ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನ 2026 ರ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಇಂದು ಬಿಡುಗಡೆಯಾದ ಎನ್‌ಸಿಆರ್‌ಬಿ-ಅಭಿಜ್ಞಾನ್ (NCRB-Abhigyan), CrPI, ಇ-ಪ್ರಾಸಿಕ್ಯೂಷನ್ 2.0 ಮತ್ತು ಇ-ಫೊರೆನ್ಸಿಕ್ಸ್ 2.0 ಅಪ್ಲಿಕೇಶನ್ ಗಳು ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಅನುಕೂಲ ಮಾಡಿಕೊಡಲಿವೆ ಮತ್ತು ಸಕಾಲದಲ್ಲಿ ನ್ಯಾಯ ಒದಗಿಸುವುದನ್ನು ಖಚಿತಪಡಿಸಲು ನೆರವಾಗಲಿವೆ

FIR ದಾಖಲಾದಾಗಿನಿಂದ ಹಿಡಿದು ಅಪರಾಧಿಗಳಿಗೆ ಶಿಕ್ಷೆಯಾಗುವವರೆಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮೂರು ವರ್ಷಗಳ ಒಳಗೆ ನ್ಯಾಯವನ್ನು ಖಚಿತಪಡಿಸುವುದು ಮೋದಿ ಸರ್ಕಾರದ ಅಪರಾಧ ನ್ಯಾಯ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ

ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೀಲನಕ್ಷೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ

ಯಾವುದೇ ಅಪರಾಧಿ ಎಷ್ಟೇ ಕುತಂತ್ರಿಯಾಗಿದ್ದರೂ, ಆತ ಕಾನೂನು ಮತ್ತು ವಿಜ್ಞಾನದ ಸಂಯೋಜಿತ ಶಕ್ತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ

NAFIS, CrPI, ಇ-ಪ್ರಾಸಿಕ್ಯೂಷನ್ ಮತ್ತು ಇ-ಫೊರೆನ್ಸಿಕ್ಸ್ ಕೇಂದ್ರಗಳು ತಂತ್ರಜ್ಞಾನವನ್ನು ಅಪರಾಧ ನ್ಯಾಯ ಸರಪಳಿಯಲ್ಲಿ ಸಂಯೋಜಿಸಿವೆ, ಮತ್ತು ಡೇಟಾವನ್ನು ಈಗ ಕಾರ್ಯಗತಗೊಳಿಸಬಹುದಾದ ಇಂಟೆಲಿಜೆನ್ಸ್  ಆಗಿ ಪರಿವರ್ತಿಸಲಾಗುತ್ತಿದೆ

ಸಾಂಪ್ರದಾಯಿಕ ಬಲ-ಪ್ರಯೋಗ ಆಧಾರಿತ ಪೊಲೀಸ್ ವ್ಯವಸ್ಥೆಯ ಮಾದರಿಯನ್ನು ಮೀರಿ, ವೈಜ್ಞಾನಿಕ ಪುರಾವೆ ಆಧಾರಿತ ತನಿಖೆಯು ಅಪರಾಧ ನಿಯಂತ್ರಣದ ಅತ್ಯಂತ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮುತ್ತಿದೆ

ಪದೇ ಪದೇ ಅಪರಾಧ ಎಸಗುವವರನ್ನು ಮತ್ತು ಅಂತರರಾಜ್ಯ ಕ್ರಿಮಿನಲ್ ಜಾಲಗಳನ್ನು ಅವರು ಅಪರಾಧ ಎಸಗುವ ಮುನ್ನವೇ ಗುರುತಿಸಲು ಮತ್ತು ತಡೆಯಲು ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ ಮತ್ತು ಪ್ಯಾಟರ್ನ್ ಅನಾಲಿಸಿಸ್  ಬಳಸಿಕೊಂಡು ಹೊಸ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುತ್ತಿದೆ

NCRB ಮತ್ತು ಬಿಪಿಆರ್ & ಡಿ (BPR&D) ಸಂಸ್ಥೆಗಳು ಕೇವಲ ದಾಖಲೆಗಳನ್ನು ಕಾಯ್ದಿರಿಸುವ ಸಂಸ್ಥೆಗಳಾಗಿ ಉಳಿಯದೆ, ಇಂಟೆಲಿಜೆನ್ಸ್ ಆಧಾರಿತ ಅಪರಾಧ ತಡೆಗಟ್ಟುವ ಸಂಸ್ಥೆಗಳಾಗಿ ವಿಕಸನಗೊಳ್ಳುತ್ತಿವೆ

ಅಪರಾಧ ನಡೆದ ನಂತರವಷ್ಟೇ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಮೀರಿ, ಅಪರಾಧ ಸಂಭವಿಸುವ ಮುನ್ನವೇ ಅದನ್ನು ತಡೆಗಟ್ಟುವ ಗುರಿ ಹೊಂದಿರುವ 'ಮುನ್ಸೂಚನಾ ಪೊಲೀಸ್ ವ್ಯವಸ್ಥೆ'ಯ ಕಡೆಗೆ ಸಾಗಲು ಸಿದ್ಧತೆಗಳು ನಡೆಯುತ್ತಿವೆ

1 ಕೋಟಿ 29 ಲಕ್ಷ ಬೆರಳಚ್ಚು ದಾಖಲೆಗಳು, 9 ಲಕ್ಷ ಮಾದಕವಸ್ತು ಅಪರಾಧಿಗಳ ದಾಖಲೆಗಳು ಮತ್ತು 3.65 ಲಕ್ಷ ಮಾನವ ಕಳ್ಳಸಾಗಾಣಿಕೆ ದಾಖಲೆಗಳ ಡೇಟಾಬೇಸ್ ಅನ್ನು ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್‌ ಲರ್ನಿಂಗ್ ಮೂಲಕ ಕಾರ್ಯಗತಗೊಳಿಸಬಹುದಾದ ಇಂಟೆಲಿಜೆನ್ಸ್ ಆಗಿ ಪರಿವರ್ತಿಸಲಾಗುವುದು

CCTNS ದೇಶಾದ್ಯಂತ ಇರುವ 17,840 ಪೊಲೀಸ್ ಠಾಣೆಗಳನ್ನು ತಲುಪಿದ್ದು, 37 ಕೋಟಿ 68 ಲಕ್ಷ ಡಿಜಿಟಲ್ ದಾಖಲೆಗಳ AI ಆಧಾರಿತ ವಿಶ್ಲೇಷಣೆಯು ಅಪರಾಧಿಗಳನ್ನು

