ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯದ ಮಾಹಿತಿ
ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ವಿತರಣೆಯು ಸಹಜವಾಗಿದ್ದು, ನಿನ್ನೆ 50.5 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ
ಮಾರ್ಚ್ 2026 ರಿಂದ ಸುಮಾರು 4.68 ಲಕ್ಷ ಪಿ ಎನ್ ಜಿ (PNG) ಸಂಪರ್ಕಗಳಿಗೆ ಅನಿಲ ಪೂರೈಕೆ ಆರಂಭಿಸಲಾಗಿದೆ ಮತ್ತು 5.23 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ
ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು (PSU OMCs) ತಪಾಸಣೆಯನ್ನು ಬಲಪಡಿಸಿವೆ; ನಿನ್ನೆಯವರೆಗೆ 255 ಎಲ್ ಪಿ ಜಿ ವಿತರಕರ ಮೇಲೆ ದಂಡ ವಿಧಿಸಲಾಗಿದೆ ಮತ್ತು 65 ಎಲ್ ಪಿ ಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ
ಕೊಲ್ಲಿ ಪ್ರದೇಶದಿಂದ ಕಳೆದ 24 ಗಂಟೆಗಳಲ್ಲಿ ಮರಳಿದ 30 ನಾವಿಕರು ಸೇರಿದಂತೆ ಇದುವರೆಗೆ 2,447 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ
ಭಾರತೀಯ ಹಜ್ ಯಾತ್ರಿಕರ ಮೊದಲ ತಂಡವು 18 ಏಪ್ರಿಲ್ 2026 ರಂದು ಹೊರಡಲಿದೆ; ಒಟ್ಟು 1.75 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಈ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ
ಸರ್ಕಾರವು ಯಾತ್ರಾರ್ಥಿಗಳ ಕಲ್ಯಾಣಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ಸುಗಮ ಹಾಗೂ ಆರಾಮದಾಯಕ ಯಾತ್ರಾ ಅನುಭವವನ್ನು ಖಚಿತಪಡಿಸಲು ಬದ್ಧವಾಗಿದೆ
ಪ್ರಕಟಣಾ ದಿನಾಂಕ:
17 APR 2026 6:23PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ನಿಯಮಿತ ಅಪ್ಡೇಟ್ ಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಮಾಧ್ಯಮ ಗೋಷ್ಠಿ ನಡೆಯಿತು. ಅಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ನೀಡಲಾಗುತ್ತಿರುವ ನೆರವು ಮತ್ತು ಒಟ್ಟಾರೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ
ಹಾರ್ಮುಜ್ ಜಲಸಂಧಿಯನ್ನು ಒಳಗೊಂಡ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ ಪಿ ಜಿ (LPG) ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಚಿವಾಲಯದ ಪ್ರಕಾರ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
• ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಇವುಗಳನ್ನು ಆತಂಕದಿಂದ ಖರೀದಿಸಬಾರದು (Panic purchase) ಎಂದು ಸಲಹೆ ನೀಡಲಾಗಿದೆ.
• ವದಂತಿಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
• ಎಲ್ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್ ಫಾರ್ಮ್ಗಳನ್ನು ಬಳಸಲು ಮತ್ತು ವಿತರಕರ ಬಳಿಗೆ ಹೋಗುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
• ನಾಗರಿಕರು ಪಿ ಎನ್ ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್ ಟಾಪ್ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ.
• ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿತಾಯ ಮಾಡುವಂತೆ ಒತ್ತಾಯಿಸಲಾಗಿದೆ.
ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
• ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಗೃಹ ಬಳಕೆಯ ಎಲ್ಪಿ ಜಿ, ಗೃಹ ಬಳಕೆಯ ಪಿ ಎನ್ ಜಿ ಮತ್ತು ಸಿ ಎನ್ ಜಿ (ಸಾರಿಗೆ) ಗೆ 100% ಪೂರೈಕೆ ಮಾಡಲಾಗುತ್ತಿರುವುದನ್ನು ಸರ್ಕಾರ ಖಚಿತಪಡಿಸಿದೆ.
