ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಶ್ರೀ ಹರ್ ದೀಪ್ ಸಿಂಗ್ ಪುರಿ ಅವರಿಂದ ವೆನೆಜುವೆಲಾದ ಹಂಗಾಮಿ ಅಧ್ಯಕ್ಷರೊಂದಿಗೆ ಮಾತುಕತೆ; ಭಾರತದ ಇಂಧನ ವೈವಿಧ್ಯೀಕರಣ ಕಾರ್ಯತಂತ್ರದಲ್ಲಿ ವೆನೆಜುವೆಲಾದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು


ಜಾಗತಿಕ ರಾಜಕೀಯದ ಅಡೆತಡೆಗಳ ನಡುವೆ, ಏಪ್ರಿಲ್-ಮೇ 2026ರಲ್ಲಿ ಭಾರತದ ಪ್ರಮುಖ ಕಚ್ಚಾ ತೈಲ ಪೂರೈಕೆದಾರರಲ್ಲಿ ಒಂದಾಗಿರುವ ವೆನೆಜುವೆಲಾ, ಬಲವಾದ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ

प्रविष्टि तिथि: 05 JUN 2026 10:32AM by PIB Bengaluru

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಜೂನ್ 4, 2026 ರಂದು ನವದೆಹಲಿಯಲ್ಲಿ ಬೊಲಿವೇರಿಯನ್ ವೆನೆಜುವೆಲಾ ಗಣರಾಜ್ಯದ ಹಂಗಾಮಿ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಡೆಲ್ಸಿ ಎಲೋಯಿನಾ ರೊಡ್ರಿಗಸ್ ಗೊಮೆಜ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸಾರ್ವಜನಿಕ ವಲಯದ ತೈಲ ಕಂಪನಿಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಉಭಯ ನಾಯಕರು ಎರಡೂ ದೇಶಗಳ ನಡುವೆ ದೀರ್ಘಕಾಲೀನ ಇಂಧನ ಪಾಲುದಾರಿಕೆಯನ್ನು ನಿರ್ಮಿಸುವ ಅವಕಾಶಗಳ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ, ಭಾರತ ಮತ್ತು ವೆನೆಜುವೆಲಾ ದೇಶಗಳು ದೀರ್ಘಕಾಲದ ಸ್ನೇಹಸಂಬಂಧದಲ್ಲಿ ಬೇರೂರಿರುವ ನೈಸರ್ಗಿಕ ಪಾಲುದಾರಿಕೆಯನ್ನು ಹೊಂದಿವೆ ಎಂದು ಸಚಿವರು ಹೇಳಿದರು. ವೆನೆಜುವೆಲಾದ ಇಂಧನ ಪುನರ್ನಿರ್ಮಾಣಕ್ಕೆ ಭಾರತದ ಬಲವಾದ ಬೆಂಬಲವನ್ನು ಅವರು ಪುನರುಚ್ಚರಿಸಿದರು ಮತ್ತು ವೆನೆಜುವೆಲಾದಲ್ಲಿ ಭಾರತೀಯ ಕಂಪನಿಗಳು ತಮ್ಮ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸಲು ಸಿದ್ಧವಾಗಿವೆ ಎಂದು ತಿಳಿಸಿದರು. ಭಾರತದ ಇಂಧನ ವೈವಿಧ್ಯೀಕರಣ ಕಾರ್ಯತಂತ್ರದಲ್ಲಿ ವೆನೆಜುವೆಲಾದ ಪ್ರಮುಖ ಪಾತ್ರವನ್ನು ಗುರುತಿಸಿದ ಅವರು, ವೆನೆಜುವೆಲಾದೊಂದಿಗೆ ತನ್ನ ಇಂಧನ ವ್ಯಾಪಾರವನ್ನು ಆಳಗೊಳಿಸಲು ಭಾರತವು ತೀವ್ರ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.

ಭಾರತವನ್ನು ವೆನೆಜುವೆಲಾದ ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದ ಹಂಗಾಮಿ ಅಧ್ಯಕ್ಷರು, ವೆನೆಜುವೆಲಾದ ಸುಧಾರಿತ ತೈಲ ಮತ್ತು ಅನಿಲ ವಲಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಭಾರತೀಯ ಕಂಪನಿಗಳನ್ನು ಸ್ವಾಗತಿಸಿದರು. ಇಂಧನ ವಲಯದಲ್ಲಿ ಭಾರತ ಮತ್ತು ವೆನೆಜುವೆಲಾ ನಡುವೆ ಇರುವ ಪರಸ್ಪರ ಉಪಯುಕ್ತ ಅಂಶಗಳ ಬಗ್ಗೆ ಅವರು ಒತ್ತಿಹೇಳಿದರು ಮತ್ತು ಹೆಚ್ಚಿನ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ವೆನೆಜುವೆಲಾಕ್ಕೆ ಭೇಟಿ ನೀಡುವಂತೆ ಭಾರತೀಯ ನಿಯೋಗಕ್ಕೆ ಆಹ್ವಾನ ನೀಡಿದರು.

