ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಭಾರತದ ಇಂಧನ ಪೂರೈಕೆ ಸಂಪೂರ್ಣ ಸುಭದ್ರವಾಗಿದೆ; ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಪ್ರಚಾರ ಮಾಡಲಾಗುತ್ತಿದೆ ಎಂದ ಸರಕಾರ

ಪ್ರಕಟಣಾ ದಿನಾಂಕ: 26 MAR 2026 2:15PM by PIB Bengaluru

ಭಾರತದ ಪೆಟ್ರೋಲಿಯಂ ಹಾಗೂ ಎಲ್‌ಪಿಜಿ ಪೂರೈಕೆ ಪರಿಸ್ಥಿತಿಯು ಸಂಪೂರ್ಣ ಸುಭದ್ರ ಮತ್ತು ನಿಯಂತ್ರಣದಲ್ಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಚಿಲ್ಲರೆ ಇಂಧನ ಮಳಿಗೆಗಳು ಸಮರ್ಪಕ ಪೂರೈಕೆಯನ್ನು ಹೊಂದಿದ್ದು, ದೇಶದಲ್ಲಿ ಎಲ್ಲಿಯೂ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿಗೆ ಕೊರತೆಯಿಲ್ಲ ಎಂದು ಸಚಿವಾಲಯ ಹೇಳಿದೆ. ಇದೇವೇಳೆ, ಅನಗತ್ಯ ಭೀತಿಯನ್ನು ಹರಡಲು ಉದ್ದೇಶಪೂರ್ವಕವಾಗಿ ಕೈಗೊಂಡ ಕಿಡಿಗೇಡಿತನದ, ಸಂಘಟಿತ ತಪ್ಪು ಮಾಹಿತಿಯ ಪ್ರಚಾರದಿಂದ ನಾಗರಿಕರು ದಾರಿ ತಪ್ಪಬಾರದು ಎಂದು ಸಚಿವಾಲಯ ಕರೆ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್: ಕೊರತೆ ಇಲ್ಲ, ಪಡಿತರ ರೀತಿಯಲ್ಲಿ ಸರಬರಾಜು ಇಲ್ಲ

