ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ವಿಧೇಯಕ-2026, ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ವಿಧೇಯಕ-2026ರ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದರು
ಯಾವುದೇ ರಾಜ್ಯಕ್ಕೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ
ಕ್ಷೇತ್ರ ಮರುವಿಂಗಡಣೆ ವಿಧೇಯಕ, 2026 ದಕ್ಷಿಣದ ರಾಜ್ಯಗಳಿಗೆ ಹಾನಿ ಮಾಡುವುದಿಲ್ಲ, ಬದಲಾಗಿ ಪ್ರಯೋಜನ ನೀಡಲಿದೆ
ಪ್ರಸ್ತುತ ದಕ್ಷಿಣ ಭಾರತದಿಂದ 129 ಸಂಸದರಿದ್ದಾರೆ; ಈ ವಿಧೇಯಕದ ನಂತರ ಆ ಸಂಖ್ಯೆಯು 195ಕ್ಕೆ ಏರಿಕೆಯಾಗಲಿದೆ
ಕ್ಷೇತ್ರ ಮರುವಿಂಗಡಣಾ ಆಯೋಗದ ಕಾಯ್ದೆಗೆ ನಾವು ಯಾವುದೇ ಬದಲಾವಣೆ ಮಾಡಿಲ್ಲ; ಅಸ್ತಿತ್ವದಲ್ಲಿರುವ ಕಾಯ್ದೆಯನ್ನು ಪೂರ್ಣವಿರಾಮ ಮತ್ತು ಅಲ್ಪವಿರಾಮಗಳೂ ಸೇರಿದಂತೆ ನಿಖರವಾಗಿ ಪುನರಾವರ್ತಿಸಿದ್ದೇವೆ
ತಮಿಳುನಾಡು ಅಥವಾ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಈ ಕಾಯ್ದೆಯು ಯಾವುದೇ ಪರಿಣಾಮ ಬೀರುವುದಿಲ್ಲ; 2029 ಕ್ಕಿಂತ ಮೊದಲು ಇದು ಜಾರಿಗೆ ಬರುವ ಪ್ರಶ್ನೆಯೇ ಇಲ್ಲ
2029 ರವರೆಗೆ ನಡೆಯಲಿರುವ ಎಲ್ಲಾ ಚುನಾವಣೆಗಳನ್ನು ಅಸ್ತಿತ್ವದಲ್ಲಿರುವ ಸ್ಥಾನಗಳ ಮೇಲೆ ಮತ್ತು ಪ್ರಸ್ತುತ ಪದ್ಧತಿಯಡಿಯಲ್ಲೇ ನಡೆಸಲಾಗುವುದು
ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ—ಮೊದಲನೆಯದಾಗಿ ಮನೆಗಳ ಎಣಿಕೆ ಮತ್ತು ನಂತರ ವ್ಯಕ್ತಿಗಳ ಎಣಿಕೆ. ಮನೆಗಣತಿಯ ಮೊದಲ ಹಂತವು ಪ್ರಸ್ತುತ ನಡೆಯುತ್ತಿದೆ ಮತ್ತು ಮನೆಗಳಿಗೆ ಯಾವುದೇ ಜಾತಿ ಇರುವುದಿಲ್ಲವಾದ್ದರಿಂದ, ಈ ಹಂತದಲ್ಲಿ ಫಾರಂನಲ್ಲಿ ಜಾತಿಗೆ ಯಾವುದೇ ಆಯ್ಕೆ ಇರುವುದಿಲ್ಲ
ವ್ಯಕ್ತಿಗಳ ಎಣಿಕೆ ನಡೆಸಿದಾಗ ಜಾತಿ ಜನಗಣತಿಯ ಪ್ರಶ್ನೆ ಉದ್ಭವಿಸುತ್ತದೆ
850 ಸ್ಥಾನಗಳು ಎಂಬುದು ಒಂದು ಅಂದಾಜು ಸಂಖ್ಯೆಯಾಗಿದ್ದು ಅದು ಗರಿಷ್ಠ ಮಿತಿಯನ್ನು ಪ್ರತಿನಿಧಿಸುತ್ತದೆ; ಸ್ಥಾನಗಳ ನಿಖರ ಸಂಖ್ಯೆ 816 ಆಗಿರುತ್ತದೆ. ಪ್ರಸ್ತುತ ಕೂಡ ಅಂದಾಜು ಸಂಖ್ಯೆ 543 ಅಲ್ಲ, ಬದಲಾಗಿ 550 ಸ್ಥಾನಗಳು
ಕರ್ನಾಟಕದ ಪ್ರಸ್ತುತ 28 ಸ್ಥಾನಗಳು 42 ಕ್ಕೆ ಏರಿಕೆಯಾಗಲಿವೆ ಮತ್ತು ಒಟ್ಟು ಸ್ಥಾನಗಳಲ್ಲಿ ರಾಜ್ಯದ ಪಾಲು ಈಗಿರುವ ಶೇ. 5.15 ಕ್ಕೆ ಹೋಲಿಸಿದರೆ ಶೇ. 5.14 ರಷ್ಟೇ ಇರಲಿದೆ
