ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಐಎಂಸಿ ಯಲ್ಲಿ ಎಂಎ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭ; ಇ-ಕೌನ್ಸೆಲಿಂಗ್ ನೋಂದಣಿಗೆ ಜೂನ್ 7, 2026 ರವರೆಗೆ ಅವಕಾಶ
ಆರು ಕ್ಯಾಂಪಸ್‌ಗಳಲ್ಲಿ ಐಐಎಂಸಿ ಯ ಶೈಕ್ಷಣಿಕ ಕೊಡುಗೆಗಳನ್ನು ಬಲಪಡಿಸಲಿರುವ ಮೂರು ಹೊಸ ಹಾಗೂ ವಿಶೇಷ ಎಂಎ ಕೋರ್ಸ್‌ಗಳು
प्रविष्टि तिथि:
03 JUN 2026 4:09PM by PIB Bengaluru
ದೇಶದ ಅತ್ಯಂತ ಪ್ರತಿಷ್ಠಿತ ಮಾಧ್ಯಮ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (IIMC) ನಲ್ಲಿ ಆರು ಎಂಎ (MA) ಮತ್ತು ನಾಲ್ಕು ಪಿಜಿ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕಾಗಿ ಇ-ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗಿದೆ. ಎಂಎ ಮತ್ತು ಪಿಜಿ ಡಿಪ್ಲೊಮಾ ಸೇರಿದಂತೆ ಎಲ್ಲಾ ಕೋರ್ಸ್‌ಗಳ ಪ್ರವೇಶವನ್ನು ಕೇವಲ ಇ-ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕವೇ ಮಾಡಲಾಗುತ್ತದೆ. ಇದಕ್ಕಾಗಿ https://iimc.admissions.nic.in/ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇ-ಕೌನ್ಸೆಲಿಂಗ್‌ಗೆ ನೋಂದಾಯಿಸಲು ಜೂನ್ 7, 2026 ಕೊನೆಯ ದಿನವಾಗಿದೆ. ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಜೂನ್ 9 ರಂದು ಪ್ರಕಟಿಸಲಾಗುವುದು.

"ಹೆಲ್ತ್ ಕಮ್ಯುನಿಕೇಷನ್‌ನಲ್ಲಿ ಎಂಎ, ಮೀಡಿಯಾ ಆ್ಯಂಡ್ ಕಮ್ಯುನಿಕೇಷನ್ ಗವರ್ನೆನ್ಸ್‌ನಲ್ಲಿ ಎಂಎ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ ಆ್ಯಂಡ್ ಬ್ರಾಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಎ ಎಂಬ ಮೂರು ಹೊಸ ಎಂಎ ಕೋರ್ಸ್‌ಗಳನ್ನು ಐಐಎಂಸಿ ಈ ವರ್ಷ ಪರಿಚಯಿಸಿದೆ. ಇದರೊಂದಿಗೆ, ಐಐಎಂಸಿ ಈಗ ತನ್ನ ಆರು ಕ್ಯಾಂಪಸ್‌ಗಳಾದ – ನವದೆಹಲಿ, ಧೆಂಕನಾಲ್, ಐಜ್ವಾಲ್, ಅಮರಾವತಿ, ಜಮ್ಮು ಮತ್ತು ಕೊಟ್ಟಾಯಂನಲ್ಲಿ ಒಟ್ಟು ಆರು ಎಂಎ ಕೋರ್ಸ್‌ಗಳನ್ನು ನೀಡುತ್ತಿದೆ" ಎಂದು ಪ್ರವೇಶ ಪ್ರಕ್ರಿಯೆ ಉಸ್ತುವಾರಿ ಮತ್ತು ಪರೀಕ್ಷಾ ನಿಯಂತ್ರಕರಾದ ಪ್ರೊ. (ಡಾ.) ರಾಕೇಶ್ ಕುಮಾರ್ ಗೋಸ್ವಾಮಿ ತಿಳಿಸಿದ್ದಾರೆ.
ಐಐಎಂಸಿಯ ಸಾಂಪ್ರದಾಯಿಕ ಕೋರ್ಸ್‌ಗಳಾಗಿರುವ ನಾಲ್ಕು ಪಿಜಿ ಡಿಪ್ಲೊಮಾ ಕೋರ್ಸ್‌ಗಳೂ ಸಹ ಲಭ್ಯವಿವೆ. ಇವುಗಳಲ್ಲಿ ಇಂಗ್ಲಿಷ್ ಜರ್ನಲಿಸಂ, ಹಿಂದಿ ಜರ್ನಲಿಸಂ, ರೇಡಿಯೋ ಮತ್ತು ಟೆಲಿವಿಷನ್ ಜರ್ನಲಿಸಂ ಹಾಗೂ ಅಡ್ವರ್ಟೈಸಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಪಿಜಿ ಡಿಪ್ಲೊಮಾಗಳು ಸೇರಿವೆ.
ಮಾಸ್ ಕಮ್ಯುನಿಕೇಷನ್ ಮತ್ತು ಜರ್ನಲಿಸಂ (COQP17) ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಪದವಿ ಮತ್ತು ಮಾನ್ಯವಾದ ಸಿಯುಇಟಿ-ಪಿಜಿ ಅಂಕಗಳನ್ನು ಹೊಂದಿರುವ ಭಾರತೀಯ ನಾಗರಿಕರು, ಈ ಎಂಎ ಕೋರ್ಸ್‌ಗಳಿಗೆ ಅರ್ಹರಾಗಿರುತ್ತಾರೆ. ಇದೇ ವಿಷಯದಲ್ಲಿ ಮಾನ್ಯವಾದ ಸಿಯುಇಟಿ-ಪಿಜಿ ಅಂಕಗಳನ್ನು ಹೊಂದಿರುವ ಪದವೀಧರರು ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಹರಾಗಿರುತ್ತಾರೆ. ಪಿಜಿ ಡಿಪ್ಲೊಮಾ ಪ್ರವೇಶಕ್ಕಾಗಿ ಗರಿಷ್ಠ ವಯೋಮಿತಿ ಆಗಸ್ಟ್ 1, 2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 28 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ/ದಿವ್ಯಾಂಗ ಅಭ್ಯರ್ಥಿಗಳಿಗೆ 30 ವರ್ಷಗಳು ಆಗಿರುತ್ತದೆ.

