ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಮಾಧ್ಯಮಗಳಲ್ಲಿ ಭವಿಷ್ಯದ ಎಐ ಸಾಮರ್ಥ್ಯಗಳನ್ನು ನಿರ್ಮಿಸಲು ಐಐಎಂಸಿ ಯಿಂದ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಎಐ ಅಕಾಡೆಮಿ ಪ್ರಾರಂಭ


ಎಐ ವೇಗ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಬಲ್ಲದು, ಆದರೆ ಎಐ ಯುಗದಲ್ಲಿ ಮಾನವ ನಿರ್ಧಾರ, ನಿಖರತೆ ಮತ್ತು ಸಂಪಾದಕೀಯ ಜವಾಬ್ದಾರಿಗಳು ಕೇಂದ್ರಸ್ಥಾನದಲ್ಲಿರಬೇಕು: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ

23 ನಗರಗಳ 110 ಕ್ಕೂ ಹೆಚ್ಚು ನ್ಯೂಸ್‌ ರೂಮ್‌ ಗಳು ಮತ್ತು ಮಾಧ್ಯಮ ವೃತ್ತಿಪರರಿಗೆ ಎಐ ಕೌಶಲ್ಯ ತರಬೇತಿ ಕಾರ್ಯಕ್ರಮದ ಯಶಸ್ವಿ ಮುಕ್ತಾಯದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾರಂಭ

ಪ್ರಕಟಣಾ ದಿನಾಂಕ: 29 MAY 2026 5:16PM by PIB Bengaluru

ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ (ಐಐಎಂಸಿ), ದೇಶದಲ್ಲಿ ಎಐ ಆಧಾರಿತ ಮಾಧ್ಯಮ ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿಯನ್ನು ಬಲಪಡಿಸುವ ಉದ್ದೇಶದ ಪ್ರಮುಖ ಉಪಕ್ರಮವಾದ ಎಐಎಂಇ ಅಕಾಡೆಮಿ (ಎಐ ಅಕಾಡೆಮಿ ಫಾರ್ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್) ಅನ್ನು ಇಂದು ಪ್ರಾರಂಭಿಸಿದೆ. ನವದೆಹಲಿಯ ಐಐಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಐಐಎಂಸಿ ಕುಲಪತಿ ಡಾ. ಪ್ರಗ್ಯಾ ಪಾಲಿವಾಲ್ ಗೌರ್ ಮತ್ತು ಗೂಗಲ್ ಡೀಪ್‌ಮೈಂಡ್ ಇಂಡಿಯಾದ ಹಿರಿಯ ನಿರ್ದೇಶಕರಾದ ಡಾ. ಮನೀಶ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಈ ಅಕಾಡೆಮಿಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವು 10 ವಾರಗಳ ಹೈಬ್ರಿಡ್ ಎಐ ಕೌಶಲ್ಯ ತರಬೇತಿ ಕಾರ್ಯಕ್ರಮದ ಯಶಸ್ವಿ ಮುಕ್ತಾಯದ ಸಂಭ್ರಮಾಚರಣೆಯೂ ಆಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ 23 ನಗರಗಳು ಮತ್ತು 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಪ್ರತಿನಿಧಿಸುವ, 100 ಕ್ಕೂ ಹೆಚ್ಚು ನ್ಯೂಸ್‌ ರೂಮ್‌ ಗಳು ಮತ್ತು ಮಾಧ್ಯಮ ಕಾಲೇಜುಗಳ 110 ಕ್ಕೂ ಹೆಚ್ಚು ನ್ಯೂಸ್‌ ರೂಮ್ ವೃತ್ತಿಪರರು, ಮಾಧ್ಯಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಎಐಎಂಇ ಅಕಾಡೆಮಿ: ಒಂದು ಸಾಂಸ್ಥಿಕ ಮೈಲಿಗಲ್ಲು

