ಪ್ರಧಾನ ಮಂತ್ರಿಯವರ ಕಛೇರಿ
‘ನಾರಿ ಶಕ್ತಿ ವಂದನ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಭಾರತದ ನಾರಿ ಶಕ್ತಿಯ ಕೊಡುಗೆಗಳು ಅಪಾರ: ಪ್ರಧಾನಮಂತ್ರಿ
ಮಹಿಳಾ ನಾಯಕತ್ವಕ್ಕೆ ನಮ್ಮ ದೇಶದ ಪಂಚಾಯತ್ ರಾಜ್ ಸಂಸ್ಥೆಗಳೇ ಗಮನಾರ್ಹ ಉದಾಹರಣೆ: ಪ್ರಧಾನಮಂತ್ರಿ
ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರಿಗೆ ಸರ್ಕಾರದ ಬೆಂಬಲ: ಪ್ರಧಾನಮಂತ್ರಿ
ಪುರುಷ ಪ್ರಾಬಲ್ಯವೆಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿಯೂ ಮಹಿಳೆಯರಿಂದ ಇಂದು ಶ್ರೇಷ್ಠ ಸಾಧನೆ: ಪ್ರಧಾನಮಂತ್ರಿ
ತಮ್ಮ ಕಠಿಣ ಪರಿಶ್ರಮ, ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ ಹೊಸ ಎತ್ತರ ತಲುಪಿದ ಭಾರತದ ನಾರಿ ಶಕ್ತಿ; ಇದೀಗ ಅವಕಾಶಗಳನ್ನು ವಿಸ್ತರಿಸುವ ಮೂಲಕ ಅವರನ್ನು ಮತ್ತಷ್ಟು ಸಬಲೀಕರಣಗೊಳಿಸಲು ನಾವು ಒಗ್ಗೂಡಬೇಕು: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
13 APR 2026 1:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ನಾರಿ ಶಕ್ತಿ ವಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬೈಸಾಖಿಯ ಶುಭ ಸಂದರ್ಭದಲ್ಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆಗೆ ಮುನ್ನ ಮಾತನಾಡಿದ ಪ್ರಧಾನಮಂತ್ರಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. “ಭಾರತವು 21ನೇ ಶತಮಾನದ ಅತಿದೊಡ್ಡ ನಿರ್ಧಾರಗಳಲ್ಲಿ ಒಂದನ್ನು ತೆಗೆದುಕೊಳ್ಳಲಿದ್ದು, ಇದು ನಾರಿ ಶಕ್ತಿಗೆ ಅರ್ಪಿಸುತ್ತಿರುವ ನಿರ್ಧಾರ’’ ಎಂದು ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದರು.
ಈ ಕ್ಷಣವನ್ನು ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ರಾಷ್ಟ್ರದ ಸಂಸತ್ತು ಹಿಂದಿನ ದೂರದೃಷ್ಟಿಯನ್ನು ಮತ್ತು ಭವಿಷ್ಯದ ಸಂಕಲ್ಪಗಳನ್ನು ಸಾಕಾರಗೊಳಿಸುವ ಹೊಸ ಇತಿಹಾಸವನ್ನು ಸೃಷ್ಟಿಸುವತ್ತ ಸಾಗಿದೆ ಎಂದು ಹೇಳಿದರು. ಸಾಮಾಜಿಕ ನ್ಯಾಯದ ಮಹತ್ವವನ್ನು ಒತ್ತಿ ಹೇಳಿದ ಅವರು, ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಿರದೆ ಕೆಲಸದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಮಾನತೆಯ ಭಾರತವನ್ನು ದೇಶವು ಕಲ್ಪಿಸಿಕೊಂಡಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ”ರಾಜ್ಯ ವಿಧಾನಸಭೆಗಳಿಂದ ರಾಷ್ಟ್ರದ ಸಂಸತ್ತಿನವರೆಗೆ ದಶಕಗಳ ಕಾಯುವಿಕೆ ಅಂತ್ಯಗೊಳ್ಳುತ್ತಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ಹೊಸ ಸಂಸತ್ ಕಟ್ಟಡದಲ್ಲಿ 2023ರಲ್ಲಿ ನಾರಿ ಶಕ್ತಿ ವಂದನ ಕಾಯ್ದೆ ಅಂಗೀಕರಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ, 2029ರ ವೇಳೆಗೆ ಅದನ್ನು ಜಾರಿಗೆ ತರಬೇಕೆಂದು ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಒಪ್ಪಿಕೊಂಡು ಅಂಗೀಕರಿಸಿದ್ದನ್ನು ಉಲ್ಲೇಖಿಸಿದರು. ಮಹಿಳೆಯರ ಒಳಗೊಳ್ಳುವಿಕೆ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ನಾರಿ ಶಕ್ತಿ ವಂದನ ಕಾಯ್ದೆಯನ್ನು ಸಕಾಲದಲ್ಲಿ ಸರಿಯಾಗಿ ಜಾರಿಗೆ ತರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.ಅದಕ್ಕಾಗಿ ಏಪ್ರಿಲ್ 16 ರಿಂದ ಸಂಸತ್ತಿನ ವಿಶೇಷ ಬಜೆಟ್ ಅಧಿವೇಶನ ಆರಂಭವಾಗಲಿದೆ. “ಸಂಸತ್ತಿನ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ಸಂವಾದ, ಸಹಕಾರ ಮತ್ತು ಒಳಗೊಳ್ಳುವಿಕೆಯ ಮೂಲಕ ಈ ಕಾರ್ಯವನ್ನು ಸಾಧಿಸಬೇಕೆಂಬುದು ನಮ್ಮ ಪ್ರಯತ್ನ ಮತ್ತು ಆದ್ಯತೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಈ ವಿಚಾರದಲ್ಲಿ ಬಗ್ಗೆ ದೇಶಾದ್ಯಂತ ಮಹಿಳೆಯರಲ್ಲಿ ಕಂಡುಬರುತ್ತಿರುವ ಉತ್ಸಾಹವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ದೇಶಾದ್ಯಂತ ಮಹಿಳೆಯರು ವಿಧಾನಸಭೆಗಳು ಮತ್ತು ಲೋಕಸಭೆಯನ್ನು ತಲುಪುವ ಬಗ್ಗೆ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರು. ಅವರ ಕನಸುಗಳಿಗೆ ಹೊಸ ರೆಕ್ಕೆಗಳು ಬಂದಿವೆ ಮತ್ತು ದೇಶದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು. “ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಅವರ ದೂರದೃಷ್ಟಿ ಮತ್ತು ನಿರೀಕ್ಷೆಗಳನ್ನು ಹಂಚಿಕೊಳ್ಳಲು ತಮ್ಮ ಸಂಸದರನ್ನು ಭೇಟಿಯಾಗುವಂತೆ ನಾನು ಎಲ್ಲಾ ಮಹಿಳೆಯರಿಗೆ ಮನವಿ ಮಾಡುತ್ತೇನೆ’’ ಎಂದು ಪ್ರಧಾನಮಂತ್ರಿ ಕರೆ ನೀಡಿದರು.
