|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಜಂಟಿ ಮಾಹಿತಿ ಸಭೆ
ದೇಶದಲ್ಲಿ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಸ್ಥಿತಿ ಸಹಜವಾಗಿದೆ; ನಿನ್ನೆಯವರೆಗೆ ಭಾರತೀಯ ರೈತರು ಒಟ್ಟು ಅಗತ್ಯದ ಸುಮಾರು 27% ರಷ್ಟು ರಸಗೊಬ್ಬರವನ್ನು ಈಗಾಗಲೇ ಖರೀದಿಸಿದ್ದಾರೆ ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಸ್ಥಾವರಗಳಿಗೆ ನೈಸರ್ಗಿಕ ಅನಿಲ ಪೂರೈಕೆಯು ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 100% ತಲುಪಿದೆ ಕಳೆದ 4 ದಿನಗಳಲ್ಲಿ ಸುಮಾರು 1.66 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ಗೆ ಪ್ರತಿಯಾಗಿ ಸುಮಾರು 1.84 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ ಕಪ್ಪು ಮಾರುಕಟ್ಟೆ ಅಥವಾ ಅನಧಿಕೃತ ಸಾಗಾಣಿಕೆಯ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಸುಮಾರು 62,370 ಮೆಟ್ರಿಕ್ ಟನ್ ಎಲ್‌ಎನ್‌ಜಿ (LNG) ಸರಕನ್ನು ಹೊತ್ತೊಯ್ಯುತ್ತಿರುವ ಎಲ್‌ಎನ್‌ಜಿ ವಾಹಕ ಹಡಗು 'ದಿಶಾ', ಇಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ; ಜೂನ್ 18, 2026 ರಂದು ಭಾರತವನ್ನು ತಲುಪುವ ಸಾಧ್ಯತೆಯಿದೆ
प्रविष्टि तिथि:
15 JUN 2026 6:07PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ನವೀಕರಣಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಮಾಹಿತಿ ಸಭೆಯನ್ನು ನಡೆಸಲಾಯಿತು. ಅಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಆ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ದೇಶದಲ್ಲಿ ರಸಗೊಬ್ಬರಗಳ ಲಭ್ಯತೆ ಮತ್ತು ದಾಸ್ತಾನು ಸ್ಥಿತಿಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.
ರಸಗೊಬ್ಬರ ದಾಸ್ತಾನು ಸ್ಥಿತಿ ಮತ್ತು ಲಭ್ಯತೆ:
- ದೇಶದಲ್ಲಿ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಸ್ಥಿತಿ ಸಹಜವಾಗಿದೆ.
- 2026 ರ ಮುಂಗಾರು ಋತುವಿಗೆ, ರಸಗೊಬ್ಬರ ಅಗತ್ಯವನ್ನು ಡಿಎ ಅಂಡ್ ಎಫ್‌ಡಬ್ಲ್ಯೂ (DA&FW) ಸಂಸ್ಥೆಯು 383.9 ಲಕ್ಷ ಮೆಟ್ರಿಕ್ ಟನ್ (LMT) ಎಂದು ಮರು-ಮೌಲ್ಯಮಾಪನ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಂದಿನ ದಿನಕ್ಕೆ ದೇಶದಲ್ಲಿ ಸುಮಾರು 196.65 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ (ಶೇಕಡಾ 51 ಕ್ಕೂ ಹೆಚ್ಚು), ಇದು ಸಾಮಾನ್ಯ ಮಟ್ಟದ ಶೇಕಡಾ 33 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸರ್ಕಾರದ ಸುಧಾರಿತ ಯೋಜನೆ, ಮುಂಗಡ ದಾಸ್ತಾನು ಮತ್ತು ದಕ್ಷ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ.
- ಭಾರತೀಯ ರೈತರು ಪ್ರಸ್ತುತ ನಡೆಯುತ್ತಿರುವ, 2026 ರ ಮುಂಗಾರು ಋತುವಿನಲ್ಲಿ 14.06.2026 ರವರೆಗೆ ಒಟ್ಟು 102.78 ಲಕ್ಷ ಮೆಟ್ರಿಕ್ ಟನ್ ರಾಸಾಯನಿಕ ರಸಗೊಬ್ಬರಗಳನ್ನು ಈಗಾಗಲೇ ಖರೀದಿಸಿದ್ದಾರೆ. ಇದು ಒಟ್ಟು ಅಗತ್ಯದ ಸುಮಾರು ಶೇಕಡಾ 27 ರಷ್ಟಾಗಿದೆ.