प्रविष्टि तिथि: 19 JUN 2026 5:46PM by PIB Bengaluru

ನವದೆಹಲಿಯಲ್ಲಿ ನಡೆದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನ 2026ರ ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗೃಹ ಸಚಿವರು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) 'ಅಭಿಜ್ಞಾನ್' (Abhigyan), CrPI, ಇ-ಪ್ರಾಸಿಕ್ಯೂಷನ್ 2.0 (e-Prosecution 2.0) ಮತ್ತು ಇ-ಫೋರೆನ್ಸಿಕ್ಸ್ 2.0 (e-Forensics 2.0) ಅಪ್ಲಿಕೇಶನ್ ಗಳಿಗೆ ಚಾಲನೆ ನೀಡಿದರು. ಇಂದು ಬಿಡುಗಡೆಯಾದ ಈ ಅಪ್ಲಿಕೇಶನ್ ಗಳು ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲ ಮಾಡಿಕೊಡಲಿವೆ ಮತ್ತು ಸಕಾಲದಲ್ಲಿ ನ್ಯಾಯದಾನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲಿವೆ. ಈ ಕಾರ್ಯಕ್ರಮದಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನಿರ್ದೇಶಕರು ಮತ್ತು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

WhatsApp Image 2026-06-19 at 17.00.24.jpeg

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಭಾರತವು ಪ್ರಸ್ತುತ ತನ್ನ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ನಾಗರಿಕರಿಗೆ ಸಂವಿಧಾನವು ಖಾತರಿಪಡಿಸಿರುವ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು, ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಒಂದು ಪರಿಣಾಮಕಾರಿ ಮತ್ತು ಸೂಕ್ತವಾದ ಸಾಧನವನ್ನಾಗಿ ಮಾಡುವ ಸಮಯ ಬಂದಿದೆ ಎಂದು ಅವರು ತಿಳಿಸಿದರು.

ಆಗಸ್ಟ್ 2019 ರಿಂದ ಮೋದಿ ಸರ್ಕಾರವು ಕ್ರಿಮಿನಲ್ ಕಾನೂನುಗಳಲ್ಲಿ ಮೂಲಭೂತ ಸುಧಾರಣೆಗಳನ್ನು ತರಲು ಸಮಗ್ರ ಅಭಿಯಾನವನ್ನು ಕೈಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಆಧುನೀಕರಿಸುವುದು ಮಾತ್ರವಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅದರ ಅವಿಭಾಜ್ಯ ಅಂಗಗಳನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಎಫ್.ಐ.ಆರ್ (FIR) ದಾಖಲಾದ ದಿನದಿಂದ ಆರೋಪಿಗೆ ಶಿಕ್ಷೆಯಾಗುವವರೆಗೆ ಮೂರು ವರ್ಷಗಳ ಒಳಗಾಗಿ ನ್ಯಾಯ ದೊರಕಿಸಿಕೊಡುವುದು ಮೋದಿ ಸರ್ಕಾರದ ಕ್ರಿಮಿನಲ್ ನ್ಯಾಯ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ. ಮೂರು ವರ್ಷಗಳೊಳಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಲಿಷ್ಠವಾದ ಚೌಕಟ್ಟನ್ನು ಸ್ಥಾಪಿಸುತ್ತಿದೆ ಎಂದು ಶ್ರೀ ಶಾ ಹೇಳಿದರು. ಕಳೆದ ಏಳು ವರ್ಷಗಳಲ್ಲಿ ದೇಶವು ಈ ಮಹತ್ವದ ಗುರಿಯನ್ನು ಸಾಧಿಸುವಲ್ಲಿ ಅತ್ಯಂತ ಹತ್ತಿರಕ್ಕೆ ಬಂದಿದ್ದು, ಈ ಪ್ರಯಾಣದಲ್ಲಿ ಎನ್ ಸಿ ಆರ್ ಬಿ (NCRB) ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.

ಹೊಸ ಅಪರಾಧ ಕಾನೂನುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು 24 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೊಂದಿಗೆ ತಾವು ವ್ಯಾಪಕ ಸಮಾಲೋಚನೆಗಳನ್ನು ನಡೆಸಿರುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದರು. ಗೃಹ ಸಚಿವಾಲಯದೊಂದಿಗೆ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR&D) ಮತ್ತು ಎನ್.ಸಿ.ಆರ್.ಬಿ (NCRB) ಈ ಪ್ರಯತ್ನದಲ್ಲಿ ಪ್ರಮುಖ ಆಧಾರಸ್ತಂಭಗಳಾಗಿ ಕಾರ್ಯನಿರ್ವಹಿಸಿವೆ. ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳ ಸಾಮರ್ಥ್ಯ ವೃದ್ಧಿಯ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ, ಅವರಿಗೆ ಅಗತ್ಯ ತರಬೇತಿಯನ್ನು ನೀಡುವ ಮೂಲಕ ಅವರನ್ನು ಬೆಂಬಲಿಸುವಲ್ಲಿ ಎನ್.ಸಿ.ಆರ್.ಬಿ ಒಬ್ಬ  ತಾಯಿಯಂತೆ ಪೋಷಣೆಯ ಪಾತ್ರವನ್ನು ನಿರ್ವಹಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ನಿರಂತರ ಪ್ರಯತ್ನಗಳ ಪರಿಣಾಮವಾಗಿ, ಹೊಸ ಅಪರಾಧ ನ್ಯಾಯ ಕಾನೂನುಗಳು ಜಾರಿಗೆ ಬಂದ ಬಳಿಕ ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ಅತ್ಯಂತ ಸುಗಮವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಶ್ರೀ ಶಾ ತಿಳಿಸಿದರು.

ಅಪರಾಧವನ್ನು ಎದುರಿಸುವಲ್ಲಿ ವೈಜ್ಞಾನಿಕ ಪುರಾವೆಗಳು ಅತ್ಯಂತ ಪ್ರಬಲ ಅಸ್ತ್ರವಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಪರಾಧ ನಡೆದ ಸ್ಥಳದಿಂದ ಆರಂಭದಲ್ಲೇ ವೈಜ್ಞಾನಿಕ ಪುರಾವೆಗಳನ್ನು ಸಂರಕ್ಷಿಸುವುದು ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ಖಾತರಿಪಡಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಬೆರಳಚ್ಚುಗಳು ವೈಜ್ಞಾನಿಕ ಪುರಾವೆಗಳ ಅತ್ಯಂತ ಪ್ರಮುಖ ರೂಪಗಳಲ್ಲಿ ಒಂದಾಗಿವೆ ಎಂದು ಅವರು ತಿಳಿಸಿದರು. ಬೆರಳಚ್ಚು ದಾಖಲೆಗಳ ಪರಿಣಾಮಕಾರಿ ಸಂಗ್ರಹಣೆ ಮತ್ತು ಬಳಕೆ ಅತ್ಯಂತ ನಿರ್ಣಾಯಕವಾಗಿದ್ದು, ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯು (NAFIS) ಈ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಸಂಕೀರ್ಣವಾದ ಪ್ರಕರಣಗಳನ್ನು ಭೇದಿಸುವಲ್ಲಿ ನ್ಯಾಫಿಸ್ (NAFIS) ಗಣನೀಯ ಕೊಡುಗೆ ನೀಡಿದೆ ಎಂದು ಅವರು ಇದೇ ವೇಳೆ ಹೇಳಿದರು.

WhatsApp Image 2026-06-19 at 16.58.26.jpeg

NAFIS ಅನ್ನು  ಕೇವಲ ಅಪರಾಧಿಗಳನ್ನು ಗುರುತಿಸಲು ಮಾತ್ರ ಬಳಸಬಾರದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರತಿಯೊಂದು ಅಪರಾಧ ಸ್ಥಳದಿಂದ ಸಂಗ್ರಹಿಸಿದ ಬೆರಳಚ್ಚುಗಳನ್ನು ಅಪ್ ಲೋಡ್ ಮಾಡುವ ಮೂಲಕ ಡೇಟಾಬೇಸ್ ಅನ್ನು ನಿರಂತರವಾಗಿ ವಿಸ್ತರಿಸುವುದರ ಮೇಲೆ ಇದರ ಪರಿಣಾಮಕಾರಿತ್ವವು ಅವಲಂಬಿತವಾಗಿದೆ. NAFIS ಅನ್ನು ದ್ವಿಮುಖ ವ್ಯವಸ್ಥೆ (two-way system) ಎಂದು ಬಣ್ಣಿಸಿದ ಅವರು, ಇದು ಅಪರಾಧಗಳನ್ನು ಸಾಬೀತುಪಡಿಸುವಲ್ಲಿ ಅಮೂಲ್ಯವಾಗಿದೆ, ಆದರೆ ಇದಕ್ಕೆ ನಿರಂತರ ಡೇಟಾ ಸೃಷ್ಟಿಸುವ ಅಗತ್ಯವಿರುತ್ತದೆ ಎಂದು ಹೇಳಿದರು. ಆದ್ದರಿಂದ, ತರಬೇತಿ ಕಾರ್ಯಕ್ರಮಗಳು ಕೇವಲ ಡೇಟಾಬೇಸ್ ನಲ್ಲಿ ಮಾಹಿತಿ ಹುಡುಕುವುದರ ಮೇಲೆ ಮಾತ್ರವಲ್ಲದೆ, ಡೇಟಾಬೇಸ್ ಅನ್ನು ಬಲಪಡಿಸುವ ಸಲುವಾಗಿ ಅಪರಾಧ ಸ್ಥಳದ ಬೆರಳಚ್ಚುಗಳನ್ನು ವ್ಯವಸ್ಥಿತವಾಗಿ ಅಪ್ ಲೋಡ್ ಮಾಡುವುದರ ಮೇಲೂ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ: ಯಾವುದೇ ಅಪರಾಧಿ ಎಷ್ಟೇ ಬುದ್ಧಿವಂತನಾಗಿದ್ದರೂ, ಕಾನೂನು ಮತ್ತು ವಿಜ್ಞಾನದ ಸಂಯೋಜಿತ ಶಕ್ತಿಯಿಂದ ನುಣುಚಿಕೊಳ್ಳಲು ಸಾಧ್ಯವಾಗಬಾರದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವೈಜ್ಞಾನಿಕ ತನಿಖೆ, ಕಾಲಮಿತಿಯೊಳಗಿನ ಪ್ರಾಸಿಕ್ಯೂಷನ್ (ಅಭಿಯೋಗ) ಮತ್ತು ಸಮಗ್ರ ಅಪರಾಧ ನ್ಯಾಯ ವ್ಯವಸ್ಥೆಯ ಪರಿಣಾಮಕಾರಿ ಬಳಕೆಯ ಮೂಲಕ ಅಪರಾಧ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಬಹುದು. ಕೇವಲ ಅಪರಾಧಿಗಳನ್ನು ಬಂಧಿಸುವುದು ಮಾತ್ರ ಸಾಕಾಗುವುದಿಲ್ಲ, ಏಕೆಂದರೆ ಅಪರಾಧ ಕೃತ್ಯಗಳಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ಸಮಾಜದಲ್ಲಿ ಮೂಡಿದಾಗ ಮಾತ್ರ ಶಾಶ್ವತವಾಗಿ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಕೇವಲ ಅಪರಾಧಿಗಳನ್ನು ಬಂಧಿಸುವುದರ ಮೇಲೆ ಮಾತ್ರವಲ್ಲದೆ, ಕಾಲಮಿತಿಯೊಳಗೆ ಅಪರಾಧಗಳನ್ನು ಸಾಬೀತುಪಡಿಸುವ ನಿಟ್ಟಿನಲ್ಲೂ ನಿರಂತರ ಒತ್ತು ನೀಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಮ್ಮ ಗಮನ ಕೇವಲ ಅಪರಾಧಿಗಳ ಬಂಧನಕ್ಕಷ್ಟೇ ಸೀಮಿತವಾಗಬಾರದು ಎಂದು ಅವರು ತಿಳಿಸಿದರು. ವೈಜ್ಞಾನಿಕವಾಗಿ ಅಪರಾಧಗಳನ್ನು ದೃಢಪಡಿಸುವುದು ಮತ್ತು ಸಕಾಲದಲ್ಲಿ ನ್ಯಾಯ ಒದಗಿಸುವುದು ಕೂಡ ಅಷ್ಟೇ ಮಹತ್ವದ್ದಾಗಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು.

ಆದಾಗ್ಯೂ, ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಇಂದು, ಪೊಲೀಸ್, ಕಾರಾಗೃಹ ಆಡಳಿತ, ಪ್ರಾಸಿಕ್ಯೂಷನ್ ಏಜೆನ್ಸಿಗಳು, ನ್ಯಾಯಾಲಯಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯಗಳು ಸೇರಿದಂತೆ ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲಾ ಪಾಲುದಾರರು ಈ ಸುಧಾರಣೆಗಳನ್ನು ಅಳವಡಿಸಿಕೊಂಡಿರುವುದು ಮಾತ್ರವಲ್ಲದೆ, ಅವುಗಳ ಪ್ರಗತಿಗೂ ಗಣನೀಯ ಕೊಡುಗೆ ನೀಡಿದ್ದಾರೆ. ಈ ಸುಧಾರಣೆಗಳ ಯಶಸ್ಸನ್ನು ಸಾರ್ವಜನಿಕರಿಗೆ ತಿಳಿಸುವುದು ಈಗ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಹೊಸ ಅಪರಾಧ ಕಾನೂನುಗಳು ಜಾರಿಗೆ ಬಂದಾಗಿನಿಂದ, ಜೀವಾವಧಿ ಶಿಕ್ಷೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕೇವಲ 90 ದಿನಗಳೊಳಗೆ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತರಬೇತಿ ಕಾರ್ಯಕ್ರಮಗಳು ಕೇವಲ ಅಪ್ಲಿಕೇಶನ್ ಗಳನ್ನು ಹೇಗೆ ಬಳಸಬೇಕೆಂದು ಕಲಿಯುವುದಕ್ಕಷ್ಟೇ ಸೀಮಿತವಾಗಬಾರದು ಎಂದು ಅವರು ಹೇಳಿದರು. ಬದಲಿಗೆ, ವೈಜ್ಞಾನಿಕ ಪುರಾವೆಗಳ ಸೃಷ್ಟಿಯಿಂದ ಹಿಡಿದು ದೋಷಾರೋಪಣಾ ಪಟ್ಟಿಗಳನ್ನು ಸಲ್ಲಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ತರಬೇತಿಯು ಒಳಗೊಂಡಿರಬೇಕು ಎಂದು ಅವರು ತಿಳಿಸಿದರು.