ಸ್ವಾತಂತ್ರ್ಯ ಹೋರಾಟದಿಂದ ಸಂವಿಧಾನ ಸಭೆಯವರೆಗೆ ಮಹಿಳೆಯರ ಕೊಡುಗೆಯನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ, ಸ್ವತಂತ್ರ ಭಾರತದ ಅಡಿಪಾಯ ಹಾಕುವಲ್ಲಿ ನಾರಿ ಶಕ್ತಿಯ ಮಹತ್ವದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಪ್ರಾತಿನಿಧ್ಯಕ್ಕೆ ಅವಕಾಶಗಳನ್ನು ಪಡೆದ ಮಹಿಳೆಯರು ರಾಷ್ಟ್ರಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇಂದುಗೂ ನಮ್ಮ ದೇಶದಲ್ಲಿ ರಾಷ್ಟ್ರಪತಿಯಿಂದ ಹಣಕಾಸು ಸಚಿವರವರೆಗೆ ಮಹಿಳೆಯರು ಅಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. “ರಾಷ್ಟ್ರಪತಿಯಿಂದ ಪ್ರಧಾನಮಂತ್ರಿಯವರೆಗೆ, ಮಹಿಳೆಯರು ಎಲ್ಲಿದ್ದರೂ ಅವರು ತಮ್ಮದೇ ಆದ ವೈಭವವನ್ನು ಸೃಷ್ಟಿಸಿದ್ದಾರೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಮಹಿಳಾ ನಾಯಕತ್ವದ ಅತ್ಯುತ್ತಮ ಉದಾಹರಣೆ ಪಂಚಾಯತಿ ರಾಜ್ ಸಂಸ್ಥೆಗಳಾಗಿವೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಇಂದು 14 ಲಕ್ಷಕ್ಕೂ ಅಧಿಕ ಮಹಿಳೆಯರು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂಬ ಮಾಹಿತಿಯನ್ನು ಹಂಚಿಕೊಂಡರು. ಸುಮಾರು 21 ರಾಜ್ಯಗಳಲ್ಲಿ, ಪಂಚಾಯತ್‌ಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಸುಮಾರು ಶೇ. 50 ರಷ್ಟು ತಲುಪಿದೆ. ”ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಲಕ್ಷಾಂತರ ಮಹಿಳೆಯರ ಸಕ್ರಿಯ ಒಳಗೊಳ್ಳುವಿಕೆಯು ವಿಶ್ವದ ಪ್ರಮುಖ ನಾಯಕರು ಮತ್ತು ರಾಜಕೀಯ ತಜ್ಞರನ್ನು ಸಹ ಆಶ್ಚರ್ಯಚಕಿತಗೊಳಿಸುತ್ತದೆ, ಜತೆಗೆ ಇದು ಭಾರತದ ಹೆಮ್ಮೆಯನ್ನು ಹೆಚ್ಚಿಸುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ವಿವಿಧ ಅಧ್ಯಯನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚಾದ ನಂತರ ಅದು ವ್ಯವಸ್ಥೆಗಳಿಗೆ ಸೂಕ್ಷ್ಮತೆಯನ್ನು ತರುತ್ತಿದೆ ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲಿದರು. ಇದು ನೀರು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯಂತಹ ವಿಷಯಗಳ ಕುರಿತು ಹೆಚ್ಚು ಬದ್ಧತೆಯಿಂದ ಕಾರ್ಯನಿರ್ವಹಿಸಲು ಕಾರಣವಾಗಿದೆ. “ಜಲ ಜೀವನ್ ಮಿಷನ್‌ನ ಯಶಸ್ಸು ಪಂಚಾಯತ್ ಮಟ್ಟದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಪ್ರಮುಖ ಪಾತ್ರ ವಹಿಸಿದೆ ಎಂಬುದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಮಹಿಳೆಯರು ವ್ಯಾಪಕ ಅನುಭವವನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಅವರು ದೊಡ್ಡ ಪಾತ್ರಗಳಿಗೆ ಸಿದ್ಧರಾಗಿದ್ದಾರೆ ಮತ್ತು ಉತ್ಸುಕರಾಗಿದ್ದಾರೆ ಎಂದು ಹೇಳಿದರು. ನಾರಿ ಶಕ್ತಿ ವಂದನ ಕಾಯ್ದೆಯನ್ನು ಜಾರಿಗೆ ತರುವುದು ಅಂತಹ ಎಲ್ಲ ಮಹಿಳೆಯರ ಜೀವನದಲ್ಲಿ ಒಂದು ಉತ್ತಮ ಅವಕಾಶವಾಗಲಿದೆ. “ಪಂಚಾಯಿತಿಯಿಂದ ಸಂಸತ್ತಿಗೆ ಪಯಣ ಸುಲಭವಾಗಲಿದೆ’’ ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು.