1. ಭಾರತವು ಇಂಧನ ಭದ್ರತೆಯ ಓಯಸಿಸ್ ಆಗಿದೆ. ಭಾರತವು ವಿಶ್ವದ 4ನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ 5ನೇ ಅತಿದೊಡ್ಡ ರಫ್ತುದಾರನಾಗಿದ್ದು, 150ಕ್ಕೂ ಹೆಚ್ಚು ದೇಶಗಳಿಗೆ ಸಂಸ್ಕರಿಸಿದ ಇಂಧನವನ್ನು ಪೂರೈಸುತ್ತಿದೆ. ಭಾರತವು ವಿಶ್ವಕ್ಕೆ ನಿವ್ವಳ ರಫ್ತುದಾರನಾಗಿರುವುದರಿಂದ, ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯನ್ನು ರಚನಾತ್ಮಕವಾಗಿ ಖಾತರಿಪಡಿಸಲಾಗಿದೆ. ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಇಂಧನ ಮಳಿಗೆಗಳು ತೆರೆದಿವೆ ಮತ್ತು ಯಾವುದೇ ಅಡೆತಡೆಯಿಲ್ಲದೆ ಇಂಧನವನ್ನು ವಿತರಿಸುತ್ತಿವೆ. ಒಂದೇ ಒಂದು ಮಳಿಗೆಯನ್ನು ಸಹ ಪಡಿತರದ ರೀತಿಯಲ್ಲಿ ಸೀಮಿತವಾಗಿ ಸರಬರಾಜು ಮಾಡುವಂತೆ ಕೇಳಲಾಗಿಲ್ಲ. ಪ್ರಪಂಚದಾದ್ಯಂತ, ದೇಶಗಳು ಬೆಲೆ ಹೆಚ್ಚಳ, ಪಡಿತರ, ಬೆಸ-ಬೆಸ-ವಾಹನ ನಿರ್ಬಂಧಗಳು ಮತ್ತು ಬಲವಂತದ ಪಂಪ್‌ ಮುಚ್ಚುವಿಕೆಗೆ ಸಾಕ್ಷಿಯಾಗಿವೆ. ಕೆಲವು ದೇಶಗಳು "ರಾಷ್ಟ್ರೀಯ ಇಂಧನ ತುರ್ತುಪರಿಸ್ಥಿತಿ" ಘೋಷಿಸಿವೆ. ಅಂತಹ ಯಾವುದೇ ಕ್ರಮಗಳ ಅಗತ್ಯ ಇದೆ ಎಂದು ಭಾರತ ಭಾವಿಸುವುದಿಲ್ಲ. ಇತರ ರಾಷ್ಟ್ರಗಳಲ್ಲಿ ಪಡಿತರ ಮುಖೇನ ಇಂಧನವನ್ನು ನೀಡುವ ಪರಿಸ್ಥಿತಿ ಇದ್ದರೂ, ಭಾರತದಲ್ಲಿ ಸರಬರಾಜುಗಳ ಕೊರತೆಯಾಗಿಲ್ಲ. ಆಯ್ದ ಪಂಪ್‌ಗಳಲ್ಲಿ ಆತಂಕದ  ಖರೀದಿಯ ನಿದರ್ಶನಗಳು ವಿರಳವಾಗಿ ಕಂಡುಬಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೊಗಳಿಂದ ಹರಡಿದ ಉದ್ದೇಶಪೂರ್ವಕ ತಪ್ಪು ಮಾಹಿತಿಯೇ ಇದಕ್ಕೆ ಕಾರಣವಾಗಿದೆ. ಅಂತಹ ಪಂಪ್‌ಗಳಲ್ಲಿ ಬೇಡಿಕೆ ಹೆಚ್ಚಿದ್ದರೂ, ಎಲ್ಲಾ ಗ್ರಾಹಕರಿಗೆ ಇಂಧನವನ್ನು ವಿತರಿಸಲಾಗಿದೆ ಮತ್ತು ಸರಬರಾಜನ್ನು ಹೆಚ್ಚಿಸಲು ತೈಲ ಕಂಪನಿ ಡಿಪೋಗಳು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿವೆ. ಪಂಪ್ ಮಾಲೀಕರ ದುಡಿಯುವ ಬಂಡವಾಳದ ಸಮಸ್ಯೆಗಳಿಂದಾಗಿ ಯಾವುದೇ ಪಂಪ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗದಂತೆ ನೋಡಿಕೊಳ್ಳಲು ಪೆಟ್ರೋಲ್ ಪಂಪ್‌ಗಳಿಗೆ ಸಾಲವನ್ನು ಈ ಹಿಂದೆ ಅನುಮತಿಸಲಾಗಿದ್ದ 1 ದಿನದಿಂದ 3 ದಿನಗಳಿಗೆ ಹೆಚ್ಚಿಸಲು ತೈಲ ಕಂಪನಿಗಳು ಕ್ರಮ ಕೈಗೊಂಡಿವೆ.

