ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

NFDC-NFAI ಸಂಸ್ಥೆಯ ಆರ್ಕೈವ್ ಸಂರಕ್ಷಣೆ: ಮಲಯಾಳಂ ಕ್ಲಾಸಿಕ್ ಚಿತ್ರ 'ಕಿರೀಡಂ' 4K ರೂಪದಲ್ಲಿ ಮತ್ತೆ ಬೆಳ್ಳಿಪರದೆಗೆ

प्रविष्टि तिथि: 09 JUL 2026 12:41PM by PIB Bengaluru

ಮಲಯಾಳಂ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಚಿತ್ರ 'ಕಿರೀಡಂ', ಡಾಲ್ಬಿ ಅಟ್ಮಾಸ್ (Dolby Atmos ) ಧ್ವನಿ ಹಾಗೂ 4K ತಂತ್ರಜ್ಞಾನದಲ್ಲಿ ಮರುರೂಪಗೊಂಡು ಜುಲೈ 10, 2026 ರಂದು ಭಾರತ ಮತ್ತು ವಿದೇಶಗಳ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ. ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್–ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (NFDC–NFAI) ಈ ಚಿತ್ರದ ಮರುರೂಪೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮರುರೂಪಿಸಲಾದ ಈ ಚಿತ್ರವನ್ನು NFDC ಸಂಸ್ಥೆಯು 'ಸೆವೆನ್ ಆರ್ಟ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್' ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದ್ದು, 'ಹೈಜಿನ್ ಗ್ಲೋಬಲ್ ವೆಂಚರ್ಸ್' ಇದನ್ನು ವಿತರಣೆ ಮಾಡುತ್ತಿದೆ.

ಈ ಮರುರೂಪೀಕರಣ ಕಾರ್ಯವು ಭಾರತದ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. 1989ರ ಈ ಚಿತ್ರದ ಮೂಲ ಕ್ಯಾಮೆರಾ ನೆಗೆಟಿವ್ ಸಂಪೂರ್ಣವಾಗಿ ಹಾಳಾಗಿದ್ದರಿಂದ ಅದನ್ನು ಬಳಸಲು ಸಾಧ್ಯವಾಗಲಿಲ್ಲ. ಆದರೆ, ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಸಂಸ್ಥೆಯು ಇದರ 35mm ರಿಲೀಸ್ ಪ್ರಿಂಟ್ ಅನ್ನು 30 ವರ್ಷಗಳಿಗೂ ಹೆಚ್ಚು ಕಾಲ ಅತ್ಯಂತ ಸುರಕ್ಷಿತವಾಗಿ ಕಾಯ್ದಿರಿಸಿತ್ತು. ಆರ್ಕೈವ್ ನಲ್ಲಿದ್ದ ಇದೇ ಪ್ರಿಂಟ್ ಅನ್ನು ಬಳಸಿಕೊಂಡು ಈಗ ಈ 4K ಮರುರೂಪೀಕರಣವನ್ನು ಮಾಡಲಾಗಿದೆ.

ಸಿಬಿ ಮಲಯಿಲ್ ನಿರ್ದೇಶನದ ಮತ್ತು ಎ. ಕೆ. ಲೋಹಿತದಾಸ್ ಅವರ ಬರವಣಿಗೆಯನ್ನು ಒಳಗೊಂಡಿರುವ 'ಕಿರೀಡಂ' ಚಿತ್ರದಲ್ಲಿ, ಮೋಹನ್ ಲಾಲ್ ಅವರು ಸೇತುಮಾಧವನ್ ಆಗಿ ಮತ್ತು ತಿಲಕನ್ ಅವರು ಹೆಡ್ ಕಾನ್ಸ್ಟೇಬಲ್ ಅಚ್ಯುತನ್ ನಾಯರ್ ಆಗಿ ನಟಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಈ ಮರುರೂಪೀಕರಣ (Restoration) ಪ್ರಕ್ರಿಯೆಯು ಛಾಯಾಗ್ರಾಹಕ ಎಸ್. ಕುಮಾರ್ ಮತ್ತು ನಿರ್ದೇಶಕ ಸಿಬಿ ಮಲಯಿಲ್ ಅವರ ಮೇಲ್ವಿಚಾರಣೆಯಲ್ಲಿ ಹೈ-ರೆಸಲ್ಯೂಶನ್ ಸ್ಕ್ಯಾನಿಂಗ್, ಡಿಜಿಟಲ್ ಇಮೇಜ್ ರಿಸ್ಟೋರೇಶನ್ ಮತ್ತು ಕಲರ್ ಗ್ರೇಡಿಂಗ್ಗಳನ್ನು ಒಳಗೊಂಡಿದೆ. ಅಲ್ಲದೆ, ಈ ಚಿತ್ರವನ್ನು ಡಾಲ್ಬಿ ಅಟ್ಮಾಸ್ ಧ್ವನಿಯೊಂದಿಗೆ ರಿಮಾಸ್ಟರ್ ಮಾಡಲಾಗಿದೆ. ಚಿತ್ರಮಂದಿರಗಳಿಗಾಗಿ ಇದರ ಅಂತಿಮ ಆವೃತ್ತಿಯನ್ನು 'ಹೈ ಸ್ಟುಡಿಯೋಸ್' ಸಹಯೋಗದೊಂದಿಗೆ 'ಪ್ರಸಾದ್ ಕಾರ್ಪೊರೇಷನ್' ಪೂರ್ಣಗೊಳಿಸಿದ್ದು, ಬೋನಿ ಅಸ್ಸಾನರ್ ಅವರು ಕ್ರಿಯೇಟಿವ್ ವಿಷನರಿ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.

