ಪ್ರಧಾನ ಮಂತ್ರಿಯವರ ಕಛೇರಿ
ಒಡಿಶಾ ಸರ್ಕಾರ 2 ವರ್ಷ ಪೂರೈಸಿದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
20 JUN 2026 5:01PM by PIB Bengaluru
ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜಿ, ರಾಜ್ಯಪಾಲ ಶ್ರೀ ಹರಿಬಾಬು ಜಿ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಜಿ, ಉಪಮುಖ್ಯಮಂತ್ರಿ ಶ್ರೀ ಕನಕ ವರ್ಧನ್ ಸಿಂಗ್ ದೇವ್ ಜಿ, ಶ್ರೀಮತಿ. ಪರವತಿ ಪರಿದಾ ಜಿ, ಒಡಿಶಾ ಸಚಿವರಾದ ಶ್ರೀ ಗಣೇಶ್ ಸಿಂಗ್ ಖುಂಟಿಯಾ ಜಿ, ಶ್ರೀಕೃಷ್ಣ ಚಂದ್ರ ಮಹಾಪಾತ್ರ ಜಿ, ಸಂಸತ್ ಸದಸ್ಯರಾದ ಶ್ರೀ ನಬಾ ಚರಣ್ ಮಾಝಿ ಜಿ, ಶ್ರೀ ಮನಮೋಹನ್ ಸಮಲ್ ಜಿ, ಶ್ರೀ ಬೈಜಯಂತ್ ಪಾಂಡಾ ಜಿ, ಇತರೆ ಗಣ್ಯರೆ, ಸಹೋದರ ಮತ್ತು ಸಹೋದರಿಯರೆ,
ನಮ್ಮ ಒಡಿಶಾ ಈ ದಿನಗಳಲ್ಲಿ ಆಚರಣೆಯ ಸಂಭ್ರಮದಲ್ಲಿ ಮುಳುಗಿದೆ. ಕಳೆದ ವಾರವಷ್ಟೇ ರಾಜ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಮಹಾಪ್ರಭು ಜಗನ್ನಾಥ ರಥಯಾತ್ರೆಗೆ ಸಿದ್ಧತೆಗಳು ಸಹ ಪೂರ್ಣ ಉತ್ಸಾಹದಿಂದ ನಡೆಯುತ್ತಿವೆ. ಮಯೂರ್ಭಂಜ್‌ನಲ್ಲಿ ಬರಿಪಾದ ರಥಯಾತ್ರೆಯ ಬಗ್ಗೆಯೂ ಹೆಚ್ಚಿನ ಉತ್ಸಾಹವಿದೆ.
ಇದೆಲ್ಲದರ ನಡುವೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ಹಬ್ಬವನ್ನು ಸಹ ಆಚರಿಸಲಾಗುತ್ತಿದೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರವು 2 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ನಿಮ್ಮೆಲ್ಲರ ಮುಂದೆ ಬರುವ ಅವಕಾಶ, ಮಯೂರ್ಭಂಜ್‌ಗೆ ಭೇಟಿ ನೀಡುವ ಅವಕಾಶ ಮತ್ತು ಇಲ್ಲಿ ನೀವು ಇಷ್ಟೊಂದು ಸಂಖ್ಯೆಯಲ್ಲಿ ಇರುವುದು ಈ ಸಂದರ್ಭವನ್ನು ನನಗೆ ತುಂಬಾ ವಿಶೇಷವಾಗಿಸಿದೆ.