- ದೇಶದಲ್ಲಿ ಸಾವಯವ ಗೊಬ್ಬರದ ದಾಸ್ತಾನು ಸುಮಾರು 22.60 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ.
- ಯುದ್ಧದ ನಂತರ ಭಾರತೀಯ ರೈತರು 11.82 ಲಕ್ಷ ಮೆಟ್ರಿಕ್ ಟನ್ ಸಾವಯವ ಗೊಬ್ಬರವನ್ನು (FOM/LFOM/PROM) ಖರೀದಿಸಿದ್ದಾರೆ (ಪಂಜಾಬ್ 2.91 LMT, ಉತ್ತರ ಪ್ರದೇಶ 2.94 LMT, ಹರಿಯಾಣ 1.44 LMT, ಮಧ್ಯಪ್ರದೇಶ 1.34 LMT, ಗುಜರಾತ್ 1.0 LMT, ಮಹಾರಾಷ್ಟ್ರ 0.87 LMT). ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 3.31 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಈ ಗಣನೀಯ ಹೆಚ್ಚಳವು ಸಾವಯವ ಪೋಷಕಾಂಶಗಳ ಮೂಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಸಕಾರಾತ್ಮಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ರೈತರ ಆದ್ಯತೆ ಕ್ರಮೇಣ ಬದಲಾಗುತ್ತಿರುವುದನ್ನು ಸೂಚಿಸುತ್ತದೆ.
- ಪ್ರಸ್ತುತ ನಡೆಯುತ್ತಿರುವ ಖಾರಿಫ್ ಹಂಗಾಮಿಗೆ ರಸಗೊಬ್ಬರಗಳ ಲಭ್ಯತೆಯಲ್ಲಿ ಯಾವುದೇ ಪ್ರಮುಖ ಸವಾಲುಗಳಿಲ್ಲ.
- ಬಿಕ್ಕಟ್ಟಿನ ನಂತರ ರಸಗೊಬ್ಬರಗಳ ದೇಶೀಯ ಉತ್ಪಾದನೆ ಮತ್ತು ಆಮದು ವಿವರ (ಲಕ್ಷ ಟನ್‌ಗಳಲ್ಲಿ):
|
ಉತ್ಪನ್ನ
|
ಬಿಕ್ಕಟ್ಟಿನ ನಂತರ ದೇಶೀಯ ಉತ್ಪಾದನೆ
|
ಬಿಕ್ಕಟ್ಟಿನ ನಂತರ ಭಾರತೀಯ ಬಂದರುಗಳನ್ನು ತಲುಪಿದ ಆಮದು
|
|
ಯೂರಿಯಾ
|
74.95
|
21.95
|
|
ಡಿಎಪಿ
|
10.33
|
4.18
|
|
ಎನ್‌ಪಿಕೆಗಳು
|
23.93
|
8.52
|
|
ಎಸ್‌ಎಸ್‌ಪಿ
|
14.44
|
0
|
|
ಎಂಒಪಿ
|
0
|
4.71
|
|
ಒಟ್ಟು
|
123.65
|
39.36
|
- ಬಿಕ್ಕಟ್ಟಿನ ಪರಿಸ್ಥಿತಿಯ ನಂತರ ಆಮದು ಮತ್ತು ದೇಶೀಯ ಉತ್ಪಾದನೆಯ ಮೂಲಕ ಒಟ್ಟು ಸುಮಾರು 163.01 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳನ್ನು ಲಭ್ಯವಿರುವ ದಾಸ್ತಾನಿಗೆ ಸೇರಿಸಲಾಗಿದೆ.
- ಪ್ರಸ್ತುತ ಚಾಲ್ತಿಯಲ್ಲಿರುವ ಬಿಕ್ಕಟ್ಟಿನ ಅವಧಿಯಲ್ಲಿ ಭಾರತವು 50 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಯೂರಿಯಾ ಮತ್ತು ಪಿ ಅಂಡ್ ಕೆ (P&K) ರಸಗೊಬ್ಬರಗಳನ್ನು ಸುರಕ್ಷಿತವಾಗಿ ಪಡೆದುಕೊಂಡಿದೆ.