ಕಚ್ಚಾ ತೈಲ ಪೂರೈಕೆ: ಸರಿದೂಗಿಸುವುದಕ್ಕಿಂತ ಅಂತರ ಹೆಚ್ಚಳ

2. ಹಾರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧದ ಹೊರತಾಗಿಯೂ, ಭಾರತವು ಇಂದು ವಿಶ್ವದಾದ್ಯಂತದ ತನ್ನ 41ಕ್ಕೂ ಹೆಚ್ಚು ಪೂರೈಕೆದಾರರಿಂದ ಈ ಹಿಂದೆ ಜಲಸಂಧಿಯ ಮೂಲಕ ಬರುತ್ತಿದ್ದ ಕಚ್ಚಾ ತೈಲವನ್ನು ಪಡೆಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಹೆಚ್ಚಿನ ಪ್ರಮಾಣಗಳು - ವಿಶೇಷವಾಗಿ ಪಶ್ಚಿಮ ಗೋಳಾರ್ಧದಿಂದ ಪೂರೈಕೆಯು ಯಾವುದೇ ರೀತಿಯ ಅಡಚಣೆಯಾಗದಂತೆ ಪರಿಸ್ಥಿತಿಯನ್ನು ಸರಿದೂಗಿಸಿದೆ. ಪ್ರತಿಯೊಂದು ಭಾರತೀಯ ಸಂಸ್ಕರಣಾಗಾರವು ಶೇ.100 ಕ್ಕಿಂತ ಹೆಚ್ಚು ಬಳಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ 60 ದಿನಗಳವರೆಗೆ ಕಚ್ಚಾ ತೈಲ ಸರಬರಾಜನ್ನು ಭಾರತೀಯ ತೈಲ ಕಂಪನಿಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಪೂರೈಕೆ  ಅಂತರವಿಲ್ಲ.

ಕಾರ್ಯತಂತ್ರದ ದಾಸ್ತಾನು: ಪೂರ್ಣ ಮತ್ತು ನಿಖರ ಚಿತ್ರಣ

3.  ದೇಶದಲ್ಲಿ ಕೇವಲ 6 ದಿನಗಳ ದಾಸ್ತಾನು ಇದೆ ಎಂದು ಸೂಚಿಸುವ ಕೆಲವು ಲೇಖನಗಳು ಮತ್ತು ಸಾಮಾಜಿಕ ಮಾಧ್ಯಮ ವೀಡಿಯೊಗಳು ಸೇರಿದಂತೆ ಹಲವು ಮೂಲಗಳಿಂದ ತಪ್ಪು ಮಾಹಿತಿ ಹರಿದಾಡುತ್ತಿದೆ. ಭಾರತವು 74 ದಿನಗಳ ಒಟ್ಟು ಮೀಸಲು ದಾಸ್ತಾನು ಸಾಮರ್ಥ್ಯವನ್ನು ಹೊಂದಿದೆ ಮತ್ತು ನೈಜ ದಾಸ್ತಾನು ಈಗ ಸುಮಾರು 60 ದಿನಗಳಿಗೆ ಸಾಕಾಗುವಷ್ಟಿದೆ (ಕಚ್ಚಾ ದಾಸ್ತಾನುಗಳು, ಉತ್ಪನ್ನಗಳ ದಾಸ್ತಾನು ಮತ್ತು ವಿಶೇಷ ಕಾರ್ಯತಂತ್ರದ ಸಂಗ್ರಹಣೆ ಸೇರಿದಂತೆ). ಜಾಗತಿಕವಾಗಿ ಪರಿಸ್ಥಿತಿ ಏನೇ ಇದ್ದರೂ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಸುಮಾರು ಎರಡು ತಿಂಗಳ ಸ್ಥಿರ ಪೂರೈಕೆ ಲಭ್ಯವಿದೆ. ಮುಂದಿನ 2 ತಿಂಗಳ ಕಚ್ಚಾ ತೈಲ ಸಂಗ್ರಹಣೆಯನ್ನು ಸಹ ಖಾತರಿಪಡಿಸಲಾಗಿದೆ. ಮುಂದಿನ ಹಲವು ತಿಂಗಳುಗಳವರೆಗೆ ಭಾರತವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ಅಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಯಕಟ್ಟಿನ ಸಂಗ್ರಹಣೆಯಲ್ಲಿನ ಪ್ರಮಾಣವು ಬಳಕೆಯಾಗಲಿದೆ. ಆದ್ದರಿಂದ, ಭಾರತದ ಮೀಸಲು ಖಾಲಿಯಾಗಿದೆ ಅಥವಾ ಅಸಮರ್ಪಕವಾಗಿದೆ ಎಂಬ ಯಾವುದೇ ವದಂತಿಯನ್ನು ತಿರಸ್ಕರಿಸುವಂತೆ ಮನವಿ ಮಾಡಲಾಗಿದೆ.