ಅಭಿಯೋಗ ಮತ್ತು ನ್ಯಾಯಾಂಗಗಳೆರಡರ ಕಾರ್ಯವನ್ನು ಸರಳಗೊಳಿಸುವ ಉದ್ದೇಶವುಳ್ಳ ನಿಬಂಧನೆಗಳು ಹೊಸ ಕಾನೂನುಗಳಲ್ಲಿವೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಹಳೆಯ ಕಾಲದ ಕಾರ್ಯವಿಧಾನಗಳ ಬದಲಿಗೆ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ ಕ್ರಿಯಾತ್ಮಕ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದ್ದು, ಇದು ಪ್ರಾಸಿಕ್ಯೂಷನ್ ಪ್ರಕ್ರಿಯೆಯ ಸಮಯವನ್ನು ತಗ್ಗಿಸಲು ನೆರವಾಗುತ್ತದೆ. ಪೊಲೀಸ್, ಪ್ರಾಸಿಕ್ಯೂಟರ್ಗಳು, ವಿಧಿವಿಜ್ಞಾನ ತಜ್ಞರು ಮತ್ತು ನ್ಯಾಯಾಂಗ ವ್ಯವಸ್ಥೆ.. ಇವೆಲ್ಲವೂ ತರಬೇತಿ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾದಾಗ ಮಾತ್ರ ಅರ್ಥಪೂರ್ಣ ಫಲಿತಾಂಶಗಳನ್ನು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ಉದ್ಘಾಟನಾ ಅಧಿವೇಶನದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು, ಪ್ರತಿ ವಾರ ಕನಿಷ್ಠ ಒಂದು ದಿನವನ್ನು ಈ ನಿರ್ಣಾಯಕ ಅಂಶಗಳ ಕುರಿತ ತರಬೇತಿಗಾಗಿ ಮೀಸಲಿಡಬೇಕು ಮತ್ತು ಕನಿಷ್ಠ ಒಂದು ವರ್ಷದವರೆಗೆ ಈ ಪ್ರಯತ್ನವನ್ನು ಮುಂದುವರಿಸಬೇಕು ಎಂದು ಗೃಹ ಸಚಿವರು ಕರೆ ನೀಡಿದರು. ಮಾಹಿತಿಯನ್ನು ಗುಪ್ತಚರ ಮಾಹಿತಿಯಾಗಿ ಪರಿವರ್ತಿಸುವ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು. ಅಪರಾಧಿಗಳಿಗೆ ಶಿಕ್ಷೆಯಾಗಲು ನೆರವಾಗುವ ನಿಟ್ಟಿನಲ್ಲಿ, ಬೃಹತ್ ಮಾಹಿತಿ ಭಂಡಾರಗಳನ್ನು ಕಾರ್ಯಗತಗೊಳಿಸಬಹುದಾದ ಇಂಟೆಲಿಜೆನ್ಸ್ ಆಗಿ ಪರಿವರ್ತಿಸುವತ್ತ ವ್ಯವಸ್ಥೆಯು ಹೆಚ್ಚೆಚ್ಚು ಗಮನಹರಿಸುತ್ತಿದೆ ಎಂದು ಅವರು ಗಮನಸೆಳೆದರು.

NAFIS ಮತ್ತು ಸಿ.ಆರ್.ಪಿ.ಐ (CRPI) ನಂತಹ ಡೇಟಾಬೇಸ್ ಗಳ ಗುಣಮಟ್ಟ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಾಥಮಿಕವಾಗಿ ರಾಜ್ಯಗಳ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅಪರಾಧಿಯ ಡಿ ಎನ್ ಎ (DNA) ಮಾದರಿಯನ್ನು ಸರಿಯಾಗಿ ಸಂರಕ್ಷಿಸಿದರೆ, ಅದನ್ನು ಇತರ ಅಪರಾಧಗಳ ತನಿಖೆಯಲ್ಲೂ ಬಳಸಬಹುದು. ಆದ್ದರಿಂದ, ಇಂತಹ ಮಾದರಿಗಳ ನಿಖರ ಸಂಗ್ರಹಣೆ ಮತ್ತು ಸುರಕ್ಷಿತ ಶೇಖರಣೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಅದೇ ರೀತಿ, NAFIS ಡೇಟಾದ ಸಂಗ್ರಹಣೆ, ಭದ್ರತೆ ಮತ್ತು ಬಳಕೆಯನ್ನು ಅತ್ಯಂತ ನಿಖರತೆಯಿಂದ ಕೈಗೊಳ್ಳಬೇಕು ಎಂದು ಶ್ರೀ ಶಾ ತಿಳಿಸಿದರು.

ಡೇಟಾಬೇಸ್ ನ ಗುಣಮಟ್ಟ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಕರೆ ನೀಡಿದ ಶ್ರೀ ಅಮಿತ್ ಶಾ ಅವರು, ಸಕ್ರಿಯವಾಗಿ ಬಳಸದೇ ಸುಮ್ಮನೆ ಸಂಗ್ರಹಿಸಿಡುವ ಡೇಟಾವು ಆಸ್ತಿಯಾಗುವ ಬದಲು ಹೊರೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಡೇಟಾವನ್ನು ಇಂಟೆಲಿಜೆನ್ಸ್ ಆಗಿ ಪರಿವರ್ತಿಸಿದಾಗ ಮಾತ್ರ ಅದಕ್ಕೆ ನೈಜ ಮೌಲ್ಯ ಸಿಗುತ್ತದೆ. ಅಪರಾಧದ ಮಾದರಿಗಳನ್ನು ವಿಶ್ಲೇಷಿಸಲು, ಸರಣಿ ಅಪರಾಧಿಗಳನ್ನು ಗುರುತಿಸಲು ಮತ್ತು ಅಪರಾಧಿಗಳ ಪ್ರೊಫೈಲ್ ಸಿದ್ಧಪಡಿಸಲು ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ ಅನ್ನು ಬಳಸುವ ವಿಶೇಷ ತಂಡಗಳನ್ನು ಪ್ರತಿ ರಾಜ್ಯದಲ್ಲೂ ರಚಿಸಬೇಕು ಎಂದು ಅವರು ಕರೆ ನೀಡಿದರು.

