|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಹಿತಿ ಸಭೆ
ದೇಶದಲ್ಲಿ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಸ್ಥಿತಿ ಉತ್ತಮವಾಗಿದೆ; ಅಗತ್ಯಕ್ಕಿಂತಲೂ ನಿರಂತರವಾಗಿ ಹೆಚ್ಚಿದೆ ಲಭ್ಯತೆ ಕಳೆದ 4 ದಿನಗಳಲ್ಲಿ ಸುಮಾರು 1.66 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ಗೆ ಎದುರಾಗಿ ಸುಮಾರು 1.72 ಕೋಟಿ ಸಿಲಿಂಡರ್‌ಗಳ ವಿತರಣೆ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳಿಂದ (PSU OMCs) 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳಿಗಾಗಿ ಸುಮಾರು 15,400 ಜಾಗೃತಿ ಶಿಬಿರಗಳ ಆಯೋಜನೆ; ಏಪ್ರಿಲ್ 3, 2026 ರಿಂದ ಈ ಶಿಬಿರಗಳ ಮೂಲಕ 2.45 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಮಾರಾಟ ಮಾರ್ಚ್ 2026 ರಿಂದ ಸುಮಾರು 7.99 ಲಕ್ಷ ಪಿಎನ್‌ಜಿ (PNG) ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಮತ್ತು ಹೆಚ್ಚುವರಿ 2.87 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯ ಸೃಜನೆ; ಒಟ್ಟು ಸಂಪರ್ಕಗಳ ಸಂಖ್ಯೆ 10.86 ಲಕ್ಷಕ್ಕೆ ಏರಿಕೆ ಪಶ್ಚಿಮ ಏಷ್ಯಾ ವಲಯದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಂದ ಅಲ್ಲಿನ ಭಾರತೀಯ ಸಮುದಾಯದ ಸದಸ್ಯರು ಮತ್ತು ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ; ಅವರ ಕ್ಷೇಮ ಮತ್ತು ಕಲ್ಯಾಣದ ಖಾತರಿ
ಪ್ರಕಟಣಾ ದಿನಾಂಕ:
25 MAY 2026 6:16PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ಅಪ್‌ಡೇಟ್‌ಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಮಾಧ್ಯಮ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು, ಇಂಧನ ಲಭ್ಯತೆ ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ದೇಶದಲ್ಲಿ ರಸಗೊಬ್ಬರಗಳ ಲಭ್ಯತೆ ಮತ್ತು ದಾಸ್ತಾನು ಸ್ಥಿತಿಯ ಕುರಿತು ವಿವರಗಳನ್ನು ಹಂಚಿಕೊಂಡಿದೆ.
ರಸಗೊಬ್ಬರ ದಾಸ್ತಾನು ಸ್ಥಿತಿ ಮತ್ತು ಲಭ್ಯತೆ
ಭಾರತದ ರಸಗೊಬ್ಬರ ಭದ್ರತೆಯು ಬಲವಾಗಿದೆ, ಸ್ಥಿರವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ; ಎಲ್ಲಾ ಪ್ರಮುಖ ರಸಗೊಬ್ಬರಗಳ ಒಟ್ಟಾರೆ ಲಭ್ಯತೆಯು ನಿರಂತರವಾಗಿ ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದು ರಸಗೊಬ್ಬರ ಇಲಾಖೆ ತಿಳಿಸಿದೆ. ದೇಶದಲ್ಲಿ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಸ್ಥಿತಿ ತೃಪ್ತಿಕರವಾಗಿದೆ.
- 2026 ರ ಮುಂಗಾರು ಋತುವಿಗೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (DA&FW) ಒಟ್ಟು ರಸಗೊಬ್ಬರ ಅಗತ್ಯವನ್ನು 390.54 ಲಕ್ಷ ಮೆಟ್ರಿಕ್ ಟನ್ (LMT) ಎಂದು ಅಂದಾಜಿಸಿದೆ. ಈ ಅಗತ್ಯಕ್ಕೆ ಎದುರಾಗಿ ಪ್ರಸ್ತುತ ದಾಸ್ತಾನು ಸರಿಸುಮಾರು 200.12 ಲಕ್ಷ ಮೆಟ್ರಿಕ್ ಟನ್ ಇದ್ದು, ಇದು ಒಟ್ಟು ಅಗತ್ಯದ ಶೇಕಡಾ 51 ಕ್ಕಿಂತ ಹೆಚ್ಚಾಗಿದೆ. ಇದು ಸಾಮಾನ್ಯವಾಗಿ ಇರಬೇಕಾದ ಶೇಕಡಾ 33 ರ ಮೀಸಲು ಮಟ್ಟಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಈ ದೃಢವಾದ ಪೂರೈಕೆಯು ಸರ್ಕಾರದ ಸುಧಾರಿತ ಯೋಜನೆ, ಮುಂಗಡ ದಾಸ್ತಾನು ಮತ್ತು ದಕ್ಷ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ.