ಎಐಎಂಇ ಅಕಾಡೆಮಿಯನ್ನು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಎಐ ಗಾಗಿ ಒಂದು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನಾಗಿ ರೂಪಿಸಲು ಯೋಜಿಸಲಾಗಿದೆ. ಐದು ಸ್ತಂಭಗಳ ಚೌಕಟ್ಟಿನ ಮೇಲೆ ನಿರ್ಮಿತವಾಗಿರುವ ಈ ಅಕಾಡೆಮಿಯು — ಸಾಮರ್ಥ್ಯ ವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ಇನ್‌ಕ್ಯುಬೇಶನ್, ಜವಾಬ್ದಾರಿಯುತ ಎಐ ನೀತಿ ಅಭಿವೃದ್ಧಿ ಹಾಗೂ ಕಾರ್ಯತಂತ್ರದ ಸಹಯೋಗ — ಐಐಎಂಸಿ ಯನ್ನು ಸಾಂಪ್ರದಾಯಿಕ ಮಾಧ್ಯಮ ತರಬೇತಿಯಿಂದ ಭವಿಷ್ಯದ ಮಾಧ್ಯಮ ಸಾಮರ್ಥ್ಯದ ಕಡೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಈ ಅಕಾಡೆಮಿಯು ಭಾರತ-ನಿರ್ದಿಷ್ಟ ತರಬೇತಿ ಮಾಡ್ಯೂಲ್‌ ಗಳನ್ನು ಅಭಿವೃದ್ಧಿಪಡಿಸಲು, ಪತ್ರಿಕೋದ್ಯಮದಲ್ಲಿ ಎಐ ಬಳಕೆಯ ಕುರಿತು ಅನ್ವಯಿಕ ಸಂಶೋಧನೆಗೆ ಬೆಂಬಲ ನೀಡಲು, ನ್ಯೂಸ್‌ ರೂಮ್‌ ಗಳಲ್ಲಿ ಎಐ ಅಳವಡಿಕೆಯ ಪದ್ಧತಿಗಳನ್ನು ದಾಖಲಿಸಲು ಮತ್ತು ಒಟ್ಟಾರೆ ಭಾರತೀಯ ಮಾಧ್ಯಮ ಪರಿಸರ ವ್ಯವಸ್ಥೆಯಲ್ಲಿ ಎಐ ನ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಉದ್ದೇಶಿಸಿದೆ.

ನವದೆಹಲಿ, ಧೆಂಕನಲ್, ಜಮ್ಮು, ಐಜ್ವಾಲ್, ಅಮರಾವತಿ ಮತ್ತು ಕೊಟ್ಟಾಯಂನಲ್ಲಿರುವ ತನ್ನ ಆರು ಕೇಂದ್ರಗಳೊಂದಿಗೆ ಐಐಎಂಸಿ, ಭಾರತದಾದ್ಯಂತ ಭಾಷಾ-ನಿರ್ದಿಷ್ಟ ಎಐ ಸಾಮರ್ಥ್ಯವನ್ನು ನಿರ್ಮಿಸಲು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಅಕಾಡೆಮಿಯು ಬಹುಭಾಷಾ ಸಂವಹನ, ಸಾರ್ವಜನಿಕ ಸೇವಾ ಪ್ರಸಾರ, ಗ್ರಾಮೀಣ ಪ್ರೇಕ್ಷಕರು ಮತ್ತು ಪ್ರಜಾಪ್ರಭುತ್ವದ ವೈವಿಧ್ಯತೆ ಸೇರಿದಂತೆ ಭಾರತೀಯ ವಾಸ್ತವಗಳನ್ನು ಎಐ ಮತ್ತು ಮಾಧ್ಯಮದ ಜಾಗತಿಕ ಚರ್ಚೆಯ ಮುನ್ನೆಲೆಗೆ ತರುವ ನಿರೀಕ್ಷೆಯಿದೆ.

ಪ್ರಮಾಣಪತ್ರ ಪ್ರದಾನ ಸಮಾರಂಭ: ಎಐ ಕೌಶಲ್ಯ ಸಾಧಕರಿಗೆ ಮನ್ನಣೆ

ಘಟಿಕೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಪ್ರಮಾಣಪತ್ರ ಪ್ರದಾನ ಸಮಾರಂಭದಲ್ಲಿ ದೂರದರ್ಶನ, ಆಕಾಶವಾಣಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ), ಪ್ರ ಕಟಣಾ ವಿಭಾಗಮತ್ತು ಐಐಎಂಸಿ ಯ ಅಭ್ಯರ್ಥಿಗಳಿಗೆ ಎಐ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಧಿಕೃತವಾಗಿ ಪ್ರಮಾಣಪತ್ರ ನೀಡಲಾಯಿತು.

ಈ ಕಾರ್ಯಕ್ರಮವು ಸರ್ಕಾರಿ ಸಾರ್ವಜನಿಕ ಸೇವಾ ಸಂಸ್ಥೆಗಳು ಮತ್ತು ಖಾಸಗಿ ನ್ಯೂಸ್‌ ರೂಮ್‌ ಗಳಿಂದ ಬಂದಿದ್ದ ಭಾಗವಹಿಸುವವರಿಗೆ ಮೂಲಭೂತ ಎಐ ಸಾಕ್ಷರತೆ ಮತ್ತು ಗೂಗಲ್‌ ನ ಎಐ ಪರಿಕರಗಳಾದ ನೋಟ್‌ ಬುಕ್‌ ಎಲ್‌ ಎಂ, ಜೆಮಿನಿ, ಎಐ ಸ್ಟುಡಿಯೋ ಮತ್ತು ಪಿನ್‌ಪಾಯಿಂಟ್‌ ಗಳಲ್ಲಿ ಪ್ರಾಯೋಗಿಕ ಪ್ರಾವೀಣ್ಯತೆಯನ್ನು ನೀಡಿತು.

ಕಾರ್ಯದರ್ಶಿಯವರ ಭಾಷಣ: ಎಐ ಒಂದು ಸಹಾಯಕ, ಪರ್ಯಾಯವಲ್ಲ

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಭಾಗವಹಿಸಿದವರೆಲ್ಲರನ್ನೂ ಅಭಿನಂದಿಸಿದರು ಮತ್ತು ಭಾರತೀಯ ಮಾಧ್ಯಮಗಳಿಗೆ ಈ ಉಪಕ್ರಮದ ಪರಿವರ್ತಕ ಮಹತ್ವವನ್ನು ಒತ್ತಿಹೇಳಿದರು.

"ಇಂದಿನ ಸಂದರ್ಭವು ಕೇವಲ ಪ್ರಮಾಣಪತ್ರ ಪ್ರದಾನ ಸಮಾರಂಭವಲ್ಲ. ಇದು ಭಾರತೀಯ ಮಾಧ್ಯಮ ಸಂಸ್ಥೆಗಳು ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿರುವ ದೊಡ್ಡ ಪರಿವರ್ತನೆಯ ಸಂಕೇತವಾಗಿದೆ. ಮಾಧ್ಯಮದ ಮೇಲೆ ಎಐ ಪ್ರಭಾವ ಬೀರುತ್ತದೆಯೇ ಎಂಬುದು ನಮ್ಮ ಮುಂದಿರುವ ನಿಜವಾದ ಪ್ರಶ್ನೆಯಲ್ಲ; ಆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನಮ್ಮ ಪತ್ರಕರ್ತರು, ಸಂಪಾದಕರು, ಮಾಧ್ಯಮ ಶಿಕ್ಷಕರು ಮತ್ತು ಸಾರ್ವಜನಿಕ ಸಂವಹನ ವೃತ್ತಿಪರರು ಎಐ ಅನ್ನು ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಭಾರತ-ಕೇಂದ್ರಿತ ದೃಷ್ಟಿಕೋನದೊಂದಿಗೆ ಹೇಗೆ ರೂಪಿಸುತ್ತಾರೆ ಎಂಬುದು ಹೆಚ್ಚು ಪ್ರಮುಖವಾದ ಪ್ರಶ್ನೆಯಾಗಿದೆ" ಎಂದು ಅವರು ಹೇಳಿದರು.