ಕೆಲವು ಅಪರಾಧಿಗಳು ರಾಜ್ಯಗಳ ನಡುವಿನ ನ್ಯಾಯಾಧಿಕಾರ ವ್ಯಾಪ್ತಿಯ ಮಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆದ್ದರಿಂದ ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ಅಪರಾಧಿಗಳನ್ನು ಗುರುತಿಸಲು ಡೇಟಾಬೇಸ್ಗ ಳನ್ನು ಬಳಸಬೇಕು. ನಿಖರವಾದ ಒಳನೋಟಗಳನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳ ಅತ್ಯಾಧುನಿಕ ಸಾಫ್ಟ್ ವೇರ್ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆಯ ಮೂಲಕ ಡೇಟಾವನ್ನು ಕಾರ್ಯಗತಗೊಳಿಸಬಹುದಾದ ಇಂಟೆಲಿಜೆನ್ಸ್ ಆಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು. ಹೊಣೆಗಾರಿಕೆ ವ್ಯವಸ್ಥೆ, ಸೈಬರ್ ಭದ್ರತಾ ಮುನ್ನೆಚ್ಚರಿಕೆಗಳು, ಆಕ್ಸೆಸ್ ಲಾಗ್ ಗಳು, SOP ಆಧಾರಿತ ಬಳಕೆ, ತೃತೀಯ-ವ್ಯಕ್ತಿ ಲೆಕ್ಕಪರಿಶೋಧನೆ (third-party audits) ಮತ್ತು ದುರ್ಬಳಕೆಗಾಗಿ ದಂಡನೆ ಸೇರಿದಂತೆ, ಡೇಟಾಬೇಸ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ತಿಳಿಸಿದರು.

ತರಬೇತಿಯನ್ನು ಹೆಚ್ಚು ಪ್ರಾಯೋಗಿಕವಾಗಿ ರೂಪಿಸಬೇಕು ಎಂದು ಗೃಹ ಸಚಿವರು ಹೇಳಿದರು. ದೋಷಾರೋಪಣಾ ಪಟ್ಟಿಗಳನ್ನು ಸಂಕ್ಷಿಪ್ತವಾಗಿರಿಸಬೇಕು ಮತ್ತು ಕೇವಲ ಪ್ರಸ್ತುತವಾದ ಪುರಾವೆಗಳನ್ನು ಮಾತ್ರ ಅದರಲ್ಲಿ ಸೇರಿಸಬೇಕು ಎಂದು ಅವರು ತಿಳಿಸಿದರು. ಕಾಲಮಿತಿಯೊಳಗಿನ ಪ್ರಾಸಿಕ್ಯೂಷನ್ ಖಚಿತಪಡಿಸಲು ಹೊಸ ಕಾನೂನುಗಳ ಅಡಿಯಲ್ಲಿನ ನಿಬಂಧನೆಗಳನ್ನು ಬಳಸಿಕೊಳ್ಳಬೇಕು ಎಂದು ಶ್ರೀ ಶಾ ಒತ್ತಿ ಹೇಳಿದರು. ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಮತ್ತು ಅಪ್ ಲೋಡ್ ಮಾಡುವ ನಿಖರವಾದ ಪ್ರಕ್ರಿಯೆಗಳ ಜೊತೆಗೆ, ಸಂಕ್ಷಿಪ್ತ ದೋಷಾರೋಪಣಾ ಪಟ್ಟಿಗಳನ್ನು ಸಿದ್ಧಪಡಿಸುವ ಕಲೆಯನ್ನು ತರಬೇತಿ ಮಾಡ್ಯೂಲ್ ಗಳು ಒಳಗೊಂಡಿರಬೇಕು ಎಂದು ಗೃಹ ಸಚಿವರು ಒತ್ತಿ ಹೇಳಿದರು. ಈ ಮಾಡ್ಯೂಲ್ ಗಳನ್ನು ಅನುಭವಿ ಪ್ರಾಸಿಕ್ಯೂಟರ್ಗಳು ಸಿದ್ಧಪಡಿಸಬೇಕು ಎಂದು ಅವರು ತಿಳಿಸಿದರು. ಬೆರಳಚ್ಚುಗಳು, ಟೆಲಿಫೋನ್ ಟವರ್ ಡೇಟಾ, ಮುಖ ಗುರುತಿಸುವಿಕೆ, ಕಣ್ಣಿನ ಪಾಪೆ (iris) ಮತ್ತು ಡಿ.ಎನ್.ಎ (DNA) ಹೊಂದಾಣಿಕೆಯಾದ ಮೇಲೂ ನ್ಯಾಯಾಲಯಗಳಿಗೆ 250 ರಷ್ಟು ಪುರಾವೆಗಳನ್ನು ಹಾಜರುಪಡಿಸಿದರೆ, ತಂತ್ರಜ್ಞಾನದಿಂದ ಯಾವುದೇ ನೈಜ ಉಪಯೋಗವಿಲ್ಲ ಎಂದು ಶ್ರೀ ಶಾ ಅಭಿಪ್ರಾಯಪಟ್ಟರು.

