ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ 7 ಶೃಂಗಸಭೆಯ ಜನಸಂಪರ್ಕ (ಔಟ್ ರೀಚ್) ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ: ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣ

प्रविष्टि तिथि: 16 JUN 2026 10:12PM by PIB Bengaluru

ಅಧ್ಯಕ್ಷರಾದ ಮ್ಯಾಕ್ರನ್,

ಇಲ್ಲಿರುವ ಎಲ್ಲಾ ಗೌರವಾನ್ವಿತರೆ,

ನಮಸ್ಕಾರ!

ಜಿ-7 ಶೃಂಗಸಭೆಯಲ್ಲಿ ಅಧ್ಯಕ್ಷರಾದ ಮ್ಯಾಕ್ರನ್ ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ಸ್ನೇಹಿತರೆ,

ಇಂದಿನ ಜಗತ್ತು ಹಿಂದೆಂದಿಗಿಂತಲೂ ಹೆಚ್ಚಿನ ಸಂಪರ್ಕ ಹೊಂದಿದೆ ಮತ್ತು ಪರಸ್ಪರ ಅವಲಂಬಿತವಾಗಿದೆ. ಒಂದು ದೇಶದ ಇಂಧನ ಭದ್ರತೆ, ಆಹಾರ ಭದ್ರತೆ, ಆರೋಗ್ಯ ಭದ್ರತೆ, ಸೈಬರ್ ಭದ್ರತೆ ಮತ್ತು ಆರ್ಥಿಕ ಭದ್ರತೆಯು ಇನ್ನು ಮುಂದೆ ಅದರ ಗಡಿಯೊಳಗೆ ಏನು ನಡೆಯುತ್ತದೆ ಎಂಬುದರ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಚಲನಶೀಲತೆ, ದತ್ತಾಂಶ, ಹಣ ಮತ್ತು ತಂತ್ರಜ್ಞಾನ ಎಲ್ಲವೂ ನಮ್ಮನ್ನು ಒಟ್ಟಿಗೆ ಸಂಪರ್ಕಿಸುತ್ತವೆ.

ಇಂತಹ ಸಮಯದಲ್ಲಿ, ಬಲಿಷ್ಠ ಪಾಲುದಾರಿಕೆಗಳು ಇನ್ನಷ್ಟು ಮುಖ್ಯವಾಗುತ್ತವೆ. ಆದರೆ ಪಾಲುದಾರಿಕೆಗಳು ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಇಂದು  ಅತ್ಯಂತ ಕಾರ್ಯತಂತ್ರ ಆಸ್ತಿಗಳೆಂದರೆ ಖನಿಜಗಳು, ತಂತ್ರಜ್ಞಾನ ಅಥವಾ ಮಾರುಕಟ್ಟೆಗಳಲ್ಲ - ಅದು ಪರಸ್ಪರ ನಂಬಿಕೆ.

ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿಗಳನ್ನು ಆಯುಧಗಳಾಗಿ ಬಳಸುವುದಲ್ಲ, ಜಾಗತಿಕ ಒಳಿತಿಗಾಗಿ ಬಳಸಬೇಕೆಂಬ ನಂಬಿಕೆ. ಅಭಿವೃದ್ಧಿ ಅವಕಾಶಗಳು ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬ ನಂಬಿಕೆ. ಜಾಗತಿಕ ಸಂಸ್ಥೆಗಳು ಎಲ್ಲಾ ದೇಶಗಳ ಆಕಾಂಕ್ಷೆಗಳನ್ನು ಪೂರೈಸುತ್ತವೆ ಎಂಬ ನಂಬಿಕೆ ಇಡಬೇಕು.

ಸ್ನೇಹಿತರೆ,

ಕಳೆದ ಶತಮಾನದಲ್ಲಿ ಮಾನವತೆಯು 2 ವಿಶ್ವ ಯುದ್ಧಗಳ ಮೂಲಕ ಹೋಗಬೇಕಾಯಿತು. ಅನೇಕ ತ್ಯಾಗಗಳ ನಂತರ ಜಾಗತಿಕ ಸಮುದಾಯವು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಮುನ್ನಡೆಯಲು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿತು. ಈ ವ್ಯವಸ್ಥೆಗಳ ಆಧಾರವೂ ನಂಬಿಕೆಯೇ ಆಗಿತ್ತು.

ಆದರೆ, ದಶಕಗಳಿಂದ ಮತ್ತು ಅನೇಕ ತಲೆಮಾರುಗಳ ಕೊಡುಗೆಗಳ ಮೂಲಕ ನಿರ್ಮಿಸಲಾದ ನಂಬಿಕೆ ಇಂದು ತೀರಾ ಅಪಾಯದಲ್ಲಿದೆ. ನಂಬಿಕೆ ಮತ್ತು ಒಗ್ಗಟ್ಟಿನ ಹಕ್ಕುಗಳು ಜನರು ನಂಬಿದ್ದಕ್ಕಿಂತ ಹೆಚ್ಚಾಗಿ ದುರ್ಬಲವಾಗಿವೆ ಎಂಬುದನ್ನು ಕೋವಿಡ್-19 ಬಹಿರಂಗಪಡಿಸಿತು.