ಎಲ್‌ಪಿಜಿ: ಉತ್ಪಾದನೆ ಹೆಚ್ಚಳ, ಆಮದು ಅವಶ್ಯಕತೆ ಕಡಿಮೆ, ಸಾಗಣೆ ಸುಗಮ

4. ಎಲ್‌ಪಿಜಿ ಕೊರತೆ ಇಲ್ಲ. ಈ ಸಚಿವಾಲಯ ಹೊರಡಿಸಿದ ಎಲ್‌ಪಿಜಿ ನಿಯಂತ್ರಣ ಆದೇಶವನ್ನು ಅನುಸರಿಸಿ, ದೇಶೀಯ ಸಂಸ್ಕರಣಾಗಾರ ಉತ್ಪಾದನೆಯನ್ನು ಶೇ.40 ರಷ್ಟು ಹೆಚ್ಚಿಸಲಾಗಿದೆ. ದೈನಂದಿನ ಒಟ್ಟು ಎಲ್‌ಪಿಜಿ ಅಗತ್ಯ ಸುಮಾರು 80 ʻಟಿಎಂಟಿʼ ಇದ್ದರೆ, ಪ್ರಸ್ತುತ ಎಲ್‌ಪಿಜಿ ಉತ್ಪಾದನೆಯನ್ನು 50 ಟಿಎಂಟಿಗೆ (ನಮ್ಮ ಅಗತ್ಯದ ಶೇ.60 ಕ್ಕಿಂತ ಹೆಚ್ಚು) ಖಾತರಿಪಡಿಸಲಾಗಿದೆ. ಇದರ ಪರಿಣಾಮವಾಗಿ ನಿವ್ವಳ ದೈನಂದಿನ ಆಮದು ಅಗತ್ಯವು ಕೇವಲ 30 ಟಿಎಂಟಿಗೆ ಇಳಿದಿದೆ - ಅಂದರೆ ಭಾರತವು ಈಗ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಉತ್ಪಾದಿಸುತ್ತಿದೆ. ದೇಶೀಯ ಉತ್ಪಾದನೆಗಿಂತ ಹೆಚ್ಚಿನದಾಗಿ, 800 ಟಿಎಂಟಿ ಖಚಿತವಾದ ಒಳಬರುವ ಎಲ್‌ಪಿಜಿ ನೌಕೆಗಳನ್ನು ಈಗಾಗಲೇ ಸುರಕ್ಷಿತಗೊಳಿಸಲಾಗಿದೆ ಮತ್ತು ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಿಂದ ಭಾರತ ಮಾಡಿಕಂಡ ಆಮದು 22 ಎಲ್‌ಪಿಜಿ ಟರ್ಮಿನಲ್‌ಗಳಿಗೆ ತಲುಪಲಿದೆ.  ಇದು 2014 ರಲ್ಲಿ ಅಸ್ತಿತ್ವದಲ್ಲಿದ್ದ 11 ಟರ್ಮಿನಲ್‌ಗಳಿಗಿಂತ ದುಪ್ಪಟ್ಟಾಗಿದೆ. ಸುಮಾರು ಒಂದು ಪೂರ್ಣ ತಿಂಗಳ ಪೂರೈಕೆಯನ್ನು ದೃಢವಾಗಿ ವ್ಯವಸ್ಥೆ ಮಾಡಲಾಗಿದೆ, ಹೆಚ್ಚುವರಿ ಸಂಗ್ರಹಣೆಯನ್ನು ನಿರಂತರವಾಗಿ ಅಂತಿಮಗೊಳಿಸಲಾಗುತ್ತಿದೆ. ತೈಲ ಕಂಪನಿಗಳು ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಯಶಸ್ವಿಯಾಗಿ ತಲುಪಿಸುತ್ತಿವೆ. ಗ್ರಾಹಕರು ಭಯಭೀತರಾಗಿದ್ದರಿಂದ ಸಿಲಿಂಡರ್ ಬೇಡಿಕೆ 89 ಲಕ್ಷ ಸಿಲಿಂಡರ್‌ಗಳಿಗೆ ಏರಿತ್ತು ಮತ್ತು ಈಗ ಮತ್ತೆ 50 ಲಕ್ಷ ಸಿಲಿಂಡರ್‌ಗಳಿಗೆ ಇಳಿದಿದೆ. ಅಕ್ರಮ ದಾಸ್ತಾನು ಅಥವಾ ಕಾಳಸಂತೆಯಲ್ಲಿ ಮಾರಾಟವನ್ನು ತಪ್ಪಿಸಲು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ವಾಣಿಜ್ಯ ಸಿಲಿಂಡರ್ ಹಂಚಿಕೆಯನ್ನು ಶೇ.50 ಕ್ಕೆ ಹೆಚ್ಚಿಸಲಾಗಿದೆ.

