ರೈಲ್ವೇ ಸಚಿವಾಲಯ
azadi ka amrit mahotsav

ಮೇಲ್ದರ್ಜೆಗೇರಿಸಿದ ಪ್ರಯಾಣಿಕರ ಮೀಸಲಾತಿಯ ರೈಲು ವ್ಯವಸ್ಥೆಯು ಆಗಸ್ಟ್‌ ನಲ್ಲಿ ಜಾರಿಗೆ ಬರಲಿದೆ


ಪ್ರಯಾಣಿಕರಿಗೆ ಅನಾನುಕೂಲವಾಗದಂತೆ 40 ವರ್ಷಗಳ ಹಳೆಯ ವ್ಯವಸ್ಥೆಯಿಂದ ಮೇಲ್ದರ್ಜೆಗೇರಿಸಿದ ವ್ಯವಸ್ಥೆಗೆ ಸುಗಮ ಪರಿವರ್ತನೆ ಖಚಿತಪಡಿಸಿಕೊಳ್ಳಲು ರೈಲ್ವೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ

ಪ್ರಕಟಣಾ ದಿನಾಂಕ: 07 MAY 2026 6:15PM by PIB Bengaluru

ಇಂದು ರೈಲು ಭವನದಲ್ಲಿ, ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು ಮತ್ತು 40 ವರ್ಷಗಳ ಹಳೆಯ ಮೀಸಲಾತಿ ವ್ಯವಸ್ಥೆಯಿಂದ ಮೇಲ್ದರ್ಜೆಗೇರಿಸಿದ ವ್ಯವಸ್ಥೆಗೆ ರೈಲುಗಳ ಪರಿವರ್ತನೆಯ ಸಮಯದಲ್ಲಿ ಪ್ರಯಾಣಿಕರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು ನಿರ್ದೇಶನಗಳನ್ನು ನೀಡಿದರು. ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ರವನೀತ್ ಸಿಂಗ್ ಬಿಟ್ಟು ಅವರುಗಳು ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

1986ರಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯು ಕಳೆದ 40 ವರ್ಷಗಳಲ್ಲಿ ಹಲವಾರು ಸಣ್ಣ ಬದಲಾವಣೆಗಳಿಗೆ ಒಳಗಾಗಿದೆ. ಹಾಗೂ, ಈಗ ಇದನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅದರ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸಲಾಗಿದೆ.

ರೈಲ್ವೆ ಮೀಸಲಾತಿ ವ್ಯವಸ್ಥೆಯು ಹಲವಾರು ಪ್ರಮುಖ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. 2002ರಲ್ಲಿ, ಭಾರತೀಯ ರೈಲ್ವೆ ಇಂಟರ್ನೆಟ್ ಆಧಾರಿತ ಟಿಕೆಟಿಂಗ್ ಅನ್ನು ಪರಿಚಯಿಸಿತು.  ಇಂದು, ಈ ವ್ಯವಸ್ಥೆಯು ಎಷ್ಟು ಜನಪ್ರಿಯವಾಗಿದೆಯೆಂದರೆ, ಹೆಚ್ಚಿನ ಜನರು ಟಿಕೆಟ್ ಕೌಂಟರ್‌ ಗಳನ್ನು ಸಂಪರ್ಕಿಸುವುದಿಲ್ಲ. ಪ್ರಸ್ತುತ, ದೇಶದಲ್ಲಿ ಒಟ್ಟು ಟಿಕೆಟ್ ಬೇಡಿಕೆಯ ಸುಮಾರು 88% ಆನ್‌ಲೈನ್ ಚಾನೆಲ್‌ ಗಳ ಮೂಲಕ ಪೂರೈಸಲ್ಪಡುತ್ತದೆ.

ರೈಲ್‌ ಒನ್ ಮೊಬೈಲ್ ಅಪ್ಲಿಕೇಶನ್ ಪ್ರಯಾಣಿಕರಲ್ಲಿ ಅತಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದನ್ನು ಕಳೆದ ವರ್ಷ ಜುಲೈನಲ್ಲಿ ಪ್ರಾರಂಭಿಸಲಾಯಿತು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಇದು ದೇಶಾದ್ಯಂತ 3.5 ಕೋಟಿಗೂ ಹೆಚ್ಚು ಡೌನ್‌ಲೋಡ್‌ ಗಳನ್ನು ದಾಖಲಿಸಿದೆ.

ಇದರ ಜನಪ್ರಿಯತೆಗೆ ಒಂದು ದೊಡ್ಡ ಕಾರಣವೆಂದರೆ, ಮೊಬೈಲ್ ಅಪ್ಲಿಕೇಶನ್ ಸಾಮಾನ್ಯ ಜನರಿಗೆ ಎಲ್ಲಾ ರೈಲ್ವೆ ಸಂಬಂಧಿತ ಮಾಹಿತಿಯನ್ನು ಒದಗಿಸುವುದಲ್ಲದೆ, ಟಿಕೆಟ್ ಮತ್ತು ಇತರ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಹ ಪರಿಹರಿಸುತ್ತದೆ.

ನೀವು ಇಂದು ಟಿಕೆಟ್ ಬುಕ್ ಮಾಡಿದಾಗ, ರೈಲ್‌ಒನ್ ಮೊಬೈಲ್ ಅಪ್ಲಿಕೇಶನ್ ವೇಟ್‌ಲಿಸ್ಟ್ ಮಾಡಿದ ಟಿಕೆಟ್ ದೃಢೀಕರಿಸಲ್ಪಡುವ ಸಾಧ್ಯತೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುತ್ತದೆ. ಅಪ್ಲಿಕೇಶನ್ ಈಗ ದೃಢೀಕರಣ ಸಂಭವನೀಯತೆಯ ಎಐ- ಆಧಾರಿತ ಮುನ್ಸೂಚನೆಗಳನ್ನು ಸಹ ಒದಗಿಸುತ್ತದೆ. ಈ ವೈಶಿಷ್ಟ್ಯವನ್ನು ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಯಿತು ಮತ್ತು ಬಳಕೆದಾರರಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಕಾಯುವಿಕೆ ಪಟ್ಟಿ (ವೇಟ್‌ಲಿಸ್ಟ್ ) ದೃಢೀಕರಣ ಮುನ್ಸೂಚನೆಯ ನಿಖರತೆಯು ಹಿಂದಿನ 53% ರಿಂದ ಈಗ 94% ಕ್ಕೆ ಏರಿದೆ.

ರೈಲ್‌ಒನ್ ಮೊಬೈಲ್ ಅಪ್ಲಿಕೇಶನ್ ಹಲವಾರು ಸಂಯೋಜಿತ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ನೀಡುತ್ತದೆ, ಇದು ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳಿಗೆ ಬುಕಿಂಗ್, ರದ್ದತಿ ಮತ್ತು ಮರುಪಾವತಿಗಳಂತಹ ಬಹುತೇಕ ಎಲ್ಲಾ ರೈಲ್ವೆ ಸೇವೆಗಳನ್ನು ಒಳಗೊಂಡಿದೆ.

ಇದು ಟಿಕೆಟ್ ಕಾಯ್ದಿರಿಸುವ ಸ್ಥಿತಿ, ರೈಲು ವೇಳಾಪಟ್ಟಿಗಳು, ಲೈವ್ ರೈಲು ಚಾಲನೆಯ ಸ್ಥಿತಿ, ಪ್ಲಾಟ್‌ಫಾರ್ಮ್ ಮಾಹಿತಿ, ಕೋಚ್ ಸ್ಥಾನ ಮತ್ತು ಪ್ರಯಾಣಿಕರ ಸಹಾಯಕ್ಕಾಗಿ ರೈಲ್ ಮದದ್‌ನಂತಹ ಸೇವೆಗಳ ಕುರಿತು ನೈಜ-ಸಮಯದ ನವೀಕರಣಗಳನ್ನು ಸಹ ಒದಗಿಸುತ್ತದೆ. ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಆಹಾರವನ್ನು ಸಹ ಆರ್ಡರ್ ಮಾಡಬಹುದು, ಇದು ನೇರವಾಗಿ ತಮ್ಮ ಆಸನಗಳಿಗೆ ತಲುಪಿಸುವುದನ್ನು ಖಚಿತಪಡಿಸುತ್ತದೆ. ಅನುಕೂಲಕರ ಮತ್ತು ಸೇವಾ-ಆಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ರೈಲ್‌ಒನ್ ಅಪ್ಲಿಕೇಶನ್ ಜನಪ್ರಿಯತೆಯಲ್ಲಿ ವೇಗವಾಗಿ ಬೆಳೆಯುತ್ತಿದೆ.

ಪ್ರತಿದಿನ, ದೇಶಾದ್ಯಂತ 9.29 ಲಕ್ಷ ಟಿಕೆಟ್‌ ಗಳನ್ನು ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗುತ್ತದೆ, ಇದರಲ್ಲಿ 7.2 ಲಕ್ಷ ಕಾಯ್ದಿರಿಸದ ಟಿಕೆಟ್‌ಗಳು ಮತ್ತು 2.09 ಲಕ್ಷ ಕಾಯ್ದಿರಿಸಿದ ಟಿಕೆಟ್‌ಗಳು ಸೇರಿವೆ. ಕಾಯ್ದಿರಿಸದ ಟಿಕೆಟ್‌ಗಳು ಪ್ಲಾಟ್‌ಫಾರ್ಮ್ ಟಿಕೆಟ್‌ ಗಳನ್ನು ಸಹ ಒಳಗೊಂಡಿವೆ. ರೈಲ್‌ಒನ್ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್‌ ನಿಂದ 3.16 ಕೋಟಿ ಬಾರಿ ಮತ್ತು ಆಪಲ್ ಸಾಧನಗಳಲ್ಲಿ 33.17 ಲಕ್ಷ ಬಾರಿ ಡೌನ್‌ಲೋಡ್ ಮಾಡಲಾಗಿದೆ.

ದೇಶದ ಪ್ರಯಾಣಿಕರಿಗೆ, ಭಾರತೀಯ ರೈಲ್ವೆ ಜೀವನಾಡಿಯಾಗಿದೆ. 2024–25ರಲ್ಲಿ, ಭಾರತೀಯ ರೈಲ್ವೆ ಪ್ರಯಾಣಿಕರ ಟಿಕೆಟ್‌ ಗಳ ಮೇಲೆ ₹60,239 ಕೋಟಿ ಸಬ್ಸಿಡಿಯನ್ನು ಒದಗಿಸಿತು. ಇದು ಪ್ರತಿ ರೈಲ್ವೆ ಪ್ರಯಾಣಿಕರಿಗೆ ಸರಾಸರಿ 43% ರಿಯಾಯಿತಿಗೆ ಸಮನಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೇವೆಯನ್ನು ಒದಗಿಸುವ ವೆಚ್ಚ ₹100 ಆಗಿದ್ದರೆ, ಟಿಕೆಟ್ ಬೆಲೆ ಕೇವಲ ₹57 ಆಗಿತ್ತು.

 

*****


(ಪ್ರಕಟಣೆ ಐ.ಡಿ.: 2258906) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , Urdu , हिन्दी , Gujarati , Odia , Tamil , Telugu