ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಭುಜ್ ನಲ್ಲಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಜಿ-7 ಗಡಿ ಚೌಕಿ (ಬಾರ್ಡರ್ ಔಟ್‌ಪೋಸ್ಟ್) ಯಲ್ಲಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು ಮತ್ತು ಜಿ-7 ಹಾಗೂ ಜಿ-13 ಗಡಿ ಚೌಕಿಗಳನ್ನು ಉದ್ಘಾಟಿಸಿದರು
ಮೈನಸ್ 45 ರಿಂದ ಪ್ಲಸ್ 45 ಡಿಗ್ರಿಗಳವರೆಗೆ, ಬಿ ಎಸ್ ಎಫ್ 'ಮೊದಲ ರಕ್ಷಣಾ ಕವಚ'ವಾಗಿ ತನ್ನ ಕರ್ತವ್ಯವನ್ನು ದೃಢವಾಗಿ ನಿರ್ವಹಿಸುತ್ತಿದೆ— 2000 ಕ್ಕೂ ಹೆಚ್ಚು ಹುತಾತ್ಮರ ತ್ಯಾಗಕ್ಕೆ ಗೌರವ ಸಲ್ಲಿಸುತ್ತಿದೆ
ಜಿ-7 ಮತ್ತು ಜಿ-13 ಗಡಿ ಚೌಕಿಗಳು ಎಂಜಿನಿಯರಿಂಗ್ ನ ಗಮನಾರ್ಹ ಉದಾಹರಣೆಗಳಾಗಿವೆ, ಇಲ್ಲಿ ಬಿ ಎಸ್ ಎಫ್ ಕಠಿಣ ಮತ್ತು ದುರ್ಗಮ ಪ್ರದೇಶದಲ್ಲಿ ಬಲವಾದ ಭದ್ರತಾ ಮೂಲಸೌಕರ್ಯವನ್ನು ಸ್ಥಾಪಿಸಿದೆ
'ಚತುಷ್ಕೋನ ಭದ್ರತಾ ಗ್ರಿಡ್' ನ ಹೊಸ ಮಂತ್ರ: ಸಾರ್ವಜನಿಕರು, ನಾಗರಿಕ ಆಡಳಿತ, ಮಿಲಿಟರಿ ಮತ್ತು ಬಿ ಎಸ್ ಎಫ್ ಒಟ್ಟಾಗಿ ನಿಲ್ಲುತ್ತವೆ; ಈಗ ಇದು ಕೇವಲ 'ಗಡಿ ಭದ್ರತೆ' ಆಗಿರುವುದಿಲ್ಲ, ಬದಲಿಗೆ ಸಮಗ್ರ 'ಪ್ರಾದೇಶಿಕ ಭದ್ರತೆ' ಆಗಿರುತ್ತದೆ
ಮೋದಿ ಸರ್ಕಾರವು ಎಲ್ಲಾ ರಂಗಗಳಲ್ಲೂ 'ಸೋರಿಕೆಯಿಲ್ಲದ ಭದ್ರತಾ ಗ್ರಿಡ್' ಅನ್ನು ನಿರ್ಮಿಸುತ್ತಿದೆ; ಭೌತಿಕ ಬೇಲಿ ನಿರ್ಮಿಸುವುದು ಕಷ್ಟಕರವಾಗಿರುವ ಕಡೆಗಳಲ್ಲಿ ತಾಂತ್ರಿಕ ಬೇಲಿಯನ್ನು ಅಳವಡಿಸುವ ಮೂಲಕ ಭೇದಿಸಲಾಗದ ಭದ್ರತಾ ವಲಯವನ್ನು ಸ್ಥಾಪಿಸುತ್ತಿದೆ
ಕಾವಲು ಗೋಪುರಗಳು, ಸಂಪರ್ಕ ರಸ್ತೆಗಳು, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳು ಮತ್ತು ಆಧುನಿಕ ಬೇಲಿಗಳು—ಮೋದಿ ಸರ್ಕಾರವು ಗಡಿ ಭದ್ರತೆಯ ಚಿತ್ರಣವನ್ನೇ ಬದಲಾಯಿಸುತ್ತಿವೆ
ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರ ರಚನೆಯಾದ ತಕ್ಷಣವೇ, ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಕ್ಕಟ್ಟು ಬಗೆಹರಿಯಿತು; ನಿಗದಿತ ಸಮಯಕ್ಕಿಂತ ಮುಂಚಿತವಾಗಿ—ಮತ್ತು ಕೇವಲ ಒಂದೇ ವಾರದಲ್ಲಿ—ಬೇಲಿ ನಿರ್ಮಾಣಕ್ಕಾಗಿ ಬಿ ಎಸ್ ಎಫ್ ಗೆ ಭೂಮಿಯನ್ನು ಹಸ್ತಾಂತರಿಸಲಾಯಿತು
