ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರಿಂದ ಪಿ ಡಿ ಹಿಂದೂಜ ಆಸ್ಪತ್ರೆಯ 'ಜೀವಗಳನ್ನು ಉಳಿಸುವುದು ಮತ್ತು ಆರೋಗ್ಯಕರ ಭಾರತ ನಿರ್ಮಾಣ ಮಾಡೋಣ' ಎಂಬ ಅಭಿಯಾನ ಉದ್ಘಾಟನೆ


ನಾಗರಿಕರ ಆರೋಗ್ಯವು ಸಾಮೂಹಿಕ ಜವಾಬ್ದಾರಿ ಬಡವರಲ್ಲಿ ಕಡು ಬಡವರಿಗೂ ಸಹ ಸಕಾಲಿಕ ಮತ್ತು ಸೂಕ್ತ ವೈದ್ಯಕೀಯ ಆರೈಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಎಲ್ಲಾ ಅಧಿಕಾರಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಪ್ರಕಟಣಾ ದಿನಾಂಕ: 24 FEB 2026 6:33PM by PIB Bengaluru

 

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2026ರ ಫೆಬ್ರವರಿ 24) ಮುಂಬೈನ ಲೋಕ ಭವನದಲ್ಲಿ ಪಿ ಡಿ ಹಿಂದೂಜ ಆಸ್ಪತ್ರೆ ಆಯೋಜಿಸುತ್ತಿರುವ 'ಜೀವಗಳನ್ನು ಉಳಿಸುವುದು ಮತ್ತು ಆರೋಗ್ಯಕರ ಭಾರತ ನಿರ್ಮಾಣ ಮಾಡೋಣ’ ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ರಾಷ್ಟ್ರಪತಿ ಅವರು, “ಕಳೆದ ದಶಕದಲ್ಲಿ ಎಲ್ಲಾ ನಾಗರಿಕರು ಆರೋಗ್ಯವಾಗಿರಲು ಮತ್ತು ಗುಣಮಟ್ಟದ ಆರೋಗ್ಯ ಸೇವೆ ಪಡೆಯುವಂತಾಗಲು ಭಾರತ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ದೇಶಾದ್ಯಂತ 180,000 ಕ್ಕೂ ಅಧಿಕ ಆಯುಷ್ಮಾನ್ ಆರೋಗ್ಯ ಮಂದಿರಗಳು ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ. ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಸುಮಾರು 12 ಕೋಟಿ ಕುಟುಂಬಗಳು ಆಸ್ಪತ್ರೆಗೆ ದಾಖಲಾಗಲು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ರಕ್ಷಣೆಯನ್ನು ಪಡೆಯುತ್ತವೆ. ಮಿಷನ್ ಇಂದ್ರಧನುಷ್‌, ಟಿಬಿ-ಮುಕ್ತ ಭಾರತ ಅಭಿಯಾನ ಮತ್ತು ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನಾ ಮಿಷನ್‌ನಂತಹ ರಾಷ್ಟ್ರೀಯ ಕಾರ್ಯಕ್ರಮಗಳು ನಾಗರಿಕರನ್ನು ರೋಗಗಳಿಂದ ರಕ್ಷಿಸಲು  ಉತ್ತಮ ಕೊಡುಗೆ ನೀಡುತ್ತಿವೆ’’ ಎಂದರು. ಗುಣಮಟ್ಟದ ವೈದ್ಯರು ಮತ್ತು ಅರೆವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು ಹೆಚ್ಚಿಸಲು ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಗುಣಮಟ್ಟದ ಆರೋಗ್ಯ ಸೇವಾ ಲಭ್ಯತೆಯನ್ನು ಖಾತ್ರಿಪಡಿಸಲು ಹಲವು ರಾಜ್ಯಗಳಲ್ಲಿ ಹೊಸ ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿವೆ. ಆದರೂ ಆರೋಗ್ಯಕರ ಭಾರತವನ್ನು ನಿರ್ಮಿಸುವಲ್ಲಿ, ಸರ್ಕಾರದೊಂದಿಗೆ ಎಲ್ಲಾ ಪಾಲುದಾರರ ಪಾತ್ರವು ನಿರ್ಣಾಯಕವಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕನನ್ನು ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. "ಜೀವಗಳನ್ನು ಉಳಿಸುವುದು ಮತ್ತು ಆರೋಗ್ಯಕರ ಭಾರತವನ್ನು ನಿರ್ಮಾಣ ಮಾಡೋಣ" ಅಭಿಯಾನವು ಈ ನಿಟ್ಟಿನಲ್ಲಿ  ಒಂದು ಮಹತ್ವದ ಪ್ರಯತ್ನವಾಗಿದೆ’’ ಎಂದು ಹೇಳಿದರು.

