ಗೃಹ ವ್ಯವಹಾರಗಳ ಸಚಿವಾಲಯ
ಅನ್ಯರ ಗುಪ್ತ ನಕಲಿ(ಮ್ಯೂಲ್) ಖಾತೆಗಳು ಮತ್ತು ಸೈಬರ್ ಹಣಕಾಸು ವಂಚನೆಗಳನ್ನು ಪತ್ತೆಹಚ್ಚುವಿಕೆಯ ಎಐ-ಚಾಲಿತ ವ್ಯವಸ್ಥೆಯನ್ನು ಬಲಪಡಿಸಲು ಐ4ಸಿ ಮತ್ತು ಆರ್.ಬಿ.ಐ.ಹೆಚ್. ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ
ಸೈಬರ್ ಸುರಕ್ಷಿತ ಭಾರತಕ್ಕಾಗಿ ಮೋದಿ ಸರ್ಕಾರ ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದ್ದಾರೆ
ಸೈಬರ್ ಅಪರಾಧಗಳನ್ನು ನಿಗ್ರಹಿಸುವಲ್ಲಿ ಅನ್ಯರ ಗುಪ್ತ ನಕಲಿ(ಮ್ಯೂಲ್) ಖಾತೆಗಳು ದೊಡ್ಡ ಅಡಚಣೆಗಳಾಗಿವೆ
ಸೈಬರ್ ವಂಚನೆಯನ್ನು ಎದುರಿಸಲು ಐ4ಸಿ ಮತ್ತು ಆರ್.ಬಿ.ಐ.ಹೆಚ್ ನಡುವಿನ ತಿಳುವಳಿಕೆ ಒಪ್ಪಂದವು ಕೃತಕ ಬುದ್ಧಿಮತ್ತೆಯ ಶಕ್ತಿಯ ವ್ಯವಸ್ಥೆಯನ್ನು ರೂಪಿಸುತ್ತದೆ
ಈ ಕ್ರಮವು ಐ4ಸಿ ಯ ಶಂಕಿತ ನೋಂದಣಿಯಿಂದ ಎಐ-ಚಾಲಿತ ವಂಚನೆ ಪತ್ತೆ ವ್ಯವಸ್ಥೆಗೆ ಡೇಟಾವನ್ನು ಔರ್ಗಾವಣೆ ಮಾಡಿ ನೀಡುವ ಮೂಲಕ ಅನ್ಯರ ಗುಪ್ತ ನಕಲಿ(ಮ್ಯೂಲ್) ಖಾತೆಗಳನ್ನು ತ್ವರಿತವಾಗಿ ಪತ್ತೆಹಚ್ಚುತ್ತದೆ ಮತ್ತು ಕೂಡಲೇ ನಿಷ್ಕ್ರಿಯಗೊಳಿಸಿ ತೆಗೆದುಹಾಕುತ್ತದೆ
ಇದು ನಾಗರಿಕರಿಗೆ ಅವರ ಮುಂದಿನ ಪೀಳಿಗೆಯ ಗುರಾಣಿಯಾಗಿ ಸೈಬರ್ ಅಪರಾಧದ ವಿರುದ್ಧ ಸೇವೆ ಸಲ್ಲಿಸುತ್ತದೆ
ಸೈಬರ್-ಶಕ್ತಗೊಂಡ ಹಣಕಾಸು ವಂಚನೆಗಳನ್ನು ಎದುರಿಸಲು ವಂಚನೆ-ಅಪಾಯದ ಗುಪ್ತಚರ ಹಂಚಿಕೆ, ವಿಶ್ಲೇಷಣಾತ್ಮಕ ಬೆಂಬಲ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಬಲಪಡಿಸುವ ಗುರಿಯನ್ನು ಈ ತಿಳುವಳಿಕೆ ಒಪ್ಪಂದವು ಹೊಂದಿದೆ
ಪ್ರಕಟಣಾ ದಿನಾಂಕ:
12 MAY 2026 4:33PM by PIB Bengaluru