ವಿಕಸಿತ ಭಾರತದ ಪಯಣದಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, 2014 ರಿಂದ ಮಹಿಳೆಯರ ಜೀವನ ಚಕ್ರದ ಪ್ರತಿಯೊಂದು ಹಂತಕ್ಕೂ ತಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಮೊದಲ ಉಸಿರಿನಿಂದ ಕೊನೆಯವರೆಗೂ ಸರ್ಕಾರವು ವಿವಿಧ ಯೋಜನೆಗಳೊಂದಿಗೆ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸೇವೆ ಸಲ್ಲಿಸಲು ಸಿದ್ಧವಾಗಿದೆ. “ನಾವು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನ ಆರಂಭಿಸಿದ್ದೇವೆ, ಗರ್ಭಾವಸ್ಥೆಯಲ್ಲಿ ಸರಿಯಾದ ಪೋಷಣೆಗಾಗಿ ಮಾತೃ ವಂದನ ಯೋಜನೆಯಡಿಯಲ್ಲಿ 5,000 ರೂ. ಆರ್ಥಿಕ ನೆರವು ನೀಡುತ್ತಿದ್ದೇವೆ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಹೆಚ್ಚಿನ ಬಡ್ಡಿದರದ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಿದ್ದೇವೆ’’ ಎಂದು ಶ್ರೀ ನರೇಂದ್ರ ಮೋದಿ ವಿವರಿಸಿದರು.
ಸಮಗ್ರ ಬೆಂಬಲ ವ್ಯವಸ್ಥೆಯನ್ನು ವಿವರಿಸಿದ ಪ್ರಧಾನಮಂತ್ರಿ ಮಂತ್ರಿ ಅವರು ಸಕಾಲಿಕ ಲಸಿಕೆಗಾಗಿ ಮಿಷನ್ ಇಂದ್ರಧನುಷ್, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣ, ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಖೇಲ್ ಇಂಡಿಯಾ ಯೋಜನೆಯಡಿಯಲ್ಲಿ ಆರ್ಥಿಕ ನೆರವು ಮತ್ತು ಸೈನಿಕ್ ಶಾಲೆಗಳು ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗಳಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿರುವ ಬಗ್ಗೆ ಅವರು ಪ್ರಸ್ತಾಪಿಸಿದರು. ಜೀವನದ ನಂತರದ ಹಂತಗಳಲ್ಲಿ, ಉಜ್ವಲ ಯೋಜನೆಯು ಕೋಟಿ ಅನಿಲ ಸಂಪರ್ಕಗಳನ್ನು ಒದಗಿಸಿಲಾಯಿತು, ಹರ್ ಘರ್ ನಲ್ ಸೆ ಜಲ ಅಭಿಯಾನವು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿತು, ಉಚಿತ ಪಡಿತರ ಯೋಜನೆಯು ಆಹಾರ ಭದ್ರತೆಯನ್ನು ಖಾತ್ರಿಪಡಿಸಿತು ಮತ್ತು ಆಯುಷ್ಮಾನ್ ಯೋಜನೆಯು 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯನ್ನು ಒದಗಿಸಿತು ಎಂದು ಅವರು ಹೇಳಿದರು. “ಜನೌಷಧಿ ಕೇಂದ್ರಗಳಲ್ಲಿ ಶೇ.80ರವರೆಗೆ ರಿಯಾಯಿತಿಯನ್ನು ನೀಡುವುದು ಸೇರಿದಂತೆ ಈ ಎಲ್ಲಾ ಉಪಕ್ರಮಗಳು ಮೂಲತಃ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಪ್ರಯೋಜನ ಕಲ್ಪಿಸಿವೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಅವರ ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನ ಮಂತ್ರಿ, ಪ್ರತಿಯೊಂದು ನಿರ್ಧಾರ ಮತ್ತು ಯೋಜನೆಯು ಈ ಅಂಶಕ್ಕೆ ಆದ್ಯತೆ ನೀಡಿತು ಎಂದು ಹೇಳಿದರು. ಹಿಂದೆ ಕುಟುಂಬದ ಆಸ್ತಿಯನ್ನು ಮುಖ್ಯವಾಗಿ ಪುರುಷರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿತ್ತು, ಆದರೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳನ್ನು ಆದ್ಯತೆಯ ಆಧಾರದ ಮೇಲೆ ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ. “ಕಳೆದ 11 ವರ್ಷಗಳಲ್ಲಿ 3 ಕೋಟಿಗೂ ಅಧಿಕ ಮಹಿಳೆಯರು ಈ ನಿರ್ಧಾರದಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಅವರೇ ಅವರ ಮನೆಗಳ ಮಾಲೀಕರಾಗಿದ್ದಾರೆ, ಆ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಆರ್ಥಿಕ ಒಳಗೊಳ್ಳುವಿಕೆಯನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ, 2014 ರಲ್ಲಿ ಕೋಟ್ಯಂತರ ಮಹಿಳೆಯರು ಬ್ಯಾಂಕಿನ ಬಾಗಿಲನ್ನು ನೋಡಿರಲಿಲ್ಲ ಎಂದು ನೆನಪಿಸಿಕೊಂಡರು. ಆದರೆ ಜನ ಧನ್ ಯೋಜನೆಯು 32 ಕೋಟಿಗೂ ಅಧಿಕ ಮಹಿಳೆಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟಿತು. “ನಮ್ಮ ಹೆಣ್ಣುಮಕ್ಕಳು ಇಂದು ಹೊಸ ಹೊಸ ವ್ಯವಹಾರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ತೊಡಗಿಸಿಕೊಳ್ಳುತ್ತಿದ್ದಾರೆ, ಮುದ್ರಾ ಯೋಜನೆಯ ಸಾಲಗಳಲ್ಲಿ ಶೇಕಡ60 ಕ್ಕಿಂತ ಅಧಿಕ ಮಹಿಳೆಯರು ತೆಗೆದುಕೊಳ್ಳುತ್ತಾರೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ನವೋದ್ಯಮ ಕ್ರಾಂತಿಯಲ್ಲಿ ಮಹಿಳಾ ನಾಯಕತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ನೋಂದಾಯಿತ ನವೋದ್ಯಮಗಳಲ್ಲಿ ಶೇಕಡ 45ಕ್ಕೂ ಅಧಿಕ ಸಂಸ್ಥೆಗಳಲ್ಲಿ ಕನಿಷ್ಠ ಒರ್ವ ಮಹಿಳೆ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು, ಮಾತೃತ್ವ ರಜೆಯನ್ನು 26 ವಾರಗಳವರೆಗೆ ವಿಸ್ತರಣೆ ಮಾಡಲಾಗಿದೆ. “ವರ್ಷಗಳ ಹಿಂದೆ ಆರಂಭಿಸಲಾದ ಕೌಶಲ್ಯ ಭಾರತ ಮಿಷನ್‌ನ ಫಲಿತಾಂಶಗಳು ಈಗ ತಂತ್ರಜ್ಞಾನದ ಮೂಲಕ ಆಧುನಿಕ ಕೃಷಿಯನ್ನು ಕಲಿಸುವ ಮೂಲಕ ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತಿರುವ ಸಾವಿರಾರು ಡ್ರೋನ್ ದಿದಿಗಳ ಮೂಲಕ ಗೋಚರಿಸುತ್ತಿವೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರ ಕೈಗೊಂಡ ಗಮನಾರ್ಹ ಸಾಧನೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ, ಸುಮಾರು 10 ಕೋಟಿಗೂ ಅಧಿಕ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಗ್ರಾಮೀಣ ಆರ್ಥಿಕತೆಯೊಂದಿಗೆ ಸಂಬಂಧ ಹೊಂದಿರುವ 6 ಕೋಟಿ ಸಹೋದರಿಯರನ್ನು ಲಖ್ ಪತಿ ದೀದಿಗಳನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, ಅದರಲ್ಲಿ 3 ಕೋಟಿಗೂ ಅಧಿಕ ಜನರು ಈಗಾಗಲೇ ಆ ಸ್ಥಾನಮಾನ ಸಾಧಿಸಿದ್ದಾರೆ.”