NFDC ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಮಗ್ದುಮ್ ಅವರು ಮಾತನಾಡಿ, ಚಿತ್ರದ ರಿಲೀಸ್ ಪ್ರಿಂಟ್ ಅನ್ನು ದಶಕಗಳ ಕಾಲ ಸಂರಕ್ಷಿಸಿಟ್ಟಿದ್ದರಿಂದಲೇ ಈ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಾಧ್ಯವಾಯಿತು ಎಂದು ತಿಳಿಸಿದರು. ಅಲ್ಲದೆ, ಈ ಮರುರೂಪೀಕರಣವು ಭಾರತದ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವಲ್ಲಿ NFDC-NFAI ಸಂಸ್ಥೆಗೆ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಚಿತ್ರದ ಪ್ರಿಂಟ್ ಅನ್ನು ಸುರಕ್ಷಿತವಾಗಿ ಸಂರಕ್ಷಿಸಿ, 'ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್' (National Film Heritage Mission) ಅಡಿಯಲ್ಲಿ ಸಿನಿಮಾವನ್ನು ಮರುರೂಪಿಸಿದ್ದಕ್ಕಾಗಿ ನಿರ್ದೇಶಕ ಸಿಬಿ ಮಲಯಿಲ್ ಅವರು NFDC-NFAI ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು. ಹಳೆಯ ಅಭಿಮಾನಿಗಳು ಹಾಗೂ ಇಂದಿನ ಹೊಸ ತಲೆಮಾರಿನ ಪ್ರೇಕ್ಷಕರಿಬ್ಬರೂ ಈ ಮರುರೂಪಿಸಲಾದ ಆವೃತ್ತಿಯನ್ನು ಬೆಳ್ಳಿ ಪರದೆಯ ಮೇಲೆ ನೋಡಿ ಆನಂದಿಸುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಈ ಮರುರೂಪಿಸಲಾದ ಚಿತ್ರವು 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ತನ್ನ ಜಾಗತಿಕ ಪ್ರಥಮ ಪ್ರದರ್ಶನವನ್ನು (World Premiere) ಕಂಡಿತು. ಅಲ್ಲಿ ಇದು ಪ್ರೇಕ್ಷಕರಿಂದ ಮತ್ತು ಚಲನಚಿತ್ರ ನಿರ್ಮಾಪಕರಿಂದ ಅತ್ಯುತ್ಸಾಹದ ಪ್ರತಿಕ್ರಿಯೆಯನ್ನು ಗಳಿಸಿತು.

ದೇಶದ ಶ್ರೀಮಂತ ದೃಶ್ಯ-ಶ್ರವಣ (Audiovisual) ಪರಂಪರೆಯನ್ನು ಸಂರಕ್ಷಿಸುವ, ಮರುರೂಪಿಸುವ ಮತ್ತು ಉತ್ತೇಜಿಸುವ ಭಾರತ ಸರ್ಕಾರದ ದೂರದೃಷ್ಟಿಯನ್ನು ಮುನ್ನಡೆಸಲು NFDC-NFAI ನಿರಂತರವಾಗಿ ಶ್ರಮಿಸುತ್ತಿದೆ. ವೈಜ್ಞಾನಿಕ ಸಂರಕ್ಷಣೆ, ಡಿಜಿಟಲೀಕರಣ ಮತ್ತು ಮರುರೂಪೀಕರಣದ ಮೂಲಕ, ಅಮೂಲ್ಯವಾದ ಚಲನಚಿತ್ರ ಕೃತಿಗಳು ಮುಂದಿನ ಪೀಳಿಗೆಗೂ ಲಭ್ಯವಿರುವಂತೆ ಈ ಸಂಸ್ಥೆಯು ಖಚಿತಪಡಿಸುತ್ತಿದೆ. ಅಷ್ಟೇ ಅಲ್ಲದೆ, ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ಇಂದಿನ ಆಧುನಿಕ ಪ್ರೇಕ್ಷಕರು ಬೆಳ್ಳಿ ಪರದೆಯ ಮೇಲೆ ಮತ್ತೊಮ್ಮೆ ಸವಿಯುವಂತೆ ಮಾಡುತ್ತಿದೆ.

 

*****


(रिलीज़ आईडी: 2282763) आगंतुक पटल : 20
इस विज्ञप्ति को इन भाषाओं में पढ़ें: Punjabi , English , Gujarati , Urdu , हिन्दी , Marathi , Assamese , Bengali , Tamil , Telugu , Malayalam