• ವಾಣಿಜ್ಯ ಎಲ್ ಪಿ ಜಿ ಗಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ ಫಾರ್ಮಾ, ಸ್ಟೀಲ್, ಆಟೋಮೊಬೈಲ್, ಬಿತ್ತನೆ ಬೀಜ, ಕೃಷಿ ಇತ್ಯಾದಿ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್ ಟಿ ಎಲ್ (FTL) ಪೂರೈಕೆಯನ್ನು ಮಾರ್ಚ್ 2 ಮತ್ತು 3, 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
• ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
• ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
• ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್ ಗೆ ನಿರ್ದೇಶನ ನೀಡಿದೆ.
• ಗೃಹ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು:
• ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಹಾಗೂ ಕಪ್ಪು ಮಾರುಕಟ್ಟೆ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
• ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಇದನ್ನು ಪುನರುಚ್ಚರಿಸಿದೆ.
• ಪೆಟ್ರೋಲ್ ಮತ್ತು ಡೀಸೆಲ್ ಸಮರ್ಪಕ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಪೂರ್ವಭಾವಿ ಸಾರ್ವಜನಿಕ ಸಂವಹನದ ಅಗತ್ಯವನ್ನು ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರಗಳ ಮೂಲಕ ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ, 02.04.2026 ರಂದು (MoPNG ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ) ಮತ್ತು 06.04.2026 ರಂದು (MoPNG ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ವಾರ್ತಾ ಮತ್ತು ಪ್ರಸಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ) ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಲ್ಲಿ ಈ ಕೆಳಗಿನ ಅಂಶಗಳನ್ನು ಒತ್ತಿಹೇಳಲಾಗಿದೆ:
o ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡಲು.
o ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅದನ್ನು ಎದುರಿಸಲು.
o ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕ್ರಮಗಳನ್ನು ತೀವ್ರಗೊಳಿಸಲು ಮತ್ತು ತೈಲ ಮಾರಾಟ ಕಂಪನಿಗಳ (OMCs) ಸಹಯೋಗದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸಲು.
o ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸಲು.
o ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಸೀಮೆಎಣ್ಣೆ (SKO) ಗಾಗಿ ಹಂಚಿಕೆ ಆದೇಶಗಳನ್ನು ಹೊರಡಿಸಲು.
o ಪಿ ಎನ್ ಜಿ ಬಳಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಲು.
o ಎಲ್ ಪಿ ಜಿ ಪೂರೈಕೆಗೆ, ವಿಶೇಷವಾಗಿ ಗೃಹಬಳಕೆಯ ಅಗತ್ಯಗಳಿಗೆ ಆದ್ಯತೆ ನೀಡಲು ಮತ್ತು ಪೂರೈಕೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಲು.
• ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
• ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು:
• ಎಲ್ ಪಿ ಜಿ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. 16.04.2026 ರಂದು 2900 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
• ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಹಠಾತ್ ತಪಾಸಣೆಗಳನ್ನು ಬಲಪಡಿಸಿವೆ ಮತ್ತು ನಿನ್ನೆಯವರೆಗೆ 255 ಎಲ್ ಪಿ ಜಿ ವಿತರಕರ ಮೇಲೆ ದಂಡ ವಿಧಿಸಿವೆ ಹಾಗೂ 65 ಎಲ್ ಪಿ ಜಿ ವಿತರಕರನ್ನು ಅಮಾನತುಗೊಳಿಸಿವೆ.
ಎಲ್ ಪಿ ಜಿ ಪೂರೈಕೆ
ಗೃಹಬಳಕೆಯ ಎಲ್ ಪಿ ಜಿ ಪೂರೈಕೆ ಸ್ಥಿತಿ:
• ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
• ಮನೆಗಳಿಗೆ ಗೃಹಬಳಕೆಯ ಎಲ್ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
• ಎಲ್ ಪಿ ಜಿ ವಿತರಕರಲ್ಲಿ ಯಾವುದೇ ಸ್ಟಾಕ್ ಖಾಲಿಯಾದ (dry-outs) ವರದಿಗಳಾಗಿಲ್ಲ.
• ನಿನ್ನೆ ಉದ್ಯಮದಾದ್ಯಂತ ಆನ್ ಲೈನ್ ಎಲ್ ಪಿ ಜಿ ಬುಕಿಂಗ್ ಸುಮಾರು 98% ಕ್ಕೆ ಏರಿದೆ.