ಈ ಮಹಿಳೆಯರು ಸ್ಥಳೀಯ ಉತ್ಪನ್ನಗಳ ಉತ್ತೇಜನಕ್ಕೆ ಬ್ರಾಂಡ್ ರಾಯಭಾರಿಗಳಾಗುತ್ತಿದ್ದಾರೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮಹಿಳೆಯರ ನೇತೃತ್ವದ ಅಭಿವೃದ್ಧಿಯ ದೂರದೃಷ್ಟಿಯು ಹಳೆಯ ಮನಸ್ಥಿತಿಗಳನ್ನು ಪ್ರಶ್ನಿಸುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ,ಒಂದು ಕಾಲದಲ್ಲಿ ಪುರುಷರ ಭದ್ರಕೋಟೆಗಳೆಂದು ಪರಿಗಣಿಸಲಾದ ವಲಯಗಳಲ್ಲಿಂದು ಮಹಿಳೆಯರು ಹೊಸ ಎತ್ತರವನ್ನು ತಲುಪುತ್ತಿದ್ದಾರೆ ಎಂದು ಹೇಳಿದರು. ಭಾರತೀಯ ಹೆಣ್ಣುಮಕ್ಕಳು ಯುದ್ಧ ವಿಮಾನಗಳ ಪೈಲಟ್‌ಗಳಾಗುತ್ತಿದ್ದಾರೆ ಮತ್ತು ಆಕಾಶವನ್ನು ಮುಟ್ಟುತ್ತಿದ್ದಾರೆ. “ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ ಭಾರತವು ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಶೈಕ್ಷಣಿಕ ಸಾಧನೆಗಳನ್ನು ಬಗ್ಗೆ ಬೆಳಕು ಚೆಲ್ಲಿದ ಅವರು, 2014ಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಪಿಎಚ್‌ಡಿ ದಾಖಲಾತಿ ಪ್ರಮಾಣ ದುಪ್ಪಟ್ಟಾಗಿದೆ, ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಭಾಗವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಗಣಿತ ಮತ್ತು ವಿಜ್ಞಾನ ಶಿಕ್ಷಣದಲ್ಲಿ, ಹೆಣ್ಣುಮಕ್ಕಳ ಸಂಖ್ಯೆ ಸುಮಾರು ಶೇ. 43 ರಷ್ಟು ತಲುಪಿದೆ. "ಈ ಸಾಧನೆಗಳು ನಮ್ಮ ಹೆಣ್ಣುಮಕ್ಕಳಿಗೆ ಅವಕಾಶಗಳ ಬದಲಾಗುತ್ತಿರುವ ಹೊಸ ಆಯಾಮವನ್ನು ಪ್ರತಿಬಿಂಬಿಸುತ್ತವೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ಇಂದಿನ ಪ್ರಮುಖ ಸಾಮಾಜಿಕ ಸವಾಲಾಗಿ ಪರಿಣಮಿಸಿರುವ ಮಹಿಳಾ ಸುರಕ್ಷತೆ ಕುರಿತಂತೆ ಮಾತನಾಡಿದ ಅವರು, ಆ ನಿಟ್ಟಿನಲ್ಲಿ ಸರ್ಕಾರ ದೃಢ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾನೂನು ಸುಧಾರಣೆಗಳನ್ನು ಮಾಡಲಾಗಿದೆ ಮತ್ತು ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಸೂಕ್ಷ್ಮವಾಗಿಸಲು ಮತ್ತು ನಿರ್ಧಾರ ಕೈಗೊಳ್ಳುವುದನ್ನು ವೇಗಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. "ಭಾರತೀಯ ನ್ಯಾಯ ಸಂಹಿತೆಯಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ, ಯಾವುದೇ ಸ್ಥಳದಿಂದ ಇ-ಎಫ್‌ಐಆರ್ ಅಥವಾ ಶೂನ್ಯ-ಎಫ್‌ಐಆರ್ ಅನ್ನು ಅನುಮತಿಸುವ ಎಫ್‌ಐಆರ್ ಸಲ್ಲಿಕೆ ಕಾರ್ಯವಿಧಾನ ಸರಳಗೊಳಿಸಲಾಗಿದೆ ಮತ್ತು ಆಡಿಯೋ-ವಿಡಿಯೋ ಮೂಲಕ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲು ನಿಬಂಧನೆಗಳನ್ನು ಹೊಂದಿದೆ’’ ಎಂದು ಶ್ರೀ ನರೇಂದ್ರ ಮೋದಿ ವಿವರಿಸಿದರು.