ಜೀವ ಉಳಿಸುವುದು ಅತ್ಯಂತ ಶ್ರೇಷ್ಠವಾದ ದಾನದ ಕಾರ್ಯ ಎಂದು ರಾಷ್ಟ್ರಪತಿ ಹೇಳಿದರು. ಜೀವ ಉಳಿಸಲು ತುರ್ತು ವೈದ್ಯಕೀಯ ಆರೈಕೆಯ ಲಭ್ಯತೆಯು ಅತಿ ನಿರ್ಣಾಯಕವಾಗಿದೆ. ಗೋಲ್ಡನ್ ಹವರ್‌ ನಲ್ಲಿ (ಅಮೂಲ್ಯ ಸಮಯದಲ್ಲಿ) ಸರಿಯಾದ ವೈದ್ಯಕೀಯ ಆರೈಕೆಯನ್ನು ಒದಗಿಸುವುದರಿಂದ ಹೆಚ್ಚಿನ ಜೀವಗಳನ್ನು ಉಳಿಸಬಹುದೆಂದು ನಂಬಲಾಗಿದೆ. ತಕ್ಷಣದ ವೈದ್ಯಕೀಯ ನೆರವಿನ ಕೊರತೆಯಿಂದ ಯಾರೂ ಜೀವ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಪ್ರಧಾನಮಂತ್ರಿ ಪರಿಹಾರ ಯೋಜನೆಯು ಅಪಘಾತ ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿವರೆಗೆ ನಗದುರಹಿತ ಚಿಕಿತ್ಸೆ ಒದಗಿಸುತ್ತದೆ. ಆಂಬ್ಯುಲೆನ್ಸ್‌ಗಳು ಮತ್ತು ಆಘಾತ ಕೇಂದ್ರಗಳ ಜೊತೆಗೆ ಗಂಭೀರ ಅಪಘಾತಗಳು ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸಲು ಜಾಗೃತಿ ಕೂಡ ನಿರ್ಣಾಯಕವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

ಆರೋಗ್ಯವಂತ ಪ್ರಜೆಗಳು ಬಲಿಷ್ಠ ರಾಷ್ಟ್ರದ ಅಡಿಪಾಯ ಎಂದು ರಾಷ್ಟ್ರಪತಿ ಹೇಳಿದರು. ಜನರನ್ನು ರೋಗಗಳಿಂದ ರಕ್ಷಿಸುವುದು ಮತ್ತು ಅವರಿಗೆ ಸಕಾಲಿಕ ಮತ್ತು ಸೂಕ್ತ ವೈದ್ಯಕೀಯ ಆರೈಕೆ ಒದಗಿಸುವುದು ಅವರನ್ನು ಆರೋಗ್ಯವಾಗಿಡಲು ನಿರ್ಣಾಯಕವಾಗಿದೆ. ಆರೋಗ್ಯ ರಕ್ಷಣೆ ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಅಂಗವಾಗಿದೆ. ನಾಗರಿಕರ ಆರೋಗ್ಯವು ಸಾಮೂಹಿಕ ಜವಾಬ್ದಾರಿಯಾಗಿದೆ. ಬಡವರಲ್ಲಿ ಕಡು ಬಡವರಿಗೂ ಸಹ ಸಕಾಲಿಕ ಮತ್ತು ಸೂಕ್ತ ವೈದ್ಯಕೀಯ ಆರೈಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಎಲ್ಲಾ ಪಾಲುದಾರರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ”ಸರ್ವರಿಗೂ ಕೈಗೆಟುಕುವ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು’’ ಎಂಬುದು ಪ್ರತಿಯೊಬ್ಬರ ಧ್ಯೇಯವಾಗಿರಬೇಕು ಎಂದು ರಾಷ್ಟ್ರಪತಿ ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಇತರ ಕ್ಷೇತ್ರಗಳಂತೆ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಭವಿಷ್ಯದಲ್ಲಿ ಅವುಗಳ ಪಾತ್ರ ಹೆಚ್ಚಾಗಲಿದೆ ಮತ್ತು ನಾವು ಅದಕ್ಕೆ ಸಿದ್ಧರಾಗಿರಬೇಕು. ಭಾರತ ಸರ್ಕಾರವು ನಾವೀನ್ಯತೆ ಮತ್ತು ಹೊಸ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಅನುಕೂಲಕರವಾದ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಎಐ-ಆಧರಿಸಿದ ಆರೋಗ್ಯ ರಕ್ಷಣೆಯಲ್ಲಿ ಇಂಡಿಯಾಎಐ ಮಿಷನ್ ನಾವೀನ್ಯತೆಯನ್ನು ಬೆಂಬಲಿಸುತ್ತಿದೆ ಎಂದರು.