- ವಿದೇಶಗಳಲ್ಲಿರುವ 28 ಭಾರತೀಯ ಮಿಷನ್‌ಗಳ ಸಮನ್ವಯದೊಂದಿಗೆ, ಭಾರತವು ಒಮಾನ್, ಮಲೇಷ್ಯಾ, ವಿಯೆಟ್ನಾಂ, ಜಾರ್ಜಿಯಾ, ನೈಜೀರಿಯಾ, ರಷ್ಯಾ, ಫಿನ್‌ಲ್ಯಾಂಡ್, ಈಜಿಪ್ಟ್, ಆಲ್ಜೀರಿಯಾ, ಟರ್ಕಿ, ನೆದರ್‌ಲ್ಯಾಂಡ್ಸ್‌ನಿಂದ ಯೂರಿಯಾ ಪೂರೈಕೆಯನ್ನು ಮತ್ತು ರಷ್ಯಾ, ಮೊರಾಕ್ಕೊ, ಈಜಿಪ್ಟ್, ಯುಎಸ್‌ಎ, ಜೋರ್ಡಾನ್, ದಕ್ಷಿಣ ಕೊರಿಯಾ, ಟುನೀಶಿಯಾ, ಸೌದಿ ಅರೇಬಿಯಾದಿಂದ ರೆಡ್ ಸೀ (ಕೆಂಪು ಸಮುದ್ರ) ಮಾರ್ಗವಾಗಿ ಡಿಎಪಿ/ಎನ್‌ಪಿಕೆಗಳ ಪೂರೈಕೆಯನ್ನು ಖಚಿತಪಡಿಸಿಕೊಂಡಿದೆ.
- ಪ್ರಸ್ತುತ ನಡೆಯುತ್ತಿರುವ ಜೂನ್ ತಿಂಗಳಲ್ಲಿ, 25 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಆಮದು ಮಾಡಿಕೊಂಡ ಯೂರಿಯಾ, ಡಿಎಪಿ ಮತ್ತು ಎನ್‌ಪಿಕೆಗಳು ಭಾರತೀಯ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ.
- ಭಾರತವು 17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಖರೀದಿಗೆ ಜಾಗತಿಕ ಟೆಂಡರ್ ಹೊರಡಿಸಿದ್ದು, ಅದರ ಪ್ರಕ್ರಿಯೆ ನಡೆಯುತ್ತಿದೆ.
- ರಸಗೊಬ್ಬರಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಲಭ್ಯತೆಯನ್ನು ರಸಗೊಬ್ಬರ ಇಲಾಖೆಯು ನಿಯಮಿತವಾಗಿ ಪರಿಶೀಲಿಸುತ್ತಿದೆ.
- ರಸಗೊಬ್ಬರ ಇಲಾಖೆಯು (DoF) ಕಂಪನಿಗಳು ಸಲ್ಲಿಸುವ ಎಲ್ಲಾ ಸಬ್ಸಿಡಿ ಬಿಲ್‌ಗಳನ್ನು ವಾರಕ್ಕೊಮ್ಮೆ ನಿಯಮಿತವಾಗಿ ಪಾವತಿಸುತ್ತಿದೆ ಮತ್ತು ಪ್ರಸ್ತುತ, ರಸಗೊಬ್ಬರ ಸಬ್ಸಿಡಿ ಪಾವತಿಗೆ ಸಮರ್ಪಕ ಬಜೆಟ್ ಲಭ್ಯವಿದೆ.
- ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇಂದಿನವರೆಗೆ ಉನ್ನತಾಧಿಕಾರ ಉಳ್ಳ ಸಚಿವರ ಸಮಿತಿಯ (EGoS) 12 ಸಭೆಗಳು ನಡೆದಿದ್ದು, ಲಭ್ಯತೆಯಲ್ಲಿದ್ದ ಬಹುತೇಕ ಸವಾಲುಗಳನ್ನು ಈ ಸಮಿತಿಯು ಯಶಸ್ವಿಯಾಗಿ ಪರಿಹರಿಸಿದೆ.
- ಭಾರತದ ರಸಗೊಬ್ಬರ ಭದ್ರತೆಯು ಬಲವಾಗಿ, ಸ್ಥಿರವಾಗಿ ಮತ್ತು ಉತ್ತಮ ನಿರ್ವಹಣೆಯೊಂದಿಗೆ ಮುಂದುವರಿದಿದೆ; ಎಲ್ಲಾ ಪ್ರಮುಖ ರಸಗೊಬ್ಬರಗಳ ಲಭ್ಯತೆಯು ನಿರಂತರವಾಗಿ ಅಗತ್ಯಕ್ಕಿಂತ ಹೆಚ್ಚಾಗಿದೆ.
ಇಂಧನ ಪೂರೈಕೆ ಮತ್ತು ಲಭ್ಯತೆ:
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆಯ ಸ್ಥಿತಿಯ ಕುರಿತು ಮಾಹಿತಿ ನೀಡಿತು, ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿತು.
