ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆಡ್ ಟ್ರಸ್ಟ್ ಶೃಂಗಸಭೆ 2026 ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರಿಂದ ಪ್ರಧಾನ ಭಾಷಣ; ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಜಾಹೀರಾತು ಪರಿಸರ ವ್ಯವಸ್ಥೆಗೆ ಕರೆ
ಅಧಿಕೃತತೆಯನ್ನು ಕಾಪಾಡುವ ಮೂಲಕ ಮತ್ತು ದಾರಿತಪ್ಪಿಸುವ ಪ್ರಚಾರಗಳನ್ನು ತಪ್ಪಿಸುವ ಮೂಲಕ ಪ್ರೇಕ್ಷಕರ ವಿಶ್ವಾಸವನ್ನು ರಕ್ಷಿಸಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಒತ್ತಾಯ
ಜಾಹೀರಾತಿನಲ್ಲಿ ಜಾಗೃತಿ ಮತ್ತು ಅನುಸರಣೆಯನ್ನು ಉತ್ತೇಜಿಸಲು ಆಡ್ ಟ್ರಸ್ಟ್ ಶೃಂಗಸಭೆ 2026 ರಲ್ಲಿ 'ಜಾಹೀರಾತು ಕಾನೂನು ಸಂಕಲನ' ಬಿಡುಗಡೆ
ಪ್ರಕಟಣಾ ದಿನಾಂಕ:
18 MAR 2026 4:22PM by PIB Bengaluru
“ಜಾಹೀರಾತು ಕೇವಲ ಜನರನ್ನು ತಲುಪುವುದಷ್ಟೇ ಅಲ್ಲ, ಅದು ವಿಶ್ವಾಸವನ್ನು ನಿರ್ಮಿಸಬೇಕು” ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಹೇಳಿದರು. ಅವರು ಇಂದು ಮುಂಬೈನಲ್ಲಿ ನಡೆದ ಆಡ್‌ಟ್ರಸ್ಟ್ ಶೃಂಗಸಭೆ (AdTrust Summit) 2026 ರಲ್ಲಿ ಪ್ರಧಾನ ಭಾಷಣ ಮಾಡಿದರು. ಭಾರತದಲ್ಲಿ ಜಾಹೀರಾತು ವಲಯವು ವ್ಯಾಪ್ತಿ, ಸಂಕೀರ್ಣತೆ ಮತ್ತು ಪ್ರಭಾವದಲ್ಲಿ ಬೆಳೆಯುತ್ತಿರುವ ಈ ಸಮಯದಲ್ಲಿ, ಜವಾಬ್ದಾರಿಯುತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಜಾಹೀರಾತು ಪರಿಸರ ವ್ಯವಸ್ಥೆಯ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ವಲಯವು ಬೆಳವಣಿಗೆಯನ್ನು ಮುಂದುವರಿಸಬೇಕು, ಆದರೆ ವಿಶೇಷವಾಗಿ ಡಿಜಿಟಲ್ ಕ್ಷೇತ್ರದಲ್ಲಿ ಹೊಣೆಗಾರಿಕೆಯೂ ಇರಬೇಕು ಎಂದು ಶ್ರೀ ಜಾಜು ಪ್ರತಿಪಾದಿಸಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ದೃಷ್ಟಿಕೋನವು ವಿಶ್ವಾಸವನ್ನು ಬೆಳೆಸುವುದು, ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ತಿಳಿಸಿದರು.

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎ ಎಸ್ ಸಿ ಐ) ಆಯೋಜಿಸಿದ 'ಆಡ್ ಟ್ರಸ್ಟ್ ಶೃಂಗಸಭೆ 2026' ರ ಮೊದಲ ಆವೃತ್ತಿಯು ಜಾಹೀರಾತು, ಮಾಧ್ಯಮ, ತಂತ್ರಜ್ಞಾನ ಮತ್ತು ಸರ್ಕಾರಿ ವಲಯಗಳ ಪ್ರತಿನಿಧಿಗಳನ್ನು ಜವಾಬ್ದಾರಿಯುತ ಜಾಹೀರಾತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಒಂದೆಡೆ ಸೇರಿಸಿತು. ಈ ಚರ್ಚೆಗಳು ಹೊಸ ಪ್ರವೃತ್ತಿಗಳು, ಕಾನೂನು ಚೌಕಟ್ಟುಗಳು ಮತ್ತು ಜಾಹೀರಾತು ಅಭ್ಯಾಸಗಳ ಮೇಲೆ ಹೊಸ ತಂತ್ರಜ್ಞಾನಗಳ ಪ್ರಭಾವದ ಮೇಲೆ ಕೇಂದ್ರೀಕರಿಸಿದವು.