ಆಂಧ್ರಪ್ರದೇಶದ ಸ್ಥಾನಗಳು 25 ರಿಂದ 38 ಕ್ಕೆ ಏರಿಕೆಯಾಗಲಿವೆ ಮತ್ತು ಒಟ್ಟು ಸ್ಥಾನಗಳಲ್ಲಿ ರಾಜ್ಯದ ಪಾಲು ಶೇ. 4.60 ರಿಂದ ಶೇ. 4.65 ಕ್ಕೆ ಏರಲಿದೆ
ತೆಲಂಗಾಣದ ಸ್ಥಾನಗಳ ಸಂಖ್ಯೆ 17 ರಿಂದ 26 ಕ್ಕೆ ಏರಿಕೆಯಾಗಲಿದೆ ಮತ್ತು ಅದರ ಪಾಲು ಶೇ. 3.13 ರಿಂದ ಶೇ. 3.18 ಕ್ಕೆ ಏರಲಿದೆ
ತಮಿಳುನಾಡಿನ ಜನರಿಗೆ ನಿಮ್ಮ ಬಲ ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚಾಗುತ್ತಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ
ತಮಿಳುನಾಡಿನ ಪ್ರಸ್ತುತ ಸ್ಥಾನಗಳು 39 ರಿಂದ 59 ಕ್ಕೆ ಏರಿಕೆಯಾಗಲಿವೆ ಮತ್ತು ಒಟ್ಟು ಸ್ಥಾನಗಳಲ್ಲಿ ರಾಜ್ಯದ ಪಾಲು ಶೇ. 7.18 ರಿಂದ ಶೇ. 7.23 ಕ್ಕೆ ಏರಲಿದೆ
ಕೇರಳಂ ನ 20 ಸ್ಥಾನಗಳು 30 ಕ್ಕೆ ಏರಿಕೆಯಾಗಲಿವೆ ಮತ್ತು ರಾಜ್ಯದ ಸ್ಥಾನಗಳ ಪಾಲು ಬಹುತೇಕ ಈಗಿನಷ್ಟೇ ಇರಲಿದೆ
ಪ್ರಕಟಣಾ ದಿನಾಂಕ:
16 APR 2026 8:44PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ವಿಧೇಯಕ-2026, ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ವಿಧೇಯಕ-2026ರ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿ, ಈ ಮೂರು ವಿಧೇಯಕಗಳ ನಂತರ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವು ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ಅವು ದೊಡ್ಡ ನಷ್ಟ ಅನುಭವಿಸುತ್ತವೆ ಎಂಬ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ಮರುವಿಂಗಡಣೆ ವಿಧೇಯಕ-2026 ದಕ್ಷಿಣದ ರಾಜ್ಯಗಳಿಗೆ ಹಾನಿ ಮಾಡುವುದಿಲ್ಲ, ಬದಲಾಗಿ ಅವುಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಶೇ. 50 ರಷ್ಟು ಹೆಚ್ಚಳದ ಮಾದರಿಯಡಿ ಲೋಕಸಭೆಯ ಪ್ರಸ್ತುತ 543 ಸ್ಥಾನಗಳು 816 ಕ್ಕೆ ಏರಲಿದ್ದು, ಇದರಿಂದ ಎಲ್ಲಾ ದಕ್ಷಿಣದ ರಾಜ್ಯಗಳ ಸ್ಥಾನಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು. ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಸ್ತುತ 129 ಸ್ಥಾನಗಳು 195ಕ್ಕೆ ಏರಲಿದ್ದು, ಸದನದ ಒಟ್ಟು ಸ್ಥಾನಗಳಲ್ಲಿ ಅವುಗಳ ಪಾಲು ಬಹುತೇಕ ಈಗಿನಷ್ಟೇ ಅಂದರೆ ಸುಮಾರು ಶೇ. 24 ರಷ್ಟು ಇರಲಿದೆ ಎಂದು ಕೇಂದ್ರ ಗೃಹ ಸಚಿವರಾದರು ತಿಳಿಸಿದರು.
