ನೀತಿ ಆಯೋಗ
azadi ka amrit mahotsav

ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವ ಪ್ರಧಾನಮಂತ್ರಿ


ವಿಷಯ: ವಿಕಸಿತ ಭಾರತ @2047 ಕ್ಕಾಗಿ ಸಮಗ್ರ ಮಾನವ ಅಭಿವೃದ್ಧಿ

प्रविष्टि तिथि: 10 JUN 2026 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 11, 2026 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಕಸಿತ ಭಾರತಕ್ಕಾಗಿ ಪ್ರಧಾನಮಂತ್ರಿಯವರ ‘ಟೀಮ್ ಇಂಡಿಯಾ’ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ವರ್ಷದ ವಿಷಯವಾದ ‘ವಿಕಸಿತ ಭಾರತ @2047 ಕ್ಕಾಗಿ ಸಮಗ್ರ ಮಾನವ ಅಭಿವೃದ್ಧಿ’ಯು ವಯಸ್ಸು, ಪ್ರದೇಶ, ಲಿಂಗ ಅಥವಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ಭಾರತೀಯನ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಮೇಲೆ ಗಮನ ಹರಿಸುತ್ತದೆ. ಆಡಳಿತ ಮಂಡಳಿ ಸಭೆಯು ಈ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮತ್ತು ದೇಶಾದ್ಯಂತದ ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ಪುರಾವೆಗಳು ಅಥವಾ ಸಂಖ್ಯೆಗಳೊಂದಿಗೆ ಪರಿಶೀಲಿಸಬಹುದಾದ ನೈಜವಾದ ಸಾಧನೆಗಳ ಫಲಿತಾಂಶಗಳಾಗಿ ಪರಿವರ್ತಿಸುವ ವಿಧಾನಗಳ ಬಗ್ಗೆ ಚರ್ಚಿಸಲಿದೆ.

ಈ ಆಡಳಿತ ಮಂಡಳಿ ಸಭೆಯು ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳನ್ನು ಒಂದೆಡೆ ಸೇರಿಸಿ, ನಾಲ್ಕು ಪ್ರಮುಖ ಸ್ತಂಭಗಳ ಸುತ್ತ ಹೆಣೆಯಲಾದ ʻಸಮಗ್ರ ಮಾನವ ಅಭಿವೃದ್ಧಿ ಚೌಕಟ್ಟ'ನ ಬಗ್ಗೆ ಚರ್ಚಿಸಲಿದೆ. ಆ ನಾಲ್ಕು ಸ್ತಂಭಗಳೆಂದರೆ: (i) ಮೂಲಭೂತ ಮಾನವ ಬಂಡವಾಳ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಕೌಶಲ್ಯಗಳು; (ii) ಉತ್ಪಾದಕ ಉದ್ಯೋಗ, ಉದ್ಯಮಶೀಲತೆ ಮತ್ತು ವಿಕೇಂದ್ರೀಕೃತ ಬೆಳವಣಿಗೆ; (iii) ಆರೋಗ್ಯ, ಪೋಷಣೆ ಮತ್ತು ಯೋಗಕ್ಷೇಮ; ಮತ್ತು (iv) ಎಲ್ಲರಿಗೂ ಸಮಾನತೆ ಮತ್ತು ಘನತೆ. ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಕೌಶಲ್ಯವನ್ನು ಹೆಚ್ಚಿಸುವುದು ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು.

ಈ ಚರ್ಚೆಗಳು ಜವಾಬ್ದಾರಿ ಮತ್ತು ಪುರಾವೆಗಳು ಅಥವಾ ಸಂಖ್ಯೆಗಳೊಂದಿಗೆ ಪರಿಶೀಲಿಸಬಹುದಾದ ನೈಜವಾದ ಸಾಧನೆಗಳ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಫಲಿತಾಂಶಗಳನ್ನು ಪತ್ತೆಹಚ್ಚುವ ಸುಸಂಘಟಿತ ಕಾರ್ಯವಿಧಾನದ ಜೊತೆಗೆ ಆಡಳಿತ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಒಮ್ಮುಖತೆ, ಪಾಲುದಾರಿಕೆಗಳು ಮತ್ತು ದತ್ತಾಂಶ ಚಾಲಿತ ವ್ಯವಸ್ಥೆಗಳು ಸೇರಿದಂತೆ ಪ್ರಮುಖ ಸಕ್ರಿಯಗೊಳಿಸುವ ಅಂಶಗಳನ್ನು ಬಳಸಿಕೊಳ್ಳುವ 'ಅನುಷ್ಠಾನದ ಮಾರ್ಗಸೂಚಿ'ಯನ್ನು  ಜಂಟಿಯಾಗಿ ರೂಪಿಸುವುದರತ್ತ ಗಮನ ಹರಿಸಲಿವೆ. ಸಮಾನ ಮತ್ತು ಸುಸ್ಥಿರ ಬೆಳವಣಿಗೆಯತ್ತ ಸಂಯೋಜಿತ ಹಾಗೂ ಸಹಯೋಗದ ವಿಧಾನವನ್ನು ಬಲಪಡಿಸಲು, ರಾಜ್ಯಗಳ ದೃಷ್ಟಿಕೋನಗಳನ್ನು ಒಳಗೊಳ್ಳುವಿಕೆಯ ಮಾನವ ಅಭಿವೃದ್ಧಿಯ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಜೋಡಿಸುವುದಕ್ಕೆ ಪ್ರಮುಖ ಒತ್ತು ನೀಡಲಾಗುತ್ತದೆ.

ನೀತಿ ಆಯೋಗದ ಆಡಳಿತ ಮಂಡಳಿಯು 2025 ರ ಡಿಸೆಂಬರ್ 26 ರಿಂದ 28 ರವರೆಗೆ ನಡೆದ ಮುಖ್ಯ ಕಾರ್ಯದರ್ಶಿಗಳ 5ನೇ ರಾಷ್ಟ್ರೀಯ ಸಮ್ಮೇಳನದ ಶಿಫಾರಸುಗಳ ಮೇಲೂ ಗಮನ ಹರಿಸಲಿದೆ. ಮುಖ್ಯ ಕಾರ್ಯದರ್ಶಿಗಳ 5ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಕೆಳಗಿನ ಐದು ಪ್ರಮುಖ ವಿಷಯಗಳ ಕುರಿತು ಶಿಫಾರಸುಗಳನ್ನು ಮಾಡಲಾಗಿತ್ತು: (i) ಬಾಲ್ಯದ ಆರಂಭಿಕ ಶಿಕ್ಷಣ: ಅಡಿಪಾಯ ಹಾಕುವುದು; (ii) ಶಾಲಾ ಶಿಕ್ಷಣ: ಮೂಲ ಸ್ತಂಭಗಳು; (iii) ಕೌಶಲ್ಯ ಅಭಿವೃದ್ಧಿ: ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆ; (iv) ಉನ್ನತ ಶಿಕ್ಷಣ: ಜ್ಞಾನ ಆರ್ಥಿಕತೆ; ಮತ್ತು (v) ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು: ತರಗತಿ ಕೋಣೆಗಳಿಂದ ಆಚೆಗೆ.

11ನೇ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ಆಡಳಿತಾಧಿಕಾರಿಗಳು, ಪದನಿಮಿತ್ತ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವರು, ಹಾಗೂ ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಇಒ ಅವರು ಭಾಗವಹಿಸಲಿದ್ದಾರೆ.
 

*****


(रिलीज़ आईडी: 2271085) आगंतुक पटल : 24
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Bengali-TR , Punjabi , Gujarati , Telugu