ನಿಮ್ಮ ಪ್ರೀತಿಯು ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಆಕರ್ಷಿಸುತ್ತಿದೆ. ನಿಮ್ಮೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಡಬಲ್-ಎಂಜಿನ್ ಸರ್ಕಾರದ ಅಭಿವೃದ್ಧಿ ಪ್ರಯಾಣದಲ್ಲಿ ಒಡಿಶಾದ ಜನರಿಗೆ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಸಂದರ್ಭದಲ್ಲಿ, ಪಂಡಿತ್ ರಘುನಾಥ್ ಮುರ್ಮು ಜಿ, ಡಾ. ದಮಯಂತಿ ಬೆಸ್ರಾ ಜಿ ಮತ್ತು ಶ್ರೀ ಚರಣ್ ಹೆಂಬ್ರೋಮ್ ಜಿ ಅವರಂತಹ ಗಣ್ಯ ವ್ಯಕ್ತಿಗಳಿಗೂ ನಾನು ಗೌರವ ಸಲ್ಲಿಸುತ್ತೇನೆ. ರಘುನಾಥ್ ಮುರ್ಮು ಜಿ ಅವರು ಸಂತಾಲಿ ಭಾಷೆಗಾಗಿ ಓಲ್ ಚಿಕಿ ಲಿಪಿ ರಚಿಸಿದರು. ನಮ್ಮ ಸರ್ಕಾರ ಭಾರತದ ಸಂವಿಧಾನವನ್ನು ಸಂತಾಲಿ ಭಾಷೆಯಲ್ಲಿ ಪ್ರಸ್ತುತಪಡಿಸಿದೆ. ಒಡಿಶಾದ ಪುತ್ರರು ಮತ್ತು ಪುತ್ರಿಯರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕಳೆದ 2 ವರ್ಷಗಳಿಂದ ಒಡಿಶಾ ಸರ್ಕಾರವು ಈ ಎಲ್ಲಾ ಮಹಾನ್ ವ್ಯಕ್ತಿಗಳ ಕನಸುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸುತ್ತಿದೆ.
ಸ್ನೇಹಿತರೆ,
ಇಂದಿನ ಸಂದರ್ಭವು ಇನ್ನೊಂದು ಕಾರಣಕ್ಕಾಗಿಯೂ ವಿಶೇಷವಾಗಿದೆ, ಏಕೆಂದರೆ ಮಯೂರ್ಭಂಜ್ ಮಣ್ಣಿನಲ್ಲಿ ಬೆಳೆದ ಒಡಿಶಾದ ಮಗಳು ಗೌರವಾನ್ವಿತ ರಾಷ್ಟ್ರಪತಿ ಇಂದು ನಮ್ಮೊಂದಿಗೆ ಇದ್ದಾರೆ. ಇಂದು ಅವರ ಜನ್ಮದಿನವೂ ಆಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರಿಗೆ ಹುಟ್ಟುಹಬ್ಬದ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಬಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ನಾನು ಭಗವಾನ್ ಜಗನ್ನಾಥನ ಪಾದಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಒಡಿಶಾದ ಮಗಳು ದೇಶದಲ್ಲಿ ಇಷ್ಟು ಉನ್ನತ ಹುದ್ದೆಗೆ ತಲುಪಿ ನಮಗೆ ಮಾರ್ಗದರ್ಶನ ನೀಡುತ್ತಿರುವುದು ನಮಗೆಲ್ಲರಿಗೂ ಅಪಾರ ಹೆಮ್ಮೆಯ ವಿಷಯ.
ರಾಷ್ಟ್ರಪತಿಗಳ ವ್ಯಕ್ತಿತ್ವ, ಅವರ ಉದಾರ ಮತ್ತು ಸಹಾನುಭೂತಿಯ ಸ್ವಭಾವ, ರಾಷ್ಟ್ರ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಅಚಲ ಸಮರ್ಪಣೆ ಮಯೂರ್ಭಂಜ್ ಮಾತ್ರವಲ್ಲದೆ, ಇಡೀ ಒಡಿಶಾದ ಗುರುತನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ, ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಈ ಕಾರ್ಯಕ್ರಮ ಯೋಜಿಸಿದಾಗ ಮೂಲ ಕಾರಣ ಸಂಚಾರದ್ದಾಗಿತ್ತು. ಇಲ್ಲಿ ನನ್ನ ಭೇಟಿಯ ಬಗ್ಗೆ ಚರ್ಚೆಗಳು ಬಹಳ ಸಮಯದಿಂದ ನಡೆಯುತ್ತಿದ್ದವು, ಆದರೆ ವೇಳಾಪಟ್ಟಿಗಳು ಎಂದಿಗೂ ಹೊಂದಿಕೆಯಾಗಲಿಲ್ಲ. ಜೂನ್ 21 ರಂದು ಕೋಲ್ಕೊತಾದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ನಿಗದಿಪಡಿಸಿದಾಗ, ಅದು ಬಂಗಾಳ ದಿನವೂ ಆಗಿದ್ದರಿಂದ, ಬೆಳಿಗ್ಗೆ ಮಯೂರ್ಭಂಜ್‌ಗೆ ಭೇಟಿ ನೀಡಿ ಸಂಜೆ ಕೋಲ್ಕೊತಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ನಾನು ಭಾವಿಸಿದೆ. ಜೂನ್ 20 ಅನ್ನು ಹಾಗೆಯೇ ನಿರ್ಧರಿಸಲಾಯಿತು.