ಪಿಎನ್‌ಜಿಗೆ ಉತ್ತೇಜನ: ಪಿಎನ್‌ಜಿಗೆ ಪರಿವರ್ತನೆ ಈಗಾಗಲೇ ಚಾಲ್ತಿಯಿಲ್ಲಿದೆ; ಇದು ಬಿಕ್ಕಟ್ಟಿಗೆ ತಕ್ಷಣದ ಪ್ರತಿಕ್ರಿಯೆಯಲ್ಲ

5. ಕೊಳವೆ ಮಾರ್ಗದ ನೈಸರ್ಗಿಕ ಅನಿಲವನ್ನು ರಾಜ್ಯ ಸರ್ಕಾರಗಳ ಸಂಪೂರ್ಣ ಸಮನ್ವಯದೊಂದಿಗೆ ಉತ್ತೇಜಿಸಲಾಗುತ್ತಿದೆ. ಏಕೆಂದರೆ ಇದು ಅಗ್ಗದಾಗಿದೆ, ಸ್ವಚ್ಛವಾಗಿದೆ ಮತ್ತು ಭಾರತೀಯ ಕುಟುಂಬಗಳಿಗೆ ಸುರಕ್ಷಿತವಾಗಿದೆ. ಭಾರತವು ಈಗಾಗಲೇ ದೇಶೀಯವಾಗಿ 92 ಎಂಎಂಎಸ್‌ಸಿಎಂಡಿ ನೈಸರ್ಗಿಕ ಅನಿಲವನ್ನು ಉತ್ಪಾದಿಸುತ್ತಿದೆ. ಇದು ಎಲ್‌ಪಿಜಿ ಮೇಲಿನ ಆಮದು-ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ನಗರ ಅನಿಲ ವಿತರಣೆಯು 2014 ರಲ್ಲಿದ್ದ 57 ಭೌಗೋಳಿಕ ಪ್ರದೇಶಗಳಿಂದ ಇಂದು 300ಕ್ಕೆ ವಿಸ್ತರಿಸಿದೆ. ದೇಶೀಯ ಪಿಎನ್‌ಜಿ ಸಂಪರ್ಕಗಳು 25 ಲಕ್ಷದಿಂದ 1.5 ಕೋಟಿಗೆ ಏರಿವೆ. ಪ್ರಸ್ತುತ ಪರಿಸ್ಥಿತಿ ಉದ್ಭವಿಸುವ ಮೊದಲು ಈ ಪರಿವರ್ತನೆಯು ಉತ್ತಮವಾಗಿ ನಡೆಯುತ್ತಿತ್ತು ಮತ್ತು ಇದು ಭಾರತದ ದೀರ್ಘಕಾಲೀನ ಇಂಧನ ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತದೆ. ಎಲ್‌ಪಿಜಿ ಖಾಲಿಯಾಗುತ್ತಿರುವುದರಿಂದ ಪಿಎನ್‌ಜಿಯನ್ನು ಉತ್ತೇಜಿಸಲಾಗುತ್ತಿದೆ ಎಂಬ ಹೇಳಿಕೆ ತಪ್ಪು ಮಾಹಿತಿಯಾಗಿದೆ. ಎಲ್‌ಪಿಜಿ ಪೂರೈಕೆಯು ಸುಭದ್ರವಾಗಿದೆ. ಪಿಎನ್‌ಜಿ ಭಾರತದ ಕುಟುಂಬಗಳಿಗೆ ಉತ್ತಮ, ಹೆಚ್ಚು ಕೈಗೆಟುಕುವ ಮತ್ತು ಹೆಚ್ಚು ಅನುಕೂಲಕರ ಇಂಧನವಾಗಿದೆ.