ಭಾರತವು ಪ್ರಮುಖ ಔಷಧ ಉತ್ಪಾದಕ ರಾಷ್ಟ್ರ ಎಂದ ರಾಷ್ಟ್ರಪತಿಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ  ಔಷಧಿಗಳು ವಿಶ್ವಾದ್ಯಂತ ಜನರ ಚಿಕಿತ್ಸೆಗೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು. ಆದರೂ ನಾವು ಇನ್ನೂ ಅನೇಕ ವೈದ್ಯಕೀಯ ಸಾಧನಗಳು ಮತ್ತು ನಿರ್ಣಾಯಕ ಔಷಧಿಗಳಿಗೆ ಆಮದುಗಳನ್ನು ಅವಲಂಬಿಸಿದ್ದೇವೆ, ಈ ಆಮದು ಮಾಡಿದ ಸಾಧನಗಳು ಮತ್ತು ಔಷಧಿಗಳು ಸಾಮಾನ್ಯ ಜನರಿಗೆ ಗಮನಾರ್ಹ ಆರ್ಥಿಕ ಹೊರೆಯನ್ನುಂಟುಮಾಡುತ್ತವೆ. ದೇಶದಲ್ಲಿ ಔಷಧಗಳು ಮತ್ತು ಸಾಧನಗಳನ್ನು ತಯಾರಿಸುವುದು ನಮ್ಮ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ಒದಗಿಸಲು ನಿರ್ಣಾಯಕವಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಪಿಎಲ್‌ಐನಂತಹ ಉಪಕ್ರಮಗಳು ಆ ನಿಟ್ಟಿನಲ್ಲಿ ಸಹಾಯಕವಾಗಿವೆ. ಈ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ನವೋದ್ಯಮಗಳನ್ನು ಪ್ರೋತ್ಸಾಹಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ವೈದ್ಯಕೀಯ ವೃಂದ ಮತ್ತು ವ್ಯಾಪಾರ ಸಮುದಾಯಕ್ಕೆ ಕರೆ ನೀಡಿದರು.

2047ರ ವೇಳೆಗೆ ‘ವಿಕಸಿತ ಭಾರತ’ ಸಾಧಿಸುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ಗುರಿಯನ್ನು ಸಾಧಿಸಲು ಆರೋಗ್ಯವಂತ ಪ್ರಜೆಗಳು ಮೂಲಭೂತ ಅವಶ್ಯಕತೆಯಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ಸಕಾಲಿಕವಾಗಿ ಲಭ್ಯವಾದರೆ ಮಾತ್ರ ನಾಗರಿಕರು ಆರೋಗ್ಯವಾಗಿರುತ್ತಾರೆ. ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ ನಮ್ಮ ನಾಗರಿಕರು ಅತ್ಯುತ್ತಮ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಭಾರತವು ಜಾಗತಿಕ ಆರೋಗ್ಯ ಸೇವಾ ತಾಣವಾಗಿ ಹೆಚ್ಚಿನ ಮನ್ನಣೆಯನ್ನು ಪಡೆಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಪೂರ್ಣ ಭಾಷಣಕವ್ಕೆ ಇಲ್ಲಿ ಕ್ಲಿಕ್‌ ಮಾಡಿ  Please click here to see the President's speech-

 

******
 


(ಪ್ರಕಟಣೆ ಐ.ಡಿ.: 2232395) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Marathi , Gujarati , Tamil , Telugu