ಒಂದು ಕಾಲದಲ್ಲಿ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮವಾಗಿದ್ದ ಸರ್ ಕ್ರೀಕ್ ಮತ್ತು ಹರಾಮಿ ನಾಲಾ ಈಗ ಅಭೇದ್ಯವಾಗಿವೆ; ಮುಂದಿನ ಎರಡು ವರ್ಷಗಳಲ್ಲಿ ಈ ಪ್ರದೇಶವನ್ನು ಶಾಶ್ವತವಾಗಿ ಸುರಕ್ಷಿತಗೊಳಿಸಲಾಗುವುದು
ಸಾರ್ವಜನಿಕರಿಗೆ ಬಿ ಎಸ್ ಎಫ್ ನ ಶೌರ್ಯವನ್ನು ಪ್ರದರ್ಶಿಸಲು ಗುಜರಾತ್ ನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಲಾಗಿದೆ; "ನಮ್ಮ ಮಕ್ಕಳು ಬಿ ಎಸ್ ಎಫ್ ಸೇರಿದರೆ ನಮಗೆ ಹೆಮ್ಮೆ ಅನಿಸುತ್ತದೆ" ಎಂದು ಅನೇಕ ತಾಯಂದಿರು ಬರೆದಿದ್ದಾರೆ
ಬಿ ಎಸ್ ಎಫ್ ನ ಕಾರ್ಯಾಚರಣೆಯ ವ್ಯಾಪ್ತಿಗೆ ಹೆಚ್ಚುವರಿ ಪ್ರದೇಶಗಳನ್ನು ಸೇರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ; ತಂತ್ರಜ್ಞಾನದ ಬಳಕೆಯ ಮೂಲಕ ಸಿಬ್ಬಂದಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ
ಪ್ರಕಟಣಾ ದಿನಾಂಕ:
29 MAY 2026 4:53PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಭುಜ್ ನಲ್ಲಿ ಎರಡು ಗಡಿ ಚೌಕಿ (ಬಾರ್ಡರ್ ಔಟ್‌ಪೋಸ್ಟ್) ಗಳನ್ನು ಉದ್ಘಾಟಿಸಿದರು ಮತ್ತು ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಉಪಮುಖ್ಯಮಂತ್ರಿ ಶ್ರೀ ಹರ್ಷ್ ಸಂಘವಿ, ಕೇಂದ್ರ ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನಿರ್ದೇಶಕರು, ಗಡಿ ನಿರ್ವಹಣಾ ಕಾರ್ಯದರ್ಶಿ, ಬಿ ಎಸ್ ಎಫ್ ಮಹಾನಿರ್ದೇಶಕರು ಮತ್ತು ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಬಿ ಎಸ್ ಎಫ್ ಸಿಬ್ಬಂದಿ ಅತ್ಯಂತ ಕಠಿಣ ಹವಾಮಾನ ಮತ್ತು ಕಷ್ಟಕರವಾದ ಭೌಗೋಳಿಕ ಪರಿಸ್ಥಿತಿಗಳಲ್ಲಿ ವಾಸಿಸುತ್ತಾರೆ, ಆದರೆ ಈ ಸ್ಥಳಕ್ಕೆ ಭೇಟಿ ನೀಡಿ ಭಾರತದ ಗಡಿಗಳನ್ನು ಕಾಯುತ್ತಾ ಮುಗುಳ್ನಗೆಯಿಂದ ನಿಂತಿರುವುದನ್ನು ನೋಡಿದಾಗ, ಅದಕ್ಕೆ ಹೋಲಿಸಿದರೆ ನಮ್ಮ ಕೆಲಸವು ತುಂಬಾ ಸರಳವಾಗಿದೆ ಎಂದು ಅನಿಸುತ್ತದೆ ಎಂದರು. ಬಿ ಎಸ್ ಎಫ್ ಸಿಬ್ಬಂದಿಯೇ ದಣಿಯದಿದ್ದರೆ, ನಮಗೆ ಆಯಾಸಗೊಳ್ಳುವ ಯಾವುದೇ ಹಕ್ಕಿಲ್ಲ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು.

