ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ನವೀಕೃತ ಮಾಹಿತಿ
ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ; ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಸಲಹೆ
ವಲಸೆ ಕಾರ್ಮಿಕರು ಸೇರಿದಂತೆ ಆದ್ಯತೆಯ ವಲಯಗಳಿಗೆ ಹೆಚ್ಚುವರಿ ಎಲ್ ಪಿ ಜಿ ಹಂಚಿಕೆ; ನಿನ್ನೆ 37,000ಕ್ಕೂ ಹೆಚ್ಚು ಸಣ್ಣ ಎಲ್ ಪಿ ಜಿ ಸಿಲಿಂಡರ್ ಗಳು (5 ಕೆಜಿ) ಮಾರಾಟವಾಗಿವೆ
ದಾಸ್ತಾನು ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ವಿರುದ್ಧ ಕ್ರಮಗಳನ್ನು ಚುರುಕುಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ
ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ಹೊರಡಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ
ಹಡಗುಗಳ ಸಂಚಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿವೆ
ವಿಮಾನಯಾನ ಕಾರ್ಯಾಚರಣೆಗಳು ಸುಧಾರಿಸುತ್ತಿವೆ; ಫೆಬ್ರವರಿ 28 ರಿಂದ ಸುಮಾರು 4.5 ಲಕ್ಷ ಪ್ರಯಾಣಿಕರು ಮರಳಿದ್ದಾರೆ
ಪ್ರಕಟಣಾ ದಿನಾಂಕ:
26 MAR 2026 3:29PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಿರ್ಣಾಯಕ ವಲಯಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಿದ್ಧತೆ ಹಾಗೂ ಪ್ರತಿಕ್ರಿಯೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಬೆಂಬಲ ಸೇರಿದಂತೆ ಪ್ರಮುಖ ಅಂಶಗಳ ಕುರಿತಾದ ನವೀಕೃತ ಮಾಹಿತಿ ಈ ಕೆಳಗಿನಂತಿದೆ.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಹಾರ್ಮುಜ್ ಜಲಸಂಧಿಯು ಮುಚ್ಚಲ್ಪಟ್ಟಿರುವ ಕಾರಣ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ಪಿಜಿಯ ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲು ಭಾರತ ಸರ್ಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಸ್ಥಿತಿಗತಿಯನ್ನು ಕೆಳಗೆ ವಿವರಿಸಲಾಗಿದೆ:
ಕಚ್ಚಾ ತೈಲ/ಸಂಸ್ಕರಣಾಗಾರಗಳು
• ಎಲ್ಲಾ ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ಹೊಂದಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನುಗಳನ್ನು ಸಹ ನಿರ್ವಹಿಸುತ್ತಿದೆ.
• ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ದೇಶೀಯ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಚಿಲ್ಲರೆ ಮಾರಾಟ ಮಳಿಗೆಗಳು (ಪೆಟ್ರೋಲ್ ಬಂಕ್ ಗಳು)
• ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
• ಕೆಲವು ಪ್ರದೇಶಗಳಲ್ಲಿ ಆತಂಕದ ಖರೀದಿ (Panic Buying) ವರದಿಯಾಗಿದೆ – ಕೆಲವು ವದಂತಿಗಳಿಂದಾಗಿ ಕೆಲವು ರಾಜ್ಯಗಳ ಕೆಲವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಆತಂಕದ ಖರೀದಿ ಉಂಟಾಗಿದೆ, ಇದರಿಂದಾಗಿ ಅಸಹಜವಾಗಿ ಹೆಚ್ಚಿನ ಮಾರಾಟ ಮತ್ತು ವಿಪರೀತ ಜನಸಂದಣಿ ಕಂಡುಬಂದಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತಿಳಿಸಲಾಗಿದೆ.
• ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಸರ್ಕಾರವು ಪುನರುಚ್ಚರಿಸುತ್ತದೆ.