• ದುರ್ಬಳಕೆಯನ್ನು ತಡೆಗಟ್ಟಲು 'ಡೆಲಿವರಿ ಅಥೆಂಟಿಕೇಶನ್ ಕೋಡ್' (DAC) ಆಧಾರಿತ ವಿತರಣೆಗಳು ಸುಮಾರು 93% ಕ್ಕೆ ಹೆಚ್ಚಿವೆ. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ DAC ಸಂದೇಶ ಬರಲಿದೆ.
• ಬುಕಿಂಗ್ ಗಳಿಗೆ ಅನುಗುಣವಾಗಿ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ವಿತರಣೆಗಳು ಸಹಜವಾಗಿವೆ.
• 16.04.26 ರಂದು 50.5 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
• ಒಟ್ಟು ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಸುಮಾರು 70% ಕ್ಕೆ ಹೆಚ್ಚಿಸಲಾಗಿದೆ, ಇದು 10% ಸುಧಾರಣೆ-ಸಂಯೋಜಿತ (reform-linked) ಹಂಚಿಕೆಯನ್ನು ಒಳಗೊಂಡಿದೆ.
• 06.04.2026 ರ ಪತ್ರದ ಮೂಲಕ ಭಾರತ ಸರ್ಕಾರವು, ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳ ದೈನಂದಿನ ಪ್ರಮಾಣವನ್ನು ದ್ವಿಗುಣಗೊಳಿಸಿದೆ. ಇದು ಮಾರ್ಚ್ 2-3, 2026 ರ ನಡುವೆ ವಲಸೆ ಕಾರ್ಮಿಕರಿಗೆ ನೀಡಲಾದ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ಇರಲಿದ್ದು, 21.03.2026 ರ ಪತ್ರದಲ್ಲಿ ತಿಳಿಸಲಾದ 20% ಮಿತಿಗಿಂತ ಹೆಚ್ಚಿರಲಿದೆ. ಈ 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳು ರಾಜ್ಯ ಸರ್ಕಾರದ ವಿವೇಚನೆಯಲ್ಲಿದ್ದು, ತೈಲ ಮಾರಾಟ ಕಂಪನಿಗಳ (OMCs) ನೆರವಿನೊಂದಿಗೆ ಕೇವಲ ವಲಸೆ ಕಾರ್ಮಿಕರಿಗೆ ಪೂರೈಸಲು ಬಳಸಲಾಗುವುದು.
• ಏಪ್ರಿಲ್ 3, 2026 ರಿಂದ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು 5 ಕೆಜಿ ಎಫ್ಟಿ ಎಲ್ ಸಿಲಿಂಡರ್ ಗಳಿಗಾಗಿ 6100 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 80,000 ಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳು ಮಾರಾಟವಾಗಿವೆ. ನಿನ್ನೆ ಸುಮಾರು 400 ಶಿಬಿರಗಳ ಮೂಲಕ 8643 - 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ.
• ಇತ್ತೀಚೆಗೆ ಏಪ್ರಿಲ್ 16, 2026 ರಂದು ಮಹಾರಾಷ್ಟ್ರದ ವಾಶಿಯಲ್ಲಿ IOCL ಆಯೋಜಿಸಿದ್ದ 5 ಕೆಜಿ ಎಫ್ ಟಿ ಎಲ್ ಜಾಗೃತಿ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 800 ಸಿಲಿಂಡರ್ ಗಳು ಮಾರಾಟವಾಗಿವೆ.
• ಮಾರ್ಚ್ 23, 2026 ರಿಂದ 16.41 ಲಕ್ಷಕ್ಕೂ ಹೆಚ್ಚು 5 ಕೆಜಿ ಮುಕ್ತ ವ್ಯಾಪಾರ (Free Trade) ಎಲ್ ಪಿ ಜಿ ಸಿಲಿಂಡರ್ ಗಳು ಮಾರಾಟವಾಗಿವೆ.
• IOCL, HPCL ಮತ್ತು BPCL ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್ ಪಿ ಜಿ ವಿತರಣೆಯನ್ನು ಯೋಜಿಸಲು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
• 16.04.2026 ರಂದು 8211 ಮೆಟ್ರಿಕ್ ಟನ್ ವಾಣಿಜ್ಯ ಎಲ್ ಪಿ ಜಿ (4.32 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್ ಗಳಿಗೆ ಸಮಾನ) ಮಾರಾಟವಾಗಿದೆ.