ಆದರೆ ಕೆಲವು ವಿಷಯಗಳನ್ನು ದೈವಿಕ ಆಶೀರ್ವಾದದಿಂದ ನಿಯಂತ್ರಿತವಾಗುತ್ತವೆ. ಇಂದು ಒಂದು ಅದೃಷ್ಟದ ಕಾಕತಾಳೀಯ ಸಂಭವಿಸಿದೆ - ಅದು ರಾಷ್ಟ್ರಪತಿಯವರ ಜನ್ಮದಿನವೂ ಆಗಿದೆ, ಅವರ ಗ್ರಾಮಕ್ಕೆ ಭೇಟಿ ನೀಡಿ ನನ್ನ ಶುಭಾಶಯಗಳನ್ನು ವೈಯಕ್ತಿಕವಾಗಿ ತಿಳಿಸುವ ಅವಕಾಶ ನನಗೆ ಸಿಕ್ಕಿತು.
ಸ್ನೇಹಿತರೆ,
ಇಂದು ನಾನು ರಾಷ್ಟ್ರಪತಿಯವರ ಜೊತೆಗೆ ಪಹಾದ್‌ಪುರಕ್ಕೂ ಭೇಟಿ ನೀಡಿದ್ದೆ. ಈ ಪ್ರದೇಶದ ಮಕ್ಕಳಿಗಾಗಿ ಅವರು ನಿರ್ಮಿಸಿದ ಶಾಲೆಗೆ ನಾನು ಭೇಟಿ ನೀಡಿದ್ದೆ. ಮಕ್ಕಳೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯುವ ಅವಕಾಶ ನನಗೆ ಸಿಕ್ಕಿತು.
ಮಕ್ಕಳ ಮುಖಗಳಲ್ಲಿ ಕಂಡ ಹೊಳಪು ಮತ್ತು ರಾಷ್ಟ್ರಪತಿಗಳ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ಗಮನಿಸುತ್ತಿದ್ದೆ. ಅಲ್ಲಿ, ಯಾವುದೇ ಮಗು ರಾಷ್ಟ್ರಪತಿಗಳು ಬಂದಿದ್ದಾರೆಂದು ಭಾವಿಸಿದರು ಎಂದು ನನಗೆ ಅನಿಸಲಿಲ್ಲ. ಪ್ರತಿ ಮಗುವೂ ತಮ್ಮ ತಾಯಿ ಬಂದಿದ್ದಾರೆಂದು ಭಾವಿಸಿದರು.
ಆ ಮಕ್ಕಳು ನಿಜವಾಗಿಯೂ ಅದೃಷ್ಟವಂತರು. ಈ ಪ್ರದೇಶದ ಬಡ, ವಂಚಿತ ಮತ್ತು ಬುಡಕಟ್ಟು ಮಕ್ಕಳು ಸ್ಫೂರ್ತಿ ಪಡೆಯುತ್ತಿದ್ದಾರೆ, ದೇಶಕ್ಕಾಗಿ ಏನಾದರೂ ಉತ್ತಮವಾದದ್ದನ್ನು ಮಾಡುವ ವಿಶ್ವಾಸ ಪಡೆಯುತ್ತಿದ್ದಾರೆ.
ಇಂದು ಈ ಅನುಭವಗಳನ್ನು ಅನುಭವಿಸಲು ಅವಕಾಶ ನೀಡಿದ ರಾಷ್ಟ್ರಪತಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಒಂದು ರೀತಿಯಲ್ಲಿ, ಈ ದಿನ ನನಗೆ ಕಲಿಕೆಯ ದಿನವಾಯಿತು, ಶಿಕ್ಷಣದ ದಿನವಾಯಿತು.
