ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯಗಳ ಸಂಕ್ಷಿಪ್ತ ಮಾಹಿತಿ
2026ರ ಖಾರಿಫ್ ಹಂಗಾಮಿಗೆ ಬೀಜಗಳ ಸಾಕಷ್ಟು ಲಭ್ಯತೆ
ಯಾವುದೇ ಹಂತದಲ್ಲಿ ಕೃಷಿ ಪರಿಕರಗಳು ಮತ್ತು ರಾಸಾಯನಿಕಗಳ ಕೊರತೆಯಿಲ್ಲ; ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ
ಕೃಷಿ ಸರಕುಗಳ ಬೆಲೆಗಳು ಸ್ಥಿರವಾಗಿದ್ದು, ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ
ಜಾಗತಿಕ ಎಟಿಎಫ್ (ATF) ಬೆಲೆ ಏರಿಕೆಯ ಪರಿಣಾಮದಿಂದ ಸರ್ಕಾರ ರಕ್ಷಣೆ ನೀಡಿದೆ; ವಿಮಾನ ಪ್ರಯಾಣದ ವೆಚ್ಚವನ್ನು ನಿಯಂತ್ರಿಸಲು ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ದರ ಏರಿಕೆಯನ್ನು ಸೀಮಿತಗೊಳಿಸಿದೆ
ಸಾಮಾನ್ಯ ರೀಟೇಲ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಗೃಹಬಳಕೆಯ ಎಲ್ ಪಿ ಜಿ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ
23 ಮಾರ್ಚ್ 2026 ರಿಂದ 3.9 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳ ಮಾರಾಟ
ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ; ಆತಂಕದ ಖರೀದಿಯನ್ನು ತಪ್ಪಿಸಲು ನಾಗರಿಕರಿಗೆ ಸಲಹೆ ನೀಡಲಾಗಿದೆ
ಪಶ್ಚಿಮ ಏಷ್ಯಾ ಪ್ರದೇಶದ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ; ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ
ಕೊಲ್ಲಿ ಪ್ರದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಅವರ ಕಲ್ಯಾಣಕ್ಕೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ
ಪ್ರಕಟಣಾ ದಿನಾಂಕ:
01 APR 2026 5:53PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಾಗರಿಕರಿಗೆ ಮಾಹಿತಿ ನೀಡಲು ಭಾರತ ಸರ್ಕಾರವು ನಿರಂತರವಾಗಿ ಅಪ್ ಡೇಟ್ ಗಳನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ, ಇಂದು ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಮಾಧ್ಯಮ ಗೋಷ್ಠಿಯನ್ನು ನಡೆಸಲಾಯಿತು. ಇದರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಆ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ನೀಡಲಾದ ಬೆಂಬಲ ಮತ್ತು ಒಟ್ಟಾರೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕೃಷಿ ವಲಯದ ಅಪ್ ಡೇಟ್
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪಶ್ಚಿಮ ಏಷ್ಯಾದ ವಿದ್ಯಮಾನಗಳಿಂದ ಕೃಷಿ ವಲಯದ ಮೇಲೆ ಉಂಟಾಗಬಹುದಾದ ಸಂಭಾವ್ಯ ಪರಿಣಾಮಗಳು ಮತ್ತು ಅಡಚಣೆಗಳನ್ನು ಕಡಿಮೆ ಮಾಡಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಸಚಿವಾಲಯವು ಈ ಕೆಳಗಿನಂತೆ ತಿಳಿಸಿದೆ: -
ಬೀಜ ವಲಯ
• 2026ರ ಖಾರಿಫ್ ಹಂಗಾಮಿಗೆ ಬೀಜಗಳ ಲಭ್ಯತೆಯು ಉತ್ತಮವಾಗಿದೆ. 166.46 ಲಕ್ಷ ಕ್ವಿಂಟಾಲ್ ಬೀಜಗಳ ಅವಶ್ಯಕತೆಯಿದ್ದು, ಅದಕ್ಕೆ ಪ್ರತಿಯಾಗಿ 185.74 ಲಕ್ಷ ಕ್ವಿಂಟಾಲ್ ಲಭ್ಯತೆಯಿದೆ. ಇದರಿಂದಾಗಿ ಸುಮಾರು 19.29 ಲಕ್ಷ ಕ್ವಿಂಟಾಲ್ ಹೆಚ್ಚುವರಿ ಬೀಜ ಲಭ್ಯವಿದೆ.
• ಪ್ರಮುಖ ಬೆಳೆಗಳಲ್ಲಿ ಹೆಚ್ಚುವರಿ ದಾಸ್ತಾನು ಇದೆ: ಭತ್ತ 80.9 ಲಕ್ಷ ಕ್ವಿಂಟಾಲ್, ಸೋಯಾಬೀನ್ 35.7 ಲಕ್ಷ ಕ್ವಿಂಟಾಲ್, ಶೇಂಗಾ 21.1 ಲಕ್ಷ ಕ್ವಿಂಟಾಲ್, ಮೆಕ್ಕೆಜೋಳ 11.9 ಲಕ್ಷ ಕ್ವಿಂಟಾಲ್ ಮತ್ತು ಬೇಳೆಕಾಳುಗಳು (ತೊಗರಿ, ಹೆಸರು, ಉದ್ದು).
• ಮೆಕ್ಕೆಜೋಳದ ಬೀಜಗಳನ್ನು ಒಣಗಿಸಲು ಎಲ್ ಪಿ ಜಿ/ಪಿ ಎನ್ ಜಿ ಯ ಆದ್ಯತೆಯ ಹಂಚಿಕೆಯನ್ನು ಖಚಿತಪಡಿಸಲಾಗಿದೆ, ಜೊತೆಗೆ ತೈಲ ಮಾರುಕಟ್ಟೆ ಕಂಪನಿಗಳ ಮೂಲಕ ನಿರಂತರ ಇಂಧನ ಪೂರೈಕೆಯನ್ನು ಖಾತ್ರಿಪಡಿಸಲಾಗಿದೆ.