- ಇತ್ತೀಚಿನ ಬಿಕ್ಕಟ್ಟಿನ ಪರಿಸ್ಥಿತಿಯ ನಂತರ, ಆಮದು ಮತ್ತು ದೇಶೀಯ ಉತ್ಪಾದನೆಯ ಸಂಯೋಜನೆಯ ಮೂಲಕ ಒಟ್ಟು ಸರಿಸುಮಾರು 117.6 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಒಟ್ಟಾರೆ ಲಭ್ಯತೆಗೆ ಯಶಸ್ವಿಯಾಗಿ ಸೇರಿಸಲಾಗಿದೆ.
- ಬಿಕ್ಕಟ್ಟಿನ ನಂತರ ರಸಗೊಬ್ಬರಗಳ ದೇಶೀಯ ಉತ್ಪಾದನೆ ಮತ್ತು ಆಮದಿನ ವಿವರಗಳು ಈ ಕೆಳಗಿನಂತಿವೆ (ಲಕ್ಷ ಟನ್‌ಗಳಲ್ಲಿ):
- ಯುರಿಯಾ: ದೇಶೀಯ ಉತ್ಪಾದನೆ 57.66 ಮತ್ತು ಭಾರತೀಯ ಬಂದರುಗಳಿಗೆ ತಲುಪಿದ ಆಮದು 13.60
- ಡಿಎಪಿ (DAP): ದೇಶೀಯ ಉತ್ಪಾದನೆ 7.93 ಮತ್ತು ಭಾರತೀಯ ಬಂದರುಗಳಿಗೆ ತಲುಪಿದ ಆಮದು 0.88
- ಎನ್‌ಪಿಕೆಗಳು (NPKs): ದೇಶೀಯ ಉತ್ಪಾದನೆ 18.71 ಮತ್ತು ಭಾರತೀಯ ಬಂದರುಗಳಿಗೆ ತಲುಪಿದ ಆಮದು 4.44
- ಎಸ್‌ಎಸ್‌ಪಿ (SSP): ದೇಶೀಯ ಉತ್ಪಾದನೆ 10.70, ಯಾವುದೇ ಆಮದು ಇಲ್ಲ
- ಎಂಒಪಿ (MOP): ಯಾವುದೇ ದೇಶೀಯ ಉತ್ಪಾದನೆ ಇಲ್ಲ, ಭಾರತೀಯ ಬಂದರುಗಳಿಗೆ ತಲುಪಿದ ಆಮದು 3.68
- ಒಟ್ಟು: ಒಟ್ಟು ದೇಶೀಯ ಉತ್ಪಾದನೆ 95 ಮತ್ತು ಭಾರತೀಯ ಬಂದರುಗಳಿಗೆ ತಲುಪಿದ ಒಟ್ಟು ಆಮದು 22.60 ಆಗಿರುತ್ತದೆ.
- ಗರಿಷ್ಠ ಬಳಕೆಯ ಹಂಗಾಮಿನಲ್ಲಿ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತವು ಹಾರ್ಮುಜ್ ಜಲಸಂಧಿ (SOH) ಪ್ರದೇಶದ ಹೊರಗಿನಿಂದ ಸುಮಾರು 13.5 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 9 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಗಳನ್ನು (ಎಎಸ್ ಸೇರಿದಂತೆ) ಯಶಸ್ವಿಯಾಗಿ ಕಾಯ್ದಿರಿಸಿದೆ. ಈ ಸರಕುಗಳು ಮೇ ಮತ್ತು ಜೂನ್ ತಿಂಗಳಲ್ಲಿ ಭಾರತೀಯ ಬಂದರುಗಳಿಗೆ ತಲುಪಲು ನಿರ್ಧರಿಸಲಾಗಿದೆ.
