ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮಾಹಿತಿಯ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಸತ್ಯಾಸತ್ಯತೆ ಪರಿಶೀಲನಾ ಘಟಕ (ಎಫ್.ಸಿ.ಯು), ಐಟಿ ನಿಯಮಗಳು ಮತ್ತು ಮಾಧ್ಯಮ ನಿಯಮಗಳು; ನಕಲಿ ಸುದ್ದಿಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಬಹು-ಶ್ರೇಣಿಯ ಕಾರ್ಯವಿಧಾನಗಳನ್ನು ನಿಯೋಜಿಸಿದೆ


ಪಿಐಬಿಯ “ಸತ್ಯಾಸತ್ಯತೆ ಪರಿಶೀಲನಾ ಘಟಕವು (ಎಫ್.ಸಿ.ಯು.)” ಸಮಯೋಚಿತ ಮತ್ತು ನಿಖರವಾದ ಸಾರ್ವಜನಿಕ ಸಂವಹನವನ್ನು ಖಚಿತಪಡಿಸುತ್ತದೆ

ಪ್ರಕಟಣಾ ದಿನಾಂಕ: 02 APR 2026 4:09PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ, ಪತ್ರಿಕಾ ಮಾಹಿತಿ ಶಾಖೆ (ಪ್ರೆಸ್ ಇನ್ಫೋರ್ಮೇಷನ್ ಬ್ಯೂರೋ) ಮೂಲಕ ಒಂದು “ಸತ್ಯಾಸತ್ಯತೆ ಪರಿಶೀಲನಾ ಘಟಕ (ಎಫ್.ಸಿ.ಯು.)” ವನ್ನು ನಿರ್ವಹಿಸುತ್ತದೆ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು “ಸತ್ಯಾಸತ್ಯತೆ ಪರಿಶೀಲನಾ ಘಟಕವು (ಎಫ್.ಸಿ.ಯು.)” ಗುರುತಿಸುತ್ತದೆ. ಅಧಿಕೃತ ಮೂಲಗಳಿಂದ ಸುದ್ದಿಗಳ ದೃಢೀಕರಣವನ್ನು ಪರಿಶೀಲಿಸಿದ ನಂತರ, ಗಡಿ ಜಿಲ್ಲೆಗಳು ಸೇರಿದಂತೆ ವ್ಯಾಪಕ ಪ್ರಸರಣಕ್ಕಾಗಿ ಸತ್ಯಾಸತ್ಯತೆ ಪರಿಶೀಲನಾ ಘಟಕವು (ಎಫ್.ಸಿ.ಯು.)  ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸರಿಯಾದ ಮಾಹಿತಿಯನ್ನು ಪ್ರಕಟಿಸುತ್ತದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ,  ಆನ್‌ಲೈನ್ ನಲ್ಲಿ ಪ್ರಸಾರವಾಗುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಸತ್ಯಾಸತ್ಯತೆ ಪರಿಶೀಲನಾ ಘಟಕವು(ಎಫ್.ಸಿ.ಯು.) ಸಕ್ರಿಯವಾಗಿ ಗುರುತಿಸಿದೆ. ಇದು ಸುಳ್ಳು /ಮಿಥ್ಯಾ ಹಕ್ಕುಗಳನ್ನು ಗುರುತಿಸಿ ತಕ್ಷಣವೇ ಸತ್ಯ-ಪರಿಶೀಲಿಸಿತು, ಅಧಿಕೃತ ಮಾಹಿತಿಯನ್ನು ಒದಗಿಸಿತು ಮತ್ತು ನಿಖರವಾದ ಸಾರ್ವಜನಿಕ ಸಂವಹನವನ್ನು ಖಚಿತಪಡಿಸಿತು. ಆಪರೇಷನ್ ಸಿಂದೂರ್ ಸಮಯದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ 1,400 ಕ್ಕೂ ಹೆಚ್ಚು ಯು.ಆರ್.ಎಲ್. ಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡಿತು. ಸುಳ್ಳು, ತಪ್ಪು, ದಾರಿತಪ್ಪಿಸುವ, ಭಾರತ ವಿರೋಧಿ ಸುದ್ದಿ ವಿಷಯ, ಪ್ರಾಥಮಿಕವಾಗಿ ಪಾಕಿಸ್ತಾನ ಆಧಾರಿತ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕೋಮು ಸೂಕ್ಷ್ಮ ವಿಷಯ ಮತ್ತು ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ಪ್ರಚೋದನಕಾರಿ ವಿಷಯಗಳನ್ನು ಈ ಯು.ಆರ್.ಎಲ್. ಗಳ ವಿಷಯಗಳು ಒಳಗೊಂಡಿದ್ದವು.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69ಎ ಅಡಿಯಲ್ಲಿ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ವೆಬ್‌ಸೈಟ್ ಗಳು, ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಮತ್ತು ಪೋಸ್ಟ್ ಗಳನ್ನು ನಿರ್ಬಂಧಿಸಲು ಸರ್ಕಾರ ಅಗತ್ಯ ಆದೇಶಗಳನ್ನು ಹೊರಡಿಸುತ್ತದೆ.