• ಮಾರ್ಚ್ 14, 2026 ರಿಂದ ಒಟ್ಟು 1,50,367 ಮೆಟ್ರಿಕ್ ಟನ್ (79.14 ಲಕ್ಷಕ್ಕೂ ಹೆಚ್ಚು 19 ಕೆಜಿ ಎಲ್ ಪಿ ಜಿ ಸಿಲಿಂಡರ್ ಗಳಿಗೆ ಸಮಾನ) ವಾಣಿಜ್ಯ ಎಲ್ ಪಿ ಜಿ ಮಾರಾಟವಾಗಿದೆ. ಇದು 8850 ಮೆಟ್ರಿಕ್ ಟನ್ ಗಿಂತ ಹೆಚ್ಚಿನ ಆಟೋ ಎಲ್ ಪಿ ಜಿ ಯನ್ನು ಒಳಗೊಂಡಿದೆ.
• ಫೆಬ್ರವರಿ-26 ರ ಸರಾಸರಿ ದಿನಕ್ಕೆ 177 ಮೆಟ್ರಿಕ್ ಟನ್ ಮಾರಾಟಕ್ಕೆ ಹೋಲಿಸಿದರೆ, ಏಪ್ರಿಲ್-26 ರಲ್ಲಿ (16.04.26 ರವರೆಗೆ) ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ ಸರಾಸರಿ ಆಟೋ ಎಲ್ ಪಿ ಜಿ ಮಾರಾಟವು ದಿನಕ್ಕೆ ಸುಮಾರು 296 ಮೆಟ್ರಿಕ್ ಟನ್ ಆಗಿದೆ.
• ಆಟೋ ಎಲ್ ಪಿ ಜಿ ಮಾರಾಟವು ಖಾಸಗಿ ಕಂಪನಿಗಳಿಂದ ಸಾರ್ವಜನಿಕ ವಲಯದ ಕಂಪನಿಗಳಿಗೆ ವರ್ಗಾವಣೆಗೊಂಡಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಸಾರ್ವಜನಿಕ ವಲಯದ ಕಂಪನಿಗಳಿಂದ ಆಟೋ ಎಲ್ ಪಿ ಜಿ ಮಾರಾಟವು 67% ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ ಜಿ (PNG) ವಿಸ್ತರಣಾ ಉಪಕ್ರಮಗಳು
• ಗೃಹಬಳಕೆಯ ಪಿ ಎನ್ ಜಿ (D-PNG) ಮತ್ತು ಸಿ ಎನ್ ಜಿ-ಸಾರಿಗೆಗೆ (CNG-Transport) 100% ಪೂರೈಕೆಯನ್ನು ನೀಡುವ ಮೂಲಕ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
• ರಸಗೊಬ್ಬರ ಘಟಕಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 95% ಕ್ಕೆ ಹೆಚ್ಚಿಸಲಾಗಿದೆ.
• ಇದರ ಜೊತೆಗೆ, ಸಿಜಿಡಿ (CGD) ಜಾಲಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು 80% ರವರೆಗೆ ಹೆಚ್ಚಿಸಲಾಗಿದೆ.
• ವಾಣಿಜ್ಯ ಎಲ್ ಪಿ ಜಿ ಲಭ್ಯತೆಯ ಬಗೆಗಿನ ಕಳವಳಗಳನ್ನು ಪರಿಹರಿಸಲು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ ಪಿ ಎನ್ ಜಿ ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ ಸಿಜಿಡಿ ಸಂಸ್ಥೆಗಳಿಗೆ ಸೂಚಿಸಲಾಗಿದೆ.
• IGL, MGL, GAIL Gas ಮತ್ತು BPCL ಸೇರಿದಂತೆ ಸಿಜಿಡಿ ಕಂಪನಿಗಳು ಗೃಹಬಳಕೆಯ ಮತ್ತು ವಾಣಿಜ್ಯ ಪಿ ಎನ್ ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
• ಸಿಜಿಡಿ ಜಾಲಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಲಾಗಿದೆ.
• 18.03.2026 ರ ಪತ್ರದ ಮೂಲಕ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್ ಪಿ ಜಿ ಯ ಹೆಚ್ಚುವರಿ 10% ಹಂಚಿಕೆಯನ್ನು ನೀಡಿದೆ, ಆದರೆ ಅವು ಎಲ್ ಪಿ ಜಿ ಯಿಂದ ಪಿ ಎನ್ ಜಿ ಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಬೇಕಾಗುತ್ತದೆ.