ಶ್ರೀ ಅಮಿತ್ ಶಾ ಅವರು, ಬಿ ಎಸ್ ಎಫ್ ತನ್ನ ಆರಂಭದಿಂದ ಕಳೆದ 60 ವರ್ಷಗಳಲ್ಲಿ ದೇಶದ ಅತ್ಯಂತ ಸವಾಲಿನ ಎರಡು ಗಡಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿದೆ ಎಂದು ಹೇಳಿದರು. ಈ ಗಡಿಗಳಲ್ಲಿ ನಿಯೋಜಿಸಲಾದ ಬಿ ಎಸ್ ಎಫ್ ಸಿಬ್ಬಂದಿ -45 ಡಿಗ್ರಿಯಿಂದ +45 ಡಿಗ್ರಿವರೆಗಿನ ತಾಪಮಾನವನ್ನು ಸಹಿಸಿಕೊಂಡು, ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಕೆಲವು ಪ್ರದೇಶಗಳಲ್ಲಿ ಕಚ್ ನ ಕಠಿಣ ಮರುಭೂಮಿ ಮತ್ತು ಸರ್ ಕ್ರೀಕ್ ಹಾಗೂ ಹರಾಮಿ ನಾಲಾದ ಜೌಗು ಪ್ರದೇಶಗಳಿವೆ; ಇನ್ನು ಕೆಲವು ಕಡೆಗಳಲ್ಲಿ ಬಿ ಎಸ್ ಎಫ್ ಸಿಬ್ಬಂದಿ ರಾಜಸ್ಥಾನದ ಮರಳು ದಿಬ್ಬಗಳ ನಡುವೆ ಹೆಚ್ಚುತ್ತಿರುವ ತಾಪಮಾನವನ್ನು ಸಹಿಸಿಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಕಾಶ್ಮೀರದ ಹಿಮಭರಿತ ಶಿಖರಗಳು ಮತ್ತು ಸುಂದರಬನದ ಕಾಡುಗಳಿಂದ ಹಿಡಿದು ಗಂಗಾಸಾಗರದ ತೀರದವರೆಗೆ ಮತ್ತು ಮೇಘಾಲಯ ಹಾಗೂ ಅಸ್ಸಾಂನ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳವರೆಗೆ—ಬಿ ಎಸ್ ಎಫ್ ಕಳೆದ ಆರು ದಶಕಗಳಲ್ಲಿ "ರಕ್ಷಣೆಯ ಮೊದಲ ಕವಚ”ವಾಗಿ ತನ್ನ ಜವಾಬ್ದಾರಿಯನ್ನು ಅತ್ಯದ್ಭುತವಾಗಿ ನಿರ್ವಹಿಸಿದೆ ಎಂದು ಶ್ರೀ ಶಾ ಹೇಳಿದರು. ಈ ಪಡೆಯ ಎರಡು ಸಾವಿರ ಸಿಬ್ಬಂದಿ ದೇಶಕ್ಕಾಗಿ ಸರ್ವೋಚ್ಚ ಬಲಿದಾನ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಭಾರತ ಸರ್ಕಾರ ಮತ್ತು ದೇಶದ 140 ಕೋಟಿ ನಾಗರಿಕರು ಬಿ ಎಸ್ ಎಫ್ ಅನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ ಮತ್ತು ನೆಮ್ಮದಿಯಿಂದ ಮಲಗಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಬಿ ಎಸ್ ಎಫ್ ಸಿಬ್ಬಂದಿ ನಿರ್ವಹಿಸುವ ಕಠಿಣ ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಒಳನೋಟವನ್ನು ನೀಡುವವ ಉದ್ದೇಶದಿಂದ ಬನಸ್ಕಾಂತದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಕಳೆದ ಒಂದು ತಿಂಗಳಲ್ಲೇ 