543 ಸದಸ್ಯರ ಪ್ರಸ್ತುತ ಸದನದಲ್ಲಿ ಕರ್ನಾಟಕವು ಪ್ರಸ್ತುತ 28 ಸದಸ್ಯರನ್ನು ಹೊಂದಿದ್ದು, ಇದು ಒಟ್ಟು ಸಂಖ್ಯೆಯ ಸುಮಾರು ಶೇ. 5.15 ರಷ್ಟಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉದ್ದೇಶಿತ ವಿಧೇಯಕಗಳು ಮತ್ತು ಸಾಂವಿಧಾನಿಕ ತಿದ್ದುಪಡಿ ಅಂಗೀಕಾರವಾದ ನಂತರ ಕರ್ನಾಟಕದ ಸ್ಥಾನಗಳ ಸಂಖ್ಯೆ 28 ರಿಂದ 42 ಕ್ಕೆ ಏರಿಕೆಯಾಗಲಿದೆ. ಅಂತಹ ಸಂದರ್ಭದಲ್ಲಿ 816 ಸದಸ್ಯರ ಲೋಕಸಭೆಯಲ್ಲಿ ಕರ್ನಾಟಕದ ಪ್ರಾತಿನಿಧ್ಯ ಶೇ. 5.14 ರಷ್ಟೇ ಇರಲಿದೆ, ಆದ್ದರಿಂದ ಕರ್ನಾಟಕವು ಯಾವುದೇ ನಷ್ಟವನ್ನು ಅನುಭವಿಸುವುದಿಲ್ಲ ಎಂದು ಅವರು ಹೇಳಿದರು.
ಆಂಧ್ರಪ್ರದೇಶವು ಪ್ರಸ್ತುತ 25 ಸ್ಥಾನಗಳನ್ನು ಹೊಂದಿದ್ದು, 543 ಸದಸ್ಯರ ಸದನದಲ್ಲಿ ಸುಮಾರು ಶೇ. 4.60 ರಷ್ಟು ಪ್ರಾತಿನಿಧ್ಯ ಹೊಂದಿದೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಉದ್ದೇಶಿತ ಬದಲಾವಣೆಗಳ ನಂತರ ಸುಮಾರು ಶೇ. 50 ರಷ್ಟು ಹೆಚ್ಚಳದೊಂದಿಗೆ ಸ್ಥಾನಗಳ ಸಂಖ್ಯೆ 38 ಕ್ಕೆ ಏರಲಿದ್ದು, ಆಂಧ್ರಪ್ರದೇಶದ ಪ್ರಾತಿನಿಧ್ಯ ಸುಮಾರು ಶೇ. 4.65ಕ್ಕೆ ಏರಿಕೆಯಾಗಲಿದೆ. ಹಾಗೆಯೇ, ತೆಲಂಗಾಣವು ಪ್ರಸ್ತುತ 17 ಸ್ಥಾನಗಳನ್ನು ಹೊಂದಿದ್ದು, ಪ್ರಸ್ತುತ ಲೋಕಸಭೆಯಲ್ಲಿ ಸುಮಾರು ಶೇ. 3.13 ರಷ್ಟು ಪ್ರಾತಿನಿಧ್ಯ ಹೊಂದಿದೆ. ಉದ್ದೇಶಿತ ಹೆಚ್ಚಳದ ನಂತರ ಸ್ಥಾನಗಳ ಸಂಖ್ಯೆ 26 ಕ್ಕೆ ಏರಲಿದ್ದು, ಅದರ ಪ್ರಾತಿನಿಧ್ಯ ಸುಮಾರು ಶೇ. 3.18ಕ್ಕೆ ತಲುಪಲಿದೆ ಎಂದು ತಿಳಿಸಿದರು.