• 2026ರ ಖಾರಿಫ್ ಮತ್ತು ರಬಿ ಎರಡೂ ಹಂಗಾಮುಗಳಿಗೆ ಬೇಕಾದ ಬೀಜದ ಪರಿಕರಗಳು ಸಿದ್ಧವಾಗಿವೆ.
ರಸಗೊಬ್ಬರಗಳು
• ರಾಜ್ಯಗಳೊಂದಿಗೆ ಸಮಾಲೋಚಿಸಿ 2026ರ ಖಾರಿಫ್ ಹಂಗಾಮಿನ ರಸಗೊಬ್ಬರ ಅವಶ್ಯಕತೆಯನ್ನು 390.54 LMT ಎಂದು ಅಂದಾಜಿಸಲಾಗಿದೆ. ಇದರಲ್ಲಿ 180 LMT (46%) ಆರಂಭಿಕ ದಾಸ್ತಾನಾಗಿ ಲಭ್ಯವಿದೆ. ಇದು ಸಾಮಾನ್ಯ ಹಂಗಾಮಿಗಿಂತ ಮೊದಲು ಇರುವ ಸುಮಾರು 33% ಮಟ್ಟಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ; ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ಯಾವುದೇ ಹಂತದಲ್ಲಿ ಕೃಷಿ ಪರಿಕರಗಳು ಮತ್ತು ರಾಸಾಯನಿಕಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು.
• ರಸಗೊಬ್ಬರಗಳ ವಿವೇಚನಾಪೂರ್ವಕ ಬಳಕೆ ಮತ್ತು ಸಕಾಲಿಕ ಹಾಗೂ ವ್ಯವಸ್ಥಿತವಾಗಿ ರೈತರಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು 30.03.2026 ರಂದು DA&FW, ರಸಗೊಬ್ಬರ ಇಲಾಖೆ ಮತ್ತು ರಾಜ್ಯ ಕಾರ್ಯದರ್ಶಿಗಳ ಸಭೆ ನಡೆಸಲಾಯಿತು.
• ರಸಗೊಬ್ಬರಗಳ ಅಕ್ರಮ ದಾಸ್ತಾನು, ಕಪ್ಪು ಮಾರುಕಟ್ಟೆ ಮಾರಾಟ, ಗಡಿ ದಾಟಿ ಸಾಗಿಸುವುದು ಅಥವಾ ಕೃಷಿಯೇತರ ಉದ್ದೇಶಗಳಿಗೆ ಬಳಸುವುದನ್ನು ತಡೆಯಲು ವಿಶೇಷ ಅಭಿಯಾನಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ವಿನಂತಿಸಲಾಗಿದೆ.
• ಕಳೆದ ವರ್ಷ ಗ್ರಾಮ ಪಂಚಾಯತ್, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ 'ಧರ್ತಿ ಮಾತಾ ಬಚಾವೋ ಆಂದೋಲನ ಸಮಿತಿ'ಗಳನ್ನು ಸ್ಥಾಪಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮೇಲ್ವಿಚಾರಣೆ ಮತ್ತು ಸಮಾನ ವಿತರಣೆಗಾಗಿ ಈ ಸ್ಥಳೀಯ ಸಮಿತಿಗಳನ್ನು ಸಜ್ಜುಗೊಳಿಸಲು ರಾಜ್ಯಗಳಿಗೆ ಮತ್ತೊಮ್ಮೆ ವಿನಂತಿಸಲಾಗಿದೆ.
• ಮಧ್ಯಪ್ರದೇಶ, ಹರಿಯಾಣ ಮತ್ತು ತೆಲಂಗಾಣದಂತಹ ರಾಜ್ಯಗಳು ಕೈಗೊಂಡ ನವೀನ ಪದ್ಧತಿಗಳನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ, ಇದು ರಸಗೊಬ್ಬರ ವಿತರಣೆಯನ್ನು ಸರಳಗೊಳಿಸಿದೆ.
ಕೃಷಿ ರಾಸಾಯನಿಕಗಳು
• ಮೂರು ವಿಧದ ಕೃಷಿ ರಾಸಾಯನಿಕಗಳಿವೆ - ಕೀಟನಾಶಕಗಳು, ಕಳೆನಾಶಕಗಳು ಮತ್ತು ಶಿಲೀಂಧ್ರನಾಶಕಗಳು. ಭಾರತವು ಕೃಷಿ ರಾಸಾಯನಿಕಗಳ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಸಾಕಷ್ಟು ಪ್ರಮಾಣದ ಕೃಷಿ ರಾಸಾಯನಿಕಗಳು ಲಭ್ಯವಿವೆ.
• 2025-26ರ ಅವಧಿಯಲ್ಲಿ (ಫೆಬ್ರವರಿ 2026 ರವರೆಗೆ) ಕೃಷಿ ರಾಸಾಯನಿಕಗಳ ಒಟ್ಟು ಉತ್ಪಾದನೆಯು 2,61,099 ಮೆಟ್ರಿಕ್ ಟನ್ (MT) ಆಗಿದೆ. ಒಟ್ಟು ಅಂದಾಜು ಬೇಡಿಕೆಯು 74,266 ಮೆಟ್ರಿಕ್ ಟನ್ ಆಗಿದ್ದು, ಅದರಲ್ಲಿ ಸುಮಾರು 42,000 ಮೆಟ್ರಿಕ್ ಟನ್ 2026ರ ಖಾರಿಫ್ ಹಂಗಾಮಿನಲ್ಲಿ ಅವಶ್ಯಕತೆಯಿದೆ.
• ಉದ್ಯಮ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂವಾದವನ್ನು ನಡೆಸಲಾಗುತ್ತಿದೆ ಹಾಗೂ ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿದೆ.
• ಬಹು-ಪಾಲುದಾರರ ಸಮನ್ವಯದ ವಿಧಾನದ ಮೂಲಕ ನಕಲಿ ಮತ್ತು ಕಳಪೆ ಗುಣಮಟ್ಟದ ಕೀಟನಾಶಕಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
• ರಾಜ್ಯಗಳ ಸಹಯೋಗದೊಂದಿಗೆ ಸಮಗ್ರ ಪೀಡೆ ನಿರ್ವಹಣೆಗೆ (IPM) ಹೆಚ್ಚಿನ ಗಮನ ನೀಡಲಾಗುತ್ತಿದೆ.
