ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
'ಜೀವನದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು' ಎಂಬ ವಿಷಯಾಧಾರಿತವಾಗಿ 8ನೇ ʻಪೋಷಣ್ ಪಾಕ್ಷಿಕ-2026’ಕ್ಕೆ (ʻಪೋಷಣ್ ಪಖ್ವಾಡಾ-2026) ರಾಷ್ಟ್ರ ಮಟ್ಟದಲ್ಲಿ ನಾಳೆ ಚಾಲನೆ ದೊರೆಯಲಿದೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2026ರ ಏಪ್ರಿಲ್ 9 ರಿಂದ 23ರವರೆಗೆ ʻಪೋಷಣ್ ಪಾಕ್ಷಿಕʼ ಆಚರಿಸಲಿದ್ದು, ದೇಶಾದ್ಯಂತ ಪೌಷ್ಠಿಕಾಂಶದ ಪರಿಣಾಮಗಳನ್ನು ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಛಸಿದೆ
ಪ್ರಕಟಣಾ ದಿನಾಂಕ:
08 APR 2026 10:16AM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು-2026ರ ಏಪ್ರಿಲ್ 9ರಿಂದ 23ರವರೆಗೆ 8ನೇ ಆವೃತ್ತಿಯ ʻಪೋಷಣ್ ಪಾಕ್ಷಿಕʼವನ್ನು ಆಚರಿಸಲಿದ್ದು, ದೇಶಾದ್ಯಂತ ಪೌಷ್ಠಿಕಾಂಶದ ಪರಿಣಾಮಗಳನ್ನು ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ.
ಪೌಷ್ಠಿಕಾಂಶದ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, "ಉತ್ತಮ ಪೋಷಣೆಯುಳ್ಳ ಮಗುವು ಬಲಿಷ್ಠ ರಾಷ್ಟ್ರದ ಅಡಿಪಾಯವಾಗಿದೆ. ʻಪೋಷಣ್ʼ ಅಭಿಯಾನವು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ, ಬದಲಿಗೆ ಅದು ಪ್ರತಿ ತಾಯಿ ಮತ್ತು ಮಗುವಿಗೆ ಸಮಗ್ರ ಪೌಷ್ಠಿಕಾಂಶವನ್ನು ಖಚಿತಪಡಿಸಿಕೊಳ್ಳುವ ಜನಾಂದೋಲನವಾಗಿದೆ" ಎಂದು ಹೇಳಿದ್ದಾರೆ.
2026ರ ಏಪ್ರಿಲ್ 9ರಂದು ನವದೆಹಲಿಯ ʻವಿಜ್ಞಾನ ಭವನʼದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರ ಉಪಸ್ಥಿತಿಯಲ್ಲಿ ʻಪೋಷಣ್ ಪಾಕ್ಷಿಕ-2026ʼಕ್ಕೆ ರಾಷ್ಟ್ರಮಟ್ಟದಲ್ಲಿ ಚಾಲನೆ ದೊರೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿ ಶ್ರೀ ಅನಿಲ್ ಮಲಿಕ್ ಅವರು ಸಹ ಈ ಸಂದರ್ಭ ಉಪಸ್ಥಿತರಿರಲಿದ್ದಾರೆ.
"ಜೀವನದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು" ಎಂಬ ವಿಷಯಾಧಾರಿತವಾಗಿ ʻಪೋಷಣ್ ಪಾಕ್ಷಿಕ-2026ʼ ಆಚರಿಸಲಾಗುತ್ತಿದೆ. ಆರಂಭಿಕ ಬಾಲ್ಯ-ವಿಶೇಷವಾಗಿ ಮೊದಲ 1,000 ದಿನಗಳು- ಮೆದುಳಿನ ಬೆಳವಣಿಗೆ, ದೈಹಿಕ ಬೆಳವಣಿಗೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂಬುದನ್ನು ಇದು ಗುರುತಿಸುತ್ತದೆ. ವೈಜ್ಞಾನಿಕ ಪುರಾವೆಗಳು 85% ಕ್ಕಿಂತ ಹೆಚ್ಚು ಮೆದುಳಿನ ಬೆಳವಣಿಗೆಯು ಆರು ವರ್ಷ ವಯಸ್ಸಿನಲ್ಲಿ ಸಂಭವಿಸುತ್ತದೆ ಎಂದು ಸೂಚಿಸುತ್ತದೆ, ಇದು ಸೂಕ್ತವಾದ ಪೋಷಣೆ, ಸ್ಪಂದಿಸುವ ಆರೈಕೆ ಮತ್ತು ಆರಂಭಿಕ ಕಲಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ.
ಈ ವರ್ಷದ ಧ್ಯೇಯವಾಕ್ಯದ ಅಡಿಯಲ್ಲಿ ಗಮನ ಹರಿಸಲಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ತಾಯಿ ಮತ್ತು ಮಕ್ಕಳ ಪೋಷಣೆ - ಗರ್ಭಾವಸ್ಥೆಯಲ್ಲಿ ಅತ್ಯುತ್ತಮ ಪೋಷಣೆ, ವಿಶೇಷವಾಗಿ ಸ್ತನ್ಯಪಾನ ಮತ್ತು ವಯಸ್ಸಿಗೆ ಸೂಕ್ತವಾದ ಪೂರಕ ಆಹಾರವನ್ನು ಉತ್ತೇಜಿಸುವುದು.
- ಮೆದುಳಿನ ಬೆಳವಣಿಗೆಗೆ ಆರಂಭಿಕ ಉತ್ತೇಜನ(0-3 ವರ್ಷಗಳು) – ಸ್ಪಂದನಶೀಲ ಆರೈಕೆ ಮತ್ತು ಆರಂಭಿಕ ಕಲಿಕೆಯ ಸಂವಹನಗಳನ್ನು ಪ್ರೋತ್ಸಾಹಿಸುವುದು.
