ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತ ಮತ್ತು ಒಮಾನ್ ನಡುವೆ ಐತಿಹಾಸಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಮೂಲಕ ಹೊಸ ವ್ಯಾಪಾರ ಮಾರ್ಗಕ್ಕೆ ಚಾಲನೆ


ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವ ನಾಯಕತ್ವದಲ್ಲಿ ಭಾರತ ಮತ್ತು ಒಮಾನ್ ಪರಿವರ್ತನಾತ್ಮಕ ಸಿಇಪಿಎ ಗೆ ಚಾಲನೆ ನೀಡಿವೆ; ಇದು ಕಾರ್ಯತಂತ್ರದ ಆರ್ಥಿಕ ಪಾಲುದಾರಿಕೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ

ವಿಕಸಿತ ಭಾರತ @2047 ಕ್ಕಾಗಿ ಹೊಸ ವ್ಯಾಪಾರ ಕಾರಿಡಾರ್: ಒಮಾನ್ ಗೆ ರಫ್ತಾಗುವ ಭಾರತದ ಶೇಕಡಾ 99.38 ರಷ್ಟು ಉತ್ಪನ್ನಗಳಿಗೆ ಸಿಇಪಿಎ ಅಡಿಯಲ್ಲಿ ಶೂನ್ಯ-ಸುಂಕದ ಪ್ರವೇಶ ಸಿಗಲಿದೆ

ಅಮೆರಿಕದ ನಂತರ ಒಮಾನ್ ಜೊತೆ ಇಂತಹ ಸಮಗ್ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡ ವಿಶ್ವದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ

ಭಾರತ-ಒಮಾನ್ ಸಿಇಪಿಎ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರ, ರಫ್ತು, ಉದ್ಯೋಗ ಸೃಷ್ಟಿ ಮತ್ತು ಕಾರ್ಯತಂತ್ರದ ಆರ್ಥಿಕ ಏಕೀಕರಣವನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ

ಸಂಪೂರ್ಣ ಸುಂಕ ವಿನಾಯಿತಿ ಮತ್ತು ಸ್ಪರ್ಧಾತ್ಮಕ ಲಾಭದೊಂದಿಗೆ ಕೃಷಿ, ಕಡಲ ಉತ್ಪನ್ನಗಳು, ಜವಳಿ, ರತ್ನಗಳು ಮತ್ತು ಆಭರಣಗಳು, ಔಷಧಗಳು, ಎಂಜಿನಿಯರಿಂಗ್ ಸರಕುಗಳು, ಪಾದರಕ್ಷೆಗಳು ಮತ್ತು ಆಟೋಮೊಬೈಲ್ಸ್ ನಂತಹ ಕಾರ್ಮಿಕ ತೀವ್ರತೆಯ ವಲಯಗಳು ಬಲವಾದ ರಫ್ತು ಪ್ರಗತಿ ಕಾಣಲು ಸಜ್ಜಾಗಿವೆ

ಅಭೂತಪೂರ್ವ ವ್ಯಾಪಾರ ಸುಗಮಗೊಳಿಸುವ ಕ್ರಮಗಳು ಸುಂಕೇತರ ಅಡೆತಡೆಗಳನ್ನು ನಿವಾರಿಸುತ್ತವೆ ಮತ್ತು ಭಾರತೀಯ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ವೇಗಗೊಳಿಸುತ್ತವೆ: ಒಮಾನ್ ಬಂದರುಗಳಲ್ಲಿ ಇಐಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗುವುದು

ಸುಂಕ ವಿನಾಯಿತಿಯೊಂದಿಗೆ ಮೀನುಗಾರಿಕೆ, ಮಾಂಸ, ಮೊಟ್ಟೆ, ಕಡಲ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳ ವಲಯದಲ್ಲಿ ಭಾರತದ ಪ್ರಾಬಲ್ಯ ಮತ್ತಷ್ಟು ಬಲಗೊಳ್ಳಲಿದೆ

ಜಿಸಿಸಿ ಮತ್ತು ಪೂರ್ವ ಆಫ್ರಿಕಾಕ್ಕೆ ಪ್ರವೇಶ ದ್ವಾರ: ಸೋಹಾರ್, ದುಕ್ಮ್ ಮತ್ತು ಸಲಾಲ್ಹಾದಲ್ಲಿರುವ ಒಮಾನ್ ನ ಲಾಜಿಸ್ಟಿಕ್ಸ್ ಹಬ್ ಗಳು ಭಾರತದ ಪ್ರಾದೇಶಿಕ ವ್ಯಾಪಾರ ಸಂಪರ್ಕವನ್ನು ವಿಸ್ತರಿಸಲಿವೆ

ಭಾರತೀಯ ವೃತ್ತಿಪರರು, ನವೋದ್ಯಮಗಳು ಮತ್ತು ಜ್ಞಾನಾಧಾರಿತ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಮುಕ್ತಗೊಳಿಸುವ ಮೂಲಕ, ಒಮಾನ್ ತನ್ನ 127 ಸೇವಾ ಉಪ-ವಲಯಗಳನ್ನು ಒಳಗೊಂಡ ಅತ್ಯುತ್ತಮ ಸೇವಾ ಕೊಡುಗೆಯನ್ನು ನೀಡಿದೆ

ಹೆಚ್ಚಿದ ವೃತ್ತಿಪರ ಅವಕಾಶಗಳು: ಐಸಿಟಿ ಗರಿಷ್ಠ ಮಿತಿಯನ್ನು ಶೇಕಡಾ 20 ರಿಂದ ಶೇಕಡಾ 50 ಕ್ಕೆ ಏರಿಸಲಾಗಿದೆ; ಎಂಜಿನಿಯರ್ ಗಳು, ವೈದ್ಯರು, ಐಟಿ ವೃತ್ತಿಪರರು, ಶಿಕ್ಷಕರು ಮತ್ತು ಸಲಹೆಗಾರರಿಗೆ ಸಮರ್ಪಿತ ವೃತ್ತಿಪರ ಬದ್ಧತೆಗಳನ್ನು ನೀಡಲಾಗಿದೆ

ರೈತರು ಮತ್ತು ದೇಶೀಯ ಉದ್ಯಮಗಳನ್ನು ರಕ್ಷಿಸಲು, ಡೈರಿ, ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ರಬ್ಬರ್, ಚರ್ಮ ಮತ್ತು ಸಾಂಬಾರ ಪದಾರ್ಥಗಳು ಸೇರಿದಂತೆ ಸೂಕ್ಷ್ಮ ವಲಯಗಳನ್ನು ಮಾರುಕಟ್ಟೆ ಪ್ರವೇಶದಿಂದ ಹೊರಗಿಡಲಾಗಿದೆ

ಔಷಧಗಳ ಮಾರುಕಟ್ಟೆ ಪ್ರವೇಶಕ್ಕೆ ವೇಗದ ಹಾದಿ: USFDA, EMA, UK MHRA ಮತ್ತು TGA ಅಂಗೀಕೃತ ಉತ್ಪನ್ನಗಳು 90 ದಿನಗಳ ಒಳಗೆ ಮಾರಾಟದ ಅನುಮತಿಯನ್ನು ಪಡೆಯಲಿವೆ

ಭಾರತ-ಒಮಾನ್ ಸಿಇಪಿಎ ದ್ವಿಪಕ್ಷೀಯ ವ್ಯಾಪಾರ, ರಫ್ತು ಮತ್ತು ಉದ್ಯೋಗ ಸೃಷ್ಟಿಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ: ಇದು ದಕ್ಷಿಣ ಏಷ್ಯಾ, ಗಲ್ಫ್ ಮತ್ತು ಪೂರ್ವ ಆಫ್ರಿಕಾವನ್ನು ಸಂಪರ್ಕಿಸುವ ಕಾರ್ಯತಂತ್ರದ ಆರ್ಥಿಕ ಕಾರಿಡಾರ್ ಅನ್ನು ಸೃಷ್ಟಿಸುತ್ತದೆ

ಪ್ರಕಟಣಾ ದಿನಾಂಕ: 01 JUN 2026 3:46PM by PIB Bengaluru

ಇಂದು, ಭಾರತ-ಒಮಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು (ಸಿಇಪಿಎ) ಜಾರಿಗೆ ಬಂದಿದ್ದು, ಇದು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ವ್ಯಾಪಾರ ಹಾಗೂ ಹೂಡಿಕೆ ಸಹಕಾರದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.

ಭಾರತ-ಒಮಾನ್ ಸಿಇಪಿಎ ಒಪ್ಪಂದಕ್ಕೆ 18 ಡಿಸೆಂಬರ್ 2025 ರಂದು ಮಸ್ಕತ್‌ ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಒಮಾನ್ ದೊರೆ ಘನತೆವೆತ್ತ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅಲ್ ಸೈದ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾಗಿತ್ತು. ಉಭಯ ದೇಶಗಳ ಆಂತರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಈ ಒಪ್ಪಂದವು 1 ಜೂನ್ 2026 ರಿಂದ ಜಾರಿಗೆ ಬಂದಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಭಾರತಕ್ಕೆ ಒಮಾನ್ ರಾಯಭಾರಿಯಾಗಿರುವ ಗೌರವಾನ್ವಿತ ಇಸ್ಸಾ ಸಲೇಹ್ ಅಲ್ ಶಿಬಾನಿ ಅವರ ಸಮ್ಮುಖದಲ್ಲಿ ಈ ಒಪ್ಪಂದವನ್ನು ಕಾರ್ಯಗತಗೊಳಿಸಲಾಯಿತು. ಈ ಒಪ್ಪಂದದ ಅಡಿಯಲ್ಲಿ ಮೊದಲ ಸರಣಿಯ ಆದ್ಯತೆಯ ಸುಂಕದ ಪ್ರಯೋಜನಗಳನ್ನು ಪಡೆದ ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಿಂದ ಕೃಷಿ ಹಾಗೂ ರತ್ನ ಮತ್ತು ಆಭರಣಗಳ ರಫ್ತು ಸರಕುಗಳ ರವಾನೆಗೆ ಹಸಿರು ನಿಶಾನೆ ತೋರಿಸಲಾಯಿತು.

ಗಲ್ಫ್ ಪ್ರದೇಶದಲ್ಲಿ ಒಮಾನ್ ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ತನ್ನ ಸುಧಾರಿತ ಬಂದರು ಮೂಲಸೌಕರ್ಯಗಳ ಮೂಲಕ ವಿಶಾಲವಾದ ಜಿಸಿಸಿ ಮಾರುಕಟ್ಟೆಗೆ ಕಾರ್ಯತಂತ್ರದ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಭಾರತ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು ಹಣಕಾಸು ವರ್ಷ 2024-25 ರಲ್ಲಿ 10.61 ಬಿಲಿಯನ್ ಅಮೆರಿಕ ಡಾಲರ್ ಇತ್ತು, ಅದು ಹಣಕಾಸು ವರ್ಷ 2025-26 ರಲ್ಲಿ 11.18 ಬಿಲಿಯನ್ ಅಮೆರಿಕ ಡಾಲರ್‌ ಗೆ ತಲುಪುವ ಮೂಲಕ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ರಚನಾತ್ಮಕ ಮಾತುಕತೆಗಳ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡ ಈ ಒಪ್ಪಂದವು, ಸರಕುಗಳು, ಸೇವೆಗಳು, ವೃತ್ತಿಪರರ ಸಂಚಾರ, ನಿಯಂತ್ರಕ ಸಹಕಾರ ಮತ್ತು ಸುಂಕೇತರ ಅಡೆತಡೆಗಳ ರಕ್ಷಣೆ ಸೇರಿದಂತೆ ಜಿಸಿಸಿ ಆರ್ಥಿಕತೆಗಳಲ್ಲಿ ಭಾರತದ ಬೆಳೆಯುತ್ತಿರುವ ಆರ್ಥಿಕ ಮತ್ತು ವ್ಯಾಪಾರ ಹೆಜ್ಜೆಗುರುತನ್ನು ಹಾಗೂ ಕಾರ್ಯತಂತ್ರದ ಉಪಸ್ಥಿತಿಯನ್ನು ಬಲಪಡಿಸುತ್ತದೆ. ಇದು ಕೇವಲ ಸುಂಕ ಕಡಿತವನ್ನು ಮೀರಿದ ದೀರ್ಘಕಾಲೀನ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸುತ್ತದೆ.

ಗಲ್ಫ್ ಪ್ರದೇಶದಲ್ಲಿ ಒಮಾನ್ ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ತನ್ನ ಸುಧಾರಿತ ಲಾಜಿಸ್ಟಿಕ್ಸ್ ಮತ್ತು ಬಂದರು ಮೂಲಸೌಕರ್ಯಗಳ ಮೂಲಕ ವಿಶಾಲವಾದ ಜಿಸಿಸಿ ಮತ್ತು ಪೂರ್ವ ಆಫ್ರಿಕಾದ ಮಾರುಕಟ್ಟೆಗಳಿಗೆ ಕಾರ್ಯತಂತ್ರದ ಪ್ರವೇಶ ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ. ಭಾರತ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು ಹಣಕಾಸು ವರ್ಷ 2024-25 ರಲ್ಲಿದ್ದ 10.61 ಬಿಲಿಯನ್ ಅಮೆರಿಕ ಡಾಲರ್‌ ನಿಂದ ಹಣಕಾಸು ವರ್ಷ 2025-26 ರಲ್ಲಿ 11.18 ಬಿಲಿಯನ್ ಅಮೆರಿಕ ಡಾಲರ್‌ ಗೆ ತಲುಪಿ ನಿರಂತರ ಬೆಳವಣಿಗೆಯನ್ನು ದಾಖಲಿಸಿದೆ.

ಭಾರತ-ಒಮಾನ್ ಸಿಇಪಿಎ ಒಪ್ಪಂದವು ಗಲ್ಫ್ ಪ್ರದೇಶದೊಂದಿಗಿನ ಭಾರತದ ಆಳವಾದ ಒಡನಾಟದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಇದು ಉತ್ಪಾದನಾ ಸ್ಪರ್ಧಾತ್ಮಕತೆ, ಉದ್ಯೋಗ ಸೃಷ್ಟಿ, ಸೇವೆಗಳ ರಫ್ತು ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜನೆಗೊಳ್ಳಲು ಪೂರಕವಾದ ಸ್ಥಿತಿಸ್ಥಾಪಕ, ವಿಶ್ವಾಸಾರ್ಹ ಮತ್ತು ವೈವಿಧ್ಯಮಯ ವ್ಯಾಪಾರ ಪಾಲುದಾರಿಕೆಯನ್ನು ನಿರ್ಮಿಸುವ ಭಾರತದ ವಿಶಾಲ ಕಾರ್ಯತಂತ್ರವನ್ನು ಪ್ರತಿಫಲಿಸುತ್ತದೆ.