ನೈಸರ್ಗಿಕ ಅನಿಲ
• ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಡಿ-ಪಿಎನ್ಜಿ (D-PNG) ಮತ್ತು ಸಿ ಎನ್ ಜಿ-ಸಾರಿಗೆಗೆ 100% ಪೂರೈಕೆ ಮಾಡಲಾಗುತ್ತಿದೆ.
• ಗ್ರಿಡ್ ಗೆ ಸಂಪರ್ಕ ಹೊಂದಿರುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ 80% ರಷ್ಟು ಪೂರೈಕೆ ಮಾಡಲಾಗುತ್ತಿದೆ.
• ವಾಣಿಜ್ಯ ಎಲ್ ಪಿ ಜಿ ಲಭ್ಯತೆಯ ಬಗ್ಗೆ ಇರುವ ಆತಂಕಗಳನ್ನು ದೂರ ಮಾಡಲು, ಸಿಜಿಡಿ (CGD) ಸಂಸ್ಥೆಗಳು ತಮ್ಮ ವ್ಯಾಪ್ತಿಯ ಅನಿಲ ಜಾಲದುದ್ದಕ್ಕೂ ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್ ಜಿ (PNG) ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಭಾರತ ಸರ್ಕಾರವು ಸಲಹೆ ನೀಡಿದೆ.
• IGL, MGL, GAIL Gas ಮತ್ತು BPCL ನಂತಹ ಸಿಜಿಡಿ ಕಂಪನಿಗಳು ಮನೆಬಳಕೆ ಮತ್ತು ವಾಣಿಜ್ಯ ಪಿಎನ್ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು (Incentives) ನೀಡಿವೆ.
• ಸಿಜಿಡಿ ನೆಟ್‌ವರ್ಕ್ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಿದೆ.
• ದಿನಾಂಕ 18.03.2026 ರ ಪತ್ರದ ಮೂಲಕ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್ ಪಿ ಜಿಯ ಹೆಚ್ಚುವರಿ 10% ಹಂಚಿಕೆಯನ್ನು ನೀಡಿದೆ, ಆದರೆ ಅವು ಎಲ್ಪಿಜಿಯಿಂದ ಪಿಎನ್ಜಿಗೆ ದೀರ್ಘಕಾಲೀನ ಸ್ಥಿತ್ಯಂತರಕ್ಕೆ ಸಹಾಯ ಮಾಡಬೇಕೆಂಬ ಷರತ್ತು ವಿಧಿಸಿದೆ.
• ಕೆಲವು ರಾಜ್ಯಗಳು ತ್ವರಿತ ಬಳಕೆಯ ಹಕ್ಕು/ಮಾರ್ಗದ ಹಕ್ಕು (RoU/RoW) ಅನುಮತಿ, ದೀರ್ಘ ಕೆಲಸದ ಅವಧಿ ಮತ್ತು RoU/RoW ಶುಲ್ಕಗಳ ವೈಜ್ಞಾನಿಕೀಕರಣಕ್ಕಾಗಿ ನೀತಿಗಳನ್ನು ರೂಪಿಸಿವೆ.
• ಭಾರತ ಸರ್ಕಾರದ ಮೇಲಿನ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ತನ್ನ ಎಲ್ಲಾ ಕಚೇರಿಗಳಿಗೆ ಸಿಜಿಡಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಅಂದರೆ ಸ್ವೀಕರಿಸಿದ 10 ದಿನಗಳ ಒಳಗೆ ವಿಲೇವಾರಿ ಮಾಡುವಂತೆ ಸೂಚಿಸಿದೆ.