ರಾಷ್ಟ್ರವು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಹೆಣ್ಣುಮಕ್ಕಳ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವರ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಭರವಸೆ ನೀಡಿದರು. ದೇಶದ ನಾರಿ ಶಕ್ತಿ ಕಠಿಣ ಪರಿಶ್ರಮ, ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ ಹೊಸ ಎತ್ತರವನ್ನು ತಲುಪಿದೆ. "ನಾವು ಈ ಶಕ್ತಿಗೆ ಸಾಮೂಹಿಕವಾಗಿ ಹೊಸ ಶಕ್ತಿಯನ್ನು ನೀಡಬೇಕು ಮತ್ತು ಅವರಿಗೆ ಮತ್ತಷ್ಟು ಅವಕಾಶಗಳನ್ನು ವಿಸ್ತರಣೆ ಮಾಡಬೇಕು’’ ಎಂದು ಪ್ರಧಾನಮಂತ್ರಿ ಹೇಳಿದರು.
ನಾರಿ ಶಕ್ತಿ ವಂದನ ಕಾರ್ಯಕ್ರಮಗಳ ಮೂಲಕ ಚರ್ಚೆಗಳನ್ನು ವೈಯಕ್ತಿಕ ಸಭೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಪ್ರತಿಯೊಂದು ಹಳ್ಳಿಗೆ ಕೊಂಡೊಯ್ಯುವಂತೆ ಪ್ರಧಾನಮಂತ್ರಿ ಅವರು ಮಹಿಳೆಯರಿಗೆ ಕರೆ ನೀಡುವ ಮೂಲಕ ವಿಶೇಷ ಮನವಿ ಮಾಡಿದರು. ಪ್ರಮುಖ ನಿರ್ಧಾರದ ಶಕ್ತಿಯನ್ನು ಅರ್ಥಮಾಡಿಕೊಳ್ಳಲು, ತಮ್ಮ ಪಾತ್ರವನ್ನು ಗ್ರಹಿಸಲು ಮತ್ತು ಮುಂಬರುವ ದಿನಗಳಲ್ಲಿ ರಾಜ್ಯಗಳಿಂದ ಹಿಡಿದು ರಾಷ್ಟ್ರದ ಸಂಸತ್ತಿನವರೆಗೆ ತಮ್ಮ ಉಪಸ್ಥಿತಿ ತಿಳಿಯುವಂತೆ ಮಾಡಲು ಮುಕ್ತವಾಗಿ ಕನಸು ಕಾಣಲು ದೇಶವು ಪ್ರತಿಯೊಬ್ಬ ಮಹಿಳೆಗೂ ಈ ಪ್ರಮುಖ ನಿರ್ಧಾರದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು. "ನಾರಿ ಶಕ್ತಿಯು ತಮ್ಮ ಹಕ್ಕುಗಳನ್ನು ಹೊಂದಿರುತ್ತದೆ ಮತ್ತು ಅವರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪೂರ್ಣ ಭಾಗವಹಿಸುವವರಾಗುತ್ತಾರೆ ಎಂದು ನಾವೆಲ್ಲರೂ ಒಗ್ಗೂಡಿ ಸಂಕಲ್ಪ ಮಾಡೋಣ - ಇದು ನಮ್ಮ ಉಜ್ವಲ ಭವಿಷ್ಯದ ದೊಡ್ಡ ಭರವಸೆಯಾಗಿದೆ’’ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
*****
(ಪ್ರಕಟಣೆ ಐ.ಡಿ.: 2251517)
ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
Bengali-TR
,
Odia
,
Telugu
,
English
,
Urdu
,
Marathi
,
हिन्दी
,
Nepali
,
Assamese
,
Manipuri
,
Gujarati
,
Malayalam