ಕೇಂದ್ರ ಗೃಹ ಸಚಿವರು, ರಾಜ್ಯ ಪೊಲೀಸ್ ಪಡೆಗಳ ಶ್ರಮದ ಫಲವಾಗಿ 'ಅಪರಾಧ ಮತ್ತು ಅಪರಾಧಿಗಳ ಪತ್ತೆ ಜಾಲ ಮತ್ತು ವ್ಯವಸ್ಥೆ'ಯನ್ನು (CCTNS) ಪ್ರಸ್ತುತ ದೇಶಾದ್ಯಂತ ಇರುವ ಎಲ್ಲಾ 17,840 ಪೊಲೀಸ್ ಠಾಣೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು. ಪ್ರಸ್ತುತ ದೇಶದಲ್ಲಿ 37 ಕೋಟಿ 68 ಲಕ್ಷ ಎಫ್.ಐ.ಆರ್ ಗಳು (FIR) ಸೇರಿದಂತೆ ಹಳೆಯ ದತ್ತಾಂಶಗಳ  ಲಭ್ಯತೆಯಿದೆ ಎಂದು ಅವರು ಹೇಳಿದರು. 22,000 ನ್ಯಾಯಾಲಯಗಳನ್ನು ಇ-ಕೋರ್ಟ್ಸ್ (e-Courts) ವ್ಯವಸ್ಥೆಗೆ ಸಂಪರ್ಕಿಸಲಾಗಿದೆ ಮತ್ತು ಹಳೆಯ ಪ್ರಾಸಿಕ್ಯೂಷನ್ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದರು. ಇ-ಪ್ರಿಸನ್ಸ್ (e-Prisons) ವ್ಯವಸ್ಥೆಯು 2 ಕೋಟಿ 29 ಲಕ್ಷ ಕೈದಿಗಳ ಡೇಟಾವನ್ನು ಹೊಂದಿದ್ದರೆ, ಇ-ಫೊರೆನ್ಸಿಕ್ಸ್ (e-Forensics) ಡೇಟಾಬೇಸ್ 34 ಲಕ್ಷ 48 ಸಾವಿರ ಪ್ರಕರಣಗಳ ಮಾಹಿತಿಯನ್ನು ಒಳಗೊಂಡಿದೆ ಎಂದು ಗೃಹ ಸಚಿವರು ವಿವರಿಸಿದರು. ಇದರ ಜೊತೆಗೆ ಕ್ರೈಮ್ ಮಲ್ಟಿ-ಏಜೆನ್ಸಿ ಸೆಂಟರ್ (Cri-Mac) 43 ಲಕ್ಷ 16 ಸಾವಿರ ಎಚ್ಚರಿಕೆ ದಾಖಲೆಗಳನ್ನು ಹೊಂದಿದೆ. ಈ ಎಲ್ಲಾ ಡೇಟಾವು ಒಂದು ಕೋಣೆಯಲ್ಲಿ ಇರಿಸಲಾದ ಕಪಾಟಿನಂತಿದೆ; ಆಧುನಿಕ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿ ಈ ಮಾಹಿತಿಯನ್ನು ವಿಶ್ಲೇಷಿಸಿ, ಕಾರ್ಯಗತಗೊಳಿಸಬಹುದಾದ ಇಂಟೆಲಿಜೆನ್ಸ್ (Actionable intelligence) ಆಗಿ ಪರಿವರ್ತಿಸದ ಹೊರತು, ಇದು ಆಸ್ತಿಯಾಗುವ ಬದಲು ಹೊರೆಯಾಗಿಯೇ ಉಳಿಯುತ್ತದೆ ಎಂದು ಶ್ರೀ ಶಾ ಹೇಳಿದರು. ಗೃಹ ಸಚಿವಾಲಯವು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದ್ದು, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ವೃತ್ತಿಪರರನ್ನು ತೊಡಗಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಪ್ರಸ್ತುತ ಅಂದಾಜು 1 ಕೋಟಿ 29 ಲಕ್ಷ ಬೆರಳಚ್ಚು ದಾಖಲೆಗಳು, ಸುಮಾರು 9 ಲಕ್ಷ 91 ಸಾವಿರ ಮಾದಕವಸ್ತು ಅಪರಾಧಿಗಳ ದಾಖಲೆಗಳು, 3 ಲಕ್ಷ 65 ಸಾವಿರ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದ ಡೇಟಾ ಹಾಗೂ ವ್ಯಾಪಕವಾದ ಕಾರಾಗೃಹ ಡೇಟಾಬೇಸ್ಗಳಿವೆ ಎಂದು ಶ್ರೀ ಅಮಿತ್ ಶಾ ಅವರು ತಿಳಿಸಿದರು. ಇವೆಲ್ಲವೂ ಒಟ್ಟಾರೆಯಾಗಿ ಒಂದು ಅಮೂಲ್ಯವಾದ ರಾಷ್ಟ್ರೀಯ ಸಂಪತ್ತಾಗಿವೆ. ಇಡೀ ಅಪರಾಧ ನ್ಯಾಯ ಪರಿಸರ ವ್ಯವಸ್ಥೆಯು ಈ ಶಕ್ತಿಯನ್ನು ಬಳಸಿಕೊಳ್ಳುವುದನ್ನು ಕಲಿಯುವುದು ಮತ್ತು ಡೇಟಾವನ್ನು ಕಾರ್ಯಾಚರಣಾ ಸಾಮರ್ಥ್ಯವಾಗಿ ಪರಿವರ್ತಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮುಂದಿನ ಹೆಜ್ಜೆಯಾಗಿದೆ.

ಮುಂಬರುವ ಐದು ವರ್ಷಗಳಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯ ಪ್ರತಿಯೊಬ್ಬ ಪಾಲುದಾರರೂ, ಡೇಟಾವನ್ನು ಕಾರ್ಯಗತಗೊಳಿಸುವಂತೆ ಮಾಡುವುದು, ಡೇಟಾಬೇಸ್ ಗಳನ್ನು ಸಂಯೋಜಿಸುವುದು, ದೃಢವಾದ ವಿಶ್ಲೇಷಣಾತ್ಮಕ ವಿಧಾನಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ನವೀನ ಅಪರಾಧ ನಿಯಂತ್ರಣ ಮಾಡ್ಯೂಲ್ಗಳನ್ನು ವಿನ್ಯಾಸಗೊಳಿಸುವಲ್ಲಿ ಯುವ ವೃತ್ತಿಪರರನ್ನು ತೊಡಗಿಸಿಕೊಳ್ಳುವುದರ ಮೇಲೆ ಗಮನ ಹರಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎನ್.ಸಿ.ಆರ್.ಬಿ (NCRB) ಮತ್ತು ಬಿಪಿಆರ್ & ಡಿ (BPR&D) ಸಂಸ್ಥೆಗಳು ಕೇವಲ ದಾಖಲೆಗಳನ್ನು ಕಾಯ್ದಿರಿಸುವ  ಸಂಸ್ಥೆಗಳಾಗಿ ಉಳಿಯದೆ, ಇಂಟೆಲಿಜೆನ್ಸ್ ಆಧಾರಿತ  ಅಪರಾಧ ತಡೆಗಟ್ಟುವ ಸಂಸ್ಥೆಗಳಾಗಿ ವಿಕಸನಗೊಳ್ಳುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದರು.