• PNGRB ತನ್ನ 23.03.2026 ರ ಆದೇಶದ ಮೂಲಕ, ಪೈಪ್ ಲೈನ್ ಮೂಲಸೌಕರ್ಯವು ಹತ್ತಿರದಲ್ಲಿ ಲಭ್ಯವಿರುವ ಕಡೆಗಳಲ್ಲಿ ವಸತಿ ಶಾಲೆಗಳು ಮತ್ತು ಕಾಲೇಜುಗಳು, ಹಾಸ್ಟೆಲ್ಗಳು, ಸಮುದಾಯ ಅಡುಗೆ ಮನೆಗಳು, ಅಂಗನವಾಡಿ ಅಡುಗೆ ಮನೆಗಳು ಇತ್ಯಾದಿಗಳನ್ನು 5 ದಿನಗಳ ಒಳಗೆ ಪಿ ಎನ್ ಜಿ ಮೂಲಕ ಸಂಪರ್ಕಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಎಲ್ಲಾ ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
• ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.2026 ರ ಪತ್ರದ ಮೂಲಕ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಪ್ರಕ್ರಿಯೆಗೊಳಿಸಲು 3 ತಿಂಗಳ ಅವಧಿಗೆ ವಿಶೇಷ ಕ್ರಮವಾಗಿ "ಕಡಿಮೆ ಕಾಲಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ತ್ವರಿತ ಅನುಮೋದನೆ ಚೌಕಟ್ಟು" ಅನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದೆ.
• ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ, ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್ ಲೈನ್ಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆ ಮತ್ತು ಇತರ ಸೌಲಭ್ಯಗಳ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್ಲೈನ್ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳಲ್ಲಿನ ವಿಳಂಬ ಮತ್ತು ಭೂಮಿಯ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ. ಇದು ಪಿಎನ್ಜಿ ನೆಟ್ವರ್ಕ್ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳತ್ತ ಸ್ಥಿತ್ಯಂತರವನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
• ಸಿಜಿಡಿ ಸಂಸ್ಥೆಗಳು ನಿನ್ನೆ 110 ಕೇಂದ್ರೀಕೃತ ಭೌಗೋಳಿಕ ಪ್ರದೇಶಗಳಲ್ಲಿ 11,089 ಪಿ ಎನ್ ಜಿ ಸಂಪರ್ಕಗಳನ್ನು (ಹೊಸ ಸಂಪರ್ಕಗಳು ಮತ್ತು ಹಳೆಯ ಗ್ಯಾಸ್-ಇನ್) ವರದಿ ಮಾಡಿವೆ.
ಎಲ್.ಪಿ.ಜಿ (LPG)
• ಪ್ರಚಲಿತದಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಮನೆಬಳಕೆಯ ಎಲ್ ಪಿ ಜಿ ಪೂರೈಕೆ:
• ಎಲ್ ಪಿ ಜಿ ವಿತರಕರಲ್ಲಿ ಯಾವುದೇ ರೀತಿಯ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.
• ಮನೆಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆಯು ಸಹಜವಾಗಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ:
• ಸರ್ಕಾರವು ಈಗಾಗಲೇ ಗ್ರಾಹಕರಿಗೆ ಭಾಗಶಃ ವಾಣಿಜ್ಯ ಎಲ್ಪಿಜಿ ಪೂರೈಕೆಯನ್ನು (20%) ಪುನಃಸ್ಥಾಪಿಸಿದೆ. ಇದಲ್ಲದೆ, ಪಿಎನ್ಜಿ ವಿಸ್ತರಣೆಗಾಗಿ ಕೈಗೊಂಡ ಸುಲಭ ವ್ಯಾಪಾರ ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 10% ವಾಣಿಜ್ಯ ಎಲ್ಪಿಜಿಯನ್ನು ಹಂಚಿಕೆ ಮಾಡಲು ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಪ್ರಸ್ತಾಪಿಸಿತ್ತು.