ಶೃಂಗಸಭೆಯಲ್ಲಿ ಮಾತನಾಡಿದ ಶ್ರೀ ಜಾಜು ಅವರು, ಜಾಹೀರಾತು ಕೇವಲ ಒಂದು ವಾಣಿಜ್ಯ ಚಟುವಟಿಕೆಯಲ್ಲ; ಅದು ಮಾರುಕಟ್ಟೆಗಳನ್ನು ರೂಪಿಸುತ್ತದೆ, ಬ್ರ್ಯಾಂಡ್ ಗಳನ್ನು ನಿರ್ಮಿಸುತ್ತದೆ, ಗ್ರಾಹಕರಿಗೆ ಮಾಹಿತಿ ನೀಡುತ್ತದೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಆಕಾಂಕ್ಷೆಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು. ಭಾರತದಂತಹ ಬೃಹತ್ ಮತ್ತು ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ದೇಶದಲ್ಲಿ, ಜಾಹೀರಾತು ಎಂಬುದು ನಾವೀನ್ಯತೆ, ಆರ್ಥಿಕ ಚಟುವಟಿಕೆ, ವಿಷಯ ರಚನೆ ಮತ್ತು ಒಳಗೊಳ್ಳುವಿಕೆಗೆ ನಿರ್ಣಾಯಕ ಚಾಲಕಶಕ್ತಿಯಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್ ಗಳು ಮತ್ತು ಕೃತಕ ಬುದ್ಧಿಮತ್ತೆಯು ಈಗ ಬ್ರ್ಯಾಂಡ್ ಗಳು, ನವೋದ್ಯಮಗಳು, ಸ್ಥಳೀಯ ವ್ಯವಹಾರಗಳು ಮತ್ತು ಸೃಜನಶೀಲರು ಹೆಚ್ಚಿನ ಜನರನ್ನು ತಲುಪಲು ಅನುವು ಮಾಡಿಕೊಡುತ್ತವೆ, ಇದು ಮಾರುಕಟ್ಟೆ ಪ್ರವೇಶದ ಅಡೆತಡೆಗಳನ್ನು ಕಡಿಮೆ ಮಾಡಿದೆ ಮತ್ತು ಭಾಗವಹಿಸುವಿಕೆಯನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.
ಅದೇ ಸಮಯದಲ್ಲಿ, ಹಣಕಾಸಿನ ವಂಚನೆಗಳು, ದಾರಿತಪ್ಪಿಸುವ ಹೂಡಿಕೆ ಪ್ರಚಾರಗಳು ಮತ್ತು ನಕಲಿ ಉದ್ಯೋಗಾವಕಾಶಗಳು ಸೇರಿದಂತೆ ಡಿಜಿಟಲ್ ಜಾಹೀರಾತಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಶ್ರೀ ಜಾಜು ಎಚ್ಚರಿಸಿದರು, ಇವು ಹೆಚ್ಚಾಗಿ ದುರ್ಬಲ ವರ್ಗದ ಜನರನ್ನು ಗುರಿಯಾಗಿಸಿಕೊಳ್ಳುತ್ತವೆ. ವಾಣಿಜ್ಯ ಭಾಷಣವು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದ್ದರೂ, ದಾರಿತಪ್ಪಿಸುವ ಮತ್ತು ಮೋಸಗೊಳಿಸುವ ಜಾಹೀರಾತುಗಳನ್ನು ನಿಯಂತ್ರಿಸಬಹುದು ಮತ್ತು ನಿಯಂತ್ರಿಸಬೇಕು ಎಂದು ಅವರು ಒತ್ತಿ ಹೇಳಿದರು.
ಶೃಂಗಸಭೆಯಲ್ಲಿ ನಡೆದ ಪ್ರಮುಖ ಚರ್ಚೆಗಳಲ್ಲಿ ಜಾಹೀರಾತಿನಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ, ಡೀಪ್‌ಫೇಕ್, ಡಾರ್ಕ್ ಪ್ಯಾಟರ್ನ್ ಮತ್ತು ಆಂಟಿ-ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ನ ಹೆಚ್ಚುತ್ತಿರುವ ಪ್ರವೃತ್ತಿಯಂತಹ ಉದಯೋನ್ಮುಖ ವಿಷಯಗಳು ಸೇರಿದ್ದವು. ಜಾಹೀರಾತುದಾರರು ಕೇವಲ ಜನರನ್ನು ತಲುಪುವುದರ ಜೊತೆಗೆ ವಿಶ್ವಾಸಾರ್ಹತೆಯ ಮೇಲೆ ಗಮನ ಹರಿಸುವಂತೆ ಮತ್ತು ವಿಷಯ ಸೃಷ್ಟಿಕರ್ತರು ಹಾಗೂ ಇನ್‌ಫ್ಲುಯೆನ್ಸರ್ ಗಳು ಅಧಿಕೃತತೆಯನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ದಾರಿತಪ್ಪಿಸುವ ಪ್ರಚಾರಗಳನ್ನು ತಪ್ಪಿಸುವ ಮೂಲಕ ಪ್ರೇಕ್ಷಕರ ವಿಶ್ವಾಸವನ್ನು ಕಾಪಾಡುವಂತೆ ಶ್ರೀ ಜಾಜು ಕರೆ ನೀಡಿದರು.