• ಜೈವಿಕ ಕೀಟನಾಶಕಗಳು ಮತ್ತು ಸುಸ್ಥಿರ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ, ಜೊತೆಗೆ ರೈತರಲ್ಲಿ ಜಾಗೃತಿ, ಕಣ್ಗಾವಲು, ಕೀಟ ಮೇಲ್ವಿಚಾರಣೆ ಮತ್ತು ನಿಖರ ಸಲಹೆಗಳನ್ನು ಬಲಪಡಿಸಲಾಗುತ್ತಿದೆ.
ಕೃಷಿ ಸರಕುಗಳ ಬೆಲೆ ಪರಿಸ್ಥಿತಿ
• ಕೃಷಿ ಸರಕುಗಳ ಬೆಲೆಗಳು ಬಹುತೇಕ ಸ್ಥಿರವಾಗಿದ್ದು, ಅವುಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
• ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳ ಬೆಲೆಗಳು ಮಿತಿಯಲ್ಲಿವೆ ಮತ್ತು ಈ ಮೂರರ ಬೆಲೆಗಳೂ ಸ್ವಲ್ಪಮಟ್ಟಿನ ಸುಧಾರಣೆಯನ್ನು ತೋರಿಸುತ್ತಿವೆ.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ಪಿಜಿ (LPG) ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾದ ಕ್ರಮಗಳ ಕುರಿತು ಇಂಧನ ಪೂರೈಕೆಯ ಸ್ಥಿತಿಗತಿಯ ಅಪ್ಡೇಟ್ ಅನ್ನು ಹಂಚಿಕೊಳ್ಳಲಾಗಿದೆ. ಪ್ರಮುಖಾಂಶಗಳು ಈ ಕೆಳಗಿನಂತಿವೆ:
ಕಚ್ಚಾ ತೈಲ ಮತ್ತು ರಿಫೈನರಿಗಳು
• ಎಲ್ಲಾ ರಿಫೈನರಿಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನುಗಳನ್ನು ಸಹ ನಿರ್ವಹಿಸುತ್ತಿದೆ.
• ದೇಶೀಯ ಬಳಕೆಯನ್ನು ಬೆಂಬಲಿಸಲು ರಿಫೈನರಿಗಳಿಂದ ದೇಶೀಯ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಚಿಲ್ಲರೆ ಮಾರಾಟ ಮಳಿಗೆಗಳು
• ದೇಶಾದ್ಯಂತ ಎಲ್ಲಾ ರೀಟೇಲ್ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
• ಪೆಟ್ರೋಲ್ ಮತ್ತು ಡೀಸೆಲ್ ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
• ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಏರಿಕೆಯಾಗಿದೆ. ಗ್ರಾಹಕರನ್ನು ರಕ್ಷಿಸಲು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.
• ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 21.5 ರೂಪಾಯಿ ಮತ್ತು ವಿಮಾನ ಇಂಧನ (ATF) ಮೇಲೆ ಪ್ರತಿ ಲೀಟರ್ ಗೆ 29.5 ರೂಪಾಯಿ ರಫ್ತು ಸುಂಕವನ್ನು ವಿಧಿಸಿದೆ.
• ವದಂತಿಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಆತಂಕದ ಖರೀದಿ (panic buying) ಪ್ರಕರಣಗಳು ಕಂಡುಬಂದಿವೆ, ಇದರಿಂದಾಗಿ ಅಸಹಜವಾಗಿ ಹೆಚ್ಚಿನ ಮಾರಾಟ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಜನಸಂದಣಿ ಉಂಟಾಗಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಸಾಕಷ್ಟು ದಾಸ್ತಾನು ಲಭ್ಯವಿದೆ.
• ವದಂತಿಗಳನ್ನು ನಂಬಬಾರದು ಎಂದು ಸರ್ಕಾರವು ತನ್ನ ಸಲಹೆಯನ್ನು ಪುನರುಚ್ಚರಿಸಿದೆ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡುವಂತೆ ರಾಜ್ಯ ಸರ್ಕಾರಗಳನ್ನು ವಿನಂತಿಸಿದೆ.
ನೈಸರ್ಗಿಕ ಅನಿಲ
• ಗೃಹಬಳಕೆಯ ಪಿ ಎನ್ ಜಿ (PNG) ಮತ್ತು ಸಿ ಎನ್ ಜಿ (CNG) ಸಾರಿಗೆಗೆ 100% ಪೂರೈಕೆಯನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
• ಗ್ರಿಡ್ ಸಂಪರ್ಕ ಹೊಂದಿರುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ 80% ರಷ್ಟು ಪೂರೈಕೆ ಮಾಡಲಾಗುತ್ತಿದೆ.
• ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್ ಜಿ (PNG) ಸಂಪರ್ಕಗಳನ್ನು ಆದ್ಯತೆಯ ಮೇರೆಗೆ ನೀಡಲು ಸಿಜಿಡಿ (CGD) ಘಟಕಗಳಿಗೆ ಸೂಚಿಸಲಾಗಿದೆ.
• ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಸ್ಥಾವರಗಳಿಗೆ ಪೂರೈಕೆಯು ಕಳೆದ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 70-75% ರಷ್ಟು ಸ್ಥಿರವಾಗಿದೆ. ಪೂರೈಕೆಯನ್ನು ಕಾಯ್ದುಕೊಳ್ಳಲು ಹೆಚ್ಚುವರಿ ಎಲ್ ಎನ್ ಜಿ (LNG) ಮತ್ತು ಆರ್ ಎಲ್ ಎನ್ ಜಿ (RLNG) ಅನ್ನು ಪಡೆಯಲಾಗುತ್ತಿದೆ.