ಇಂದು ಜಗತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿಲ್ಲ, ಆದರೆ ಅದು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ. ನಮ್ಮ ಪಾಲುದಾರಿಕೆಗಳ ಭವಿಷ್ಯವು ಈ ನಂಬಿಕೆಯನ್ನು ನಿರ್ಮಿಸುವುದರ ಮೇಲೆ ಅವಲಂಬಿತವಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಒಮ್ಮೆ ಹೇಳಿದ್ದರು, "ನಂಬಿಕೆ ಇಡಿ, ಆದರೆ ಅದನ್ನು ಪರಿಶೀಲಿಸಿ." ಈ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ. ಹೊಸ ಯುಗದ ಅಗತ್ಯಗಳಿಗೆ ಸೂಕ್ತವಾದ ವಿಶ್ವಾಸಾರ್ಹ, ನಿಯಮ ಆಧಾರಿತ ಜಾಗತಿಕ ಕ್ರಮವನ್ನು ನಿರ್ಮಿಸುವುದು ಭವಿಷ್ಯದ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ.

ಸ್ನೇಹಿತರೆ,

ಭಾರತವು ಯಾವಾಗಲೂ ಇಡೀ ಜಗತ್ತನ್ನು ಒಂದೇ ಕುಟುಂಬ ಎಂದು ನಂಬಿದೆ. ನಮ್ಮ ಕಾರ್ಯಗಳು "ಸರ್ವಜನ ಹಿತಾಯ, ಸರ್ವಜನ ಸುಖಾಯ" ತತ್ವದಿಂದ ಮಾರ್ಗದರ್ಶಿಸಲ್ಪಡುತ್ತವೆ, ಅಂದರೆ ಎಲ್ಲರ ಕಲ್ಯಾಣ ಮತ್ತು ಸಂತೋಷವೇ ಇದಾಗಿದೆ.

ಭಾರತದ ಅಭಿವೃದ್ಧಿ ಪ್ರಯಾಣವು ಜನರ ಆಕಾಂಕ್ಷೆಗಳಿಂದ ನಡೆಸಲ್ಪಟ್ಟಾಗ ಪ್ರಗತಿಯು ಅತ್ಯಂತ ಅರ್ಥಪೂರ್ಣವಾಗಿರುತ್ತದೆ ಎಂದು ನಮಗೆ ಪಾಠ ಕಲಿಸಿದೆ. ಈ ತತ್ವವು ನಮ್ಮ ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ಸಹ ರೂಪಿಸುತ್ತದೆ. ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ, ವಿಪತ್ತು ನಿರ್ವಹಣೆ ಮೂಲಸೌಕರ್ಯ ಒಕ್ಕೂಟ, ಜಾಗತಿಕ ಜೈವಿಕ ಇಂಧನಗಳ ಒಕ್ಕೂಟ, ಮಿಷನ್ ಲೈಫ್ ಮತ್ತು "ಏಕ್ ಪೆಡ್ ಮಾ ಕೆ ನಾಮ್" ಸೇರಿದಂತೆ ಹಲವಾರು ಜಾಗತಿಕ ಉಪಕ್ರಮಗಳನ್ನು ಮುನ್ನಡೆಸಿದೆ.

ಭಾರತವು ಯಾವಾಗಲೂ ಬಿಕ್ಕಟ್ಟಿನ ಸಮಯದಲ್ಲಿ ದೇಶಗಳಿಗೆ ಮೊದಲ ಸ್ಪಂದನೆ ನೀಡುವವರಾಗಿ ಸಹಾಯ ಮಾಡುವುದು ನಮ್ಮ ಕರ್ತವ್ಯವೆಂದು ಪರಿಗಣಿಸಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು 150ಕ್ಕಿಂತ ಹೆಚ್ಚಿನ ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸಿದೆ.

ಶ್ರೀಲಂಕಾದಲ್ಲಿ ಚಂಡಮಾರುತವಾಗಲಿ, ಆಫ್ಘಾನಿಸ್ತಾನದಲ್ಲಿ ಭೂಕಂಪವಾಗಲಿ, ಮೊಜಾಂಬಿಕ್‌ನಲ್ಲಿ ಪ್ರವಾಹವಾಗಲಿ ಅಥವಾ ಕ್ಯೂಬಾ ಮತ್ತು ಜಮೈಕಾದಲ್ಲಿ ಚಂಡಮಾರುತಗಳಾಗಲಿ, ಭಾರತವು ಯಾವಾಗಲೂ "ಮಾನವೀಯತೆಯೇ ಮೊದಲು" ಎಂಬ ಕಾರ್ಯ ವಿಧಾನದೊಂದಿಗೆ ಸ್ಪಂದಿಸಿದೆ. ಅದೇ ಮನೋಭಾವವು ನಮ್ಮ ಅಭಿವೃದ್ಧಿ ಪಾಲುದಾರಿಕೆಗಳನ್ನು ಮಾರ್ಗದರ್ಶಿಸುತ್ತದೆ, ಇದು ಪಾಲುದಾರ ರಾಷ್ಟ್ರಗಳಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಪಾಲುದಾರಿಕೆಯ ನಿಜವಾದ ಪರೀಕ್ಷೆ ನಾವು ಇತರರಿಗಾಗಿ ಏನು ಮಾಡುತ್ತೇವೆ ಎಂಬುದರಲ್ಲ, ಬದಲಾಗಿ ಇತರರು ತಮಗಾಗಿ ಏನು ಮಾಡಲು ಅನುವು ಮಾಡಿಕೊಡುತ್ತೇವೆ ಎಂಬುದರ ಮೇಲೆ ಎಂಬುದನ್ನು ಭಾರತ ಬಲವಾಗಿ ನಂಬುತ್ತದೆ.