ಕಚ್ಚಾ ತೈಲ ಸ್ಥಿತಿ ಮತ್ತು ತೈಲ ಸಂಸ್ಕರಣಾಗಾರ ಕಾರ್ಯಾಚರಣೆಗಳು:
- ಎಲ್ಲಾ ತೈಲ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಸಮರ್ಪಕ ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
- ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
- ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ಭಾರತದ ಸರ್ಕಾರವು ದಿನಾಂಕ 01.04.2026 ರ ಆದೇಶದ ಮೂಲಕ ತೈಲ ಸಂಸ್ಕರಣಾ ಕಂಪನಿಗಳು ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗಳಿಗೆ ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕೆಲವು ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
- ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕಗಳು ಮತ್ತು ಪೆಟ್ರೋ ರಾಸಾಯನಿಕಗಳ ಇಲಾಖೆ (DCPC) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (DPIIT) ವಿನಂತಿಗಳ ಆಧಾರದ ಮೇಲೆ, ಫಾರ್ಮಾ, ಕೆಮಿಕಲ್ ಮತ್ತು ಪೇಂಟ್ ವಲಯದ ಕಂಪನಿಗಳಿಗಾಗಿ ಎಲ್‌ಪಿಜಿ ಪೂಲ್‌ನಿಂದ ಪ್ರತಿದಿನ 1,120 ಮೆಟ್ರಿಕ್ ಟನ್ C3-C4 ಅಣುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
- ಜೂನ್ 1, 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ, ಮಥುರಾ ಮತ್ತು ಗುಜರಾತ್ ಸಂಸ್ಕರಣಾಗಾರಗಳು ರಾಸಾಯನಿಕ, ಫಾರ್ಮಾ ಮತ್ತು ಪೇಂಟ್ ಕೈಗಾರಿಕೆಗಳಿಗೆ 5,860 ಮೆಟ್ರಿಕ್ ಟನ್‌ಗಿಂತ ಹೆಚ್ಚು C3-C4 ಅಣುಗಳನ್ನು (ಪ್ರೊಪಿಲೀನ್ ಮತ್ತು ಬ್ಯುಟಿಲೀನ್ ಒಳಗೊಂಡಂತೆ) ಮತ್ತು ಸುಮಾರು 5,050 ಮೆಟ್ರಿಕ್ ಟನ್ ಬ್ಯುಟೈಲ್ ಅಕ್ರಿಲೇಟ್ ಅನ್ನು ಮಾರಾಟ ಮಾಡಿವೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ನಿಗದಿ ಕ್ರಮಗಳು:
- ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಕೇಂದ್ರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
- ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಕಡಿಮೆ ಮಾಡಿದೆ.
- ಕೆಲವು ಪ್ರದೇಶಗಳ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಅಸಹಜವಾಗಿ ಹೆಚ್ಚಿನ ಮಾರಾಟ ಮತ್ತು ಭಾರಿ ದಟ್ಟಣೆ ಕಂಡುಬಂದಿದೆ; ಆದಾಗ್ಯೂ, ದೇಶಾದ್ಯಂತ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಸಮರ್ಪಕ ದಾಸ್ತಾನು ಲಭ್ಯವಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್‌ಜಿ (PNG) ವಿಸ್ತರಣೆ ಉಪಕ್ರಮಗಳು:
- ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಗೃಹ ಬಳಕೆಯ ಪಿಎನ್‌ಜಿ (D-PNG) ಮತ್ತು ಸಿಎನ್‌ಜಿ-ಸಾರಿಗೆಗೆ 100% ಪೂರೈಕೆಯನ್ನು ಖಚಿತಪಡಿಸಲಾಗಿದೆ.
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಸ್ಥಾವರಗಳಿಗೆ ಗ್ಯಾಸ್ ಪೂರೈಕೆಯು ಅವುಗಳ ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 100% ರಷ್ಟಿದೆ.
- ಸಿಜಿಡಿ (CGD) ನೆಟ್‌ವರ್ಕ್‌ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಗ್ಯಾಸ್ ಪೂರೈಕೆಯನ್ನು ಶೇಕಡಾ 80 ರವರೆಗೆ ಹೆಚ್ಚಿಸಲಾಗಿದೆ.
- ವಾಣಿಜ್ಯ ಎಲ್‌ಪಿಜಿ ಲಭ್ಯತೆಯ ಕಳವಳಗಳನ್ನು ನಿವಾರಿಸಲು, ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿಎನ್‌ಜಿ ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ ಸಿಜಿಡಿ (CGD) ಸಂಸ್ಥೆಗಳಿಗೆ ಸೂಚಿಸಲಾಗಿದೆ.