• 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್ ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.
• ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಪ್ರಕ್ರಿಯೆಗೊಳಿಸಲು 3 ತಿಂಗಳ ವಿಶೇಷ ಅವಧಿಗಾಗಿ 'ಕಡಿಮೆಯಾದ ಕಾಲಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ವೇಗವರ್ಧಿತ ಅನುಮೋದನೆ ಚೌಕಟ್ಟು' ಅಳವಡಿಸಿಕೊಂಡಿದೆ.
• ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್ ಲೈನ್ಗಳು ಮತ್ತು ಇತರ ಸೌಲಭ್ಯಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್ ಲೈನ್ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ. ಇದು ಅನುಮೋದನೆಗಳಲ್ಲಿನ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಪಿ ಎನ್ ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸಲು, ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳತ್ತ ಪರಿವರ್ತನೆಯನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
• PNGRB ಗೃಹಬಳಕೆಯ ಪಿ ಎನ್ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಅಲ್ಲದೆ, ಪಿ ಎನ್ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು 'ರಾಷ್ಟ್ರೀಯ ಪಿ ಎನ್ ಜಿ ಅಭಿಯಾನ 2.0' (National PNG Drive 2.0) ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
• ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಪ್ರೋತ್ಸಾಹಿಸಲು, ಭಾರತ ಸರ್ಕಾರವು ಮಾದರಿ ಕರಡು 'ರಾಜ್ಯ ಸಿಬಿಜಿ (CBG) ನೀತಿ'ಯನ್ನು ಸಿದ್ಧಪಡಿಸಿದೆ. ಈ ಮಾದರಿ ನೀತಿಯು ರಾಜ್ಯಗಳು ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ ಆಧಾರಿತ ಸಿಬಿಜಿ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ನೀತಿಯನ್ನು ಅಳವಡಿಸಿಕೊಳ್ಳುವ ರಾಜ್ಯಗಳಿಗೆ ವಾಣಿಜ್ಯ ಎಲ್ ಪಿ ಜಿಯ ಮುಂದಿನ ಹೆಚ್ಚುವರಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
• ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) 07.04.2026 ರ ಆದೇಶದ ಮೂಲಕ, ಸಿಜಿಡಿ ನೆಟ್ ವರ್ಕ್/ಮೂಲಸೌಕರ್ಯಗಳಿಗೆ 15 ದಿನಗಳೊಳಗೆ ಸ್ಥಾಪನೆ ಅಥವಾ ಕಾರ್ಯಾಚರಣೆಯ ಅನುಮತಿಯನ್ನು ನೀಡಲು ಎಸ್ಪಿ ಸಿ ಬಿ / ಪಿ ಸಿ ಸಿ ಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಸಿಪಿಸಿಬಿ (CPCB) ಗೆ ಸೂಚಿಸಿದೆ.
• ಸಿಪಿಸಿಬಿ ನಿರ್ದೇಶನಗಳ ಪ್ರಕಾರ, ಕೆಲವು ತೈಲ ಮತ್ತು ಅನಿಲ ಸಾರಿಗೆ ಪೈಪ್ ಲೈನ್ ಗಳನ್ನು "ಹಸಿರು" (Green) ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ.
• MoEFCC ಈಗಾಗಲೇ "ಆಟೋಮೊಬೈಲ್ ಸರ್ವಿಸಿಂಗ್, ರಿಪೇರಿ ಮತ್ತು ಪೇಂಟಿಂಗ್ ಇಲ್ಲದ ಇಂಧನ ವಿತರಣಾ ಘಟಕಗಳನ್ನು" "ಬಿಳಿ" (White) ವರ್ಗ ಎಂದು ವರ್ಗೀಕರಿಸಿದೆ ಮತ್ತು ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಇವುಗಳಿಗೆ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
• ಮಾರ್ಚ್ 2026 ರಿಂದ, ಸುಮಾರು 4.68 ಲಕ್ಷ ಪಿ ಎನ್ ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ ಆರಂಭಿಸಲಾಗಿದೆ. ಇದಲ್ಲದೆ, ಸುಮಾರು 5.23 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
• 16.04.2026 ರವರೆಗೆ, ಸುಮಾರು 37,000 ಪಿ ಎನ್ ಜಿ ಗ್ರಾಹಕರು MYPNGD.in ವೆಬ್ಸೈಟ್ ಮೂಲಕ ತಮ್ಮ ಎಲ್ ಪಿ ಜಿ ಸಂಪರ್ಕಗಳನ್ನು ತ್ಯಜಿಸಿದ್ದಾರೆ.
