ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಬಜೆಟ್ ನಂತರದ ವೆಬಿನಾರ್ ಶಾಲೆ ಮತ್ತು ಕಾಲೇಜುಗಳಲ್ಲಿ AVGC ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳನ್ನು ಸ್ಥಾಪಿಸುವ ಮಾರ್ಗಸೂಚಿಯನ್ನು ಉಲ್ಲೇಖಿಸುತ್ತದೆ
ಭಾರತದ ನಾವೀನ್ಯತೆ ಆಧಾರಿತ ಆರ್ಥಿಕತೆಯ ಪ್ರಮುಖ ಸ್ತಂಭವಾಗಿ AVGC ವಲಯದ ಉತ್ತೇಜನಕ್ಕೆ ಪ್ರಧಾನ ಮಂತ್ರಿಗಳ ಒತ್ತು; ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಕರೆ
ನಾಗರಿಕರಿಗೆ ಪ್ರಜಾಸತ್ತಾತ್ಮಕ ವೇದಿಕೆಗಳನ್ನು ಒದಗಿಸುವಲ್ಲಿ 'ಕ್ರಿಯೇಟರ್ ಎಕಾನಮಿ'ಯ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ ವಾರ್ತಾ ಮತ್ತು ಪ್ರಸಾರ ಸಚಿವರಾದ ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
10 MAR 2026 3:20PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು (MIB), 2026ರ ಮಾರ್ಚ್ 09ರಂದು ನಡೆದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ - ಜನರ ಆಕಾಂಕ್ಷೆಗಳ ಪೂರೈಕೆ: ಶಿಕ್ಷಣ, ಕೌಶಲ ಮತ್ತು ವಿಶ್ವವಿದ್ಯಾಲಯ ಟೌನ್ಶಿಪ್ ಗಳು" ಎಂಬ ಬಜೆಟ್ ನಂತರದ ವೆಬಿನಾರ್ ನ ಭಾಗವಾಗಿ, “ಶಾಲೆ ಮತ್ತು ಕಾಲೇಜುಗಳಲ್ಲಿ AVGC ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳು” ಎಂಬ ವಿಷಯದ ಕುರಿತು ವಿಶೇಷ ಅಧಿವೇಶನವನ್ನು ಆಯೋಜಿಸಿತ್ತು. ಕೇಂದ್ರ ಬಜೆಟ್ 2026-27ರಲ್ಲಿ ಘೋಷಿಸಿದಂತೆ, 15,000 ಮಾಧ್ಯಮಿಕ ಶಾಲೆಗಳು ಮತ್ತು 500 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ AVGC ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳನ್ನು (CCLs) ಸ್ಥಾಪಿಸುವ ಅನುಷ್ಠಾನದ ಮಾರ್ಗಸೂಚಿಯ ಬಗ್ಗೆ ಈ ಅಧಿವೇಶನದಲ್ಲಿ ಚರ್ಚಿಸಲಾಯಿತು.