ಸ್ನೇಹಿತರೆ,
ಸರ್ಕಾರದ ನಿರ್ಧಾರವನ್ನು ಸಹ ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಪಹಾದ್‌ಪುರ ಗ್ರಾಮವು ಈಗ ಸೂರ್ಯ ಗ್ರಾಮ, ಸೌರ ಗ್ರಾಮವಾಗಿ ವೇಗವಾಗಿ ಅಭಿವೃದ್ಧಿ ಹೊಂದಲಿದೆ.
ಅಂದರೆ ಇಲ್ಲಿನ ಪ್ರತಿಯೊಂದು ಮನೆಯೂ ಸೌರಶಕ್ತಿಯನ್ನು ಉತ್ಪಾದಿಸುತ್ತದೆ. ಕೊನಾರ್ಕ್ ತನ್ನ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾದ ಒಡಿಶಾ ಇದೇ ಎಂದು ನಾವು ಹೆಮ್ಮೆಯಿಂದ ಹೇಳಬಹುದು, ಅದೇ ರೀತಿ ಪಹಾದ್‌ಪುರವು ಸೂರ್ಯ ಗ್ರಾಮ ಎಂದು ಕರೆಯಲ್ಪಡುತ್ತದೆ. ಇಡೀ ಗ್ರಾಮವನ್ನು ಸೌರ ಗ್ರಾಮವೆಂದು ಗುರುತಿಸುವಂತೆ ಈ ದಿಕ್ಕಿನಲ್ಲಿ ಕೆಲಸ ತಕ್ಷಣ ಪ್ರಾರಂಭವಾಗುವಂತೆ ಮಾಡುವುದು ನನ್ನ ಪ್ರಯತ್ನವಾಗಿದೆ. ಈ ಉಪಕ್ರಮದ ಮೂಲಕ, ಪಹಾದ್‌ಪುರದ ಜನರು ಉಚಿತ ಸೌರ ವಿದ್ಯುತ್ ಪಡೆಯುತ್ತಾರೆ ಮತ್ತು ಉತ್ಪಾದಿಸುವ ಯಾವುದೇ ಹೆಚ್ಚುವರಿ ವಿದ್ಯುತ್ ಅವರ ಆದಾಯ ಹೆಚ್ಚಿಸುತ್ತದೆ.
ಸ್ನೇಹಿತರೆ,
ಒಡಿಶಾದಲ್ಲಿ ಡಬಲ್-ಎಂಜಿನ್ ಸರ್ಕಾರದ 2 ವರ್ಷಗಳು ಹಲವು ವಿಧಗಳಲ್ಲಿ ಐತಿಹಾಸಿಕವಾಗಿವೆ. ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಜಿ ಅವರ ನೇತೃತ್ವದಲ್ಲಿ ಒಡಿಶಾ ಇಂದು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ. ಇಲ್ಲಿ ಬಡವರಿಗೆ ಕಲ್ಯಾಣ ಯೋಜನೆಗಳ ಮೂಲಕ ಸಾಮಾನ್ಯ ಜನರ ಜೀವನ ಬದಲಾಗುತ್ತಿದೆ. ಒಡಿಶಾ ಇಂದು ಬೆಳೆಯುತ್ತಿರುವ ಆರ್ಥಿಕ ಚಟುವಟಿಕೆಯ ಮೂಲಕ ಹೂಡಿಕೆ ಮತ್ತು ಕೈಗಾರಿಕೆಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತ್ವರಿತ ಪ್ರಯತ್ನಗಳು ನಡೆಯುತ್ತಿವೆ.
ಸ್ನೇಹಿತರೆ,
ಕೇಂದ್ರ ಸರ್ಕಾರದ ದೃಷ್ಟಿಕೋನ: ಪೂರ್ವ ಭಾರತದ ಅಭಿವೃದ್ಧಿಯ ಮೂಲಕ ಭಾರತದ ಅಭಿವೃದ್ಧಿ. ಅದಕ್ಕಾಗಿಯೇ ನಾವು ಪೂರ್ವೋದಯ ನೀತಿಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಯುಗದಲ್ಲಿ ಹಿಂದುಳಿದಿರುವಿಕೆಯ ಸಂಕೇತವಾಗಿ ಬದಲಾದ ಪೂರ್ವ ಭಾರತವು ಇಂದು ಪ್ರಗತಿಯ ದ್ವಾರವಾಗುತ್ತಿದೆ. ಒಡಿಶಾ ಸ್ವತಃ ಈ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ.