• ರಸಗೊಬ್ಬರ ಸ್ಥಾವರಗಳು ಸೇರಿದಂತೆ ಕೈಗಾರಿಕಾ ಗ್ರಾಹಕರಿಗೆ ಹೆಚ್ಚುವರಿ ಅವಶ್ಯಕತೆಗಳನ್ನು ಸ್ಪಾಟ್ (spot) ಆಧಾರದ ಮೇಲೆ ಸೂಚಿಸಲು ತಿಳಿಸಲಾಗಿದೆ.
• IGL, MGL, ಗೇಲ್ ಗ್ಯಾಸ್ (GAIL Gas) ಮತ್ತು BPCL ನಂತಹ ಸಿಜಿಡಿ (CGD) ಕಂಪನಿಗಳು ಗೃಹಬಳಕೆಯ ಮತ್ತು ವಾಣಿಜ್ಯ ಪಿಎನ್ಜಿ (PNG) ಸಂಪರ್ಕಗಳಿಗೆ ಪ್ರೋತ್ಸಾಹಕಗಳನ್ನು ನೀಡಿವೆ.
• ಸಿಜಿಡಿ (CGD) ವಿಸ್ತರಣೆಗೆ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.
• ಪಿ ಎನ್ ಜಿ (PNG) ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 10% ವಾಣಿಜ್ಯ ಎಲ್ ಪಿ ಜಿ (LPG) ಹಂಚಿಕೆಯನ್ನು ನೀಡಲಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಹಂಚಿಕೆಗಳನ್ನು ಶಿಫಾರಸು ಮಾಡಲಾಗಿದೆ.
• ಸಾಧ್ಯವಿರುವ ಕಡೆಯಲ್ಲೆಲ್ಲಾ ಶಾಲೆಗಳು, ಹಾಸ್ಟೆಲ್ ಗಳು ಮತ್ತು ಸಮುದಾಯ ಅಡುಗೆ ಮನೆಗಳಂತಹ ಸಂಸ್ಥೆಗಳಿಗೆ ಐದು ದಿನಗಳೊಳಗೆ ಪಿ ಎನ್ ಜಿ (PNG) ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ PNGRB ಸಂಸ್ಥೆಯು ಸಿಜಿಡಿ (CGD) ಘಟಕಗಳಿಗೆ ನಿರ್ದೇಶಿಸಿದೆ.
• ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೂರು ತಿಂಗಳ ಅವಧಿಗೆ ಸಿಜಿಡಿ (CGD) ಮೂಲಸೌಕರ್ಯಕ್ಕಾಗಿ ತ್ವರಿತ ಅನುಮೋದನಾ ಚೌಕಟ್ಟನ್ನು ಅಳವಡಿಸಿಕೊಂಡಿದೆ.
• ಪೈಪ್ ಲೈನ್ ವಿಸ್ತರಣೆಯನ್ನು ಸುಗಮಗೊಳಿಸಲು ಮತ್ತು ಕೊನೆಯ ಹಂತದ ಸಂಪರ್ಕವನ್ನು ಸುಧಾರಿಸಲು ಸರ್ಕಾರವು 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ, 2026' ಅನ್ನು ಹೊರಡಿಸಿದೆ.
• ರಕ್ಷಣಾ ವಸತಿ ಪ್ರದೇಶಗಳಲ್ಲಿ ಪಿ ಎನ್ ಜಿ (PNG) ಮೂಲಸೌಕರ್ಯವನ್ನು ತ್ವರಿತಗೊಳಿಸಲು ರಕ್ಷಣಾ ಸಚಿವಾಲಯವು ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ.
• ಡಿ-ಪಿಎನ್ಜಿ (D-PNG) ಸಂಪರ್ಕಗಳನ್ನು ವೇಗಗೊಳಿಸಲು PNGRB ನಿರ್ದೇಶನ ನೀಡಿದೆ ಮತ್ತು 'ನ್ಯಾಷನಲ್ ಪಿಎನ್ಜಿ ಡ್ರೈವ್ 2.0' (National PNG Drive 2.0) ಅನ್ನು 30.06.2026 ರವರೆಗೆ ವಿಸ್ತರಿಸಿದೆ.
• ಮಾರ್ಚ್ ತಿಂಗಳಿನಲ್ಲಿ, 3.25 ಲಕ್ಷಕ್ಕೂ ಹೆಚ್ಚು ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಆರಂಭಿಸಲಾಗಿದೆ ಮತ್ತು 2.85 ಲಕ್ಷಕ್ಕೂ ಹೆಚ್ಚು ಹೊಸ ಸಂಪರ್ಕಗಳನ್ನು ಸ್ಥಾಪಿಸಲಾಗಿದೆ. 3.5 ಲಕ್ಷ ಹೊಸ ಗ್ರಾಹಕರು ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
ಎಲ್ ಪಿ ಜಿ
• ಪ್ರಚಲಿತದಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರುವುದು ಮುಂದುವರಿದಿದೆ.
• ಗೃಹಬಳಕೆಯ ಎಲ್ ಪಿ ಜಿ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.
• ಎಲ್ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ದಾಸ್ತಾನು ಕೊರತೆ (dry-out) ವರದಿಯಾಗಿಲ್ಲ.
• ಆನ್ ಲೈನ್ ಎಲ್ ಪಿ ಜಿ ಬುಕಿಂಗ್ ಪ್ರಮಾಣವು ಶೇ. 92ಕ್ಕೆ ಏರಿಕೆಯಾಗಿದೆ.
• ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಶೇ. 53 ರಿಂದ ಶೇ. 81 ಕ್ಕೆ ಏರಿಕೆಯಾಗಿವೆ.
• ನಿನ್ನೆ 60 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.
• ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಶೇ. 70ಕ್ಕೆ ಹೆಚ್ಚಿಸಲಾಗಿದೆ. ರೆಸ್ಟೋರೆಂಟ್ ಗಳು, ಹೋಟೆಲ್ ಗಳು, ಕೈಗಾರಿಕೆಗಳು ಮತ್ತು ಸಮುದಾಯ ಅಡುಗೆ ಮನೆಗಳಂತಹ ವಲಯಗಳಿಗೆ ಹೆಚ್ಚುವರಿ ಹಂಚಿಕೆಗೆ ಆದ್ಯತೆ ನೀಡಲಾಗಿದೆ.
