ಶಿಕ್ಷಣ ಸಚಿವಾಲಯ
ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯದಿಂದ ಪ್ರಧಾನ ಮಂತ್ರಿ ಸಂಶೋಧನಾ ಪೀಠ (ಪಿ ಎಂ ಆರ್ ಸಿ) ಯೋಜನೆ 2026 ಕ್ಕಾಗಿ ಅರ್ಜಿಗಳಿಗಾಗಿ ಆಹ್ವಾನ
ಜಾಗತಿಕ ಭಾರತೀಯ ಪ್ರತಿಭೆಗಳನ್ನು ಭಾರತದ ವೈಜ್ಞಾನಿಕ ಮತ್ತು ನಾವೀನ್ಯತೆಯ ಭವಿಷ್ಯದೊಂದಿಗೆ ಜೋಡಿಸುವ ಒಂದು ಪ್ರಮುಖ ರಾಷ್ಟ್ರೀಯ ಉಪಕ್ರಮ
ಪ್ರಕಟಣಾ ದಿನಾಂಕ:
02 JUN 2026 2:00PM by PIB Bengaluru
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು, ಪ್ರಧಾನ ಮಂತ್ರಿ ಸಂಶೋಧನಾ ಪೀಠ (ಪಿ ಎಂ ಆರ್ ಸಿ) ಯೋಜನೆ 2026 ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಜಾಗತಿಕವಾಗಿ ಹೆಸರಾಂತ ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಂದ ಭಾರತದಾದ್ಯಂತ ಇರುವ ಪ್ರಮುಖ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಿಗೆ ಸಾಧನೆಗೈದ ಭಾರತೀಯ ಮೂಲದ ಸಂಶೋಧಕರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ವೃತ್ತಿಪರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಒಂದು ಪ್ರಮುಖ ರಾಷ್ಟ್ರೀಯ ಉಪಕ್ರಮವಾಗಿದೆ.
ಈ ಯೋಜನೆಯು ರಾಷ್ಟ್ರೀಯ ಆದ್ಯತೆಯ 13 ವಿಷಯಾಧಾರಿತ ಕ್ಷೇತ್ರಗಳಲ್ಲಿ ಭಾರತದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಸಂಶೋಧನೆ, ಅಭಿವೃದ್ಧಿ, ನಾವೀನ್ಯತೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯೊಂದಿಗೆ ಜಾಗತಿಕ ಭಾರತೀಯ ಪ್ರತಿಭೆಗಳನ್ನು ಜೋಡಿಸುತ್ತದೆ. ಆ ಕ್ಷೇತ್ರಗಳು ಈ ಕೆಳಗಿನಂತಿವೆ:
- ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಎಐ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೂಪರ್ ಕಂಪ್ಯೂಟಿಂಗ್)
- ಸೆಮಿಕಂಡಕ್ಟರ್ ಗಳು
- ಇಂಧನ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ
- ಸೈಬರ್ ಭದ್ರತೆ
- ಆರೋಗ್ಯ ರಕ್ಷಣೆ ಮತ್ತು ಮೆಡ್ ಟೆಕ್