ಈ ವೆಬಿನಾರ್ ಸರಣಿಯನ್ನು ಗೌರವಾನ್ವಿತ ಪ್ರಧಾನಿ ಮೋದಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ನಾವೀನ್ಯತೆ ಆಧಾರಿತ ಆರ್ಥಿಕತೆಯತ್ತ ಸಾಗುತ್ತಿರುವ ಭಾಗವಾಗಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ವಲಯವನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ ಎಂದು ಒತ್ತಿ ಹೇಳಿದರು. ಶೈಕ್ಷಣಿಕ ಆವರಣಗಳು ನಾವೀನ್ಯತೆ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಲು, ಶಿಕ್ಷಣ ಸಂಸ್ಥೆಗಳು ಉದ್ಯಮದ ಸಹಯೋಗ ಮತ್ತು ಸಂಶೋಧನೆ ಆಧಾರಿತ ಕಲಿಕೆಯನ್ನು ಬಲಪಡಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು. ಇದು ವಿದ್ಯಾರ್ಥಿಗಳು ನೈಜ ಪ್ರಪಂಚದ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ರಾಷ್ಟ್ರೀಯ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಐಐಟಿ (IIT), ಐಐಎಂ (IIM) ಮತ್ತು ಏಮ್ಸ್ (AIIMS) ನಂತಹ ಪ್ರಮುಖ ಸಂಸ್ಥೆಗಳ ಮಾದರಿಯಲ್ಲಿ ಸರ್ಕಾರವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ (IICT) ಅನ್ನು ಸ್ಥಾಪಿಸಿದೆ ಎಂದು ತಿಳಿಸಿದರು. ಈ ಸಂಸ್ಥೆಯು ಉನ್ನತ ತಂತ್ರಜ್ಞಾನದ ಮಾದರಿ ಪ್ರಯೋಗಾಲಯಗಳನ್ನು ಒಳಗೊಂಡಿದ್ದು, ಇವು ಜಾಗತಿಕವಾಗಿ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿರುವ ವಿಶ್ವದ ಪ್ರಮುಖ ಸೌಲಭ್ಯಗಳಿಗೆ ಸಾಟಿಯಾಗುವಂತಿವೆ. ಸೃಜನಾತ್ಮಕ, ಮಾಧ್ಯಮ ಮತ್ತು ತಂತ್ರಜ್ಞಾನ ವಲಯಗಳ ಉದಯೋನ್ಮುಖ ಕ್ಷೇತ್ರಗಳಲ್ಲಿ ಯುವಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಈ ಸಂಸ್ಥೆಯು ನೀಡಲಿದೆ ಎಂದು ಅವರು ಹೇಳಿದರು. ದೂರದರ್ಶನವು "ಕ್ರಿಯೇಟರ್ಸ್ ಕಾರ್ನರ್" (Creators’ Corner) ಅನ್ನು ಪ್ರಾರಂಭಿಸಿದೆ ಎಂದು ಶ್ರೀ ವೈಷ್ಣವ್ ಅವರು ಹೇಳಿದರು. ಇದು ಕಂಟೆಂಟ್ ಕ್ರಿಯೇಟರ್ ಗಳಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು, ಆದಾಯ ಗಳಿಸಲು ಮತ್ತು ದೇಶಾದ್ಯಂತ ಹಾಗೂ ಜಾಗತಿಕವಾಗಿ ವೀಕ್ಷಕರನ್ನು ತಲುಪಲು ಅವಕಾಶವನ್ನು ಒದಗಿಸುತ್ತದೆ.
ಈ ಅಧಿವೇಶನದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಆಶಯ ಭಾಷಣ ಮಾಡಿದರು. ಅವರು ಸೃಜನಾತ್ಮಕ ಪ್ರತಿಭೆಯನ್ನು ಪೋಷಿಸಲು ಮತ್ತು ಎವಿಜಿಸಿ (AVGC) ವಲಯದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಲು ಬಲಿಷ್ಠವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್ ನ ವಿಪಿ (VP) ಮತ್ತು ಸಿಟಿಒ (CTO) ಆದ ಶ್ರೀ ಚೈತನ್ಯ ಚಿಂಚಲಿಕರ್ ಅವರ ನೇತೃತ್ವದಲ್ಲಿ ನಡೆದ ಈ ಬ್ರೇಕ್-ಔಟ್ ಅಧಿವೇಶನವು ನೀತಿ ನಿರೂಪಕರು, ಉದ್ಯಮದ ಮುಖಂಡರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಉದಯೋನ್ಮುಖ ಕ್ರಿಯೇಟರ್ ಎಕಾನಮಿಗೆ ಪೂರಕವಾದ ಪಠ್ಯಕ್ರಮ ಅಭಿವೃದ್ಧಿ, ಮೂಲಸೌಕರ್ಯ, ಉದ್ಯಮ ಸಹಯೋಗ ಮತ್ತು ಕೌಶಲದ ಮಾರ್ಗಗಳ ಕುರಿತು ಚರ್ಚಿಸಿತು. ಈ ಸಂವಾದದಲ್ಲಿ ಸರ್ಕಾರ, ಉದ್ಯಮ, ಶಿಕ್ಷಣ ಕ್ಷೇತ್ರ ಮತ್ತು ಕ್ರಿಯೇಟಿವ್ ಟೆಕ್ನಾಲಜಿ ಪರಿಸರ ವ್ಯವಸ್ಥೆಯ ಪ್ರತಿನಿಧಿಗಳಾದ ಕುಮಾರಿ ಎ. ಶ್ರೀಜಾ (ಆರ್ಥಿಕ ಸಲಹೆಗಾರರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ), ಡಾ. ಆಶಿಶ್ ಕುಲಕರ್ಣಿ (FICCI AVGC ವೇದಿಕೆಯ ಅಧ್ಯಕ್ಷರು), ಶ್ರೀ ರಾಜನ್ ನವಾನಿ (ಸ್ಥಾಪಕರು ಮತ್ತು ಗ್ರೂಪ್ ಸಿಇಒ, ಜೆಟ್ಸಿಂಥೆಸಿಸ್), ಕುಮಾರಿ ಸೋನಮ್ ಭಗತ್ (ಸಿಇಒ, ವೈಗರ್), ಡಾ. ವಿಶ್ವಾಸ್ ದಿಯೋಸ್ಕರ್ (ಸಿಇಒ, ಐಐಸಿಟಿ), ಶ್ರೀ ಮುಂಜಾಲ್ ಶ್ರಾಫ್ (ನಿರ್ದೇಶಕರು ಮತ್ತು ಸಿಒಒ, ಗ್ರಾಫಿಟಿ ಸ್ಟುಡಿಯೋಸ್), ಶ್ರೀ ಬಿರೇನ್ ಘೋಷ್ (ಸ್ಥಾಪಕರು ಮತ್ತು ಸಿಇಒ, ಅಸ್ಟ್ರಾ ಸ್ಟುಡಿಯೋಸ್), ಶ್ರೀ ಮನ್ವೇಂದ್ರ ಶುಕುಲ್ (ಸಿಇಒ, ಲಕ್ಷ್ಯ ಡಿಜಿಟಲ್), ಕುಮಾರಿ ಮಾಲಾ ಶರ್ಮಾ (ಗ್ಲೋಬಲ್ ವಿಪಿ, ಎಜುಕೇಶನ್ ಅಂಡ್ ಇಂಟರ್ನ್ಯಾಷನಲ್, ಅಡೋಬ್) ಮತ್ತು ಕುಮಾರಿ ಪ್ರೀತಿ ವ್ಯಾಸ್ (ಅಧ್ಯಕ್ಷರು, ಮಿಥಿಕ್) ಅವರು ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರೊಂದಿಗೆ ಭಾಗವಹಿಸಿದ್ದರು.
ಚರ್ಚೆಯ ಸಮಯದಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ 'ಕಂಟೆಂಟ್ ಕ್ರಿಯೇಟರ್ ಲ್ಯಾಬ್'ಗಳ ಸ್ಥಾಪನೆಯು ವಿದ್ಯಾರ್ಥಿಗಳಿಗೆ ಅನಿಮೇಷನ್, ಗೇಮಿಂಗ್, VFX ಮತ್ತು ಡಿಜಿಟಲ್ ಸ್ಟೋರಿಟೆಲ್ಲಿಂಗ್ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ವ್ಯವಸ್ಥಿತ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಭಾಗವಹಿಸಿದವರು ಒತ್ತಿ ಹೇಳಿದರು. ಇದು ಬಹುಶಿಸ್ತೀಯ ಕಲಿಕೆ, ಸೃಜನಶೀಲತೆ ಮತ್ತು ವಿನ್ಯಾಸ ಚಿಂತನೆಯ (Design Thinking) ಮೇಲೆ ಕೇಂದ್ರೀಕರಿಸುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಗೆ ಅನುಗುಣವಾಗಿದೆ ಎಂದು ತಿಳಿಸಲಾಯಿತು. ಮಾರ್ಗದರ್ಶನ, ಇಂಟರ್ನ್ಶಿಪ್ಗಳು ಮತ್ತು ನೈಜ ಪ್ರಪಂಚದ ಅನುಭವವನ್ನು ಒದಗಿಸಲು ಬಲವಾದ ಉದ್ಯಮ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಸಹ ಪಾಲುದಾರರು ಪ್ರತಿಪಾದಿಸಿದರು.