ಸ್ನೇಹಿತರೆ,
ಒಡಿಶಾ ಸಮುದ್ರ, ಖನಿಜ ಸಂಪತ್ತು, ಕೃಷಿ ಶಕ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಭಾನ್ವಿತ ಯುವಕರನ್ನು ಹೊಂದಿದೆ. ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಒಡಿಶಾ ಇಂದು ರೈಲ್ವೆ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗೆ ಸಾಕ್ಷಿಯಾಗುತ್ತಿದೆ. ಹೊಸ ರಸ್ತೆಗಳು ಮತ್ತು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಬಂದರುಗಳನ್ನು ವಿಸ್ತರಿಸಲಾಗುತ್ತಿದೆ. ಇಂಧನ, ಸೆಮಿಕಂಡಕ್ಟರ್ ಗಳು, ಹಸಿರು ಶಕ್ತಿ ಮತ್ತು ಆಧುನಿಕ ಕೈಗಾರಿಕೆಗಳಲ್ಲಿ ಹೂಡಿಕೆಗಳು ಬರುತ್ತಿವೆ.
ಇಂದಿಗೂ ಒಡಿಶಾದ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳಿಗೆ ಸುಮಾರು 47,000 ಕೋಟಿ ರೂ. ಖರ್ಚು ಮಾಡಲಾಗುವುದು. ವಿದ್ಯುತ್, ರಸ್ತೆಗಳು, ರೈಲ್ವೆಗಳು, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಈ ಯೋಜನೆಗಳು ನಿಮ್ಮೆಲ್ಲರಿಗೂ ಹೆಚ್ಚಿನ ಪ್ರಯೋಜನ ನೀಡುತ್ತವೆ. ಈ ಯೋಜನೆಗಳಿಗಾಗಿ ಒಡಿಶಾದ ಜನರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ನಮ್ಮ ಸರ್ಕಾರ ಒಡಿಶಾದ ಸಂಪನ್ಮೂಲಗಳನ್ನು ಒಡಿಶಾದ ಅವಕಾಶಗಳಾಗಿ ಪರಿವರ್ತಿಸುತ್ತಿದೆ. ರಾಜ್ಯದಲ್ಲಿ ಪ್ರಮುಖ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಕರ್ಷ್ ಒಡಿಶಾದಂತಹ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ಈ ಉಪಕ್ರಮದಡಿ, ಸುಮಾರು 20 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ. 3.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಲವಾರು ಬೃಹತ್ ಯೋಜನೆಗಳ ಕೆಲಸವೂ ನಡೆಯುತ್ತಿದೆ.
ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಒಡಿಶಾದ ಒಟ್ಟಾರೆ ಅಭಿವೃದ್ಧಿಗೆ ಗಮನ ನೀಡಲಾಗುತ್ತಿದೆ. ವಿದ್ಯುತ್ ಕ್ಷೇತ್ರದಲ್ಲಿ 6,000 ಕೋಟಿ ರೂ.ಗೂ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಸಮೃದ್ಧ ಶಹರ ಯೋಜನೆಯಡಿ ನಗರಾಭಿವೃದ್ಧಿಯನ್ನು ವೇಗಗೊಳಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ಎಲ್ಲಾ ಪ್ರಯತ್ನಗಳ ಫಲಿತಾಂಶಗಳನ್ನು ನಾವು ನೋಡುತ್ತೇವೆ.
ಸ್ನೇಹಿತರೆ,
ಡಬಲ್-ಎಂಜಿನ್ ಸರ್ಕಾರದ ಪ್ರಮುಖ ಲಕ್ಷಣವೆಂದರೆ, ಅದು ಜನರನ್ನು ತಲುಪುತ್ತದೆ. ಸಾಮಾನ್ಯ ನಾಗರಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಅನಗತ್ಯವಾಗಿ ಸುತ್ತಬೇಕಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಈ ಪ್ರಯತ್ನಗಳ ಪರಿಣಾಮವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಸಾಮಾನ್ಯ ನಾಗರಿಕರ ಆಕಾಂಕ್ಷೆಗಳು ಇಂದು ಈಡೇರುತ್ತಿವೆ. ಇದನ್ನು ಪರಿಗಣಿಸಿ: ರೈತರಿಗೆ ಭತ್ತ ಖರೀದಿಗೆ ಕ್ವಿಂಟಾಲ್‌ಗೆ 3,100 ರೂ.ಒದಗಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಭದ್ರಾ ಯೋಜನೆಯ ಮೂಲಕ, ಆರ್ಥಿಕ ನೆರವು 1 ಕೋಟಿ ರೂ.ಗಿಂತ ಹೆಚ್ಚಿನ ಹಣ ತಾಯಂದಿರು ಮತ್ತು ಸಹೋದರಿಯರನ್ನು ತಲುಪಿದೆ.