- ಸಿಜಿಡಿ ನೆಟ್‌ವರ್ಕ್ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.
- ಭಾರತ ಸರ್ಕಾರವು ದಿನಾಂಕ 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್‌ಪಿಜಿಯ ಹೆಚ್ಚುವರಿ ಶೇಕಡಾ 10 ರಷ್ಟು ಹಂಚಿಕೆಯನ್ನು ನೀಡಿದೆ, ಆದರೆ ಅವುಗಳು ಎಲ್‌ಪಿಜಿಯಿಂದ ಪಿಎನ್‌ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಬೇಕಾಗುತ್ತದೆ.
- 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿಎನ್‌ಜಿ ವಿಸ್ತರಣಾ ಸುಧಾರಣೆಗಳಿಗೆ ಒಳಪಟ್ಟು ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
- ಹೆಚ್ಚು ಸ್ವಚ್ಛ, ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು ಭಾರತ ಸರ್ಕಾರವು ಮಾದರಿ ಕರಡು 'ರಾಜ್ಯ ಸಿಬಿಜಿ (CBG) ನೀತಿ'ಯನ್ನು ಅಭಿವೃದ್ಧಿಪಡಿಸಿದೆ. ಸಿಬಿಜಿ ಅಭಿವೃದ್ಧಿಗಾಗಿ ರಾಜ್ಯಗಳು ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುವು ಮಾಡಿಕೊಡುವ ಸಮಗ್ರ ಹಾಗೂ ಹೊಂದಿಕೊಳ್ಳುವ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುವುದು ಈ ಮಾದರಿ ನೀತಿಯ ಉದ್ದೇಶವಾಗಿದೆ. ಇದನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಮುಂದಿನ ಕಂತಿನ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
- ಮಾರ್ಚ್ 2026 ರಿಂದ, ಸುಮಾರು 9.76 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಆರಂಭಿಸಲಾಗಿದೆ ಮತ್ತು ಹೆಚ್ಚುವರಿ 3.19 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ, ಇದು ಒಟ್ಟು ಸಂಪರ್ಕಗಳನ್ನು 12.95 ಲಕ್ಷಕ್ಕೆ ಕೊಂಡೊಯ್ದಿದೆ. ಇದಲ್ಲದೆ, ಸುಮಾರು 9.72 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
ಎಲ್‌ಪಿಜಿ ಪೂರೈಕೆ
ದೇಶೀಯ ಎಲ್‌ಪಿಜಿ ಪೂರೈಕೆ ಸ್ಥಿತಿ:
- ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿಯಿಂದಾಗಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
- ದೇಶೀಯ ಕುಟುಂಬಗಳಿಗೆ ಎಲ್‌ಪಿಜಿ ಪೂರೈಕೆಗೆ ಪ್ರಥಮ ಆದ್ಯತೆ ನೀಡಲಾಗಿದೆ.
- ಎಲ್‌ಪಿಜಿ ವಿತರಕರಲ್ಲಿ ಯಾವುದೇ ರೀತಿಯ ದಾಸ್ತಾನು ಖಾಲಿಯಾದ ವರದಿಗಳಾಗಿಲ್ಲ.
- ನಿನ್ನೆ ಉದ್ಯಮದ ಆಧಾರದ ಮೇಲೆ ಆನ್‌ಲೈನ್ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಪ್ರಮಾಣವು ಸುಮಾರು 99% ಕ್ಕೆ ಏರಿಕೆಯಾಗಿದೆ.
- ವಿತರಕರ ಮಟ್ಟದಲ್ಲಿ ದುರುಪಯೋಗ ಅಥವಾ ಬೇರೆಡೆಗೆ ಸಾಗಿಸುವುದನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಯನ್ನು ಸುಮಾರು 96% ಕ್ಕೆ ಹೆಚ್ಚಿಸಲಾಗಿದೆ. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈ ಡಿಎಸಿ (DAC) ಕೋಡ್ ಬರುತ್ತದೆ.
- ಕಳೆದ 4 ದಿನಗಳಲ್ಲಿ ಸುಮಾರು 1.66 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ಗೆ ಪ್ರತಿಯಾಗಿ ಸುಮಾರು 1.84 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
- ಬಿಕ್ಕಟ್ಟಿಗೆ ಮುಂಚಿನ ಮಟ್ಟದ 70% ರಷ್ಟನ್ನು ಒಟ್ಟು ವಾಣಿಜ್ಯ ಹಂಚಿಕೆಗೆ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ (ಇದರಲ್ಲಿ 10% ರಷ್ಟು ಸುಧಾರಣೆ ಆಧಾರಿತ ಹಂಚಿಕೆಯೂ ಸೇರಿದೆ).