ಭಾರತದ ಸಾರ್ವಜನಿಕ ಸೇವಾ ಮಾಧ್ಯಮ ಸಂಸ್ಥೆಗಳಾದ ದೂರದರ್ಶನ, ಆಕಾಶವಾಣಿ, ಪಿಐಬಿ ಮತ್ತು ಪ್ರಕಟಣಾ ವಿಭಾಗಗಳು ವಿವಿಧ ಭಾಷೆಗಳು ಮತ್ತು ಭೌಗೋಳಿಕ ಪ್ರದೇಶಗಳಾದ್ಯಂತ ಬೃಹತ್ ಪ್ರಮಾಣದಲ್ಲಿ ಸಂವಹನ ನಡೆಸುವ ವಿಶಿಷ್ಟ ಜವಾಬ್ದಾರಿಯನ್ನು ಹೊಂದಿವೆ, ಆದ್ದರಿಂದ ಅವುಗಳ ಎಐ ಸನ್ನದ್ಧತೆ ವಿಶೇಷವಾಗಿ ಅತ್ಯಗತ್ಯ ಎಂದು ಕಾರ್ಯದರ್ಶಿ ಒತ್ತಿಹೇಳಿದರು.

"ಎಐ ಅನ್ನು ಸಹಾಯಕವಾಗಿ ಬಳಸಬಹುದೇ ಹೊರತು ಸಂಪಾದಕೀಯ ಜವಾಬ್ದಾರಿಗೆ ಪರ್ಯಾಯವಾಗಿ ಅಲ್ಲ. ಇದು ವೇಗವನ್ನು ಸುಧಾರಿಸಬಹುದು, ಆದರೆ ನಿಖರತೆಯ ರಾಜಿಯಲ್ಲಲ್ಲ. ಇದು ಸೃಜನಶೀಲತೆಯನ್ನು ಬೆಂಬಲಿಸಬಹುದು, ಆದರೆ ವಿಶ್ವಾಸಾರ್ಹತೆಯ ರಾಜಿಯಲ್ಲಲ್ಲ. ಎಐ ಯುಗದಲ್ಲಿ ಮಾನವ ನಿರ್ಧಾರದ ಪಾತ್ರವು ಇನ್ನಷ್ಟು ಪ್ರಮುಖವಾಗುತ್ತದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರ ರಾಷ್ಟ್ರೀಯ ನಿರ್ದೇಶನಗಳಾದ 'ಮೇಕ್ ಎಐ ಇನ್ ಇಂಡಿಯಾ' (ಭಾರತದಲ್ಲಿ ಎಐ ನಿರ್ಮಿಸಿ) ಮತ್ತು 'ಮೇಕ್ ಎಐ ವರ್ಕ್ ಫಾರ್ ಇಂಡಿಯಾ' (ಎಐ ಭಾರತಕ್ಕಾಗಿ ಕೆಲಸ ಮಾಡುವಂತೆ ಮಾಡಿ) ಎಂಬುದಕ್ಕೆ ಅನುಗುಣವಾಗಿ, ಎಐ ಗೆ ಸಂಬಂಧಿಸಿದಂತೆ ಸರ್ಕಾರದ ವಿಶಾಲವಾದ ದೃಷ್ಟಿಕೋನವು "ಸಕಾರಾತ್ಮಕ, ಸಕ್ರಿಯಗೊಳಿಸುವ ಮತ್ತು ಜವಾಬ್ದಾರಿಯುತ"ವಾಗಿದೆ ಎಂದು ಕಾರ್ಯದರ್ಶಿಯವರು ವಿವರಿಸಿದರು.