ಕಚ್ಚಾ ತೈಲ ಪರಿಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು
• ಎಲ್ಲಾ ರಿಫೈನರಿಗಳು (ಸಂಸ್ಕರಣಾಗಾರಗಳು) ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳ ಬಳಿ ಸಾಕಷ್ಟು ಕಚ್ಚಾ ತೈಲ ದಾಸ್ತಾನು ಇದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ನ ಸಮರ್ಪಕ ದಾಸ್ತಾನನ್ನು ನಿರ್ವಹಿಸಲಾಗುತ್ತಿದೆ.
• ಗೃಹಬಳಕೆಯ ಎಲ್ ಪಿ ಜಿ ಸೇವನೆಯನ್ನು ಬೆಂಬಲಿಸಲು ರಿಫೈನರಿಗಳಿಂದ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
• ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್ಸ್ಟಾಕ್ (Petrochemical feedstock) ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯದ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ತೈಲ ಸಂಸ್ಕರಣಾ ಕಂಪನಿಗಳು ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳು, ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್ ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
• ಔಷಧೀಯ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (DCPC), ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ನೀಡಿದ ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗೆ ಎಲ್ ಪಿ ಜಿ ಪೂಲ್ ನಿಂದ ದಿನಕ್ಕೆ 1000 ಮೆಟ್ರಿಕ್ ಟನ್ ಪೂರೈಕೆಗೆ ಅವಕಾಶ ಮಾಡಿಕೊಡಲಾಗಿದೆ.
• ಏಪ್ರಿಲ್ 9, 2026 ರಿಂದ ಸುಮಾರು 2550 ಮೆಟ್ರಿಕ್ ಟನ್ ಪ್ರೊಪಿಲೀನ್ (Propylene) ಮಾರಾಟವಾಗಿದೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು
• ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
• ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರ ಹಿತರಕ್ಷಣೆಗಾಗಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹10 ರಷ್ಟು ಕಡಿತಗೊಳಿಸಿದೆ.
• ದೇಶೀಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ ₹55.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ ₹42 ಕ್ಕೆ ಹೆಚ್ಚಿಸಿದೆ.
• ಪೆಟ್ರೋಲ್ ಮತ್ತು ಡೀಸೆಲ್ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ (PSU OMCs) ಚಿಲ್ಲರೆ ಮಳಿಗೆಗಳಲ್ಲಿ ಯಾವುದೇ ಬೆಲೆ ಏರಿಕೆಯಾಗಿಲ್ಲ.
ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು
• ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
• 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅವಶ್ಯಕತೆ ಇಲ್ಲ ಎಂದು ತಿಳಿಸಿವೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಪರ್ಷಿಯನ್ ಕೊಲ್ಲಿಯಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿ ಹಾಗೂ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಮಾಹಿತಿ ನೀಡಿದೆ. ಈ ಕುರಿತು ತಿಳಿಸಲಾದ ಅಂಶಗಳು ಹೀಗಿವೆ:
• ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
• ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
• ಡಿಜಿ ಶಿಪ್ಪಿಂಗ್ (DG Shipping) ನಿಯಂತ್ರಣ ಕೊಠಡಿಯು ಕಾರ್ಯಾರಂಭ ಮಾಡಿದಂದಿನಿಂದ ಇದುವರೆಗೆ 6,727 ಕರೆಗಳನ್ನು ಮತ್ತು 13,987 ಕ್ಕೂ ಹೆಚ್ಚು ಇಮೇಲ್ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 147 ಕರೆಗಳು ಮತ್ತು 276 ಇಮೇಲ್ ಗಳು ಸ್ವೀಕರಿಸಲ್ಪಟ್ಟಿವೆ.