• 23 ಮಾರ್ಚ್ 2026 ರಿಂದ, 3.9 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್ಟಿಎಲ್ (FTL) ಸಿಲಿಂಡರ್ಗಳನ್ನು ಮಾರಾಟ ಮಾಡಲಾಗಿದೆ.
• ನಿನ್ನೆ 65,000 ಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳು ಮಾರಾಟವಾಗಿವೆ.
• 14 ಮಾರ್ಚ್ 2026 ರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸುಮಾರು 55,622 ಮೆಟ್ರಿಕ್ ಟನ್ ವಾಣಿಜ್ಯ ಎಲ್ ಪಿ ಜಿ ಯನ್ನು ಪಡೆದುಕೊಂಡಿವೆ.
ಸೀಮೆಎಣ್ಣೆ
• ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 48,000 ಕೆಎಲ್ (KL) ಹೆಚ್ಚುವರಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
• ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (PDS) ಸೀಮೆಎಣ್ಣೆ ಮುಕ್ತವಾಗಿರುವ (SKO-free) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೊತ್ತುಪಡಿಸಿದ ಪಿ ಎಸ್ ಯು ಒಎಂಸಿ (PSU OMC) ಮಳಿಗೆಗಳ ಮೂಲಕ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.
• 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅವಶ್ಯಕತೆ ಇಲ್ಲ ಎಂದು ತಿಳಿಸಿವೆ.
ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಪಾತ್ರ
• ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕಾರ ನೀಡಲಾಗಿದೆ.
• ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನಂತೆ ವಿನಂತಿಸಲಾಗಿದೆ:
o ದೈನಂದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸುವುದು ಮತ್ತು ಸಾರ್ವಜನಿಕ ಸಲಹೆಗಳನ್ನು ಹೊರಡಿಸುವುದು.
o ನಿಯಂತ್ರಣ ಕೊಠಡಿಗಳು ಮತ್ತು ಸಹಾಯವಾಣಿಗಳನ್ನು ಸ್ಥಾಪಿಸುವುದು.
o ತಪ್ಪು ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅದನ್ನು ತಡೆಯುವುದು.
o ಜಾರಿ ಕಾರ್ಯಾಚರಣೆಗಳು ಮತ್ತು ತಪಾಸಣೆಗಳನ್ನು ಚುರುಕುಗೊಳಿಸುವುದು.
o ಎಲ್ ಪಿ ಜಿ ಮತ್ತು ಸೀಮೆಎಣ್ಣೆ (SKO) ಹಂಚಿಕೆ ಆದೇಶಗಳನ್ನು ಹೊರಡಿಸುವುದು.
o ಸಿಜಿಡಿ (CGD) ವಿಸ್ತರಣೆಯನ್ನು ತ್ವರಿತಗೊಳಿಸುವುದು.
o ಪಿ ಎನ್ ಜಿ (PNG) ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
o ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವುದು.
• ಪ್ರಸ್ತುತ 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
ಜಾರಿ ಕ್ರಮಗಳು
• ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ಮಾರಾಟವನ್ನು ತಡೆಯಲು 2800 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 500 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
• ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (PSU OMCs) ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಲ್ ಪಿ ಜಿ ವಿತರಣಾ ಕೇಂದ್ರಗಳಲ್ಲಿ 1100 ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಿವೆ.
• ಎಲ್ ಪಿ ಜಿ ವಿತರಣಾ ಕೇಂದ್ರಗಳಿಗೆ 560 ಕ್ಕೂ ಹೆಚ್ಚು ಶೋಕಾಸ್ (ಕಾರಣ ಕೇಳುವ) ನೋಟಿಸ್ ಗಳನ್ನು ನೀಡಲಾಗಿದೆ.
ಸರ್ಕಾರದ ಕ್ರಮಗಳು
• ಈ ಯುದ್ಧದ ಪರಿಸ್ಥಿತಿಯ ನಡುವೆಯೂ, ಸರ್ಕಾರವು ಗೃಹಬಳಕೆಯ ಎಲ್ ಪಿ ಜಿ ಮತ್ತು ಪಿ ಎನ್ ಜಿ ಗೆ ಅತ್ಯುನ್ನತ ಆದ್ಯತೆ ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.
• ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧಗೊಳಿಸುವ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಿವಿಧ ವಲಯಗಳಿಗೆ ಆದ್ಯತೆ ನೀಡುವುದು ಸೇರಿವೆ.
• ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.
• ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್ ಗೆ ಆದೇಶ ನೀಡಿದೆ.
• ಗೃಹಬಳಕೆಯ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ಸಾರ್ವಜನಿಕ ಸಲಹೆ
• ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ನ ಆತಂಕದ ಖರೀದಿ (panic purchase) ಮತ್ತು ಎಲ್ ಪಿ ಜಿ ಬುಕಿಂಗ್ ಮಾಡುವುದನ್ನು ತಪ್ಪಿಸಿ.
• ವದಂತಿಗಳ ಬಗ್ಗೆ ಎಚ್ಚರವಿರಲಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
• ಎಲ್ ಪಿ ಜಿ ಗಾಗಿ, ನಾಗರಿಕರಲ್ಲಿ ಈ ಕೆಳಗಿನಂತೆ ವಿನಂತಿಸಲಾಗಿದೆ:
o ಬುಕಿಂಗ್ ಗಾಗಿ ಡಿಜಿಟಲ್ ವಿಧಾನವನ್ನು ಬಳಸಿ.
o ಎಲ್ ಪಿ ಜಿ ವಿತರಕರ ಬಳಿ ಹೋಗುವುದನ್ನು ತಪ್ಪಿಸಿ.
