ವಾರ್ತಾ ಮತ್ತು ಪ್ರಸಾರ ಸಚಿವಾಲಯ
19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (MIFF) ಮಾಧ್ಯಮ ಮಾನ್ಯತೆ ಪ್ರಕ್ರಿಯೆ ಆರಂಭ
ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026 ರಿಂದ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಆರಂಭದ ಘೋಷಣೆ
ಪ್ರಕಟಣಾ ದಿನಾಂಕ:
22 MAY 2026 6:20PM by PIB Bengaluru
ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ತನ್ನ 19ನೇ ಆವೃತ್ತಿಗಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿರುವುದನ್ನು ಘೋಷಿಸಲು ಹರುಷ ವ್ಯಕ್ತಪಡಿಸಿದೆ. ಈ ಚಲನಚಿತ್ರೋತ್ಸವವು, ಜೂನ್ 15 ರಿಂದ 21, 2026 ರವರೆಗೆ ಮುಂಬೈನ ಗೋಪಾಲರಾವ್ ದೇಶ್‌ಮುಖ್ ಮಾರ್ಗದಲ್ಲಿರುವ ಎನ್‌ಎಫ್‌ಡಿಸಿ (NFDC) – ಫಿಲ್ಮ್ಸ್ ಡಿವಿಷನ್ ಆವರಣದಲ್ಲಿ ನಡೆಯಲಿದೆ.
ಚಲನಚಿತ್ರೇತರ ಚಿತ್ರಗಳಿಗೆ (non-feature) ಸಮರ್ಪಿತವಾದ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತವಾದ ಚಲನಚಿತ್ರೋತ್ಸವ ಎಂದು ಗುರುತಿಸಲ್ಪಟ್ಟಿರುವ, ಮಿಫ್ (MIFF), ಜಗತ್ತಿನಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಥೆಗಾರರು ಮತ್ತು ಸೃಜನಶೀಲ ಧ್ವನಿಗಳನ್ನು ಒಂದೆಡೆ ಸೇರಿಸುತ್ತದೆ. ಈ ವರ್ಷದ ಆವೃತ್ತಿಯು ಸಮಕಾಲೀನ ಚಿತ್ರರಂಗದ ವಿಕಸನಗೊಳ್ಳುತ್ತಿರುವ ಚಿತ್ರಣವನ್ನು ಪ್ರತಿಬಿಂಬಿಸುವ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್ ಮತ್ತು ಪ್ರಾಯೋಗಿಕ ಚಲನಚಿತ್ರಗಳ ವೈವಿಧ್ಯಮಯ ಹಾಗೂ ಆಕರ್ಷಕ ಸಂಗ್ರಹವನ್ನು ಪ್ರಸ್ತುತಪಡಿಸಲಿದೆ.
ಭಾರತವು ಚಲನಚಿತ್ರ ನಿರ್ಮಾಣ, ಡಿಜಿಟಲ್ ಕಥೆ ಹೇಳುವಿಕೆ ಮತ್ತು ಸೃಜನಶೀಲ ಅಭಿವ್ಯಕ್ತಿಯ ಕೇಂದ್ರವಾಗಿ ಮುನ್ನಡೆಯುತ್ತಿರುವ ಬೆನ್ನಲ್ಲೇ, ವೈವಿಧ್ಯಮಯ ಧ್ವನಿಗಳನ್ನು ಪ್ರದರ್ಶಿಸುವಲ್ಲಿ, ಕಲಾತ್ಮಕ ಸಂವಾದಗಳನ್ನು ಪ್ರೋತ್ಹಾಹಿಸುವಲ್ಲಿ ಮತ್ತು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರು ಹಾಗೂ ವಿಷಯ ರಚನೆಕಾರರನ್ನು (content creators) ಪೋಷಿಸುವಲ್ಲಿ ಮಾಧ್ಯಮಗಳ ಪ್ರಮುಖ ಕೊಡುಗೆಯನ್ನು ಮಿಫ್ (MIFF) ಗುರುತಿಸುತ್ತದೆ. ಈ ಚಲನಚಿತ್ರೋತ್ಸವವು ಚಲನಚಿತ್ರದ ಶ್ರೇಷ್ಠತೆ, ಸೃಜನಶೀಲ ಸಹಯೋಗ ಮತ್ತು ವಿವಿಧ ಸಂಸ್ಕೃತಿಗಳು ಹಾಗೂ ಸಮುದಾಯಗಳ ಆಕರ್ಷಕ ಕಥೆಗಳ ಆಚರಣೆಯನ್ನು ಉತ್ತೇಜಿಸುವ ಒಂದು ಒಳಗೊಳ್ಳುವ ವೇದಿಕೆಯಾಗಿ ಮುಂದುವರಿದಿದೆ.