• ಡಿಜಿ ಶಿಪ್ಪಿಂಗ್ ಇದುವರೆಗೆ ಕೊಲ್ಲಿ ಪ್ರದೇಶದ ವಿವಿಧ ಸ್ಥಳಗಳಿಂದ 2,447 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 30 ನಾವಿಕರು ಸೇರಿದ್ದಾರೆ.
• ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.
ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ
ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಆ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕುರಿತು ನೀಡಲಾದ ಮಾಹಿತಿ ಹೀಗಿದೆ:
• ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸ್ಥಾಪಿಸಲಾದ ವಿಶೇಷ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯದೊಂದಿಗೆ ಕೆಲಸ ಮಾಡುತ್ತಿವೆ.
• ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪ್ರಯತ್ನಗಳನ್ನು ಉತ್ತಮವಾಗಿ ಸಂಯೋಜಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ.
• ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ಭಾರತೀಯ ನಾಗರಿಕರಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವರು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
• ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ದೂತಾವಾಸ ಸೇವೆಗಳು ಮತ್ತು ನಮ್ಮ ಸಮುದಾಯವನ್ನು ಬೆಂಬಲಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಮಾಹಿತಿಯನ್ನು ಒಳಗೊಂಡ ನವೀಕೃತ ಸಲಹೆಗಳನ್ನು ನಿಯಮಿತವಾಗಿ ಹೊರಡಿಸಲಾಗುತ್ತಿದೆ.
• ಭಾರತೀಯ ರಾಯಭಾರ ಕಚೇರಿಗಳು ಆ ಪ್ರದೇಶದಲ್ಲಿ ವಾಸಿಸುವ ಭಾರತೀಯ ಸಮುದಾಯದ ವಿವಿಧ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ಅವರ ಕಳವಳಗಳನ್ನು ಪರಿಹರಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿವೆ.
• ನಮ್ಮ ರಾಯಭಾರ ಕಚೇರಿಗಳು ಈ ಪ್ರದೇಶದಲ್ಲಿನ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ದೂತಾವಾಸ ನೆರವು ನೀಡುವುದು, ಭಾರತದಲ್ಲಿರುವ ಕುಟುಂಬಗಳೊಂದಿಗೆ ಸಂವಹನಕ್ಕೆ ಅನುವು ಮಾಡಿಕೊಡುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿವೆ.
• ವೈಮಾನಿಕ ವ್ಯಾಪ್ತಿ (Airspace) ಮುಕ್ತವಾಗಿರುವ ದೇಶಗಳಿಂದ ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಫೆಬ್ರವರಿ 28 ರಿಂದ ಸುಮಾರು 10,38,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
• ಯುಎಇಯಲ್ಲಿ (UAE), ಕಾರ್ಯಾಚರಣೆ ಮತ್ತು ಸುರಕ್ಷತಾ ಪರಿಗಣನೆಗಳ ಆಧಾರದ ಮೇಲೆ ವಿಮಾನಯಾನ ಸಂಸ್ಥೆಗಳು ಯುಎಇ ಮತ್ತು ಭಾರತದ ನಡುವೆ ಸೀಮಿತ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಡೆಸುತ್ತಿವೆ. ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 105 ವಿಮಾನಗಳು ಸಂಚರಿಸುವ ನಿರೀಕ್ಷೆಯಿದೆ.
• ಸೌದಿ ಅರೇಬಿಯಾ ಮತ್ತು ಓಮನ್ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ಸ್ಥಳಗಳಿಗೆ ವಿಮಾನಗಳು ಕಾರ್ಯಾಚರಣೆ ಮುಂದುವರಿಸಿವೆ.
• ಕತಾರ್ ವೈಮಾನಿಕ ವ್ಯಾಪ್ತಿಯು ಭಾಗಶಃ ಮುಕ್ತವಾಗಿದ್ದು, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 10 ವಿಮಾನಗಳನ್ನು ಓಡಿಸುವ ನಿರೀಕ್ಷೆಯಿದೆ.
• ಕುವೈತ್ ವೈಮಾನಿಕ ವ್ಯಾಪ್ತಿಯು ಮುಚ್ಚಲ್ಪಟ್ಟಿದೆ. ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ.