- ಜೈವಿಕ ತಂತ್ರಜ್ಞಾನ
- ಅಡ್ವಾನ್ಸ್ಡ್ ಮೆಟೀರಿಯಲ್ಸ್ & ಕ್ರಿಟಿಕಲ್ ಮಿನರಲ್ಸ್
- ಬಹ್ಯಾಕಾಶ ಮತ್ತು ರಕ್ಷಣೆ
- ಮುಂದಿನ ಪೀಳಿಗೆಯ ಸಂವಹನಗಳು
- ಉತ್ಪಾದನೆ ಮತ್ತು ಉದ್ಯಮ 4.0
- ಕೃಷಿ ಮತ್ತು ಆಹಾರ ತಂತ್ರಜ್ಞಾನಗಳು
- ಬ್ಲೂ ಎಕಾನಮಿ (ನೀಲಿ ಆರ್ಥಿಕತೆ)
- ಪರಮಾಣು ಶಕ್ತಿ
ಪ್ರಮುಖ ಸಂಸ್ಥೆಗಳು, ಆತಿಥೇಯ ಸಂಸ್ಥೆಗಳು ಮತ್ತು ಪಿಎಂಆರ್ ಸಿ ಫೆಲೋಗಳು ಎನ್ನುವ ಮೂರು ಪ್ರಮುಖ ಸ್ತಂಭಗಳ ಆಧಾರದ ಮೇಲೆ ಈ ಯೋಜನೆಯನ್ನು ರೂಪಿಸಲಾಗಿದ್ದು, ಇದು ಉದ್ದೇಶ ಆಧಾರಿತ, ದೇಶಕ್ಕೆ ಪ್ರಸ್ತುತವಾದ ಮತ್ತು ಪ್ರಭಾವ-ಆಧಾರಿತ ಸಂಶೋಧನೆಯನ್ನು ಖಚಿತಪಡಿಸುತ್ತದೆ. ಭಾಗವಹಿಸುವ ಸಂಸ್ಥೆಗಳು ಮತ್ತು ಫೆಲೋಗಳನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯು ಕಟ್ಟುನಿಟ್ಟಾದ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡುತ್ತದೆ.
ಪಿಎಂಆರ್ ಸಿ ಫೆಲೋಗಳು ಫೆಲೋಶಿಪ್ ಮತ್ತು ಸಂಶೋಧನಾ ಅನುದಾನದ ಬೆಂಬಲ, ಪ್ರಯೋಗಾಲಯಗಳು ಮತ್ತು ಸಂಶೋಧನಾ ಮೂಲಸೌಕರ್ಯಗಳ ಸೌಲಭ್ಯವನ್ನು ಪಡೆಯಲಿದ್ದಾರೆ. ಅಲ್ಲದೆ ಭಾರತದ ಪ್ರಮುಖ ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಅವಕಾಶಗಳನ್ನು ಪಡೆಯುತ್ತಾರೆ.
ಈ ಯೋಜನೆಯಡಿ ಬರುವ ಆತಿಥೇಯ ಸಂಸ್ಥೆಗಳು ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗಗಳು, ಜಾಗತಿಕವಾಗಿ ಸಾಧನೆ ಮಾಡಿದ ಸಂಶೋಧಕರು ಹಾಗೂ ವೃತ್ತಿಪರರೊಂದಿಗೆ ತೊಡಗಿಸಿಕೊಳ್ಳುವಿಕೆ ಮತ್ತು ಆದ್ಯತೆಯ ವಲಯಗಳಲ್ಲಿ ವಿಸ್ತೃತ ಸಂಶೋಧನೆ ಹಾಗೂ ನಾವೀನ್ಯತೆ ಚಟುವಟಿಕೆಗಳ ಮೂಲಕ ಪ್ರಯೋಜನ ಪಡೆಯಲಿವೆ.
ಈ ಯೋಜನೆಯು ಮೂರು ವಿಭಾಗಗಳ ಅಡಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತದೆ, ಅವುಗಳೆಂದರೆ: ಆರಂಭಿಕ ವೃತ್ತಿಜೀವನದ ಸಂಶೋಧಕರಿಗಾಗಿ 'ಯಂಗ್ ರಿಸರ್ಚ್ ಫೆಲೋಸ್' , ಅನುಭವಿ ಸಂಶೋಧಕರಿಗಾಗಿ 'ಸೀನಿಯರ್ ರಿಸರ್ಚ್ ಫೆಲೋಸ್', ಮತ್ತು ಜಾಗತಿಕವಾಗಿ ಸಾಧನೆ ಮಾಡಿದ ಅತ್ಯಂತ ಪ್ರತಿಷ್ಠಿತ ಸಂಶೋಧಕರಿಗಾಗಿ 'ರಿಸರ್ಚ್ ಚೇರ್ಸ್'.