ಶ್ರೀ ಜಾಜು ಅವರು ಜವಾಬ್ದಾರಿಯುತ ಜಾಹೀರಾತಿಗಾಗಿ ಈ ಕೆಳಗಿನ ಐದು ಪ್ರಮುಖ ತತ್ವಗಳನ್ನು ವಿವರಿಸಿದರು:
- ಸತ್ಯಸಂಧತೆ: ಎಲ್ಲಾ ರೀತಿಯ ಸಂವಹನಗಳಲ್ಲಿ ಸತ್ಯಸಂಧತೆಯು ಯಾವುದೇ ರಾಜಿಯಿಲ್ಲದ ಮೂಲಭೂತ ಅಂಶವಾಗಿರಬೇಕು.
- ಪಾರದರ್ಶಕತೆ: ಜಾಹೀರಾತುಗಳು, ಪ್ರಾಯೋಜಕತ್ವಗಳು ಮತ್ತು ಪ್ರಚಾರದ ಸಂಬಂಧಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಪಾರದರ್ಶಕತೆ ಅತ್ಯಗತ್ಯ.
- ಜವಾಬದಾರಿ: ಎಲ್ಲಾ ವಿಷಯಗಳ (ಕಂಟೆಂಟ್) ವಿನ್ಯಾಸ ಮತ್ತು ವಿತರಣೆಯು ಜವಾಬ್ದಾರಿಯಿಂದ ಕೂಡಿರಬೇಕು.
- ದುರ್ಬಲ ಗುಂಪುಗಳ ರಕ್ಷಣೆ: ದುರ್ಬಲ ವರ್ಗದವರ, ಅದರಲ್ಲೂ ವಿಶೇಷವಾಗಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.
- ಹೊಣೆಗಾರಿಕೆಯೊಂದಿಗೆ ನಾವೀನ್ಯತೆ: ತಾಂತ್ರಿಕ ಮತ್ತು ಸೃಜನಶೀಲ ಪ್ರಗತಿಗಳು ನಂಬಿಕೆಯನ್ನು ಕುಂದಿಸುವ ಬದಲು, ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವುದನ್ನು ಹೊಣೆಗಾರಿಕೆಯುಳ್ಳ ನಾವೀನ್ಯತೆಯು ಖಚಿತಪಡಿಸಿಕೊಳ್ಳಬೇಕು.
ಶೃಂಗಸಭೆಯ ಸಂದರ್ಭದಲ್ಲಿ, ಶ್ರೀ ಸಂಜಯ್ ಜಾಜು ಅವರು ಎ ಎಸ್ ಸಿ ಐ ನ ಪ್ರಧಾನ ಕಾರ್ಯದರ್ಶಿ ಮತ್ತು ಸಿಇಒ ಶ್ರೀಮತಿ ಮನಿಷಾ ಕಪೂರ್, ಮ್ಯಾಡಿಸನ್ ಅಧ್ಯಕ್ಷ ಶ್ರೀ ಸ್ಯಾಮ್ ಬಲ್ಸಾರಾ, ಎ ಎಸ್ ಸಿ ಐ ಅಧ್ಯಕ್ಷ ಮತ್ತು ಪಿಡಿಲೈಟ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುಧಾಂಶು ವತ್ಸ್, ಎ ಎಸ್ ಸಿ ಐ ಮಂಡಳಿಯ ಸದಸ್ಯ ಶ್ರೀ ಪ್ರವೀಣ್ ತ್ರಿಪಾಠಿ ಮತ್ತು ಖೈತಾನ್ ಆಂಡ್ ಕೋ ಪಾಲುದಾರರಾದ ಶ್ರೀ ಇಶಾನ್ ಜೋಹ್ರಿ ಮತ್ತು ಶ್ರೀಮತಿ ತಾನು ಬ್ಯಾನರ್ಜಿ ಅವರೊಂದಿಗೆ ಜಂಟಿಯಾಗಿ 'ಜಾಹೀರಾತು ಕಾನೂನು ಸಂಕಲನ'ವನ್ನು ಬಿಡುಗಡೆ ಮಾಡಿದರು. ಇದು ಉದ್ಯಮದಾದ್ಯಂತ ಹೆಚ್ಚಿನ ಜಾಗೃತಿ, ತಿಳುವಳಿಕೆ ಮತ್ತು ಅನುಸರಣೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಜಾಹೀರಾತು ಕಾನೂನುಗಳು ಮತ್ತು ನಿಯಮಗಳ ಪ್ರಾಯೋಗಿಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ಎ ಎಸ್ ಸಿ ಐ ನಾಯಕತ್ವ, ಮಾರುಕಟ್ಟೆದಾರರು, ಡಿಜಿಟಲ್ ಪ್ಲಾಟ್‌ಫಾರ್ಮ್ ಗಳು ಮತ್ತು ಕಾನೂನು ಕ್ಷೇತ್ರದ ಸದಸ್ಯರು ಸೇರಿದಂತೆ ಜಾಹೀರಾತು ಉದ್ಯಮದ ಭಾಗೀದಾರರೊಂದಿಗೆ ಸಭೆ ನಡೆಸಿದರು.
*****
(ಪ್ರಕಟಣೆ ಐ.ಡಿ.: 2241959)
ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
Khasi
,
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Odia
,
Telugu