• ಭಾರತ ಸರ್ಕಾರವು 21.03.2026 ರ ಪತ್ರದ ಮೂಲಕ ರಾಜ್ಯಗಳಿಗೆ ಇನ್ನೂ 20% ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಅನುಮತಿಸಿದೆ, ಇದರಿಂದ ಒಟ್ಟು ಹಂಚಿಕೆಯು 50% ಕ್ಕೆ ತಲುಪಲಿದೆ (ಪಿ ಎನ್ ಜಿ ವಿಸ್ತರಣೆಯ ಸುಧಾರಣೆಗಳ ಆಧಾರದ ಮೇಲೆ ನೀಡಲಾದ 10% ಹಂಚಿಕೆ ಸೇರಿದಂತೆ). ಈ ಹೆಚ್ಚುವರಿ 20% ಹಂಚಿಕೆಯನ್ನು ರೆಸ್ಟೋರೆಂಟ್ ಗಳು, ಧಾಬಾಗಳು, ಹೋಟೆಲ್ ಗಳು, ಕೈಗಾರಿಕಾ ಕ್ಯಾಂಟೀನ್ ಗಳು, ಆಹಾರ ಸಂಸ್ಕರಣೆ/ಡೈರಿ, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ದರದ ಕ್ಯಾಂಟೀನ್ಗಳು/ಆಹಾರ ಮಳಿಗೆಗಳು, ಸಮುದಾಯ ಅಡುಗೆ ಮನೆಗಳು ಮತ್ತು ವಲಸೆ ಕಾರ್ಮಿಕರಿಗಾಗಿ 5 ಕೆಜಿ ಎಫ್ ಟಿ ಎಲ್ ನಂತಹ ವಲಯಗಳಿಗೆ ಆದ್ಯತೆಯ ಮೇರೆಗೆ ನೀಡಲಾಗುವುದು.
• 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಾಣಿಜ್ಯೇತರ ಎಲ್‌ಪಿಜಿಯನ್ನು ಹಂಚಿಕೆ ಮಾಡಲು ಆದೇಶಗಳನ್ನು ಹೊರಡಿಸಿವೆ. ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ಗಳನ್ನು ಬಿಡುಗಡೆ ಮಾಡುತ್ತಿವೆ. 14 ಮಾರ್ಚ್ 2026 ರಿಂದೀಚೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾಣಿಜ್ಯ ಘಟಕಗಳು ಒಟ್ಟು ಸುಮಾರು 25,922 ಮೆಟ್ರಿಕ್ ಟನ್ ತೈಲವನ್ನು ಪಡೆದುಕೊಂಡಿವೆ.
• ನಿನ್ನೆ, 37,000 ಕ್ಕೂ ಹೆಚ್ಚು '5 ಕೆಜಿ ಎಫ್ ಟಿ ಎಲ್' ಸಿಲಿಂಡರ್ ಗಳು ಮಾರಾಟವಾಗಿವೆ.
ಸೀಮೆಎಣ್ಣೆ
• ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
• ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿನ ಸ್ಥಳಗಳನ್ನು ಗುರುತಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗಿದೆ.
• 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಸೀಮೆಎಣ್ಣೆಯ ಅವಶ್ಯಕತೆ ಇಲ್ಲ ಎಂದು ತಿಳಿಸಿವೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಾತ್ರ-
• ಅತ್ಯಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ, ಯಾವುದೇ ರೀತಿಯ ದಾಸ್ತಾನು ಸಂಗ್ರಹಣೆ (ಹೋಲ್ಡಿಂಗ್) ಮತ್ತು ಕಪ್ಪು ಮಾರುಕಟ್ಟೆ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಸೇರಿದಂತೆ ಅತ್ಯಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಭಾರತ ಸರ್ಕಾರವು 13.03.2026 ಮತ್ತು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ಪುನರುಚ್ಚರಿಸಿದೆ.