2.50 ಲಕ್ಷಕ್ಕೂ ಹೆಚ್ಚು ಜನರು ಬಿ ಎಸ್ ಎಫ್ ಕರ್ತವ್ಯದ ಸ್ವರೂಪವನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಈ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು. ಆರಂಭದಲ್ಲಿ ಬಿ ಎಸ್ ಎಫ್ ಕೆಲಸದ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯಲು ಪ್ರತಿಕ್ರಿಯೆ ಫಾರ್ಮ್ ಗಳ ಮೂಲಕ ಸಮೀಕ್ಷೆ ನಡೆಸಲಾಗಿತ್ತು ಎಂದು ಶ್ರೀ ಶಾ ಉಲ್ಲೇಖಿಸಿದರು. ಆ ಸಮಯದಲ್ಲಿ, ಅನೇಕ ಮಹಿಳೆಯರು ತಮ್ಮ ಗಂಡು ಮತ್ತು ಹೆಣ್ಣು ಮಕ್ಕಳು ಬೆಳೆದ ನಂತರ ಬಿ ಎಸ್ ಎಫ್ ಗೆ ಸೇರಿದರೆ ತಮಗೆ ಅಪಾರ ಹೆಮ್ಮೆ ಅನಿಸುತ್ತದೆ ಎಂದು ಬರೆದಿದ್ದರು. ದೇಶಕ್ಕಾಗಿ ಇಂತಹ ಕಷ್ಟಕರ ಜೀವನವನ್ನು ನಡೆಸುವುದು ನಿಜಕ್ಕೂ ಒಂದು ಮಹತ್ತರವಾದ ಕಾರ್ಯವಾಗಿದೆ. ಈ ಪ್ರತಿಕ್ರಿಯೆ ಫಾರ್ಮ್ ಅನ್ನು ಈಗ ದೇಶದ ನಾಗರಿಕರಿಗಾಗಿ ಆನ್‌ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.

ತಾವು ಕೇಂದ್ರ ಗೃಹ ಸಚಿವರಾದರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿ ಎಸ್ ಎಫ್ ನ ಪರಿಶೀಲನೆ ನಡೆಸಿದಾಗ, ಹರಾಮಿ ನಾಲಾ ಮತ್ತು ಸರ್ ಕ್ರೀಕ್ ಪ್ರದೇಶವು ಭದ್ರತಾ ಸನ್ನದ್ಧತೆಯ ದೃಷ್ಟಿಯಿಂದ ಸ್ವಲ್ಪ ಹಿಂದುಳಿದಿರುವುದು ಕಂಡುಬಂದಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಎಲ್ಲಾ ರಂಗಗಳಲ್ಲೂ 'ಸೋರಿಕೆಯಿಲ್ಲದ' ಭದ್ರತಾ ಗ್ರಿಡ್ ಅನ್ನು ಸ್ಥಾಪಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಲಾಯಿತು—ಕಾವಲು ಗೋಪುರಗಳು, ಸಂಪರ್ಕ ರಸ್ತೆಗಳು, ಕುಡಿಯುವ ನೀರು ಸರಬರಾಜು, ವೈದ್ಯಕೀಯ ಸೌಲಭ್ಯಗಳು, ವಸತಿ ವ್ಯವಸ್ಥೆಗಳು ಮತ್ತು ಹೊಸ ಬೇಲಿ ನಿರ್ಮಾಣದ ಕೆಲಸಗಳನ್ನು ಪ್ರಾರಂಭಿಸಲಾಯಿತು ಎಂದು ಗೃಹ ಸಚಿವರಾದರು ತಿಳಿಸಿದರು. ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಈ ಪ್ರದೇಶವು ಶತ್ರುಗಳ ದುಷ್ಟ ದೃಷ್ಟಿಯಿಂದ ಶಾಶ್ವತವಾಗಿ ಸುರಕ್ಷಿತವಾಗಲಿದೆ ಎಂದು ಅವರು ಹೇಳಿದರು.