ಸಿಇಪಿಎ ಜಾರಿ ಕುರಿತು ಮಾತನಾಡಿದ ಶ್ರೀ ಪಿಯೂಷ್ ಗೋಯಲ್ ಅವರು: "ಭಾರತ-ಒಮಾನ್ ಸಿಇಪಿಎ ಒಪ್ಪಂದವು ಒಮಾನ್ ಜೊತೆಗಿನ ಭಾರತದ ಬಾಂಧವ್ಯದಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ ಮತ್ತು ರೈತರು, ಮೀನುಗಾರರು, ಯುವಜನರು, ಮಹಿಳೆಯರು, ಉದ್ಯಮಿಗಳು ಮತ್ತು ಎಂ ಎಸ್‌ ಎಂ ಇ ಗಳಿಗೆ ಪ್ರಯೋಜನಗಳನ್ನು ತಲುಪಿಸುವ ವ್ಯಾಪಾರ ಪಾಲುದಾರಿಕೆಗಳನ್ನು ರೂಪಿಸುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಇದು ಪ್ರತಿಫಲಿಸುತ್ತದೆ. ಈ ಒಪ್ಪಂದವು ಗಲ್ಫ್ ಪ್ರದೇಶದಲ್ಲಿ ಶಕ್ತಿಯನ್ನು ಹಲವು ಪಟ್ಟು ಹೆಚ್ಚಿಸಲಿದೆ” ಎಂದು ಹೇಳಿದರು. ಭಾರತದ ಶೇಕಡಾ 99.38 ರಷ್ಟು ರಫ್ತುಗಳಿಗೆ ಸುಂಕ ಮುಕ್ತ ಪ್ರವೇಶ ಸಿಗುವುದರಿಂದ, ಈ ಒಪ್ಪಂದವು ನಮ್ಮ ರಫ್ತುದಾರರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ನಮ್ಮ ವೃತ್ತಿಪರರು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಒಮಾನ್ ನಮ್ಮ ವಿಶ್ವಾಸಾರ್ಹ ಪಾಲುದಾರನಾಗಿದ್ದು, ನಮ್ಮ ಜನರಿಗೆ ಒಂದು ಸೇತುವೆ ಮತ್ತು ಗಲ್ಫ್ ಹಾಗೂ ಪೂರ್ವ ಆಫ್ರಿಕಾಕ್ಕೆ ಪ್ರವೇಶ ದ್ವಾರವಾಗಿದೆ. ನಮ್ಮ ಅವಕಾಶಗಳು ಮತ್ತಷ್ಟು ಉನ್ನತ ಹಂತಕ್ಕೇರಲಿವೆ ಮತ್ತು ಈ ಒಪ್ಪಂದವು ಪ್ರಾದೇಶಿಕ ಹಾಗೂ ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಭಾರತದ ಏಕೀಕರಣವನ್ನು ಬಲಪಡಿಸುತ್ತದೆ. ಕಾರ್ಮಿಕ ತೀವ್ರತೆಯ ವಲಯಗಳಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುವ ಮೂಲಕ, ಇದು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುತ್ತದೆ, ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಹೊಂದಿರುವ ಇತರ ದೇಶಗಳ ಪೂರೈಕೆದಾರರೊಂದಿಗೆ ಭಾರತೀಯ ಉದ್ಯಮಗಳು ಸಮಾನವಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ವಾಣಿಜ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮಾತನಾಡಿ, "ಪೂರೈಕೆ-ಸರಪಳಿ ವೈವಿಧ್ಯೀಕರಣ, ಉತ್ಪಾದನಾ ಜಾಲಗಳ ಪಲ್ಲಟ ಮತ್ತು ಹೊಸ ಆರ್ಥಿಕ ಕಾರಿಡಾರ್‌ ಗಳ ಹೊರಹೊಮ್ಮುವಿಕೆಯಿಂದ ಜಾಗತಿಕ ವ್ಯಾಪಾರದ ಮಾದರಿಗಳು ಮರುರೂಪುಗೊಳ್ಳುತ್ತಿರುವ ಈ ಸಮಯದಲ್ಲಿ, ಈ ಸಿಇಪಿಎ ಒಪ್ಪಂದವು ಭಾರತ ಮತ್ತು ಒಮಾನ್ ದೇಶಗಳು ಈ ರಚನಾತ್ಮಕ ಬದಲಾವಣೆಗಳ ಲಾಭವನ್ನು ಪಡೆಯುವಂತೆ ಮಾಡುತ್ತದೆ” ಎಂದು ಹೇಳಿದರು. ವ್ಯಾಪಾರ, ಸೇವೆಗಳು, ಹೂಡಿಕೆ ಮತ್ತು ಲಾಜಿಸ್ಟಿಕ್ಸ್‌ ನಲ್ಲಿ ನಿಕಟ ಏಕೀಕರಣವನ್ನು ಉತ್ತೇಜಿಸುವ ಮೂಲಕ, ಈ ಒಪ್ಪಂದವು ಹೆಚ್ಚು ಸ್ಥಿತಿಸ್ಥಾಪಕ ಮೌಲ್ಯ ಸರಪಳಿಗಳು, ಹೆಚ್ಚಿನ ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಪ್ರಸ್ತುತತೆಯೊಂದಿಗೆ ಬಲವಾದ ಕಾರ್ಯತಂತ್ರದ ಪಾಲುದಾರಿಕೆಗೆ ಚೌಕಟ್ಟನ್ನು ಸೃಷ್ಟಿಸುತ್ತದೆ. ಭಾರತ-ಒಮಾನ್ ಸಿಇಪಿಎ ನಮ್ಮ ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಗೆ ಹೊಸ ಶಕ್ತಿಯನ್ನು ತಂದಿದೆ, ಇದು ಪೂರಕ ಸಾಮರ್ಥ್ಯಗಳು, ಆಳವಾದ ನಿಯಂತ್ರಕ ಸಹಕಾರ ಮತ್ತು ಬೆಳವಣಿಗೆಯ ಹಂಚಿಕೆಯ ಬದ್ಧತೆಯನ್ನು ಹೊಂದಿದೆ. ಈ ಒಪ್ಪಂದವು ಕೇವಲ ಸುಂಕದ ಉದಾರೀಕರಣ ಮಾತ್ರವಲ್ಲ, ಅದಕ್ಕಿಂತಲೂ ಮಿಗಿಲಾಗಿ; ಇದು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತದೆ, ಸೇವಾ ವ್ಯಾಪಾರವನ್ನು ಸುಗಮಗೊಳಿಸುತ್ತದೆ ಮತ್ತು ಉಭಯ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ವ್ಯವಹಾರಗಳಿಗೆ ಹೆಚ್ಚಿನ ನಿರೀಕ್ಷತೆ ಹಾಗೂ ಸುಲಭತೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಗಲ್ಫ್ಗೆ ಪ್ರವೇಶ ದ್ವಾರ: ವಿಕಸಿತ ಭಾರತ್ 2047 ಕ್ಕಾಗಿ ವ್ಯಾಪಾರ, ಸೇವೆಗಳು ಮತ್ತು ಸಮೃದ್ಧಿಯ ವಿಸ್ತರಣೆ

ಸರಕುಗಳ ವ್ಯಾಪಾರ: ಪರಿವರ್ತನಾತ್ಮಕ ಶೇಕಡಾ 99.38 ರಷ್ಟು ಸುಂಕ ಮುಕ್ತ ಪ್ರವೇಶ

· ಸಿಇಪಿಎ ಒಪ್ಪಂದವು ಮೌಲ್ಯದ ಆಧಾರದ ಮೇಲೆ ಒಮಾನ್‌ ಗೆ ಭಾರತ ರಫ್ತು ಮಾಡುವ ಶೇಕಡಾ 99.38 ರಷ್ಟು ಸರಕುಗಳಿಗೆ ಸುಂಕ ಮುಕ್ತ ಪ್ರವೇಶವನ್ನು ಒದಗಿಸುತ್ತದೆ, ಇದು ಒಮಾನ್‌ ನ ಶೇಕಡಾ 98.08 ರಷ್ಟು ಸುಂಕದ ಶ್ರೇಣಿಗಳನ್ನು ಒಳಗೊಂಡಿದೆ. ಇದು ಗಲ್ಫ್ ಪ್ರದೇಶದಲ್ಲಿ ಭಾರತವು ಪಡೆದುಕೊಂಡ ಅತ್ಯಂತ ಸಮಗ್ರ ಮಾರುಕಟ್ಟೆ ಪ್ರವೇಶದ ಫಲಿತಾಂಶಗಳಲ್ಲಿ ಒಂದಾಗಿದೆ.

· ಎಲ್ಲಾ ಶೂನ್ಯ-ಸುಂಕದ ಸವಲತ್ತುಗಳು ತಕ್ಷಣವೇ ಜಾರಿಗೆ ಬರಲಿದ್ದು, ಭಾರತೀಯ ರಫ್ತುದಾರರಿಗೆ ನಿಶ್ಚಿತತೆ ಮತ್ತು ಸ್ಪರ್ಧಾತ್ಮಕತೆಯನ್ನು ಒದಗಿಸುತ್ತವೆ.

· ಈ ಹಿಂದೆ, ಎಂ ಎಫ್‌ ಎನ್ ವ್ಯವಸ್ಥೆಯಡಿಯಲ್ಲಿ ಭಾರತದ ಶೇಕಡಾ 15.33 ರಷ್ಟು ರಫ್ತುಗಳು ಮಾತ್ರ ಒಮಾನ್‌ ಗೆ ಸುಂಕ ರಹಿತವಾಗಿ ಪ್ರವೇಶಿಸುತ್ತಿದ್ದವು. ಸಿಇಪಿಎಯಿಂದಾಗಿ, ಒಮಾನ್‌ ನ ಸುಮಾರು 28 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಆಮದು ಮಾರುಕಟ್ಟೆಯಲ್ಲಿ ಭಾರತೀಯ ರಫ್ತುದಾರರು ಗಣನೀಯ ಬೆಲೆ ಸ್ಪರ್ಧಾತ್ಮಕತೆಯನ್ನು ಪಡೆಯುತ್ತಾರೆ.