ಅಭ್ಯರ್ಥಿಗಳು ನೋಂದಾಯಿಸುವ ಮುನ್ನ ಪ್ರವೇಶ ಪ್ರಕಟಣೆ, ಮಾಹಿತಿ ಕೈಪಿಡಿ (Prospectus) ಮತ್ತು ಪ್ರಕ್ರಿಯೆಯ ಹಂತಗಳನ್ನು ಓದಿಕೊಳ್ಳಲು ಸೂಚಿಸಲಾಗಿದೆ. ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡುವಾಗ ಕೋರ್ಸ್‌ಗಳು ಮತ್ತು ಕ್ಯಾಂಪಸ್‌ಗಳ ಆದ್ಯತೆಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಬೇಕು, ಏಕೆಂದರೆ ನೋಂದಣಿ ಫಾರ್ಮ್ ಅನ್ನು ಸಲ್ಲಿಸಿದ ನಂತರ ಆದ್ಯತೆಗಳನ್ನು ಬದಲಾಯಿಸುವ ವಿನಂತಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅಭ್ಯರ್ಥಿಗಳು ತಮಗೆ ಹಂಚಿಕೆಯಾದ ಕೋರ್ಸ್‌ನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ₹20,000 ಸೀಟು ಸ್ವೀಕಾರ ಶುಲ್ಕವನ್ನು (Seat Acceptance Fee) ಪಾವತಿಸಬೇಕಾಗುತ್ತದೆ. ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಾಕಿ ಇರುವ ಬೋಧನಾ ಶುಲ್ಕವನ್ನು ನಿಗದಿತ ಸಮಯದೊಳಗೆ ಪಾವತಿಸಬೇಕು.

ಅಭ್ಯರ್ಥಿಗಳು ಜನ್ಮ ದಿನಾಂಕದ ಪರಿಶೀಲನೆಗಾಗಿ ಪ್ರೌಢಶಾಲೆ ಪ್ರಮಾಣಪತ್ರ ಮತ್ತು ಅಂತಿಮ ಪದವಿ ಅಂಕಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಪದವಿಯ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅಗತ್ಯ ದಾಖಲೆಗಳನ್ನು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಸಲ್ಲಿಸಬೇಕು. ಪ್ರವೇಶದ ಸಮಯದಲ್ಲಿ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗದ ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಮುಚ್ಚಳಿಕೆ ಪತ್ರವನ್ನು ನೀಡಬಹುದು ಮತ್ತು ನಿಗದಿತ ಅವಧಿಯೊಳಗೆ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಇತರ ವಿವರಗಳಿಗಾಗಿ, ಅಭ್ಯರ್ಥಿಗಳು ಐಐಎಂಸಿ ಜಾಲತಾಣ http://iimc.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ. ಯಾವುದೇ ಪ್ರಶ್ನೆಗಳಿದ್ದಲ್ಲಿ, ಅಭ್ಯರ್ಥಿಗಳು admissions@iimc.gov.in ಗೆ ಇಮೇಲ್ ಮಾಡಬಹುದು.
*****
(रिलीज़ आईडी: 2268472)
आगंतुक पटल : 11