ಸರ್ ಕ್ರೀಕ್ ಮತ್ತು ಭುಜ್ ವಲಯಗಳಲ್ಲಿ ಬಿ ಎಸ್ ಎಫ್ ಸಿಬ್ಬಂದಿ ಬಂಡೆಯಂತೆ ದೃಢವಾಗಿ ನಿಂತಿದ್ದು, ಭುಜ್ ಜನರ ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಸೈನಿಕರು ಕನಿಷ್ಠ ಕಷ್ಟಗಳನ್ನು ಎದುರಿಸುವಂತೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಬಜೆಟ್ ಮಿತಿಗಳು ಎಂದಿಗೂ ಸಮಸ್ಯೆಯಾಗಿಲ್ಲ, ಅಥವಾ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಯಾವುದೇ ಪ್ರಯತ್ನವನ್ನು ಬಾಕಿ ಉಳಿಸಿಲ್ಲ; ಇದರ ಪರಿಣಾಮವಾಗಿ, ಈ ಪ್ರದೇಶದಲ್ಲಿ ಕ್ರಮೇಣ ಬಲವಾದ ಭದ್ರತಾ ಗ್ರಿಡ್ ಅನ್ನು ಸ್ಥಾಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾವು ಇಲ್ಲಿ ಯಶಸ್ವಿಯಾಗಿ ಕಾವಲುಗೋಪುರಗಳನ್ನು ನಿರ್ಮಿಸಿದ್ದೇವೆ ಮತ್ತು ಸಂಪೂರ್ಣ ಬಿಒಪಿ ಪ್ರದೇಶವನ್ನು ನೆಲಮಟ್ಟಕ್ಕಿಂತ ಎತ್ತರಕ್ಕೆ ಏರಿಸಿದ್ದೇವೆ ಎಂದು ಹೇಳಿದರು.
ಬಿ ಎಸ್ ಎಫ್ ಸ್ಥಾಪನೆಯಾದ 60 ನೇ ವರ್ಷದಲ್ಲಿ, ಬಿ ಎಸ್ ಎಫ್ ನ ಗಡಿ ಭದ್ರತೆಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಮುಂಬರುವ ದಿನಗಳಲ್ಲಿ ನಾವು ಚತುಷ್ಕೋನ ಭದ್ರತಾ ಗ್ರಿಡ್ ಅನ್ನು ಸ್ಥಾಪಿಸುತ್ತೇವೆ ಮತ್ತು ಕೇವಲ ಗಡಿ ಭದ್ರತೆಯ ಸಾಂಪ್ರದಾಯಿಕ ವಿಧಾನದ ಬದಲಿಗೆ 'ಪ್ರಾದೇಶಿಕ ಭದ್ರತೆ'ಯ ಹೊಸ ಪರಿಕಲ್ಪನೆಯನ್ನು ಪರಿಚಯಿಸುತ್ತೇವೆ. ಈ ಉಪಕ್ರಮವು ಬಿ ಎಸ್ ಎಫ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರು, ನಾಗರಿಕ ಆಡಳಿತ, ಸ್ಥಳೀಯ ಪೊಲೀಸ್ ಮತ್ತು ಮಿಲಿಟರಿ ನಡುವೆ ಹಂಚಿಕೊಳ್ಳಲಾದ ಪ್ರಾಥಮಿಕ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು. ಸ್ಮಾರ್ಟ್ ಬಾರ್ಡರ್ ಸೆಕ್ಯುರಿಟಿ ಪ್ರಾಜೆಕ್ಟ್ ಅಡಿಯಲ್ಲಿ ಗಡಿಗಳಲ್ಲಿ ಭದ್ರತಾ ಗ್ರಿಡ್ ಗಳನ್ನು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನವು ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯನ್ನು ಒಳಗೊಂಡಿದೆ ಮತ್ತು ಡ್ರೋನ್ ಗಳು, ರಾಡಾರ್ ಗಳು, ಕಾವಲುಗೋಪುರಗಳು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆಯು ಬಲವಾದ ಭದ್ರತಾ ಗ್ರಿಡ್ ರಚನೆಗೆ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಒಮ್ಮೆ ಇದು