ಮೇಲಿನವುಗಳ ಹೊರತಾಗಿ, ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿರುವ ಶಾಸನಬದ್ಧ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳೊಂದಿಗೆ ನಕಲಿ ಸುದ್ದಿಗಳನ್ನು ನಿಗ್ರಹಿಸಲು ಸರ್ಕಾರವು ಎಲ್ಲಾ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ, ಅವುಗಳೆಂದರೆ:

  • ಮುದ್ರಣ ಮಾಧ್ಯಮ: ಪತ್ರಿಕೆಗಳು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಹೊರಡಿಸಿದ "ಪತ್ರಿಕೋದ್ಯಮ ನಡವಳಿಕೆಯ ಮಾನದಂಡಗಳನ್ನು" ಪಾಲಿಸಬೇಕು. ಈ ಮಾನದಂಡಗಳು, ಇತರ ವಿಷಯಗಳ ನಡುವೆ, ತಪ್ಪು/ ಮಿಥ್ಯಾ / ನಕಲಿ/ ಮಾನನಷ್ಟಕರ/ ದಾರಿತಪ್ಪಿಸುವ ಸುದ್ದಿಗಳ ಪ್ರಕಟಣೆಯನ್ನು ನಿರ್ಬಂಧಿಸುತ್ತವೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ಮಾನದಂಡಗಳ ಉಲ್ಲಂಘನೆಯ ಆರೋಪಗಳ ಬಗ್ಗೆ ಕೌನ್ಸಿಲ್ ವಿಚಾರಣೆ ನಡೆಸುತ್ತದೆ ಮತ್ತು ಸಂದರ್ಭಾನುಸಾರ ಪತ್ರಿಕೆ, ಸಂಪಾದಕರು, ಪತ್ರಕರ್ತರು ಇತ್ಯಾದಿಗಳಿಗೆ ಎಚ್ಚರಿಕೆ ನೀಡಬಹುದು, ಎಚ್ಚರಿಸಬಹುದು ಅಥವಾ ಖಂಡಿಸಬಹುದು.
  • ಟೆಲಿವಿಷನ್: ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯ್ದೆ, 1995 ರ ಅಡಿಯಲ್ಲಿ ಟಿವಿ ಚಾನೆಲ್ ಗಳು ಕಾರ್ಯಕ್ರಮ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ, ಇದು ಇತರ ವಿಷಯಗಳ ಜೊತೆಗೆ, ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕ ಸುಳ್ಳು ಮತ್ತು ಸೂಚಿತ ವ್ಯಂಗ್ಯೋಕ್ತಿಗಳು ಮತ್ತು ಅರ್ಧ-ಸತ್ಯಗಳನ್ನು ಒಳಗೊಂಡಿರುವ ವಿಷಯವನ್ನು ಪ್ರಸಾರ ಮಾಡಬಾರದು ಎಂದು ಒದಗಿಸುತ್ತದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ (ತಿದ್ದುಪಡಿ) ನಿಯಮಗಳು 2021, ಟಿವಿ ಚಾನೆಲ್ಗಳಿಂದ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತದೆ. ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
  • ಡಿಜಿಟಲ್ ಮಾಧ್ಯಮ: ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಕಾಶಕರು ಮತ್ತು ಆನ್‌ಲೈನ್ ಕ್ಯುರೇಟೆಡ್ ವಿಷಯದ ಪ್ರಕಾಶಕರಿಗೆ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು, 2021) ನೀತಿ ಸಂಹಿತೆಯ ಜೊತೆಗೆ ಅಂತಹ ಪ್ರಕಾಶಕರಿಂದ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿದ ಕುಂದುಕೊರತೆ ಪರಿಹಾರಕ್ಕಾಗಿ ಮೂರು ಹಂತದ ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾಲಕಾಲಕ್ಕೆ ಖಾಸಗಿ ಉಪಗ್ರಹ ಟಿವಿ ಚಾನೆಲ್ ಗಳಿಗೆ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಗಳ (ನಿಯಂತ್ರಣ) ಕಾಯ್ದೆ, 1995 ರ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆಯನ್ನು ಪಾಲಿಸುವಂತೆ ಸಲಹೆಗಳನ್ನು ನೀಡುತ್ತದೆ.

ಸಮುದಾಯ ರೇಡಿಯೋ ಕೇಂದ್ರಗಳು (ಸಿ.ಆರ್.ಎಸ್. ಗಳು) ಗಡಿ ಜಿಲ್ಲೆಗಳಲ್ಲಿ ಸೇರಿದಂತೆ ಅಧಿಕೃತ, ಸಕಾಲಿಕ ಮತ್ತು ಸ್ಥಳೀಯವಾಗಿ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಯಕ್ರಮಗಳು ಸ್ಥಳೀಯ ಸಮುದಾಯಕ್ಕೆ ತಕ್ಷಣದ ಪ್ರಸ್ತುತತೆಯನ್ನು ಹೊಂದಿರಬೇಕು, ಇದರಿಂದಾಗಿ ಸ್ಥಳೀಯ ಕಾಳಜಿಗಳನ್ನು ಪರಿಹರಿಸಬೇಕು ಮತ್ತು ತಪ್ಪು ಮಾಹಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕು. ಸಮುದಾಯ ರೇಡಿಯೋದಲ್ಲಿ ಪ್ರಸಾರವಾಗುವ ವಿಷಯವನ್ನು ನಿರ್ಧರಿಸಲು ಸ್ಥಳೀಯ ಸಮುದಾಯದ ಸದಸ್ಯರನ್ನು ಒಳಗೊಂಡ ಸಲಹಾ ಮತ್ತು ವಿಷಯ ಸಮಿತಿಯನ್ನು ಸಮುದಾಯ ರೇಡಿಯೋ ಕೇಂದ್ರಗಳು (ಸಿ.ಆರ್.ಎಸ್.) ರಚಿಸಬೇಕಾಗುತ್ತದೆ. ಗುರಿ ಪ್ರೇಕ್ಷಕರಲ್ಲಿ ಉತ್ತಮ ಸಂಪರ್ಕ ಮತ್ತು ಗ್ರಹಿಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಪ್ರಸಾರ ಮಾಡುವುದು ಉತ್ತಮ.

ಶ್ರೀ ಉಮ್ಮೇದಾ ರಾಮ್ ಬೇನಿವಾಲ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2248461) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Punjabi , Gujarati , Telugu , Malayalam