· ಈ ಒಪ್ಪಂದವು ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆಗಳು, ಕಡಲ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಸಂಸ್ಕರಿಸಿದ ಆಹಾರಗಳು ಮತ್ತು ಔಷಧಗಳಂತಹ ಕಾರ್ಮಿಕ ತೀವ್ರತೆಯ ವಲಯಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಎಂ ಎಸ್‌ ಎಂ ಇ ಗಳು, ಉತ್ಪಾದನೆ ಮತ್ತು ಉದ್ಯೋಗವನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

· ಒಮಾನ್ ಜೊತೆ ಯಾವುದೇ ಆದ್ಯತೆಯ ವ್ಯಾಪಾರ ಒಪ್ಪಂದಗಳನ್ನು ಹೊಂದಿರದ ದೇಶಗಳ ಪೂರೈಕೆದಾರರಿಗಿಂತ ಭಾರತೀಯ ರಫ್ತುದಾರರು ಈಗ ಸಮಾನ ಅಥವಾ ಉತ್ತಮ ನಿಯಮಗಳ ಅಡಿಯಲ್ಲಿ ಸ್ಪರ್ಧಿಸಬಹುದು.

· ಸೋಹಾರ್, ದುಕ್ಮ್ ಮತ್ತು ಸಲಾಲ್ಹಾದಲ್ಲಿರುವ ಒಮಾನ್‌ ನ ಆಯಕಟ್ಟಿನ ಲಾಜಿಸ್ಟಿಕ್ಸ್ ಹಬ್‌ ಗಳು ಭಾರತೀಯ ರಫ್ತುದಾರರಿಗೆ ಒಮಾನ್‌ ಗೆ ಮಾತ್ರವಲ್ಲದೆ ವಿಶಾಲವಾದ ಜಿಸಿಸಿ ಮತ್ತು ಪೂರ್ವ ಆಫ್ರಿಕಾದ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶವನ್ನು ಒದಗಿಸುತ್ತವೆ.

ಸಮತೋಲಿತ ಮಾರುಕಟ್ಟೆ ಪ್ರವೇಶ ಮತ್ತು ಸೂಕ್ಷ್ಮ ವಲಯಗಳ ರಕ್ಷಣೆ

· ಭಾರತವು ಒಮಾನ್‌ ನಿಂದ ಬರುವ ಒಟ್ಟು ಆಮದು ಮೌಲ್ಯದ ಶೇಕಡಾ 94.81 ರಷ್ಟನ್ನು ಒಳಗೊಳ್ಳುವ ಶೇಕಡಾ 77.79 ರಷ್ಟು ಸುಂಕದ ಶ್ರೇಣಿಗಳಲ್ಲಿ ಉದಾರೀಕರಣವನ್ನು ನೀಡಿದೆ, ಅದೇ ಸಮಯದಲ್ಲಿ ಸೂಕ್ಷ್ಮ ವಲಯಗಳಿಗೆ ಬಲವಾದ ಸುರಕ್ಷತಾ ಕ್ರಮಗಳನ್ನು ಕಾಯ್ದುಕೊಂಡಿದೆ.

· ಹೊರಗಿಡಲಾದ ಪಟ್ಟಿಯಡಿಯಲ್ಲಿ ರಕ್ಷಿಸಲಾದ ಉತ್ಪನ್ನಗಳಲ್ಲಿ ಹಾಲಿನ ಉತ್ಪನ್ನಗಳು, ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ರಬ್ಬರ್, ಚರ್ಮ, ಸಾಂಬಾರ ಪದಾರ್ಥಗಳು ಮತ್ತು ಪ್ರಮುಖ ಕೃಷಿ ಉತ್ಪನ್ನಗಳು ಸೇರಿವೆ.

· ದೇಶೀಯ ಉದ್ಯಮ ಮತ್ತು ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ರಕ್ಷಿಸಲು ಆಯ್ದ ಸೂಕ್ಷ್ಮ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಸುಂಕ ದರ ಕೋಟಾಗಳು ಮತ್ತು ಕನಿಷ್ಠ ಆಮದು ಬೆಲೆ ಕಾರ್ಯವಿಧಾನಗಳನ್ನು ಸಹ ಅಳವಡಿಸಲಾಗಿದೆ.

· ರಿಯಾಯಿತಿಗಳ ಈ ಸಮತೋಲಿತ ರಚನೆಯು ಭಾರತದ ರಫ್ತು ಮಹತ್ವಾಕಾಂಕ್ಷೆಗಳನ್ನು ಆಹಾರ ಭದ್ರತೆಯ ಕಾಳಜಿಗಳು, ರೈತರ ಕಲ್ಯಾಣ ಮತ್ತು ಗ್ರಾಮೀಣ ಜೀವನೋಪಾಯದ ರಕ್ಷಣೆಯೊಂದಿಗೆ ಸಮತೋಲನಗೊಳಿಸುತ್ತದೆ.

ಕಡಲ ಉತ್ಪನ್ನಗಳು: ಪ್ರಾದೇಶಿಕ ಸಮುದ್ರ ಆಹಾರ ಮೌಲ್ಯ ಸರಪಳಿಯಲ್ಲಿ ಭಾರತದ ಉಪಸ್ಥಿತಿಯ ವೃದ್ಧಿ

· ಸೀಗಡಿ, ಮೀನು ಮತ್ತು ಕಟಲ್‌ ಫಿಶ್ ಸೇರಿದಂತೆ ಎಲ್ಲಾ ಕಡಲ ಉತ್ಪನ್ನಗಳು ಈ ಹಿಂದಿನ ಶೇಕಡಾ 5 ರವರೆಗಿನ ಆಮದು ಸುಂಕದ ಬದಲಾಗಿ ತಕ್ಷಣದ ಸುಂಕ-ರಹಿತ ಪ್ರವೇಶವನ್ನು ಪಡೆಯಲಿವೆ.

· 2025 ರಲ್ಲಿ ಒಮಾನ್‌ ನ ಕಡಲ ಆಮದು 35.3 ಮಿಲಿಯನ್ ಅಮೆರಿಕ ಡಾಲರ್ ಆಗಿದ್ದರೆ, ಭಾರತದ ರಫ್ತು ಕೇವಲ 10 ಮಿಲಿಯನ್ ಅಮೆರಿಕ ಡಾಲರ್ ಆಗಿತ್ತು, ಇದು ಗಣನೀಯವಾಗಿ ಬಳಸಿಕೊಳ್ಳದ ಸಾಮರ್ಥ್ಯವನ್ನು ಸೂಚಿಸುತ್ತದೆ.

· ಈ ಒಪ್ಪಂದವು ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಗುಜರಾತ್ ಸೇರಿದಂತೆ ಪ್ರಮುಖ ಕರಾವಳಿ ರಾಜ್ಯಗಳಿಂದ ರಫ್ತನ್ನು ಗಣನೀಯವಾಗಿ ವಿಸ್ತರಿಸುವ ನಿರೀಕ್ಷೆಯಿದೆ.

· ಭಾರತೀಯ ಕಡಲ ಉತ್ಪನ್ನಗಳ ರಫ್ತುದಾರರು ಸುಧಾರಿತ ಸ್ಪರ್ಧಾತ್ಮಕತೆ, ವೇಗದ ಮಾರುಕಟ್ಟೆ ಅನುಮತಿಗಳು ಮತ್ತು ಗಲ್ಫ್ ಪ್ರದೇಶದ ಆಹಾರ ಪೂರೈಕೆ ಸರಪಳಿಯೊಂದಿಗೆ ಬಲವಾದ ಏಕೀಕರಣವನ್ನು ಪಡೆಯುತ್ತಾರೆ.