• ದಾಸ್ತಾನು ಸಂಗ್ರಹಣೆ, ಕಪ್ಪು ಮಾರುಕಟ್ಟೆ ಮತ್ತು ವದಂತಿ ಹರಡುವುದನ್ನು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾಮುಖ್ಯತೆಯನ್ನು ಭಾರತ ಸರ್ಕಾರವು ಒತ್ತಿಹೇಳುತ್ತಿದೆ. ಅದರಂತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoP&NG) ಕಾರ್ಯದರ್ಶಿಯವರು 25.03.2026 ರಂದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಎ ಸಿ ಎಸ್ (ACS)/ಅಪರ ಮುಖ್ಯ ಕಾರ್ಯದರ್ಶಿ/ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ (VC) ನಡೆಸಿ ಈ ಕೆಳಗಿನ ಮನವಿಗಳನ್ನು ಮಾಡಿದ್ದಾರೆ:
o ರಾಜ್ಯ/ಜಿಲ್ಲಾ ಮಟ್ಟದಲ್ಲಿ ದೈನಂದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು (advisories) ಹೊರಡಿಸುವುದು.
o ಪ್ರತ್ಯೇಕ ನಿಯಂತ್ರಣ ಕೊಠಡಿಗಳು/ಹೆಲ್ಪ್ಲೈನ್ಗಳನ್ನು ಸ್ಥಾಪಿಸುವುದು.
o ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಅದನ್ನು ತಡೆಯುವುದು.
o ಜಿಲ್ಲಾಡಳಿತದ ಮೂಲಕ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವುದು ಮತ್ತು ತೈಲ ಮಾರುಕಟ್ಟೆ ಕಂಪನಿಗಳ (OMCs) ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.
o ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
o ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾದ ಹೆಚ್ಚುವರಿ ಸೀಮೆಎಣ್ಣೆಗಾಗಿ (SKO) ಹಂಚಿಕೆ ಆದೇಶಗಳನ್ನು ಹೊರಡಿಸುವುದು.
o RoW/RoU ಅನುಮತಿಗಳು, 24x7 ಕೆಲಸದ ಅನುಮತಿಗಳು ಇತ್ಯಾದಿಗಳನ್ನು ತ್ವರಿತಗೊಳಿಸುವ ಮೂಲಕ ಸಿಜಿಡಿ (CGD) ವಿಸ್ತರಣೆಯನ್ನು ವೇಗಗೊಳಿಸುವುದು.
o ಪಿಎನ್‌ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
o ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಲು ಹಿರಿಯ ನೋಡಲ್ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವುದು.
ಜಾರಿ ಕ್ರಮಗಳು
• ಎಲ್ ಪಿ ಜಿ ದಾಸ್ತಾನು ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳನ್ನು ಮುಂದುವರಿಸಲಾಗಿದೆ. ನಿನ್ನೆ ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮುಂತಾದೆಡೆ 2600 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 450 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
• ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ದಾಸ್ತಾನು ಸಂಗ್ರಹಣೆ/ಕಪ್ಪು ಮಾರುಕಟ್ಟೆ ಪ್ರಕರಣಗಳನ್ನು ಪತ್ತೆಹಚ್ಚಲು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು ನಿನ್ನೆ ದೇಶಾದ್ಯಂತ ಸುಮಾರು 1700 ಚಿಲ್ಲರೆ ಮಾರಾಟ ಮಳಿಗೆಗಳು (RO) ಮತ್ತು ಎಲ್ಪಿಜಿ ವಿತರಕ ಕೇಂದ್ರಗಳಲ್ಲಿ ಹಠಾತ್ ತಪಾಸಣೆ ನಡೆಸಿದ್ದಾರೆ.
• ಈವರೆಗೆ 680 ಕ್ಕೂ ಹೆಚ್ಚು ಎಫ್ ಐ ಆರ್ (FIR) ಗಳನ್ನು ದಾಖಲಿಸಲಾಗಿದ್ದು, 195 ಜನರನ್ನು ಬಂಧಿಸಲಾಗಿದೆ.