ಎಐ ಕೌಶಲ್ಯ ತರಬೇತಿ ಕಾರ್ಯಕ್ರಮದ ಕುರಿತು

ಗೂಗಲ್ ನ್ಯೂಸ್ ಇನಿಶಿಯೇಟಿವ್ ಎಐ ಕೌಶಲ್ಯ ಕಾರ್ಯಕ್ರಮವು ಗೂಗಲ್ ಸಹಭಾಗಿತ್ವದಲ್ಲಿ ಮತ್ತು 'ಹೌ ಇಂಡಿಯಾ ಲೈವ್ಸ್' ತರಬೇತಿ ಬೆಂಬಲದೊಂದಿಗೆ ಐಐಎಂಸಿ ಪ್ರಾರಂಭಿಸಿದ 10 ವಾರಗಳ ಹೈಬ್ರಿಡ್ ಕಾರ್ಯಕ್ರಮವಾಗಿದೆ. ಇದು ಖಾಸಗಿ ಮತ್ತು ಸರ್ಕಾರಿ ವಲಯಗಳೆರಡನ್ನೂ ಒಳಗೊಂಡಂತೆ ಮುದ್ರಣ, ಡಿಜಿಟಲ್, ಪ್ರಸಾರ, ಪ್ರಾದೇಶಿಕ ಮತ್ತು ಸ್ಥಳೀಯ ನ್ಯೂಸ್‌ ರೂಮ್‌ ಗಳ ಭಾಗವಹಿಸುವವರನ್ನು ಒಂದೆಡೆ ತಂದಿತ್ತು.

ಕಾರ್ಯಕ್ರಮದ ಮುಖ್ಯಾಂಶಗಳು:

  • 23 ನಗರಗಳು ಮತ್ತು 10 ಕ್ಕೂ ಹೆಚ್ಚು ಭಾಷೆಗಳಿಂದ 110+ ಭಾಗವಹಿಸುವವರು
  • 100 ಕ್ಕೂ ಹೆಚ್ಚು ನ್ಯೂಸ್‌ ರೂಮ್‌ ಗಳು, ಮಾಧ್ಯಮ ಕಾಲೇಜುಗಳು ಮತ್ತು ಸಾರ್ವಜನಿಕ ಸಂವಹನ ಸಂಸ್ಥೆಗಳು
  • ಪ್ರತಿ ಭಾಗವಹಿಸುವವರಿಗೆ 40 ಗಂಟೆಗಳಿಗೂ ಹೆಚ್ಚಿನ ಎಐ ತರಬೇತಿ ಮತ್ತು 1:1 ಮಾರ್ಗದರ್ಶನ
  • 170 ಕ್ಕೂ ಹೆಚ್ಚು ಎಐ-ಚಾಲಿತ ಯೋಜನೆಗಳು ಮತ್ತು ಪ್ರಕಟಿತ ಕೃತಿಗಳು
  • 50 ಕ್ಕೂ ಹೆಚ್ಚು ವೈಬ್ ಕೋಡಿಂಗ್ ಅಪ್ಲಿಕೇಶನ್‌ ಗಳು (ಭಾಗವಹಿಸುವವರು ಸಿದ್ಧಪಡಿಸಿದ ಆ್ಯಪ್‌ ಗಳು)
  • ದೇಶಾದ್ಯಂತ ಇರುವ 6 ಐಐಎಂಸಿ ಕೇಂದ್ರಗಳ ಮೂಲಕ ವ್ಯಾಪಕ ಸಂಪರ್ಕ ಕಾರ್ಯಕ್ರಮ

 

****


(ಪ್ರಕಟಣೆ ಐ.ಡಿ.: 2266787) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Assamese , Tamil , Malayalam