ರತ್ನಗಳು ಮತ್ತು ಆಭರಣಗಳು: ಜಾಗತಿಕ ಆಭರಣ ವ್ಯಾಪಾರದಲ್ಲಿ ಭಾರತದ ನಾಯಕತ್ವದ ವೃದ್ಧಿ

· ರತ್ನಗಳು ಮತ್ತು ಆಭರಣಗಳ ಮೇಲಿನ ಶೇಕಡಾ 5 ರವರೆಗಿನ ಆಮದು ಸುಂಕವನ್ನು ಮೊದಲ ದಿನದಿಂದಲೇ ರದ್ದುಗೊಳಿಸಲಾಗಿದೆ.

· ಇಟಲಿ, ಟರ್ಕಿ, ಥೈಲ್ಯಾಂಡ್ ಮತ್ತು ಚೀನಾದಂತಹ ಸ್ಪರ್ಧಾತ್ಮಕ ದೇಶಗಳಿಗಿಂತ ಭಾರತೀಯ ರಫ್ತುದಾರರು ರಚನಾತ್ಮಕ ಬೆಲೆ ಲಾಭವನ್ನು ಪಡೆಯುತ್ತಾರೆ.

· ಒಮಾನ್‌ ನ ಒಟ್ಟು ರತ್ನ ಮತ್ತು ಆಭರಣ ಆಮದು ಮಾರುಕಟ್ಟೆಯು ವಾರ್ಷಿಕವಾಗಿ 1.07 ಬಿಲಿಯನ್ ಅಮೆರಿಕ ಡಾಲರ್ ಆಗಿದೆ. ಈ ವಲಯದಲ್ಲಿ ಒಮಾನ್‌ ಗೆ ಭಾರತದ ರಫ್ತು 2025 ರಲ್ಲಿ 25.78 ಮಿಲಿಯನ್ ಅಮೆರಿಕ ಡಾಲರ್ ಆಗಿತ್ತು, ಇದರಲ್ಲಿ 18.48 ಮಿಲಿಯನ್ ಅಮೆರಿಕ ಡಾಲರ್ ಪಾಲಿಶ್ ಮಾಡಿದ ನೈಸರ್ಗಿಕ ವಜ್ರಗಳು ಮತ್ತು 6.67 ಮಿಲಿಯನ್‌ ಅಮೆರಿಕ ಡಾಲರ್ ಚಿನ್ನದ ಆಭರಣಗಳು ಸೇರಿವೆ.

· ಮೂರು ವರ್ಷಗಳಲ್ಲಿ ರಫ್ತು ಆರು ಪಟ್ಟು ಹೆಚ್ಚಾಗಿ 150 ಮಿಲಿಯನ್ ಅಮೆರಿಕ ಡಾಲರ್‌ ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಒಮಾನ್‌ ನ ಸುಂಕಗಳನ್ನು ಎದುರಿಸುತ್ತಲೇ ಇರುವ ಇತರ ಸ್ಪರ್ಧಿಗಳಿಗಿಂತ ಭಾರತೀಯ ಪೂರೈಕೆದಾರರು ಈಗ ರಚನಾತ್ಮಕ ಬೆಲೆ ಮತ್ತು ಸ್ಪರ್ಧಾತ್ಮಕ ಲಾಭವನ್ನು ಹೊಂದಿದ್ದಾರೆ.

· ಸೂರತ್ (ವಜ್ರಗಳು), ಜೈಪುರ (ರತ್ನಗಳು), ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿರುವ ಕ್ಲಸ್ಟರ್‌ ಗಳು ಈ ಬೆಳವಣಿಗೆಯನ್ನು ಪಡೆದುಕೊಳ್ಳಲು ಸಜ್ಜಾಗಿವೆ, ಏಕೆಂದರೆ ರತ್ನಗಳು ಮತ್ತು ಆಭರಣಗಳಿಗೆ ಹೊಸ ಅವಕಾಶಗಳು ಮುಕ್ತವಾಗಿವೆ ಮತ್ತು ಈ ಕ್ಲಸ್ಟರ್‌ ಗಳಾದ್ಯಂತ ಉದ್ಯೋಗದ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಕೃಷಿ ಮತ್ತು ಸಂಸ್ಕರಿಸಿದ ಆಹಾರ: ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದ ಕೃಷಿ ಸಾಮರ್ಥ್ಯದ ಬಳಕೆ

· ಒಮಾನ್ ಆಮದುಗಳಲ್ಲಿ ಶೇಕಡಾ 17.8 ರಷ್ಟು ಪಾಲನ್ನು ಹೊಂದುವ ಮೂಲಕ ಭಾರತವು ಒಮಾನ್‌ ನ ಎರಡನೇ ಅತಿ ದೊಡ್ಡ ಕೃಷಿ ಪೂರೈಕೆದಾರ ದೇಶವಾಗಿದೆ. 2025 ರಲ್ಲಿ ಒಟ್ಟು ರಫ್ತು ಶೇಕಡಾ 9.13 ರ ಸಿಎಜಿಆರ್ ನೊಂದಿಗೆ 552.85 ಮಿಲಿಯನ್ ಅಮೆರಿಕ ಡಾಲರ್‌ ಗೆ ಬೆಳೆದಿದ್ದರೆ, ಅಪೆಡಾ ನಿಗದಿತ ಉತ್ಪನ್ನಗಳ ರಫ್ತು ಶೇಕಡಾ 12.36 ರ ಸಿಎಜಿಆರ್‌ ನೊಂದಿಗೆ 477 ಮಿಲಿಯನ್ ಅಮೆರಿಕ ಡಾಲರ್‌ ಗೆ ಇನ್ನೂ ವೇಗವಾಗಿ ಬೆಳೆದಿದೆ.

· ಸುಂಕ ವಿನಾಯಿತಿಯು ಜೇನುತುಪ್ಪ, ಮಸಾಲೆ ಪದಾರ್ಥಗಳು, ಗೋಡಂಬಿ, ಬಾಸುಮತಿ ಅಕ್ಕಿ, ಬೆಣ್ಣೆ ಮತ್ತು ಸಿಹಿ ಬಿಸ್ಕತ್‌ ಗಳಂತಹ ಉತ್ಪನ್ನಗಳಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ.

· ಭಾರತವು ಪ್ರಸ್ತುತ ಒಮಾನ್‌ ನ ಗೋಮಾಂಸ ಆಮದಿನ ಶೇಕಡಾ 94 ಕ್ಕಿಂತ ಹೆಚ್ಚು ಮತ್ತು ತಾಜಾ ಮೊಟ್ಟೆಯ ಆಮದಿನ ಶೇಕಡಾ 98 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ, ಇದು ಗಲ್ಫ್ ಪ್ರದೇಶದಲ್ಲಿ ಒಮಾನ್ ಅನ್ನು ಭಾರತದ ಅತ್ಯಂತ ಪ್ರಮುಖ ಕೃಷಿ ರಫ್ತು ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.

· ಗುರುತಿಸಲಾದ ಪ್ರಮುಖ ರಫ್ತು ವಸ್ತುಗಳಲ್ಲಿ ಬಾಸುಮತಿ ಮತ್ತು ಕುಸುಬಲ ಅಕ್ಕಿ, ಗೋಡಂಬಿ, ಈರುಳ್ಳಿ, ಆಲೂಗಡ್ಡೆ, ಸೋಯಾಬೀನ್ ಹಿಟ್ಟು, ಸಿಹಿ ಬಿಸ್ಕತ್‌, ಬೆಣ್ಣೆ, ಹೆಪ್ಪುಗಟ್ಟಿದ ಮೂಳೆ ರಹಿತ ಗೋಮಾಂಸ ಮತ್ತು ಫರ್ಟಿಲೈಸ್ಡ್ ಮೊಟ್ಟೆಗಳು ಸೇರಿವೆ. ಇದು ರೈತರು, ಆಹಾರ ಸಂಸ್ಕಾರಕರು ಮತ್ತು ಕೃಷಿ ರಫ್ತುದಾರರಿಗೆ ವಿಶಾಲವಾದ ಮತ್ತು ಬೆಳೆಯುತ್ತಿರುವ ಅವಕಾಶವನ್ನು ಪ್ರತಿನಿಧಿಸುತ್ತದೆ.