ಸ್ನೇಹಿತರೆ,

ಇಂದು ಜಾಗತಿಕ ದಕ್ಷಿಣದ ದೇಶಗಳು ಅಂತಾರಾಷ್ಟ್ರೀಯ ಸಮುದಾಯದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿವೆ. ಆದಾಗ್ಯೂ, ಅವರು ಕೇವಲ ನೆರವು ಅಥವಾ ಬೆಂಬಲವನ್ನು ಮಾತ್ರ ಹುಡುಕುತ್ತಿಲ್ಲ, ಅವರು ನಿಜವಾದ ಪಾಲುದಾರಿಕೆ ಬಯಸುತ್ತಿದ್ದಾರೆ. ಅವರು ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಭಾಗವಹಿಸಲು ಬಯಸುತ್ತಿದ್ದಾರೆ, ಕೇವಲ ಅದರ ಪ್ರಯೋಜನಗಳನ್ನು ಪಡೆಯುವುದಿಲ್ಲ.

ನಾವು ಸಾಂಪ್ರದಾಯಿಕ ದಾನಿ-ಸ್ವೀಕರಿಸುವ ವಿಧಾನವನ್ನು ಮೀರಿ ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ನಿರ್ಮಿಸಬೇಕು. ಕೇವಲ ಪರಸ್ಪರ ಜೊತೆಯಾಗಿ ಕೆಲಸ ಮಾಡುವ ಬದಲು, ನಾವು ಸಾಮಾನ್ಯ ಗುರಿಗಳ ಕಡೆಗೆ ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಪಾಲುದಾರಿಕೆಗಳು ಅವಲಂಬನೆಯಲ್ಲ, ಘನತೆ ಮತ್ತು ಪರಸ್ಪರ ಗೌರವವನ್ನು ಆಧರಿಸಿರಬೇಕು. ಹಾಗೆ ಮಾಡುವುದರಿಂದ, ಭವಿಷ್ಯದ ಪೀಳಿಗೆಗೆ ಸುಸ್ಥಿರ ಅಭಿವೃದ್ಧಿಗೆ ನಾವು ಬಲವಾದ ಅಡಿಪಾಯ ಹಾಕಬಹುದು.

ಸ್ನೇಹಿತರೆ,

ಹಂಚಿಕೆಯ ಸವಾಲುಗಳನ್ನು ಎದುರಿಸಲು ನಾವು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಂತಾರಾಷ್ಟ್ರೀಯ ಪಾಲುದಾರಿಕೆಗಳು ಮತ್ತು ಜಾಗತಿಕ ಒಗ್ಗಟ್ಟು ಅರ್ಥಪೂರ್ಣವಾಗಿರುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷಗಳಿಗೆ ಶಾಶ್ವತ ಪರಿಹಾರಗಳು ಸಂವಾದ, ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಮಾತ್ರ ಸಾಧ್ಯ ಎಂದು ಭಾರತ ಸದೃಢವಾಗಿ ನಂಬುತ್ತದೆ.

ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಕಡೆಗೆ ನಡೆಯುತ್ತಿರುವ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಘರ್ಷವು ಈ ಪ್ರದೇಶದ ನಮ್ಮ ಸ್ನೇಹಪರ ದೇಶಗಳಲ್ಲಿ ಗಮನಾರ್ಹ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಕಡಲ ವ್ಯಾಪಾರಕ್ಕೆ ಎದುರಾಗಿರುವ ಅಡ್ಡಿಯು ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಅನೇಕ ಭಾರತೀಯ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕ ಕಡಲ ವ್ಯಾಪಾರದ ಮೂಲಕ ರಾಷ್ಟ್ರಗಳನ್ನು ಸಂಪರ್ಕಿಸುವ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಕಡಲ ಮಾರ್ಗಗಳು ಸುರಕ್ಷಿತವಾಗಿರುವುದನ್ನು ಮತ್ತು ನಾವಿಕರು ತಮ್ಮ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸಬಹುದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು.

ಸ್ನೇಹಿತರೆ,

ಈ ವಿಷಯಗಳಲ್ಲಿ ಭಾರತವು ತನ್ನ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(रिलीज़ आईडी: 2275602) आगंतुक पटल : 45
इस विज्ञप्ति को इन भाषाओं में पढ़ें: Telugu , English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Malayalam