ನೋಂದಣಿ ವಿವರಗಳು
ಮಾಧ್ಯಮ ನೋಂದಣಿ ಪ್ರಕ್ರಿಯೆ ಈಗ ಮುಕ್ತವಾಗಿದ್ದು, ಜೂನ್ 7, 2026 ರವರೆಗೆ ಮುಂದುವರಿಯಲಿದೆ. ಮಾಧ್ಯಮ ಪ್ರತಿನಿಧಿಗಳಿಗೆ ನೋಂದಣಿ ಸಂಪೂರ್ಣ ಉಚಿತವಾಗಿರುತ್ತದೆ. ಮಾಧ್ಯಮ ಪ್ರತಿನಿಧಿಗಳು ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಲು https://accreditation.pib.gov.in/eventregistration/login.aspx ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಕ್ಯೂಆರ್ (QR) ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

19ನೇ ಮಿಫ್ (MIFF) 2026 ರ ಬಗ್ಗೆ
ಚಲನಚಿತ್ರೇತರ ಚಿತ್ರಗಳಿಗೆ ಸಮರ್ಪಿತವಾದ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಚಲನಚಿತ್ರೋತ್ಸವ ಎಂದು ಗುರುತಿಸಲ್ಪಟ್ಟಿರುವ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (MIFF), ದೀರ್ಘಕಾಲದಿಂದ ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರ ನಿರ್ಮಾಣದ ರೋಮಾಂಚಕ ಆಚರಣೆಯಾಗಿ ನಿಂತಿದೆ. 1990 ರಲ್ಲಿ ಸ್ಥಾಪನೆಯಾದ ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲ್ಪಡುವ ಮಿಫ್ (MIFF), ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಚಲನಚಿತ್ರ ಪ್ರೇಮಿಗಳನ್ನು ಆಕರ್ಷಿಸುವ ಒಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ.
ಮಿಫ್‌ನ 19ನೇ ಆವೃತ್ತಿಯು ಅತ್ಯಂತ ತಲ್ಲೀನಗೊಳಿಸುವ ಮತ್ತು ಸಮೃದ್ಧ ಚಲನಚಿತ್ರ ಅನುಭವವನ್ನು ನೀಡುವ ಭರವಸೆ ನೀಡುತ್ತದೆ. ಇದು ಉದ್ಯಮ-ಕೇಂದ್ರಿತ ಉಪಕ್ರಮಗಳ ರೋಮಾಂಚಕಾರಿ ಸರಣಿಯೊಂದಿಗೆ, ಪ್ರಶಂಸನೀಯ ಅಂತಾರಾಷ್ಟ್ರೀಯ ಚಲನಚಿತ್ರಗಳ ಚಿಂತನಶೀಲ ಸಂಗ್ರಹವನ್ನು ಒಳಗೊಂಡಿರುತ್ತದೆ. ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (MIFF) 19ನೇ ಆವೃತ್ತಿಯ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತವೂ ಸೇರಿದಂತೆ 47 ದೇಶಗಳಿಂದ 1,459 ಚಲನಚಿತ್ರ ನಮೂದುಗಳು ಬಂದಿವೆ. ಈ ಚಲನಚಿತ್ರೋತ್ಸವವು 42 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು ಭಾರತದ ಹೊರಗಿನ 30 ಕ್ಕೂ ಹೆಚ್ಚು ಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ, ಇದು ಅದರ ಜಾಗತಿಕ ವ್ಯಾಪ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದಾದ್ಯಂತದ ಪ್ರಶಂಸನೀಯ ಚಲನಚಿತ್ರ ನಿರ್ಮಾಪಕರ ಕೃತಿಗಳನ್ನು ಒಳಗೊಂಡಿರುವ ಈ ಚಲನಚಿತ್ರೋತ್ಸವವು ಕೆಲವು ಅತ್ಯುತ್ತಮ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್‌ಗಳು, ಚೊಚ್ಚಲ ನಿರ್ದೇಶಕರ ಚಿತ್ರಗಳು ಮತ್ತು ವಿದ್ಯಾರ್ಥಿ ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದೆ. ಚಲನಚಿತ್ರ ಪ್ರದರ್ಶನಗಳ ಜೊತೆಗೆ, 'ಡಾಕ್ ಬಜಾರ್'ನ 2ನೇ ಆವೃತ್ತಿ, ಸಮೃದ್ಧ ಮಾಸ್ಟರ್‌ಕ್ಲಾಸ್‌ಗಳು ಮತ್ತು ಐಡಿಪಿಎ (IDPA) ಅವರ ಮುಕ್ತ ವೇದಿಕೆಯು ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ಮತ್ತು ಸೃಜನಶೀಲ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಲಿವೆ.
ಮಿಫ್ (MIFF) 2026 ರಲ್ಲಿ ಕಥೆ ಹೇಳುವ ರೋಮಾಂಚಕ ಜಗತ್ತಿಗೆ ಪ್ರವೇಶಿಸಿ — ಇಲ್ಲಿ ಅಭೂತಪೂರ್ವ ಚಲನಚಿತ್ರಗಳು, ಸೃಜನಶೀಲ ಮನಸ್ಸುಗಳು ಮತ್ತು ಸ್ಪೂರ್ತಿದಾಯಕ ಧ್ವನಿಗಳು ಒಟ್ಟಿಗೆ ಸೇರಿ ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರುಚಿತ್ರ ನಿರ್ಮಾಣದ ಮರೆಯಲಾಗದ ನೆನಪುಗಳನ್ನು ಸೃಷ್ಟಿಸುತ್ತವೆ.
19ನೇ ಮಿಫ್‌ಗಾಗಿ ಮಾಧ್ಯಮ ಮಾನ್ಯತೆ ನೀತಿಯನ್ನು ಈ ಲಿಂಕ್ ಮೂಲಕ ಪಡೆಯಬಹುದು.

*****
(ಪ್ರಕಟಣೆ ಐ.ಡಿ.: 2264418)
ವಿಸಿಟರ್ ಕೌಂಟರ್ : 10