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ), ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (ಆರ್.ಬಿ.ಐ.ಹೆಚ್.) ಸೈಬರ್-ಶಕ್ತಗೊಂಡ ಹಣಕಾಸು ವಂಚನೆಗಳನ್ನು ಎದುರಿಸುವಲ್ಲಿ ಮತ್ತು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಾದ್ಯಂತ ಅನ್ಯರ ಗುಪ್ತ ನಕಲಿ (ಮ್ಯೂಲ್) ಖಾತೆಗಳನ್ನು ಕಡಿಮೆ ಮಾಡುವಲ್ಲಿ ಸಹಯೋಗವನ್ನು ಬಲಪಡಿಸಲು ತಿಳುವಳಿಕೆ ಒಪ್ಪಂದ (ಎಂ.ಒ.ಯು.) ಗೆ ಸಹಿ ಹಾಕಿವೆ. ವಂಚನೆ-ಅಪಾಯದ ಗುಪ್ತಚರ ಹಂಚಿಕೆ, ವಿಶ್ಲೇಷಣಾತ್ಮಕ ಬೆಂಬಲ ಮತ್ತು ಪೂರ್ವಭಾವಿ ವಂಚನೆ ಪತ್ತೆ ಮತ್ತು ತಡೆಗಟ್ಟುವ ಕಾರ್ಯವಿಧಾನಗಳನ್ನು ಬಲಪಡಿಸಲು ಕಾರ್ಯಾಚರಣೆಯ ಸಮನ್ವಯ ಕ್ಷೇತ್ರಗಳಲ್ಲಿ ಸಹಕಾರವನ್ನು ಸುಗಮಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಕ್ಸ್ ತಾಣದಲ್ಲಿ “ಮೋದಿ ಸರ್ಕಾರ ಸೈಬರ್ ಸುರಕ್ಷಿತ ಭಾರತಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಸೈಬರ್ ಅಪರಾಧಗಳನ್ನು ನಿಗ್ರಹಿಸುವಲ್ಲಿ ಅನ್ಯರ ಗುಪ್ತ ನಕಲಿ(ಮ್ಯೂಲ್) ಖಾತೆಗಳು ದೊಡ್ಡ ಅಡಚಣೆಗಳಾಗಿವೆ. ಇಂದು, ಎಂ.ಹೆಚ್.ಎ. ಅಡಿಯಲ್ಲಿನ ಐ4ಸಿ, ಸೈಬರ್ ವಂಚನೆಯನ್ನು ಎದುರಿಸಲು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಿಡುಗಡೆ ಮಾಡುವ ಮೂಲಕ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (ಆರ್.ಬಿ.ಐ.ಹೆಚ್.) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕ್ರಮವು ಐ4ಸಿ ಯ ಶಂಕಿತ ನೋಂದಣಿಯಿಂದ ಡೇಟಾವನ್ನು ಎ.ಐ.-ಚಾಲಿತ ವಂಚನೆ ಪತ್ತೆ ವ್ಯವಸ್ಥೆಗೆ ನೀಡುವ ಮೂಲಕ ಗುಪ್ತ ಮ್ಯೂಲ್ ಖಾತೆಗಳನ್ನು ತ್ವರಿತವಾಗಿ ಪತ್ತೆಹಚ್ಚುತ್ತದೆ ಮತ್ತು ತೆಗೆದುಹಾಕುತ್ತದೆ ಮತ್ತು ಸೈಬರ್ ಅಪರಾಧದ ವಿರುದ್ಧ ನಾಗರಿಕರಿಗೆ ಅವರ ಮುಂದಿನ ಪೀಳಿಗೆಯ ಗುರಾಣಿಯಾಗಿ ಸೇವೆ ಸಲ್ಲಿಸುತ್ತದೆ.” - ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ.