- ರಸಗೊಬ್ಬರಗಳ ಉತ್ಪಾದನೆಗೆ ಅಗತ್ಯವಿರುವ ಪ್ರಮುಖ ಕಚ್ಚಾ ವಸ್ತುಗಳ, ಅಂದರೆ ಯುರಿಯಾ ಮತ್ತು ಪಿ ಆಂಡ್ ಕೆ ರಸಗೊಬ್ಬರಗಳ ಲಭ್ಯತೆಯನ್ನು ರಸಗೊಬ್ಬರ ಇಲಾಖೆಯು ನಿಯಮಿತವಾಗಿ ಪರಿಶೀಲಿಸುತ್ತಿದೆ. ಇದಲ್ಲದೆ, ಉದ್ಯಮದ ಕಾರ್ಯಾಚರಣೆಯ ದಕ್ಷತೆಯನ್ನು ಬೆಂಬಲಿಸಲು, ಇಲಾಖೆಯು ಕಂಪನಿಗಳು ಸಲ್ಲಿಸುವ ಎಲ್ಲಾ ಸಬ್ಸಿಡಿ ಬಿಲ್‌ಗಳನ್ನು ವಾರಕ್ಕೊಮ್ಮೆ ನಿಯಮಿತವಾಗಿ ಪಾವತಿಸುತ್ತಿದೆ.
- ಪೂರೈಕೆ ಸರಪಳಿ ಸಮಸ್ಯೆಗಳನ್ನು ಎದುರಿಸಲು, ಕಾರ್ಯದರ್ಶಿಗಳ ಅಧಿಕಾರಯುಕ್ತ ಸಮಿತಿಯ (EGoS) 9 ಸಭೆಗಳನ್ನು ಈ ದಿನಾಂಕದವರೆಗೆ ನಡೆಸಲಾಗಿದೆ. ರಸಗೊಬ್ಬರಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ಸಭೆಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು ಹೆಚ್ಚಿನ ಸವಾಲುಗಳನ್ನು ಇಗೊಎಸ್ (EGoS) ಯಶಸ್ವಿಯಾಗಿ ಪರಿಹರಿಸಿದೆ.
- ಈ ಸಮಗ್ರ ಕ್ರಮಗಳ ಯಶಸ್ಸನ್ನು ಎತ್ತಿ ತೋರಿಸುತ್ತಾ ಸಚಿವಾಲಯವು ಹೀಗೆ ತಿಳಿಸಿದೆ:
"ಭಾರತ ಸರ್ಕಾರದ ಪರಿಣಾಮಕಾರಿ ಪ್ರಯತ್ನಗಳಿಂದ ದೇಶದಲ್ಲಿ ದೇಶೀಯ ಉತ್ಪಾದನೆಯಲ್ಲಿ ನಿರಂತರ ವೃದ್ಧಿಯಾಗುತ್ತಿದೆ. ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಇದರಿಂದ ರೈತರ ಅಗತ್ಯತೆಗಳ ನಿಯಮಿತ ಪೂರೈಕೆ ಖಚಿತಪಡಿಸಲಾಗುತ್ತಿದೆ ಮತ್ತು ಅವರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರಗಳನ್ನು ಸುಲಭವಾಗಿ ಒದಗಿಸಲಾಗುತ್ತಿದೆ."
ಇಂಧನ ಪೂರೈಕೆ ಮತ್ತು ಲಭ್ಯತೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ತಡೆರಹಿತ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಅದು ವಿವರಿಸಿದೆ. ಈ ಸಂದರ್ಭದಲ್ಲಿ ಈ ಕೆಳಗಿನ ಅಂಶಗಳನ್ನು ಸಚಿವಾಲಯವು ಹಂಚಿಕೊಂಡಿದೆ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯನ್ನು ಆತಂಕದಿಂದ ಮುಗಿಬಿದ್ದು ಖರೀದಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
- ವದಂತಿಗಗಳಿಂದ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
- ಎಲ್‌ಪಿಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ವೇದಿಕೆಗಳನ್ನು ಬಳಸಲು ಮತ್ತು ವಿತರಕರ ಬಳಿ ಖುದ್ದಾಗಿ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
- ನಾಗರಿಕರು ಪಿಎನ್‌ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಸ್ಟೌವ್‌ಗಳಂತಹ ಪರ್ಯಾಯ ಇಂಧನ ಮೂಲಗಳನ್ನು ಬಳಸಲು ಪ್ರೋತ್ಸಾಹಿಸಲಾಗಿದೆ.
- ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.
ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
- ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಗೃಹ ಬಳಕೆಯ ಎಲ್‌ಪಿಜಿ, ಗೃಹ ಬಳಕೆಯ ಪಿಎನ್‌ಜಿ ಮತ್ತು ಸಿಎನ್‌ಜಿ (ಸಾರಿಗೆ) ಗೆ ಶೇಕಡಾ 100 ರಷ್ಟು ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
- ವಾಣಿಜ್ಯ ಬಳಕೆಯ ಎಲ್‌ಪಿಜಿಗಾಗಿ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಮುಂತಾದ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ಟಿಎಲ್ (FTL) ಪೂರೈಕೆಯನ್ನು ಮಾರ್ಚ್ 2 ಮತ್ತು 3, 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
- ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ರಂಗಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಹಾಗೂ ಪೂರೈಕೆಗಾಗಿ ಆದ್ಯತೆಯ ವಲಯಗಳನ್ನು ಗುರುತಿಸುವುದು ಸೇರಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು
- ಅತ್ಯಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೃತಕ ಅಭಾವ ಸೃಷ್ಟಿ ಹಾಗೂ ಕಪ್ಪುಮಾರುಕಟ್ಟೆ ದಂದೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅತ್ಯಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರ ವಹಿಸಬೇಕಾಗಿದೆ. ಭಾರತ ಸರ್ಕಾರವು ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ಗಳ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನೇ ಪುನರುಚ್ಚರಿಸಿದೆ.
- ಭಾರತ ಸರ್ಕಾರವು ಮಾರ್ಚ್ 27, 2026 ಮತ್ತು ಏಪ್ರಿಲ್ 2, 2026 ರ ಪತ್ರಗಳ ಮೂಲಕ ಸಾಕಷ್ಟು ಇಂಧನ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಪರಾಮರ್ಶೆ ಸಭೆಗಳನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಲಾಗುತ್ತಿದೆ:
- ದೈನಂದಿನ ಪತ್ರಿಕಾ ಗೋಷ್ಠಿಗಳನ್ನು ನಡೆಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ಬಿಡುಗಡೆ ಮಾಡುವುದು.
- ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅದನ್ನು ಹತ್ತಿಕ್ಕುವುದು.
- ಜಿಲ್ಲಾ ಆಡಳಿತದಿಂದ ದೈನಂದಿನ ಜಾರಿ ಅಭಿಯಾನಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಕಂಪನಿಗಳೊಂದಿಗೆ (OMCs) ಸಮನ್ವಯದಲ್ಲಿ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.
- ಪಿಎನ್‌ಜಿ (PNG) ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
- ಎಲ್‌ಪಿಜಿ ಪೂರೈಕೆಗೆ, ವಿಶೇಷವಾಗಿ ಗೃಹಬಳಕೆಯ ಅಗತ್ಯಗಳಿಗೆ ಆದ್ಯತೆ ನೀಡುವುದು ಮತ್ತು ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿಯ ಎಫ್‌ಟಿಎಲ್ (FTL) ಸಿಲಿಂಡರ್‌ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳುವುದು.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು
- ಎಲ್‌ಪಿಜಿಯ ಕೃತಕ ಅಭಾವ ಸೃಷ್ಟಿ ಮತ್ತು ಕಪ್ಪುಮಾರುಕಟ್ಟೆ ದಂದೆಯನ್ನು ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ಕಳೆದ 4 ದಿನಗಳಲ್ಲಿ, 6480 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 680 ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, 11 ಎಫ್‌ಐಆರ್‌ಗಳನ್ನು (FIRs) ದಾಖಲಿಸಲಾಗಿದೆ ಮತ್ತು ದೇಶಾದ್ಯಂತ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
- ಅದೇ ರೀತಿ, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ ಅಧಿಕಾರಿಗಳಿಂದ ಆಕಸ್ಮಿಕ ತಪಾಸಣೆಗಳೂ ಮುಂದುವರಿದಿದ್ದು, ಕಳೆದ 4 ದಿನಗಳಲ್ಲಿ 4100 ಕ್ಕೂ ಹೆಚ್ಚು ರಿಟೇಲ್ ಔಟ್‌ಲೆಟ್ (RO) ಮತ್ತು ಎಲ್‌ಪಿಜಿ ವಿತರಕ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ.
- ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಆಕಸ್ಮಿಕ ತಪಾಸಣೆಗಳನ್ನು ಬಲಪಡಿಸಿದ್ದು, ನಿನ್ನೆಯವರೆಗೆ 489 ಎಲ್‌ಪಿಜಿ ವಿತರಕ ಕೇಂದ್ರಗಳಿಗೆ ದಂಡ ವಿಧಿಸಿವೆ ಮತ್ತು 82 ಎಲ್‌ಪಿಜಿ ವಿತರಕ ಕೇಂದ್ರಗಳನ್ನು ಅಮಾನತುಗೊಳಿಸಿವೆ.
ಎಲ್‌ಪಿಜಿ ಪೂರೈಕೆ
ದೇಶೀಯ ಎಲ್‌ಪಿಜಿ ಪೂರೈಕೆ ಸ್ಥಿತಿ:
- ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
- ಮನೆಬಳಕೆಯ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
- ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ಕೊರತೆ (Dry-outs) ವರದಿಯಾಗಿಲ್ಲ.
- ನಿನ್ನೆಯ ವರದಿಯಂತೆ ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್‌ಗಳು ಉದ್ಯಮದಾದ್ಯಂತ ಸುಮಾರು ಶೇ. 99 ಕ್ಕೆ ಏರಿವೆ.
- ಪಥ ಬದಲಾವಣೆಯನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಶೇ. 95 ಕ್ಕಿಂತ ಹೆಚ್ಚಿವೆ. ಡಿಎಸಿಯನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ಕಳೆದ 4 ದಿನಗಳಲ್ಲಿ, ಸುಮಾರು 1.72 ಕೋಟಿ ಎಲ್‌ಪಿಜಿ (LPG) ಸಿಲಿಂಡರ್ ಬುಕ್ಕಿಂಗ್‌ಗಳಿಗೆ ಪ್ರತಿಯಾಗಿ 1.66 ಕೋಟಿಗೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
- ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇ. 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇ. 10 ರಷ್ಟು ಸುಧಾರಣೆ-ಆಧಾರಿತ ಹಂಚಿಕೆಯೂ ಸೇರಿದೆ.
- ಕಳೆದ 4 ದಿನಗಳಲ್ಲಿ, ಸುಮಾರು 1.96 ಲಕ್ಷ - 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
- ಏಪ್ರಿಲ್ 3, 2026 ರಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (PSU OMCs) 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳಿಗಾಗಿ 15,400 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 2.45 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿವೆ.
- ನಿನ್ನೆ ಸುಮಾರು 82 ಶಿಬಿರಗಳ ಮೂಲಕ ಸುಮಾರು 1487 - 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
- ಐಒಸಿಎಲ್ (IOCL), ಎಚ್‌ಪಿಸಿಎಲ್ (HPCL) ಮತ್ತು ಬಿಪಿಸಿಎಲ್ (BPCL) ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ವಾಣಿಜ್ಯ ಎಲ್‌ಪಿಜಿ ವಿತರಣೆಯನ್ನು ಯೋಜಿಸಲು ರಾಜ್ಯ ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
- ಮೇ 1, 2026 ರಿಂದ ಒಟ್ಟು 1,56,898 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿಯನ್ನು ಮಾರಾಟ ಮಾಡಲಾಗಿದೆ.
- ಕಳೆದ 4 ದಿನಗಳಲ್ಲಿ, ಒಟ್ಟು 24,557 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿಯನ್ನು ಮಾರಾಟ ಮಾಡಲಾಗಿದೆ.
- ಕಳೆದ 4 ದಿನಗಳಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು (PSU OMCs) ಸುಮಾರು 942 ಮೆಟ್ರಿಕ್ ಟನ್ (MT) ಆಟೋ ಎಲ್‌ಪಿಜಿಯನ್ನು ಮಾರಾಟ ಮಾಡಿವೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್‌ಜಿ ವಿಸ್ತರಣಾ ಉಪಕ್ರಮಗಳು
-
- ದೇಶೀಯ ಪಿಎನ್‌ಜಿ (D-PNG) ಮತ್ತು ಸಿಎನ್‌ಜಿ (ಸಾರಿಗೆ) ಗೆ ಶೇ. 100 ರಷ್ಟು ಪೂರೈಕೆಯೊಂದಿಗೆ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
- ಹೆಚ್ಚುವರಿಯಾಗಿ, ಸಿಜಿಡಿ (CGD) ನೆಟ್‌ವರ್ಕ್‌ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇ. 80 ರವರೆಗೆ ಹೆಚ್ಚಿಸಲಾಗಿದೆ.