ಸರ್ಕಾರದ ಎಚ್ಚರಿಕೆ: ತಪ್ಪು ಮಾಹಿತಿಯ ವಿರುದ್ಧ ಕ್ರಮ

6. ಜನರು ಸರತಿ ಸಾಲಿನಲ್ಲಿ ನಿಂತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಸಿ, ಜನರನ್ನು ತಪ್ಪುದಾರಿಗೆಳೆಯುವ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇತರ ದೇಶಗಳಲ್ಲಿನ ಪಡಿತರದ ಜಾಗತಿಕ ಸುದ್ದಿ ತುಣುಕುಗಳು ಮತ್ತು ಭಾರತದಲ್ಲಿ ಮುಂಬರುವ ಲಾಕ್‌ಡೌಮನ್‌ ಮತ್ತು ತುರ್ತು ಇಂಧನ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ನಕಲಿ ಮತ್ತು ಕಪೋಲಕಲ್ಪಿತ ಹೇಳಿಕೆಗಳನ್ನು ಸಚಿವಾಲಯ ಗಂಭೀರ ಕಳವಳದಿಂದ ಗಮನಿಸಿದೆ.

7. ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ನೈಸರ್ಗಿಕ  ಅನಿಲ ನಿಯಂತ್ರಣ ಆದೇಶ ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ ಸೇರಿದಂತೆ ಸರ್ಕಾರದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಬಿಕ್ಕಟ್ಟನ್ನು ಸೂಚಿಸುವ ತುರ್ತು ಘೋಷಣೆಗಳಾಗಿ ತಪ್ಪಾಗಿ ನಿರೂಪಿಸಿವೆ. ಆದರೆ, ವಾಸ್ತವವಾಗಿ ಅವು ವಿವೇಕಯುತ ಮತ್ತು ಪೂರ್ವಭಾವಿ ಕ್ರಮವಾಗಿ ನೀಡಲಾದ ಪೂರೈಕೆ ಆದ್ಯತೆಯ ಪ್ರಮಾಣಿತ ಆಡಳಿತಾತ್ಮಕ ಸಾಧನಗಳಾಗಿವೆ.

8. ಕಿಡಿಗೇಡಿಗಳು ಹರಡುತ್ತಿರುವ ಈ ತಪ್ಪು ಮಾಹಿತಿಯು ಅನಗತ್ಯ ಸಾರ್ವಜನಿಕ ಕಳವಳಕ್ಕೆ ಕಾರಣವಾಗುತ್ತದೆ. ಇಂಧನ ಮತ್ತು ಅನಿಲ ಲಭ್ಯತೆಯ ಬಗ್ಗೆ ಮಾಹಿತಿಗಾಗಿ ಅಧಿಕೃತ ಸರ್ಕಾರಿ ಸಂವಹನಗಳನ್ನು ಮಾತ್ರ ಅವಲಂಬಿಸುವಂತೆ ಸಚಿವಾಲಯವು ಎಲ್ಲಾ ನಾಗರಿಕರನ್ನು ಒತ್ತಾಯಿಸುತ್ತದೆ. ಅಗತ್ಯ ವಸ್ತುಗಳ ಲಭ್ಯತೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುವುದು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಭೀತಿಯನ್ನು ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ.

 

*****


(ಪ್ರಕಟಣೆ ಐ.ಡಿ.: 2245667) ವಿಸಿಟರ್ ಕೌಂಟರ್ : 32
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , हिन्दी , Nepali , Marathi , Bengali , Gujarati , Odia , Telugu