• ಪಿ ಎನ್ ಜಿ, ಇಂಡಕ್ಷನ್/ಎಲೆಕ್ಟ್ರಿಕ್ ಕುಕ್ ಟಾಪ್ ಗಳಂತಹ ಪರ್ಯಾಯ ಇಂಧನಗಳನ್ನು ಬಳಸುವಂತೆ ನಾಗರಿಕರಲ್ಲಿ ವಿನಂತಿಸಲಾಗಿದೆ.
• ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡುವಂತೆ ವಿನಂತಿಸಲಾಗಿದೆ.
ವಿಮಾನ ಇಂಧನ (ATF) ಬೆಲೆ ನಿಗದಿ
ನಾಗರಿಕ ವಿಮಾನಯಾನ ಸಚಿವಾಲಯವು ಎಟಿಎಫ್ (ATF) ದರ ನಿರ್ಧಾರದ ಕುರಿತು ಅಪ್ ಡೇಟ್ ಹಂಚಿಕೊಂಡಿದೆ. ಈ ಕೆಳಗಿನಂತೆ ತಿಳಿಸಲಾಗಿದೆ:
• ದೇಶೀಯ ಮಾರ್ಗಗಳಲ್ಲಿ ಸಂಚರಿಸುವ ದೇಶೀಯ ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ವಿಮಾನ ಇಂಧನ (ATF) ಬೆಲೆಯಲ್ಲಿ ಶೇ. 25 ರಷ್ಟು ಸೀಮಿತ ಏರಿಕೆಯನ್ನು ಜಾರಿಗೆ ತರುವ ಭಾರತ ಸರ್ಕಾರದ ನಿರ್ಧಾರವನ್ನು ಭಾರತೀಯ ವಿಮಾನಯಾನ ಉದ್ಯಮವು ಸ್ವಾಗತಿಸಿದೆ.
• ಪಶ್ಚಿಮ ಏಷ್ಯಾದ ಅಡಚಣೆಗಳಿಂದ ಉಂಟಾದ ಅಭೂತಪೂರ್ವ ಜಾಗತಿಕ ಇಂಧನ ಬೆಲೆ ಏರಿಕೆಯ ನಡುವೆ ಈ ಕ್ರಮವು ಪ್ರಮುಖ ಪರಿಹಾರವನ್ನು ನೀಡುತ್ತದೆ.
• ಈ ಹಸ್ತಕ್ಷೇಪವು ಭಾರತೀಯ ವಿಮಾನಯಾನ ಸಂಸ್ಥೆಗಳ ದೇಶೀಯ ಕಾರ್ಯಾಚರಣೆಯ ವೆಚ್ಚಗಳು ನಿರ್ವಹಿಸಬಹುದಾದ ಮಟ್ಟದಲ್ಲಿರುವುದನ್ನು ಖಚಿತಪಡಿಸುತ್ತದೆ.
• ಭಾರತೀಯ ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣೆಯ ವೆಚ್ಚದಲ್ಲಿ ಇಂಧನವು ಸಾಮಾನ್ಯವಾಗಿ ಸುಮಾರು ಶೇ. 40 ರಷ್ಟಿರುತ್ತದೆ; ಈ ವ್ಯವಸ್ಥಿತ ಏರಿಕೆಯು ಉದ್ಯಮದಾದ್ಯಂತ ಉಂಟಾಗಬಹುದಾದ ಸಂಭಾವ್ಯ ಅಡಚಣೆಯನ್ನು ತಡೆಯಲು ಸಹಾಯ ಮಾಡುತ್ತದೆ.
• ಎಟಿಎಫ್ (ATF) ಬೆಲೆಯಲ್ಲಿ ಶೇ. 25 ರಷ್ಟು ಸೀಮಿತ ಏರಿಕೆಯು ವಿಮಾನಯಾನ ಸಂಸ್ಥೆಗಳು ದೇಶೀಯ ಪ್ರಯಾಣಿಕರಿಗೆ ಸ್ಪರ್ಧಾತ್ಮಕ ಬೆಲೆಗಳನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಮಾರುಕಟ್ಟೆ ಆಧಾರಿತ ಬೆಲೆ ನಿರ್ಧಾರದ ಅಡಿಯಲ್ಲಿ ಅನಿವಾರ್ಯವಾಗುತ್ತಿದ್ದ ಹೆಚ್ಚುವರಿ ಇಂಧನ ಸರ್ಚಾರ್ಜ್ಗಳ ಅಗತ್ಯವನ್ನು ಇದು ತಪ್ಪಿಸುತ್ತದೆ.
• ಸವಾಲಿನ ಜಾಗತಿಕ ಪರಿಸರದಲ್ಲಿ ಕಾರ್ಯಾಚರಣೆಯ ಸ್ಥಿರತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂತಹ ವ್ಯವಸ್ಥಿತ ಕ್ರಮಗಳು ಅತ್ಯಗತ್ಯ ಎಂದು ಭಾರತೀಯ ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಇದು ಪ್ರಯಾಣಿಕರ ಹಿತಾಸಕ್ತಿಗಳನ್ನು ರಕ್ಷಿಸುವುದಲ್ಲದೆ, ಈ ವಲಯದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ.
• ಪ್ರತಿದಿನ 4.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಾರೆ. ಇಂದು ಬೆಳಿಗ್ಗೆ ಮಾಡಿದ ಈ ಘೋಷಣೆಯು ಈ ಎಲ್ಲಾ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.
ವಿಮಾನ ಪ್ರಯಾಣವು ಎಲ್ಲರಿಗೂ ಲಭ್ಯವಿರುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಈ ಕ್ರಮವು ಸರಕುಗಳ ಸುಗಮ ಚಲನೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ವ್ಯಾಪಾರ ಹಾಗೂ ಲಾಜಿಸ್ಟಿಕ್ಸ್ಗಾಗಿ ಪ್ರಮುಖ ವಾಯು ಸಂಪರ್ಕವನ್ನು ಕಾಯ್ದುಕೊಳ್ಳುವ ಮೂಲಕ ವಿಶಾಲ ಆರ್ಥಿಕತೆಗೆ ಬೆಂಬಲ ನೀಡುತ್ತದೆ.