ತಮಿಳುನಾಡಿನ ಜನರಿಗೆ ನಿಮ್ಮ ಬಲ ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚಾಗಲಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತಮಿಳುನಾಡಿನ ಪ್ರಾತಿನಿಧ್ಯ ಕಡಿಮೆಯಾಗುವುದಿಲ್ಲ; ಬದಲಾಗಿ ಅದು ಬೆಳೆಯಲಿದೆ. ಪ್ರಸ್ತುತ ತಮಿಳುನಾಡಿನಿಂದ 39 ಸದಸ್ಯರು ಚುನಾಯಿತರಾಗುತ್ತಿದ್ದು, ಇದು 543 ಸದಸ್ಯರ ಸದನದ ಸುಮಾರು ಶೇ. 7.18 ರಷ್ಟಿದೆ. ಉದ್ದೇಶಿತ ಶೇ. 50 ರಷ್ಟು ಹೆಚ್ಚಳದ ನಂತರ ಸ್ಥಾನಗಳ ಸಂಖ್ಯೆ ಸುಮಾರು 59 ಕ್ಕೆ ಏರಲಿದ್ದು, 816 ಸದಸ್ಯರ ಹೊಸ ಸದನದಲ್ಲಿ ಅದರ ಪ್ರಾತಿನಿಧ್ಯ ಸುಮಾರು ಶೇ. 7.23 ರಷ್ಟಿರಲಿದೆ. ಆದ್ದರಿಂದ, ಈ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ; ಬದಲಾಗಿ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.
ಕೇರಳಂ ಪ್ರಸ್ತುತ 20 ಲೋಕಸಭಾ ಸಂಸದರನ್ನು ಹೊಂದಿದ್ದು, ಇದು 543 ಸದಸ್ಯರ ಸದನದ ಸುಮಾರು ಶೇ. 3.68 ರಷ್ಟಿದೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. ಉದ್ದೇಶಿತ ಹೆಚ್ಚಳದ ನಂತರ ಈ ಸಂಖ್ಯೆಯು 20 ರಿಂದ 30 ಕ್ಕೆ ಏರಲಿದ್ದು, ಪ್ರಾತಿನಿಧ್ಯವು ಸುಮಾರು ಶೇ. 3.67 ರಷ್ಟಿರಲಿದೆ ಎಂದರು.
ದಕ್ಷಿಣ ಭಾರತದ ಒಟ್ಟಾರೆ ಪ್ರಾತಿನಿಧ್ಯವನ್ನು ಪರಿಗಣಿಸಿದರೆ, ಪ್ರಸ್ತುತ 543 ಸದಸ್ಯರ ಸದನದಲ್ಲಿ ದಕ್ಷಿಣದ ರಾಜ್ಯಗಳಿಂದ 129 ಸಂಸದರು ಇದ್ದಾರೆ, ಇದು ಸುಮಾರು ಶೇ. 23.76 ರಷ್ಟಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉದ್ದೇಶಿತ ಶೇ. 50 ರಷ್ಟು ಹೆಚ್ಚಳದ ನಂತರ ಈ ಸಂಖ್ಯೆಯು 129 ರಿಂದ 195ಕ್ಕೆ ಏರಲಿದ್ದು, 816 ಸದಸ್ಯರ ಸದನದಲ್ಲಿ ಅವರ ಪ್ರಾತಿನಿಧ್ಯ ಸುಮಾರು ಶೇ. 23.87 ರಷ್ಟು ಅಂದರೆ ಸರಿಸುಮಾರು ಶೇ. 24 ರಷ್ಟಿರಲಿದೆ. ಇದು ದಕ್ಷಿಣದ ರಾಜ್ಯಗಳ ಒಟ್ಟಾರೆ ಪ್ರಾತಿನಿಧ್ಯದ ಬಲ ಹೆಚ್ಚಾಗಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸಚಿವರಾದ ಸಂಪುಟವು ಜಾತಿ ಜನಗಣತಿ ನಡೆಸಲು ನಿರ್ಧರಿಸಿದೆ ಮತ್ತು ಮುಂಬರುವ ಜನಗಣತಿಯಲ್ಲಿ ಜಾತಿಗೆ ಸಂಬಂಧಿಸಿದ ದತ್ತಾಂಶವನ್ನೂ ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ—ಮೊದಲನೆಯದಾಗಿ ಮನೆಗಳ ಎಣಿಕೆ ಮತ್ತು ನಂತರ ವ್ಯಕ್ತಿಗಳ ಎಣಿಕೆ. ಮನೆಗಳನ್ನು ಎಣಿಸುವ ಮೊದಲ ಹಂತವು ಪ್ರಸ್ತುತ ನಡೆಯುತ್ತಿದ್ದು ಮನೆಗಳಿಗೆ ಯಾವುದೇ ಜಾತಿ ಇರುವುದಿಲ್ಲವಾದ್ದರಿಂದ ಈ ಹಂತದಲ್ಲಿ ಫಾರಂನಲ್ಲಿ ಜಾತಿಗೆ ಯಾವುದೇ ಆಯ್ಕೆ ಇರುವುದಿಲ್ಲ ಎಂದು ಅವರು ತಿಳಿಸಿದರು. ಜನರ ಎಣಿಕೆ ಹಂತದಲ್ಲಿ ವ್ಯಕ್ತಿಗಳ ದತ್ತಾಂಶ ಸಂಗ್ರಹಿಸುವಾಗ ಜಾತಿ ಸಂಬಂಧಿತ ಮಾಹಿತಿಯನ್ನೂ ದಾಖಲಿಸಲಾಗುವುದು ಎಂದು ಗೃಹ ಸಚಿವರಾದರು ತಿಳಿಸಿದರು.
ಸರ್ಕಾರವು ಕ್ಷೇತ್ರ ಮರುವಿಂಗಡಣಾ ಆಯೋಗದ ಕಾಯ್ದೆಗೆ ಯಾವುದೇ ಬದಲಾವಣೆ ಮಾಡಿಲ್ಲ, ಬದಲಾಗಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕ್ಷೇತ್ರ ಮರುವಿಂಗಡಣಾ ಆಯೋಗದ ಕಾಯ್ದೆಗೆ ನಾವು ಯಾವುದೇ ಬದಲಾವಣೆ ಮಾಡಿಲ್ಲ; ಅಸ್ತಿತ್ವದಲ್ಲಿರುವ ಕಾಯ್ದೆಯನ್ನು ಪೂರ್ಣವಿರಾಮ ಮತ್ತು ಅಲ್ಪವಿರಾಮಗಳೂ ಸೇರಿದಂತೆ ನಿಖರವಾಗಿ ಪುನರಾವರ್ತಿಸಿದ್ದೇವೆ. ಈ ಕಾಯ್ದೆಯನ್ನು ಈ ಹಿಂದೆ ಯಾವುದೇ ರೀತಿಯ ದುರುಪಯೋಗಕ್ಕೆ ಬಳಸಲಾಗಿದ್ದರೆ ಅದರ ಬಗ್ಗೆ ತಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಆದರೆ ಪ್ರಸ್ತುತ ಸರ್ಕಾರವು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರು ತಿಳಿಸಿದರು. ಕ್ಷೇತ್ರ ಮರುವಿಂಗಡಣಾ ಆಯೋಗದ ವರದಿಯು ಸಂಸತ್ತು ಅನುಮೋದಿಸಿದ ನಂತರ ಮತ್ತು ರಾಷ್ಟ್ರಪತಿಯವರ ಒಪ್ಪಿಗೆ ಪಡೆದ ನಂತರವೇ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವರಾದರು ಸ್ಪಷ್ಟಪಡಿಸಿದರು. ಆದ್ದರಿಂದ, 2029 ಕ್ಕಿಂತ ಮೊದಲು ಈ ಪ್ರಕ್ರಿಯೆಯು ಜಾರಿಗೆ ಬರುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಅಥವಾ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಈ ಕಾಯ್ದೆಯು ಯಾವುದೇ ಪರಿಣಾಮ ಬೀರುವುದಿಲ್ಲ; 2029 ಕ್ಕಿಂತ ಮೊದಲು ಇದು ಜಾರಿಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಶ್ರೀ ಶಾ ಹೇಳಿದರು. 