ಸರ್ಕಾರದ ಇತರ ಕ್ರಮಗಳು
• ಈ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ಮನೆಬಳಕೆಯ ಎಲ್ ಪಿ ಜಿ ಮತ್ತು ಪಿ ಎನ್ ಜಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಆದ್ಯತೆ ನೀಡಿದೆ.
• ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧಗೊಳಿಸುವ ಕ್ರಮಗಳನ್ನು ಜಾರಿಗೆ ತಂದಿದೆ. ಇದು ತೈಲ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದನ್ನು ಒಳಗೊಂಡಿದೆ.
• ಎಲ್‌ಪಿಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.
• ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕೋಲಿಯರೀಸ್ ಗೆ ಆದೇಶ ನೀಡಿದೆ.
• ಮನೆಬಳಕೆಯ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ಸಾರ್ವಜನಿಕ ಸಲಹೆ
• ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಸಾರ್ವಜನಿಕರು ಪೆಟ್ರೋಲ್, ಡೀಸೆಲ್ ನ ಆತಂಕದ ಖರೀದಿ ಮತ್ತು ಎಲ್ ಪಿ ಜಿ ಬುಕಿಂಗ್ ಮಾಡುವುದನ್ನು ತಪ್ಪಿಸಬೇಕು ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಎಂದು ಸಲಹೆ ನೀಡಲಾಗಿದೆ.
• ಎಲ್‌ಪಿಜಿಗಾಗಿ, ನಾಗರಿಕರು ಬುಕಿಂಗ್ ಮಾಡಲು ಡಿಜಿಟಲ್ ವಿಧಾನಗಳನ್ನು ಬಳಸಲು ಮತ್ತು ಎಲ್ಪಿಜಿ ವಿತರಕರ ಬಳಿ ಹೋಗುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
• ಸಾಧ್ಯವಿರುವ ಕಡೆಗಳಲ್ಲಿ ಪಿ ಎನ್ ಜಿ, ಇಂಡಕ್ಷನ್/ಎಲೆಕ್ಟ್ರಿಕ್ ಕುಕ್ ಟಾಪ್ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
• ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಈಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಚಿವಾಲಯದ ಪ್ರಕಾರ:
• ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಜೊತೆಗೆ ಕಡಲ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸುತ್ತಿದೆ.
• ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
• 540 ಭಾರತೀಯ ನಾವಿಕರನ್ನು ಹೊಂದಿರುವ 20 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಕೊಲ್ಲಿಯಲ್ಲಿವೆ; ಡಿಜಿ ಶಿಪ್ಪಿಂಗ್ (DG Shipping), ಹಡಗು ಮಾಲೀಕರು, RPSL ಏಜೆನ್ಸಿಗಳು ಮತ್ತು ಭಾರತೀಯ ಮಿಷನ್ ಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
• ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು 24x7 ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಾರಂಭವಾದಾಗಿನಿಂದ 4,228 ಕರೆಗಳು ಮತ್ತು 8,221 ಇಮೇಲ್ ಗಳನ್ನು ನಿರ್ವಹಿಸಿದೆ, ಕಳೆದ 24 ಗಂಟೆಗಳಲ್ಲಿ 120 ಕರೆಗಳು ಮತ್ತು 312 ಇಮೇಲ್ ಗಳನ್ನು ಒಳಗೊಂಡಿದೆ.
• ಡಿಜಿ ಶಿಪ್ಪಿಂಗ್ ಈವರೆಗೆ 674 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 39 ನಾವಿಕರು ಸೇರಿದ್ದಾರೆ.
• ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಯಾವುದೇ ದಟ್ಟಣೆಯಿಲ್ಲದೆ ಸಹಜವಾಗಿವೆ; ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಕಡಲ ಮಂಡಳಿಗಳು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿವೆ.
• ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ಭಾರತೀಯ ಮಿಷನ್ಗಳು ಮತ್ತು ಪೋಸ್ಟ್ಗಳು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿವೆ ಮತ್ತು ನೆರವು ನೀಡುವುದನ್ನು ಮುಂದುವರಿಸಿವೆ, ಜೊತೆಗೆ ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಸೂಕ್ತ ಸಲಹೆಗಳನ್ನು ನೀಡುತ್ತಿವೆ. ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:
• ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 24x7 ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಮನ್ವಯವನ್ನು ಸಾಧಿಸಲಾಗುತ್ತಿದೆ.
• ಭಾರತೀಯ ಮಿಷನ್ ಗಳು ಮತ್ತು ಪೋಸ್ಟ್ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸಲಹೆಗಳನ್ನು ನೀಡುತ್ತಿವೆ ಮತ್ತು ಸಮುದಾಯ ಸಂಸ್ಥೆಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಹೊಂದಿವೆ. ನಾವಿಕರು, ವಿದ್ಯಾರ್ಥಿಗಳು, ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ, ಕಾನ್ಸುಲರ್ ಸೇವೆಗಳು ಮತ್ತು ಲಾಜಿಸ್ಟಿಕ್ಸ್ ಸಂಬಂಧಿತ ನೆರವು ನೀಡಲಾಗುತ್ತಿದೆ.
• ಈ ಪ್ರದೇಶದಿಂದ ಹೆಚ್ಚಿನ ವಿಮಾನಗಳ ಸಂಚಾರದೊಂದಿಗೆ ವಿಮಾನಯಾನ ಕಾರ್ಯಾಚರಣೆಗಳು ಸುಧಾರಿಸುತ್ತಿವೆ; ಫೆಬ್ರವರಿ 28 ರಿಂದ ಸುಮಾರು 4,50,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ.
o ಯುಎಇ (UAE): ವಿಮಾನಯಾನ ಸಂಸ್ಥೆಗಳು ಸೀಮಿತ ಸಂಖ್ಯೆಯ ನಿಗದಿತವಲ್ಲದ ವಿಮಾನಗಳನ್ನು ಚಲಾಯಿಸುತ್ತಿವೆ; ಇಂದು ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 80 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
o ಸೌದಿ ಅರೇಬಿಯಾ ಮತ್ತು ಓಮನ್: ಭಾರತಕ್ಕೆ ವಿಮಾನಗಳ ಸಂಚಾರ ಮುಂದುವರಿದಿದೆ.
o ಕತಾರ್: ವೈಮಾನಿಕ ಮಾರ್ಗವು ಭಾಗಶಃ ಮುಕ್ತವಾಗಿದೆ; ಇಂದು ಸುಮಾರು 8-9 ನಿಗದಿತವಲ್ಲದ ವಿಮಾನಗಳನ್ನು ನಿರೀಕ್ಷಿಸಲಾಗಿದೆ.
o ಕುವೈತ್ ಮತ್ತು ಬಹ್ರೇನ್: ವೈಮಾನಿಕ ಮಾರ್ಗವನ್ನು ಮುಚ್ಚಲಾಗಿದೆ; ಜಜೀರಾ ಏರ್ವೇಸ್ ಮತ್ತು ಗಲ್ಫ್ ಏರ್ನ ವಿಶೇಷ ವಿಮಾನಗಳು ದಮ್ಮಾಮ್ (ಸೌದಿ ಅರೇಬಿಯಾ) ಮೂಲಕ ಭಾರತಕ್ಕೆ ಕಾರ್ಯನಿರ್ವಹಿಸುತ್ತಿವೆ.
o ಇರಾನ್: ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
o ಇಸ್ರೇಲ್: ಜೋರ್ಡಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
o ಕುವೈತ್, ಬಹ್ರೇನ್ ಮತ್ತು ಇರಾಕ್: ಸೌದಿ ಅರೇಬಿಯಾ ಮೂಲಕವೂ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
*****
(ಪ್ರಕಟಣೆ ಐ.ಡಿ.: 2245682)
ವಿಸಿಟರ್ ಕೌಂಟರ್ : 18