· ಆಲ್ಫಾನ್ಸೋ, ಕೇಸರ್ ಮತ್ತು ದಶೇರಿ ತಳಿಗಳು ಸೇರಿದಂತೆ ಮಾವಿನ ಹಣ್ಣಿನ ರಫ್ತುಗಳು ಸುಂಕ-ರಹಿತ ಪ್ರವೇಶದ ಮೂಲಕ ಗಲ್ಫ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಪಡೆಯುತ್ತವೆ.

· ಈ ಒಪ್ಪಂದವು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ರೈತರು, ಕೃಷಿ ಸಂಸ್ಕಾರಕರು ಮತ್ತು ಆಹಾರ ರಫ್ತುದಾರರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.

ಔಷಧಗಳು: ನಿಯಂತ್ರಕ ಪ್ರಗತಿಯ ಮೂಲಕ ಮಾರುಕಟ್ಟೆ ಪ್ರವೇಶದ ಸುಧಾರಣೆ

· ಒಪ್ಪಂದವು ಪೆನ್ಸಿಲಿನ್, ಸ್ಟ್ರೆಪ್ಟೊಮೈಸಿನ್ ಮತ್ತು ಟೆಟ್ರಾಸೈಕ್ಲಿನ್ ಸೇರಿದಂತೆ ಔಷಧಗಳು, ಲಸಿಕೆಗಳು ಮತ್ತು ಔಷಧೀಯ ಪದಾರ್ಥಗಳಿಗೆ ಶೂನ್ಯ-ಸುಂಕದ ಪ್ರವೇಶವನ್ನು ಒದಗಿಸುತ್ತದೆ.

· ಒಮಾನ್‌ ನ ಔಷಧ ಮಾರುಕಟ್ಟೆಯ ಮೌಲ್ಯವು 2025 ರಲ್ಲಿ 302.84 ಮಿಲಿಯನ್ ಅಮೆರಿಕ ಡಾಲರ್ ಆಗಿತ್ತು ಮತ್ತು ಇದು 2031 ರ ವೇಳೆಗೆ 473.71 ಮಿಲಿಯನ್ ಅಮೆರಿಕ ಡಾಲರ್‌ ಗೆ (ಸಿಎಜಿಆರ್ ಶೇಕಡಾ 6.6) ತಲುಪುವ ನಿರೀಕ್ಷೆ ಇದೆ, ಇದು ಭಾರತದ ಔಷಧ ರಫ್ತುದಾರರಿಗೆ ಗಮನಾರ್ಹ ಮತ್ತು ಬೆಳೆಯುತ್ತಿರುವ ಅವಕಾಶವನ್ನು ಒದಗಿಸುತ್ತದೆ.

· USFDA, EMA, UK MHRA ಮತ್ತು TGA ನಿಂದ ಅನುಮೋದಿಸಲ್ಪಟ್ಟ ಉತ್ಪನ್ನಗಳು ಪೂರ್ವ ತಪಾಸಣೆ ಇಲ್ಲದೆಯೇ 90 ದಿನಗಳ ಒಳಗೆ ಮಾರಾಟದ ಅನುಮತಿಯನ್ನು ಪಡೆಯಲು ಅರ್ಹತೆ ಪಡೆಯುತ್ತವೆ ಮತ್ತು ತಪಾಸಣೆ ಅಗತ್ಯವಿರುವಲ್ಲಿ 270 ಕೆಲಸದ ದಿನಗಳ ಗುರಿಯನ್ನು ಹೊಂದಿರಲಿವೆ.

· ಜಿಎಂಪಿ ಮತ್ತು ತಪಾಸಣಾ ವರದಿಗಳ ಸ್ವೀಕಾರವು ಅನುಸರಣೆಯ ಹೊರೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಭಾರತೀಯ ಔಷಧ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶವನ್ನು ವೇಗಗೊಳಿಸುತ್ತದೆ.

· ಭಾರತೀಯ ಔಷಧ ಕಂಪನಿಗಳು ಗಲ್ಫ್ ಆರೋಗ್ಯ ರಕ್ಷಣಾ ಮಾರುಕಟ್ಟೆಯಲ್ಲಿ ಹೆಚ್ಚಿನ ಮುನ್ಸೂಚನೆ, ವೇಗದ ಅನುಮೋದನೆಗಳು ಮತ್ತು ಸುಧಾರಿತ ಸ್ಪರ್ಧಾತ್ಮಕತೆಯನ್ನು ಪಡೆಯುತ್ತವೆ.

· ಒಮಾನ್‌ನ ಔಷಧ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದ್ದು, ಇದು ಭಾರತೀಯ ರಫ್ತುದಾರರಿಗೆ ಪ್ರಮುಖ ಅವಕಾಶಗಳನ್ನು ಸೃಷ್ಟಿಸುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಸರಕುಗಳು: ಭಾರತದ ಉತ್ಪಾದನಾ ರಫ್ತು ಲಾಭವನ್ನು ಬಲಪಡಿಸಲು ಪೂರ್ಣ ಸುಂಕ ನಿಶ್ಚಿತತೆ

· ಎಲ್ಲಾ ಎಂಜಿನಿಯರಿಂಗ್ ಉತ್ಪನ್ನಗಳು ಶೇಕಡಾ 5 ರವರೆಗಿನ ಎಂ ಎಫ್‌ ಎನ್ ಸುಂಕಗಳ ಬದಲಾಗಿ ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶವನ್ನು ಪಡೆಯುತ್ತವೆ.

· ಇದರ ಪ್ರಯೋಜನ ಪಡೆಯುವ ಪ್ರಮುಖ ವಲಯಗಳಲ್ಲಿ ಯಂತ್ರೋಪಕರಣಗಳು, ಆಟೋಮೊಬೈಲ್ಸ್, ಎಲೆಕ್ಟ್ರಿಕಲ್ ಉಪಕರಣಗಳು, ಕಬ್ಬಿಣ ಮತ್ತು ಉಕ್ಕು ಹಾಗೂ ಕೈಗಾರಿಕಾ ಯಂತ್ರೋಪಕರಣಗಳು ಸೇರಿವೆ.

· ಒಮಾನ್ 2025 ರಲ್ಲಿ ಸರಿಸುಮಾರು 1.7 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ, ಇದು ಭಾರತೀಯ ತಯಾರಕರಿಗೆ ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ. ಒಮಾನ್‌ ಗೆ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು 146 ಮಿಲಿಯನ್ ಅಮೆರಿಕ ಡಾಲರ್ ಆಗಿದ್ದು, ಬೋರ್ಡ್‌ ಗಳು ಮತ್ತು ಕ್ಯಾಬಿನೆಟ್‌ ಗಳು, ಸ್ಟ್ಯಾಟಿಕ್ ಪರಿವರ್ತಕಗಳು ಮತ್ತು ಟಿವಿ ರಿಸೆಪ್ಷನ್ ಉಪಕರಣಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ವಿಭಾಗಗಳನ್ನು ಒಳಗೊಂಡಿರುವ ಸಿಇಪಿಎ ನ ಪೂರ್ಣ ಸುಂಕ ನಿಶ್ಚಿತತೆಯು ಈ ವ್ಯತ್ಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

· ಪಿ ಎಲ್‌ ಐ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸೇರಿದಂತೆ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ರಫ್ತುದಾರರು ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆಯುವ ನಿರೀಕ್ಷೆಯಿದೆ.