- ವಾಣಿಜ್ಯ ಎಲ್‌ಪಿಜಿ ಲಭ್ಯತೆಯ ಬಗ್ಗೆ ಇರುವ ಕಾಳಜಿಗಳನ್ನು ಪರಿಹರಿಸಲು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮೆಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ (GAs) ಪಿಎನ್‌ಜಿ ಸಂಪರ್ಕ ನೀಡಲು ಆದ್ಯತೆ ನೀಡುವಂತೆ ಸಿಜಿಡಿ (CGD) ಘಟಕಗಳಿಗೆ ಸಲಹೆ ನೀಡಲಾಗಿದೆ.
- ಸಿಜಿಡಿ ನೆಟ್‌ವರ್ಕ್‌ಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
- ಎಲ್‌ಪಿಜಿಯಿಂದ ಪಿಎನ್‌ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಬಹುದಾದರೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಶೇ. 10 ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ತಿಳಿಸಿದೆ.
- 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಪಿಎನ್‌ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
- ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ (ಪೈಪ್‌ಲೈನ್‌ಗಳ ಹಾಕುವಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026 ರನ್ನು ಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ, ಇದು ಅನುಮೋದನೆಗಳು ಮತ್ತು ಭೂಮಿಯ ಲಭ್ಯತೆಯಲ್ಲಿನ ವಿಳಂಬಗಳನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ. ಇದು ಪಿಎನ್‌ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಇಂಧನ ಭದ್ರತೆಯನ್ನು ಬಲಪಡಿಸುವ ಮೂಲಕ ಸ್ವಚ್ಛ ಇಂಧನಗಳತ್ತ ಪರಿವರ್ತನೆಯನ್ನು ಬೆಂಬಲಿಸುತ್ತದೆ.
- ಪಿಎನ್‌ಜಿಆರ್‌ಬಿ (PNGRB) ದೇಶೀಯ ಪಿಎನ್‌ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಘಟಕಗಳಿಗೆ ನಿರ್ದೇಶಿಸಿದೆ. ಅಲ್ಲದೆ, ಪಿಎನ್‌ಜಿ ವಿಸ್ತರಣೆಯ ವೇಗವನ್ನು ಉಳಿಸಿಕೊಳ್ಳಲು 'ರಾಷ್ಟ್ರೀಯ ಪಿಎನ್‌ಜಿ ಅಭಿಯಾನ 2.0 ವನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
- ಸ್ವಚ್ಛವಾದ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ (CBG) ನೀತಿಯನ್ನು ಅಭಿವೃದ್ಧಿಪಡಿಸಿದೆ. ಇದು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ಹೂಡಿಕೆದಾರ ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುವ ಸಮಗ್ರ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಆರಿಸಿಕೊಳ್ಳುವ ರಾಜ್ಯಗಳಿಗೆ ಮುಂದಿನ ಹಂತದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
- ಮಾರ್ಚ್ 2026 ರಿಂದ ಇದುವರೆಗೆ ಸುಮಾರು 7.99 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಮಾಡಲಾಗಿದೆ ಮತ್ತು ಹೆಚ್ಚುವರಿ 2.87 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ, ಇದರೊಂದಿಗೆ ಒಟ್ಟು 10.86 ಲಕ್ಷ ಸಂಪರ್ಕಗಳಾಗಿವೆ. ಇನ್ನು ಸುಮಾರು 8.27 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
- 24.05.2026 ರವರೆಗೆ, 59,800 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದಾರೆ.
ಕಚ್ಚಾ ತೈಲ ಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು
-
- ಎಲ್ಲಾ ರಿಫೈನರಿಗಳು ಸಮರ್ಪಕ ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
- ದೇಶೀಯ ಬಳಕೆಯನ್ನು ಬೆಂಬಲಿಸಲು ರಿಫೈನರಿಗಳಿಂದ ಉತ್ಪಾದನೆಯಾಗುವ ಎಲ್‌ಪಿಜಿ ಪ್ರಮಾಣವನ್ನು ಹೆಚ್ಚಿಸಲಾಗಿದೆ.
- ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ್-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ಜೊತೆಗೆ, ಸಿಎಚ್‌ಟಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಸಿ3 ಮತ್ತು ಸಿ4 ಸ್ಟ್ರೀಮ್‌ಗಳ ಕನಿಷ್ಠ ಪ್ರಮಾಣವನ್ನು ಲಭ್ಯವಾಗುವಂತೆ ಮಾಡಲು ರಿಫೈನಿಂಗ್ ಕಂಪನಿಗಳಿಗೆ ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಅನುಮತಿ ನೀಡಿದೆ.
- ಔಷಧೀಯ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (DCPC) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯಿಂದ (DPIIT) ಬಂದ ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗಾಗಿ ಎಲ್‌ಪಿಜಿ ಪೂಲ್‌ನಿಂದ ಪ್ರತಿದಿನ 1120 ಮೆಟ್ರಿಕ್ ಟನ್ (MT/day) ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
- ಮೇ 1, 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ, ಮಥುರಾ ಮತ್ತು ಗುಜರಾತ್ ರಿಫೈನರಿಗಳು (ಸಂಸ್ಕರಣಾಗಾರಗಳು) ರಾಸಾಯನಿಕ, ಫಾರ್ಮಾ ಮತ್ತು ಪೈಂಟ್ ಉದ್ಯಮಗಳಿಗೆ 12360 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು C3-C4 ಅಣುಗಳನ್ನು ಮಾರಾಟ ಮಾಡಿವೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು
- ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
- ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಯಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಕಡಿತಗೊಳಿಸಿದೆ.
- ಭಾರತ ಸರ್ಕಾರವು 15.05.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು (export levy) ಪ್ರತಿ ಲೀಟರ್‌ಗೆ ₹23 ರಿಂದ ₹16.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹33 ರಿಂದ ₹16 ಕ್ಕೆ ಇಳಿಸಿದೆ. ಇದಲ್ಲದೆ, ಪೆಟ್ರೋಲ್ ರಫ್ತು ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹3 ಆಗಿ ನಿಗದಿಪಡಿಸಲಾಗಿದೆ.
- ಕೆಲವು ಪ್ರದೇಶಗಳ ರಿಟೇಲ್ ಔಟ್‌ಲೆಟ್‌ಗಳಲ್ಲಿ (ಪೆಟ್ರೋಲ್ ಬಂಕ್‌ಗಳಲ್ಲಿ) ಅಸಾಮಾನ್ಯವಾಗಿ ಹೆಚ್ಚಿನ ಮಾರಾಟ ಮತ್ತು ಭಾರೀ ಜನಸಂದಣಿ ಕಂಡುಬಂದಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.
ಈ ವಲಯದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ವಲಯದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುವುದನ್ನು ಮುಂದುವರಿಸಿದೆ.
- ಪ್ರಧಾನಮಂತ್ರಿಯವರು 15 ಮೇ 2026 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಅತ್ಯಂತ ಯಶಸ್ವಿ ಭೇಟಿ ನೀಡಿದರು. ಈ ಭೇಟಿಯ ಅವಧಿಯಲ್ಲಿ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದು ಭಾರತದ ಇಂಧನ ಭದ್ರತೆಗೆ [ಕಾರ್ಯತಂತ್ರದ ಪೆಟ್ರೋಲಿಯಂ ರಿಸರ್ವ್ ಮತ್ತು ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸುವುದು] ಮತ್ತು ದೇಶದಲ್ಲಿನ ಹೂಡಿಕೆಗಳಿಗೆ ಭಾರಿ ಉತ್ತೇಜನ ನೀಡಿದೆ.
- ಇದರ ಜೊತೆಗೆ, ಭಾರತವು 'ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗಾಗಿನ ಚೌಕಟ್ಟಿಗೆ' ಸಹಿ ಹಾಕಿದೆ. ಹೂಡಿಕೆಯ ರಂಗದಲ್ಲಿ, ಯುಎಇ ಸಂಸ್ಥೆಗಳು ಭಾರತೀಯ ಕಂಪನಿಗಳಲ್ಲಿ 5 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಿವೆ.
- ಈ ವಲಯದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿನ ಭಾರತೀಯ ಸಮುದಾಯದ ಸದಸ್ಯರು ಮತ್ತು ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕ್ಷೇಮ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳುತ್ತಿವೆ. ಅವರು ನಮ್ಮ ನಾವಿಕ ಸಮುದಾಯದೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಿದ್ದಾರೆ.
******
(ಪ್ರಕಟಣೆ ಐ.ಡಿ.: 2265127)
|