- ಕಳೆದ 4 ದಿನಗಳಲ್ಲಿ —
- ಸುಮಾರು 2.18 ಲಕ್ಷ — 5 ಕೆಜಿ ತೂಕದ ಎಫ್‌ಟಿಎಲ್ (FTL) ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
- ಸುಮಾರು 871 ಶಿಬಿರಗಳ (Camps) ಮೂಲಕ 14,500 ಕ್ಕೂ ಹೆಚ್ಚು — 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
- ಒಟ್ಟು 24,184 ಮೆಟ್ರಿಕ್ ಟನ್ (MT) ವಾಣಿಜ್ಯ ಎಲ್‌ಪಿಜಿಯನ್ನು ಮಾರಾಟ ಮಾಡಲಾಗಿದೆ.
- ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು (PSU OMCs) ಸುಮಾರು 722 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿಯನ್ನು ಮಾರಾಟ ಮಾಡಿವೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ವ್ಯವಸ್ಥೆಗಳು:
- ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಹಾಗೂ ದಾಸ್ತಾನು ಹತ್ತಿಕ್ಕುವಿಕೆ (Hoarding) ಮತ್ತು ಕಪ್ಪು ಮಾರುಕಟ್ಟೆ ದಂಧೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ಗಳ (VCs) ಮೂಲಕ ಇದನ್ನೇ ಪುನರುಚ್ಚರಿಸಿದೆ.
- ಇಂಧನದ ಸಮರ್ಪಕ ಲಭ್ಯತೆಯ ಕುರಿತು ನಾಗರಿಕರಿಗೆ ಭರವಸೆ ನೀಡಲು ಪೂರ್ವಭಾವಿ ಸಾರ್ವಜನಿಕ ಸಂವಹನದ ಅಗತ್ಯವನ್ನು ಭಾರತ ಸರ್ಕಾರವು ಒತ್ತಿಹೇಳಿದೆ.
- ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ಚಿಲ್ಲರೆ ಮಾರಾಟ ಕೇಂದ್ರಗಳ (Retail outlets) ಮೂಲಕ ಅನಧಿಕೃತವಾಗಿ ಹೈ-ಸ್ಪೀಡ್ ಡೀಸೆಲ್ (HSD) ಖರೀದಿಸುವುದನ್ನು ತಡೆಯಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರವು 26.05.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ವಿನಂತಿಸಿದೆ.
- ನೆಟ್‌ವರ್ಕ್ ಲಭ್ಯವಿರುವ ಪ್ರದೇಶಗಳಲ್ಲಿ ಎಲ್‌ಪಿಜಿ ಗ್ರಾಹಕರನ್ನು ಪಿಎನ್‌ಜಿಗೆ (PNG) ಪರಿವರ್ತಿಸಲು ಪ್ರೋತ್ಸಾಹಿಸಲು ಮತ್ತು ಒತ್ತಾಯಿಸಲು ಆಯಾ ಎಸ್‌ಎಲ್‌ಸಿಗಳು (SLCs)/ಸಿಜಿಡಿ (CGD) ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್/ಕಮಿಷನರ್/ನಗರ ಸಂಸ್ಥೆಗಳ ವಿಶೇಷ ಅಧಿಕಾರಿಗಳಿಗೆ ಸೂಚನೆ ನೀಡುವಂತೆ 10.06.2026 ರ ಪತ್ರದ ಮೂಲಕ ಭಾರತ ಸರ್ಕಾರವು ವಿನಂತಿಸಿದೆ.
- ಭಾರತ ಸರ್ಕಾರವು ದಿನಾಂಕ 11.06.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಓಎಂಸಿ (OMC) ಗಳಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:
- ಚಿಲ್ಲರೆ ಮಾರಾಟ ಕೇಂದ್ರಗಳು ಪ್ರತಿ ಗ್ರಾಹಕರಿಗೆ/ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್‌ಗಳ ಮಿತಿಯೊಂದಿಗೆ, ವಾಹನದ ಟ್ಯಾಂಕ್‌ಗಳಿಗೆ ಅಥವಾ ಪಿಇಎಸ್‌ಒ (PESO) ಅನುಮೋದಿತ ಕಂಟೈನರ್‌ಗಳಿಗೆ ಮಾತ್ರ ಡೀಸೆಲ್ ವಿತರಿಸಬೇಕು. ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಖರೀದಿಸಿದ ಡೀಸೆಲ್ ಅನ್ನು ಮರುಮಾರಾಟ ಮಾಡುವಂತಿಲ್ಲ.