· ಒಮಾನ್ ಭಾರತದ ಎಂಜಿನಿಯರಿಂಗ್ ರಫ್ತುಗಳಿಗೆ ಒಂದು ಪ್ರಮುಖ ತಾಣವಾಗಿದೆ, ಇದು ಹಣಕಾಸು ವರ್ಷ 2025-26 ರಲ್ಲಿ 875.83 ಮಿಲಿಯನ್ ಅಮೆರಿಕ ಡಾಲರ್‌ ಗೆ ತಲುಪಿದೆ. ಇದು ಯಂತ್ರೋಪಕರಣಗಳು, ಎಲೆಕ್ಟ್ರಿಕಲ್ ಉಪಕರಣಗಳು, ಆಟೋಮೊಬೈಲ್ಸ್, ಕಬ್ಬಿಣ ಮತ್ತು ಉಕ್ಕು ಮತ್ತು ನಾನ್-ಫೆರಸ್ ಲೋಹಗಳನ್ನು ಒಳಗೊಂಡಿದೆ. ಎಲ್ಲಾ ಎಂಜಿನಿಯರಿಂಗ್ ಉತ್ಪನ್ನಗಳು ಈ ಹಿಂದಿನ ಶೇಕಡಾ 0-5 ರ ಎಂ‌ ಎಫ್‌ ಎನ್ ಸುಂಕಗಳ ಬದಲಾಗಿ ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶವನ್ನು ಪಡೆಯುತ್ತವೆ. ಒಮಾನ್‌ ಗೆ ಎಂಜಿನಿಯರಿಂಗ್ ರಫ್ತುಗಳು 2030 ರ ವೇಳೆಗೆ 1.3 ರಿಂದ 1.6 ಬಿಲಿಯನ್ ಅಮೆರಿಕ ಡಾಲರ್‌ ಗೆ ಏರುವ ನಿರೀಕ್ಷೆ ಇದೆ. ಮೂಲಸೌಕರ್ಯ ಯೋಜನೆಗಳಿಗಾಗಿ ಕಬ್ಬಿಣ ಮತ್ತು ಉಕ್ಕು, ಎಲೆಕ್ಟ್ರಿಕ್ ಮತ್ತು ಕೈಗಾರಿಕಾ ಯಂತ್ರೋಪಕರಣಗಳು, ಮೋಟಾರು ವಾಹನಗಳು (ಶೇಕಡಾ 5 ರ ಸುಂಕ ರದ್ದು) ಮತ್ತು ತಾಮ್ರದ ಉತ್ಪನ್ನಗಳಲ್ಲಿ ಪ್ರಮುಖ ಲಾಭಗಳನ್ನು ನಿರೀಕ್ಷಿಸಲಾಗಿದೆ.

ಸೇವೆಗಳು: ಸೇವೆಗಳ ಹೊಸ ಗಡಿಗಳನ್ನು ಉತ್ತೇಜಿಸುವ ಒಮಾನ್ ಅತ್ಯುತ್ತಮ ಕೊಡುಗೆ

· ದ್ವಿಪಕ್ಷೀಯ ಸೇವೆಗಳ ವ್ಯಾಪಾರವು 2024 ರಲ್ಲಿ 863 ಮಿಲಿಯನ್ ಅಮೆರಿಕ ಡಾಲರ್ ಆಗಿತ್ತು, ಇದರಲ್ಲಿ ಭಾರತವು 447 ಮಿಲಿಯನ್ ಅಮೆರಿಕ ಡಾಲರ್ ಹೆಚ್ಚುವರಿಯನ್ನು ಹೊಂದಿತ್ತು. ಒಮಾನ್‌ ನ ಜಾಗತಿಕ ಸೇವೆಗಳ ಆಮದು 12.52 ಬಿಲಿಯನ್ ಅಮೆರಿಕ ಡಾಲರ್ ಆಗಿದ್ದು, ಭಾರತವು ಈ ಆಮದುಗಳಲ್ಲಿ ಕೇವಲ ಶೇಕಡಾ 5.31 ರಷ್ಟು ಪಾಲನ್ನು ಹೊಂದಿತ್ತು, ಇದು ಗಣನೀಯವಾಗಿ ಬಳಸಿಕೊಳ್ಳದ ಸಾಮರ್ಥ್ಯವನ್ನು ಸೂಚಿಸುತ್ತದೆ.

· ಸಿಇಪಿಎ ಅಡಿಯಲ್ಲಿ, ಒಮಾನ್ 127 ಸೇವೆಗಳ ಉಪ-ವಲಯಗಳಲ್ಲಿ ವ್ಯಾಪಕ ಮತ್ತು ಆಳವಾದ ಮಾರುಕಟ್ಟೆ ಪ್ರವೇಶ ಬದ್ಧತೆಗಳನ್ನು ಕೈಗೊಂಡಿದೆ. ಈ ಬದ್ಧತೆಗಳು GATS/ FTA-ಗಿಂತಲೂ ಹೆಚ್ಚಿನದಾಗಿದ್ದು, ಯಾವುದೇ ಜಿಸಿಸಿ ದೇಶವು ಭಾರತಕ್ಕೆ ನೀಡಿದ ಅತ್ಯಂತ ಸಮಗ್ರ ಸೇವಾ ಕೊಡುಗೆಯಾಗಿದೆ.

· ಪ್ರಮುಖ ವಲಯಗಳಲ್ಲಿ ಕಂಪ್ಯೂಟರ್ ಮತ್ತು ಸಂಬಂಧಿತ ಸೇವೆಗಳು, ವೃತ್ತಿಪರ ಸೇವೆಗಳು (ಕಾನೂನು, ಲೆಕ್ಕಪತ್ರ ನಿರ್ವಹಣೆ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಬಂಧಿತ ಸೇವೆಗಳು), ಆಡಿಯೋ-ವಿಶುವಲ್ ಸೇವೆಗಳು, ಇತರ ವ್ಯವಹಾರ ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳು, ದೂರಸಂಪರ್ಕ ಸೇವೆಗಳು, ನಿರ್ಮಾಣ ಸೇವೆಗಳು, ಶಿಕ್ಷಣ ಸೇವೆಗಳು, ಪರಿಸರ ಸೇವೆಗಳು, ಆರೋಗ್ಯ ಸೇವೆಗಳು, ಹಣಕಾಸು ಸೇವೆಗಳು ಮತ್ತು ಪ್ರವಾಸೋದ್ಯಮ ಹಾಗೂ ಪ್ರಯಾಣ ಸಂಬಂಧಿತ ಸೇವೆಗಳು ಸೇರಿವೆ.

· ಪ್ರಮುಖ ಉಪ-ವಲಯಗಳಲ್ಲಿನ ಎಂ ಎಫ್‌ ಎನ್ ಬದ್ಧತೆಗಳು, ಒಮಾನ್ ಯಾವುದೇ ಮೂರನೇ ದೇಶಕ್ಕೆ ವಿಸ್ತರಿಸುವ ಯಾವುದೇ ಹೆಚ್ಚು ಅನುಕೂಲಕರವಾದ ರಿಯಾಯಿತಿಯನ್ನು ಸ್ವಯಂಚಾಲಿತವಾಗಿ ಭಾರತಕ್ಕೂ ವಿಸ್ತರಿಸುವುದನ್ನು ಖಚಿತಪಡಿಸುತ್ತದೆ.

· ಯಾವುದೇ ದ್ವಿಪಕ್ಷೀಯ ಎಫ್‌ ಟಿ ಎ ನಲ್ಲಿ ಮೊದಲ ಬಾರಿಗೆ, ಒಮಾನ್ ಅಕೌಂಟಿಂಗ್, ಎಂಜಿನಿಯರಿಂಗ್, ಮೆಡಿಸಿನ್, ಐಟಿ, ಶಿಕ್ಷಣ, ನಿರ್ಮಾಣ ಸೇರಿದಂತೆ ನಿರ್ದಿಷ್ಟ ವರ್ಗಗಳ ವೃತ್ತಿಪರರಿಗೆ ಕಡ್ಡಾಯ ಬದ್ಧತೆಗಳನ್ನು ಮಾಡಿದೆ.

· ಸುಧಾರಿತ ಸಂಚಾರ ನಿಬಂಧನೆಗಳು ಸುಮಾರು 6,000 ಭಾರತ-ಒಮಾನ್ ಜಂಟಿ ಉದ್ಯಮಗಳಿಗೆ ಪ್ರಯೋಜನವನ್ನು ನೀಡಲಿವೆ. ವ್ಯಾಪಾರ ಸಂದರ್ಶಕರು ಒಮಾನ್‌ ನಲ್ಲಿ 90 ದಿನಗಳವರೆಗೆ ಇರಬಹುದು; ಸ್ವತಂತ್ರ ವೃತ್ತಿಪರರು 180 ದಿನಗಳವರೆಗೆ ಇರಬಹುದು; ಇಂಟ್ರಾ-ಕಾರ್ಪೊರೇಟ್ ಟ್ರಾನ್ಸ್‌ ಫರ್ರಿಗಳು 4 ವರ್ಷಗಳವರೆಗೆ ಇರಬಹುದು. ಈ ನಿಬಂಧನೆಗಳು ಭಾರತದ ವೃತ್ತಿಪರ ಕಾರ್ಯಪಡೆಗೆ ಸ್ಪಷ್ಟ, ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಂಚಾರ ಮಾರ್ಗಗಳನ್ನು ಒದಗಿಸುತ್ತವೆ.