2029 ರವರೆಗೆ ನಡೆಯಲಿರುವ ಎಲ್ಲಾ ಚುನಾವಣೆಗಳನ್ನು ಅಸ್ತಿತ್ವದಲ್ಲಿರುವ ಸ್ಥಾನಗಳ ಮೇಲೆ ಮತ್ತು ಪ್ರಸ್ತುತ ಪದ್ಧತಿಯಡಿಯಲ್ಲೇ ನಡೆಸಲಾಗುವುದು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಅಧಿಕಾರವು ಕೇವಲ ರಾಜಕೀಯ ಪಕ್ಷಗಳು ಅಥವಾ ನಾಯಕರಿಂದ ನಿರ್ಧರಿತವಾಗುವುದಿಲ್ಲ, ಬದಲಾಗಿ ನಾಗರಿಕರ ಇಚ್ಛೆ ಮತ್ತು ಚಿಂತನೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ಕೇಂದ್ರ ಗೃಹ ಸಚಿವರಾದರು ಹೇಳಿದರು. 130 ಕೋಟಿ ಜನರ ತೀರ್ಪನ್ನು ಯಾರೂ ಬದಲಿಸಲು ಸಾಧ್ಯವಿಲ್ಲ; ಅದು ಸಾಧ್ಯವಾಗಿದ್ದರೆ ಈ ಹಿಂದೆ ಸರ್ಕಾರಗಳೇ ಬದಲಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು. ಭಾರತದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಸಾರ್ವಜನಿಕ ಅಭಿಪ್ರಾಯವನ್ನು ಶಾಶ್ವತವಾಗಿ ಪ್ರಭಾವಿಸಲು ಸಾಧ್ಯವಾಗಲಿಲ್ಲ ಮತ್ತು ಜನರು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕವೇ ತಮ್ಮ ತೀರ್ಪನ್ನು ನೀಡಿದರು ಎಂದು ಅವರು ಹೇಳಿದರು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಸಾಮರ್ಥ್ಯ ಯಾರಿಗೂ ಇಲ್ಲ ಮತ್ತು ಇಂತಹ ಪ್ರಯತ್ನಗಳು ನಡೆದಾಗಲೆಲ್ಲಾ ಜನರು ಅವುಗಳನ್ನು ತಿರಸ್ಕರಿಸಿದ್ದಾರೆ ಎಂದು ಇತಿಹಾಸವೇ ಸಾಕ್ಷಿಯಾಗಿದೆ ಎಂದು ಶ್ರೀ ಅಮಿತ್ ಶಾ ಒತ್ತಿ ಹೇಳಿದರು.
543 ಸೀಟುಗಳಿಂದ 816 ಕ್ಕೆ ಏರಿಕೆ (ಶೇ.50 ಹೆಚ್ಚಳ)
|
ಕ್ರ.ಸಂ.
|
ರಾಜ್ಯ
|
ಪ್ರಸ್ತುತ ಸೀಟುಗಳು (543)
|
543 ಸೀಟುಗಳ ಪ್ರಸ್ತುತ ಶೇಕಡಾವಾರು
|
ಶೇ. 50 ಹೆಚ್ಚಳ (ಅಂದಾಜು)
|
ಹೊಸ ಸ್ಥಿತಿಗತಿ (816 ರ ಪೈಕಿ ಶೇಕಡಾವಾರು)
|
|
1.
|
ಕರ್ನಾಟಕ
|
28
|
5.15%
|
42
|
5.14%
|
|
2.
|
ಆಂಧ್ರಪ್ರದೇಶ
|
25
|
4.60%
|
38
|
4.65%
|
|
3.
|
ತೆಲಂಗಾಣ
|
17
|
3.13%
|
26
|
3.18%
|
|
4.
|
ತಮಿಳುನಾಡು
|
39
|
7.18%
|
59
|
7.23%
|
|
5.
|
ಕೇರಳಂ
|
20
|
3.68%
|
30
|
3.67%
|
| |
ಒಟ್ಟು
|
129
|
23.76% (ಅಂದಾಜು 24%)
|
195
|
23.87% (ಅಂದಾಜು 24%)
|
*****
(ಪ್ರಕಟಣೆ ಐ.ಡಿ.: 2252767)
ವಿಸಿಟರ್ ಕೌಂಟರ್ : 50
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
English
,
Urdu
,
Marathi
,
हिन्दी
,
Assamese
,
Punjabi
,
Gujarati
,
Odia
,
Tamil
,
Telugu