದೆ, ಇದಕ್ಕಾಗಿ ಸ್ವಯಂ ಸುಸ್ಧಿರತೆಯ ಆದಾಯ ಮಾದರಿಯ ಅಗತ್ಯವಿದೆ.
ಸ್ವಯಂ-ಸುಸ್ಥಿರತೆ: ಮುಂದಿನ ಹಂತದ ಬೆಳವಣಿಗೆಗೆ ಕೇವಲ ಸಬ್ಸಿಡಿಗಳ ಮೇಲಿನ ಅವಲಂಭನೆ ಕಾರ್ಯಸಾಧ್ಯವಲ್ಲ. ಯುಪಿಐ ದೃಢವಾಗಿ, ಎಲ್ಲರನ್ನೂ ಒಳಗೊಂಡಂತೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಮತೋಲಿತ ಚೌಕಟ್ಟಿನ ಅಗತ್ಯವಿದೆ.
ಸುಳ್ಳು, ಅಪಾರ್ಥಗಳಿಂದಾಗುವ ಕಳವಳಗಳ ಬಗ್ಗೆ ಸ್ಪಷ್ಟೀಕರಣ
ಬಾಹ್ಯ ಪ್ರಭಾವಗಳು ನೀತಿ ಬದಲಾವಣೆಗಳಿಗೆ ಕಾರಣವಾಗಿರಬಹುದು ಎಂದು ಕೆಲವು ಮಾಧ್ಯಮ ವರದಿಗಳು ಸೂಚಿಸಿವೆ. ಇದು ಆಧಾರರಹಿತವಾಗಿದ್ದು, ಸಂಪೂರ್ಣವಾಗಿ ಸುಳ್ಳು ಮತ್ತು ದಾರಿತಪ್ಪಿಸುವಂತಹುದಾಗಿದೆ. ಬಾಹ್ಯ ಒತ್ತಡವೇ ಕಾರಣವಾಗಿದ್ದರೆ, ಸರ್ಕಾರವು 2016ರಲ್ಲಿ ಯುಪಿಐ ಅನ್ನು ಪರಿಚಯಿಸುತ್ತಿರಲಿಲ್ಲ ಅಥವಾ ಜನವರಿ 2020 ರಿಂದ ವ್ಯಾಪಾರಿಗಳಿಗೆ ಮತ್ತು ನಾಗರಿಕರಿಗೆ ಉಚಿತವಾಗಿ ಮಾಡುತ್ತಿರಲಿಲ್ಲ, ಹಾಗೂ ಅದನ್ನು ವಿಶ್ವದ ಅತಿದೊಡ್ಡ ʻರಿಯಲ್-ಟೈಮ್ ಇಂಟರ್ಆಪರೇಬಲ್ʼ ಪಾವತಿ ವ್ಯವಸ್ಥೆಯನ್ನಾಗಿ ಮಾಡುತ್ತಿರಲಿಲ್ಲ.
ಆದ್ದರಿಂದ, ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯವು ಸುಸ್ಥಿರವಾಗಿ, ಸ್ಪರ್ಧಾತ್ಮಕವಾಗಿ, ನವೀನವಾಗಿ ಮತ್ತು ದೇಶದ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಆರ್ಥಿಕತೆಗೆ ಸೇವೆ ಸಲ್ಲಿಸಲು ಸಮರ್ಥವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ವಿಶಾಲ ಉದ್ದೇಶದ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಕಾಣಬೇಕು.
ವಿಷಯವು ಸರಳವಾಗಿದೆ; ಯುಪಿಐ ಭಾರತದ ಸ್ವಂತ ಆವಿಷ್ಕಾರವಾಗಿದೆ, ಮತ್ತು ಮುಂಬರುವ ದಶಕಗಳಲ್ಲಿ ಅದರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಾಗ ನಾಗರಿಕರಿಗೆ ಅದನ್ನು ಉಚಿತವಾಗಿಡಲು ಸರ್ಕಾರ ಬದ್ಧವಾಗಿದೆ.
ಬೆಳವಣಿಗೆಯ ಮುಂದಿನ ಹಂತ
ಭಾರತವು ಈಗ ಡಿಜಿಟಲ್ ಪಾವತಿಗಳ ಬೆಳವಣಿಗೆಯ ಮುಂದಿನ ಹಂತದ ಹೊಸ್ತಿಲಲ್ಲಿ ನಿಂತಿದೆ. ಯುಪಿಐ ಅನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಿಗೆ ಮತ್ತಷ್ಟು ವಿಸ್ತರಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು, ಯುಪಿಐ ವ್ಯವಸ್ಥೆಯು ಸ್ವಯಂ ಸುಸ್ಥಿರವಗಿರಬೇಕು ಮತ್ತು ಕೈಗೆಟುಕುವಂತಿರಬೇಕು. ಪಿಎಸ್ ಎಸ್ ಕಾಯ್ದೆಗೆ ತಂದ ತಿದ್ದುಪಡಿಯು ಯುಪಿಐ ಸುರಕ್ಷಿತ, ಕೈಗೆಟುಕುವ, ಸಮಗ್ರ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟ ಪಾವತಿ ವ್ಯವಸ್ಥೆಯಾಗಿ ಬೆಳೆಯುವುದನ್ನು ಮುಂದುವರಿಸಲು ತೆಗೆದುಕೊಂಡ ದೂರದೃಷ್ಟಿಯ ಹೆಜ್ಜೆಯಾಗಿದೆ.
ಸಾರಂಶ:
- ಭಾರತ ಸರ್ಕಾರವು ಪುನರುಚ್ಚರಿಸುತ್ತದೆ:
- ನಾಗರಿಕರಿಗೆ ಯುಪಿಐ ಉಚಿತವಾಗಿಯೇ ಇರಲಿದೆ.
- ನಾಗರಿಕರ ದೈನಂದಿನ ವಹಿವಾಟುಗಳ ಮೇಲೆ ಯಾವುದೇ ಶುಲ್ಕವಿರುವುದಿಲ್ಲ.
- ಭವಿಷ್ಯದ ಯಾವುದೇ ಎಂಡಿಆರ್ ನಾಮಮಾತ್ರವಾಗಿರುತ್ತದೆ ಮತ್ತು ಸೀಮಿತ ಸಂಖ್ಯೆಯ ವ್ಯಾಪಾರಿಗಳ ವಹಿವಾಟುಗಳ ಮೇಲೆ ಮಾತ್ರ ಅನ್ವಯಿಸುತ್ತದೆ.
- ಯುಪಿಐ ಭಾರತದ ಪ್ರಮುಖ ಡಿಜಿಟಲ್ ನಾವೀನ್ಯತೆಯಾಗಿ ಮುಂದುವರಿಯುತ್ತದೆ, ಜಾಗತಿಕವಾಗಿ ವಿಸ್ತರಿಸುತ್ತದೆ.
2016-17 ರಲ್ಲಿ ಪ್ರಾರಂಭವಾದಂದಿನಿಂದ, ಏಕೀಕೃತ ಪಾವತಿ ವ್ಯವಸ್ಥೆಯು (ಯುಪಿಐ) ಭಾರತದ ಡಿಜಿಟಲ್ ಆರ್ಥಿಕತೆಯನ್ನು ಜಗತ್ತಿನ ಅತ್ಯಂತ ಒಳಗೊಳ್ಳುವ ಮತ್ತು ಕ್ರಿಯಾತ್ಮಕ ಪಾವತಿ ವ್ಯವಸ್ಥೆಯನ್ನಾಗಿ ಪರಿವರ್ತಿಸಿದೆ. ನೈಜ ಸಮಯದ, ಪರಸ್ಪರ ಕಾರ್ಯಸಾಧ್ಯ ಪಾವತಿಗಳಲ್ಲಿ ದಿಟ್ಟ ಪ್ರಯೋಗವಾಗಿ ಪ್ರಾರಂಭವಾದದ್ದು ಈಗ ಜಾಗತಿಕ ಮಾನದಂಡವಾಗಿದೆ. ಪ್ರತಿ ತಿಂಗಳು ಕೋಟ್ಯಂತರ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತಾ ದೈನಂದಿನ ಜೀವನದ ಆಳಕ್ಕೆ ತಲುಪಿದೆ. ಇಂದು, ಯುಪಿಐ ವಿಶ್ವದ ಅತಿದೊಡ್ಡ ನೈಜ ಸಮಯದ ಪಾವತಿ ವ್ಯವಸ್ಥೆಯಾಗಿ ಬೆಳೆದಿದ್ದು, ಜುಲೈ 2026ರ ಒಂದೇ ತಿಂಗಳಲ್ಲಿ ₹29.9 ಲಕ್ಷ ಕೋಟಿ ಮೌಲ್ಯದ 2,366 ಕೋಟಿ ವಹಿವಾಟುಗಳನ್ನು ಸಂಸ್ಕರಿಸಿದೆ. ಯುಪಿಐ ಈಗ 11 ವಿದೇಶಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ ಮತ್ತು ಇತರ ಹಲವು ದೇಶಗಳು ಆಸಕ್ತಿ ತೋರಿಸಿವೆ.
ಯುಪಿಐ ಎನ್ನುವುದು ಭಾರತೀಯರು ಭಾರತೀಯರಿಗಾಗಿ ನಿರ್ಮಿಸಿದ ರಾಷ್ಟ್ರದ ಸಾಧನೆಯಾಗಿದೆ. ಸರ್ಕಾರವು ಇದನ್ನು ಒಂದು ದಶಕದಿಂದ ಪ್ರೋತ್ಸಾಹಿಸಿದೆ, ಧನಸಹಾಯ ನೀಡಿದೆ ಮತ್ತು ಬೆಳೆಸಿದೆ, ಮತ್ತು ಮುಂದೆಯೂ ಹಾಗೆಯೇ ಮುಂದುವರಿಸುತ್ತದೆ. ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎನ್ ಪಿ ಸಿ ಐ ನ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಮತ್ತು ಪರಿಶೀಲಿಸದ ಸಂದೇಶಗಳನ್ನು ಫಾರ್ವರ್ಡ್ ಮಾಡದಂತೆ ನಾಗರಿಕರಲ್ಲಿ ವಿನಂತಿಸಲಾಗಿದೆ.
*****
(रिलीज़ आईडी: 2296642)
आगंतुक पटल : 37