ಆಯುಷ್ಮಾನ್ ಭಾರತ್ ಜಾರಿಗೆ ತರುವ ಮೂಲಕ ಒಡಿಶಾದ ಕುಟುಂಬಗಳು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದಾರಿ ತೆರೆಯಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ನಿಲ್ಲಿಸಬಾರದು ಎಂಬುದನ್ನು ಖಚಿತಪಡಿಸಲು ಮಾಧೋ ಸಿಂಗ್ ಹಾತ್ ಖರ್ಚಾ ಯೋಜನೆ ಪ್ರಾರಂಭಿಸಲಾಗಿದೆ.
ಮಹಾಪ್ರಭು ಶ್ರೀ ಜಗನ್ನಾಥನ ಭಕ್ತರ ಭಾವನೆಗಳನ್ನು ಗೌರವಿಸಿ, ಶ್ರೀಮಂದಿರದ ಎಲ್ಲಾ 4 ದ್ವಾರಗಳನ್ನು ಭಕ್ತರಿಗಾಗಿ ತೆರೆಯಲಾಗಿದೆ. ಡಬಲ್-ಎಂಜಿನ್ ಸರ್ಕಾರದ ಬಲದಿಂದ ಈಗ ಎಲ್ಲಾ ದಿಕ್ಕುಗಳಲ್ಲಿಯೂ ಅಭಿವೃದ್ಧಿಯನ್ನು ಖಚಿತಪಡಿಸಲಾಗುತ್ತಿದೆ.
ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆಸಲಾದ ವಿಶೇಷ ಸ್ವಚ್ಛತಾ ಅಭಿಯಾನದ ಬಗ್ಗೆಯೂ ನನಗೆ ಮಾಹಿತಿ ಬಂದಿದೆ. ಸ್ವಚ್ಛತಾ ಅಭಿಯಾನವು ಚರ್ಚೆಯ ಪ್ರಮುಖ ವಿಷಯವಾಗಿದೆ ಎಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದೆ - "ಸ್ವಚ್ಛತಾ ಸೇ ಸ್ವಾಗತ್". ಒಡಿಶಾದ ಈ ಉಪಕ್ರಮವನ್ನು ನಾನು ತುಂಬಾ ಪ್ರಶಂಸಿಸುತ್ತೇನೆ, ಈ ಶ್ಲಾಘನೀಯ ಪ್ರಯತ್ನಕ್ಕಾಗಿ ನಾಗರಿಕರು, ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ನನ್ನ ತೃಪ್ತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೆ,
ಸ್ವಚ್ಛತೆ ನಮ್ಮ ಜೀವನಶೈಲಿಯ ಭಾಗವಾಗಿರಬೇಕು; ಅದು ದೈನಂದಿನ ಅಭ್ಯಾಸವಾಗಬೇಕು. ಸ್ವಚ್ಛತಾ ಅಭಿಯಾನದಲ್ಲಿ ತೊಡಗಿರುವ ಪ್ರತಿಯೊಬ್ಬರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ನಾನು ನನ್ನ ಜೀವನದ ಒಂದು ಮಹತ್ವದ ಅವಧಿಯನ್ನು ಬುಡಕಟ್ಟು ಪ್ರದೇಶಗಳಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಗಳು ಅಂತಹ ಪ್ರದೇಶಗಳಲ್ಲಿ ಸವಾಲುಗಳನ್ನು ಎದುರಿಸುತ್ತಾ ಹಲವು ವರ್ಷಗಳನ್ನು ಕಳೆದಿದ್ದಾರೆ. ಬುಡಕಟ್ಟು ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳು ಸುಲಭವಾಗಿ ತಲುಪುತ್ತಿರಲಿಲ್ಲ ಎಂಬುದು ನಿಮಗೆ ಮತ್ತು ನನಗೆ ತಿಳಿದಿದೆ. ಆದ್ದರಿಂದ, ನಮ್ಮ ಸರ್ಕಾರವು ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅಂತಹ ಪ್ರದೇಶಗಳನ್ನು ಅಗತ್ಯ ಸೌಲಭ್ಯಗಳೊಂದಿಗೆ ಸಂಪರ್ಕಿಸಲು, ನಾವು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ ಪ್ರಾರಂಭಿಸಿದ್ದೇವೆ. ಈ ಉಪಕ್ರಮದಡಿ, ಆರೋಗ್ಯ, ಶಿಕ್ಷಣ, ರಸ್ತೆಗಳು ಮತ್ತು ವಸತಿಗೆ ಸಂಬಂಧಿಸಿದ ಇಲಾಖೆಗಳು ಸಮಗ್ರ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ, ಇದರಿಂದಾಗಿ ಅಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಬಹುದು.