· ಈ ಒಪ್ಪಂದವು ಭವಿಷ್ಯದಲ್ಲಿ ಸಾಮಾಜಿಕ ಭದ್ರತಾ ಒಪ್ಪಂದದ (ಎಸ್‌ ಎಸ್‌ ಎ) ಕುರಿತು ಮಾತುಕತೆ ನಡೆಸಲು ಅವಕಾಶವನ್ನು ಒದಗಿಸುತ್ತದೆ. ಎಸ್‌ ಎಸ್‌ ಎ ಒಪ್ಪಂದವು ಸಾಮಾಜಿಕ ಭದ್ರತೆಯ ಪ್ರಯೋಜನಗಳ ಪರಸ್ಪರ ನಿರಂತರತೆಯನ್ನು ಒದಗಿಸುತ್ತದೆ ಮತ್ತು ಒಮಾನ್‌ ನಲ್ಲಿರುವ ಭಾರತೀಯ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಉಭಯ ಕಡೆಯ ಕೊಡುಗೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಸ್ಮಾರ್ಟ್ ನಿಯಂತ್ರಣ ಮತ್ತು ವ್ಯಾಪಾರ ಸುಗಮಗೊಳಿಸುವಿಕೆ

· ಒಮಾನ್ ಭಾರತದ ರಫ್ತು ಪರಿಶೀಲನಾ ಮಂಡಳಿ (ಇಐಸಿ) ನೀಡುವ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸ್ವೀಕರಿಸುತ್ತದೆ, ಇದು ಪುನರಾವರ್ತಿತ ಪರೀಕ್ಷೆಗಳು ಮತ್ತು ತಪಾಸಣೆಗಳನ್ನು ನಿವಾರಿಸುತ್ತದೆ.

· ಭಾರತದ ಎನ್‌ ಪಿ ಒ ಪಿ ಸಾವಯವ ಪ್ರಮಾಣೀಕರಣ ಮತ್ತು ಹಲಾಲ್ ಪ್ರಮಾಣೀಕರಣ ವ್ಯವಸ್ಥೆಗಳನ್ನು ಒಮಾನ್ ಮಾನ್ಯ ಮಾಡಿದೆ.

· ಸಮರ್ಪಿತ ಎಸ್‌ ಪಿ ಎಸ್ ಮತ್ತು ಟಿಬಿಟಿ ಅಧ್ಯಾಯಗಳು ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಪಾರದರ್ಶಕತೆ ಹಾಗೂ ನಿಯಂತ್ರಕ ಸಹಕಾರವನ್ನು ಸುಧಾರಿಸುತ್ತವೆ.

· ಪ್ರಮಾಣಿತ ಕಾರ್ಗೋ ಕ್ಲಿಯರೆನ್ಸ್ ಸಮಯದ ಮಿತಿಗಳು ಮತ್ತು ಬೇಗನೆ ಹಾಳಾಗುವ ವಸ್ತುಗಳಿಗೆ ವೇಗದ ಹಾದಿಯ ಕಾರ್ಯವಿಧಾನಗಳು ದಕ್ಷತೆಯನ್ನು ಸುಧಾರಿಸುತ್ತವೆ ಮತ್ತು ರಫ್ತುದಾರರಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತವೆ.

ಹೂಡಿಕೆ: ಆರ್ಥಿಕ ವ್ಯವಸ್ಥೆಯ ಬಲವರ್ಧನೆ

· ಸಿಇಪಿಎ ಒಪ್ಪಂದವು ಉತ್ಪಾದನೆ, ಲಾಜಿಸ್ಟಿಕ್ಸ್, ಇಂಧನ ಮತ್ತು ಸೇವೆಗಳು ಸೇರಿದಂತೆ ಆದ್ಯತೆಯ ವಲಯಗಳಲ್ಲಿ ಹೂಡಿಕೆಗಳನ್ನು ಬೆಂಬಲಿಸುವ ಮೂಲಕ ಹೂಡಿಕೆ ಸುಗಮಗೊಳಿಸಲು ಒಂದು ವ್ಯವಸ್ಥಿತ ಚೌಕಟ್ಟನ್ನು ಸ್ಥಾಪಿಸುತ್ತದೆ.

· ಕಡಿಮೆ ಅನುಸರಣೆಯ ಹೊರೆಗಳು, ಸುಧಾರಿತ ನಿಯಂತ್ರಕ ನಿಶ್ಚಿತತೆ ಮತ್ತು ವರ್ಧಿತ ಮಾರುಕಟ್ಟೆ ಪ್ರವೇಶವು ಭಾರತದ ಎಂ ಎಸ್‌ ಎಂ ಇ ಸ್ಪರ್ಧಾತ್ಮಕತೆಯನ್ನು ಗಣನೀಯವಾಗಿ ಬಲಪಡಿಸುವ ನಿರೀಕ್ಷೆಯಿದೆ.

· ನವೋದ್ಯಮಗಳು, ಮಹಿಳೆಯರು, ಉದ್ಯಮಿಗಳು ಮತ್ತು ಸೇವಾ ವೃತ್ತಿಪರರು ಜಿಸಿಸಿ ಮೌಲ್ಯದ ಸರಪಳಿಗಳಲ್ಲಿ ಉತ್ತಮ ಏಕೀಕರಣದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ದ್ವಿಪಕ್ಷೀಯ ವ್ಯಾಪಾರ: ಬಲವಾದ ವೇಗ, ವ್ಯಾಪಾರದ ಪುನರುಜ್ಜೀವನ

ಭಾರತ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು ಹಣಕಾಸು ವರ್ಷ 2025-26 ರಲ್ಲಿ 11.18 ಬಿಲಿಯನ್ ಅಮೆರಿಕ ಡಾಲರ್‌ ಗೆ ತಲುಪಿದೆ ಮತ್ತು ಬಲವಾದ ಬೆಳವಣಿಗೆಯ ವೇಗವನ್ನು ತೋರಿಸುತ್ತಲೇ ಇದೆ. ಸಿಇಪಿಎ ಜಾರಿಗೆ ಬಂದಿರುವುದರಿಂದ, ಸುಧಾರಿತ ಮಾರುಕಟ್ಟೆ ಪ್ರವೇಶ, ಸಹಕಾರ, ಹೂಡಿಕೆ ಹರಿವು ಮತ್ತು ಆಳವಾದ ಆರ್ಥಿಕ ಸಾಮರ್ಥ್ಯಗಳ ಮೂಲಕ ಮುಂಬರುವ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವು ಗಣನೀಯವಾಗಿ ವಿಸ್ತರಿಸುವ ನಿರೀಕ್ಷೆಯಿದೆ.

ಈ ಒಪ್ಪಂದವು ಭಾರತ ಮತ್ತು ಒಮಾನ್ ನಡುವೆ ವ್ಯಾಪಾರ, ಹೂಡಿಕೆ, ಸೇವೆಗಳು, ಲಾಜಿಸ್ಟಿಕ್ಸ್ ಮತ್ತು ನಿಯಂತ್ರಕ ಪಾಲುದಾರಿಕೆಯನ್ನು ಒಳಗೊಂಡ ಪ್ರಬಲ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಭಾರತ-ಒಮಾನ್ ಸಿಇಪಿಎ ಒಪ್ಪಂದವು ವಿಕಸಿತ ಭಾರತ @2047 ರ ದೃಷ್ಟಿಕೋನದ ಅಡಿಯಲ್ಲಿ ಭಾರತವು ಜಾಗತಿಕವಾಗಿ ಸಂಯೋಜಿತ, ಸ್ಥಿತಿಸ್ಥಾಪಕ ಮತ್ತು ಸ್ಪರ್ಧಾತ್ಮಕ ಆರ್ಥಿಕತೆಯಾಗುವ ಹಾದಿಯಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

 

*****

 


(ಪ್ರಕಟಣೆ ಐ.ಡಿ.: 2267615) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati