ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೂರದರ್ಶನ ಮತ್ತು ರೇಡಿಯೋ ಸೇವೆಗಳಿಗೆ ನಿಯಂತ್ರಣ ಚೌಕಟ್ಟನ್ನು ಸರಳಗೊಳಿಸಲು ದೂರಸಂಪರ್ಕ (ದೂರದರ್ಶನ, ರೇಡಿಯೋ ಮತ್ತು ಸಂಬಂಧಿತ ಸೇವೆಗಳು) ಕರಡು ನಿಯಮ 2026 ಬಿಡುಗಡೆ
ಪ್ರಸಾರಕರಿಗೆ ಅನುಸರಣೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ವ್ಯವಹಾರ ಮಾಡುವುದನ್ನು ಮತ್ತಷ್ಟು ಸುಲಭಗೊಳಿಸಲು ಏಕ ನಿಯಮ ಪುಸ್ತಕ ಪ್ರಸ್ತಾವ
ಅಸ್ತಿತ್ವದಲ್ಲಿರುವ ಪರವಾನಗಿದಾರರಿಗೆ ಸ್ವಯಂಪ್ರೇರಿತ ವಲಸೆ ಆಯ್ಕೆ ಮಾಡಲು ಅಥವಾ ವಲಸೆಯವರೆಗೆ ಅಸ್ತಿತ್ವದಲ್ಲಿರುವ ಪರವಾನಗಿಗಳು/ಅನುಮತಿಗಳ ಅಡಿಯಲ್ಲಿ ಮುಂದುವರಿಯಲು ಸರಳತೆ ಒದಗಿಸಲಿರುವ ಕರಡು ನಿಯಮಗಳು
प्रविष्टि तिथि:
22 JUL 2026 3:53PM by PIB Bengaluru
ಹೊಸದಾಗಿ ಜಾರಿಗೆ ಬಂದ ದೂರಸಂಪರ್ಕ ಕಾಯ್ದೆ 2023ರ ಚೌಕಟ್ಟಿನೊಳಗೆ ದೂರದರ್ಶನ ಮತ್ತು ರೇಡಿಯೋ ಸೇವೆಗಳಿಗಾಗಿ ನೀಡಲಾದ ವಿವಿಧ ಮಾರ್ಗಸೂಚಿಗಳನ್ನು ಕ್ರೋಢೀಕರಿಸಲು ಸರ್ಕಾರವು ಕರಡು ದೂರಸಂಪರ್ಕ (ದೂರದರ್ಶನ, ರೇಡಿಯೋ ಮತ್ತು ಸಂಬಂಧಿತ ಸೇವೆಗಳು) ನಿಯಮಗಳು, 2026 ಅನ್ನು ಬಿಡುಗಡೆ ಮಾಡಿದೆ. ಆ ನಿಯಮಗಳ ಗುಂಪಿನಲ್ಲಿ ಈ ಕೆಳಗಿನ ಮಾರ್ಗಸೂಚಿಗಳನ್ನು ಸಂಯೋಜಿಸಲಾಗಿದೆ:
ಎ. ಭಾರತದಲ್ಲಿ ಉಪಗ್ರಹ ದೂರದರ್ಶನ ಚಾನೆಲ್‌ಗಳ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್‌ಗಾಗಿ ನೀತಿ ಮಾರ್ಗಸೂಚಿಗಳು;
ಬಿ.ಭಾರತದಲ್ಲಿ ನೇರ-ಮನೆಗೆ (DTH) ಪ್ರಸಾರ ಸೇವೆಗಳನ್ನು ಒದಗಿಸಲು ಪರವಾನಗಿ ಪಡೆಯುವ ಮಾರ್ಗಸೂಚಿಗಳು;
ಸಿ. ಭಾರತದಲ್ಲಿ Headend-in-the-Sky (HITS) ಪ್ರಸಾರ ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳು;
ಡಿ. ಖಾಸಗಿ ಏಜೆನ್ಸಿಗಳ ಮೂಲಕ ಎಫ್‌ಎಂ ರೇಡಿಯೋ ಪ್ರಸಾರ ಸೇವೆಗಳ ವಿಸ್ತರಣೆಯ ಕುರಿತಾದ ನೀತಿ ಮಾರ್ಗಸೂಚಿಗಳು (ಹಂತ III);
ಇ. ಭಾರತದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಪರಿಷ್ಕೃತ ನೀತಿ ಮಾರ್ಗಸೂಚಿಗಳು; ಮತ್ತು
ಎಫ್. ಇಂಟರ್ನೆಟ್ ಪ್ರೋಟೋಕಾಲ್ ಟೆಲಿವಿಷನ್ (ಐಪಿಟಿವಿ) ಸೇವೆಗಳನ್ನು ಒದಗಿಸುವ ಕುರಿತಾದ ಮಾರ್ಗಸೂಚಿಗಳು.
ಈ ನಿಯಮಗಳ ಗುಂಪಿನೊಂದಿಗೆ, ಉದ್ಯಮವು ಈಗ ಏಕೀಕೃತ ಮತ್ತು ಗಮನಾರ್ಹವಾಗಿ ಸರಳೀಕೃತ ನಿಯಮ ಪುಸ್ತಕವನ್ನು ಹೊಂದಿರುತ್ತದೆ. ದೂರದರ್ಶನ ಮತ್ತು ರೇಡಿಯೋ ಪ್ರಸಾರ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸುವಾಗ ಅಸ್ತಿತ್ವದಲ್ಲಿರುವ ಆಡಳಿತವನ್ನು ಸಮನ್ವಯಗೊಳಿಸಲು ಈ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಕರಡು ನಿಯಮಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mib.gov.in/), ಪ್ರಕಟಿಸಲಾಗಿದ್ದು, 2026ರ ಜುಲೈ 27 ರೊಳಗೆ ಮಾಹಿತಿಗಳು, ಅಭಿಪ್ರಾಯಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಹೊಸ ನಿಯಂತ್ರಣ ಚೌಕಟ್ಟಿಗೆ ಉದ್ಯಮ ಪರಿವರ್ತನೆಯನ್ನು ಬೆಂಬಲಿಸಲು, ಕರಡು ನಿಯಮಗಳು ಅಸ್ತಿತ್ವದಲ್ಲಿರುವ ಪರವಾನಗಿಗಳು/ಅನುಮತಿಗಳನ್ನು ಹೊಸ ಅಧಿಕಾರ ಚೌಕಟ್ಟಿಗೆ ಸ್ವಯಂಪ್ರೇರಿತವಾಗಿ ವರ್ಗಾವಣೆಗೊಳ್ಳಲು ಅಥವಾ ವಲಸೆ ಬರುವವರೆಗೆ ಅಸ್ತಿತ್ವದಲ್ಲಿರುವ ಪರವಾನಗಿಗಳು/ಅನುಮತಿಗಳನ್ನು ಮುಂದುವರಿಸಲು ಅವಕಾಶ ನೀಡುತ್ತವೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ದೂರದ ಮತ್ತು ಗ್ರಾಮೀಣ ಪ್ರದೇಶಗಳು ಒಳಗೊಂಡಂತೆ ದೇಶಾದ್ಯಂತ ಸಮುದಾಯ ರೇಡಿಯೋ ಸೇವೆಗಳು ಸೇರಿ ದೂರದರ್ಶನ ಮತ್ತು ರೇಡಿಯೋ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಕರಡು ನಿಯಮಗಳು ನಿಬಂಧನೆಗಳನ್ನು ಒಳಗೊಂಡಿವೆ.
ಲೋಕಸಭೆಯಲ್ಲಿ ಶ್ರೀ ಮುಖೇಶ್‌ಕುಮಾರ್ ಚಂದ್ರಕಾಂತ್ ದಲಾಲ್ ಮತ್ತು ಶ್ರೀ ದಿನೇಶ್‌ಭಾಯ್ ಮಕ್ವಾನಾ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2287720)
आगंतुक पटल : 18