ಅದೇ ರೀತಿ, ಪ್ರಧಾನಮಂತ್ರಿ ಜನ್ಮನ್ ಅಭಿಯಾನವು ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ನಡೆಸಿದ ಚರ್ಚೆ ಮತ್ತು ಮಾರ್ಗದರ್ಶನದ ಫಲಿತಾಂಶವಾಗಿದೆ. ಇದು ನಿರ್ದಿಷ್ಟವಾಗಿ ಬುಡಕಟ್ಟು ಸಮುದಾಯದೊಳಗೆ ಅತ್ಯಂತ ಹಿಂದುಳಿದಿರುವ ಬುಡಕಟ್ಟು ಗುಂಪುಗಳಿಗೆ ಪ್ರಯೋಜನ ಒದಗಿಸುತ್ತದೆ. ಸರ್ಕಾರವು ಈಗ ಈ ಬುಡಕಟ್ಟು ಸಮುದಾಯಗಳನ್ನು ತಲುಪುತ್ತಿದೆ, ನೇರವಾಗಿ ಅವರ ಹಳ್ಳಿಗಳು ಮತ್ತು ಮನೆ ಬಾಗಿಲಿಗೆ ಹೋಗುತ್ತಿದೆ.
ಸ್ನೇಹಿತರೆ,
ಬುಡಕಟ್ಟು ಸಮುದಾಯದ ಉನ್ನತಿಗಾಗಿ ನಾವು ಬುಡಕಟ್ಟು ಯುವಕರನ್ನು ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುತ್ತಿದ್ದೇವೆ. ಈ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು, ದೇಶಾದ್ಯಂತ ಸುಮಾರು 500 ಏಕಲವ್ಯ ಮಾದರಿ ಶಾಲೆಗಳನ್ನು ತೆರೆಯಲಾಗಿದೆ. ಸುಮಾರು 750 ಏಕಲವ್ಯ ಶಾಲೆಗಳನ್ನು ಅನುಮೋದಿಸಲಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಂತಗಳಲ್ಲಿ, 1.5 ಕೋಟಿಗೂ ಹೆಚ್ಚು ಬುಡಕಟ್ಟು ಮಕ್ಕಳಿಗೆ ನೂರಾರು ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಮಯೂರ್ಭಂಜ್‌ನಲ್ಲಿ ಮತ್ತೊಂದು ನವೋದಯ ವಿದ್ಯಾಲಯವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂಬುದನ್ನು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ದೂರದ ಪ್ರದೇಶಗಳಲ್ಲಿ ವಾಸಿಸುವ ಕಾರಣದಿಂದಾಗಿ, ಬುಡಕಟ್ಟು ಸಮುದಾಯಗಳು ಸಹ ಆರೋಗ್ಯ ಸಂಬಂಧಿತ ಸವಾಲುಗಳಿಂದ ಬಳಲುತ್ತಿವೆ. ಕುಡಗೋಲು ಕೋಶ ರಕ್ತಹೀನತೆಯಂತಹ ರೋಗಗಳು ಪ್ರಮುಖ ಸವಾಲಾಗಿವೆ. ನಾವು ಈ ರೋಗಗಳ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಿದ್ದೇವೆ, 4 ಕೋಟಿಗೂ ಹೆಚ್ಚಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದ್ದೇವೆ, ಕೋಟ್ಯಂತರ ಬುಡಕಟ್ಟು ಫಲಾನುಭವಿಗಳಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ಒದಗಿಸಿದ್ದೇವೆ.