ಈ ಒಪ್ಪಂದಕ್ಕೆ ಐ4ಸಿ ಯ ಐಜಿ (ಆಡಳಿತ) ಶ್ರೀಮತಿ ರೂಪಾ ಎಂ ಮತ್ತು ಆರ್.ಬಿ.ಐ.ಹೆಚ್. ನ ಸಿಇಒ ಶ್ರೀ ಸಾಹಿಲ್ ಕಿನ್ನಿ ಅವರು ಆರ್.ಬಿ.ಐ. ಯ ಉಪ ಗವರ್ನರ್ ಶ್ರೀ ರೋಹಿತ್ ಜೈನ್; ಶ್ರೀ ಆನಂದ್ ಸ್ವರೂಪ್, ವಿಶೇಷ ಕಾರ್ಯದರ್ಶಿ (ಐಎಸ್), ಏಂ.ಹೆಚ್.ಎ.; ಶ್ರೀ ರಾಕೇಶ್ ರಥಿ, ಜೆಎಸ್ (ಸಿಐಎಸ್), ಏಂ.ಹೆಚ್.ಎ.; ಶ್ರೀ ರಾಜೇಶ್ ಕುಮಾರ್, ಸಿಇಒ, ಐ4ಸಿ; ಇವರ ಸಮ್ಮುಖದಲ್ಲಿ ಸಹಿ ಹಾಕಿದರು. ಮತ್ತು ಆರ್.ಬಿ.ಐ., ಆರ್.ಬಿ.ಐ.ಹೆಚ್. ಮತ್ತು ಐ4ಸಿ ಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ಒಪ್ಪಂದದ ಅಡಿಯಲ್ಲಿ, ಐ4ಸಿ ಮತ್ತು ಆರ್.ಬಿ.ಐ.ಹೆಚ್. ಬ್ಯಾಂಕುಗಳಲ್ಲಿ ಅಳವಡಿಸಲಾದ MuleHunter.AI™ ನಂತಹ ಎ.ಐ.-ಚಾಲಿತ ವಂಚನೆ ಪತ್ತೆ ವ್ಯವಸ್ಥೆಗಳನ್ನು ಬಲಪಡಿಸಲು ಐ4ಸಿ -ಏಂ.ಹೆಚ್.ಎ. ಯ ಸಸ್ಪೆಕ್ಟ್ ರಿಜಿಸ್ಟ್ರಿಯಿಂದ ಮ್ಯೂಲ್ ಖಾತೆ ಸಂಬಂಧಿತ ಗುಪ್ತಚರ ಮತ್ತು ಶಂಕಿತ ಗುರುತಿಸುವಿಕೆಗಳನ್ನು ಹಂಚಿಕೊಳ್ಳಲು ಸಹಕರಿಸುತ್ತವೆ. MuleHunter.AI™ ಸೇರಿದಂತೆ ಎ.ಐ.-ಚಾಲಿತ ವಂಚನೆ-ಅಪಾಯದ ಮೌಲ್ಯಮಾಪನ ಮಾದರಿಗಳ ತರಬೇತಿ ಮತ್ತು ವರ್ಧನೆಗಾಗಿ ಆರ್.ಬಿ.ಐ.ಹೆಚ್. ಡೇಟಾಸೆಟ್ಗಳನ್ನು ಬಳಸಿಕೊಳ್ಳುತ್ತದೆ.

ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್.ಸಿ.ಆರ್.ಪಿ), ಸಸ್ಪೆಕ್ಟ್ ರಿಜಿಸ್ಟ್ರಿ ಮತ್ತು ಇತರ ಗುಪ್ತಚರ-ಹಂಚಿಕೆ ಕಾರ್ಯವಿಧಾನಗಳಂತಹ ವೇದಿಕೆಗಳ ಮೂಲಕ ಭಾರತದ ಸೈಬರ್ ಅಪರಾಧ ಪ್ರತಿಕ್ರಿಯೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸಹಕರಿಸುವ ಕಡೆಗೆ ಐ4ಸಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಆರ್.ಬಿ.ಐ.ಹೆಚ್., ತಂತ್ರಜ್ಞಾನ-ನೇತೃತ್ವದ ಉಪಕ್ರಮಗಳು ಮತ್ತು ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿರುವೆ. ಎ.ಐ.-ಶಕ್ತಗೊಂಡ ವಂಚನೆ ಪತ್ತೆ ಚೌಕಟ್ಟುಗಳ ಅಭಿವೃದ್ಧಿಯ ಮೂಲಕ ಹಣಕಾಸು ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತಿದೆ ಮತ್ತು ಆ ಮೂಲಕ ಡಿಜಿಟಲ್ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯಲ್ಲಿ ನಾಗರಿಕರ ನಂಬಿಕೆಯನ್ನು ಹೆಚ್ಚಿಸುತ್ತದೆ.
*****
(ಪ್ರಕಟಣೆ ಐ.ಡಿ.: 2260334)
ವಿಸಿಟರ್ ಕೌಂಟರ್ : 6