ಸಮುದ್ರ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಪರ್ಷಿಯನ್ ಕೊಲ್ಲಿಯಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿಯ ಬಗ್ಗೆ ಅಪ್ ಡೇಟ್ ಅನ್ನು ಹಂಚಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಲಾಗಿದೆ. ಈ ಕೆಳಗಿನಂತೆ ತಿಳಿಸಲಾಗಿದೆ:
• ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.
• ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆ ವರದಿಯಾಗಿಲ್ಲ. ಇತ್ತೀಚಿನ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಪರಿಸ್ಥಿತಿಯು ಸ್ಥಿರವಾಗಿದೆ.
• ಒಟ್ಟು 18 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಮತ್ತು 485 ಭಾರತೀಯ ನಾವಿಕರು ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಮುಂದುವರಿದಿದ್ದಾರೆ. ಶಿಪ್ಪಿಂಗ್ ಮಹಾನಿರ್ದೇಶನಾಲಯವು (Directorate General of Shipping) ಹಡಗು ಮಾಲೀಕರು, ಆರ್ಪಿಎಸ್ಎಲ್ (RPSL) ಏಜೆನ್ಸಿಗಳು ಮತ್ತು ಭಾರತೀಯ ಮಿಷನ್ ಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
• ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು 24×7 ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಾರಂಭ ಮಾಡಿದಾಗಿನಿಂದ ಇಲ್ಲಿಯವರೆಗೆ ಒಟ್ಟು 4,769 ಕರೆಗಳು ಮತ್ತು 9,599 ಕ್ಕೂ ಹೆಚ್ಚು ಇಮೇಲ್ ಗಳನ್ನು ನಿರ್ವಹಿಸಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ 70 ಕರೆಗಳು ಮತ್ತು 245 ಇಮೇಲ್ ಗಳು ಹಾಗೂ ಕಳೆದ 48 ಗಂಟೆಗಳಲ್ಲಿ 214 ಕರೆಗಳು ಮತ್ತು 535 ಇಮೇಲ್ ಗಳು ಸೇರಿವೆ.
• ಡಿಜಿ ಶಿಪ್ಪಿಂಗ್ ಇದುವರೆಗೆ ಈ ಪ್ರದೇಶದಿಂದ 964 ಕ್ಕೂ ಹೆಚ್ಚು ಭಾರತೀಯ ನಾವಿಕರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ 5 ಮಂದಿ ಸೇರಿದ್ದಾರೆ.
• ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಕಳೆದ 24 ಗಂಟೆಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ ಮತ್ತು ಸ್ಥಿರವಾಗಿ ಮುಂದುವರಿದಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಕಡಲ ಮಂಡಳಿಗಳು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿವೆ.
• ನಾವಿಕರ ಸುರಕ್ಷತೆ, ಕಲ್ಯಾಣ ಮತ್ತು ತಡೆರಹಿತ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ ಗಳು ಮತ್ತು ಕಡಲ ಪಾಲುದಾರರೊಂದಿಗೆ ನಿಕಟ ಸಮನ್ವಯವನ್ನು ಮುಂದುವರಿಸಿದೆ.
ಈ ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ
ಭಾರತೀಯ ಮಿಷನ್ ಗಳ ಮೂಲಕ ನಡೆಯುತ್ತಿರುವ ನೆರವಿನೂ ಸೇರಿದಂತೆ ಈ ಪ್ರದೇಶದ ಇತ್ತೀಚಿನ ವಿದ್ಯಮಾನಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಪ್ ಡೇಟ್ ಹಂಚಿಕೊಂಡಿದೆ. ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:
• ವಿದೇಶಾಂಗ ವ್ಯವಹಾರಗಳ ಸಚಿವರು ಪೋರ್ಚುಗಲ್ ವಿದೇಶಾಂಗ ಸಚಿವ ಗೌರವಾನ್ವಿತ ಶ್ರೀ ಪಾಲೊ ರಾಂಗೆಲ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ಕಡೆಯವರು ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಿದರು.
• ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 818 ವಿದ್ಯಾರ್ಥಿಗಳು ಸೇರಿದಂತೆ 1,171 ಭಾರತೀಯ ನಾಗರಿಕರು ಭೂ ಗಡಿಗಳ ಮೂಲಕ ಇರಾನ್ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗೆ ತೆರಳಲು ಅನುಕೂಲ ಮಾಡಿಕೊಟ್ಟಿದೆ. ಇವರಲ್ಲಿ 977 ಜನರು ಅರ್ಮೇನಿಯಾಕ್ಕೆ ಮತ್ತು 194 ಜನರು ಅಜೆರ್ಬೈಜಾನ್ ಗೆ ತೆರಳಿದ್ದಾರೆ. ಇರಾನ್ ನಿಂದ ಭಾರತೀಯ ನಾಗರಿಕರ ಸುರಕ್ಷಿತ ಪ್ರಯಾಣಕ್ಕೆ ಬೆಂಬಲ ನೀಡಿದ್ದಕ್ಕಾಗಿ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಗಿದೆ.
• ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ. ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ.
• ಭಾರತೀಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳಲಾಗಿದೆ.
• ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್ ಗಳು ಮತ್ತು ಪೋಸ್ಟ್ ಗಳು ದಿನದ 24 ಗಂಟೆಯೂ ಸಹಾಯವಾಣಿಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಅವು ನಿಯಮಿತವಾಗಿ ಸಲಹೆಗಳನ್ನು ಹೊರಡಿಸುತ್ತಿವೆ ಮತ್ತು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿವೆ.