- ಕೈಗಾರಿಕಾ ಮತ್ತು ನೇರ ಅಥವಾ ಸಾಂಸ್ಥಿಕ ಹಾಗೂ ವಾಣಿಜ್ಯ ಗ್ರಾಹಕರು ಚಿಲ್ಲರೆ ಮಾರಾಟ ಕೇಂದ್ರಗಳಿಂದ ಇಂಧನ ಪಡೆಯುವುದನ್ನು ನಿಷೇಧಿಸಲಾಗಿದೆ ಮತ್ತು ಅವರು ತಮ್ಮ ಅವಶ್ಯಕತೆಗಳನ್ನು ಗ್ರಾಹಕ ಪಂಪ್‌ಗಳ (Consumer pumps) ಮೂಲಕವೇ ಪಡೆಯಬೇಕು.
- ಓಎಂಸಿ (OMC) ಗಳು ಮತ್ತು ಚಿಲ್ಲರೆ ಮಾರಾಟ ಕೇಂದ್ರಗಳ ವಿತರಕರು ನಿಗದಿತ ನಿರ್ಬಂಧಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರರಾಗಿರುತ್ತಾರೆ.
- ಕಪ್ಪು ಮಾರುಕಟ್ಟೆ ಅಥವಾ ಅನಧಿಕೃತ ಸಾಗಾಣಿಕೆಯಂತಹ ಯಾವುದೇ ದುಷ್ಕೃತ್ಯಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು:
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದಾಸ್ತಾನು ಹತ್ತಿಕ್ಕುವಿಕೆ ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ಜಾರಿ ಕ್ರಮಗಳು ಮುಂದುವರಿದಿವೆ.
- ಎಲ್‌ಪಿಜಿ ಸಂಬಂಧಿತ ಜಾರಿ: ಮಾರ್ಚ್-26 ರಿಂದ ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 1,330 ಎಫ್‌ಐಆರ್‌ಗಳನ್ನು (FIRs) ದಾಖಲಿಸಲಾಗಿದೆ, 311 ಜನರನ್ನು ಬಂಧಿಸಲಾಗಿದೆ ಮತ್ತು ಸುಮಾರು 75,960 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
- ಪೆಟ್ರೋಲ್, ಡೀಸೆಲ್ ಸಂಬಂಧಿತ ಜಾರಿ: 27ನೇ ಮೇ 2026 ರಿಂದ ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 12,307 ಲೀಟರ್ ಪೆಟ್ರೋಲ್ ಮತ್ತು ಸುಮಾರು 91,263 ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ. 50 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಸುಮಾರು 39 ಜನರನ್ನು ಬಂಧಿಸಲಾಗಿದೆ.
- ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ (PSU OMCs) ಅಧಿಕಾರಿಗಳಿಂದ ಹಠಾತ್ ತಪಾಸಣೆ ಮುಂದುವರಿದಿದೆ. ಕಳೆದ 4 ದಿನಗಳಲ್ಲಿ 3 ಚಿಲ್ಲರೆ ಮಾರಾಟ ಕೇಂದ್ರಗಳಿಗೆ ದಂಡ ವಿಧಿಸಲಾಗಿದೆ ಮತ್ತು ಮಾರುಕಟ್ಟೆ ಶಿಸ್ತು ಮಾರ್ಗಸೂಚಿಗಳ ಉಲ್ಲಂಘನೆಗಾಗಿ 866 ಚಿಲ್ಲರೆ ಮಾರಾಟ ಕೇಂದ್ರಗಳನ್ನು ಅಮಾನತುಗೊಳಿಸಲಾಗಿದೆ.
ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು:
- ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ದೇಶೀಯ ಎಲ್‌ಪಿಜಿ, ಗೃಹ ಬಳಕೆಯ ಪಿಎನ್‌ಜಿ (D-PNG) ಮತ್ತು ಸಿಎನ್‌ಜಿ-ಸಾರಿಗೆಗೆ 100% ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
- ವಾಣಿಜ್ಯ ಎಲ್‌ಪಿಜಿಗಾಗಿ, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಫಾರ್ಮಾ, ಉಕ್ಕು, ಆಟೋಮೊಬೈಲ್, ಕೃಷಿ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ.
- ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಎಲ್‌ಪಿಜಿ ಅಗತ್ಯವನ್ನು ಬೆಂಬಲಿಸಲು 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ.