ಜಲಜೀವನ್ ಮಿಷನ್ ಅಡಿ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸಲಾಗುತ್ತಿದೆ. ಇಂದು ನಾವು ಈ ಪ್ರಯತ್ನಗಳ ಫಲಿತಾಂಶಗಳನ್ನು ನೋಡಬಹುದು.
ಬುಡಕಟ್ಟು ಸಮುದಾಯವು ದಶಕಗಳಿಂದ ಅನುಭವಿಸಿದ ಹೆಚ್ಚಿನ ತೊಂದರೆಗಳಿಂದ ಹೊರಬರುತ್ತಿದೆ, ಅದೀಗ ಅಭಿವೃದ್ಧಿಯ ಮುಖ್ಯವಾಹಿನಿಯ ಭಾಗವಾಗುತ್ತಿದೆ.
ಸ್ನೇಹಿತರೆ,
ಮುಂಬರುವ ವರ್ಷಗಳಲ್ಲಿ 2 ಪ್ರಮುಖ ಮೈಲಿಗಲ್ಲುಗಳು ನಮ್ಮ ಮುಂದೆ ಇವೆ. 2036ರಲ್ಲಿ ಒಡಿಶಾ ತನ್ನ ಸಂಸ್ಥಾಪನೆಯ 100 ವರ್ಷಗಳನ್ನು ಪೂರ್ಣಗೊಳಿಸುತ್ತದೆ. 2047ರಲ್ಲಿ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಅಂದರೆ ಒಡಿಶಾ ಮತ್ತು ರಾಷ್ಟ್ರವು ಒಂದೇ ದಿಕ್ಕು ಮತ್ತು ಒಂದೇ ಗುರಿಯನ್ನು ಹಂಚಿಕೊಳ್ಳುತ್ತವೆ. ಒಡಿಶಾದ ಆರ್ಥಿಕತೆ ಬಲಗೊಂಡರೆ, ಭಾರತವೂ ಬಲಗೊಳ್ಳುತ್ತದೆ. ಒಡಿಶಾದ ಸಾಮರ್ಥ್ಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಒಟ್ಟಾಗಿ, ನಾವು ಒಡಿಶಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು.
ಸ್ನೇಹಿತರೆ,
ನಾಳೆ ಜೂನ್ 21, ಅಂತಾರಾಷ್ಟ್ರೀಯ ಯೋಗ ದಿನವನ್ನು ಸಹ ಆಚರಿಸಲಾಗುತ್ತದೆ. ಜ್ಞಾನ ಮತ್ತು ಯೋಗದ ನಾಡು ಒಡಿಶಾ, ಬಹಳ ಹಿಂದಿನಿಂದಲೂ ಯೋಗವನ್ನು ತನ್ನ ಸಾಂಸ್ಕೃತಿಕ ನೀತಿಯ ಭಾಗವಾಗಿ ಹೊಂದಿದೆ. ಒಡಿಶಾದ ಮಣ್ಣಿನಿಂದ ನಾನು ಇಡೀ ರಾಷ್ಟ್ರ ಮತ್ತು ವಿಶ್ವಾದ್ಯಂತದ ಜನರಿಗೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ದಿನದಂದು ಭಾಗವಹಿಸಲು ಕರೆ ನೀಡುತ್ತೇನೆ. ಮತ್ತೊಮ್ಮೆ, ಇಂದಿನ ಸಂದರ್ಭದಲ್ಲಿ ಮತ್ತು ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಅವರ ಕೆಲಸ ಮತ್ತು ಸೇವೆಯ ಭೂಮಿಗೆ ಅವರೊಂದಿಗೆ ಭೇಟಿ ನೀಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ನಾನು ವಿಶೇಷವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಮತ್ತೊಮ್ಮೆ, ನಾನು ಅವರಿಗೆ ಹುಟ್ಟುಹಬ್ಬದ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು.
ಜೈ ಜಗನ್ನಾಥ್!
ಜೈ ಜಗನ್ನಾಥ್!
ಜೈ ಜಗನ್ನಾಥ್!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(रिलीज़ आईडी: 2276565)
आगंतुक पटल : 2