ಈ ಚರ್ಚೆಯು ಹಂತಹಂತವಾದ ಅನುಷ್ಠಾನದ ವಿಧಾನವನ್ನು ಉಲ್ಲೇಖಿಸಿತು. ಮೊದಲಿಗೆ ಪ್ರಾಯೋಗಿಕವಾಗಿ ಕೆಲವು ಸಂಸ್ಥೆಗಳಲ್ಲಿ ಇದನ್ನು ಪ್ರಾರಂಭಿಸಿ, ನಂತರ ಸಿದ್ಧತೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ 2ನೇ ಮತ್ತು 3ನೇ ಹಂತದ (Tier-2 & Tier-3) ನಗರಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ವಿಸ್ತರಿಸಲು ನಿರ್ಧರಿಸಲಾಯಿತು. ಲ್ಯಾಬ್ ಗಳಿಗಾಗಿ ಸೂಕ್ತ ಸಂಸ್ಥೆಗಳನ್ನು ಗುರುತಿಸುವುದು, ವ್ಯವಸ್ಥಿತ ಎವಿಜಿಸಿ (AVGC) ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು, ಉದ್ಯಮದ ಬೆಂಬಲಿತ ತರಬೇತಿಯ ಮೂಲಕ ಅಧ್ಯಾಪಕರ ಸಾಮರ್ಥ್ಯ ವೃದ್ಧಿ, ಪ್ರಮಾಣೀಕೃತ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಚೌಕಟ್ಟನ್ನು ಸ್ಥಾಪಿಸುವುದು ಹಾಗೂ ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವುದು ಈ ಅಧಿವೇಶನದ ಪ್ರಮುಖ ಕಾರ್ಯಸೂಚಿಗಳಾಗಿದ್ದವು.
ಈ ಅಧಿವೇಶನವು ದೇಶಾದ್ಯಂತದ ಸುಮಾರು 500 ಶಾಲೆಗಳು, 50 ಕಾಲೇಜುಗಳ ಪ್ರತಿನಿಧಿಗಳು, ಉದ್ಯಮದ ಸ್ಟೇಕ್ಹೋಲ್ಡರ್ಗಳು, ಪೋಷಕರು ಮತ್ತು ವೈಯಕ್ತಿಕವಾಗಿ ಭಾಗವಹಿಸಿದವರು ಸೇರಿದಂತೆ ಒಟ್ಟು 16,600ಕ್ಕೂ ಹೆಚ್ಚು ಜನರ ವ್ಯಾಪಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
ಬಜೆಟ್ ನಂತರದ ವೆಬಿನಾರ್ ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಸಚಿವರು, ಭಾರತದ ರೋಮಾಂಚಕ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ನಾಗರಿಕರಿಗೆ ಪ್ರಜಾಸತ್ತಾತ್ಮಕ ವೇದಿಕೆಯನ್ನು ಒದಗಿಸುವಲ್ಲಿ 'ಕ್ರಿಯೇಟರ್ ಎಕಾನಮಿ' ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ದೇಶಾದ್ಯಂತ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳನ್ನು ಸ್ಥಾಪಿಸಲು 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್' (IICT) ನ ಪರಿಣತಿಯನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಚರ್ಚೆಗಳು ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳ ಉಪಕ್ರಮಕ್ಕೆ ಬಲಿಷ್ಠವಾದ ಅನುಷ್ಠಾನದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುವ ಗುರಿಯನ್ನು ಹೊಂದಿವೆ. ಇದು ಯುವ ಭಾರತೀಯರಿಗೆ ಸೃಜನಶೀಲ ಮತ್ತು ಡಿಜಿಟಲ್ ಕೌಶಲಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ಜಾಗತಿಕ ಎವಿಜಿಸಿ ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2237575)
ವಿಸಿಟರ್ ಕೌಂಟರ್ : 7