- ತೈಲ ಸಂಸ್ಕರಣಾಗಾರದ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಸೇರಿದಂತೆ ಹಲವು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ:
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಾಗರಿಕರು ಆತಂಕದಿಂದ ಖರೀದಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
- ವದಂತಿಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಅಧಿಕೃತ ಮೂಲಗಳನ್ನು ಅವಲಂಬಿಸಿ.
- ಪಿಎನ್‌ಜಿ, ಇಂಡಕ್ಷನ್/ಎಲೆಕ್ಟ್ರಿಕ್ ಸ್ಟೌವ್‌ಗಳಂತಹ ಪರ್ಯಾಯ ಇಂಧನ ಬಳಸಲು ವಿನಂತಿಸಲಾಗಿದೆ.
- ಬಲ್ಕ್ ಮತ್ತು ಕೈಗಾರಿಕಾ ಗ್ರಾಹಕರು ಅಧಿಕೃತ ಮೂಲಗಳಿಂದಲೇ ಡೀಸೆಲ್ ಖರೀದಿಸಲು ವಿನಂತಿಸಲಾಗಿದೆ.
- ಎಲ್ಲಾ ನಾಗರಿಕರು ದೈನಂದಿನ ಬಳಕೆಯಲ್ಲಿ ಇಂಧನ ಉಳಿಸಲು ಪ್ರಯತ್ನಿಸಲು ವಿನಂತಿಸಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು:
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್‌ನಲ್ಲಿ ಪ್ರಸ್ತುತ ಇರುವ ಕಡಲ ಪರಿಸ್ಥಿತಿಯ ಕುರಿತು ಅಪ್‌ಡೇಟ್ ನೀಡಿದ್ದು, ಆ ಪ್ರದೇಶದಲ್ಲಿ ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದೆ. ಈ ಕೆಳಗಿನ ವಿವರಗಳನ್ನು ಸಚಿವಾಲಯವು ಹಂಚಿಕೊಂಡಿದೆ:
- ಮಾಲ್ಟಾ ಧ್ವಜ ಹೊಂದಿರುವ ಎಲ್‌ಎನ್‌ಜಿ (LNG) ವಾಹಕ ಹಡಗು 'ದಿಶಾ' (IMO: 9250713), ಜೂನ್ 15, 2026 ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಇದು ಸುಮಾರು 62,370 ಮೆಟ್ರಿಕ್ ಟನ್ ಎಲ್‌ಎನ್‌ಜಿ ಸರಕನ್ನು ಹೊತ್ತು ಭಾರತದ ದಹೇಜ್‌ಗೆ ಬರುತ್ತಿದೆ. ಹಡಗು ಜೂನ್ 18, 2026 ರಂದು ಭಾರತವನ್ನು ತಲುಪುವ ಸಾಧ್ಯತೆಯಿದೆ.
- ಸಚಿವಾಲಯವು ಶಿಪ್ಪಿಂಗ್ ಮಹಾನಿರ್ದೇಶನಾಲಯದ (DG Shipping) ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದೇಶಗಳಲ್ಲಿನ ಭಾರತೀಯ ಮಿಷನ್‌ಗಳು, ಶಿಪ್ಪಿಂಗ್ ಕಂಪನಿಗಳು ಮತ್ತು ಇತರ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
- ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು ಕಾರ್ಯಾರಂಭ ಮಾಡಿದಾಗಿನಿಂದ 12,737 ಕರೆಗಳು ಮತ್ತು 28,299 ಕ್ಕೂ ಹೆಚ್ಚು ಇಮೇಲ್‌ಗಳನ್ನು ನಿಭಾಯಿಸಿದೆ. ಕಳೆದ 96 ಗಂಟೆಗಳಲ್ಲಿ 406 ಕರೆಗಳು ಮತ್ತು 784 ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ.
- ತಾಯ್ನಾಡಿಗೆ ಮರಳಿ ಕರೆತರುವ (Repatriation) ನವೀಕರಣ: ಸಚಿವಾಲಯವು ಡಿಜಿ ಶಿಪ್ಪಿಂಗ್ ಮೂಲಕ ಇದುವರೆಗೆ 3,587 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 96 ಗಂಟೆಗಳಲ್ಲಿ ಗಲ್ಫ್ ಪ್ರದೇಶದಿಂದ ಕರೆತರಲಾದ 50 ನಾವಿಕರು ಸೇರಿದ್ದಾರೆ.
- ಭಾರತಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿವೆ, ಯಾವುದೇ ದಟ್ಟಣೆ ವರದಿಯಾಗಿಲ್ಲ.
*****
(रिलीज़ आईडी: 2273439)
|