• ಬಹ್ರೇನ್ ವೈಮಾನಿಕ ವ್ಯಾಪ್ತಿಯು ಮುಕ್ತವಾಗಿದೆ. ಬಹ್ರೇನ್ ನ ಗಲ್ಫ್ ಏರ್ ಬಹ್ರೇನ್ ನಿಂದ ಭಾರತಕ್ಕೆ ಸೀಮಿತ ವಿಮಾನ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಮತ್ತು ಪ್ರಸ್ತುತ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ನಿಗದಿತವಲ್ಲದ ವಿಮಾನಗಳನ್ನು ನಿರ್ವಹಿಸುತ್ತಿದೆ.
• ಇರಾಕ್ ವೈಮಾನಿಕ ವ್ಯಾಪ್ತಿಯು ಮುಕ್ತವಾಗಿದ್ದು, ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಈ ಪ್ರದೇಶದ ಇತರ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳಿವೆ.
• ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 1,041 ಭಾರತೀಯ ವಿದ್ಯಾರ್ಥಿಗಳು ಮತ್ತು 657 ಭಾರತೀಯ ಮೀನುಗಾರರು ಸೇರಿದಂತೆ ಒಟ್ಟು 2,358 ಭಾರತೀಯ ನಾಗರಿಕರನ್ನು ಇರಾನ್ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗೆ ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಕಳುಹಿಸಿಕೊಟ್ಟಿದೆ.
• ಇಸ್ರೇಲ್ ವೈಮಾನಿಕ ವ್ಯಾಪ್ತಿಯು ನಿರ್ಬಂಧಿತ ವಿಮಾನ ಕಾರ್ಯಾಚರಣೆಗಳೊಂದಿಗೆ ಭಾಗಶಃ ಮುಕ್ತವಾಗಿದೆ. ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಭಾರತೀಯ ನಾಗರಿಕರ ಪ್ರಯಾಣವನ್ನು ಭಾರತಕ್ಕೆ ಸುಗಮಗೊಳಿಸಲಾಗುತ್ತಿದೆ.
ಹಜ್ ಯಾತ್ರೆ 2026
2026ನೇ ಸಾಲಿನ ಭಾರತದ ಹಜ್ ಯಾತ್ರೆಯ ಪ್ರಾರಂಭದ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಇಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.
• ಭಾರತೀಯ ಹಜ್ ಯಾತ್ರಿಕರ ಮೊದಲ ತಂಡವು 18 ಏಪ್ರಿಲ್ 2026 ರಂದು ದೇಶದ ವಿವಿಧ ನಿರ್ಗಮನ ಕೇಂದ್ರಗಳಿಂದ ಸೌದಿ ಅರೇಬಿಯಾಕ್ಕೆ ಹೊರಡಲು ನಿರ್ಧರಿಸಲಾಗಿದೆ.
• ಒಟ್ಟು 1,75,025 ಯಾತ್ರಿಕರು ಈ ಪವಿತ್ರ ಯಾತ್ರೆಯನ್ನು ಕೈಗೊಳ್ಳುವ ನಿರೀಕ್ಷೆಯಿದೆ.
• ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ದೂತಾವಾಸವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಸೇರಿದಂತೆ ಸಂಬಂಧಪಟ್ಟ ಸೌದಿ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆಗಾಗಿ ನಿಕಟ ಸಮನ್ವಯ ಸಾಧಿಸುತ್ತಿವೆ. ಯಾತ್ರಿಕರನ್ನು ಬರಮಾಡಿಕೊಳ್ಳಲು ಅವು ಕಾರ್ಯಾಚರಣೆಗೆ ಸಜ್ಜಾಗಿವೆ.
• ಭಾರತ ಸರ್ಕಾರವು ಯಾತ್ರಿಕರ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಅತ್ಯುನ್ನತ ಆದ್ಯತೆ ನೀಡುತ್ತದೆ ಮತ್ತು ಸುಗಮ ಹಾಗೂ ಆರಾಮದಾಯಕ ಯಾತ್ರೆಯ ಅನುಭವವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.
• ಈ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿರುವ ಎಲ್ಲಾ ಯಾತ್ರಿಕರಿಗೆ ಸಚಿವಾಲಯವು ಶುಭ ಹಾರೈಕೆಗಳನ್ನು ತಿಳಿಸಿದೆ.
• ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಗಮನಿಸಿ.
*****
(ಪ್ರಕಟಣೆ ಐ.ಡಿ.: 2253166)
ವಿಸಿಟರ್ ಕೌಂಟರ್ : 12