- ಆರಂಭಿಕ ವರ್ಷಗಳಲ್ಲಿ ಆಟ ಆಧಾರಿತ ಶಿಕ್ಷಣ (3-6 ವರ್ಷಗಳು) - ಸಮಗ್ರ ಅಭಿವೃದ್ಧಿ ಮತ್ತು ಶಾಲೆಗೆ ಸನ್ನದ್ಧತೆಯನ್ನು ಬೆಂಬಲಿಸುವುದು.
- ʻಸ್ಕ್ರೀನ್ ಸಮಯʼ ಕಡಿಮೆ ಮಾಡುವಲ್ಲಿ ಪೋಷಕರು ಮತ್ತು ಸಮುದಾಯದ ಪಾತ್ರ - ಆರೋಗ್ಯಕರ ಅಭ್ಯಾಸಗಳು ಮತ್ತು ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದು.
- ಸಮುದಾಯ ಭಾಗವಹಿಸುವಿಕೆಯ ಮೂಲಕ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವುದು - ಜನ ಭಾಗೀದಾರಿ ಮತ್ತು ʻಸಿಎಸ್ಆರ್ʼ ಮೂಲಕ ಮೂಲಸೌಕರ್ಯ ಮತ್ತು ಸೇವಾ ವಿತರಣೆಯನ್ನು ಹೆಚ್ಚಿಸುವುದು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸುವ ಜೊತೆಗೆ ಬಾಲ್ಯದ ಆರೈಕೆ ಮತ್ತು ಪೌಷ್ಠಿಕಾಂಶ ಸೇವೆಗಳನ್ನು ಬಲಪಡಿಸುವಲ್ಲಿ ಮುಂಚೂಣಿ ಕಾರ್ಯಕರ್ತರ ಕೊಡುಗೆಗಳನ್ನು ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತರ ಕೊಡುಗೆಗಳನ್ನು ಎತ್ತಿ ತೋರಿಲಾಗುವುದು.
ಉದ್ಘಾಟನಾ ಕಾರ್ಯಕ್ರಮವನ್ನು ʻಎನ್ಐಸಿ ವೆಬ್‌ಕಾಸ್ಟ್ʼ (https://webcast.gov.in/mwcd) ವೇದಿಕೆ ಮತ್ತು ಸಚಿವಾಲಯದ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗುವುದು.
ʻಪೋಷಣ್ ಪಾಕ್ಷಿಕʼದ ಸಮಯದಲ್ಲಿ, ತಾಯಂದಿರು, ಆರೈಕೆದಾರರು, ಕುಟುಂಬಗಳು, ಸಮುದಾಯ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಅಂಗನವಾಡಿ ಕೇಂದ್ರಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇವುಗಳಲ್ಲಿ ʻಪೋಷಣ್ ಪಂಚಾಯತ್ʼಗಳು, ಜಾಗೃತಿ ಅಧಿವೇಶನಗಳು, ಆರಂಭಿಕ ಉತ್ತೇಜನ ಚಟುವಟಿಕೆಗಳು, ಆಟ ಆಧಾರಿತ ಕಲಿಕೆಯ ಉಪಕ್ರಮಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಅಭಿಯಾನಗಳು, ಚಿಕ್ಕ ಮಕ್ಕಳಲ್ಲಿ ʻಸ್ಕ್ರೀನ್ ಸಮಯʼವನ್ನು ಕಡಿಮೆ ಮಾಡುವುದು ಸೇರಿವೆ.
ʻಪೋಷಣ್ ಪಾಕ್ಷಿಕ-2026ʼರ ಮೂಲಕ, ಪೌಷ್ಠಿಕಾಂಶ, ಆರೈಕೆ, ಆರಂಭಿಕ ಕಲಿಕೆ ಮತ್ತು ಸಮುದಾಯದ ಭಾಗವಹಿಸುವಿಕೆ ʻಜನಾಂದೋಲನʼಕ್ಕೆ ಬಲ ತುಂಬುವುದು; ಆ ಮೂಲಕ ಆರೋಗ್ಯಕರ, ವಿದ್ಯಾವಂತ ಮತ್ತು ಸಶಕ್ತ ಭಾರತಕ್ಕೆ ಅಡಿಪಾಯ ಹಾಕುವ ಗುರಿಯನ್ನು ಸಚಿವಾಲಯವು ಹೊಂದಿದೆ.
ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ ʻಪೋಷಣ್ʼ ಅಭಿಯಾನವು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ವಿಕಸನಗೊಂಡಿದೆ. ಅಪೌಷ್ಟಿಕತೆ ಮುಕ್ತ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ ಸಮುದಾಯದ ಭಾಗವಹಿಸುವಿಕೆ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಇದು ಉತ್ತೇಜಿಸುತ್ತದೆ. ʻಪೋಷಣ್ ಪಾಕ್ಷಿಕʼವು ತಳಮಟ್ಟದಲ್ಲಿ ಜಾಗೃತಿ, ನಡವಳಿಕೆಯಲ್ಲಿ ಬದಲಾವಣೆ ಮತ್ತು ಸಮುದಾಯ ಸಜ್ಜುಗೊಳಿಸುವಿಕೆಯನ್ನು ಉತ್ತೇಜಿಸುವ ಮೂಲಕ ಈ ಆಂದೋಲನದ ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ.
*****
(ಪ್ರಕಟಣೆ ಐ.ಡಿ.: 2249981)
ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ:
Manipuri
,
Marathi
,
English
,
Urdu
,
हिन्दी
,
Bengali
,
Bengali-TR
,
Punjabi
,
Gujarati
,
Odia
,
Telugu