NCRB ನಾಲ್ಕು ವರ್ಷಗಳ ಹಿಂದೆ 'ಮೋಡಸ್ ಆಪರೇಂಡಿ ಬ್ಯೂರೋ'ವನ್ನು (Modus Operandi Bureau) ಸ್ಥಾಪಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಮ್ಮೇಳನದ ನಂತರ, ಡೇಟಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪ್ರಕ್ರಿಯೆಯನ್ನು ಈ ಬ್ಯೂರೋ ಮತ್ತಷ್ಟು ಮುನ್ನಡೆಸಲಿದೆ. ಇದು ಅಪರಾಧಿಗಳಿಗೆ ಶಿಕ್ಷೆ ಖಾತರಿಪಡಿಸಲು ನೆರವಾಗುವುದರ ಜೊತೆಗೆ, ಅಪರಾಧಗಳು ಸಂಭವಿಸುವ ಮುನ್ನವೇ ಅವುಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ. ಅಪರಾಧ ನಿಯಂತ್ರಣವು ಎರಡು ಆಯಾಮಗಳನ್ನು ಹೊಂದಿದೆ; ಒಂದು ಅಪರಾಧ ನಡೆದ ನಂತರ ಶಿಕ್ಷೆಯನ್ನು ಖಚಿತಪಡಿಸುವುದು, ಮತ್ತೊಂದು ಅಪರಾಧದ ಸ್ವರೂಪಗಳು, ಪದೇ ಪದೇ ಅಪರಾಧ ಎಸಗುವವರು ಹಾಗೂ ಅಂತರರಾಜ್ಯ ಅಥವಾ ಅಂತಾರಾಷ್ಟ್ರೀಯ ಕ್ರಿಮಿನಲ್ ಜಾಲಗಳನ್ನು ಮುಂಚಿತವಾಗಿಯೇ ಗುರುತಿಸುವ ಮೂಲಕ ಅಪರಾಧವನ್ನು ತಡೆಗಟ್ಟುವುದು ಎಂದು ಅವರು ವಿವರಿಸಿದರು.

ಹೊಸ ಅಪರಾಧ ನ್ಯಾಯ ಸಂಹಿತೆಗಳ ಉದ್ದೇಶ ಸ್ಪಷ್ಟವಾಗಿದೆ ಎಂಬುದನ್ನು ಕೇಂದ್ರ ಗೃಹ ಸಚಿವರು ಪುನರುಚ್ಚರಿಸಿದರು: ದೇಶದಲ್ಲಿ ಎಲ್ಲೇ ಅಪರಾಧ ಪ್ರಕರಣ ದಾಖಲಾದರೂ, ಸುಪ್ರೀಂ ಕೋರ್ಟ್ವರೆಗಿನ ಮೇಲ್ಮನವಿಗಳು ಸೇರಿದಂತೆ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯು ಪೂರ್ಣಗೊಂಡು ಕೇವಲ ಮೂರು ವರ್ಷಗಳೊಳಗೆ ಅಪರಾಧವು ಸಾಬೀತಾಗಬೇಕು. ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನೀಲನಕ್ಷೆಯನ್ನು  ಸಿದ್ಧಪಡಿಸುವ ನಿಟ್ಟಿನಲ್ಲಿ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಜೆ ನ್ಯಾಯಾಲಯಗಳನ್ನು  ಸ್ಥಾಪಿಸುವ ಹಾಗೂ ಹೊಸ ಕಾರ್ಯವಿಧಾನಗಳನ್ನು ರೂಪಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಯಾವುದೇ ಹಂತದಲ್ಲೂ ವಿಳಂಬವನ್ನು ಗೃಹ ಸಚಿವಾಲಯವು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕಾಗಿ ವೈಜ್ಞಾನಿಕವಾಗಿ ಸಿದ್ಧಪಡಿಸಿದ ದೋಷಾರೋಪಣಾ ಪಟ್ಟಿಗಳು, ದಕ್ಷ ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯಗಳ ಸಂಪೂರ್ಣ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ಅವರು ಹೇಳಿದರು.

WhatsApp Image 2026-06-19 at 16.58.04.jpeg

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಶ್ರೀ ಅಮಿತ್ ಶಾ ಅವರು, NCRB ಯಾವ ದೂರದೃಷ್ಟಿಯೊಂದಿಗೆ ಸ್ಥಾಪನೆಯಾಗಿತ್ತೋ ಅದೇ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಹೇಳಿದರು. ಬಿಪಿಆರ್ & ಡಿ (BPR&D) ಮತ್ತು ಎನ್ ಸಿ ಆರ್ ಬಿ ಯ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಈ ಸಂಸ್ಥೆಗಳಿಲ್ಲದೆ ಭಾರತದಲ್ಲಿ ಪರಿಣಾಮಕಾರಿಯಾಗಿ ಅಪರಾಧ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಎನ್ ಸಿ ಆರ್ ಬಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮರ್ಪಣಾ ಭಾವವನ್ನು ಅಭಿನಂದಿಸಿದ ಅವರು, ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆಯ ಪಾತ್ರವು ಇನ್ನಷ್ಟು ಮಹತ್ವದ್ದಾಗಲಿದೆ ಎಂದು ಹೇಳಿದರು. ಇದೇ ವೇಳೆ ಗೃಹ ಸಚಿವರು 'ಬೆರಳಚ್ಚು ಬ್ಯೂರೋ'ವನ್ನು (Fingerprint Bureau) ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಒಂದು ಅನಿವಾರ್ಯ ಸಾಧನ ಎಂದು ಬಣ್ಣಿಸಿದರು. ದತ್ತಾಂಶ ಸಂಗ್ರಹಣೆಯ ವೈಜ್ಞಾನಿಕ ವಿಧಾನಗಳು, ಅಪರಾಧ ನಡೆದ ಸ್ಥಳದಲ್ಲಿ ಪುರಾವೆಗಳ ಸಂರಕ್ಷಣೆ, ಡೇಟಾಬೇಸ್ ಭದ್ರತೆ ಮತ್ತು ಪೊಲೀಸ್ ಠಾಣೆಗಳಿಂದಲೇ ತ್ವರಿತವಾಗಿ NAFIS ಮೂಲಕ ಮಾಹಿತಿ ಹುಡುಕುವಂತಹ ಪ್ರಾಯೋಗಿಕ ವಿಷಯಗಳ ಕಡೆಗೆ ಗಮನಹರಿಸುವಂತೆ ಸಮ್ಮೇಳನದಲ್ಲಿ ಭಾಗವಹಿಸಿದವರನ್ನು ಅವರು ಒತ್ತಾಯಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಇಂದು ನಾಲ್ಕು ಪ್ರಮುಖ ಅಪ್ಲಿಕೇಶನ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ:

  1. NCRB-ಅಭಿಜ್ಞಾನ್

  2. CrPI ಅಪ್ಲಿಕೇಶನ್

  3. ಇ-ಪ್ರಾಸಿಕ್ಯೂಷನ್ 2.0

  4. ಇ-ಫೋರೆನ್ಸಿಕ್ಸ್ 2.0

NCRB-ಅಭಿಜ್ಞಾನ್ – ಈ ಮೊಬೈಲ್ ಅಪ್ಲಿಕೇಶನ್ ಕ್ಷೇತ್ರ ಮಟ್ಟದ ಪೊಲೀಸ್ ಸಿಬ್ಬಂದಿಗೆ ಯಾವುದೇ ಸ್ಥಳದಿಂದ ಪ್ರಮಾಣೀಕೃತ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಬಳಸಿ ರಾಷ್ಟ್ರೀಯ ಫಿಂಗರ್‌ಪ್ರಿಂಟ್ ಡೇಟಾಬೇಸ್ ಅನ್ನು ಹುಡುಕಲು ಮತ್ತು ಫಿಂಗರ್‌ಪ್ರಿಂಟ್ ಹೋಲಿಕೆಯ ಮೂಲಕ ಶಂಕಿತರನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ಕ್ಷೇತ್ರ ಮಟ್ಟದ ಪೊಲೀಸಿಂಗ್ ವ್ಯವಸ್ಥೆಯನ್ನು ಹೆಚ್ಚು ದಕ್ಷ ಮತ್ತು ಸ್ಪಂದನಾಶೀಲವಾಗಿಸುತ್ತದೆ.