ಸ್ಥಾಪನೆಯಾದ ನಂತರ, ನಮ್ಮ ಗಡಿಗಳನ್ನು ಉಲ್ಲಂಘಿಸಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ನಾವು ಬಿ ಎಸ್ ಎಫ್ ಗೆ ಹೆಚ್ಚುವರಿ ಜವಾಬ್ದಾರಿಯ ಪ್ರದೇಶಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು. ನಮ್ಮ ಭದ್ರತಾ ಗ್ರಿಡ್ ನಲ್ಲಿನ ಅತ್ಯಂತ ಮಹತ್ವದ ಲೋಪವೆಂದರೆ ಪಶ್ಚಿಮ ಬಂಗಾಳದ ಗಡಿಯಲ್ಲಿ ಅಪೂರ್ಣವಾಗಿದ್ದ ಬೇಲಿ ನಿರ್ಮಾಣವಾಗಿತ್ತು ಎಂದು ಅವರು ಹೇಳಿದರು. ಭೌತಿಕ ಪರಿಸ್ಥಿತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಗಡಿ ಬೇಲಿ ನಿರ್ಮಾಣಕ್ಕೆ ಭೂಪ್ರದೇಶವು ಪೂರಕವಾಗಿದ್ದ ಪ್ರದೇಶಗಳಲ್ಲೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ನಾವು ಈ ಹಿಂದೆ ತೊಂದರೆಗಳನ್ನು ಎದುರಿಸಿದ್ದೆವು. ಆದರೆ, ಇತ್ತೀಚೆಗೆ—ಪಶ್ಚಿಮ ಬಂಗಾಳದ ಜನರ ಆಶೀರ್ವಾದದೊಂದಿಗೆ—ನಮ್ಮ ಪಕ್ಷವು ರಾಜ್ಯದಲ್ಲಿ ಸರ್ಕಾರವನ್ನು ರಚಿಸಿತು; ಅಧಿಕಾರ ವಹಿಸಿಕೊಂಡ ಕೇವಲ ಒಂದು ವಾರದೊಳಗೆ, ಮುಖ್ಯಮಂತ್ರಿಯವರು ಗಡಿ ಬೇಲಿಗಾಗಿ ಭೂಮಿಯನ್ನು ಮಂಜೂರು ಮಾಡಲು ತಾತ್ವಿಕ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಕೆಲವು ಭೂಮಿಯನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಬೇಲಿ ನಿರ್ಮಾಣ ಪೂರ್ಣಗೊಂಡ ನಂತರ ನಾವು ನುಸುಳುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಅವರು ಪ್ರತಿಪಾದಿಸಿದರು. ಇದಲ್ಲದೆ, ಕಾಡು ಪ್ರದೇಶಗಳು ಮತ್ತು ನದಿ ಮಾರ್ಗಗಳ ಮೂಲಕ ನುಸುಳುವಿಕೆಯನ್ನು ತಡೆಯಲು ಈ ಮಾರ್ಗಗಳಲ್ಲಿ ತಾಂತ್ರಿಕ ಬೇಲಿಯನ್ನು ಅಳವಡಿಸುವ ಕೆಲಸವನ್ನು ವೇಗಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಿ ಎಸ್ ಎಫ್ ಸಿಬ್ಬಂದಿಯ ಶೌರ್ಯ, ಧೈರ್ಯ ಮತ್ತು ಕರ್ತವ್ಯದ ಮೇಲಿನ ಅಚಲ ಶ್ರದ್ಧೆಯಿಂದಾಗಿ ಇಡೀ ಗಡಿಯು ಸುರಕ್ಷಿತವಾಗಲಿದೆ ಎಂದು ಅವರು ಹೇಳಿದರು.

ಇಡೀ ದೇಶವು ಬಿ ಎಸ್ ಎಫ್ ಸಿಬ್ಬಂದಿಯ ಮನೋಭಾವವನ್ನು ಗೌರವಿಸುತ್ತದೆ ಮತ್ತು ಅವರಿಗೆ ನಮನ ಸಲ್ಲಿಸುತ್ತದೆ. ಅವರಿಂದಾಗಿಯೇ ಇಂದು ಗುಜರಾತ್ ನ ಆ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಕೇಂದ್ರ ಗೃಹ ಸಚಿವರಾದರು ತಿಳಿಸಿದರು.
*****
(ಪ್ರಕಟಣೆ ಐ.ಡಿ.: 2266872)
ವಿಸಿಟರ್ ಕೌಂಟರ್ : 6