• ವೀಸಾ ಸೌಲಭ್ಯ, ಕಾನ್ಸುಲರ್ ಸೇವೆಗಳು, ವೈಮಾನಿಕ ನಿರ್ಬಂಧಗಳ ನಡುವೆ ನೆರೆಹೊರೆಯ ದೇಶಗಳ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದು ಮತ್ತು ಅಗತ್ಯವಿದ್ದಲ್ಲಿ ಲಾಜಿಸ್ಟಿಕ್ ಬೆಂಬಲವನ್ನು ಒದಗಿಸುವುದು ಸೇರಿದಂತೆ ಭಾರತೀಯ ನಾಗರಿಕರ ಸಮಸ್ಯೆಗಳು ಮತ್ತು ಕಳವಳಗಳನ್ನು ಮಿಷನ್ ಗಳು ಸಕ್ರಿಯವಾಗಿ ಪರಿಹರಿಸುತ್ತಿವೆ.
• ಕೊಲ್ಲಿ ಪ್ರದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಮತ್ತು ಅವರ ಶೈಕ್ಷಣಿಕ ವರ್ಷಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಸಿಬಿಎಸ್ಇ (CBSE), ಐಸಿಎಸ್ಇ (ICSE), ಕೇರಳ ಬೋರ್ಡ್ ಗಳು ಮತ್ತು ಜೆಇಇ (JEE) ಹಾಗೂ ನೀಟ್ (NEET) ಪರೀಕ್ಷೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮಿಷನ್ಗಳು ನಿಯಮಿತವಾಗಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿವೆ ಹಾಗೂ ಸ್ಥಳೀಯ ಅಧಿಕಾರಿಗಳು, ಭಾರತೀಯ ಶಾಲೆಗಳು, ಸಂಬಂಧಿತ ಮಂಡಳಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಯೊಂದಿಗೆ ಸಮನ್ವಯ ಸಾಧಿಸುತ್ತಿವೆ.
• ಒಟ್ಟಾರೆ ವಿಮಾನಯಾನ ಪರಿಸ್ಥಿತಿಯು ಸುಧಾರಿಸುತ್ತಿದ್ದು, ಈ ಪ್ರದೇಶದಿಂದ ಭಾರತದ ವಿವಿಧ ಸ್ಥಳಗಳಿಗೆ ಹೆಚ್ಚಿನ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 28 ರಿಂದ ಸುಮಾರು 5,98,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ.
• ಯುಎಇಯಲ್ಲಿ (UAE), ಕಾರ್ಯನಿರ್ವಹಣಾ ಮತ್ತು ಸುರಕ್ಷತಾ ಕಾರಣಗಳಿಂದಾಗಿ ವಿಮಾನಯಾನ ಸಂಸ್ಥೆಗಳು ಸೀಮಿತ ಪ್ರಮಾಣದ ನಿಗದಿತವಲ್ಲದ ವಿಮಾನಗಳನ್ನು (non-scheduled flights) ನಡೆಸುತ್ತಿವೆ. ಭಾರತಕ್ಕೆ ಸುಮಾರು 90 ವಿಮಾನಗಳು ಸಂಚರಿಸುವ ನಿರೀಕ್ಷೆಯಿದೆ.
• ಸೌದಿ ಅರೇಬಿಯಾ ಮತ್ತು ಓಮನ್ ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಸಂಚರಿಸುತ್ತಿವೆ.
• ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿರುವುದರಿಂದ, ಕತಾರ್ ಏರ್ವೇ ಸ್ ಇಂದು ಭಾರತಕ್ಕೆ ಸುಮಾರು 8 ರಿಂದ 10 ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.
• ಕುವೈತ್ ಮತ್ತು ಬಹ್ರೇನ್ ವಾಯುಪ್ರದೇಶಗಳು ಮುಚ್ಚಲ್ಪಟ್ಟಿವೆ. ಕುವೈತ್ ನ ಜಜೀರಾ ಏರ್ವೇಸ್ ಮತ್ತು ಬಹ್ರೇನ್ ನ ಗಲ್ಫ್ ಏರ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ.
• ವಿಮಾನಯಾನ ನಿರ್ಬಂಧಗಳು ಮತ್ತು ವಾಯುಪ್ರದೇಶ ಮುಚ್ಚಿರುವ ಕಾರಣ, ಭಾರತೀಯ ನಾಗರಿಕರಿಗೆ ಈ ಕೆಳಗಿನ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ:
o ಇರಾನ್ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ.
o ಇಸ್ರೇಲ್ ನಿಂದ ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ ಭಾರತಕ್ಕೆ.
o ಇರಾಕ್ ನಿಂದ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಭಾರತಕ್ಕೆ.
o ಕುವೈತ್ ಮತ್ತು ಬಹ್ರೇನ್ನಿಂದ ಸೌದಿ ಅರೇಬಿಯಾ ಮೂಲಕ ಭಾರತಕ್ಕೆ.
• ದುಬೈನಲ್ಲಿ ನಡೆದ ದಾಳಿಯಲ್ಲಿ 3 ಭಾರತೀಯ ನಾಗರಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾನ್ಸುಲೇಟ್ ಗಾಯಗೊಂಡ ವ್ಯಕ್ತಿಗಳು ಮತ್ತು ಅವರ ಕುಟುಂಬಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಅವರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ.
• ಇರಾಕ್ ಕರಾವಳಿಯ ಎಂಟಿ ಸೇಫ್ಸೀ ವಿಷ್ಣು (MT Safesea Vishnu) ಹಡಗಿನಲ್ಲಿ ಮಾರ್ಚ್ 11 ರಂದು ನಡೆದ ಘಟನೆಯಲ್ಲಿ ಓರ್ವ ಭಾರತೀಯ ನಾಗರಿಕ ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಮಾರ್ಚ್ 29 ರಂದು ಕುವೈತ್ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇನ್ನೊಬ್ಬ ಭಾರತೀಯ ನಾಗರಿಕ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಇಬ್ಬರೂ ಭಾರತೀಯ ನಾಗರಿಕರ ಪಾರ್ಥಿವ ಶರೀರಗಳು ಇಂದು ಮುಂಜಾನೆ ಭಾರತಕ್ಕೆ ಬಂದಿವೆ. ಸಚಿವಾಲಯವು ಅವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಅವರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
*****
(ಪ್ರಕಟಣೆ ಐ.ಡಿ.: 2248000)
ವಿಸಿಟರ್ ಕೌಂಟರ್ : 9