 

CrPI ಅಪ್ಲಿಕೇಶನ್ – ಈ ವ್ಯವಸ್ಥೆಯು ಮುಖ ಗುರುತಿಸುವಿಕೆ (facial recognition), ಐರಿಸ್ ಹೋಲಿಕೆ (iris matching) ಮತ್ತು ಡಿಎನ್‌ಎ ಹೋಲಿಕೆ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಈ ಮಲ್ಟಿ-ಮಾಡಲ್ ಬಯೋಮೆಟ್ರಿಕ್ ತಂತ್ರಜ್ಞಾನವು ಗುರುತಿಸುವಿಕೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ, ಹಸ್ತಚಾಲಿತ ದೋಷಗಳನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ. ಪುನರಾವರ್ತಿತ ಅಪರಾಧಿಗಳನ್ನು ಗುರುತಿಸುವುದು ಮತ್ತು ಸಿಸಿಟಿವಿ ಆಧಾರಿತ ಶಂಕಿತರ ಗುರುತಿಸುವಿಕೆ ಇದರ ಪ್ರಮುಖ ಅನ್ವಯಗಳಾಗಿವೆ. ಇಲ್ಲಿಯವರೆಗೆ, 2,190 CrPI ಯುನಿಟ್‌ಗಳನ್ನು ವಿತರಿಸಲಾಗಿದ್ದು, 553,000 ಕ್ಕೂ ಹೆಚ್ಚು ದಾಖಲಾತಿಗಳನ್ನು ಪೂರ್ಣಗೊಳಿಸಲಾಗಿದೆ.

ಇ-ಫೋರೆನ್ಸಿಕ್ಸ್ 2.0 – ಈ ಪ್ಲಾಟ್‌ಫಾರ್ಮ್ ದೇಶಾದ್ಯಂತದ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಮತ್ತು ತನಿಖಾ ಸಂಸ್ಥೆಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸುತ್ತದೆ. ಫೋರೆನ್ಸಿಕ್ ತಪಾಸಣೆಗಾಗಿ ಪ್ರಕರಣದ ಸ್ವೀಕೃತಿ ಮತ್ತು ಡಿಜಿಟಲ್ ಟ್ರ್ಯಾಕಿಂಗ್, ಮಾದರಿಗಳ ನೋಂದಣಿ, ಪ್ರಯೋಗಾಲಯದ ಕಾರ್ಯನಿರ್ವಹಣೆ ನಿರ್ವಹಣೆ, ವರದಿ ಸಿದ್ಧಪಡಿಸುವಿಕೆ, ವರದಿಗಳಿಗೆ ಡಿಜಿಟಲ್ ಪ್ರವೇಶ ಮತ್ತು ಕಸ್ಟಡಿ ಸರಪಳಿಯನ್ನು (chain of custody) ಬಲಪಡಿಸುವುದು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಇ-ಪ್ರಾಸಿಕ್ಯೂಷನ್ 2.0 – ಈ ಪ್ಲಾಟ್‌ಫಾರ್ಮ್ ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ನಡುವೆ ಡಿಜಿಟಲ್ ಸಮನ್ವಯವನ್ನು ಏರ್ಪಡಿಸುತ್ತದೆ. ಇದು ಅಪರಾಧಿಯನ್ನು ಗುರುತಿಸಿದ ತಕ್ಷಣವೇ, ಸಕಾಲಿಕ ಪ್ರಾಸಿಕ್ಯೂಷನ್ ಮತ್ತು ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈ ನಾಲ್ಕು ಅಪ್ಲಿಕೇಶನ್‌ಗಳು ಒಟ್ಟಾಗಿ ಏನನ್ನು ಸಾಧಿಸಲಿವೆ?

NAFIS ಮತ್ತು CrPI ಅಪರಾಧಿಯನ್ನು ಗುರುತಿಸುತ್ತವೆ → CCTNS ಮತ್ತು Cri-MAC ತನಿಖೆಯನ್ನು ಸಂಪರ್ಕಿಸುತ್ತವೆ ಮತ್ತು ಬೆಂಬಲಿಸುತ್ತವೆ → ಇ-ಫೋರೆನ್ಸಿಕ್ಸ್ ಸಾಕ್ಷ್ಯವನ್ನು ಬಲಪಡಿಸುತ್ತದೆ → ಇ-ಪ್ರಾಸಿಕ್ಯೂಷನ್ ಪ್ರಕರಣವನ್ನು ಶಿಕ್ಷೆಯತ್ತ ಕೊಂಡೊಯ್ಯುತ್ತದೆ.

ಒಟ್ಟಾರೆಯಾಗಿ, ಈ ನಾಲ್ಕು ಅಪ್ಲಿಕೇಶನ್‌ಗಳು ಪೊಲೀಸಿಂಗ್, ವಿಧಿವಿಜ್ಞಾನ ತನಿಖೆ, ಪ್ರಾಸಿಕ್ಯೂಷನ್ ನಿರ್ವಹಣೆ ಮತ್ತು ಅಪರಾಧಿಗಳ ಗುರುತಿಸುವಿಕೆಯನ್ನು ಸಮಗ್ರ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS) ನ ತಡೆರಹಿತ ಡಿಜಿಟಲ್ ಸರಪಳಿಯಾಗಿ ಸಂಯೋಜಿಸುತ್ತವೆ. ಇವು ಡೇಟಾವನ್ನು ತಿಳುವಳಿಕೆಯುಳ್ಳ ನಿರ್ಧಾರಗಳನ್ನಾಗಿ ಮತ್ತು ಬೆರಳಚ್ಚುಗಳನ್ನು ನ್ಯಾಯವನ್ನಾಗಿ ಪರಿವರ್ತಿಸಲಿವೆ.

 

*****


(रिलीज़ आईडी: 2275470) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Gujarati , Odia