ಪಿಎಂಆರ್ ಸಿ ಯೋಜನೆಯಡಿ ಅರ್ಹರಾಗುವ ಫೆಲೋಗಳಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಾಗರಿಕರು, ಒಸಿಐ ಕಾರ್ಡ್ ಹೊಂದಿರುವವರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಸೇರಿದಂತೆ ಸಾಧನೆಗೈದ ಭಾರತೀಯ ಮೂಲದ ಸಂಶೋಧಕರು, ವಿಜ್ಞಾನಿಗಳು ಮತ್ತು ವೃತ್ತಿಪರರು ಸೇರಿದ್ದಾರೆ. ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿರುವ ಪ್ರಮುಖ ಜಾಗತಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಂದ ಭಾರತೀಯ ಮೂಲದ ಸಾಧಕ ಸಂಶೋಧಕರು ಮತ್ತು ವೃತ್ತಿಪರರನ್ನು ಆಕರ್ಷಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಅರ್ಹ ಆತಿಥೇಯ ಸಂಸ್ಥೆಗಳಲ್ಲಿ ಎನ್.ಐ.ಆರ್.ಎಫ್ ನ ಒಟ್ಟಾರೆ ಅಥವಾ ಎಂಜಿನಿಯರಿಂಗ್ ವಿಭಾಗಗಳಲ್ಲಿ ಮೊದಲ 100 ರೊಳಗೆ ಸ್ಥಾನ ಪಡೆದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು, ಅಥವಾ ಎನ್. ಐ.ಆರ್.ಎಫ್.ನ ಸಂಶೋಧನಾ ವಿಭಾಗದಲ್ಲಿ ಮೊದಲ 50 ರೊಳಗೆ ಸ್ಥಾನ (rank) ಪಡೆದ ಸಂಸ್ಥೆಗಳು ಸೇರಿವೆ. ಇದರೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯಂತಹ ಸಂಸ್ಥೆಗಳ ಅಡಿಯಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಹ ಅರ್ಹವಾಗಿವೆ.
ವಿಷಯಾಧಾರಿತ ಕ್ಷೇತ್ರಗಳಲ್ಲಿ ಅನುಷ್ಠಾನವನ್ನು ಬೆಂಬಲಿಸಲು, ಏಳು ಪ್ರಧಾನ ಸಂಸ್ಥೆಗಳನ್ನು ಪ್ರಮುಖ ಸಂಸ್ಥೆಗಳನ್ನಾಗಿ ಗುರುತಿಸಲಾಗಿದೆ:
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನಬಾದ್
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು
ಫೆಲೋಗಳು ಮತ್ತು ಆತಿಥೇಯ ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆಯು 1 ಜೂನ್ 2026 ರಿಂದ ಪಿಎಂಆರ್ ಸಿ ಪೋರ್ಟಲ್ ನಲ್ಲಿ ಪ್ರಾರಂಭವಾಗಲಿದೆ.
ವಿವರವಾದ ಮಾರ್ಗಸೂಚಿಗಳು, ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳಿಗಾಗಿ, ಭೇಟಿ ನೀಡಿ:
https://pmrc.education.gov.in/
ಭಾರತದ ಸಂಶೋಧನೆ, ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಅಧ್ಯಾಯದ ಭಾಗವಾಗಿರಿ. ಆತ್ಮನಿರ್ಭರ ಮತ್ತು ವಿಕಸಿತ ಭಾರತದ ಕಡೆಗಿನ ಭಾರತದ ಪ್ರಯಾಣದಲ್ಲಿ ಜೊತೆಯಾಗಿ.
*****
(ಪ್ರಕಟಣೆ ಐ.ಡಿ.: 2267937)
ವಿಸಿಟರ್ ಕೌಂಟರ್ : 15