ಹಿನ್ನೆಲೆ

ವಿಶ್ವದ ಅತಿ ದೊಡ್ಡ ಪ್ರಮಾಣದ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ, ಬಹಳ ಹಿಂದಿನಿಂದಲೂ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ದೇಶವಾಗಿದೆ. ವೆನೆಜುವೆಲಾದ ಗಡಸು ಕಚ್ಚಾ ತೈಲವನ್ನು ಸಂಸ್ಕರಿಸಲು ಭಾರತದ ಅತ್ಯಾಧುನಿಕ ತೈಲ ಶುದ್ಧೀಕರಣ ವಲಯವು ವಿಶಿಷ್ಟವಾಗಿ ಸಜ್ಜುಗೊಂಡಿದೆ. ಜಾಗತೀಕ ರಾಜಕೀಯ ಮತ್ತು ಪೂರೈಕೆ ಅಡಚಣೆಗಳು ಗಲ್ಫ್ ರಾಷ್ಟ್ರಗಳಿಂದ ಕಚ್ಚಾ ತೈಲ ಆಮದಿನ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ, ಭಾರತವು ತನ್ನ ಇಂಧನ ವೈವಿಧ್ಯೀಕರಣಕ್ಕಾಗಿ ವೆನೆಜುವೆಲಾವನ್ನು ಕಾರ್ಯತಂತ್ರದ ಪಾಲುದಾರನನ್ನಾಗಿ ತೊಡಗಿಸಿಕೊಳ್ಳುತ್ತಿದೆ. ಏಪ್ರಿಲ್ ಮತ್ತು ಮೇ 2026 ರಲ್ಲಿ ವೆನೆಜುವೆಲಾ ಭಾರತಕ್ಕೆ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರರಲ್ಲಿ ಒಂದಾಗಿತ್ತು, ಇದು ಭವಿಷ್ಯದ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ವೆನೆಜುವೆಲಾದಿಂದ ಭಾರತದ ಸರಾಸರಿ ಮಾಸಿಕ ಆಮದು ಹಣಕಾಸು ವರ್ಷ 2025-26 ರಲ್ಲಿದ್ದ 64.027 ಟಿಎಂಟಿ  ಇಂದ, ಹಣಕಾಸು ವರ್ಷ 2026-27 ರ ಏಪ್ರಿಲ್-ಮೇ ಅವಧಿಯಲ್ಲಿ 1,047.148 ಟಿಎಂಟಿ ಗೆ ಹೆಚ್ಚಾಗಿದೆ.

ಭಾರತೀಯ ಸಾರ್ವಜನಿಕ ವಲಯದ ಕಂಪನಿಗಳು 2008 ರಿಂದಲೇ ವೆನೆಜುವೆಲಾದ ತೈಲ ಅನ್ವೇಷಣೆ ಮತ್ತು ಉತ್ಪಾದನಾ ವಲಯದಲ್ಲಿ ಉಪಸ್ಥಿತಿಯನ್ನು ಹೊಂದಿದ್ದು, ತಮ್ಮ ದೀರ್ಘಕಾಲೀನ ಬದ್ಧತೆಯನ್ನು ಪ್ರದರ್ಶಿಸಿವೆ. ಒರಿನೊಕೊ ಬೆಲ್ಟ್ ನಲ್ಲಿರುವ ಸ್ಯಾನ್ ಕ್ರಿಸ್ಟೋಬಲ್ ಮತ್ತು ಪೆಟ್ರೋಕರಾಬೊಬೊ-1 ಯೋಜನೆಗಳಲ್ಲಿ ವೆನೆಜುವೆಲಾದ ತೈಲ ವಲಯದಲ್ಲಿ ಭಾರತದ ಒಟ್ಟು ಹೂಡಿಕೆಯು ಸರಿಸುಮಾರು 1 ಶತಕೋಟಿ ಯುಎಸ್ ಡಾಲರ್ ಇದೆ.

 

*****


(रिलीज़ आईडी: 2269259) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Bengali-TR , Gujarati , Tamil , Telugu , Malayalam